• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಒಂದು ಪ್ರವಾಸ

By Staff
|

ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಒಂದು ಪ್ರವಾಸ

ರಾಷ್ಟ್ರಕವಿ ಕುವೆಂಪು ಅವರಿಗೆ ಪ್ರೇರಣೆ ನೀಡಿದ ವಾತಾವರಣ, ಹಸಿರ ಪರಿಸರ ಕಂಡಾಗ ಮೈ ಮನಗಳು ಕುಣಿಯುತ್ತವೆ. ಕವಿಶೈಲ ತೀರ್ಥಹಳ್ಳಿಯನ್ನು ಮರೆಯುವುದಾದರೂ ಹೇಗೆ? ಮೈತಣಿಸಿದ ಮಲೆನಾಡಿನ ಚಿತ್ರಗಳು ಮತ್ತು ಕರುನಾಡ ಸಿರಿ ಈ ವಾರದ ಮಂಥನದಲ್ಲಿ ಮೂಡಿವೆ. ಚೆಂದದ ಪ್ರವಾಸದ ಅನುಭವ ನಿಮ್ಮದೂ ಆಗಲಿ.

sampige_srinivas2 ಸಂಪಿಗೆ ಶ್ರೀನಿವಾಸ, ಬೆಂಗಳೂರು
ಅರಸೀಕೆರೆಯಲ್ಲಿ ಚಹ ಕುಡಿದು ನಾವು ಶಿವಮೊಗ್ಗದೆಡೆಗೆ ಪ್ರಯಾಣ ಬೆಳೆಸಿದಾಗ ಮಧ್ಯರಾತ್ರಿ ಕಳೆದು ಎರಡೂವರೆ ಗಂಟೆ. ನಾವು ಬೆಂಗಳೂರು ಬಿಟ್ಟಾಗಲೇ 11ಗಂಟೆಯಾಗಿತ್ತು. ಕಡೂರು ದಾಟಿ ತರೀಕೆರೆ ಸಮೀಪಿಸುತ್ತಿದ್ದಂತೆ ಬೆಂಗಳೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟವಾದ ಮಂಜು ಆವರಿಸಿತ್ತು.

ಈ ದಟ್ಟವಾದ ಮಂಜಿನ ತೆರೆಯನ್ನು ಭೇದಿಸುತ್ತ ನಮ್ಮ ಚಾಲಕ ಕಾರನ್ನು ಮೆಲ್ಲಗೆ ಚಲಿಸುತ್ತಿದ್ದ. ನಮಗೋ ನಿದಿರೆಯ ಮಂಪರು. ಚಾಲಕನಿಗೂ ಕಣ್ಣೆಳೆಯುತ್ತಿತ್ತು, ಜೊತೆಗೆ ಎದುರಿಗೆ ಯಾರಿದ್ದಾರೆಂದು ತಿಳಿಯದಹಾಗೆ ಕವಿದ ಇಬ್ಬನಿಯಿಂದ ವಾಹನ ಓಡಿಸಲು ಚಾಲಕ ಕಷ್ಟಪಡುತ್ತಿದ್ದುದನ್ನು ಗಮನಿಸಿದೆವು. ಇನ್ನು ಪ್ರಯಾಣ ಬೆಳಸುವುದು ಸರಿಯಲ್ಲವೆಂದು ನಿರ್ಧರಿಸಿ ತರೀಕೆರೆಯಲ್ಲಿ ರಸ್ತೆಬದಿಗೆ ಕಾರನ್ನು ನಿಲ್ಲಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡೆವು. ಗೆಳೆಯ ಕಿರಣ ನಮ್ಮನ್ನು ಎಬ್ಬಿಸಿದಾಗಲೇ ನಮಗೆಲ್ಲಾ ಎಚ್ಚರವಾಗಿದ್ದು! ಅದಾಗಲೇ ಬೆಳಗಿನ ಆರು ಗಂಟೆಯಾಗಿತ್ತು. ತೀರ್ಥಹಳ್ಳಿಯನ್ನು ಏಳುಗಂಟೆಗೆ ತಲುಪಬೇಕೆಂಬ ನಮ್ಮ ಯೋಜನೆ ಕೈಕೊಟ್ಟಿತ್ತು!

ಹೆಚ್‌.ಪಿ ಸಂಸ್ಥೆಯ ಗೆಳೆಯರಾದ ವಿನೋದ್‌, ಕಿರಣ್‌ ಮತ್ತು ನಾನು, ನಮ್ಮ ತಂಡದ ಮತ್ತೊಬ್ಬಗೆಳೆಯ ಅರವಿಂದನ ಸಂಬಂಧಿಕರೊಬ್ಬರ ಮದುವೆಯ ಆಹ್ವಾನದ ಮೇರೆಗೆ ತೀರ್ಥಹಳ್ಳಿಗೆ ಹೊರಟಿದ್ದೆವು. ಮದುವೆ ಒಂದು ನೆಪಮಾತ್ರ. ತೀರ್ಥಹಳ್ಳಿಯ ಸುತ್ತಮುತ್ತಲ್ಲಿನ ಮಲೆನಾಡಿನ ಸೊಬಗನ್ನು ಸವಿಯುವುದು ನಮ್ಮ ಯೋಜನೆಯಾಗಿತ್ತು! ಮದುವೆ ಇದ್ದದ್ದು ಆಗುಂಬೆ ಘಟ್ಟದ ಕೆಳಗಿನ ಸೋಮೇಶ್ವರದಲ್ಲಿ. ಆದರೆ ನಮ್ಮ ಸ್ನೇಹಿತನ ಮನೆ ತೀರ್ಥಹಳ್ಳಿಯಲ್ಲಿ ಇದ್ದುದ್ದರಿಂದ, ತೀರ್ಥಹಳ್ಳಿ ಬಳಿಯ ಸುಂದರವಾದ ವಿಹಂಗಮ ಹೋಮ್‌ ರಿಟ್ರೀಟ್‌ನಲ್ಲಿ ನಮ್ಮ ವಾಸ್ತವ್ಯಕ್ಕೆ ಗೆಳೆಯ ಅರವಿಂದ ಏರ್ಪಾಟು ಮಾಡಿದ್ದ.

ಈ ‘ವಿಹಂಗಮ’ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಕಡಿದಾಳ್‌ ಮಂಜಪ್ಪನವರ ಪುತ್ರರಾದ ಕಡಿದಾಳ್‌ ದಯಾನಂದ ಅವರ ಉಸ್ತುವಾರಿಯಲ್ಲಿದೆ. ‘ವಿಹಂಗಮ’ ನಿಜಕ್ಕೂ ವಿಹಂಗಮವಾಗಿದೆ. ಒಂದೆಡೆ ಸುಂದರವಾದ ಅಡಿಕೆ ತೋಟ, ಮತ್ತೊಂದೆಡೆ ಜುಳು ಜುಳು ಹರಿಯುತ್ತಿರುವ ತುಂಗೆ, ಇನ್ನೊಂದೆಡೆ ದಟ್ಟವಾದ ಮರಗಳಿಂದ ಕೂಡಿದ ಗುಡ್ಡ, ಸ್ವಚ್ಚವಾದ ಪ್ರಶಾಂತವಾದ ಪರಿಸರ. ಬೆಂಗಳೂರಿನ ಕಾಂಕ್ರೀಟ್‌ ಕಾಡಿನಲ್ಲಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯದಲ್ಲಿ ಬಸವಳಿದಿದ್ದ ನಮಗೆ, ಇನ್ನೇನು ಬೇಕು ಹೇಳಿ!

ಅರವಿಂದನ ಮನೆಯಲ್ಲಿ ಬೆಳಗಿನ ತಿಂಡಿ ಮುಗಿಸಿ ಮೊದಲಿಗೆ ಕುಪ್ಪಳ್ಳಿಯ ಕಡೆ ಹೊರಟೆವು. ಹೌದು ನಾವು ಕುಪ್ಪಳ್ಳಿಗೆ ಹೊರಟಿದ್ದು ನಮ್ಮ ರಾಷ್ಟ್ರಕವಿ ಕುವೆಂಪು ಅವರ ಮನೆ ನೋಡಲು. ಕುಪ್ಪಳ್ಳಿ ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ಮಾರ್ಗದಲ್ಲಿ ಸಿಗುತ್ತದೆ. ಕುವೆಂಪು ಅವರ ನೆನಪನ್ನು ಇಂದಿನ ಪೀಳಿಗೆಗೆ ಪಸರಿಸಲು, ಕುಪ್ಪಳ್ಳಿಯ ಅವರ ತೋಟದ ಮನೆಯನ್ನು ಸುಂದರವಾದ ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಪ್ರತಿಯೊಬ್ಬ ಕನ್ನಡಿಗನೂ ನೋಡಲೇ ಬೇಕಾದ ಸ್ಮಾರಕ. ಇಲ್ಲಿ ಕುವೆಂಪು ಅವರು ಉಪಯೋಗಿಸುತ್ತಿದ್ದ ವಸ್ತುಗಳನ್ನು(ಅವರ ತಲೆ ಕೂದಲನ್ನೂ) , ಅವರಿಗೆ ದೊರೆತ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ, ಪದ್ಮಭೂಷಣ, ಕರ್ನಾಟಕರತ್ನ ಪ್ರಶಸ್ತಿ ಮತ್ತು ಇತರ ಪ್ರಶಸ್ತಿ, ಪುರಸ್ಕಾರಗಳನ್ನು ನೋಡಬಹುದು.

ಕುವೆಂಪು ಅವರ ಅಮೂಲ್ಯವಾದ ಸಾಹಿತ್ಯ ಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅವರ ಕೃತಿಗಳನ್ನು ಓದಲು ಆಸಕ್ತಿ ಇದ್ದವರು ಅಲ್ಲೇ ಕೊಂಡುಕೊಳ್ಳಬಹುದು. ಇದಲ್ಲದೆ ಮಲೆನಾಡಿನ ಮನೆಗಳಲ್ಲಿ ಉಪಯೋಗಿಸುತ್ತಿದ್ದ ವಿವಿಧ ರೀತಿಯ ಹಳೆಯ ಕಾಲದ ಪಾತ್ರೆಗಳನ್ನು, ಸಲಕರಣೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕುವೆಂಪು ಅವರ ಮನೆ ಮೂರು ಮಹಡಿಗಳಿಂದ ಕೂಡಿದೆ. ಅಲಂಕಾರಿಕ ಮರದ ಕೆತ್ತನೆಗಳುಳ್ಳ ಬಾಗಿಲುಗಳು, ಕಂಬಗಳಿರುವ ಅವರ ಮನೆ ಮಲೆನಾಡಿನ ಮನೆಗಳ ಭವ್ಯ ಪ್ರತಿರೂಪವಾಗಿ ನಿಂತಿದೆ.

ಕುವೆಂಪು ಅವರ ಮನೆಯ ಹಿಂಬದಿಯ ಗುಡ್ಡವೇರಿದರೆ ಕುವೆಂಪು ಅವರ ಮೆಚ್ಚಿನ ಸ್ಥಳವಾದ ಕವಿಶೈಲ ಸಿಗುತ್ತದೆ. ಅಲ್ಲಿಗೆ ಹೊಗಲು ಈಗ ರಸ್ತೆಯನ್ನೂ ಮಾಡಿದ್ದಾರೆ. ಕವಿಶೈಲದಿಂದ ಕಾಣಸಿಗುವ ಪ್ರಕೃತಿಯ ಸೊಬಗು ಮಾತಿನಲ್ಲಿ ವರ್ಣಿಸಲು ಆಗುವುದಿಲ್ಲ. ಅದನ್ನು ಕಣ್ಣಾರೆ ನೋಡಿಯೇ ಆನಂದಿಸಬೇಕು. ಅಲ್ಲಿ ಗುಡ್ಡದ ಮೇಲೆ ಬಂಡೆಕಲ್ಲುಗಳ ಮೇಲೆ ಕುಳಿತು ಕುವೆಂಪು ತಮ್ಮ ಬಹಳಷ್ಟು ಕೃತಿಗಳನ್ನು ರಚಿಸಿದ್ದಾರೆ. ಈಗ ಕವಿಶೈಲದ ಸುತ್ತ ದೊಡ್ಡ ದೊಡ್ಡ ಬಂಡೆಕಲ್ಲುಗಳ ಕಂಬಗಳನ್ನು ನೆಟ್ಟು ಒಂದು ಸುಂದರವಾದ ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಪಶ್ಚಿಮಘಟ್ಟಗಳ ಬೆಟ್ಟಗಳ ಸಾಲು ಮತ್ತು ಅಡಿಕೆ ತೋಟದ ಮಧ್ಯೆ ಕಂಗೊಳಿಸುತ್ತಿರುವ ಕುವೆಂಪು ಅವರ ಮನೆ ಮತ್ತು ಅದರ ಹಿಂದೆ ಗುಡ್ಡದ ಮೇಲಿರುವ ಕವಿಶೈಲ ಅವರ ಕಾವ್ಯಗಳಿಗೆ ಸ್ಫೂರ್ತಿಯ ಸೆಲೆಯಾಗಿತ್ತು ಎಂಬುದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ!

ಕುಪ್ಪಳ್ಳಿಯಿಂದ ನಾವು ತೀರ್ಥಹಳ್ಳಿಗೆ ಹಿಂತಿರುಗಿ ಊಟ ಮಾಡಿ ಸ್ವಲ್ಪ ಹೊತ್ತು ವಿಶ್ರಮಿಸಿ, ಕುಂದಾದ್ರಿಯ ಕಡೆಗೆ ಹೊರಟೆವು. ಆಗುಂಬೆಯ ಸೂರ್ಯಾಸ್ತಕ್ಕಿಂತ ಸುಂದರವಾದ ಸೂರ್ಯಾಸ್ತದ ದೃಶ್ಯ ಕುಂದಾದ್ರಿಯ ಶಿಖರದಿಂದ ಕಾಣಲು ಸಾಧ್ಯ ಎಂದು ಸ್ನೇಹಿತರೊಬ್ಬರು ಹೇಳಿದ್ದರು. ಸರಿ ನೋಡಿಯೇ ಬಿಡೋಣ ಎಂದು ನಾವು ಬಂದಿದ್ದ ಟಾಟಾ ಇಂಡಿಕಾ ಕಾರಿನಲ್ಲಿ ಕುಂದಾದ್ರಿಗೆ ಹೊರಟೇ ಬಿಟ್ಟೆವು. ಕುಂದಾದ್ರಿಗೆ ತೀರ್ಥಹಳ್ಳಿಯಿಂದ ಆಗುಂಬೆಗೆ ಹೋಗುವ ದಾರಿಯಲ್ಲಿ ಗುಡ್ಡೇಕೇರಿ ಎಂಬಲ್ಲಿ ಎಡಕ್ಕೆ ಸಾಗುವ ರಸ್ತೆಯ ಮೂಲಕ ಹೋಗಬೇಕು. ತೀರ್ಥಹಳ್ಳಿಯಿಂದ 35 ಕಿ.ಮಿ ದೂರವಿದೆ. ಕುಂದಾದ್ರಿಯ ಬುಡದವರೆಗೂ ಸಲೀಸಾಗಿ ಹೋಗಿ ತಲುಪಿದೆವು. ಆದರೆ ಅಲ್ಲಿಂದ ಬೆಟ್ಟದ ದಾರಿ ಬಹಳ ಕಡಿದಾಗುತ್ತ ಸಾಗಿತ್ತು. ಆಗತಾನೆ ರಸ್ತೆಗೆ ಡಾಂಬರು ಹಾಕಿದ್ದರು. ನಮ್ಮ ಕಾರು ಏದುಸಿರು ಬಿಡುತ್ತ ಏರುತ್ತಿತ್ತು. ಕೆಲವು ಕಡಿದಾದ ತಿರುವುಗಳನ್ನು ಕಷ್ಟಪಟ್ಟು ದಾಟಿದ ಮೇಲೆ ನಮ್ಮ ಚಾಲಕ ಇನ್ನು ಮುಂದೆ ಹೋಗಲು ಆಗೊಲ್ಲ ಎಂದು ಕಾರನ್ನು ನಿಲ್ಲಿಸಿಯೇಬಿಟ್ಟ.

ಬೆಟ್ಟದ ತುದಿ ತಲುಪಲು ಇನ್ನೂ ಕಾಲುಭಾಗದ ಹಾದಿ ಏರಬೇಕಾಗಿತ್ತು. ಕೊನೆಗೆ ನಮಗೆ ನಟರಾಜ ಸರ್ವಿಸ್ಸೇ ಗತಿಯಾಯಿತು. ನಾವು ಚಾರಣ ಮಾಡಲೇ ಬೇಕಾಯಿತು. ಕಾಲ್ನಡಿಗೆಯಲ್ಲಿ ಉಳಿದ ಹಾದಿಯನ್ನು ಏರಿ ಕುಂದಾದ್ರಿ ಶಿಖರವನ್ನು ತಲುಪಿದಾಗ, ಸರಿಯಾಗಿ ಸೂರ್ಯಾಸ್ತದ ಸಮಯವಾಗಿತ್ತು.

ಕುಂದಾದ್ರಿಯ ಶಿಖರದಿಂದ ಕಾಣುವ ಅಮೋಘವಾದ ಪ್ರಕೃತಿಯ ಸೊಬಗನ್ನು ನೋಡುತ್ತಲೇ, ಕಡಿದಾದ ಬೆಟ್ಟವನ್ನು ಹತ್ತಿ ಬಂದಿದ್ದ ನಮ್ಮ ಆಯಾಸವೆಲ್ಲಾ ಮಾಯವಾಯಿತು. ಪಶ್ಚಿಮಘಟ್ಟಗಳ ದಟ್ಟವಾದ ನಿತ್ಯಹರಿದ್ವರ್ಣದ ಕಾಡಿನ ಮಧ್ಯೆ ಭವ್ಯವಾಗಿ ನಿಂತಿರುವ ಸುಂದರವಾದ ಬೆಟ್ಟ ಕುಂದಾದ್ರಿ. ಗಿರಿಯ ಮೇಲೆ ಜೈನ ತೀರ್ಥಂಕರರಾದ ಪಾರ್ಶ್ವನಾಥಸ್ವಾಮಿಯ ಬಸದಿಯಿದೆ. ಅಲ್ಲಿ ಕುಂದಾಚಾರ್ಯ ಎಂಬ ಜೈನಮುನಿಗಳು ತಪಸ್ಸು ಮಾಡಿದ್ದರಿಂದ ಆ ಗಿರಿಗೆ ಕುಂದಾದ್ರಿ ಎಂಬ ಹೆಸರು ಬಂತೆಂದು ಬಸದಿಯಲ್ಲಿ ಇದ್ದ ಅರ್ಚಕರು ತಿಳಿಸಿದರು. ಅಲ್ಲಿನ ಸೂರ್ಯಾಸ್ತದ ದೃಶ್ಯವಂತೂ ರಮಣೀಯವಾಗಿತ್ತು. ನಮ್ಮ ಕ್ಯಾಮೆರಾದಲ್ಲಿ ಸುತ್ತಲಿನ ನಿಸರ್ಗ ಸಿರಿಯನ್ನು ಸೆರೆಹಿಡಿದೆವು.

ಆಕಾಶಕ್ಕೆ ಕಲಾವಿದನೊಬ್ಬ ಕೆಂಬಣ್ಣದ ಓಕುಳಿ ಎರಚಿದಂತೆ ಕಾಣುತ್ತಿದ್ದ ಸೂರ್ಯಾಸ್ತದ ಮನಮೋಹಕ ದೃಶ್ಯವನ್ನು ಕಣ್ತುಂಬ ನೋಡಿ ಆನಂದಿಸಿದೆವು. ಕುಂದಾದ್ರಿಯ ಸೊಬಗು ನಮ್ಮನ್ನು ರೋಮಾಂಚನಗೊಳಿಸಿತ್ತು. ದೂರ ದಿಗಂತದಲ್ಲಿ ಮುಳುಗುತ್ತಿದ್ದ ದಿನಕರನನ್ನು ಸಂತೋಷದಿಂದ ಬೀಳ್ಕೊಟ್ಟು, ಬಸದಿಯಲ್ಲಿ ದಿಗಂಬರನಾಗಿ ನಿಂತಿದ್ದ ಪಾರ್ಶ್ವನಾಥಸ್ವಾಮಿಗೆ ವಂದಿಸಿ ತೀರ್ಥಹಳ್ಳಿಗೆ ಹಿಂತಿರುಗಿದೆವು.

ಮಾರನೆಯ ದಿನ ಆಗುಂಬೆಯ ಸೊಬಗನ್ನು ಸವಿಯುತ್ತ ಘಟ್ಟವಿಳಿದು ಉಡುಪಿ ಜಿಲ್ಲೆಯು ಸೋಮೇಶ್ವರದಲ್ಲಿ ಮದುವೆಯ ಊಟವನ್ನು ಚಪ್ಪರಿಸಿದೆವು. ನಾವು ಬಂದದಾರಿಯಲ್ಲಿ ಬೆಂಗಳೂರಿಗೆ ವಾಪಸ್‌ ಹೋಗುವುದೆಂಬ ಯೋಜನೆ ಬದಲಾಯಿಸಿ, ಕಾರ್ಕಳದ ಮೂಲಕ ಕುದುರೆಮುಖದ ದಾರಿ ಹಿಡಿದೆವು. ಕುದುರೆಮುಖದ ಸುಂದರ ಶೋಲಾ ಕಾಡುಗಳನ್ನು ನೋಡಿಕೊಂಡು, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಯ ದರುಶನವನ್ನು ಮಾಡಿ ಮೂಡಿಗೆರೆ ಹಾಸನ ಮಾರ್ಗವಾಗಿ ಬೆಂಗಳೂರಿಗೆ ಹಿಂತಿರುಗಿದೆವು.

ಬೆಂಗಳೂರಿನ ಪೂರ್ವಘಟ್ಟದ ದಖ್ಖನ್‌ ಪ್ರಸ್ಥಭೂಮಿಯಿಂದ ಶಿವಮೊಗ್ಗದ ಪಶ್ಚಿಮಘಟ್ಟಕ್ಕೆ ಪಯಣಿಸಿ, ಆಗುಂಬೆ ಘಟ್ಟವಿಳಿದು ಉಡುಪಿಯ ಕರಾವಳಿಯ ಸೀಮೆಯನ್ನೂ ಸುತ್ತಿ ಅಲ್ಲಿಂದ ಮತ್ತೆ ಚಿಕ್ಕಮಗಳೂರಿನ ಕುದುರೆಮುಖದ ಘಟ್ಟವನ್ನೇರಿ ವಾಪಸ್‌ ಬೆಂಗಳೂರಿನ ದಖ್ಖನ್‌ ಪ್ರಸ್ಥಭೂಮಿಗೆ ಮರಳಿದ ನಮ್ಮ ಪ್ರವಾಸ ಕರುನಾಡಿನ ವಿವಿಧ ಭೌಗೋಳಿಕ ಪ್ರದೇಶಗಳ ಪರಿಚಯ ಮಾಡಿಸಿತ್ತು!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more