ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಚಿಕೆಗೇಡು... ನಾಚಿಕೆಗೇಡು...

By Staff
|
Google Oneindia Kannada News

ನಾಚಿಕೆಗೇಡು... ನಾಚಿಕೆಗೇಡು...
ಸದ್ದಿಲ್ಲದೇ ಪ್ರಾಣಿ-ಪಕ್ಷಿಗಳನ್ನು ಹೊಟ್ಟೆಯಲ್ಲಿ ಕರಗಿಸುವಲ್ಲಿ ಮನುಷ್ಯ ಅತಿ ಜಾಣ. ಆಚಾರವಿಲ್ಲದ ನಾಲಿಗೆ ಚಪಲ ತೀರಿಸಿಕೊಳ್ಳಲು, ದೇವಿ ಹೆಸರಲ್ಲಿ ಪ್ರಾಣಿ ಬಲಿಗೆ ಜೈ ಎನ್ನುತ್ತಾನೆ! ಕಾಣದ ದೇವರ ಮರೆಯಲ್ಲಿ ಸಮಾಧಾನ ಹೊಂದುತ್ತಾನೆ. ದೇವರ ವಿಷಯ ಒಂದು ಪಕ್ಕಕ್ಕಿರಲಿ; ಮಾಂಸಾಹಾರ ಅಗತ್ಯವೇ ಅನ್ನುವ ಪ್ರಶ್ನೆ ಇಲ್ಲಿ ಉದ್ಭವಿಸಿದೆ.

sampige_srinivas2 ಸಂಪಿಗೆ ಶ್ರೀನಿವಾಸ, ಬೆಂಗಳೂರು
[email protected]

ಕೆಲವು ದಿನಗಳ ಹಿಂದೆ ದಟ್ಸ್‌ಕನ್ನಡದಲ್ಲೇ ಪ್ರಕಟವಾದ ಒಂದು ವರದಿಯಲ್ಲಿದ್ದ ವಿಚಾರ, ನಾವು ಮನುಷ್ಯರೆಂದು ಹೇಳಿಕೊಳ್ಳಲು ನಾಚಿಕೆ ತರಿಸುವಷ್ಟು ಅಮಾನುಷವಾಗಿತ್ತು. ದಾವಣಗೆರೆಯ ದುರ್ಗಾಂಬಿಕಾ ದೇವಿಯ ಜಾತ್ರೆಯಲ್ಲಿ ಕೋಣವನ್ನೂ , ಸಾವಿರಾರು ಕುರಿಗಳನ್ನು, ಕೋಳಿಗಳನ್ನು ಕ್ರೂರ ಮೃಗಗಳ ಹಾಗೆ ಅಟ್ಟಾಡಿಸಿಕೊಂಡು ಭಕ್ತರೆನಿಸಿಕೊಂಡವರು ದೇವಿಗೆ ಬಲಿಕೊಡುವ ನೆಪದಲ್ಲಿ ಕೊಂದುಹಾಕಿದ್ದರು.

ಇಂತಹ ಅಮಾನವೀಯ ಘಟನೆಯನ್ನು ನಗರದ ಪೋಲಿಸರು, ಹಿರಿಯರೆನಿಸಿಕೊಂಡವರು ಮೂಕಪ್ರೇಕ್ಷರಂತೆ ನೋಡಿಕೊಂಡು ಸುಮ್ಮನಿದ್ದರು. ಇದನ್ನು ನೋಡಿದರೆ ಪ್ರಾಣಿಗಳನ್ನು ಬಲಿಕೊಡುವುದು ಕಾನೂನಿನ ಪ್ರಕಾರ ನಿಷೇಧವಾಗಿದ್ದರೂ, ಕಾನೂನು ಪಾಲಕರ, ಆಡಳಿತಗಾರರ ಕೃಪೆಯಿಂದಲೇ, ಇದು ಎಲ್ಲಡೆ ಸಿಗ್ಗಿಲ್ಲದೆ ನಡೆಯುತ್ತಿರುವುದು ವಿಪರ್ಯಾಸವೆನಿಸುತ್ತದೆ.

ನಿಜ ಪ್ರಾಣಿಬಲಿ ಬಹಳ ಹಿಂದಿನಿಂದ ನಡೆದುಕೊಂಡು ಬಂದಿರುವ ಒಂದು ಧಾರ್ಮಿಕ ಆಚರಣೆ. ಇದನ್ನು ಮೂಢನಂಬಿಕೆ ಎಂದು ನಾವು ಎಷ್ಟೇ ಹೇಳಿದರೂ ಹಿಂದಿನಿಂದ ನಡೆದುಕೊಂಡುಬಂದಿರುವ ಜನರ ನಂಬಿಕೆಯನ್ನು ಬದಲಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಅಮಾನವೀಯ ಪ್ರಾಣಿಬಲಿಯ ಆಚರಣೆಯ ಹಿಂದಿರುವ ಮೂಢನಂಬಿಕೆಯನ್ನು, ವಾಸ್ತವತೆಯನ್ನು ಜನರಿಗೆ ಸರಿಯಾಗಿ ತಿಳಿಹೇಳಿ ಅವರನ್ನು ಜಾಗೃತಗೊಳಿಸಿ ಇಂತಹ ಅಮಾನುಷ ಆಚರಣೆಯನ್ನು ನಿಲ್ಲಿಸುವಂತೆ ಅವರ ಮನವೊಲಿಸಲು ಪ್ರಜ್ಞಾವಂತರು, ಪ್ರಾಣಿದಯಾ ಸಂಸ್ಥೆಗಳು ಕಾರ್ಯೋನ್ಮುಖರಾಗಬೇಕಿದೆ.

ಸಾಮಾನ್ಯವಾಗಿ ದುರ್ಗಿಯ ಗುಡಿ ಅಥವಾ ಅಮ್ಮನ ಗುಡಿಗಳಲ್ಲೇ ಹೆಚ್ಚಾಗಿ ಪ್ರಾಣಿಬಲಿ ನಡೆಯುತ್ತದೆ. ಇದಕ್ಕೆ ಪೌರಾಣಿಕ ಕಾರಣವಿರುವುದು ಎಲ್ಲರಿಗೂ ತಿಳಿದ ವಿಷಯ. ಮಹಿಷಾಸುರನೆಂಬ ಕೋಣನ ರೂಪದ ರಾಕ್ಷಸನು ದುರ್ಗಿಯು ಸಂಹಾರಮಾಡಿದಳೆಂದು ಅವಳಿಗೆ ಕೋಣವನ್ನು ಬಲಿಕೊಡುತ್ತಾರೆ. ಆದರೆ ಕೋಣನ ರೂಪದ ಮಹಿಷಾಸುರನನ್ನು ಕೊಂದ ಮಾತ್ರಕ್ಕೆ ದೇವಿಗೆ ಎಲ್ಲ ಕೋಣಗಳ ಮೇಲೆ ದ್ವೇಷವಿದೆ ಎನ್ನುವುದು ಒಂದು ಮೂಢನಂಬಿಕೆ.

ಗಣೇಶನಿಗೆ ಮೂಷಿಕ ವಾಹನವಾಗಿದೆ ಎಂದು ಎಲ್ಲಾ ಇಲಿಗಳನ್ನೂ ನಾವು ಪೂಜಿಸುತ್ತೇವೆಯೇ? ಇಲ್ಲ. ಮೂಷಿಕನೆಂಬ ಇಲಿರೂಪದ ರಾಕ್ಷಸನನ್ನು ಗಣೇಶ ತನ್ನ ವಾಹನವನ್ನಾಗಿ ಮಾಡಿಕೊಂಡ ಅಷ್ಟೇ. ಹಾಗೇ ಕೋಣರೂಪದ ಮಹಿಷನನ್ನು ಕೊಂದಮಾತ್ರಕ್ಕೆ ದುರ್ಗೆಗೆ ಕೋಣವನ್ನು ಬಲಿಕೊಡುವುದು ಶುದ್ಧ ಮೂರ್ಖತನ. ಇದನ್ನು ಸರ್ಕಾರ, ಪ್ರಜ್ಞಾವಂತರು, ಬುದ್ಧಿಜೀವಿಗಳು ಸಾಮಾನ್ಯ ಜನರಿಗೆ ತಿಳಿಹೇಳಿ ಅವರಲ್ಲಿರುವ ಮೂಢನಂಬಿಕೆಯನ್ನು ಹೋಗಲಾಡಿಸದ ಹೊರತು ಈ ಅಮಾನವೀಯ ಪ್ರಾಣಿಬಲಿಯನ್ನು ಕಾನೂನಿನ ಮೂಲಕ ನಿಲ್ಲಿಸಲು ಸಾಧ್ಯವಿಲ್ಲ.

ಮಾನವ ಜನ್ಮ ಪ್ರಾಣಿ ಪ್ರಭೇದಗಳಲ್ಲೇ ಅತಿವಿಶಿಷ್ಟ ಜನ್ಮವಾಗಿದೆ. ಇತರೆಲ್ಲಾ ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೇ, ಮನುಷ್ಯನಿಗೆ ಒಳ್ಳೆಯದಾವುದು, ಕೆಟ್ಟದ್ದಾವುದು ಎಂದು ವಿವೇಚನ ಮಾಡಬಹುದಾದ ಮನಸ್ಸಿದೆ, ಬುದ್ಧಿಯಿದೆ. ಕಾಲುಗಳ ಮೇಲೇ ನೇರವಾಗಿ ನಿಂತು ತನ್ನ ಕೈಗಳನ್ನು ಉಪಯೋಗಿಸುವ ಜಾಣ್ಮೆ ಮನುಷ್ಯ ಪ್ರಾಣಿಗೆ ಮಾತ್ರ ಇದೆ. ಹಾಗಿದ್ದೂ ನಾವು ಮನುಷ್ಯರೇಕೆ ಹೀಗೆ ಸಾಮಾನ್ಯ ಪ್ರಾಣಿಗಳಂತೆ ವರ್ತಿಸುತ್ತಿದ್ದೇವೆ?

ಆಗಾಗ ದೇವರ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಣಿಬಲಿ ಒಂದೆಡೆಯಾದರೆ, ದಿನನಿತ್ಯವೂ ಮನುಷ್ಯನ ಆಹಾರಕ್ಕಾಗಿ ನಡೆಯುತ್ತಿರುವ ಪ್ರಾಣಿಗಳ ವಧೆಯ ಬಗ್ಗೆಯೂ ನಾವು ಚಿಂತಿಸಬೇಕಿದೆ. ದೇವರ ಹೆಸರಿನಲ್ಲಿ ನಡೆಯುವ ಪ್ರಾಣಿಬಲಿಯನ್ನು ಬಹಳಷ್ಟು ಪ್ರಜ್ಞಾವಂತ ನಾಗರಿಕರು ವಿರೋಧಿಸುವುದನ್ನು ನಾವು ಪತ್ರಿಕೆಗಳಲ್ಲಿ ನೋಡುತ್ತೇವೆ. ಆದರೆ ಮಾನವನ ಜಿಹ್ವಾಚಾಪಲ್ಯಕ್ಕೆ , ಕಸಾಯಿಖಾನೆಗಳಲ್ಲಿ ದಿನವೂ ದಯನೀಯವಾಗಿ ಬಲಿಯಾಗುತ್ತಿರುವ ಸಾವಿರಾರು ಪ್ರಾಣಿಗಳ ಬಗ್ಗೆ ಯಾರೂ ಚಕಾರವೆತ್ತದಿರುವುದು ವಿರೋಧಾಭಾಸವೆನಿಸುತ್ತದೆ.

ಪ್ರಾಚೀನ ಮಾನವ ತನ್ನ ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ. ವೈದಿಕಕಾಲದಲ್ಲೂ ಯಜ್ಞಯಾಗಾದಿಗಳಲ್ಲಿ ಗೋವು, ಕುದುರೆಗಳನ್ನು ಬಲಿಕೊಡುತ್ತಿದ್ದರೆಂಬುದು ಅಷ್ಟೇ ಸತ್ಯ. ವೈದಿಕ ಬ್ರಾಹ್ಮಣರು ಮಾಂಸಾಹಾರಿಗಳಾಗಿದ್ದರು ಎಂಬುದೂ ಅಷ್ಟೇ ಸತ್ಯ. ಇದಕ್ಕೆ ಅಗಸ್ತ್ಯ ಋಷಿಗಳು ವಾತಾಪಿಯೆಂಬ ರಾಕ್ಷಸನನ್ನು ಕೊಂದ ಕಥೆಯೇ ಉದಾಹರಣೆ.

ವಾತಾಪಿಯೆಂಬ ರಾಕ್ಷಸನು ತನ್ನನ್ನೇ ಆಡಿನಂತೆ ವೇಷಬದಲಾಯಿಸಿಕೊಂಡು, ತನ್ನ ಸಹೋದರನ ಸಹಾಯದಿಂದ ಅದರಿಂದ ಮಾಡಿದ ಮಾಂಸದ ಭಕ್ಷ್ಯವನ್ನು ಅಗಸ್ತ್ಯರಿಗೆ ಬಡಿಸಿದನಂತೆ. ಇದನ್ನರಿತ ಅಗಸ್ತ್ಯರು ಆಡಿನ ಮಾಂಸವನ್ನು ತಿಂದು ‘ವಾತಾಪಿ ಜೀರ್ಣೋಭವ’ ಎಂದು ಹೊಟ್ಟೆಯ ಮೇಲೆ ಕೈಆಡಿಸಿದರಂತೆ. ಆಗ ಆಡಿನ ಮಾಂಸದ ರೂಪದಲ್ಲಿದ್ದ ಆ ರಾಕ್ಷಸ ಅಲ್ಲೇ ಜೀರ್ಣವಾಗಿಬಿಟ್ಟನೆಂಬ ಕಥೆಯಿದೆ.

ಆದರೆ ಯುಗಗಳು ಉರುಳಿದಂತೆ ಮನುಷ್ಯನ ವಿವೇಚನಾಶಕ್ತಿ ಹೆಚ್ಚಿದಂತೆ ಮಾಂಸಾಹಾರಿಯಾಗಿದ್ದ ಮಾನವ ಸಸ್ಯಾಹಾರದೆಡೆಗೆ ಒಲವು ಬೆಳೆಸಿಕೊಂಡ. ಆಹಾರ ಧಾನ್ಯಗಳ ಕೃಷಿಯನ್ನು ಮಾಡಲು ತೊಡಗಿದ. ವೈದಿಕ ಬ್ರಾಹ್ಮಣರೂ ಪ್ರಾಣಿಹಿಂಸೆಯ ಪ್ರತೀಕವಾಗಿದ್ದ ಯಜ್ಞಯಾಗದಿಗಳನ್ನು ನಿಲ್ಲಿಸಿ, ವೇದಾಂತಗಳೆಂದು ಕರೆಸಿಕೊಂಡಿರುವ ಉಪನಿಷತ್ತಿನಲ್ಲಿ ಬೋಧಿಸಿರುವ ಆತ್ಮಜ್ಞಾನವನ್ನು/ಆತ್ಮಸಾಕ್ಷಾತ್ಕಾರವನ್ನು ಪಡೆಯುವತ್ತ ಹೆಚ್ಚು ಆಕರ್ಷಿತರಾದರು. ಅವರು ಮಾಂಸ ಆಹಾರವನ್ನು ತ್ಯಜಿಸಿ ಸಸ್ಯಾಹಾರಿಗಳಾಗಿ ಬದಲಾದರು.

ಆದರೆ ಈ ಬದಲಾವಣೆಗೆ ಜೈನರ ಅಹಿಂಸಾ ತತ್ವದ ಪ್ರಭಾವ ಕಾರಣ ಎಂಬ ಒಂದು ಚಿಂತನೆಯಿದೆ.

ವ್ಶೆಜ್ಞಾನಿಕವಾಗಿ ಮನುಷ್ಯನ ದೇಹರಚನೆಯನ್ನು ವಿಶ್ಲೇಷಿಸಿದರೆ, ಮನುಷ್ಯನ ಕೈ, ಬಾಯಿ ಮುಂತಾದವು ಪ್ರಾಣಿಗಳ ಮಾಂಸವನ್ನು ತಿನ್ನುವಂತೆ ರಚನೆಯಾಗಿಲ್ಲ. ಆದರೆ ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಸಿಂಹ ಮುಂತಾದವುಗಳ ಅಂಗ ರಚನೆಯನ್ನು ನೋಡಿ. ಅವುಗಳು ಪ್ರಾಣಿಗಳನ್ನು ಬೇಟೆಯಾಡಿ ತಿನ್ನಲು ಸಹಕಾರಿಯಾಗುವಂತೆ ಹರಿತವಾದ ಉಗುರುಗಳಿಂದ, ಕೋರೆ ಹಲ್ಲುಗಳಿಂದ ಕೂಡಿವೆ.

ಈಗ ಶಾಂತವಾಗಿ ಯೋಚಿಸೋಣ ನಮ್ಮ ನಾಲಿಗೆಯ ರುಚಿಗಾಗಿ, ಮುಗ್ಧಪ್ರಾಣಿಗಳನ್ನು ಕೊಂದು ಅವುಗಳನ್ನು ಆಹಾರದಂತೆ ಸ್ವೀಕರಿಸುವುದು ಮನುಷ್ಯರಾದ ನಮಗೆ ಎಷ್ಟು ಸರಿ. ನಿಮ್ಮ ಮನಸಾಕ್ಷಿಯಂತೆ ಯೋಚಿಸಿ.

ಕಸಾಯಿಖಾನೆಯಲ್ಲಿ ಅಮಾನವೀಯವಾಗಿ ಕುರಿ, ಕೋಳಿಗಳ ಕತ್ತನ್ನು ಕತ್ತರಿಸಿ, ಅವು ವಿಲವಿಲ ಒದ್ದಾಡುತ್ತಿರುವ ಚಿತ್ರಣವನ್ನು ನೀವು ಮಾಂಸಾಹಾರವನ್ನು ಸೇವಿಸುತ್ತಿರುವಾಗ ಒಮ್ಮೆ ಜ್ಞಾಪಿಸಿಕೊಳ್ಳಿ. ಇಲ್ಲಿ ಮಾಂಸಾಹಾರಿಗಳನ್ನು ದೂಷಿಸುತ್ತಿಲ್ಲ. ಆದರೆ ಒಮ್ಮೆ ವಿವೇಚಿಸಿ ನೋಡಿ ಎಂದು ಕಳಕಳಿಯಿಂದ ಪ್ರಾರ್ಥಿಸುತ್ತಿದ್ದೇನೆ.

ದು:ಖದ ವಿಷಯವೆಂದರೆ ಮುಂದುವರೆದ ದೇಶಗಳೆಂದು ಹೇಳಿಕೊಳ್ಳುತ್ತಿರುವ ಪಾಶ್ಚಾತ್ಯ ದೇಶಗಳಲ್ಲೂ ಆಹಾರಕ್ಕಾಗಿ, ಮೋಜಿಗಾಗಿ ಪ್ರಾಣಿಹಿಂಸೆ ಅವ್ಯಾಹತವಾಗಿ ನಡೆಯುತ್ತಿರುವುದು. ಹಾಗೆ ನೋಡಿದರೆ ಜಗತ್ತಿನಲ್ಲೇ ಹೆಚ್ಚು ಸಸ್ಯಾಹಾರಿಗಳಿರುವುದು ಭಾರತದಲ್ಲೇ, ಅದರಲ್ಲೂ ದಕ್ಷಿಣ ಭಾರತದಲ್ಲೇ ಎನ್ನುವುದು ಸಮಾಧಾನಕರ ವಿಷಯ.


ಪೂರಕ ಓದಿಗೆ-
ದುರ್ಗಾಂಬಿಕಾ ಜಾತ್ರೆ ಹಿನ್ನೆಲೆ ದಾವಣಗೆರೆಯಲ್ಲಿ ರಕ್ತ ಪ್ರವಾಹ!


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X