ದೇವತೆಗಳು ಅಮೃತ ಕೊಟ್ಟರೂ ಬದಲಿಗೆ ರೊಟ್ಟಿ- ಹುಚ್ಚೆಳ್ಳು ಚಟ್ನಿ ಕೊಡಲ್ಲ...

ಇಟ್ಟು-ಗೊಜ್ಜು ಪ್ರಸಂಗ ಒಂದು: ನಮ್ಮೂರಿನ ಜನಗಟ್ಟಮ್ಮ ಗಂಡ ವೆಂಕಟೇಶಪ್ಪನೊಂದಿಗೆ ಜಗಳ ಕಾದು, 'ನಾನು ಉಡಿದಮನಿಕೋತೀನಿ' ಎಂದು ಬೆದರಿಸಿದಾಗಲೆಲ್ಲ 'ಇಟ್ಟದೆ ನುಚ್ಚದೆ, ಬಸಪ್ಪನ ಬಾಯಾಗ ನೀರದೆ. ಗೊಜ್ಜು ಪಿಸುಕ್ಕೊಣಾಕ ಉಪ್ಪದೆ ಉಣಿಸಣ್ಣದೆ, ಮೆಣಸಕಾಯದೆ ಓಗೇಲೇ' ಅನ್ನುತ್ತ ರೋಪು ಹಾಕುತ್ತಿದ್ದ.

ಆಕೆ ತವರಿಗೆ ಹೋದುದಿಲ್ಲ. ಇವನು ಒಲೆ ಮುಂದೆ ಕೈಸುಟ್ಟುಕೊಂಡಿದ್ದಿಲ್ಲ. ಅವನ ಮಾತು ಹೆಂಡತಿ ಜಗಳವಾಡಿ ತವರಿಗೆ ಹೋದರೆ ಗಂಡ ಸುಲಭವಾಗಿ ಮಾಡಿಕೊಳ್ಳಬಹುದಾದ ಅಡುಗೆಯೆಂದರೆ ಹಿಟ್ಟು ಗೊಜ್ಜು ಎಂಬುದನ್ನಂತೂ ಸೂಚಿಸುತ್ತದೆ.

ಪ್ರಸಂಗ ಎರಡು: ಇಟ್ಟು ತೊಳಿಸಿ ಉಂಟಿಗುಳು ಮಾಡಿ ಸಾರುಕೆಸುರು ಮಡುಗೋ ಪಾಟಲಿಕ ನಂ ಗಣುಸು ಅರುಜಂಟೋ ಅರುಜಂಟು ಅಂತ ಎಗುರ್ಲಾಡಾಕಿಕ್ಕೊಣ್ಣು. ಇನ್ನೇನು ಮಾಡೂದಂತ ಅಸೇಗೊಜ್ಜು ಇಸುಕಿದ್ನಕ್ಕೋ. ಇನ್ನೇನಿದ್ರೂ ರಾತ್ರಿಕೆ ಆಮ್ರದ ಇಸಾರ. ಹುಣಿಸೆಹಣ್ಣು ನೆನೆ ಹಾಕಿ, ಮೆಣಸಿನಕಾಯಿ ತೆಗೆದುಕೊಳ್ಳುವುದಕ್ಕಷ್ಟೆ ಸಮಯ. ಉಪ್ಪು ಹಾಕಿ ಹಿಸುಕೋದೆ. ಅಸಿಗೊಜ್ಜು ರೆಡಿ. ಬೇಕಾ ಒಂದೀರುಳ್ಳಿ.

ರಾಗಿಯಿಂದ ಮುದ್ದೆ, ರೊಟ್ಟಿ, ಗಂಜಿ, ಉಪ್ಪಿಟ್ಟು, ದೋಸೆ, ಹುರಟ್ಟು, ಸಂಡಿಗೆ ಮುಂತಾದವನ್ನು ಮಾಡುವರು. ಮುದ್ದೆಗೆ ಸೊಪ್ಪಿನ ಹುಳಿ, ತರಕಾರಿಗಳ ಎಸರು, ಚಟ್ನಿಗಳು, ಮಸಾಲೆ ಸಾರುಗಳು, ಚಿಕನ್, ಮಟನ್, ಅಣಬೆ, ಮೀನು, ಎಂಡ್ರಕಾಯಿ ಸಾರುಗಳು, ವಿವಿಧ ಗೊಜ್ಜುಗಳು ಹೀಗೆ ಎಲ್ಲವೂ ಪಸಂದೇ.

ರಾಗಿ ರೊಟ್ಟಿಗೆ ಅದ್ಭುತವಾದ ವ್ಯಂಜನ

ರಾಗಿ ರೊಟ್ಟಿಗೆ ಅದ್ಭುತವಾದ ವ್ಯಂಜನ

ಮೇಲೆ ಹೇಳಿದ ಹಸಿಗೊಜ್ಜಿನದೇ ವಿಶೇಷ ರುಚಿಯ ಮಜ. ಆದರೆ ರಾಗಿ ರೊಟ್ಟಿಗೆ ಅದ್ಭುತವಾದ ವ್ಯಂಜನವೆಂದರೆ ಹುಚ್ಚೆಳ್ಳಿನ ಚಟ್ನಿ. ಇದರ ಜೊತೆಗೆ ಗಟ್ಟಿ ಮೊಸರಿದ್ದರಂತೂ ತಿನ್ನುವುದರ ಸುಖ ಬಲ್ಲವರೇ ಬಲ್ಲರು. ಬಿಸಿ ರೊಟ್ಟಿಯ ಮೇಲೆ ಬೆಣ್ಣೆ ಮುದ್ದೆ ಇದ್ದು, ಅದು ಕರಗುತ್ತಿರುವಾಗ ಗಬಗಬ ತಿನ್ನುವುದರ ಮಜಾ ತಿಂದೇ ಅನುಭವಿಸಬೇಕು.

ಅಮೃತ ಕೊಡ್ತೀನಿ ಅಂದರೂ ರಾಗಿರೊಟ್ಟಿ ಕೊಡಲ್ಲ

ಅಮೃತ ಕೊಡ್ತೀನಿ ಅಂದರೂ ರಾಗಿರೊಟ್ಟಿ ಕೊಡಲ್ಲ

ಬರೀ ರಾಗಿ ಹಿಟ್ಟಿನ ರೊಟ್ಟಿಯ ರುಚಿ ಒಂದು ಪರಿಯದಾದರೆ, ಅದಕ್ಕೆ ಈರುಳ್ಳಿ, ಕೊತ್ತಂಬರಿಸೊಪ್ಪು, ಹಸಿಮೆಣಸಿನಕಾಯಿ ತರಿದು ಹಾಕಿ ತುಪ್ಪವನ್ನೋ ಬೆಣ್ಣೆಯನ್ನೋ ಹಾಕಿಕೊಂಡು ತಿನ್ನುತ್ತಿದ್ದರೆ ದೇವತೆಗಳು ಬಂದು ಅಮೃತ ಕೊಡ್ತೀವಿ, ನಮಗೆ ರಾಗಿರೊಟ್ಟಿ ಕೊಡಿ ಎಂದು ಕೇಳಿದರೂ ಕೊಡುವ ಬುದ್ಧಿ ಹುಟ್ಟುವುದಿಲ್ಲ. ಹಾಗೊಂದು ವೇಳೆ ಕೊಟ್ಟವನು ಭೋಜನ ರಸಿಕನಾಗಿರಲಾರ.

'ರಾಗಿರೊಟ್ಟಿ, ಹುಚ್ಚೆಳ್ಚಟ್ನಿ ತಂದಿವ್ನಿ ಮೊಮ್ಮಗ್ನೆ, ಮೂಗಿನ ಮಟ್ಟ ಗಡಿದು ಮಲಗೋ ಕಳ್ ನನ್‍ಮಗನೆ' ಅಂತ ಒಂದು ಸಿನೆಮಾ ಹಾಡೂ ಇದೆ. ಸಿನೆಮಾದ ಹೆಸರು ನೆನಪಿಗಿಲ್ಲ.

ಈರುಳ್ಳಿ ಬಳಸದಿದ್ದರೆ ವಾರವಾದರೂ ಹಳಸಲ್ಲ

ಈರುಳ್ಳಿ ಬಳಸದಿದ್ದರೆ ವಾರವಾದರೂ ಹಳಸಲ್ಲ

ಹುಚ್ಚೆಳ್ಳನ್ನು ಹದವಾಗಿ ಹುರಿದಾಗ ಅದರ ಪರಿಮಳ ಬಾಯಲ್ಲಿ ನೀರೂರಿಸುತ್ತದೆ. ಅದನ್ನು ಕುಟ್ಟಿ ಅದಕ್ಕೆ ಹುಣಿಸೇಹಣ್ಣು, ಈರುಳ್ಳಿ, ಒಣಮೆಣಸಿನಕಾಯಿ ಹಾಕಿ ರುಬ್ಬುತ್ತಾರೆ. ಇದಕ್ಕೆ ನೀರು ಸೋಕದಿದ್ದರೆ, ಈರುಳ್ಳಿ ಬಳಸದಿದ್ದರೆ ವಾರವಾದರೂ ಹಳಸುವುದಿಲ್ಲ.

ಕೊತ್ತಂಬರಿಸೊಪ್ಪನ್ನೂ ಹಾಕಿ ಅರೆಯಬಹುದು. ಬೆಳ್ಳುಳ್ಳಿಯನ್ನು ಕೆಲವರು ಹಾಕುತ್ತಾರೆ. ಇಷ್ಟಾದರೆ ಸಾಕು. ಈ ಚಟ್ನಿಯ ಪರಿಮಳ ಮೂಗಿಗೆ ಬಡಿಯುತ್ತಲೇ ಹಸಿವು ಹುಟ್ಟುತ್ತದೆ. ಹಸಿವಿದ್ದರೆ ಅದು ಹೆಚ್ಚುತ್ತದೆ. ಈ ಚಟ್ನಿ, ಗಟ್ಟಿಮೊಸರು, ನಂಜಿಕೊಳ್ಳು ಹುಲ್ಲೀರುಳ್ಳಿ ಅಥವಾ ಬಳ್ಳಾರಿ ಈರುಳ್ಳಿ ಇದ್ದುಬಿಟ್ಟರಂತೂ ಮುಗಿಯಿತು. ಅದು ರಾಜಭೋಜನಕ್ಕೂ ಮೀರಿದ್ದು.

ಬಿಸಿ ಅನ್ನಕ್ಕೆ ಹುಚ್ಚೆಳ್ಳು ಚಟ್ನಿ, ತುಪ್ಪ ಹಾಕಿ

ಬಿಸಿ ಅನ್ನಕ್ಕೆ ಹುಚ್ಚೆಳ್ಳು ಚಟ್ನಿ, ತುಪ್ಪ ಹಾಕಿ

ಬಿಸಿಬಿಸಿ ಅನ್ನಕ್ಕೆ ಹುಚ್ಚೆಳ್ಳ ಚಟ್ನಿ, ತುಪ್ಪ ಹಾಕಿ ಕಲೆಸಿದರೆ ಸೊಲಗಕ್ಕಿ ಅನ್ನ ಸಾಕು ಅನ್ನುವವನು ಪಾವಕ್ಕಿ ಅನ್ನ ಬೇಕಂತಾನೆ. ದೊಡ್ಡಬೈರ್ನೆಲ್ಲಕ್ಕಿಯ ತಂಗಳನ್ನಕ್ಕೆ ಮೊಸರು ಕಲೆಸಿ, ಹುಚ್ಚೆಳ್ಳು ಚಟ್ನಿಯನ್ನು ನಂಜಿಕೊಳ್ಳುತ್ತ, ಈರುಳ್ಳಿ ಗೆಡ್ಡೆಯನ್ನು ಕಚ್ಚಿ ತಿನ್ನುತ್ತದ್ದರಂತೂ ಅದರ ಮುಂದೆ ಮೃಷ್ಟಾನ್ನವೂ ಕಡೆ.

ಕಾರ ಬಯಸುವ 'ಮೀಟರ್' ಇರುವವರು ಹಸಿ ಮೆಣಸಿನಕಾಯನ್ನು ಕಚ್ಚಿ ಅದರ ಖಾರದ ಸವಿಯನ್ನು ಅನುಭವಿಸಬಹುದು. ಹುಚ್ಚೆಳ್ಳಿನಲ್ಲಿ ಕೊಲೆಸ್ಟ್ರಾಲಿನ ಅಂಶವೂ ಕಡಿಮೆ ಇರುವುದರಿಂದ ಇದನ್ನು ತಿನ್ನುವುದರಿಂದ ಪೂರಿಯಂತೆ ಉಬ್ಬಿಬಿಡುವ ಭಯವೂ ಇಲ್ಲ.

ಹುಚ್ಚೆಳ್ಳಿನಿಂದ ಒಣಚಟ್ನಿಪುಡಿಯನ್ನೂ ತಯಾರಿಸಬಹುದು. ಹುರಿದ ಹುಚ್ಚೆಳ್ಳಿಗೆ ಹುಣಿಸೆಹಣ್ಣು, ಒಣಮೆಣಸಿನಕಾಯಿ ಹಾಕಿ ಚೆನ್ನಾಗಿ ಕುಟ್ಟಿದರೆ ಹುಚ್ಚೆಳ್ಳು ಚಟ್ನಿಪುಡಿ ತಯಾರ್. ವಾರ ಹತ್ತುದಿನ ಬಳಸಲು ಅಡ್ಡಿಯಿಲ್ಲ. ಹುಚ್ಚೆಳ್ಳಿನ ಪುಡಿಯನ್ನು ಸೋರೆಕಾಯಿಪಲ್ಯ, ಅವರೆತಟ್ಟೆ ಉಪ್ನೀರು ಮಾಡಿದಾಗ ಇದರ ಪುಡಿಯನ್ನು ಹಾಕುತ್ತಾರೆ. ಅವರೆ ಸೊಗಡಿನ ಜೊತೆಗೆ ಇದರ ಪರಿಮಳವೂ ಬೆರೆತರೆ ರುಚಿಯೋರುಚಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+