ವರ್ಷಗಟ್ಟಲೆ ನಿದ್ದೆ ತ್ಯಾಗ ಮಾಡಿ, ಗಂಡನ ಸಲುಹಿದ ಮಹಾತಾಯಿ ವಿಜಯಮ್ಮ

By: ಸ.ರಘುನಾಥ
Subscribe to Oneindia Kannada

ಇಂದಿನ ಏನೆಲ್ಲ ಬದಲಾವಣೆಗಳ ನಡುವೆಯೂ ದಾಂಪತ್ಯದಲ್ಲಿ ಆದರ್ಶವಾಗಿ ಉಳಿದುಕೊಂಡಿರುವ ಹಲವು ವಿಷಯಗಳುಂಟು. ಇದು ಕೆಲವರಿಗೆ ಕಟ್ಟಿಕೊಂಡ ಮೇಲೆ ಏಗಬೇಕು ಎಂಬುದಾಗಿರುವುದಿಲ್ಲ. ಪ್ರೀತಿ, ಕರುಣೆ, ದಯೆ, ಸಪ್ತಪದಿಯಲ್ಲಿನ ಆದರ್ಶ ಎಲ್ಲವೂ ಕೂಡಿಕೊಂಡು 'ಸಾನುರಾಗ'ವಾಗಿರುವುದು. ಇದನ್ನು ಸಾಪೇಕ್ಷಗೊಳಿಸುವ ಸಾರ್ಥಕ ಪದವೆಂದರೆ 'ಸೇವೆ.'

ಕೋಲಾರದ ಅಲೆಮಾರಿಗಳಿಗೆ ಸೂರು ಕಟ್ಟಿಕೊಟ್ಟ ರಘುನಾಥ ಮೇಷ್ಟ್ರು

ಪತಿಸೇವೆ ಮಾಡಿದವರಂತೆ ಸತಿಸೇವೆ ಮಾಡಿದವರೂ ಉಂಟು. ನಿಜ ದಾಂಪತ್ಯವಿದು. ನಿಜ ದಾಂಪತ್ಯದ, ಸೇವೆಯ ಪ್ರಸಂಗವೊಂದು ಮುಖ್ಯವೆನಿಸಿದ್ದರಿಂದ, ಇದು ಯಾರೋ ಹೇಳಿ ಕೇಳಿದ್ದಾಗಿರದೆ ನಾನೇ ಕಂಡುದರಿಂದ, ಇಂದು ಏನೇನೋ ವಿಕೃತಿಗಳಿಗೆ ಒಳಗಾಗಿ ದಾಂಪತ್ಯ ಜೀವನ ಅಸ್ತವ್ಯಸ್ತಗೊಳ್ಳುತ್ತಿರುವುದರಿಂದ ಇಂಥದೊಂದು ಮಾದರಿ ಅಗತ್ಯವಿರುವುದರಿಂದ ಇದನ್ನು ಹೇಳುತ್ತಿರುವೆ.

ರಾಮಪ್ಪನೆಂಬ ಹಳ್ಳಿ ಮನುಷ್ಯನ ಇರುಳ ಕೊಳಲ ನಾದ, ಹಗಲಿನ ಗೇಯ್ಮೆ

ಮೂವತ್ತು ವರ್ಷಗಳ ಕಾಲ ಇರುಳುಗಳಿಡೀ ಜಾಗರಣೆ ಮಾಡಿ ಗಂಡನ ಸೇವೆ ಮಾಡಿದ ಮಡದಿ ರೂಪದ ತಾಯಿಯೊಬ್ಬಳ ಜೀವನದ ಒಂದು ದೊಡ್ಡ ಅಧ್ಯಾಯವಿದು. ಕಥೆಯೆಂದರೆ ಕಥೆಯೇ. ಆದರೆ ಇದು ಆಯ್ದ ಒಂದು ಅಧ್ಯಾಯ ಮಾತ್ರ.

ಭೈರಪ್ಪಜ್ಜನ ಆ 'ಒಂದು ರುಪಾಯಿ'ಯ ಮೌಲ್ಯ ಗೂಗಲ್ ಗೂ ಸಿಗಲ್ ವೇನೋ?

ವಿಜಯಮ್ಮ ಕೆಳ ಮಧ್ಯಮವರ್ಗದ ಬ್ರಾಹ್ಮಣ ಹೆಣ್ಣು. ಹೆಣ್ಣು ಸಂತತಿಯನ್ನೇ ಪಡೆದ ಸಂಸಾರಿ. ಬಡತನ. 'ಆಯ್ಕೊಂಡ್ ತಿನ್ನೋ ಕೋಳೀಗೆ ಕಾಲ್ಮುರೀತು' ಅನ್ನುವ ಗಾದೆ ಅಕ್ಷರಶಃ ಒಪ್ಪುವಂತಾದುದು ಅಪಘಾತದಲ್ಲಿ ಗಂಡನ ಕಾಲು ಊನವಾದಾಗ. ನಾಳೆ ಸರಿ ಹೋದೀತೆಂದುಕೊಂಡ ಆ ನಾಳೆ ಬರಲೇ ಇಲ್ಲ.

ಎಷ್ಟು ಗಿಡವೋ ಅಷ್ಟು ಗಾಳಿ

ಎಷ್ಟು ಗಿಡವೋ ಅಷ್ಟು ಗಾಳಿ

ಗಂಡ ಹಾಸಿಗೆ ಹಿಡಿದ ಮೇಲೆ ಬಡತನ ಉಲ್ಬಣಿಸಿತು. ಸಂಸಾರದ ತಕ್ಕಡಿಯ ಒಂದು ತಟ್ಟೆ ಖಾಲಿ ಇದ್ದು, ಇನ್ನೊಂದು ತಟ್ಟೆಯಲ್ಲಿ ಬಡ ಸಂಸಾರದ ಎಲ್ಲ ತಾಪತ್ರಯಗಳೂ ಒಟ್ಟುಗೂಡಿ ಕುಳಿತಿದ್ದವು. ಈ ಪಾಡು ಒಂದು ಜಾತಿ, ಧರ್ಮದ ಬಡವರದಷ್ಟೆ ಅಲ್ಲ. ಯಾವ ಬಡತನದ ಸಂಸಾರವೂ ಹೀಗೆ ಇರುವುದು. ಸಂಸಾರ ದೊಡ್ಡದಿದ್ದರೆ ಇದರ ಭಾರವೂ ಅಷ್ಟೇ ಇರುತ್ತದೆ. ‘ಎಷ್ಟು ಗಿಡವೋ ಅಷ್ಟು ಗಾಳಿ' ಅನ್ನುವಂತೆ.

ಗಂಡನ ಕಾಲು ಎಷ್ಟು ಊನಗೊಂಡಿತ್ತೆಂದರೆ ತಾನೆ ತಾನಾಗಿ ಎದ್ದು ಕೂರಲೂ ಆಗುತ್ತಿರಲಿಲ್ಲ. ದಿನ ಕಳೆದಂತೆ ಎತ್ತಿ ಕೂರಿಸಿದರೂ ಕುಳಿತುಕೊಳ್ಳಲಾಗುತ್ತಿರಲಿಲ್ಲ. ಮಲಗಿದಲ್ಲೇ ಎಲ್ಲಾ ಆಗುತ್ತಿತ್ತು. ಎಲ್ಲವನ್ನೂ ಮಾಡಬೇಕಿತ್ತು. ಆರೈಕೆ ಮಾಡಬಹುದು. ಹಗಲು ನಡೆಸುವ ಉಪಚಾರ ಒಂದು ರೀತಿಯದು. ರಾತ್ರಿಯಲ್ಲಿ ಇದು ಅಷ್ಟು ಸುಲಭವಲ್ಲ.

ಆಕೆ ತಾಯಿಯಲ್ಲ, ಮಹಾತಾಯಿ

ಆಕೆ ತಾಯಿಯಲ್ಲ, ಮಹಾತಾಯಿ

ಏಕೆಂದರೆ ಉಪಚರಿಸುವವರು ದಣಿದಿರುತ್ತಾರೆ. ಅವರಿಗೂ ವಿಶ್ರಾಂತಿ ಅಗತ್ಯ. ಹಣ ಉಳ್ಳವರಾದರೆ ಪಾಳಿಯಲ್ಲಿ ದಾದಿಯರನ್ನು ನೇಮಕ ಮಾಡಿಕೊಳ್ಳಬಹುದು. ಔಷಧ ಉಪಚಾರವೇ ಕಷ್ಟವಾದವರಿಗೆ ಇದಾಗದು. ಆಗದನ್ನು ಗೊಣಗದೆ ಮೂವತ್ತಕ್ಕೂ ಹೆಚ್ಚು ವರುಷಗಳಲ್ಲಿನ ರಾತ್ರಿಗಳನ್ನು ಹಗಲು ಮಾಡಿಕೊಂಡು ಸೇವೆ ಮಾಡಿದ ಆಕೆ ಹೆಂಡತಿಯೇ ಅಲ್ಲ. ತಾಯಿ. ಸಾಮಾನ್ಯ ತಾಯಿಯಲ್ಲ, ಮಹಾತಾಯಿ.

ಗಂಡ ಅಥವಾ ಇನ್ನಾರೆ ಆಶ್ರಿತರು ಇಡುಗಂಟು ಇಟ್ಟುಕೊಂಡಿದ್ದಾಗ ಅದಕ್ಕಾಗಿ ನಡೆಸುವ ಸೇವೆ ಬೇರೆ. ಬಡತನವನ್ನು ಉಳಿಸಿದ, ಬಿಡಿಗಾಸೂ ಇಲ್ಲದವರ ಸೇವೆಯನ್ನು ನಡೆಸುವುದು ಮಾನವೀಯತೆ ಇದ್ದರಷ್ಟೆ ಸಾಧ್ಯ. ವಿಜಯಮ್ಮನವರದು ಆಚರಣೆಯಲ್ಲಿದ್ದ ಮಾನವೀಯತೆ. ಇದನ್ನು ಸಂಪ್ರದಾಯಿಗಳು ಸತಿಭಕ್ತಿ ಎಂದಾರು. ಸ್ತ್ರೀವಾದಿಗಳು ಏನೆಂದಾರೋ ತಿಳಿಯದು. ಆದರೆ ವಿಜಯಮ್ಮನವರದು ಭೂದೇವಿಯ ತಾಳ್ಮೆ, ಆಕೆ ನಿಜಕ್ಕೂ ಮಾನವೀಯತೆಯ ನಿತ್ಯದನುಸಂಧಾನಿ.

ಪ್ರತಿ ಕ್ಷಣವೂ ಕಾಲು ನೋವಿನಿಂದ ನರಳುತ್ತಿದ್ದ

ಪ್ರತಿ ಕ್ಷಣವೂ ಕಾಲು ನೋವಿನಿಂದ ನರಳುತ್ತಿದ್ದ

ವಿಜಯಮ್ಮನವರ ಗಂಡ ಪ್ರತಿಕ್ಷಣವೂ ಕಾಲುನೋವಿನಿಂದ ನರಳುವ ರೋಗಿಯಾಗಿದ್ದರು. ಯಾವ ನೋವು ನಿವಾರಕ ಮದ್ದೂ ಹಿಡಿಯುತ್ತಿರಲಿಲ್ಲ. ಹಾಗಾಗಿ ಕಾಲನ್ನು ಹಿಸುಕುತ್ತಲೇ ಇರಬೇಕಿತ್ತು. ಹಗಲಾದರೆ ಕೊಂಚ ಮಟ್ಟಿಗೆ ಮಕ್ಕಳ ನೆರವಿರುತ್ತಿತ್ತು. ರಾತ್ರಿಯಾಯಿತೆಂದರೆ ಎಲ್ಲವೂ ಈಕೆಯಿಂದಲೇ ಆಗಬೇಕು. ಹಿಸುಕುವ ಕೈ ಕ್ಷಣ ನಿಂತರೂ ಗಂಡ ನಿದ್ದೆ ಮಂಪರಿನಿಂದ ಹೊರಬಂದು ನೋವಿನ ನರಳುವಿಕೆಯಲ್ಲಿ ‘ವಿಜಯ' ಅನ್ನುತ್ತಿದ್ದರು.

ತೂಕಡಿಕೆಯಲ್ಲಿಯೂ ಕೈ ನಿಲ್ಲದ ಅಭ್ಯಾಸವಾಗಿತ್ತು ಆಕೆಗೆ. ಎಚ್ಚರವಿರುವ ತೂಕಡಿಕೆ ತಾಯಿಯದಷ್ಟೆ ಆಗಿರುತ್ತದೆ. ಇದನ್ನು ಸಾಧಿಸಿದ ತಾಯಿಯಾಗಿದ್ದರು ವಿಜಯಮ್ಮ.

ವಿಜಯಮ್ಮನನ್ನು ಯಾರಿಗೆ ಹೋಲಿಸಬಹುದು?

ವಿಜಯಮ್ಮನನ್ನು ಯಾರಿಗೆ ಹೋಲಿಸಬಹುದು?

ಇಂಥ ಪತಿ ಸೇವೆಯಿಂದಾಗಿ ವಿಜಯಮ್ಮ ಧನ್ಯಳೋ ಅಲ್ಲವೋ ಗೊತ್ತಿಲ್ಲ. ಆದರೆ ಮಾನ್ಯಳು. ಅದೂ ಕೇವಲ ಮಾನ್ಯಳಲ್ಲ, ಮಹಾಮಾನ್ಯಳು. ಆಕೆಗೆ ಯಾವುದು ಉಪಮೆ? ಆಕೆಗೆ ಆಕೆಯೇ ಉಪಮೆ. ಪುರಾಣೇತಿಹಾಸಗಳಲ್ಲಿ ಬರುವ ಯಾರಿಗೆ ಹೋಲಿಸಬಹುದು? ಅನನ್ಯಳಾದ್ದರಿಂದ ಹೋಲಿಕೆ ಸಿಗದು. ಏಕೆಂದರೆ ಗಂಡನಿಂದ ಮೂವತ್ತು ವರ್ಷ ಯಾವ ಸುಖವನ್ನೂ ಪಡೆಯದೆ, ಕನಿಷ್ಠ ಅಪೇಕ್ಷಿಸದೆ, ಸಿಗಲಿಲ್ಲವೆಂದು ಆಕ್ಷೇಪಿಸದೆ, ಉಪೇಕ್ಷಿಸದೆ ಸೇವೆ ಮಾಡಿದಾಕೆ ವಿಜಯಮ್ಮ.

ಏತಕ್ಕೂ ಉಪಯುಕ್ತರಲ್ಲದ ವ್ಯಕ್ತಿಗಳು ಮರಣಿಸಿದಾಗ ಬಿಡುಗಡೆಯ ನಿಟ್ಟುಸಿರನ್ನು ಹೊರಹಾಕುವ ಅನೇಕರುಂಟು. ಗಂಡ ಮರಣಿಸಿದಾಗ ವಿಜಯಮ್ಮ ಅಂಥವರಲ್ಲಿ ಒಬ್ಬರಾದವರಲ್ಲ. ‘ವಿಜಯ' ಎಂಬ ಆ ಕರೆ ಇನ್ನು ಇಲ್ಲದಾದುದಕ್ಕೆ, ಕೈ ಖಾಲಿ ಆದುದಕ್ಕೆ ಆಕೆ ದುಃಖಿಸಿದರು. ಇದು ಹೃದಯ ಆರ್ದ್ರಗೊಳ್ಳುವ ಸಂಗತಿ.

ನನ್ನ ಸಮಾಧಾನಕ್ಕೆ ಬರೆದ ಲೇಖನ

ನನ್ನ ಸಮಾಧಾನಕ್ಕೆ ಬರೆದ ಲೇಖನ

ವಿಜಯಮ್ಮ ಈ ಲೇಖನ ಓದುತ್ತಾರೆಯೋ ಇಲ್ಲವೋ ತಿಳಿಯದು. ಓದಿದರೂ ತಮ್ಮ ಬಗ್ಗೆ ಹೆಮ್ಮೆ ಪಡುವ ಜೀವ ಅದಲ್ಲ. ಈ ಲೇಖನ ಬರೆದಿದ್ದರಿಂದ ಆಕೆಗಾವ ಲಾಭವೂ ಇಲ್ಲ. ಬರೆಯದಿದ್ದರೆ ಕೊರಗೂ ಇರುತ್ತಿರಲಿಲ್ಲ. ಆದರೂ ಬರೆಯುವ ಒತ್ತಡ ನನ್ನಲ್ಲಿ ಹುಟ್ಟಿದ್ದು ಏಕೆ ಎಂಬುದೂ ನನಗೆ ತಿಳಿದಿಲ್ಲ. ನನಗೇ ಬೇಕಾದ ಸಮಾಧಾನಕ್ಕಾಗಿ ಇದನ್ನು ಬರೆದಿರುವೆನೇನೊ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sacrifice has an extent. Here is the story about Vijaymma. She sacrificed her life to husband. This is the heart melting story about her.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ