ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವಗಳನ್ನು ಉಳಿಸುತ್ತಿದ್ದ ಎರಡು ಜೀವಗಳ ನೆನೆದು, ಶರಣು ಶರಣೆನ್ನುತ್ತಾ...

By ಸ ರಘುನಾಥ, ಕೋಲಾರ
|
Google Oneindia Kannada News

'ಹೊಲೆಯನನ್ನೇಕೆ ಜಗದಲ್ಲಿ ನಿಂದಿಸುವುದು/ ಅವನ ಮನದಲ್ಲೂ ಸದ್ಗುರುವು ಇರುವ' ಎಂಬ ಕೈವಾತ ತಾತಯ್ಯನ ಪದ್ಯದ ನೆನಪಿನೊಂದಿಗೆ ನನ್ನೂರಿನ ಬೈರಮ್ಮ ನೆನಪಾಗುತ್ತಲೇ ಇರುತ್ತಾಳೆ. ಆಕೆ ಅಂದಿನ ಪದ್ಧತಿಯಂತೆ ಅಸ್ಪೃಶ್ಯಳು. ಅಜ್ಜಿ ಅನಕ್ಷರಸ್ಥಳು. ಸರಳೆಯರಾದ ಆ ಇಬ್ಬರು ಹೆಂಗಸರ ನಡುವೆ ಗೌರವ, ವಿಶ್ವಾಸಗಳು ಗಾಢವಾಗಿದ್ದವು. ನಾನು ಹುಟ್ಟಿದ್ದೂ ಇದೇ ಬೈರಮ್ಮ ತಾಯಿಯ ಕೈಯಲ್ಲಿ.

ಹೆರಿಗೆ ಎಂತಹ ಕಷ್ಟದ್ದಾದರೂ ಬೈರಮ್ಮ ಧೈರ್ಯಗುಂದುತ್ತಿರಲಿಲ್ಲ. ಇದಕ್ಕೊಂದು ಕಾರಣವೂ ಇತ್ತು. ಅದೆಂದರೆ ಅಜ್ಜಿಯ ನಾಟಿ ವೈದ್ಯ. ಬೈರಮ್ಮ ನುರಿತ ಹೆರಿಗೆ ತಜ್ಞೆ. ಅಜ್ಜಿ ಹೆರಿಗೆಯಲ್ಲೂ ವೈದ್ಯದಲ್ಲೂ ನುರಿತವಳು. ಬಸುರಿಯ ಪರಿಸ್ಥಿತಿ ಹೇಗೆ, ಮಗುವಿನ ಸ್ಥಿತಿಗತಿಗಳೇನು ಎಂದು ಇಬ್ಬರೂ ಸಮಾಲೋಚನೆ ನಡೆಸುತ್ತಿದ್ದರು.

ಮಗುವಿನ ಭಾಷೆ ಅರಿಯುವ ಅಮ್ಮನಿಗೆ ಹೋಲಿಕೆ ಎಲ್ಲುಂಟು?ಮಗುವಿನ ಭಾಷೆ ಅರಿಯುವ ಅಮ್ಮನಿಗೆ ಹೋಲಿಕೆ ಎಲ್ಲುಂಟು?

ಇಂದು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ವಿ.ಐ.ಪಿ. ರೋಗಿಯೊಬ್ಬನ ಚಿಕಿತ್ಸೆಗೆ ವೈದ್ಯರ ತಂಡ ಸಮಾಲೋಚಿಸುತ್ತಲ್ಲ ಹಾಗೆ. ನಂತರ ಬೈರಮ್ಮ ಬಸುರಿಯ ಬಳಿಗೆ ಹೋಗಿ ತೆರೆಯ ಹಿಂದೆ ಏನೋ ಮಾಡುತ್ತಿದ್ದಳು. ಅಜ್ಜಿ ಹೊಲದ ಹತ್ತಿರವಿದ್ದ ಕರಿಕಲ್ಲು ಗುಡ್ಡಕೆ ಹೋಗಿ ಯಾವುದೋ ಸೊಪ್ಪು, ಬೇರುಗಳನ್ನು ತಂದು ಬೈರಮ್ಮನಿಗೆ ಕೊಡುತ್ತಿದ್ದಳು.

ವೇಳೆ ರಾತ್ರಿಯೆ ಆಗಿರಲಿ, ಇಂಥ ಸಂದರ್ಭಕ್ಕೆಂದೇ ಇಟ್ಟುಕೊಂಡಿದ್ದ ಲಾಟೀನನ್ನು ಮುಡಿಸಿಕೊಂಡು ಒಬ್ಬಳೇ ಕರಿಕಲ್ಲು ಗುಡ್ಡಕ್ಕೆ ಹೊರಟುಬಿಡುತ್ತಿದ್ದಳು. ಮನೆಯಲ್ಲಿದ್ದ ಹಸು, ಎಮ್ಮೆಗಳು ಈಯುವಾಗ ಸಮಸ್ಯೆ ಉಂಟಾದಾಗಲೂ ಅಜ್ಜಿಯದು ಇದೇ ಪರಿ.

Tribute to two woman who saved thousands of lives

ಇಬ್ಬರು ಅದೇನೇನು ಮಾಡುತ್ತಿದ್ದರೋ ಕಡೆಗೆ ಹೆರಿಗೆಯಂತೂ ಆಗುತ್ತಿತ್ತು. ಮಗು ಬಾಣಂತಿ ಕ್ಷೇಮದಿಂದಿರುತ್ತಿದ್ದರು. ನನ್ನ ಅಕ್ಕ ಉಮಳಿಗೆ ಹೆರಿಗೆ ಇನ್ನಿಲ್ಲದ ಕಷ್ಟಕ್ಕಿಟ್ಟುಕೊಂಡಿತ್ತು. ಹಿರಿಯರು ಆಡುತ್ತಿದ್ದ ಮಾತಿನ ಪ್ರಕಾರ ಮಗು ಮಾಲೆ ಹಾಕಿಕೊಂಡಿತ್ತು. ನೋವು ಕಾಣಿಸಿಕೊಂಡು ಮೂರು ದಿನಗಳು ಕಳೆದಿದ್ದರೂ ಹೆರಿಗೆ ಆಗಿರಲಿಲ್ಲ. ನನ್ನ ಅಕ್ಕನ ರೋದನ ಮುಗಿಲಿಗೆ ತಾಕುತ್ತಿತ್ತು.

ಗಂಡಸರು ಆತಂಕದಿಂದ ಎತ್ತಿನ ಗಾಡಿ ಕಟ್ಟಿಕೊಂಡು ಮಾಲೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾತಿಗೆ ಬಂದಿದ್ದರು. ಆದರೆ ಅಜ್ಜಿಗಾಗಲಿ ಬೈರಮ್ಮನಿಗಾಗಲಿ ಆತಂಕ, ಗಾಬರಿ ಒಂದೂ ಇದ್ದುದಿಲ್ಲ. ಅಜ್ಜಿ ಆಸ್ಪತ್ರೆಗೆ ಹೋಗುವುದನ್ನು ನಿರಾಕರಿಸಿದಳು. ಅವಳಿಗೆ ಎದುರು ಹೇಳುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಹೆಂಗಸರು, ಗಂಡಸರು ತಾಯಿ ಇಲ್ಲವೆ ಮಗುವಿನಲ್ಲಿ ಒಂದು ಜೀವ ಹೋಗುವುದು ನಿಜ ಎಂಬ ತೀರ್ಮಾನಕ್ಕೆ ಬಂದಿದ್ದರು.

ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ ಯಾರ ಜೀವ ಹೋಗುತ್ತದೆ ಎಂದು ಕಾಯುವಂತಾಗಿತ್ತು. ಐದನೇ ದಿನ ಸರಿರಾತ್ರಿ. ಕೆವ್ವೆಂಬ ಮಗುವಿನ ಅಳು. ಮನೆ ಮಂದಿ ನಿದ್ದೆಯಿಂದ ದಡಬಡಿಸಿ ಎದ್ದರು. ಮಗು ಅಳುತ್ತಿದೆ. ತಾಯಿಯ ಕಥೆ ಮುಗಿದಿರಬೇಕು ಎಂದು ಹೊರ ಬಂದರು. ದೊಡ್ಡ ಜೀವ, ಚಿಕ್ಕ ಜೀವ ಎರಡೂ ಉಳಿದುಕೊಂಡವು. ದೇವರು ದೊಡ್ಡವನು ಎಂದಳು ಅಜ್ಜಿ.

ನೂರಹತ್ತು ವರ್ಷದ ವನಸುಮ ಸಾಕಲೋಳ್ಳ ವೆಂಕಟಮ್ಮನೂರಹತ್ತು ವರ್ಷದ ವನಸುಮ ಸಾಕಲೋಳ್ಳ ವೆಂಕಟಮ್ಮ

ಇಂಥ ಹತ್ತಾರು ಹೆರಿಗೆಗಳನ್ನು ಈ ಇಬ್ಬರು ಮಾತೆಯರು ಅನುಭವ ಹಾಗೂ ತಮ್ಮ ನಾಟಿ ವೈದ್ಯದಿಂದ ಯಶಸ್ವಿಯಾಗಿ ನೆರವೇರಿಸಿದ್ದುಂಟು. ಪ್ರತಿ ಹೆರಿಗೆಯ ನಂತರ ನೀರಿನ ದಿನ ಬೈರಮ್ಮನಿಗೆ ಎಲ್ಲಿಲ್ಲದ ಮರ್ಯಾದೆ. ಹೊಸ ಸೀರೆ, ರವಿಕೆ ಕಣ, ತಾಂಬೂಲದೊಂದಿಗೆ ಊಟೋಪಚಾರ.

ಹಸು- ಎಮ್ಮೆಗಳು ಈಯುವಾಗ ನನ್ನ ಅಜ್ಜಿ ಕಾವಲಿದ್ದು, ಕರು ಭೂಮಿಗೆ ಬಂದ ಮೇಲೆ ಎಲ್ಲ ಶುಭ್ರಗೊಳಿಸದೆ ಮನೆಯೊಳಕ್ಕೆ ಬರುತ್ತಿರಲಿಲ್ಲ. ಗುಟುಕು ನೀರನ್ನೂ ಕುಡಿಯುತ್ತಿರಲಿಲ್ಲ. ಒಮ್ಮೊಮ್ಮೆ ಅವು ಸರಿರಾತ್ರಿಯಲ್ಲಿ ಕರು ಹಾಕುತ್ತಿದ್ದವು. ಅಜ್ಜಿ ಆ ವೇಳೆಯವರೆಗೆ ಅವುಗಳ ಬಳಿಯೇ ಇದ್ದು ಮೈದಡವುತ್ತ, ತನ್ನ ಮಗಳಿಗೇ ಹೆರಿಗೆ ಮಾಡಿಸುತ್ತಿರುವ ಭಾವದಲ್ಲಿ ಸಾಂತ್ವನ ಹೇಳುತ್ತಿದ್ದಳು.

ಕರು ಹಾಕಿದ ಮೇಲೆ ಅಷ್ಟು ರಾತ್ರಿಯಲ್ಲೇ ನೀರು ಕಾಯಿಸಿ ತಾಯಿದನದ ಮೈ ತೊಳೆದು, ನಂತರ ತಾನು ಸ್ನಾನ ಮಾಡಿ ಬಂದು ದೇವರಿಗೆ ತುಪ್ಪದ ದೀಪ ಮುಡಿಸಿ, ಕೈ ಮುಗಿದು, ಪಿಶಾಚಿಗಳು ತಿರುಗಾಡೋ ಹೊತ್ತಿನಲ್ಲಿ ಊಟ ಮಾಡುವುದೇನೆಂದುಕೊಂಡು ಚೆಂಬು ನೀರು ಕುಡಿದು, ದೇವರನ್ನು ನೆನೆಯುತ್ತ ಚಾಪೆಗೆ ಮೈ ಒಪ್ಪಿಸುತ್ತಿದ್ದಳು.

ಆ ದಿನಗಳಲ್ಲಿ ಇಂಥವರು ಅನೇಕರಿದ್ದರು. ಮನೆ ಹೆಣ್ಣು ಮಕ್ಕಳು ಬಸುರಿಯರಾದರೆ ಎಂಥ ಸಂಭ್ರಮವೋ ಅದೇ ಸಂಭ್ರಮ ಹಸು, ಎಮ್ಮೆ, ಕುರಿ, ಮೇಕೆಗಳು ಫಲ ಬಿದ್ದರೆ ಉಂಟಾಗುತ್ತಿತ್ತು. ಅವರು ಹೆರುವಾಗ, ಇವು ಈಯುವಾಗ ದೇವರಲ್ಲಿ ಒಂದೇ ರೀತಿಯ ಪ್ರಾರ್ಥನೆ ಮಾಡುತ್ತಿದ್ದರು. 'ಜೀವಗಳುಳಿಯಲಿ. ಕ್ಷೇಮದಿಂದಿರಲಿ' ಎಂದು ಪ್ರಾರ್ಥಿಸುವ ಇಂಥವರು ಇಂದೂ ಇಲ್ಲದಿಲ್ಲ. ಅಜ್ಜಿ ಮತ್ತು ಬೈರಮ್ಮರ ನೆನಪಿನೊಂದಿಗೆ ಆ ಮಾತೆಯರ ಪಾದಕ್ಕೆ ಶರಣು.

English summary
Here is the tribute to two woman who saved thousands of lives in rural area with their knowledge and commitment. One India columnist Sa Raghunatha writes about them. It is a heart touching story with great humanity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X