• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ.ರಘುನಾಥ ಅಂಕಣ: ನರಸಿಂಗರಾಯನ ಕಥೆಯ ಆರಂಭ ಅವನ ಬಾಲ್ಯದಿಂದಲೆ

By ಸ.ರಘುನಾಥ
|
Google Oneindia Kannada News

"ನಾನು ಮಹೇಶ. ನರಸಿಂಗನ ಬಾಲ್ಯದಲ್ಲಿ ಅವನೊಂದಿಗಿದ್ದವನು. ಗೆಳೆಯನಾಗಿ ಎಂದರೆ ಅರ್ಧ ಸುಳ್ಳು. ಅಲ್ಲವೆಂದರೆ ಉಳಿದರ್ಧ ಸುಳ್ಳು. ಅತ್ತ ಇತ್ತದ ನಡುವೆ ಅನ್ನುವುದು ಆ ದಿನಗಳಿಗೆ ಮಾತ್ರ ನಿಜ. ಬೋಡಪ್ಪ, ಪಿಲ್ಲಣ್ಣರಂತೆ ಇರಲು ನನ್ನಿಂದಾಗಿರಲಿಲ್ಲ. ಅವನ ಒರಟುತನ, ಗೆಳೆಯರಿಗಾಗಿ ಏನು ಮಾಡಲೂ ಮುಂದಾಗಿ, ಯಾರನ್ನಾದರೂ ಎದುರಿಸಲು ಸಿದ್ಧನಾಗುತ್ತಿದ್ದ.''

ಆ ಗೆಳೆಯರೂ ಹಾಗೆಯೇ ಇದ್ದರು. ನನಗೆ ಅವರಂತೆ ಇರಲು ಆದುದಿಲ್ಲ. ಇದಕ್ಕೆ ಕಾರಣ ನನ್ನ ಅಪ್ಪ. ಆ ಪೋಲಿಗಳ ಜೊತೆ ಸೇರಿದರೆ ಹುಷಾರ್ ಎಂದು ಎಚ್ಚರಿಸುತ್ತಿದ್ದ. ನರಸಿಂಗನೆಂದರೆ ಅವನಿಗೆ ಸರಿಬೀಳುತ್ತಿರಲಿಲ್ಲ. ಒಂದು ದಿನ ದನಗಳನ್ನು ಮೇಯಿಸಲು ಹೋದವರು, ನಾರೆಪ್ಪನ ಸೀಬೆತೋಟದಲ್ಲಿ ಕಾಯಿ ಕದಿಯಲು ಹೋಗಿದ್ದರು. ಆಗ ಪಿಲ್ಲಣ್ಣನ ದನವೊಂದು ನಮ್ಮ ಹೊಲಕ್ಕೆ ನುಗ್ಗಿತ್ತು. ಅಪ್ಪ ಅದನ್ನು ಹಿಡಿದು ಕಟ್ಟಿಹಾಕಿದ್ದ.

ದನವನ್ನು ಬಿಚ್ಚಿ ಓಡಿಸಿಬಿಟ್ಟಿದ್ದ

ಗದ್ದೆಗೆ ನೀರು ಬಿಟ್ಟುಕೊಳ್ಳುವ ವಿಷಯದಲ್ಲಿ ಜಗಳವಾಗಿತ್ತು. ಇಬ್ಬರ ಮಧ್ಯೆ ವ್ಯವಹಾರವಿರಲಿ, ಮಾತೂ ಇರಲಿಲ್ಲ. ಹಾಗಾಗಿ ಹೊಲದಲ್ಲಿ ಮೇಯುತ್ತಿದ್ದ ದನವನ್ನು ಓಡಿಸಬಹುದಾಗಿದ್ದರೂ ಅವನ ಮನೆಯವರು ನಮ್ಮ ಮನೆಯ ಮುಂದೆ ಬಂದು ನಿಲ್ಲಲಿ. ಆಗ ಮುಯ್ಯಿ ತೀರುಸುತ್ತೇನೆಂದು ಕಟ್ಟಿ ಹಾಕಿದ್ದು. ದನವಿರದೆ ಮನೆಗೆ ಹೋಗಿದ್ದರೆ ಪಿಲ್ಲಣ್ಣನಿಗೆ ಪೂಜೆಯಾಗುತ್ತಿತ್ತು. ಇದನ್ನು ತಪ್ಪಸಲು ನರಸಿಂಗ ನನ್ನ ಅಪ್ಪನ ಕಣ್ಣುತಪ್ಪಿಸಿ ದನವನ್ನು ಬಿಚ್ಚಿ ಓಡಿಸಿಬಿಟ್ಟಿದ್ದ. ಇದನ್ನು ನೋಡಿದ್ದ ನಾನು ಅಪ್ಪನಿಗೆ ಹೇಳಿದೆ. ಅವನು ನಾಲ್ಕು ಜನರನ್ನು ಸೇರಿಸಿ ಪಂಚಾಯತಿಗೆ ಕುಳಿತ.

ನರಸಿಂಗನ ವಿರುದ್ಧವಿರುವ ಧೈರ್ಯ ನನಗಿರಲಿಲ್ಲ

ಪಂಚಾಯತಿದಾರರು ನರಸಿಂಗನನ್ನು ಕರೆಸಿ ಕೇಳಿದರು. ""ನನಗೇನು ಗೊತ್ತಿಲ್ಲ. ದನಗಳೆಲ್ಲ ಒಟ್ಟಿಗೆ ಇದ್ದವು. ಯಾವ ದನವೂ ಅವರ ಹೊಲಕ್ಕೆ ಹೋಗಿರಲಿಲ್ಲ''ವೆಂದು ವಾದಿಸಿದ. ಅಪ್ಪನಿಗೆ ರೇಗಿ ಅವನ ಕೆನ್ನೆಗೊಂದು ಬಾರಿಸಿದ. ಇದು ಯಾರಿಗೂ ಸರಿಯೆನಿಸಲಿಲ್ಲ. ಹುಡುಗ ಏನೋ ಹೇಳಿದ. ದೊಡ್ಡವನಾದ ನಿನಗೆ ತಾಳ್ಮೆ ಇರಬೇಕಿತ್ತು. ನೀನು ಹೇಳಿದಂತೆ ಅವನು ದನವನ್ನು ಬಿಚ್ಚಿದ್ದರೆ, ನೀನೀಗ ಮಾಡಿದ್ದಕ್ಕೆ ಸರಿಹೋಯ್ತು ಅಂದುಬಿಟ್ಟರು. ನರಸಿಂಗ ಅಪ್ಪನನ್ನು ಅಣಕಿಸಿದಂತೆ ನಕ್ಕ. ಇದೂ ಕಾರಣವಾಗಿ ಅಪ್ಪ ನನ್ನನ್ನು ಅವರೊಂದಿಗೆ ಸೇರಲು ಬಿಡುತ್ತಿದ್ದವನಲ್ಲ. ಆಗ ನನಗೂ ನರಸಿಂಗ, ಮತ್ತವನ ಗೆಳೆಯರೆಂದರೆ ಸಿಟ್ಟಿತ್ತು. ಆದರೆ ನರಸಿಂಗನ ವಿರುದ್ಧವಿರುವ ಧೈರ್ಯ ನನಗಿರಲಿಲ್ಲ. ಒಂದು ರೀತಿಯಲ್ಲಿ ನಾನು ಪುಕ್ಕಲನಾಗಲು ಅಪ್ಪ ಹಾಗು ನರಸಿಂಗ ಇಬ್ಬರೂ ಕಾರಣರೇ.

ಊರಿನಲ್ಲಿ ಅವನಿಗೆ ನನ್ನ ಅಪ್ಪನಿಗಿಂತಲೂ ಹೆಚ್ಚು ಗೌರವ

ನರಸಿಂಗನ ತಂದೆ ಅಪ್ಪಯ್ಯ ನನ್ನ ತಾಯಿಯ ಕಡೆಯ ಬಂಧುವಾಗಿದ್ದ. ಇಬ್ಬರ ನಡುವೆ ವಿಶ್ವಾಸವೂ ಇತ್ತು. ಈಗ ನರಸಿಂಗನಿಂದಾಗಿ ಅದು ಮುಂದುವರೆಯಲಿಲ್ಲ. ಅಪ್ಪಯ್ಯ ಇದಕ್ಕೆ ತಲೆ ಕೆಡಿಸಿಕೊಂಡವನಲ್ಲ. ಊರಿನಲ್ಲಿ ಅವನಿಗೆ ನನ್ನ ಅಪ್ಪನಿಗಿಂತಲೂ ಹೆಚ್ಚು ಗೌರವವಿತ್ತು. ಇದೂ ಕಾರಣವಾಗಿ ಅಪ್ಪನಲ್ಲಿ ಕೊಂಚ ಅಸೂಯೆಯೂ ಇತ್ತು.

ನಾನು ಖ್ಯಾತ ವಕೀಲನಾಗಬೇಕೆಂಬ ಕನಸು ಅಪ್ಪನದು. ಅದನ್ನು ನನಸು ಮಾಡಿಕೊಳ್ಳಲು ನನ್ನನ್ನು ತನ್ನ ಕಣ್ಗಾವಲಿನಲ್ಲಿ ಇರಿಸಿದ್ದ. ಪರೀಕ್ಷೆ, ಪಾಸು ಇಷ್ಟೇ ನನ್ನ ಗುರಿಯಾಗಿಸಿದ್ದ. ರಾಜಣ್ಣನ ಮಗನನ್ನು ನೋಡಿ ಕಲಿಯಿರಿ ಎಂದು ಯಾರಾದರೂ ತಮ್ಮ ಮಕ್ಕಳಿಗೆ ಹೇಳಿದರೆ ಬೀಗುತ್ತಿದ್ದ. ಆಗ ನನಗೂ ಹೆಮ್ಮೆ, ಜಂಭ. ಇದು ನನ್ನನ್ನು ಮನೆಯಾಚೆಯ ಅನುಭವಗಳಿಂದ ವಂಚಿಸಿತ್ತು. ನನಗೆ ಕಾಲೇಜು ಉಪನ್ಯಾಸಕನಾಗುವ ಇಚ್ಛೆಯಿದ್ದರೂ ಅವನ ಆಸೆಗಾಗಿಯೇ ನಾನು ವಕೀಲನಾಗಲು ಓದುಬೇಕಾಯಿತು.

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನರಸಿಂಗ ಊರಿನಲ್ಲಿದ್ದು ದನಕಾಯುತ್ತ, ತನ್ನ ಅಪ್ಪನಂತೆ ನಾಟಕಗಳತ್ತ ಹೆಜ್ಜೆ ಹಾಕುತ್ತಿದ್ದ.

English summary
Sa Raghunath Column: Mahesh Talked about his friend Narasingaraya in hittu gojju column.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion