• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ. ರಘುನಾಥ ಅಂಕಣ: ನಾರಾಯಣಪ್ಪನ ದುರ್ಯೋಧನನ ಪಾರ್ಟು ಮತ್ತು...

By ಸ. ರಘುನಾಥ
|
Google Oneindia Kannada News

ನನಗೆ ಬುದ್ಧಿವಾದ ಹೇಳುವ ಹಿರಿಯನೂ, ತಾನು ಕೇಳಿಕೆ, ನಾಟಕಗಳಲ್ಲಿ ಮಾಡುತ್ತಿದ್ದ ಪಾತ್ರಗಳ ಮಾತು, ಅಭಿನಯವನ್ನು ತಿದ್ದಿಸಿಕೊಳ್ಳುವ ಗೆಳೆಯನೂ ಆಗಿದ್ದ ನಾರಾಯಣಪ್ಪ. ಶಶಿರೇಖಾ ಪರಿಣಯ, ಸುಭದ್ರಾ ಕಲ್ಯಾಣ ಕೇಳಿಕೆಗಳಲ್ಲಿ ದುರ್ಯೋಧನನ ಪಾರ್ಟು ಅವನಿಗೇ ಮೀಸಲು. ದುಯೋಧನನ 'ಆಗುಟು' (ಆಕ್ಟ್) ಎನ್‌ಟಿಆರ್ ತರಹವೇ ಮಾಡಬೇಕೆಂಬ ಇರಾದೆ ಅವನ ಮನಸ್ಸನ್ನು ತುಂಬಿತ್ತು. ಅದಕ್ಕಾಗಿ ಇತರೆ ಪಾತ್ರಧಾರಿಗಳಿಗಿಂತ ಹೆಚ್ಚು ತಾಲೀಮಿನಲ್ಲಿರುತ್ತಿದ್ದ.

ಅವನು ನನ್ನನ್ನು ಮುಂದೆ ಕೂರಿಸಿಕೊಂಡು ಸಾಭಿನಯ ಸಂಭಾಷಣೆ ಹೇಳುತ್ತಿದ್ದ. ಇಲ್ಲಿ ಸರಿಯಿಲ್ಲ, ಅಲ್ಲಿ ಹೀಗಿರಬೇಕಿತ್ತು ಎಂದರೆ, ತಾಳ್ಮೆಯಿಂದ ಪುನರಾವರ್ತಿಸಿ, ಈಗ ಹೇಗೆ ಅನ್ನುತ್ತಿದ್ದ. ಈಗ ಕೊಂಚ ಪರವಾಗಿಲ್ಲವೆಂದರೆ ಹಾಗಾ ಎಂದು, ಎನ್‌ಟಿಆರ್‌ಗೆ ಹತ್ತಿರವಾಗುತ್ತಿದ್ದಿ ಎಂದರೆ ಖುಷಿಯಾಗುತ್ತಿದ್ದ. 'ವಿರಾಟಪರ್ವ' ಕಲಿಯುವಾಗ, ಇದರಲ್ಲಿ ನಾರಾಯಣಪ್ಪನಲ್ಲಿರುವ ನಟನನ್ನು ತೋರಿಸು ಎಂದು ಸಲಹೆ ಮಾಡಿದೆ. ಆಗುತ್ತ ಅಂದಿದ್ದ. ಪ್ರಯತ್ನಸಿದರೆ ಆಗದ್ದೇನಲ್ಲವೆಂದೆ. ಈ ಮಾತು 'ಮದುವೆಯಾಗೋ ಬ್ರಾಹ್ಮಣ ಎಂದರೆ ನೀನೇ ನನ್ನ ಹೆಂಡತಿ' ಅನ್ನುವ ಗಾದೆಯಂತಾಯಿತು. ಅವನ ತಪ್ಪು ಒಪ್ಪುಗಳಗೆ ಸಾಕ್ಷಿಯಾಗುತ್ತ, ಪಡುತ್ತಿದ್ದ ಪಾಡಿಗೆ ಅಯ್ಯೋ ಅನ್ನುತ್ತ, ಅವನಲ್ಲಿನ ನಟನನ್ನು ಅವನಿಗೆ ತೋರಿಸಲು ಹೆಣಗುತ್ತಿದ್ದೆ.

ಪತ್ರಿಕೆಯೊಂದರ ಸಂದರ್ಶನದಲ್ಲಿ ಅಭಿನೇತ್ರಿಯೊಬ್ಬರು, ನಿಲವುಗನ್ನಡಿ ಮುಂದೆ ನಿಂತು ಆಭಿನಯಿಸುತ್ತ ತಿದ್ದಿಕೊಳ್ಳುತ್ತಿದ್ದೆ ಎಂದು ಹೇಳಿದ್ದನ್ನು ಓದಿದ್ದು ನೆನಪಾಯಿತು. ನಾರಾಯಣಪ್ಪನಿಗೆ ಹೀಗೆಂದು ಹೇಳಿದೆ. ಹಣಕ್ಕೆ ಅದೇನು ಮಾಡಿದನೋ ಏನೋ ನಿಲುವುಗನ್ನಡಿಯನ್ನು ತಂದು, ಹುಳು(ರೇಷ್ಮೆ) ಮೇಸುವ ಮನೆಯಲ್ಲಿ ಸ್ಥಾಪಿಸಿಬಿಟ್ಟ. ದಿನದ ಕಡೆಯ ಸೊಪ್ಪು ಹಾಕಿ, ಎಲ್ಲರೂ ಮಲಗಿದ ನಂತರ, ಅದರ ಮುಂದೆ ಸ್ವಯಂ ತಾಲೀಮು ಶುರುವಾಗುತ್ತಿತ್ತು. ಒಂದು ತಿಂಗಳಲ್ಲಿ ನಾರಾಯಣಪ್ಪನಿಗೆ ಅವನಲ್ಲಿನ ನಟ ಕಾಣಿಸಿಕೊಂಡ. ಅಂದು ನನಗೆ ಮಾಲೂರಿನ ಗುರುಪ್ರಸಾದ್ ಹೋಟಲ್‌ನಲ್ಲಿ ಮೈಸೂರು ಪಾಕ್, ಮಸಾಲೆ ದೋಸೆ ಕೊಡಿಸಿದ.

ವಿರಾಟಪರ್ವ ರಂಗವೇರಿದ ದಿನ ನಾರಾಯಣಪ್ಪನ ಅಭಿನಯಕ್ಕೆ ಮೆಚ್ಚುಗೆಯೋ ಮೆಚ್ಚುಗೆ. ಕೊರಳು ಬಾಗುವಷ್ಟು ಹೂಮಾಲೆಗಳು. ಎದೆಕವಚದ ತುಂಬ ನೋಟುಗಳ ಇನಾಮುಗಳು. ಸೂರ್ಯೋದಯಕ್ಕೆ ಊರುದೇವತೆ ಚಲ್ಲಾಪುರಮ್ಮನ ಗುಡಿಯಲ್ಲಿ ಪೂಜೆ ಮುಗಿಸಿ ಬಂದು ಹೇಳಿದ, 'ನಾವು ಗೆದ್ದೆವು'.

ನಾರಾಯಣಪ್ಪನದು ಕೂಡುಕುಟುಂಬ. ದನಕರು, ಹೊಲಗದ್ದೆಗಳ ಕಡೆ ನೋಡಿಕೊಳ್ಳುವುದು, ಕೂಲಿಯಾಳುಗಳಿಂದ ಕೆಲಸ ಮಾಡಿಸುವುದು ಬಿಟ್ಟರೆ ರಾತ್ರಿಯೆಲ್ಲ ಬಿಡುವು. ತನ್ನ ಅಗತ್ಯವಿದ್ದರೆ ಮಾತ್ರ ಹುಳುವಿನ ಮನೆಯತ್ತ ತಲೆ ಹಾಕುತ್ತಿದ್ದ. ಇವನು ಸೊಗಸಾಗಿ ಶನಿಮಹಾತ್ಮನ ಕಥೆ ಓದುತ್ತಿದ್ದ. ಊರಿನಲ್ಲಿ ಸಾವಾದ ಮನೆಯಲ್ಲಿ ಪಣೋಜನ(ಪುಣ್ಯಾಹ)ದ ದಿನ, ಕಷ್ಟ ಪರಿಹಾರಕ್ಕೆ ಈ ಕಥೆ ಓದಿಸುವುದಿತ್ತು. ಅಲ್ಲಿ ಇವನೆ ಓದುತ್ತಿದ್ದುದು. ಸ್ನಾನ ಮಾಡಿ, ಒಗೆದ ಬಟ್ಟೆ ತೊಟ್ಟು, ಅರಿಶಿನ, ಕುಂಕಮದ ಕಲೆಗಟ್ಟಿದ್ದ ಕೈಬರಹದ ಹಳೆಯ ನೋಟು ಪುಸ್ತಕ ಕಂಕುಳಲ್ಲಿಟ್ಟು ಬಂದು ಕುಳಿತು, ಗಣಪತಿ ಪ್ರಾರ್ಥನೆ ಮುಗಿಸಿ, ಕಾಗೆವಾಹನ ಸಮೇತನಾದ ಶನಿಮಹಾತ್ಮನ ದೊಡ್ಡ ಫೋಟೋಗೆ ನಮಿಸಿ, ಕಥಾ ವಾಚನ ಪ್ರಾರಂಭಿಸುತ್ತಿದ್ದ. ಧ್ವನಿ ಮೆಗಾಫೋನಿನಿಂದ ಹೊರಡುವಷ್ಟು ಗಟ್ಟಿಯಾಗಿರುತ್ತಿತ್ತು.

'ಕಲಿಯುಗದಿ ಬಲವಂತ ರಾಜನು, ಬಹು ಪರಾಕ್ರಮಿ ವಿಕ್ರಮನೆಂಬನು, ಸುಂದರವಾಗಿಹ ಉಜ್ಜೈನೆಂಬೊ ಪಟ್ಟಣವ ತಾನು, ಪರಿಪರಿಯಿಂದ ರಾಜ್ಯವಾಳುತೆ... ಎಂದು ಪ್ರಾರಂಭಿಸಿದನೆಂದರೆ, ನೆರೆದವರು ಸಭಕ್ತಿ ತನ್ಮಯತೆಯಿಂದ ಆಲಿಸುತ್ತಿದ್ದರು. ಮಂಗಳ ಹಾಡುತ್ತಲೇ ಕಥೆ ಓದಿಸುತ್ತಿದ್ದರು ಪಂಚೆ, ಟವೆಲ್‍ನೊಂದಿಗೆ ತಾಂಬೂಲ ಕೊಡುತ್ತಿದ್ದರು. ಬಟ್ಟೆಯನ್ನು ಯಾರಾದರು ಬಡವರಿಗೆ ಕೊಟ್ಟು, ತಾಂಬೂಲನ್ನು ಮಾತ್ರ ಮನೆಗೊಯ್ಯುತ್ತಿದ್ದ.

ನಾರಾಯಣಪ್ಪನಲ್ಲಿ ಗುಪ್ತವಾಗಿ ವಿಲಾಸಿಯೊಬ್ಬನಿದ್ದ. ನಾನು ಬಲ್ಲಂತೆ ಅವನಿಗೆ ಸಂಸಾರದ ಹೊರಗೆ ಸ್ತ್ರೀ ಸಂಪರ್ಕವಿತ್ತು. ಅವರಲ್ಲಿ ತಾವಾಗಿಯೇ ಬಯಸಿ ಬಂದವರು, ಇವನೇ ಬಯಸಿ ಪಡೆದವರು ಇದ್ದರು. ಅವರೆಲ್ಲ ವಿವಾಹಿತ ಅಭಿಸಾರಿಕೆಯರು. 'ಅಂಗಿ ಮೇಲೊಂದಗಿ ಚಂದೇನೊ...' ಎಂಬ ತ್ರಿಪದಿಯನ್ನು ಹೇಳಿದೆ. ಹಾಗೆಂದರೆ ಅಂದ. ವಿವರಿಸಿ ಹೇಳಿದಾಗ ನಕ್ಕುಬಿಟ್ಟ.

ನಾನು ಊರು ಬಿಟ್ಟು ಕೆಲವು ವರ್ಷ ಮಾಲೂರಿನಲ್ಲಿದ್ದೆ. ಊರಿಗೆ ಹೋದಾಗ, ನಾಟಕದ ಮಟ್ಟು ಒಂದನ್ನು ಅನುಕರಿಸಿ, ನಾಟಕೀಯವಾಗಿ 'ನೀನುಂ ನಿನ್ನ ಸಖಿಯರುಂ ಸುಖಿಗಳೇ ತಾನೆ ನಾರಾಯಣ ರಾಜಾ' ಎಂದಾಗ, ಅವನೂ ಅಷ್ಟೇ ನಾಟಕೀಯವಾಗಿ 'ತಮ್ಮ ಆಶೀರ್ವಾದ ಬಲದಿಂ ಸುಖಿಗಳೇ ಗುರುವೇ' ಅನ್ನುತ್ತಿದ್ದ. ಈ ಗೆಳೆಯ ಇತ್ತೀಚೆಗೆ ತೀವ್ರ ಮಧುಮೇಹದಿಂದ ತೀರಿಕೊಂಡನೆಂದು ತಿಳಿದು, ದುಃಖದೊಂದಿಗೆ ಈ ಎಲ್ಲ ನೆನಪಾಯಿತು.

English summary
Sa. Raghunatha Column: Duryodhana's character was very interesting to Narayanappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X