• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರಸಿಂಗರಾಯನ ಮೇಲೆ ಮುನೆಕ್ಕನ ಕಣ್ಗಾವಲು

By ಸ ರಘುನಾಥ, ಕೋಲಾರ
|

ಸತ್ಯಭಾಮೆ ಪಾರ್ಟಿನ ಸುನಂದಳಿಗೆ ಕಚ್ಚೆ ಹಾಕಿ ರೇಷ್ಮೆ ಸೀರೆ ಉಡಿಸಿ, ಮೇಕಪ್ಪು ಮಾಡಲು ನರಸಿಂಗರಾಯ, ಸುನಂದ ಇಬ್ಬರನ್ನೇ ಅಪ್ಪ ಮನೆಗೆ ಕಳಿಸದ್ದು ಮುನೆಕ್ಕನಿಗೆ ಸರಿ ಕಾಣಲಿಲ್ಲ. ಅವನ ಅಮ್ಮನಿಗೆ ಅದನ್ನು ಹೇಳಿ ತಾನು ಅವರ ಜೊತೆ ಹೋಗುವುದಾಗಿ ಹೇಳಿದಳು. ಆಕೆ ಬೇಡ ಸುಮ್ಮನಿರು ಎಂದು ಕೂರಿಸಿದಳು. ಬಹಳ ಹೊತ್ತು ಗೊಣಗುತ್ತ ಕುಳಿತಳು.

ನರಸಿಂಗರಾಯ ಕೃಷ್ಣನ ವೇಷ ಧರಿಸಿ ಬಂದಾಗ ಯಾಕೋ ಇದೆಲ್ಲ ಸರಿಯಲ್ಲವೆಂದು ಕಸಿವಿಸಿಗೊಂಡಳು. ರಂಗದಲ್ಲಿ ಅವಳಿಗೆ ಅವರು ಕೃಷ್ಣ - ಸತ್ಯಭಾಮೆಯರಾಗಿ ಕಾಣಿಸದೆ, ನರಸಿಂಗರಾಯ - ಸುನಂದರಾಗಿ ಕಾಣುತ್ತಿದ್ದರು. ಆಗಾಗ ಮಾತ್ರ ಕೃಷ್ಣ, ಸತ್ಯಭಾಮೆಯರಾಗಿ ಕಂಡಿದ್ದರು. ಸತ್ಯಭಾಮೆಯ ಅಂತಃಪುರದ ದೃಶ್ಯಗಳು ತೆರೆದುಕೊಂಡಾಗ ಅವರಿಬ್ಬರ ಕಣ್ಣುಗಳಲ್ಲಿನ ಭಾವವನ್ನು ಅರಿಯಲು ಪ್ರಯತ್ನಿಸುತ್ತಿದ್ದಳು. ಒಮ್ಮೊಮ್ಮೆಯಂತೂ ಅವಳಿಗೆ ಅವರದು ನಟನೆ ಅನ್ನಿಸುತ್ತಿರಲಿಲ್ಲ. ಆಗ ನರಸಿಂಗ ಸುನಂದಳ ಹಿಂದೆ ಓಡಿ ಹೋಗಬಹುದು ಅನ್ನಿಸುತ್ತಿತ್ತು. ಆದರೆ ಯಾರಿಗೆ ಹೇಳುವುದು? ಅಸಹಾಯಕಳಾಗಿ, ಅಮ್ಮಾ ಚಲ್ಲಾಪುರಮ್ಮಾ, ಹಾಗಾಗದಿದ್ದರೆ ನಿನಗೆ ದೀಪ ಹೊರುತ್ತೇನೆ ಎಂದು ಮನದಲ್ಲೇ ಹರಕೆ ಹೊತ್ತಳು.

ಸುನಂದಾಳಿಗೆ ಪತ್ತಲ ಉಡಿಸಿದ ನರಸಿಂಗರಾಯ

ಸುನಂದಳನ್ನು ಸನ್ಮಾನಿಸುವಾಗ ಇಬ್ಬರನ್ನೂ ತನ್ನ ಕಣ್ಣಿಗೆ ಸಿಗುವ ಜಾಗದಲ್ಲಿ ನಿಂತು ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಸುನಂದಳ ಕಣ್ಣು ನರಸಿಂಗರಾಯನ ಕಣ್ಣಿನೊಡನೆ ಮಾತನಾಡುತಿದ್ದುದನ್ನು ತಿಳಿದು ಕಳವಳಿಸುತ್ತಿದ್ದಳು.

ಅಪ್ಪನ ಮನೆ ಕೆಡಲಿದೆ ಅಂದುಕೊಂಡು ತನ್ನ ಹರಕೆಯನ್ನು ಚೆಲ್ಲಾಪುರಮ್ಮನಿಗೆ ನೆನಪಿಸುತ್ತಿದ್ದಳು. ನಾಟಕ ಮುಗಿದ ದಿನವೇ ಹೊರಡದೆ ಸುನಂದ ಮೂರು ದಿನ ಉಳಿದುಕೊಳ್ಳುವೆನೆಂದಾಗ ನರಸಿಂಗರಾಯನ ಕಣ್ಣಲ್ಲಿನ ಸಂಭ್ರಮವನ್ನು ಕಂಡು ಹೌಹಾರಿದಳು. ಅವಳನ್ನು ಅವನ ಅಮ್ಮ ಮನೆಗೇ ಆಹ್ವಾನಿಸಿದಾಗಲಂತೂ ಹೌಹಾರಿದಳು. ಆ ಮೂರೂ ದಿನಗಳು ಅವರ ಮನೆಯಲ್ಲಿ ತಾನೂ ಇದ್ದುಬಿಟ್ಟಳು. ಏನೇ ಮಾಡುತ್ತಿರಲಿ, ಮಾತನಾಡುತ್ತಿರಲಿ ಅವಳ ಕಣ್ಣು ಕಿವಿ ಅವರತ್ತಲೇ ಇರುತ್ತಿದ್ದವು. ಆ ಮೂರೂ ದಿನಗಳು ಸುನಂದಳಿಗೆ ಆ ಮೂವರಿಂದಲೂ ನಾಟಕದ ಪಾಠ ನಡೆಯಿತು. ಮರುದಿನ ಅವಳು ಹೊರಟು ನಿಂತಾಗ ಅಪ್ಪ-ಮಗ ಬಸ್ಸು ಹತ್ತಿಸಿ ಬಂದರು. ಮುನೆಕ್ಕ ಪೀಡೆ ಕಳೆಯಿತೆಂದು ನಿಟ್ಟುಸಿರಿನೊಂದಿಗೆ ಚೆಲ್ಲಾಪುರಮ್ಮನನ್ನು ಸ್ಮರಿಸಿದಳು.

ಅಂದು ಜನರ ಮಾತಿನಲ್ಲಿ ನರಸಿಂಗರಾಯ ಎನ್.ಟಿ.ಆರ್., ಸುನಂದ ಜಮುನಾ...

ನರಸಿಂಗರಾಯನಿಗೆ ದನ ಕಾಯಲು ಜೊತೆಯಾಗುತ್ತಿದ್ದ ಹುಡುಗರಲ್ಲಿ ಯಾರೊಬ್ಬರೂ ನೆಟ್ಟಗಿದ್ದವರಲ್ಲ ಅನ್ನಿಸುತ್ತಿತ್ತು. ಹಾಗೆಯೆ ಹುಡುಗಿಯರಲ್ಲಿ ಯಾರಾದರೊಬ್ಬರು ಅವನನ್ನು ಸೆರಗಿನಡಿಗೆ ಹಾಕಿಕೊಳ್ಳದೆ ಇರುವುದಿಲ್ಲ ಎಂದು ಭಾವಿಸಿ ದಿಗಿಲುಗೊಳ್ಳುತ್ತಿದ್ದಳು. ನಾಟಕದಲ್ಲಿ ಅವನನ್ನು ನೋಡಿದ ಮೇಲಂತೂ ಯಾವಳಾದರೂ ಅವನನ್ನು ತಬ್ಬಿಕೊಳ್ಳದೆ ಇರುವುದಿಲ್ಲ ಅನ್ನಿಸುತ್ತಿತ್ತು. ಆಗೆಲ್ಲ ಚೆಲ್ಲಾಪುರಮ್ಮನಿಗೆ ತನ್ನ ಹರಕೆಯನ್ನು ನೆನಪಿಸುತ್ತಿದ್ದಳು. ದನ ಕಾಯುವುದರಿಂದ ಅವನನ್ನು ಬಿಡಿಸುವ ಯೋಜನೆಯನ್ನು ತನ್ನೊಳಗೆ ಹೆಣೆಯುತ್ತಿದ್ದಳು.

ಒಂದು ದಿನ ಅವರ ಮನೆಯಲ್ಲಿ ಕುಳಿತು ನಮ್ಮ ನರಸಿಂಗನಿಗೆ ಇಪ್ಪತ್ತು ದಾಟಿತಲ್ಲವೆ ಎಂದು ಮಾತು ತೆಗೆದಳು. ಅವರು ಹೌದೆಂದಾಗ, ಇನ್ನೂ ದನ ಕಾಯಬೇಕೆ ಅವನು. ಅದಕ್ಕೆ ಹುಡುಗನೊಬ್ಬನನ್ನು ಗೊತ್ತು ಮಾಡಬಹುದಲ್ಲ. ನಮ್ಮ ಪೈಕಿ ಒಬ್ಬನಿದ್ದಾನೆ, ಬಡವ. ನಿಮ್ಮ ಮನೆಗೆ ಹೊಂದಿಕೊಳ್ಳುತ್ತಾನೆ ಎಂದು ಹತ್ತು ಮಾತಾಡಿ ಒಪ್ಪಿಸುವಲ್ಲಿ ಗೆದ್ದಳು. ಆ ಹುಡುಗನನ್ನು ಅವರ ಮನೆ ಸೇರಿಸಿ, ನರಸಿಂಗರಾಯ ದನ ಕಾಯುವುದನ್ನು ಬಿಡಿಸಿದಳು.

English summary
Munekka was not happy with the incident of narasingaraya tie saree to Sunanda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X