• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೇಮ ಪತ್ರ: ಪಕ್ಕದ ತೋಟದ ಈರುಳ್ಳಿ ಬಾನಿನೆಲ್ಲ ಚುಕ್ಕಿಗಳ ತಂದು ಮುಡಿದಂತೆ ಕಂಡಿತು!

By ಸ ರಘುನಾಥ, ಕೋಲಾರ
|

ನನ್ನ ಪ್ರೀತಿಯ ಶಕುಂತಲೇ,

ಹಗಲಿಡೀ ಮನಸ್ಸಿಟ್ಟು ಕೆಲಸದಲ್ಲಿ ತಲ್ಲೀನನಾಗಿದ್ದವನಿಗೆ ಸೂರ್ಯ ಮುಳುಗಲಿದ್ದಾಗ, ಕೆಲಸ ಮುಗಿದಾಗ, ಮೈ ಹಿಡಿದ ದಣಿವು ನೀಗಲೆಂದು ನಿನ್ನ ನೆನಪನ್ನು ಮನಸ್ಸಿಗೆ ತಂದುಕೊಂಡು ತೋಟದ ಬದುವಿನಲ್ಲಿದ್ದ ಹೊಂಗೆ ಮರದಡಿ ಕುಳಿತೆ. ನಿನ್ನ ಪ್ರೀತಿ ಎದೆಯಲ್ಲಿ ಪರಿಮಳಿಸಿ ಭಾವಗೀತೆಯಾಗುತ್ತಿದ್ದಾಗ, ಆವರೆಗೆ ಎಲ್ಲೆಲ್ಲಿಯೋ ಅಲೆದಾಡಿ ಬಂದ ಗಿಳಿಗಳು ಹಾಡನ್ನು ಚದುರಿಸಿದವು.

ಸಂಜೆ ನೇಸರನ ಕಾಂತಿಯನ್ನು ತಮ್ಮ ಹಸಿರು ಮೈಗೆ ಹೊದ್ದು, ತೋಟದ ಮಧ್ಯದ ಮುಸುಕಿನ ಜೋಳದ ತೆನೆಗಳ ಮೇಲೆ ಕುಳಿತು ತೆನೆಯನ್ನು ಸುತ್ತಿಕೊಂಡ ಮುಸುಕನ್ನು ತಮ್ಮದೇ ಶೈಲಿಯಲ್ಲಿ ಸುಲಿದು ಹಾಲು ಹಿಡಿದ ಕಾಳುಗಳನ್ನು ಕುದುಕಿ ತಿನ್ನುವ ಗಿಳಿಗಳನ್ನು ಗುರುತಿಸಿ ಓಡಿಸುವುದು ಬಲು ಕಷ್ಟ ಶಕುಂತಲೆ.

ನಿನಗಾಗಿ ನಾನೇ ಕಟ್ಟಿದ ಮಲ್ಲಿಗೆ ಹೂ ದಂಡೆ ಹೇಗಿದೆ ಹೇಳು ಚೆಲುವೆ

ಆಗ ಕವಣೆಗೆ ಕಲ್ಲಿಟ್ಟು, ದಿಕ್ಕು ದಿಕ್ಕಿಗೆ ಬೀಸುವುದಷ್ಟೇ ಕೆಲಸ. ಹಾರಿದವು. ಹಾರಿ ಹೋದರೆ, ಮೊಂಡು ಬುದ್ಧಿಯವು ಕದಲುವುದಿಲ್ಲ. ಕವಣೆ ಬೀಸಬೇಕು, ಹಾಹಾ ಹೋಹೋ ಕೂಗಬೇಕು. ಡಬ್ಬಾ ಬಾರಿಸಬೇಕು, ತೋಟದೊಳಗೆ ನುಗ್ಗಿ ಓಡಾಡಬೇಕು. ಸಂಜೆ ಬೆಳಕು ಕತ್ತಲಾಗುತ್ತ, ಅವು ಗೂಡುಗಳತ್ತ ಹಾರಿದಾಗಲೇ ಬಿಡುವು. ಆಗ ಮರುಕಳಿಸುವುದು ನಿನ್ನ ನೆನಪು.

ನೆನಪಿನಲ್ಲಿ ಮನೆಗೆ ಹೊರಡಲು ಬದುವಿಗೆ ಬಂದೆ. ಅಲ್ಲಿದ್ದ ಮಲ್ಲಿಗೆ ಗಿಡದಲ್ಲಿ ಮೊಗ್ಗುಗಳು ಅರಳುವ ಸನ್ನಾಹದಲ್ಲಿದ್ದವು. ಗುರುವಾರದ ದಿನ ಅಮ್ಮ ಮೊಗ್ಗು ಬಿಡಿಸಲು ಒಪ್ಪುವುದಿಲ್ಲ. ಶುಕ್ರವಾರದ ಪೂಜೆಗೆ ಬೆಳಗ್ಗೆಯೇ ಬಿಡಿಸಿ ತರಬೇಕೆಂಬುದು ಅವಳ ಅಪ್ಪಣೆ. ಹಾಗಾಗಿ ಮೊಗ್ಗು ಬಿಡಿಸುವ ಕೆಲಸ ಬೆಳಗ್ಗೆಗೆ ಮೀಸಲು.

ಅರಳುತ್ತಿದ್ದ ಮೊಗ್ಗುಗಳು ನಿನ್ನ ಮುಗುಳುನಗೆಯನ್ನು ಹೋಲುತ್ತಿದ್ದವು. ನೋಡುತ್ತ ನಿಂತೆ. ಮಲ್ಲಿಗೆಯ ಕಂಪು, ನಿನ್ನ ನೆನಪಿನ ಇಂಪು ಮನಕ್ಕೆ ಎಂಥದೋ ಸುಖಭಾವ ತರುತ್ತಿದ್ದವು. ಚಂದ್ರ ಮೂಡಣದಲ್ಲಿ ಮುಖ ತೋರಿದ. ನನ್ನ ಬೆಳಕಿನಲ್ಲಿ ಮನೆಯ ದಾರಿ ಹಿಡಿಯುತ್ತಿದ್ದವನು ಇನ್ನೂ ನಿಂತಿರುವೆಯಲ್ಲ ಎಂದು ಬೆಳದಿಂಗಳು ನಗೆ ತೋರಿತು. ನನ್ನ ಶಕುಂತಲೆ ನೆನಪಾಗಿ ನಿಲ್ಲಿಸಿದಳು ಎಂದೆ. ಸರಿಯೆಂಬಂತೆ ತಂಗಾಳಿಯೊಂದಿಗೆ ಮುಂದಕ್ಕೆ ಸಾಗಿತು. ನನ್ನಂತಹ ಎಷ್ಟೋ ಜನರ ಉಸಾಬರಿ ಅದಕ್ಕೆ.

ವಸಂತ ನಿಜ ಹೇಳಲೆ? ಕೇಳುವ ಬದಲು ಮುತ್ತು ಕೊಡಬಾರದಿತ್ತೆ?

ಇನ್ನು ಚಂದಿರನ ಕೈಲೂ ಹೇಳಿಸಿಕೊಳ್ಳುವುದು ಬೇಡವೆಂದು ಮನೆಗೆ ಹೊರಡಲು ಬದು ದಾಟಿದೆ. ಪಕ್ಕದ ತೋಟದ ಈರುಳ್ಳಿ ಬಾನಿನೆಲ್ಲ ಚುಕ್ಕಿಗಳ ತಂದು ಮುಡಿದಂತೆ ಕಂಡಿತು. ಹಸುರಿನ ಮೈ ಮೇಲೆ ಬೆಳ್ಳಿ ಬೆಡಗು! ಜೋಳ ಮಾರಿ, ಅಂಥದೇ ಸೀರೆಯನ್ನು ನಿನಗೆ ತರಬೇಕೆಂಬ ಆಸೆ ಹುಟ್ಟಿತು. ಆಸೆಗೆ ಬಿದ್ದ ಮನದಲ್ಲಿ ಹಾಡು-

ಉದ್ದಾನುದ್ದದ ಜಡೆಯೋಳೆ ಶಕುಂತಲೆ

ಮುಡಿಯಲ್ಲಿ ಮಲ್ಲಿಗೆ, ನಿಲವು ಕಬ್ಬಿನ ಜಲ್ಲೆ

ಕಣ್ಣಲ್ಲಿ ತುಳುಕಿ ಕೆಣಕುವ ನಾಚಿಕೆ

ರತಿದೇವಿ ಸಾಟಿಯೆ ನಿನಗೆ?

ತೋಟ ಕಾಲಿನವನ ಕೈಲಿ ಕಾಗದ ಲೇಖನಿಯೆ? ಮನೆಗೆ ಹೋಗಿ ಬರೆಯಲು ನೆನಪಿರಬೇಕು. ಜೊತೆಗೆ ಬಿಡುವು. ಆದರೆಲ್ಲಿ ಅದು? ಉಂಡರೆ ಕರೆಯುವುದು ಹಾಸಿಗೆ. ಮಲಗಿದರೆ ಕನಸ ಕರೆಯುವುದು ನಿದ್ದೆ. ಕನಸಿನಲಿ ನೀ ಬಂದು ಹೇಳುವ ಕಥೆಗಳಿಗೆ ಹೂಂಗುಡವುದರಲ್ಲೆ ಕೋಳಿ ಕೂಗಿಬಿಡುವುದು. ಇನ್ನೆಲ್ಲಿ ನೆನಪಿಟ್ಟು ಬರೆಯುದು ಹೇಳೆ?

ತಿತ್ತಿರಿ ಹಕ್ಕಿ ನನ್ನ ತಲೆ ಮೇಲೆ ಸುತ್ತಿ ಹಾರಲಿತ್ತು ನಿನ್ನೂರ ಕಡೆಗೆ. ನಿನಗೆ ತಿಳಿಸೆಂದು ಹೇಳಿ, ಹಾಡಿದೆ ಗಟ್ಟಿಯಾಗಿ. ಅದು ಕೇಳಿಸಿಕೊಂಡೆನೆಂಬಂತೆ ತಿತ್ತೀರಿ ತಿತ್ತಿ ಎಂದು ಕೂಗಿ ಹಾರಿತು ನಿನ್ನೂರ ಕಡೆಗೆ.

English summary
Here is the love letter series continued by Oneindia Kannada columnist Sa Raghunatha. He remembrance lady love between work pressure. He feels relaxed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X