ಹಸಿವು ಹೆಚ್ಚಿಸುವ, ರುಚಿ ತಣಿಸುವ ಗೋಂಗೂರ - ಆವಕಾಯ ಇನ್ನೂ ತಿಂದಿಲ್ವೆ?

Posted By: ಸ ರಘುನಾಥ, ಕೋಲಾರ
Subscribe to Oneindia Kannada

ತೆಲುಗರ ಸಾಂಪ್ರದಾಯಿಕ ಭೋಜನ ಪದಾರ್ಥಗಳಲ್ಲಿ ಗೋಂಗೂರ, ಆವಕಾಯ, ಪಪ್ಪು(ತೊವ್ವೆ), ಗುತ್ತೊಂಕಾಯಿ ಕೂರ, (ಎಣ್ಣಗಾಯಿ) ಚಾ(ಚೇ)ಪಲ ಪುಲುಸು (ಮೀನಿನಸಾರು) ಪ್ರಮುಖವಾದವು. ಇವೆಂದರೆ ಬಾಯಲ್ಲಿ ನೀರೂರಿ, ಹಸಿವೆ ಕಾಣಿಸಿಕೊಂಡರೆ ಅವರು ತೆಲುಗರಾಗಿರಬೇಕು. ಇಲ್ಲವೆ ಈ ಎಲ್ಲದರ ರುಚಿ ತಿಳಿದಿರಬೇಕು. ಇವುಗಳ ರುಚಿಯೇ ಹಾಗೆ.

ತೆಲುಗನೊಬ್ಬ ಜಗತ್ತಿನ ಯಾವುದೇ ಸೀಮೆಯಲ್ಲಿರಲಿ, ಈ ವಂಟಕಗಳ(ಅಡುಗೆಗಳ) ಹೆಸರು ಕೇಳುತ್ತಲೇ ಅವುಗಳಿಗಾಗಿ ಹಂಬಲಿಸುತ್ತಾನೆ. ಅವುಗಳ ರುಚಿಯೇ ಅವುಗಳದು. ಬಡವನಿರಲಿ, ಶ್ರೀಮಂತನಾಗಿರಲಿ ಲೊಟ್ಟೆ ಹೊಡೆಯದಿರುವುದಿಲ್ಲ. ಇವು ಹದಿನಾರಾಣೆ ತೆಲುಗರ ದೇಸೀ ವಂಟಕ (ಅಡುಗೆ).

ಅಂದಿನ ಮತ್ತು ಇಂದಿನ ತೆಲುಗು ಸಿನೆಮಾಗಳಲ್ಲಿ ಇವುಗಳನ್ನು ಕುರಿತ ಅನೇಕ ಹಾಡುಗಳಿವೆ. ಮಾತುಗಳಿವೆ. ಕೇಳುಗರು ಬೇಸರವಿಲ್ಲದೆ, ಹೊಸತು ಎಂಬಂತೆ ಕೇಳಿಸಿಕೊಳ್ಳುತ್ತಾರೆ. ಹಾಗಾಗಿ ಇವು ಸಾರ್ವಕಾಲಿಕ ತಾಜಾತನವನ್ನು ಉಳಿಸಿಕೊಂಡಿವೆ.

ಗೋಂಗೂರವೆಂದಾಗ ಅದರ ರುಚಿ ಕಂಡವರ ಬಾಯಲ್ಲಿ ನೀರೂರುವುದರೊಂದಿಗೆ, 1957ರಲ್ಲಿ ಪ್ರದರ್ಶನಕ್ಕೆ ಬಿಡುಗಡೆಯಾದ ಜನಪ್ರಿಯ 'ಮಾಯಾಬಜಾರ್' ಸಿನೆಮಾದೊಂದು (ನೋಡಿದ್ದರೆ) ದೃಶ್ಯ-ಸಂಭಾಷಣೆ ನೆನಪಿಗೆ ಬರದಿರಲಾರದು.

ಹನುಮಪ್ಪನ ಸಾವಿನೊಂದಿಗೆ ಅನಾಥವಾದ ಗೆಜ್ಜೆ, ಚಿಟಿಕೆ, ಕೋನಿಗಕಟ್ಟ

ಅದು ಬಿಡದಿ ಮನೆಯ ಪಾಕಶಾಲೆ. ಅಲ್ಲಿಗೆ ಪರಿಶೀಲಕರು ಬರುತ್ತಾರೆ. ಏನೇನು ತಿನಿಸುಗಳಿವೆಯೆಂದು ಕೇಳುತ್ತಾರೆ. ಅಲ್ಲಿನ ಮೇಲ್ವಿಚಾರಕರು ವಿವಿಧ ಭೋಜನ ಪದಾರ್ಥಗಳನ್ನು ತೋರಿಸಿ ಹೇಳುತ್ತಾರೆ. ಆದರೆ ಪರಿಶೀಲಕರು 'ಅಸಲು ಅಡುಗೆ ಎಲ್ಲಯ್ಯ?' ಎಂದು ಪ್ರಶ್ನಿಸುತ್ತ, 'ನಾಗರಿಕರ ಔತಣದೂಟದಲ್ಲಿ ಮುಖ್ಯವಾಗಿರಬೇಕಾದ ಪದಾರ್ಥವೇ ಇಲ್ಲವಲ್ಲಯ್ಯ' ಎಂದು ಆಕ್ಷೇಪಿಸುವರು.

ಅದು ಏನೆಂದು ಕೇಳಲು, 'ಗೋಂಗೂರ. ಶಾಕಂಬರೀದೇವಿ ಪ್ರಸಾದ. ಆಂಧ್ರ ಶಾಕಂ. ಅದಿಲ್ಲದೆ ಪ್ರಭುಗಳು ತುತ್ತನ್ನೂ ಮುಟ್ಟುವುದಿಲ್ಲ' ಎಂದು ತಿಳಿಸುತ್ತಾರೆ. ಈ ಪ್ರಸಂಗ ಜನರ ಊಟದಲ್ಲಿ ಗೋಂಗೂರ ಇರಲೇಬೇಕಾದ ವಿಶೇಷ ಪದಾರ್ಥವೆಂದು, ಹಾಗೆಯೇ ಸುಪ್ರಸಿದ್ಧ ನಟಿ, ಗಾಯಕಿ, ಲೇಖಲಿ ಪಿ.ಭಾನುಮತಿಯವರ 'ಅತ್ತಗಾರು, ಆವಕಾಯ' ಎಂಬ ಹಾಸ್ಯ ಲೇಖನವೂ ನೆನಪಾಗುತ್ತದೆ. ರಾಜಭೋಜನಕ್ಕೂ ಅರ್ಹವಾದುದೆಂದು ತಿಳಿಸುತ್ತದೆ.

ಚಿಕನ್ ಗೋಂಗೂರ ಜನಪ್ರಿಯ

ಚಿಕನ್ ಗೋಂಗೂರ ಜನಪ್ರಿಯ

'ಆಂಧ್ರ ಸ್ಟೈಲ್' ಹೋಟೆಲ್ಲುಗಳು ಕರ್ನಾಟಕ್ಕೆ ಬಂದ ನಂತರ ಇದರ ರುಚಿ ಕನ್ನಡಿಗರ ನಾಲಗೆಗಳಿಗೂ ಹತ್ತಿದೆ. ತೆಲುಗು ಕುಟುಂಬಗಳ ಗೆಳೆತನ ಇದ್ದವರೂ ಇದರ ರುಚಿ ಕಂಡು, ಮತ್ತೆಮತ್ತೆ ತಿನ್ನಲು ಬಯಸುವುದುಂಟು. ಇತ್ತೀಚಿನ ದಿನಗಳಲ್ಲಿ ಇದು ಮಾಂಸಾಹಾರಿ ಹೋಟೆಲುಗಳಲ್ಲಿಯೂ ಬಳಕೆ ಬಂದಿದೆ. ಇದನ್ನು ಬಳಸಿ ತಯಾರಿಸಿದ 'ಚಿಕನ್ ಗೋಂಗೂರ' ಜನಪ್ರಿಯವಾಗುತ್ತಿದೆ.

ಗೋಂಗೂರಕ್ಕೆ 'ಪುಂಡರಿಕೆ' ಎಂಬ ಹೆಸರು ಕನ್ನಡದಲ್ಲಿದೆ. ಕೆಂಪು ಗೋಂಗೂರದ ಗಿಡ, ಎಲೆ, ಹೂವು ಬೆಂಡೆಯನ್ನು ಹೋಲುತ್ತದೆ. Hibiscus Sabdariffa ಎಂಬುದು ಸಸ್ಯಶಾಸ್ತ್ರೀಯ ಹೆಸರು. ಸಂಸ್ಕೃತದಲ್ಲಿ ಪೀಲು, ಆಮ್ಲಪೀಲು, ಕಂಟಕಪೀಲು ಎಂದು ಹೆಸರಿಸಿದೆ. ಇದು ಆಂಧ್ರದಲ್ಲಿ ವ್ಯಾಪಕ ಬಳಕೆಯಲ್ಲಿದೆ.

ಗೋಂಗೂರ ಚಟ್ನಿ ತಿಂಗಳುಗಟ್ಟಲೆ ಕಾಯ್ದಿಡಬಹುದು

ಗೋಂಗೂರ ಚಟ್ನಿ ತಿಂಗಳುಗಟ್ಟಲೆ ಕಾಯ್ದಿಡಬಹುದು

ಇದಕ್ಕೆ ಆರ್ಥಿಕ ಮೌಲ್ಯವಿದೆ. ಗೋಂಗೂರ ಪಚ್ಚಡಿಯನ್ನು ತಯಾರಿಸುವ ಕೈಗಾರಿಕೆಗಳೂ ಇವೆ. ಕೃಷ್ಣಾ, ಗುಂಟೂರು ಜಿಲ್ಲೆಗಳಲ್ಲಿ ಬೆಳೆಯುವ ಗೋಂಗೂರ ಶ್ರೇಷ್ಠವಾದುದಾಗಿದೆ. ಹಾಗಾಗಿ ಇಲ್ಲಿನ ಗೋಂಗೂರಕ್ಕೆ ಬೇಡಿಕೆ ಇದೆ. ಉಪ್ಪಿನಕಾಯಿಯನ್ನು ಬಳಸುವಂತೆ ಗೋಂಗೂರ ಚಟ್ನಿಯನ್ನೂ ತಿಂಗಳುಗಳ ಕಾಲ ಕಾಯ್ದಿಟ್ಟು ಬಳಸಬಹುದು.

ಯಕೃತ್ತಿಗೆ ಬಲ ತುಂಬುವ ಗೋಂಗೂರ

ಯಕೃತ್ತಿಗೆ ಬಲ ತುಂಬುವ ಗೋಂಗೂರ

ಹುಳಿ ರುಚಿಯ ಗೋಂಗೂರವು ಔಷಧೀ ಗುಣಗಳನ್ನು ಹೊಂದಿದೆ. ಪಿತ್ತಜನಕಾಂಗ (ಯಕೃತ್ತು-ಲಿವರ್) ಬಲಗೊಳ್ಳುತ್ತದೆ. ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ನಾಲಗೆಯ ರಸಗ್ರಂಥಿಗಳನ್ನು ಉತ್ತೇಜಿಸಿ, ಅರುಚಿಯನ್ನು ನಿವಾರಿಸುತ್ತದೆ. ಪಚ್ಚಡಿ ತಯಾರಿಕೆಯಲ್ಲಿ ಬಹುವಂಶ ಔಷಧಿಗುಣವುಳ್ಳ ಬೆಳ್ಳುಳ್ಳಿ, ಪಪ್ಪುನೂನೆ (ಕಳ್ಳೆ(ಸೇಂಗ)ಎಣ್ಣೆ) ಅಥವಾ ಎಳ್ಳೆಣ್ಣೆ, ಹಸಿಮೆಣಸಿನಕಾಯಿ ಬಳಕೆಯಾಗುವುದರಿಂದ ವಿವಿಧ ಪೋಷಕಾಂಶಗಳು ದೊರೆಯುತ್ತವೆ. ಬಿಸಿ ಅನ್ನಕ್ಕೆ ಗೋಂಗೂರ ಚಟ್ನಿ, ಮೇಲೊಂದೆರಡು ಮಿಳ್ಳೆ ತುಪ್ಪ ಕೂಡಿದರಂತೂ ಉಣ್ಣುವವರ ಹೊಟ್ಟೆ ಬಕಾಸುರನ ಹೊಟ್ಟೆಯಾಗುವುದು. ಇದರಲ್ಲಿ ಕೊಂದ ಪಿತ್ತ ಉಂಟು ಮಾಡುವ ಗುಣವಿದೆ.

ಅತಿಥಿ ಸತ್ಕಾರದಲ್ಲಿ ಘನತೆ ಉಳ್ಳದ್ದು

ಅತಿಥಿ ಸತ್ಕಾರದಲ್ಲಿ ಘನತೆ ಉಳ್ಳದ್ದು

'ಆವಕಾಯ' ಗೋಂಗೂರದಷ್ಟೇ ತೆಲುಗರ ಪ್ರಿಯಾತಿ ಪ್ರಿಯ ಉಪ್ಪಿನಕಾಯಿ. ಚೆನ್ನಾಗಿ ಬಲಿತ (ದೋರೆ ಅಲ್ಲದ) ನಾರುನಾರಿನ ಮಾವಿನಕಾಯಿ ಇದಕ್ಕೆ ಯೋಗ್ಯ. ತೆಲುಗು ಸಿನೆಮಾವೊಂದರ 'ಪಂಡೈತೆ ಪನಿಕಿರಾದು ಆವಗಾಯಕು/ ಪಳ್ಳ ಕಿಂದ ಕರಾಕರ ಕೊರಿಕೇಂದುಕು' (ಹಣ್ಣಾದರೆ ತರವಲ್ಲ ಆವಗಾಯಿಗೆ/ ಹಲ್ಲ ನಡುವೆ ಕರಾಕರ ಕಡಿವುದಕ್ಕೆ) ಎಂಬ ಗೀತೆ ಆವಗಾಯಕ್ಕೆ ಯೋಗ್ಯವಾದ ಮಾವಿನ ಕಾಯಿ ಯಾವುದೆಂದು ಹೇಳುತ್ತದೆ.

ಓಟೆ ಸಹಿತ ಸೀಳಿದ ಮಾವಿನ ಹೋಳುಗಳು, ಖಾರದ ಕೆಂಪು ಒಣ ಮೆಣಸಿನಕಾಯಿಪುಡಿ, ಹಸಿ ಸಾಸಿವೆಪುಡಿ, ಕಳ್ಳೆ(ಸೇಂಗ) ಎಣ್ಣೆ ಅಥವಾ ಎಳ್ಳೆಣ್ಣೆ ಇದರಲ್ಲಿ ಬಳಕೆಯಾಗುವ ಪದಾರ್ಥಗಳು. ಇದು ವಾತಹರ. ಉಂಡುದನ್ನು ಜೀರ್ಣಗೊಳಿಸುವುದು. ಕಫ, ಕೆಮ್ಮನ್ನು ಹೆಚ್ಚಿಸುವುದು. ತುಪ್ಪ, ಮಜ್ಜಿಗೆ ಬಳಸುವುದರಿಂದ ಈ ದೋಷವನ್ನು ತಗ್ಗಿಸಬಹುದು. ಆವಕಾಯ ತಯಾರಿಕೆಯಲ್ಲಿ ಆವಲು (ಸಾಸಿವೆ) ಬಳಸುವುದರಿಂದಾಗಿ ಇದಕ್ಕೆ ಆವಕಾಯ ಎಂಬ ಹೆಸರು. ಇದು ಮತ್ತು ಗೋಂಗೂರ ಅತಿಥಿ ಸತ್ಕಾರದಲ್ಲಿಯೂ ಘನತೆಯುಳ್ಳವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Telugu people are very fond of Gongura and Avakaya. Why they like this very much? One India columnist Sa Raghunatha writes beautiful article about Gongura and Avakaya.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ