ನಮ್ಮೂರಿನ ಕ್ಷೌರಿಕ ಪಿಲ್ಲಣ್ಣ ಕಲಿಸಿದ ಪಾಠಗಳು ಇನ್ನೂ ನೆನಪಿವೆ

Posted By: ಸ ರಘುನಾಥ, ಕೋಲಾರ
Subscribe to Oneindia Kannada

ಪಿಲ್ಲಣ್ಣ ಊರಿನಲ್ಲಿ ದೊಡ್ಡ ಕುಳವಲ್ಲ,. ಹಾಗೆಯೇ ರೈತನೂ ಅಲ್ಲ. ಸಾಮಾನ್ಯ, ಬಡವ, ಕ್ಷೌರಿಕ. ಐದೂವರೆ ಅಡಿ ಎತ್ತರದ, ಸಣಕಲ ದೇಹದ ವ್ಯಕ್ತಿ. ಕ್ಷೌರಿಕತನದಾಚೆಗೆ ಯಾವ ಅಸ್ತಿತ್ವವೂ ಆತನಿಗಿರಲಿಲ್ಲ. ಊರಲ್ಲಿ ಉತ್ಸವ, ಮದುವೆಯೆಂದರೆ ಓಲಗದವರನ್ನು ಕರೆತರುವುದು, ಅವರ ವಾದನಕ್ಕೆ ಚರ್ಮದ 'ಸುತ್ತಿ ಪೆಟ್ಟಿ' (ಶ್ರುತಿ ಪೆಟ್ಟಗೆ) ಒತ್ತುವುದರಾಚೆಗೆ ಪಿಲ್ಲಣ್ಣ ಏನೂ ಅಲ್ಲ.

ವಿಚಿತ್ರಾನ್ನ ಸ್ಪೆಷಲ್ : ಹಜಾಮತ್‌ ಸೆ ಹಜಾಮತ್‌ ತಕ್‌...

ಆದರೂ ಅವನು ಊರಿನಲ್ಲಿ ನಗಣ್ಯನಲ್ಲ. ಕ್ಷೌರಿಕ ಕೈತನ ಅವನಲ್ಲಿ ಇದ್ದುದರಿಂದ ಅವನ ಬಗ್ಗೆ ಮಾತು, ಅಗತ್ಯ ಎರಡೂ ಇತ್ತು. ಪಿಲ್ಲಣ್ಣ ಸಿಡುಕ. ಆದರೆ ಸಿಡುಕನ್ನು ಹಿರಿಯರ ಮುಂದೆ ತೋರಿಸದಷ್ಟು ದುರ್ಬಲ. ಇದಕ್ಕೆ ಕಾರಣ ಆತನ ವೃತ್ತಿ ಮತ್ತು ಅಸಹಾಯಕತೆ. ಆದರೆ ತನ್ನ ಸಿಡುಕನ್ನು ಅದನ್ನು ಕ್ಷೌರಕ್ಕೆಂದು ಬಂದ ಎಳೆಯರ ಮೇಲೆ ತೋರಿಸಿ ಸಮಾಧಾನಪಟ್ಟುಕೊಳ್ಳುತ್ತಿದ್ದ.

ಎಡವಟ್ಟಾಯ್ತು ತಲೆಕೆಟ್ಟೋಯ್ತು, ಎಡವಟ್ ತಲೆಕಟ್!

ಹುಡುಗರನ್ನು ತನ್ನ ಮುಂದೆ ಬೆನ್ನು ಹಾಕಿಸಿ ಕೂರಿಸಿಕೊಂಡು ತಲೆಗೆ 'ಮಿಷನ್ನು' ಇಟ್ಟು ಟಿಕಟಿಕಾಯಿಸುತ್ತ, ಕಟಕಟ ಹಲ್ಲು ಕಡಿಯುತ್ತ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ವ್ಯಂಗ್ಯವಾಡುತ್ತಿದ್ದ. ಅದರ ಗುರಿ ಆ ಹುಡುಗರ ಹಿರಿಯರಾಗಿರುತ್ತಿದ್ದರು. ಇಂತಹ ಯಾರ ಮೇಲೆ ಎಷ್ಟು ಅಸಮಾಧಾನ ಇದೆ ಎಂಬುದನ್ನು ಆತನ ಕೈಲಿದ್ದ ಮಿಷನ್ನಿನ ಮೂಲಕ, ಹುಡುಗ 'ಹಾ' ಅನ್ನುವ ಕೂಗಿನ ಮೂಲಕ ತಿಳಿಯುತ್ತಿತ್ತು.

ಸಮಾಧಾನ ಇರುವಾಗ ಕ್ಷೌರ ಹಿತವಾಗಿರುತ್ತಿತ್ತು

ಸಮಾಧಾನ ಇರುವಾಗ ಕ್ಷೌರ ಹಿತವಾಗಿರುತ್ತಿತ್ತು

ಹೇಗೆಂದರೆ ಪಿಲ್ಲಣ್ಣನ ಕೈಲಿ ಟಿಕಟಿಕಗುಟ್ಟುತ್ತ ಮಿಷನ್ನು ಪೂರ್ತಿಯಾಗಿ ಕೂದಲನ್ನು ಕತ್ತರಿಸುವ ಮೊದಲೇ ಅವನ ಕೈ ಎಳೆತಕ್ಕೆ ಸಿಕ್ಕಿ 'ಚುಳ್'ಗುಟ್ಟಿಸುತ್ತಿತ್ತು. ಈ ಚಳುಕಿನಿಂದ ಕೆಲವರ ಕಣ್ಣಲ್ಲಿ ನೀರಾಡುತ್ತಿದ್ದುದೂ ಇತ್ತು. ಆದರೂ ಪಿಲ್ಲಣ್ಣ ಬೇಕಾದವನಾಗಿದ್ದ. ಮನಸ್ಸು ಸಮಾಧಾನದಿಂದಿದ್ದಾಗ ಆತನ ಕ್ಷೌರ ಹಿತವಾಗಿರುತ್ತಿತ್ತು. ಇಷ್ಟವಾಗುವಂಥ ಅದೂ ಇದೂ ಮಾತು ಹೇಳುತ್ತಲೂ ಇದ್ದ.

ಆ ನಂತರ ಅಂಥ ಮಾತು ಕಡಿಮೆ ಮಾಡಿದ್ದ

ಆ ನಂತರ ಅಂಥ ಮಾತು ಕಡಿಮೆ ಮಾಡಿದ್ದ

ನಾವು ಹೈಸ್ಕೂಲು ಮುಟ್ಟುವ ಕಾಲಕ್ಕೆ ಪಿಲ್ಲಣ್ಣ ನಮ್ಮ ಮಟ್ಟಿಗೆ ಇಂಥ ಮಾತುಗಳನ್ನು ಕಡಿಮೆ ಮಾಡಿದ್ದ. ತನ್ನ ವೃತ್ತಿಯ ಮೇಲ್ಮೆಯ ಬಗ್ಗೆ ಮನದಟ್ಟಾಗುವಂಥ ಮಾತುಗಳನ್ನು ಹೇಳುತ್ತಿದ್ದ. ಇದು ತನ್ನ ವೃತ್ತಿ- ಜಾತಿ ಕುರಿತಾಗಿ ಇದ್ದ ಕೀಳುತನದ ಮಾತುಗಳನ್ನು ನಮ್ಮಿಂದ ದೂರ ಮಾಡಲು ಹೇಳುತ್ತಿದ್ದುದೆಂದು ಗೊತ್ತಾದುದು ತಡವಾಗಿ.

ಮೈಸೂರ್ ಮಹಾರಾಜ್ನೂ ಒಬ್ಬನ ಮುಂದೆ ತಲೆ ತಗ್ಗಿಸ್ತಾನೆ

ಮೈಸೂರ್ ಮಹಾರಾಜ್ನೂ ಒಬ್ಬನ ಮುಂದೆ ತಲೆ ತಗ್ಗಿಸ್ತಾನೆ

ಒಂದು ಸಲ 'ಕಟಿಂಗ್' ಮಾಡುತ್ತ, 'ಯಾರ ಮುಂದೇನೂ ತಲೆ ತಗ್ಗಿಸದ ಮೈಸೂರ್ ಮಹಾರಾಜ್ನೂ ಒಬ್ಬನ್ಮುಂದೆ ತಲೆ ತಗ್ಗಿಸ್ತಾನೆ. ಅವ್ನು ಯಾರು ಗೊತ್ತದ ನಿಂಕ?' ಎಂದು ಕೇಳಿದ್ದ. ಗೊತ್ತಿಲ್ಲ ಅಂದಿದ್ದೆ. 'ಅವ್ನಾರು ಅಲ್ಲ. ನಮ್ಮ ಕೆಲ್ಸದೋನು ತಿಳ್ಕ' ಎಂದು ಹೇಳಿದ. ಹೇಳಿದ್ದು ನನಗೇ ಆದರೂ ಉದ್ದೇಶಿಸಿದ್ದು ಅಲ್ಲಿ ಕುಳಿತಿದ್ದ ದೊಡ್ಡವರಿಗೆ.

ಸಮಾಜ ಶಿಕ್ಷಣದ ಅಜ್ಞಾತ ಗುರು

ಸಮಾಜ ಶಿಕ್ಷಣದ ಅಜ್ಞಾತ ಗುರು

ಇಂತಹ ಮಾತುಗಳಿಂದ ಪಿಲ್ಲಣ್ಣ ತನ್ನ ವೃತ್ತಿ ಗೌರವಯುತವಾದುದೆಂದು ಸಾರುತ್ತಿದ್ದ. ಆದರೆ ಇದನ್ನು ಪಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಇದು ಹಳ್ಳಿಗಳಲ್ಲಿ ಇಂದಿಗೂ ವಿಷಾದದ ಸಂಗತಿಯೇ. ಪಿಲ್ಲಣ್ಣನ ಮುಂದೆ ಕ್ಷೌರಕ್ಕೆಂದು ಕುಳಿತ ಅನೇಕ ದಿನಗಳಲ್ಲಿ ನಾನು ಸಮಾಜ ಪಾಠವನ್ನು ಅವನ ಮಾತುಗಳ ಮೂಲಕ ಕಲಿತಿದ್ದೇನೆ. ಊರಿನ ಅನೇಕರ ಅವಗುಣಗಳ ಪರಿಚಯ ಮಾಡಿಕೊಂಡಿದ್ದೇನೆ. ಅವನು ಸಮಾಜ ಶಿಕ್ಷಣದ ಅಜ್ಞಾತ ಗುರುವಾಗಿದ್ದ.

ಪಿಲ್ಲಣ್ಣ ಮಾಡಿದ ಕೊನೆಯ ಕ್ಷೌರ

ಪಿಲ್ಲಣ್ಣ ಮಾಡಿದ ಕೊನೆಯ ಕ್ಷೌರ

ಎಷ್ಟೋ ವರ್ಷಗಳ ನಂತರ ಒಮ್ಮೆ ಊರಿಗೆ ಹೋಗಿದ್ದೆ. ಹೋಗುವ ಹಿಂದಿನ ದಿನ ಮುಖ ಕ್ಷೌರ ಮಾಡಿಕೊಂಡು ಹೋಗಿದ್ದೆ. ಆದರೂ ಪಿಲ್ಲಣ್ಣ ಬಿಡಲಿಲ್ಲ. ತನ್ನ ಕೈಲಿ ಮಾಡಿಸಿಕೊಳ್ಳಲೇಬೇಕೆಂದು ಪಟ್ಟು ಹಿಡಿದ. ಮುಖವನ್ನು ಅವನ ಕತ್ತಿಗೆ ಕೊಟ್ಟು ಕುಳಿತೆ, ಅಂಗೈಯಲ್ಲಿ ಮಸೆಗಲ್ಲಿಟ್ಟು ತಿಕ್ಕಿತಿಕ್ಕಿದರೂ ಚೂಪಾಗದ ಕತ್ತಿಯಿಂದ ಗಡ್ಡ ಕೆರೆದ. ಉರಿ ಹತ್ತಿದರೂ ಅವನ ಪ್ರೀತಿಯಲ್ಲಿ ಸಹ್ಯ ಮಾಡಿಕೊಂಡಿತು ಮನಸ್ಸು. ನನಗೆ ಪಿಲ್ಲಣ್ಣ ಮಾಡಿದ ಕೊನೆಯ ಕ್ಷೌರವೂ ಅದೇ, ಅಂತಿಮ ಭೇಟಿಯೂ ಅದೆ. ಆದರೆ ನೆನಪು ಮಾತ್ರ ಕೊನೆಯದಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Barber Pillanna and his behavior like lesson to others, this is the observation of One India columnist Sa Raghunatha. Beautiful human interest story in Kannada.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ