ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಕಣ ಬರಹ; ಬಾಳುವೆಗೆ ಕತ್ತಲೆಯು ಲಯವಾದ ಬೆಳಕು ಬೇಕು

|
Google Oneindia Kannada News

ಇಂದಿನ ಮೂಲಕ ನಾಳೆಗೆ ಹೋಗುವುದು ಜೀವನ ತತ್ವವೋ, ಕಾಲದ ನಿಯಮವೋ ಎಂದು ಕೇಳಿದ ಗೆಳೆಯನಿಗೆ, ಎರಡೂ ಒಂದೆನಿಸುವ ಚಲನೆಯೆಂದು ಆ ಕ್ಷಣದಲ್ಲಿ ತೋಚಿದ್ದನ್ನು ಹೇಳಿದೆ. ಇಲ್ಲಿ ನಾವು ಮಾಡಬಹುದಾದುದೇನು ಅಂದ. ಕರ್ಮ, ಅಂದರೆ ಕ್ರಿಯೆ ಎಂದೆ. ಯೋಚಿಸಬೇಕಿದೆ ಎಂದು ಅವನು ಹೊರಟುಹೋದ ಮೇಲೆ ನನ್ನಲ್ಲಿ ಮೂಡಿದ ವಿಚಾರ ಲಹರಿ ಇದು.

ನಾವು ಜೀವನ ಮತ್ತು ಕಾಲಕ್ಕೆ ನಮ್ಮನ್ನು ಒಪ್ಪಿಸಿಕೊಳ್ಳಬೇಕು. ಜೀವನವು ಬೆಳಕು ಹಾಗು ಕತ್ತಲೆಯ ಆಟದಲ್ಲಿರುತ್ತದೆ. ಕತ್ತಲೆಯಲ್ಲಿ ಅಡಗಿದ ಬೆಳಕನ್ನು ಕಾಣುವುದು ನಮ್ಮಿಂದಾಬೇಕು. ಕಾಲ ತನ್ನ ಕ್ರಿಯೆಯಲ್ಲಿ ಇದಕ್ಕೆ ಅವಕಾಶಗಳನ್ನು ತೆರೆದೇ ಇರುತ್ತದೆ. ಏಕೆಂದರೆ ಬದುಕನ್ನು ಹೊತ್ತು ಸಾಗುವಿಕೆ ಇರುವುದು ಕಾಲದೊಂದಿಗೆ. ಅದು ನಮ್ಮ ಕ್ರಿಯೆಗಳಿದ್ದ ಹಾಗೆ ಬದುಕನ್ನು ನಡೆಯಿಸುತ್ತದೆ. ಕಾಲ ಸದಾ ಸ್ವತಂತ್ರ. ಬದುಕು ಹಾಗಲ್ಲ, ಅದಕ್ಕೆ ಅಧೀನತೆಗಳಿರುತ್ತವೆ ಹಾಗು ಆಶ್ರಯ, ಅವಲಂಬನೆಗಳಿರುತ್ತವೆ. ಅದು ನೆಲೆಯಾಗಿದ್ದೀತು, ಹಣಕಾಸು ಆಗಿದ್ದೀತು. ಒಟ್ಟಿಗೆ ಎರಡೂ ಆಗಿದ್ದೀತು. ಇಂತಹ ಸ್ಥಿತಿಗೆ ಬಂದಾಗಲಷ್ಟೆ ಇದು ಅರ್ಥವಾಗುವುದು. ಈ ಅರ್ಥವಾಗುವಿಕೆಗೆ ಅವಕಾಶಬೇಕು. ಇದನ್ನು ಒದಗಿಸುವುದು ಕಾಲ ಮತ್ತು ಪ್ರಯತ್ನ.

ಪ್ರಯತ್ನ ನಡೆಯುವುದು ಭೂತದ ಅನುಭವದ ಮೂಲಕ. ಭೂತವು ವರ್ತಮಾನದ ಪ್ರಾರಂಭದ ರೇಖಾಬಿಂದು. ಈ ಬಿಂದುವಿನಿಂದ ಹೊರಡುವ ರೇಖೆ ಸರಳರೇಖೆಯೋ ವಕ್ರರೇಖೆಯೋ ಆಗರುತ್ತದೆ. ವಕ್ರರೇಖೆಯನ್ನು ಸರಳರೇಖೆಗೆ ತರುವಾಗ, ಇವೆರಡು ಒಂದೇ ಬಿಂದುವಿನಿಂದ ಒಂದೇ ಅಂತರದವರೆಗೆ ಸಾಗಿದರೂ ವಕ್ರರೇಖೆ ಸರಳರೇಖೆಗಿಂತ ನೀಡಿದಾಗಿರುತ್ತದೆ. ಸರಳರೇಖೆಯಲ್ಲಿ ಚಲಿಸುವುದಕ್ಕಿಂತ ವಕ್ರರೇಖೆ ಯಲ್ಲಿ ಚಲಿಸಲು ಹೆಚ್ಚು ಕಾಲ ಮತ್ತು ಶ್ರಮ ಹಿಡಿಯುವುದು. ಸರಳ ಹಾಗು ವಕ್ರರೇಖೆಯ ಚಲನೆಗಳು ಕಾಲದ ಫಲಿತಾಂಶದಲ್ಲಿ ಬೇರೆಬೇರೆ ಆಗಿರುತ್ತದೆ. ಈ ಫಲಿತಾಂಶವನ್ನು ಸ್ವೀಕರಿಸದಿದ್ದರೆ ಜೀವನ ಗಮನದ ದಾರಿಯನ್ನು ಕಾಲ ತೆರೆಯದು. ಆಗ ಕತ್ತಲೆಯೊಳನ ಬೆಳಕು ಕತ್ತಲೆಯಿಂದ ಹೊರಬರುವುದಿಲ್ಲ, ಕಾಣಿಸುವುದಿಲ್ಲ.

Darkness Must Be a Light to Live Sa Raghunatha Kannada Column

ಕತ್ತಲೆಯು ಬೆಳಕಿನಲ್ಲಿ ಕರಗಬೇಕು. ಬೆಳಕೇ ಕತ್ತಲೆಯಲ್ಲಿ ಕರಗುವಂತಾದರೆ, ಹಾಗೆ ಕರಗಿದ ಬೆಳಕಿಗಾಗಿ ಸೂರ್ಯೋದಯವಾಗಬೇಕು. ಇಲ್ಲವೆ ದೀಪ ಮುಡಿಸಬೇಕು. ನಮಗೆ ಬೇಕಾದ ನಮ್ಮ ಸೂರ್ಯೋದಯ ಅಷ್ಟು ಸುಲಭದ್ದಲ್ಲ. ಸಾಧಿಸಬೇಕಾದುದು. ದೀಪ ಹಚ್ಚುವುದೂ ಅಷ್ಟೆ. ಹಚ್ಚಿದ ದೀಪ ಯಾರದಾದರೂ ಬೆಳಕಿರುತ್ತದೆ. ಅವರು ಆ ದೀಪವನ್ನು ತೆಗೆದುಕೊಂಡು ಹೋಗಿಬಿಟ್ಟರೆ ಅಥವಾ ಆರಿಸಿದರೆ ನಮಗುಳಿವುದು ಕತ್ತಲೆಯೇ. ಅಂದರೆ ದೀಪ ನಮ್ಮದೇ ಆಗರಬೇಕು.

ಹೊರದೀಪವನ್ನು ಯಾರಾದರೂ ಮುಡಿಸಬಹುದು. ಒಳದೀಪನ್ನು ಮುಡಿಸಬೇಕಿರುವುದು ನಾವೇ. ಬೆಳಕು ಕಣ್ಣು ಕಾಣಿಸುವಂತಿರಬೇಕು. ಕಣ್ಣು ಮುಚ್ಚಿಸುವಂಥ ಬೆಳಕು ಕತ್ತಲೆಯೇ. ಆದುದರಿಂದ ಕಣ್ಣು ಕುರುಡಾಗಿಸದ ಬೆಳಕಿಗಾಗಿ ನಮ್ಮ ಅನ್ವೇಷಣೆ ಸಾಗಬೇಕು. ಬೆಳಕನ್ನು ನೋಡುವುದು ಕಣ್ಣು, ಗ್ರಹಿಸುವುದು ಮನಸ್ಸು. ಈ ಕ್ರಿಯೆಯಲ್ಲಿ ಯಾವೊಂದು ವಿಕಲವಾದರೂ ಬೆಳಕಿದ್ದೂ ಕತ್ತಲೆಯೆ, ಕತ್ತಲು ಕತ್ತಲೆಯೇ. ಹೀಗಾಗದಿರಲು ಈ ಎರಡೂ ಸಮನ್ವಯತೆಯಲ್ಲಿರಬೇಕು.

Darkness Must Be a Light to Live Sa Raghunatha Kannada Column

ಇರುವ ಕತ್ತಲೆ ಮತ್ತು ಬೆಳಕು ಕ್ರಿಯೆಯಲ್ಲ. ಆದರೆ ಕತ್ತಲನ್ನು ಬೆಳಕಾಗಿಸುವುದು ಬೆಳಕಿನ ಕ್ರಿಯೆ. ಬೆಳಕನ್ನು ಕತ್ತಲಾಗಿಸುವುದು ಕತ್ತಲೆಯ ಕ್ರಿಯೆ. ಇದು ಕಣ್ಮನಗಳ ಕ್ರಿಯಯಲ್ಲಿ ಮಾತ್ರ ಗೋಚರವಾಗುವುದು. ಕತ್ತಲೆ, ಬೆಳಕು ನಮ್ಮಲ್ಲಿದ್ದು ನಮ್ಮದಾಗರುತ್ತವೆ. ಈ ಎರಡರಲ್ಲಿ ಯಾವುದನ್ನು ಪಡೆದುಕೊಳ್ಳುವೆವೋ ಅದು ನಮ್ಮಲ್ಲಿರುತ್ತದೆ.

ಕತ್ತಲಾದ ಮೇಲೆ ಬೆಳಕು ಬರುತ್ತದೆ. ಬೆಳಕಾದ ಮೇಲೆ ಕತ್ತಲು ಬರುತ್ತದೆ ಅನ್ನುವುದು ಸಾಮಾನ್ಯ ತತ್ವದ ಸರಳ ನಿರೂಪಣೆ. ಆದರೆ ಇವುಗಳೊಂದಿಗೆ ನಾವು ನಡೆಸುವ ಕ್ರಿಯೆ ಸಂಕೀರ್ಣವಾದುದು. ಇದನ್ನು ಸರಳಗೊಳಿಸಿಕೊಳ್ಳದಿದ್ದರೆ ಬಾಳು ಸುಗಮವಾಗದು. ಹಾಗಾಗಿ ನಾವು ಬಯಸುವುದು, ಆರಾಧಿಸುವುದು ಬೆಳಕನ್ನು, ಕತ್ತಲೆಯನ್ನಲ್ಲ.

ಕತ್ತಲೆ ಮತ್ತು ಬೆಳಕು ಸ್ಥಳವನ್ನು ಆಕ್ರಮಿಸುತ್ತವೆ ಹಾಗೂ ಗೋಚರಿಸುತ್ತವೆಯಾಗಿ ಇವು ವಸ್ತು. ಆದರೆ ಸ್ಪರ್ಶಕ್ಕೆ ಸಿಗುವುದಿಲ್ಲವಾದುದರಿಂದ ಅವಸ್ತು. ವಸ್ತು, ಅವಸ್ತು ಎರಡೂ ಆಗಿರುವುದರ ಬಗೆಗಿನ ತರ್ಕ - ಮೀಮಾಂಸೆ - ಗಂಭೀರವಾದುದು. ಕಷ್ಟ - ಸುಖಕ್ಕೆ, ಜ್ಞಾನ - ಅಜ್ಞಾನಕ್ಕೆ ಇವು ಸಂಕೇತವೂ, ಪ್ರತಿಮೆಯೂ ಆಗಿರುತ್ತವೆ. ನಮಗೆ ಬೆಳಕು ಹಿತ, ಕತ್ತಲೆ ಅಹಿತ. ಆದರೆ ಕತ್ತಲೆಗೆ ಪ್ರಾಧಾನ್ಯತೆಯಿದೆ. ಕತ್ತಲೆಯಲ್ಲಿ ಬದುಕು ಮಾಡುವ ಜೀವಿಗಳಿವೆ. ವಿಶ್ರಾಂತಿಯ ನಿದ್ದೆಗಾಗಿ ನಮಗೂ ರಾತ್ರಿ ಹೆಸರಿನ ಕತ್ತಲೆ ಬೇಕು.

Darkness Must Be a Light to Live Sa Raghunatha Kannada Column

ಬೆಳಕನ್ನು ಬಾ ಎಂದರೆ ಕತ್ತಲೆಗೆ ಹೋಗು ಎಂದು ಹೇಳದೆಯೆ ಹೇಳಿದಂತೆ. ಹಾಗೆಯೇ ಕತ್ತಲೆಯನ್ನು ಹೋಗೆಂದರೆ ಬೆಳಕನ್ನು ಬಾ ಎಂದು ಕರೆದಂತೆ. ಜಗತ್ತಿನಲ್ಲಿ ಬೆಳಕಿಗಾಗಿ ಪ್ರಾರ್ಥನೆಗಳಿವೆ. ಕತ್ತಲೆಗಾಗಿ ಇಲ್ಲ. ಆದರೆ ಬೆಳಕು ಆಗು ಎಂದು ಕತ್ತಲೆಗೆ ಮೊರೆಯಿಡುವುದುಂಟು. ಈ ಮೊರೆಯೂ ಪ್ರಾರ್ಥನೆಯ ರೂಪವೆ ಆಗಿರುವುದು. ಬೆಳಕು ಕತ್ತಲೆಗಳು ಕಾಲದೊಂದಿಗೆ ಭೂತದ ಮೂಲಕವೆ ಬರುತ್ತವೆ. ಜೀವನದ ವರ್ತಮಾನ ಈ ಮೂರನ್ನು ವರ್ತಮಾನದಲ್ಲಿ ಇಡುತ್ತದೆ. ಜೀವಿಯು ವರ್ತಮಾನವನ್ನು ದಾಟದಿದ್ದರೆ ಆ ಜೀವಿಯೊಂದಿಗೆ ವರ್ತಮಾನದಲ್ಲಿಯೇ ಇವು ಇರುತ್ತವೆ. ಆದರೆ ಜೀವಿ ವರ್ತಮಾನದಲ್ಲಿಯೆ ಸ್ಥಗಿತಗೊಳ್ಳಲು ಕಾಲದ ಅನುಮತಿ ಇರದು. ಅದು ಜೀವಿಯನ್ನು ಸಾವಿನವರೆಗೆ ಹೊರಡಿಸುತ್ತಲೆ ಇರುತ್ತದೆ. ಅಂತಕನು ಬರುವವರೆಗೆ ಜೀವಿಯು ಕಾಲಾಧೀನ.

ಇದ್ದಷ್ಟು ದಿನ ಜೀವನದ ಬೆಳಕಿನಲ್ಲಿರುವ ಜೀವಿ ಅಂತಿಮವಾಗಿ ಸಲ್ಲುವುದು ಕತ್ತಲೆಗೆ. ಆತ್ಮ ಜ್ಯೋತಿಸ್ವರೂಪಿಯೆನ್ನುವುದುಂಟು. ಈ ಆತ್ಮವು ಲೀನವಾಗುವುದು ಪರಮಾತ್ಮನಲ್ಲಿ ಎಂದಾದರೆ, ಬೆಳಕು ಬೆಳಕನ್ನು ಸೇರಿ ಬೆಳಕಾಗುತ್ತದೆ ಎಂದಾಯಿತು. ಅಂದಮೇಲೆ ಕತ್ತಲೆ ಏನಾಗುವುದು? ಅದು ಕತ್ತಲನ್ನೇ ಸೇರುತ್ತದೆ ಅನ್ನುವುದಾದರೆ ಆ ಕತ್ತಲು ಯಾವುದು? ಅದು ಜೀವ - ಆತ್ಮ - ಇಲ್ಲದ್ದು. ಅಂದರೆ ಬಾಳುವೆ ಇಲ್ಲದ್ದು. ಬಾಳುವೆಗೆ ಕತ್ತಲೆ ಲಯವಾದ ಬೆಳಕುಬೇಕು.

Recommended Video

Rajat Patidar ಯಾರು?RCB ಸೇರೋದಕ್ಕೆ ಏನೆಲ್ಲಾ ಕಷ್ಟ ಪಟ್ಟಿದ್ದಾರೆ ಗೊತ್ತಾ? | #cricket | Oneindia Kannada

English summary
Darkness must be a light to live, Darkness must dissolve into light, We must commit ourselves to life and times, Life is in the game of light and darkness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X