• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೌನಿಪಲ್ಲಿ ಶಾಲೆಗೆ ಬಂದ ಲಜ್ಜಾ ಸುಂದರಿ ಕಾಡುಪಾಪ ವೃತ್ತಾಂತ

By ಸ ರಘುನಾಥ, ಕೋಲಾರ
|

ಒಂದು ದಿನ ಸಂಜೆ ಮಾವಿನ ಮರದಡಿ ಎಮ್ಮೆಯಿಂದ ಹಾಲು ಕರೆಯುತ್ತಿದ್ದಳು ಅಜ್ಜಿ. ನಾನು ಕರುವನ್ನು ಹಿಡಿದುಕೊಂಡು ನಿಂತಿದ್ದೆ. ಮರದ ಮೇಲೆ ಏನೋ ಸರಿದಂತಾಗಿ ಅಜ್ಜಿ ತಲೆ ಎತ್ತಿ ನೋಡಿ, ಗುಟ್ಟು ಹೇಳುವವಳಂತೆ 'ನೋಡೊ ಅಲ್ಲಿ ಕಾಡುಪಾಪ' ಎಂದು ಪಿಸುಗುಟ್ಟಿದಳು. ನೋಡಿದೆ. ಸಂಜೆಗತ್ತಲಿನಲ್ಲಿ ಎಲೆಗಳ ಮರೆಯಲ್ಲಿ ಎರಡು ಅಗಲವಾದ ಕಂಗಳು ಹೊಳೆಯುತ್ತಿದ್ದವು. ಅದರ ಕೂಗು ನೆನಪಾಗಿ ದಿಗಿಲಾಯಿತು. ಆಗ ಎಮ್ಮೆ ವಂಯ್ ಎಂದು ಕೂಗಿತು. ಕೂಡಲೇ ಕಾಡುಪಾಪ ಮಾಯವಾಯಿತು.

ತಾತ ಬೆಳೆಸಿದ ಮರಗಳು ಹೇಗೆ ವಿಸ್ತರಿಸಿಕೊಂಡಿದ್ದವೆಂದರೆ ಹಲಸು, ಮಾವು, ನೇರಳೆ, ಮಳೆ ಮರಗಳು ಒಂದಕ್ಕೊಂದು ಕಸಿ ಮಾಡಿ ಬೆಳೆಸಿದ್ದಂತೆ ಚಾಚಿಕೊಂಡಿದ್ದವು. ಇದರಿಂದ ಹಲಸಿನಲ್ಲಿ ಮಾವು, ಮಾವಿನಲ್ಲಿ ನೇರಳೆ ಹುಟ್ಟಿ ಬೆಳೆದಂತೆ ತೋರುತ್ತಿತ್ತು. ಒಂದು ಮರವೇರಿ ಕೊಂಚ ಧೈರ್ಯ ವಹಿಸುವ ಸಾಹಸ ಮಾಡಿದರೆ ನಾಕಾರು ಮರಗಳಲ್ಲಿ ಸಂಚರಿಸಬಹುದಿತ್ತು. ನದಿಯ ಒಂದು ದಡದಿಂದ ಈಜಿ ಇನ್ನೊಂದು ದಡ ತಲುಪುವಂತೆ.

ಬಿಳಿ ಇಲಿಯನ್ನು ಸಾಕಿದ ಸಂತಸ ಹಾಗೂ ಸಂಕಟಗಳು

ನಾನು ಹತ್ತಿದ ಮರದಿಂದ ಇಳಿದು ಇನ್ನೊಂದನ್ನು ಏರುತ್ತಿದ್ದುದು ವಿರಳ. ಇದನ್ನು ಬಲ್ಲ ಅಜ್ಜಿ ನನ್ನನ್ನು ಎರಡು ಕಾಲಿನ ಮಂಗ ಅನ್ನುತ್ತಿದ್ದಳು. ಕಾಡಿಗೆ ಹೋಗಿ ಸೌದೆ ತರಲು ಬಿಡುವಾಗದ ದಿನಗಳಲ್ಲಿ ಮರಗಳಲ್ಲಿ ಒಣಗಿದ ರೆಂಬೆಗಳನ್ನು ಮುರಿದು, ಸೌದೆ ಮಾಡುವುದು ನನ್ನ ಕೆಲಸವಾಗಿತ್ತು. ಇತರೆ ಮರಗಳಿಗಿಂತ ಹಲಸಿನ ಮರಗಳಲ್ಲಿನ ಕೊಂಬೆಗಳು ಒಣಗಿರುತ್ತಿದ್ದುದು ಹೆಚ್ಚು.

ಪಿಳಿಪಿಳಿ ಕಣ್ಣಿನ ಜೀವಿಯೊಂದು ಮಾವಿನ ಮರದಿಂದ ಹಲಸಿನ ಮರಕ್ಕೆ ಬರುತ್ತಿತ್ತು

ಪಿಳಿಪಿಳಿ ಕಣ್ಣಿನ ಜೀವಿಯೊಂದು ಮಾವಿನ ಮರದಿಂದ ಹಲಸಿನ ಮರಕ್ಕೆ ಬರುತ್ತಿತ್ತು

ಒಂದು ದಿವಸ ಸೌದೆಗಾಗಿ ಹಲಸಿನ ಮರವೇರಿದವನು ಅದರಲ್ಲಿನ ಒಣ ಕೊಂಬೆಗಳನ್ನು ಮುರಿದು ಮಾವಿನ ಮರಕ್ಕೆ ಹೋಗುವ ಸಾಹಸದ ಕೊನೇ ಹಂತದಲ್ಲಿದ್ದೆ. ಆಗಲೆ ಪಿಳಿಪಿಳಿ ಕಣ್ಣಿನ ಜೀವಿಯೊಂದು ಮಾವಿನ ಮರದಿಂದ ಹಲಸಿನ ಮರಕ್ಕೆ ಬರುತ್ತಿತ್ತು. ಅದನ್ನು ನೋಡಿ ನಾನು ಅಲುಗದೆ ನಿಂತೆ. ನನ್ನನ್ನು ನೋಡಿ ಅದು ನಿಂತಿತು. ಇಬ್ಬರ ಕಣ್ಣುಗಳೂ ಸಂಧಿಸಿದವು. ಅದರ ಭಯ ನನಗಿದ್ದಂತೆ, ನನ್ನ ಭಯ ಅದಕ್ಕಿದ್ದಂತಿತ್ತು. ನನ್ನ ಕೈಕಾಲುಗಳು ನಡುಗಿ ಬಿಗಿ ತಪ್ಪಿತು. ನಾನು ಎಮ್ಮೆ ಕಟ್ಟಲು ಹಾಕಿದ್ದ ಇಳಿಜಾರು ಚಪ್ಪರದ ಮೇಲೆ ಬಿದ್ದೆ. ತರಚು ಗಾಯಗಳೊಂದಿಗೆ ಮನೆ ಸೇರಿ, 'ಮರದ ಮೇಲಿದ್ದಾಗ ಕೋತಿ ಆಟ ಆಡಬೇಡವೆಂದರೆ ಕೇಳುತ್ತೀಯ' ಎಂದು ಅಜ್ಜಿ ಕೈಲಿ ಗದರಿಸಿಕೊಂಡೆ. ಇದರಿಂದ ಕಾಡುಪಾಪದ ಬಗ್ಗೆ ಇದ್ದ ಭಯ ಮತ್ತೂ ಹೆಚ್ಚಿತು.

ಇಪ್ಪತ್ತು ವರ್ಷಗಳ ನಂತರ ಕಾಡುಪಾಪದ ದರ್ಶನ

ಇಪ್ಪತ್ತು ವರ್ಷಗಳ ನಂತರ ಕಾಡುಪಾಪದ ದರ್ಶನ

ಇದಾಗಿ ಇಪ್ಪತ್ತು ವರ್ಷಗಳ ನಂತರ ಕಾಡುಪಾಪದ ದರ್ಶನವಾಯಿತು. ನಾನು ಮೇಷ್ಟ್ರಾಗಿ ಗೌನಿಪಲ್ಲಿ ಶಾಲೆಯಲ್ಲಿದ್ದೆ. ಒಂದು ದಿನ ರೈತ ಮಹಿಳೆಯೊಬ್ಬಳು ಕಾಡುಪಾಪವನ್ನು ತಂದಳು. ಅದು ಗಾಯಗೊಂಡಿತ್ತು. ನನಗೆ ಮರದಿಂದ ಬಿದ್ದ ದಿನದ ನೆನಪಾಯಿತು. ಭಯವೂ ಮರುಕಳಿಸಿತು. ಅದರ ಸಹವಾಸ ಬೇಡ ಅನ್ನಿಸಿತು. ಆಕೆ ಅದರ ತಲೆಯ ಮೇಲಿನ ಚರ್ಮ ಹಿಡಿದೆತ್ತಿ, 'ಹೀಗೆ ಹಿಡಿದರೆ ಕಚ್ಚುವುದಿಲ್ಲ' ಎಂದು ತೋರಿಸಿ ಧೈರ್ಯ ಕೊಟ್ಟಳು. ಈ ದಿನಕ್ಕಾಗಲೇ ಗಾಯಗೊಂಡ ಇಂಥ ಪ್ರಾಣಿ, ಪಕ್ಷಿಗಳ ಆರೈಕೆಯಲ್ಲಿ ನಾನು ಪಳಗಿದ್ದೆ. ಹಾಗಾಗಿ ನಿರಾಕರಿಸದೆ ಸ್ವೀಕರಿಸಿ, ಮಕ್ಕಳಿಗೆ ಅದರ ಆರೈಕೆಯ ಮಾಹಿತಿ ಕೊಟ್ಟು, ಅಂಥವಕ್ಕೆಂದೇ ಮಾಡಿಸಿದ್ದ ದೊಡ್ಡ ಬೋನಿನಲ್ಲಿ ಬಿಟ್ಟೆ. ದಿನ ಕಳೆದು ಅದು ಗುಣಮುಖವಾಗುತ್ತಿದ್ದಂತೆ ನನ್ನಲ್ಲಿನ ಭಯವೂ ಹೋಯಿತು. ಅದಕ್ಕೆ ಕೊಂಚವಾದರೂ ಮರದಲ್ಲಿರುವ ಸ್ಪಂದನೆ ಉಂಟಾಗಲೆಂದು ಹಸಿರು ಕೊಂಬೆಗಳನ್ನು ಬೋನಿನೊಳಗೆ ಕಟ್ಟಿಸಿದೆ.

ಅದು ನಾಚುವುದನ್ನು ನೋಡಿಯೇ ಅನುಭವಿಸಬೇಕು

ಅದು ನಾಚುವುದನ್ನು ನೋಡಿಯೇ ಅನುಭವಿಸಬೇಕು

ಹಸಿರು ಕೊಂಬೆಗಳನ್ನು ವಾರದಲ್ಲೆರಡು ಬಾರಿ ಬದಲಿಸುತ್ತಿದ್ದೆ. ಸೀಬೆ, ದ್ರಾಕ್ಷಿ, ಬಾಳೆ, ಹಲಸಿನ ತೊಳೆ, ಹಸಿರು ತರಕಾರಿ ಅದಕ್ಕೆ ಆಹಾರವಾಗಿ ಕೊಡುತ್ತಿದ್ದೆವು. ಅದಕ್ಕೆ ನಮ್ಮೊಂದಿಗೆ ಹೊಂದಿಕೊಳ್ಳಲು ಅದರ ಸಹಜ ಸ್ವಭಾವವಾದ ನಾಚಿಕೆ ಮತ್ತು ಭಯದಿಂದ ಸಾಧ್ಯವಾಗಿರಲಿಲ್ಲ. ಅದು ನಾಚುವುದನ್ನು ನೋಡಿಯೇ ಅನುಭವಿಸಬೇಕು.

ಅಂಥ ಮೂರು ಕಾಡುಪಾಪದ ಮರಿಗಳು ನಮ್ಮ ಮಡಿಲಿಗೆ ಬಂದವು

ಅಂಥ ಮೂರು ಕಾಡುಪಾಪದ ಮರಿಗಳು ನಮ್ಮ ಮಡಿಲಿಗೆ ಬಂದವು

ಗಂಡನ್ನು ತೋರಿಸುವಾಗ ಹತ್ತು ಜನ ಕೂಡಿ, 'ಏನಮ್ಮ ಗಂಡನ್ನು ಸರಿಯಾಗಿ ನೋಡಿ, ಒಪ್ಪಿಗೆಯಾಯಿತೆ ತಿಳಿಸು' ಎಂದಾಗ ನಾಚುವ ಹೆಣ್ಣಿನಂತೆ ಇರುತ್ತಿತ್ತು. ಅದು ಎಲೆಗಳ ಮರೆಯಲ್ಲಿ ಮದುಡಿಕೊಳ್ಳುತ್ತ, ದೊಡ್ಡ ಮರದಲ್ಲಿ ಕ್ಷೇಮದಿಂದ ಅವಿತಿರುವಂತೆ ಭಾವಿಸುತ್ತಿತ್ತು. ಇನ್ನು ಅದರ ಉಳಿವಿಗೆ ಭಯವಿಲ್ಲ ಅನ್ನಿಸಿದಾಗ ಊರಾಚೆಗಿದ್ದ ಎಲೆ (ವೀಳ್ಯದ) ತೋಟದ ಅಗಸೆ ಮರಗಳ ಗುಂಪಿನಲ್ಲಿ ಬಿಟ್ಟು ಬಂದೆವು. ಆ ನಂತರ ಅಂಥ ಮೂರು ಕಾಡುಪಾಪದ ಮರಿಗಳು ನಮ್ಮ ಮಡಿಲಿಗೆ ಬಂದು ಆರೈಕೆ ಪಡೆದವು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Slender lorises called as 'Kadu Papa' in Kannada. It is an endangered species. Here is an experience of time spent with Slender lorises shared by Oneindia Kannada columnist Sa Raghunatha.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more