ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಗೌರವ ಡಾಕ್ಟರೇಟ್ ಪದವಿ ಕುರಿತು...

By * ರವಿ ಬೆಳಗೆರೆ
|
Google Oneindia Kannada News

Vishweshwar Bhat
ಇತ್ತೀಚೆಗೆ ನಡೆದಿರುವ ಅನೇಕ ಸಂಗತಿಗಳ ಮಧ್ಯೆ ನನ್ನ ಗಮನ ಸೆಳೆದ ಸಂಗತಿಯೆಂದರೆ, 'ವಿಜಯ ಕರ್ನಾಟಕ'ದ ಸಂಪಾದಕ ವಿಶ್ವೇಶ್ವರ ಭಟ್ಟರಿಗೆ ಸಂಬಂಧಿಸಿದ್ದು. ನಮ್ಮದು ಅಜಮಾಸು ಎರಡು ದಶಕಗಳ ಸ್ನೇಹ. ವಯಸ್ಸಿನಲ್ಲಿ ವಿಶ್ವ ನನಗಿಂತ ಚಿಕ್ಕವನು. ನಾವಿಬ್ಬರೂ ಒಂದೇ ವಿಶ್ವವಿದ್ಯಾಲಯದಲ್ಲಿ ಓದಿದವರು. Of course, ನಾನು ಹೊರಬಂದ ಹತ್ತು ವರ್ಷಗಳ ನಂತರ ವಿಶ್ವ ಅಲ್ಲಿಗೆ ಸೇರಿಕೊಂಡ, ಆ ಮಾತು ಬೇರೆ. ಅದೇ ವಿಶ್ವವಿದ್ಯಾಲಯ, ಅಂದರೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಭಟ್ಟರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸುವ ನಿರ್ಣಯ ತೆಗೆದುಕೊಂಡಿತು ಎಂಬ ಸಂಗತಿ ನನಗೆ ಜೊಯಿಡಾದಲ್ಲಿದ್ದಾಗಲೇ ಗೊತ್ತಾಯಿತು. ಫೋನ್ ಮಾಡಿ ಅಭಿನಂದಿಸೋಣವೆಂದರೆ ಆಸಾಮಿ NRI (Not Reachable Indian).

ವಿಶ್ವ ಮೊದಲಿನಿಂದಲೂ ಒಳ್ಳೆಯ ವಿದ್ಯಾರ್ಥಿ. ಅವನು ಬಿಎಸ್ಸಿ ಮಾಡಿ, ಭೂಗರ್ಭಶಾಸ್ತ್ರದಲ್ಲಿ ಎಂಎಸ್ಸಿ ಮಾಡಿ ಮತ್ತೆ ಪತ್ರಿಕೋದ್ಯಮದಲ್ಲಿ ಎಂಎ ಮಾಡಿದ. ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅವನು ನನಗೆ ಗೊತ್ತು. ಪತ್ರಿಕೋದ್ಯಮದಲ್ಲಿ ಅವನು ನಾಲ್ಕು ಚಿನ್ನದ ಪದಕ ತಂದುಕೊಂಡ. ಮುಂದೆ ಇಂಗ್ಲೆಂಡಿಗೆ ಹೋಗಿ ಮತ್ತೊಂದು ಪದವಿ ಪಡೆದು ಬಂದ. ಏಷಿಯನ್ ಕಾಲೇಜ್ ಆಪ್ ಜರ್ನಲಿಸಂನಲ್ಲಿ ಅಧ್ಯಾಪಕನಾಗಿದ್ದ. ಅವನು 'ವಿಜಯ ಕರ್ನಾಟಕ'ವನ್ನು ಕಟ್ಟಿ ಬೆಳೆಸಿದ ರೀತಿ ವಿದಿತವಾದದ್ದೇ. ಇವತ್ತಿಗೂ ವಿಶ್ವ ನಿರಂತರವಾಗಿ ಬರೆಯುತ್ತಿದ್ದಾನೆ. ಸುಮಾರು ನಲವತ್ತೈದು ಪುಸ್ತಕಗಳು ಪ್ರಕಟವಾಗಿವೆ. ಅಂಥವನಿಗೆ, ಅವನೇ ಓದಿದ ವಿಶ್ವವಿದ್ಯಾಲಯವೊಂದು ಕರೆದು ಗೌರವ ಡಾಕ್ಟರೇಟ್ ನೀಡಿದರೆ ಅದರಲ್ಲಿ ಆಭಾಸವಾಗುವಂತಹುದೇನಿದೆ?

ನನ್ನ ಪ್ರಕಾರ ಪ್ರಶಸ್ತಿ, ಸನ್ಮಾನ, ಗೌರವ ಡಾಕ್ಟರೇಟ್ ಮುಂತಾದವುಗಳು ಚಿಕ್ಕ ವಯಸ್ಸಿನ ಪ್ರತಿಭಾವಂತರಿಗೆ ಸಂದಾಯವಾಗಬೇಕು. ಉದಾಹರಣೆಗೆ, ನಮ್ಮ ಸರ್ಕಾರ ಕೊಡುವ ಪತ್ರಿಕೋದ್ಯಮಿಗಳಿಗೇ ಮೀಸಲಾದ ಟಿಯೆಸ್ಸಾರ್ ಪ್ರಶಸ್ತಿಯನ್ನೇ ತೆಗೆದುಕೊಳ್ಳಿ. ಎಂಥ ಹಣ್ಣುಹಣ್ಣು ಮುದುಕರಿಗೆ ಕೊಡುತ್ತಾರೆಂದರೆ, ಅವರು ನಿವೃತ್ತರಾಗಿಯೇ ಐವತ್ತು ವರ್ಷಗಳಾಗಿರುತ್ತವೆ! ಈಗಿನ ತಲೆಮಾರಿನವರು ಅವರ ಹೆಸರನ್ನೇ ಕೇಳಿರುವುದಿಲ್ಲ. ಅದರ ಬದಲಿಗೆ ಸಕ್ರಿಯರಾಗಿರುವ, ವ್ಯಾಪಕವಾಗಿ ಓದುಗರನ್ನು ಹೊಂದಿರುವ, ತುಂಬ ಕೆಲಸ ಮಾಡುವ, ಜನಪರವಾಗಿ ದನಿಯೆತ್ತುವ, ರಾಜಿ ಮಾಡಿಕೊಳ್ಳದ ಪತ್ರಕರ್ತನೊಬ್ಬನಿಗೆ ಕೊಟ್ಟರೆ ಅವನು ಉಳಿದವರಿಗೆ ಮಾದರಿಯಾಗುತ್ತಾನೆ. Living example ಆಗಿ ಕಣ್ಣೆದುರಿಗಿರುತ್ತಾನೆ. ಹೊಸ ತಲೆಮಾರಿನ ಹುಡುಗ ಹುಡುಗಿಯರಿಗೆ ಪ್ರೇರಕ ಶಸ್ತಿಯಾಗುತ್ತಾನೆ.

ಹಿಂದೆ ಇದೇ ಟಿಯೆಸ್ಸಾರ್ ಪ್ರಶಸ್ತಿಯನ್ನು ಲಂಕೇಶರಿಗೆ ಕೊಡಿ ಅಥವಾ ವೈಎನ್ಕೆ ಅವರಿಗೆ ಕೊಡಿ, ಇಬ್ಬರಿಗೂ ಬೇಕಾದರೆ ಅದನ್ನು ಹಂಚಿಕೊಡಿ ಅಂತ ನಾನು ಮತ್ತು ಡಿಆರ್ ನಾಗರಾಜ್ ವಾದಿಸಿದ್ದೆವು. ನಮ್ಮಂಥವರ ವಾದಗಳು ಸರ್ಕಾರದ ಕಿವಿಗೆಲ್ಲಿ ಬೀಳುತ್ತವೆ? ಯಾರೋ ಹೆಸರು ಕೂಡ ಕೇಳಿರದ ಅನಾಮಧೇಯ, ಗತಕಾಲದ ವೃದ್ಧರಿಗೆ ಅದನ್ನು ಕೊಟ್ಟು ಕೈತೊಳೆದುಕೊಂಡವು ಸರ್ಕಾರಗಳು. ಕಡೆಗೂ ಅಂಥದೊಂದು ಪ್ರತಿಷ್ಠಿತ ಪ್ರಶಸ್ತಿ ಪಡೆಯದೇನೇ ಲಂಕೇಶ್ ಮತ್ತು ವೈಎನ್ಕೆ ತೀರಿಕೊಂಡರು. ಅದರಿಂದ ಅವರಿಗೇನೂ ನಷ್ಟವಾಗಲಿಲ್ಲ, ಪ್ರಶಸ್ತಿ ಅರ್ಥ ಕಳೆದುಕೊಂಡಿತು.

ಹೀಗಾಗಿ, ನಾನು ಜೊಯಿಡಾದಿಂದ ಬಂದವನೇ ವಿಶ್ವನಿಗೆ ಫೋನು ಮಾಡಿ ಅಭಿನಂದಿಸಿದೆ. ಆದರೆ ಅಷ್ಟು ಹೊತ್ತಿಗಾಗಲೇ ಅಪಸ್ವರ ಆರಂಭವಾಗಿತ್ತು. ರಾಜ್ಯಪಾಲರಿಗೆ ಯಾರೋ ದೂರು ಕೊಟ್ಟಿದ್ದಾರಂತೆ. ವಿಶ್ವ ಬಲಪಂಥೀಯನೆಂಬ ಆಪಾದನೆಯಂತೆ. ನಾನು ಅಭ್ಯಸಿಸಿದ ಹಾಗೆ ವಿಶ್ವ ಅಂಥ ಕಟ್ಟರ್ ಬಲಪಂಥೀಯನಲ್ಲ, ಆರೆಸ್ಸಿಸಿಗನಲ್ಲ. ಇದೇ ಯಡಿಯೂರಪ್ಪನವರ ಸರ್ಕಾರವನ್ನು ಹಿಗ್ಗಾಮುಗ್ಗಾ ತನ್ನ ವರದಿಗಳಲ್ಲಿ, ಸಂಪಾದಕೀಯಗಳಲ್ಲಿ ಝಾಡಿಸಿದ್ದಾನೆ. ಅಷ್ಟು ಆತ್ಮೀಯರಾದ ಅನಂತಕುಮಾರ್ ಕೂಡ ಭಟ್ಟರ ಕಟು ಟೀಕೆಗೆ ಒಳಗಾಗಿದ್ದಾರೆ. ಪ್ರತಾಪ್ ಸಿಂಹನಂಥ right wing ಬರಹಗಾರನಿಗೆ ಅಂಕಣ ಕೊಟ್ಟ ಮಾತ್ರಕ್ಕೆ ವಿಶ್ವನನ್ನು ಬಲಪಂಥೀಯನೆನ್ನಲು ಸಾಧ್ಯವಿಲ್ಲ. ಅಲ್ಲದೆ, ಒಂದು ಸಿದ್ಧಾಂತಕ್ಕೆ ಜೋತುಬಿದ್ದು ಸರ್ವಸಮ್ಮತವಾದ ಒಂದು ದಿನಪತ್ರಿಕೆಯನ್ನು ನಡೆಸಲಾಗುವುದಿಲ್ಲ.

ಹಾಗೊಂದು ವೇಳೆ ಬಲಪಂಥೀಯ(?)ನಾದ ವಿಶ್ವನಿಗೆ ಗೌರವ ಡಾಕ್ಟರೇಟ್ ಕೊಡಬಾರದು ಎಂಬುದೇ ಆದರೆ, ಎಸ್ಎಲ್ ಭೈರಪ್ಪನವರಿನ್ನೇನು? ಅವರು ಅನುಮಾನಾತೀತವಾಗಿಯೂ ಬಲಪಂಥೀಯರು. ನಿಜ, ಅವರು ವಿಶ್ವನಿಗಿಂತ ದೊಡ್ಡವರು. ಹೆಚ್ಚು ಕೆಲಸ ಮಾಡಿದವರು. ಅ ಅಲ್ಲದೆ ಈ ನಾಡು ಕಂಡ ಅಪ್ರತಿಮ ಗದ್ಯ ಲೇಖಕರಲ್ಲಿ ಒಬ್ಬರು. ಅವರಿಗೆ ತಾವೇ ದುಡಿದುಕೊಂಡ ಡಾಕ್ಟರೇಟ್ ಯಾವಾಗಿನಿಂದಲೋ ಇದೆ. ಆದರೂ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯ ಪುರಸ್ಕರಿಸಿದ್ದು ಸಮರ್ಥನೀಯ. ಭೈರಪ್ಪನವರ ಕ್ರಿಯಾಶೀಲತೆಗೆ ಸಂದ ಗೌರವ. ಆದರೆ ವಿಶ್ವೇಶ್ವರ ಭಟ್ಟರ ಬಗ್ಗೆ ತಕರಾರು ತೆಗೆದದ್ದು ಏಕೆ?

ಹಾಗೊಂದು ತಕರಾರು ಅಥವಾ ಸಣ್ಣ ಅಪಸ್ವರ ಶುರುವಾಯಿತು ಎಂಬುದು ಗೊತ್ತಾದ ತಕ್ಷಣ ಈ ಹುಡುಗ ವಿಶ್ವ ಎಷ್ಟು ಸೆನ್ಸಿಟಿವ್ ಆಗಿಬಿಟ್ಟನೆಂದರೆ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಸೈದೂಪೂರ್ ಅವರಿಗೆ ಫ್ಯಾಕ್ಸ್ ಕಳಿಸಿಯೇಬಿಟ್ಟ. ನಾನು ಡಾಕ್ಟರೇಟ್ ಒಲ್ಲೆ! 'ಅದೆಂಥ ಕೆಲಸ ಮಾಡಿಬಿಟ್ಟೆ ವಿಶ್ವ' ಅಂದೆ. "ಇಲ್ಲ ಅಣ್ಣಾ, ಹಿಂದೆ ಯಡಿಯೂರಪ್ಪ ಅಮೆರಿಕಕ್ಕೆ ಹೋಗಿ ಗೌರವ ಡಾಕ್ಟರೇಟ್ ಪಡೆದಾಗ ನಾನೇ ಟೀಕಿಸಿ ಬರೆದಿದ್ದೆ. ಈಗ ನಾನೇ ಹೋಗಿ ಇನ್ನೊಂದು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದು ಬಂದರೆ ಹೇಗೆ? ಓದುಗರಿಗೆ ಯಾವ ಸಂದೇಶ ಕೊಟ್ಟಂತಾಗುತ್ತದೆ? ಅದಕ್ಕಾಗಿ ಒಲ್ಲೆ ಅಂದೆ" ಅಂದ. ಅವನ ಬಗ್ಗೆ ಹೆಮ್ಮೆಯನ್ನಿಸಿತು.

ತಮಾಷೆಯ ಮತ್ತು ಇಂಟರೆಸ್ಟಿಂಗ್ ಆದ ಸಂಗತಿಯೆಂದರೆ, ನಾನು ಮತ್ತು ವಿಶ್ವ ಇಬ್ಬರೂ ಡಾಕ್ಟರೇಟ್ ಪದವಿ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದು. ಆದರೆ, ಗೌರವ ಡಾಕ್ಟರೇಟುಗಳಲ್ಲ. ನಾವಿಬ್ಬರೂ ಅದೇ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾಗಿ ನಮ್ಮ ಹೆಸರುಗಳನ್ನು ನೋಂದಾಯಿಸಲಿಕ್ಕೆ ಎಲ್ಲ ದೃಷ್ಟಿಯಿಂದ ಅರ್ಹರು. ಶ್ರದ್ಧೆಯಿಂದ ಕೆಲಸ ಮಾಡುವುದು ಇಬ್ಬರಿಂದಲೂ ಸಾಧ್ಯ ಮತ್ತು ಆ ಚಟ ಇಬ್ಬರಿಗೂ ಇದೆ. ಕೊಂಚ ಆಸಕ್ತಿ ವಹಿಸಿದರೆ ಒಳ್ಳೆಯ ಪ್ರೊಫೆಸರು ಗೈಡ್ ಗಳಾಗಿ ಸಿಗುತ್ತಾರೆ. ಅದ್ಭುತವಾದ ಎರಡು ವಿಷಯಗಳನ್ನು ಆಯ್ದುಕೊಂಡು ಮೂರು ವರ್ಷ ಗಂಭೀರವಾಗಿ ಕೆಲಸ ಮಾಡಿ ಪ್ರೌಢ ಪ್ರಬಂಧ ಮಂಡಿಸಿ ಯಾರ ಮರ್ಜಿ ಮುಲಾಜುಗಳೂ ಇಲ್ಲದೆ ರಾಜಾರೋಷವಾಗಿ ಡಾಕ್ಟರೇಟ್ ಪದವಿ ಪಡೆಯಬಹುದು. ಆ ನಂತರ ಆ ಪ್ರಬಂಧಗಳನ್ನು ಪ್ರಕಟಿಸಲೂಬಹುದು. ಅದರಲ್ಲಿ ಸಿಗುವ ನೆಮ್ಮದಿ ಮತ್ತು ಸಂತೋಷ ಈ ಗೌರವ ಡಾಕ್ಟರೇಟಿನಲ್ಲಿ ಎಲ್ಲಿದೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X