• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸ್ಟ್ರೇಲಿಯಾದ ಅನಾಗರಿಕರಿಗೆ ಅಮಿತಾಬ್ ನೀಡಿದ ಉತ್ತರ

By * ರವಿ ಬೆಳಗೆರೆ
|
ಆಸ್ಟ್ರೇಲಿಯಾದಲ್ಲಿ ಅನಾಹುತ. ತೀರ ಸ್ಕ್ರೂ ಡ್ರೈವರುಗಳಿಂದ ನೆತ್ತಿಗೆ ಇರಿದು ಭಾರತೀಯ ವಿದ್ಯಾರ್ಥಿಯೊಬ್ಬನ ಹತ್ಯೆಗೆ ಯತ್ನಿಸಲಾಗಿದೆಯೆಂದರೆ, ಪರಿಸ್ಥಿತಿ ಎಲ್ಲಿಗೆ ಬಂದು ತಲುಪಿದೆಯೆಂಬುದನ್ನು ಯಾರಾದರೂ ಊಹಿಸಬಹುದು. ಅಮೆರಿಕದಲ್ಲಿ ಅರ್ಧ ಕರಿಯ ಒಬಾಮಾ ಅಧಿಕಾರಕ್ಕೆ ಬಂದಿರುವುದು ಹೌದಾದರೂ, ಪಾಶ್ಚಿಮಾತ್ಯ ದೇಶಗಳಲ್ಲಿ ಬಿಳಿಯರಿಗಿನ್ನೂ ಮನುಷ್ಯತ್ವ ಒಡಮೂಡಿಲ್ಲ. ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳಲ್ಲಿ ಕರಿಯರ ವಿರುದ್ಧ, ಏಷಿಯನ್ನರ ವಿರುದ್ಧ ವರ್ಣದ್ವೇಷ ಸಾಧಿಸುವುದು ನಡೆದೇ ಇದೆ.

ಆದರೆ, ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಹಿಂಸಾಚಾರ ಆರಂಭವಾಗಿರುವುದು ಹೊಸ ಸಂಗತಿ. ಉಳಿದ ದೇಶಗಳಿಗೆ ಹೋಲಿಸಿದರೆ ಭಾರತೀಯರ ಪಾಲಿಗೆ ಆಸ್ಟ್ರೇಲಿಯಾ ಅಂಥ ದೊಡ್ಡ ಆಕರ್ಷಣೆಯಲ್ಲ. ಅಲ್ಲಿನ ಯುನಿವರ್ಸಿಟಿಗಳು ಭಾರತದ ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು ಕೊಡುತ್ತವೆ. ಇಷ್ಟಾಗಿ, ಅವರಲ್ಲಿರುವ ಕೋರ್ಸುಗಳಾದರೂ ಎಂಥವು? ಹೊಟೇಲ್ ಮ್ಯಾನೇಜ್ ಮೆಂಟ್, ಅತಿಥಿ ಸತ್ಕಾರ, ಕ್ಷೌರ ಮಾಡುವುದು, ಅಂಗರಕ್ಷಕ ವಿದ್ಯೆ - ಬರೀ ಇಂಥವೇ. ಇವುಗಳನ್ನು ಭಾರತದ ಯಾವುದಾದರೂ ಚಿಕ್ಕ ಊರಿನಲ್ಲಿ ಮಾಡಿಬಿಡಬಹುದು. ಆದರೆ ನಮ್ಮ ಹುಡುಗರು ಆಸ್ಟ್ರೇಲಿಯಾಕ್ಕೆ ಹೋಗಲು ತವಕಿಸುವುದು ಬೇರೆಯದೇ ಕಾರಣಕ್ಕೆ. ಅಲ್ಲಿ ತುಂಬ ಸುಲಭವಾಗಿ ಆಸ್ಟ್ರೇಲಿಯಾದ ಪೌರತ್ವ ಸಿಗುತ್ತದೆ. ಅಲ್ಲಿಂದ ಮುಂದೆ ಕೆನಡಾಕ್ಕೆ, ಅಮೆರಿಕಕ್ಕೆ ವಲಸೆ ಸುಲಭವಾಗಿ ಹೋಗಬಹುದು. ಅದಕ್ಕೋಸ್ಕರ ನಮ್ಮ ಹುಡುಗರು ತುಂಬ ಶ್ರಮ ಪಡುತ್ತಾರೆ. ಆಸ್ಟ್ರೇಲಿಯಾದ ಯೂನಿವರ್ಸಿಟಿಗಳಲ್ಲಿ ವಿಪರೀತ ಶುಲ್ಕವಿದೆ. ಅಲ್ಲಿಯ ಗಣಿಗಳು ಮತ್ತು ನಿನ್ನೆ ಮೊನ್ನೆಯ ತನಕ ಅಸ್ತಿತ್ವದಲ್ಲಿದ್ದ ಕೆಲವು ಇಂಡಸ್ಟ್ರಿಗಳನ್ನು ಹೊರತುಪಡಿಸಿದರೆ, ಆ ದೇಶಕ್ಕೆ ಅತಿಹೆಚ್ಚಿನ ಆದಾಯ ತರುವುದು ಪ್ರವಾಸಿಗರು ಮತ್ತು ವಿದೇಶಿ ವಿದ್ಯಾರ್ಥಿಗಳು. ಆಸ್ಟ್ರೇಲಿಯಾದಲ್ಲಿ ಒಟ್ಟು ನಾಲ್ಕು ಲಕ್ಷ ವಿದೇಶಿ ವಿದ್ಯಾರ್ಥಿಗಳಿದ್ದರೆ, ಆ ಪೈಕಿ ಎರಡು ಲಕ್ಷ ಜನ ಭಾರತೀಯರು. ಆದರಲ್ಲೂ ಪಂಜಾಬಿಗಳು.

ಫಾರಿನ್ನಿಗೆ ಹೋಗುವ ತವಕ ನಮ್ಮ ಹುಡುಗರಲ್ಲಿ ಯಾವ ಪರಿ ಕಾಣಿಸಿಕೊಳ್ಳುತ್ತದೆಯೆಂದರೆ, ತಂದೆ ತಾಯಿಯರ ಪ್ರಾಣ ತಿಂದುಬಿಡುದ್ದಾರೆ. ಬ್ಯಾಂಕಿನಲ್ಲಿ ಸಾಲ ಮಾಡುತ್ತಾರೆ. ಇರುವ ತಟುಗು ಆಸ್ತಿ ಮಾರಿಸುತ್ತಾರೆ. ಇಷ್ಟೆಲ್ಲ ಮಾಡಿ ಆಸ್ಟ್ರೇಲಿಯಾಕ್ಕೆ ಹೋದರೆ, ಇಲ್ಲಿ ಭಾರತದಲ್ಲಿ ಇಲ್ಲದಂತಹ ಯಾವ ಘನಂದಾರಿ ಯೂನಿವರ್ಸಿಟಿಯೂ ಇರುವುದಿಲ್ಲ. ಹೋಗಲಿ, ಅಲ್ಲೊಂದು ರುಚಿಕಟ್ಟಾದ social life ಆದರೂ ಇದೆಯಾ ಅಂತ ನೋಡಿದರೆ, ಅದು ಇಲ್ಲ. ಸಂಜೆ ಏಳು ಗಂಟೆಯಾಗಿಬಿಟ್ಟರೆ ತೀರ ಮೆಲ್ಬರ್ನ್ ನಂತಹ ನಗರಗಳು ಕೂಡ ghost cityಗಳಂತಾಗಿಬಿಡುತ್ತವೆ. ಇಲ್ಲಿಂದ ಹೋದ ಯುವಕರಿಗೆ ಅಲ್ಲಿ ದುಡ್ಡು ಸಾಲುವುದಿಲ್ಲ. ತರಸಿಕೊಳ್ಳೋಣವೆಂದರೆ ಇಲ್ಲಿ ಅಪ್ಪನ ಬಳಿ ಹಣವಿರುವುದಿಲ್ಲ. ಅಕಸ್ಮಾತ್ ಅದ್ದರೂ ತರಿಸಿಕೊಳ್ಳಲು ನಾಚಿಕೆ, ಆತ್ಮಾಭಿಮಾನಿಯಾದ ಹುಡುಗ ಅಲ್ಲಿ ಚಿಕ್ಕದೊಂದು ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಲೆಕ್ಕ ಬರಿಯುವಿಕೆ, ಸೇಲ್ಸ್ ಮ್ಯಾನ್ ನೌಕರಿ, ಪೆಟ್ರೋಲ್ ಬಂಕಿನಲ್ಲಿ ಕೆಲಸ - ಬರೀ ಇಂಥ ನೌಕರಿಗಳೇ ಸಿಗುತ್ತವೆ. ಒಂದು ಕಡೆ ಪಾರ್ಟ್ ಟೈಮ್ ನೌಕರಿ ಮಾಡಿಕೊಂಡು, ಇನ್ನೊಂದೆಡೆ ತನ್ನ ಡಿಗ್ರಿಗಾಗಿ ಓದುತ್ತಿರುತ್ತಾನೆ. ಆ ಡಿಗ್ರಿಗಳನ್ನು ಪಡೆದು ಆಗುವುದೂ ಅಷ್ಟರಲ್ಲೇ ಇದೆ. ಹಾಗಿ ಡಿಗ್ರಿಗೆಂದು ಆಸ್ಟ್ರೇಲಿಯಾಕ್ಕೆ ಹೋದ ಅನೇಕರು ಅಲ್ಲೇ ಸಿಡ್ನಿಯಂತಹ ನಗರಗಳನ್ನು ಶಾಶ್ವತವಾಗಿ ಟ್ಯಾಕ್ಸಿ ಡ್ರೈವರುಗಳಾಗಿ ನೆಲೆಗೊಂಡಿದ್ದಾರೆ. ಅನಧಿಕೃತವಾಗಿ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಗೊಂಡವರೂ ಇದ್ದಾರೆ.

ನಿಜವಾದ ರಿಸ್ಕ್ ಆರಂಭವಾಗುವುದೇ ಅಲ್ಲಿಂದ. ಮೊದಲನೆಯದಾಗಿ, ಓದುವ ಹೋದ ಹುಡುಗರಿಗೆ ಯೂನಿವರ್ಸಿಟಿಗಳ ಬಳಿ ಮನೆಗಳು ಸಿಗುವುದಿಲ್ಲ. ಸಿಕ್ಕರೂ ವಿಪರೀತ ದುಬಾರಿ. ಹೀಗಾಗಿ ಆತ ಊರಾಚೆಗೆ, ಕೊಳಗೇರಿ ಸಮೀಪ, ಕಾರ್ಮಿಕರ ಮನೆಗಳ ಸಾಲಿನಲ್ಲಿ ಮನೆ ಹಿಡಿಯುತ್ತಾನೆ. ಅಲ್ಲಿ ಉಳಿದುಕೊಂಡೇ ಊರ ಮಧ್ಯದ ಮಾಲ್ ನಲ್ಲೋ, ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡತೊಡಗುತ್ತಾನೆ. ಕೆಲಸ ಮುಗಿಯುವುದು ರಾತ್ರಿ ತಡವಾಗಿ. ಹಿಂತಿರುಗಲು ಸ್ವಂತ ಗಾಡಿ ಎಲ್ಲಿಯದು? ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಬೇಕು. ಒಂಟಿಯಾಗಿ ರಸ್ತೆಗಳಲ್ಲಿ ನಡೆದು ಬರಬೇಕು. ಆಸ್ಟ್ರೇಲಿಯಾದ ಪುಂಡರ ಕೈಗೆ ಅವನು ಸಿಕ್ಕಿಬೀಳುವುದೇ ಆಗ. ಅದನ್ನು bashing ಅನ್ನುತ್ತಾರೆ. ಏಷಿಯನ್ನರನ್ನು ಹಿಡಿದು ಬಡಿಯುವುದನ್ನು curry bashing ಅನ್ನುತ್ತಾರೆ. ಶುದ್ಧ ಪುಂಡರು, ನಿರುದ್ಯೋಗಿಗಳು, ಡ್ರಗ್ ಅಡಿಕ್ಟ್ ಗಳು, ಕುಡುಕರು ಸೇರಿಕೊಂಡು ನಮ್ಮ ದೇಶದ ಯುವಕರನ್ನು ವಿನಾಕಾರಣ ಸಾಯಬಡಿಯುತ್ತಾರೆ. ಸ್ಕ್ರೂಡ್ರೈವರುಗಳಿಂದ ತಲೆಗೆ ಇರಿಯುತ್ತಾರೆ.

ಸಮಸ್ಯೆಯೆಂದರೆ, ನಮ್ಮ ಹುಡುಗರು ತಿರುಗಿ ಬೀಳುವುದಿಲ್ಲ. ತಿರುಗಿ ಬೀಳಬಲ್ಲ ಸಂಖ್ಯೆಯಲ್ಲಿ ಅವರಿರುವುದಿಲ್ಲ. ಪೊಲೀಸರಿಗೆ ದೂರು ಕೊಡುವುದಿಲ್ಲ. ಇದ್ದ ಭಾರತದಲ್ಲೇ ನಮ್ಮ ಹುಡುಗರು ಪೊಲೀಸರಲ್ಲಿಗೆ ಹೋಗಲು ಹಿಂಜರಿಯುತ್ತಾರೆ. ಅಂಥದರಲ್ಲಿ ಆಸ್ಟ್ರೇಲಿಯಾದಲ್ಲಿ ಹೋದಾರೆಯೆ? ಅಕಸ್ಮಾತ್ ಹೋದರೆ ನಾಳೆ ನಮಗೆ ಪೌರತ್ವ ಸಿಗುವುದು ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಎಲ್ಲ ನೋವು, ಅವಮಾನ ಸಹಿಸಿಕೊಂಡು ಸುಮ್ಮನಾಗಿಬಿಡುತ್ತಾರೆ. ಇದು ಅಲ್ಲಿನ ಪುಂಡರಿಗೆ ಗೊತ್ತಿದೆ. ಹೀಗಾಗಿ ಕಳೆದ ಒಂದು ವರ್ಷದಲ್ಲಿ ನೂರಕ್ಕೂ ಹೆಚ್ಚು ಭಾರತೀಯ ಹುಡುಗರು ಹಲ್ಲೆಗ ಒಳಗಾಗಿದ್ದಾರೆ. ತೀರ ಮಾರಣಾಂತಿಕ ಪೆಟ್ಟು ತಿಂದಿ ಆಸ್ಪತ್ರೆಗೆ ಸೇರಿದಂತಹ ಘಟನೆಗಳಾದಾಗಲೇ ಈ curry bashingನ ವಿಷಯ ಬೆಳಕಿಗೆ ಬಂದದ್ದು. ಹಗರಣ ಸ್ವರೂಪ ಪಡೆದದ್ದು.

ಇಷ್ಟಾಗಿ, ಹಗರಣ ಅಂತ ಆಯಿತಾದರೂ ಎಲ್ಲಿ? ಸಾವಿರಗಟ್ಟಲೆ ಭಾರತೀಯ ಯುವಕರು ಮೆಲ್ಬರ್ನ್ ನಲ್ಲಿ ಜಮೆಯಾದರು. ಸ್ಕ್ರೂಡ್ರೈವರ್ ಇರಿತದಿಂದಾಗಿ ಆಸ್ಪತ್ರೆ ಸೇರಿದ ಯುವಕ ಪ್ರಾಣಾಪಾಯದಿಂದ ಪಾರಾದ ಅಂತ ಖಚಿತವಾಗುವ ತನಕ ಅವರು ಅಲ್ಲಿಂದ ಕದಲಲಿಲ್ಲ. ಆಮೇಲೆ ಮೌನವಾಗಿ ಹೋಗಿ ಒಂದು ಟ್ರಾಫಿಕ್ ಜಂಕ್ಷನ್ ನಲ್ಲಿ, ಕೈಗಳಲ್ಲಿ ಭಿತ್ತಿಪತ್ರ ಹಿಡಿದು ಕುಳಿತರು. ಎರಡು ಘೋಷಣೆ ಕೂಗಿದರು. ಅಷ್ಟರಲ್ಲಿ ಆಸ್ಟ್ರೇಲಿಯಾದ ಪೊಲೀಸರು ಬಂದು ಪ್ರತಿಭಟನಾಕಾರರನ್ನು ಯಾವ ಪರಿ ಬಡಿದರೆಂದರೆ, ಅದು ಇನ್ನೊಂದು ರೀತಿಯ bashing. ಇಷ್ಟೆಲ್ಲ ಆದರೂ ಆಸ್ಟ್ರೇಲಿಯಾದ ಪತ್ರಿಕೆಗಳು ಭಾರತೀಯ ವಿದ್ಯಾರ್ಥಿಗಳ ಪರವಾಗಿ ಉಸಿರೆತ್ತುತ್ತಿಲ್ಲ. ಅಲ್ಲಿನ ಪತ್ರಿಕೋದ್ಯಮ ಅತ್ಯಂತ ನೀರಸವಾದುದು. ಅಲ್ಲೂ ರೂಪರ್ಟ್ ಮುರ್ಡೋಕ್ ನ ಯಾಜಮಾನ್ಯದ ಪತ್ರಿಕೆಯೇ ಇರುವುದು. 'ಯಾರೋ ಕುಡುಕರು, ವ್ಯಸನಿಗಳು, ಕಳ್ಳರು ಹಲ್ಲೆ ಮಾಡಿದ ಮಾತ್ರಕ್ಕೆ ಅದನ್ನು ವರ್ಣದ್ವೇಷವೆಂದು ಪರಿಗಣಿಸಲಾಗದು' ಎಂಬರ್ಥದಲ್ಲಿ ವರದಿಗಳು ಪ್ರಕಟವಾಗಿವೆಯೇ ಹೊರತು ಭಾರತೀಯ ಯುವಕರ ಬೆಂಬಲಕ್ಕೆ ಯಾವ ಪತ್ರಿಕೆಯೂ ಬಂದಿಲ್ಲ. "ಇದು ಅನ್ಯಾಯ. ವಿದ್ಯಾರ್ಥಿಗಳು ನಮ್ಮ ಅತಿಥಿಗಳು. ಅವರನ್ನು ನಮ್ಮ ದೇಶ ಹೀಗೆ ನಡೆಸಿಕೊಳ್ಳಬಾರದು" ಎಂದು ಆಸ್ಟ್ರೇಲಿಯಾದ ಒಬ್ಬ ವಿರೋಧ ಪಕ್ಷದ ನಾಯಕ ಮಾತ್ರ ಆಡಿದ್ದಾನೆ. ಆಸ್ಟ್ರೇಲಿಯಾದ ಅಧ್ಯಕ್ಷರ ಮಟ್ಟಿಗೆ ಇದೊಂದು ಚಿಕ್ಕ ಇಶ್ಯೂ. ಹತ್ತರ ಮಧ್ಯೆ ಹನ್ನೊಂದು. ಪೆಟ್ಟು ತಂಿದವರಲ್ಲಿ ಹೆಚ್ಚಿನವರು ಪಂಜಾಬಿಗಳೇ ಆದ್ದರಿಂದ ಮನಮೋಹನ್ ಸಿಂಗ್ ತಕ್ಷಣ ಪ್ರತಿಕ್ರಿಯಿಸಿಬಿಟ್ಟಿದ್ದಾರೆ. ಅವರಲ್ಲದೆ ಎಸ್ಸೆಂ ಕೃಷ್ಣ ಕೂಡ ಆಸ್ಟ್ರೇಲಿಯಾದ ವಿದೇಶಾಂಗ ಖಾತೆಯ ಮಂತ್ರಿಯೊಂದಿಗೆ ಮಾತನಾಡಿದ್ದಾರೆ. ಇದೆಲ್ಲದರ ಮಧ್ಯೆ ಪಂಜಾಬದ ಕ್ರಿಕೆಟಿಗೆ ಹರಭಜನ್ ಸಿಂಗ್ ಸಂಬಂಧಿಯೊಬ್ಬ ನಿಗೂಢ ವಾಗಿ ಆಸ್ಟ್ರೇಲಿಯಾದಲ್ಲಿ ಸತ್ತು ಹೋಗಿದ್ದಾನೆ. ಅದು ಆತ್ಮಹತ್ಯೆಯೋ, curry bashingನ ಫರಶ್ರುತಿಯೋ ಗೊತ್ತಿಲ್ಲವಾದರೂ, ಭಾರತೀಯ ಪೋಷಕರಲ್ಲಿ ಸಾಕಷ್ಟು ತಳಮಳ ಉಂಟು ಮಾಡಿದೆ.

ಇದೆಲ್ಲವನ್ನೂ ಪಕ್ಕಕ್ಕಿಟ್ಟು ಯೋಚಿಸುವುದಾದರೆ, ಆಸ್ಟ್ರೇಲಿಯಾ ಒಂದು ತಳಮಳದ ಹಾದಿಗುಂಟ ಸಾಗುತ್ತಿರುವ ದೇಶ. ಉಳಿದೆಲ್ಲ ಕಡೆ ಆದಂತೆಯೇ ಅಲ್ಲೂ ವಿಪರೀತವಾಗಿ ರಿಸೆಷನ್ ಹೊಡೆದ ಆಗಿದೆ. ಇದ್ದ ಹಲವಾರು ಇಂಡಸ್ಟ್ರಿಗಳು ಮುಚ್ಚಿಹೋಗಿ ಸಾವಿರಗಟ್ಟಲೆ ನಿರುದ್ಯೋಗಿಳು ಬೀದಿಗೆ ಬಿದ್ದಿದ್ದಾರೆ. ಹೀಗಾಗಿಯೇ ಕಾರ್ಮಿಕರ ಕಾಲೋನಿಗಳಲ್ಲಿ ಬಡತನ ತಾಂಡವವಾಡುತ್ತಿದೆ. ವ್ಯಸನಿಗಳು ಹುಟ್ಟಿಕೊಂಡಿದ್ದಾರೆ. ಅವರ ಕೈಗೆ ನಡುರಾತ್ರಿ ದೊರಕುವ ನಿಸ್ಸಹಾಯಕ ಭಾರತೀಯ ಪುಟ್ಟ ತಿಜೋರಿಯಂತೆ ಕಾಣಿಸುತ್ತಾನೆ. ಕಿತ್ತುಕೊಂಡರೆ ಬಂದಷ್ಟೇ ಲಾಭ. ಇಂಥದೊಂದು ಆರ್ಥಿಕ ದುಸ್ಥಿತಿ ಇಲ್ಲದೆ ಹೋಗಿದ್ದರೆ ಆಸ್ಟ್ರೇಲಿಯಾ ತೀರ ಬದುಕಲಾಗದಷ್ಟು ಕೆಟ್ಟ ದೇಶವೇನಲ್ಲ.

ಈ ಸಂದರ್ಭದಲ್ಲಿ ನನಗೆ ತುಂಬ ಮೆಚ್ಚುಗೆಯಾದದ್ದು ಹಿರಿಯ ನಟ ಅನಿತಾಬ್ ಬಚ್ಚನ್ ನಡವಳಿಕೆ. ಆಸ್ಟ್ರೇಲಿಯಾದ ಯೂನಿವರ್ಸಿಟಿಯೊಂದು ಅವರಿಗೆ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಹಾಗೆ ಅಲ್ಲಿನ ಯೂನಿವರ್ಸಿಟಿಗಳು ಪ್ರತೀ ವರ್ಷ ಕೆಲವು ಭಾರತೀಯರನ್ನು ಗುರುತಿಸಿ ಗೌರವಿಸುವ ತಂತ್ರ ಹೂಡುತ್ತವೆ. ಅವುಗಳ ಪಾಲಿಗೆ ಅದೊಂದು ವ್ಯಾಪಾರವೂ ಹೌದು. ಆ ಮೂಲಕ ಅವು ಇಲ್ಲಿನ ಸಾವಿರಾರು ಹುಡುಗರನ್ನು ಸೆಳೆಯುತ್ತವೆ. ಇಲ್ಲಿನ ವಿದ್ಯಾರ್ಥಿಗಳನ್ನು ಆಸ್ಟ್ರೇಲಿಯಾಕ್ಕೆ ಕಳಿಸುವ ನೂರಾರು ಏಜೆಂಟರು ಭಾರತದಲ್ಲಿದ್ದಾರೆ. ಇದೆಲ್ಲ ಅಮಿತಾಬ್ ಗೆ ಗೊತ್ತಿದೆಯೋ ಇಲ್ಲವೋ, ಆದರೆ "ನನ್ನ ದೇಶದ ಯುವಕರನ್ನು ಹೀನಾಯವಾಗಿ ಕಾಣುವ ರೇಸಿಸ್ಟ್ ದೇಶವೊಂದಕ್ಕೆ ಬಂದು ಡಾಕ್ಟರೇಟ್ ಸ್ವೀಕರಿಸಲು ನನ್ನ ಮನಸು ಒಪ್ಪುತ್ತಿಲ್ಲ" ಎಂದು ಮಾತನಾಡಿ ಅಮಿತಾಬ್ ಜನರ ಕಣ್ಣಲ್ಲಿ ಮತ್ತಷ್ಟು ಎತ್ತರವಾಗಿದ್ದಾರೆ.

ಭಾರತ ಏನೇ ಬಡ ದೇಶವಿರಬಹುದು. ಪಶ್ಚಿಮದವರು ಕಣ್ಣುಗಳಲ್ಲಿ ನಾವು ಅರೆ ಕರಿಯರೂ ಆಗಿರಬಹುದು. ಆದರೆ ನಮ್ಮ ಆತ್ಮಾಭಿಮಾನ ಸಾಯಿಸಿಕೊಂಡು ನಾವು ಬದುಕಬೇಕಿಲ್ಲ, ಅಲ್ಲವೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more