• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನಾರಿ ಕಾಗದ ಸುತ್ತಿದ ಪ್ಯಾಕೆಟ್ ತುಂಬ ಮನಶ್ಯಾಂತಿ!

By * ರವಿ ಬೆಳಗೆರೆ
|

ಇರುವುದು ಒಂದೇ ಬದುಕು. ಒಟ್ಟು ನೂರು ವರ್ಷ ಅಂತ ಇಟ್ಟುಕೊಳ್ಳೋಣ. ಆ ಪೈಕಿ ಎರಡು ಅಶಾಂತಿಪೂರ್ಣ ಕಾಲಗಳ ಮಧ್ಯದ ತಾತ್ಕಾಲಿಕ ಕಾಲವನ್ನು 'ಶಾಂತಿ' ಕಾಲ ಅಂದುಕೊಳ್ಳಬೇಕಾಗಿ ಬಂದರೆ, ಅದು ಆತನ ದುರದೃಷ್ಟ. ಶಾಂತಿ ಅಂದರೆ ಯಾವುದೇ ಸಮಸ್ಯೆ ಇಲ್ಲದಿರುವಿಕೆಯಲ್ಲ. ಮನಸು ಆಹ್ಲಾದಕರವಾಗಿರುವುದೇ ಶಾಂತಿ. ಹಾಗಿಲ್ಲದೆ ಹೋದರೆ ಅದು ಸೋಮಾರಿತನ ಅನ್ನಿಸಿಕೊಳ್ಳುತ್ತದೆ. ಮನುಷ್ಯ ಕ್ರಮೇಣ ಜಡಗೊಳ್ಳುತ್ತಾನೆ. 'ಇವತ್ತು ಯಾವ ಸಮಸ್ಯೆಯೂ ಬರಲಿಲ್ಲ. ನಾನು ಸುಖವಾಗಿದ್ದೆ' ಅಂದುಕೊಳ್ಳುವುದು ಪ್ರಶಾಂತತೆಯಲ್ಲ. ಹಕ್ಕಿಗಳ ಚಿಲಿಪಿಲಿಯ ಮಧ್ಯೆ ಎಳೆ ಬಿಸಿಲಿನಲ್ಲಿ ನಮ್ಮ ಮುಂಜಾವು ಬಿಚ್ಚಿಕೊಳ್ಳುವುದು ಶಾಂತಿ. ಏಳೇಳುತ್ತಿರುವ ಹಾಗೇ, ಅವತ್ತು ನಡೆಯಲಿರುವ ಘಟನೆಯೊಂದನ್ನು ಸಂತೋಷದಿಂದ ಕಲ್ಪಿಸಿಕೊಳ್ಳುವುದು ಶಾಂತಿ. ಅದನ್ನು ಕಲ್ಪಿಸಿಕೊಳ್ಳುತ್ತಿದ್ದಂತೆಯೇ ಮನಸ್ಸು ಆನಂದೋದ್ವೇಗಗಳಿಂದ ಉಬುಕಿ ಬಂದರೆ ಅದು ಶಾಂತಿ. ನಿರಂತರವಾಗಿ ಸಂತೋಷವಾಗಿರುವುದು ಶಾಂತಿ. ಹಾಗಿರುವಂತೆ ಜೀವನ ವಿಧಾನವನ್ನು ನಿರ್ಮಿಸಿಕೊಳ್ಳುವುದು ಶಾಂತಿ. ಮಧ್ಯೆ ಬರುವ ಕಷ್ಟಕಾರ್ಪಣ್ಯಗಳನ್ನು ಎದುರಿಸುವ ಸಲುವಾಗಿ ಮಾಡುವ ಯುದ್ಧ ಕೂಡ ಶಾಂತಿಯೇ.

ಶಾಂತಿಗೋಸ್ಕರ ಮನುಷ್ಯ ಯುದ್ಧ ಮಾಡದೆ ವಿಧಿಯಿಲ್ಲ. ಬದುಕಿನ ಯುದ್ಧದಲ್ಲಿ ಆನಂದವನ್ನು ಅನುಭವಿಸುವುದೇ ಶಾಂತಿ. ಮನುಷ್ಯನಿಗೆ ಆನಂದವನ್ನು ಕೊಡುವಂಥವು ಆರು. ಪ್ರೀತಿ, ಹಣ, ಅಧಿಕಾರ, ಕೀರ್ತಿ, ಜ್ಞಾನ ಮತ್ತು ಧ್ಯಾನ. ಈ ಆರು ಅಂಶಗಳನ್ನೂ ಸಂಪಾದಿಸಿಕೊಳ್ಳಲಿಕ್ಕಾಗಿ ತನ್ನ ದಿನಚರಿಯನ್ನು ಹೇಗೆ ಡಿವೈಡ್ ಮಾಡಿಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಶಾಂತಿ.

ವಯಸ್ಸು ಯಾವುದೇ ಆಗಿರಲಿ, ನಿನ್ನ ಒಂದು ದಿನದ 1/5ನೇ ಭಾಗವನ್ನು ಕೌಟುಂಬಿಕ ಪ್ರೇಮಕ್ಕಾಗಿ ಮೀಸಲಿಡಬೇಕು. ಉಳಿದ ಐದು ವಿಷಯಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಯೌವನದಲ್ಲಿ ದುಡ್ಡು ದುಡಿಯಲಿಕ್ಕೆ ನಿನ್ನ ಒಟ್ಟು ಸಮಯದ ಮುಕ್ಕಾಲು ಭಾಗವನ್ನು ಖರ್ಚು ಮಾಡಬೇಕು. ವೃದ್ಧಾಪ್ಯದಲ್ಲಿ ಮತ್ತೆ ದುಡ್ಡು ದುಡಿಯುವ ಪ್ರಸಂಗ ಬರದಂತೆ ಮೊದಲೇ ಎಚ್ಚರಿಕೆ ವಹಿಸಬೇಕು. ಆದರೆ ನಿನ್ನ ಮೇಲೆ ಹತ್ತು ಜನ ಆಧಾರ ಪಡುವಂತಹ ವ್ಯಾಪಾರವನ್ನೋ, ವ್ಯವಹಾರವನ್ನೋ ನೀನು ಮಾಡುತ್ತಿದ್ದರೆ ನಿನ್ನಲ್ಲಿ ಶಕ್ತಿಯಿರುವ ತನಕ ನೀನು ಕೆಲಸ ಮಾಡಬೇಕು. ದುಡ್ಡಿಗೋಸ್ಕರ ಅಲ್ಲ. ಅವರಿಗೆ ಆಶ್ರಯ ಕೊಡುತ್ತಿರುವುದಕ್ಕಾಗಿ. ಅದೇ ತೃಪ್ತಿ! ಆ ತೃಪ್ತಿಯನ್ನು ಪ್ರತಿ ನಿತ್ಯ, ದಿನದ 1/24ರಷ್ಟು ಅವಧಿಯನ್ನು ಧ್ಯಾನಕ್ಕೆ ಎತ್ತಿಟ್ಟು ಪರಿಪೂರ್ಣಗೊಳಿಸಿಕೊಳ್ಳಬೇಕು.

ಪ್ರೀತಿ ಕೊಡೋಕೆ ಮತ್ತು ಪ್ರೀತಿಯನ್ನು ಹೊಂದೋಕೆ ಒಂದಷ್ಟು ಸಮಯವನ್ನು ಎತ್ತಿಡುವುದು ಜೀವನ ಪರ್ಯಂತ ಅವಶ್ಯಕ. ಆದರೆ ದುರದೃಷ್ಟ ನೋಡು: ಬಾಲ್ಯದಲ್ಲಿ ಪ್ರೀತಿ ಕೊಡೋದು ಹೇಗೆ ಅಂತ ಗೊತ್ತಾಗುವುದಿಲ್ಲ. ಅದೇನಿದ್ದರೂ ಅಪ್ಪ-ಅಮ್ಮನಿಂದ ಪ್ರೀತಿ ತಗೊಳ್ಳುವುದರಲ್ಲೇ ಸರಿ ಹೋಗುತ್ತದೆ. ಯೌವನದಲ್ಲಿ ಮನುಷ್ಯನಿಗೆ ಪ್ರೀತಿ ಕೊಡುವ ಶಕ್ತಿ ಸಾಮರ್ಥ್ಯ ಬಂದಿರುತ್ತದೆ. ಕೊಟ್ಟೂ ಕೊಡುತ್ತಾನೆ. ಆದರೆ ಅಪ್ಪ ಅಮ್ಮನಿಗಲ್ಲ. ತನ್ನ ಸಂಗಾತಿಗೆ, ಸಂತಾನಕ್ಕೆ ಕೊಡುತ್ತಾನೆ. ನಡುವಯಸ್ಸು ಬರೋ ಹೊತ್ತಿಗೆ ತನ್ನ ಪ್ರೀತಿಯನ್ನೆಲ್ಲ ಕೆಲಸದ ಮೇಲೆ, ತಪ್ಪಿದರೆ ವ್ಯಸನದ ಮೇಲೆ ಸುರಿಯುತ್ತಾನೆ. ವೃದ್ಧಾಪ್ಯದಲ್ಲಿ ಪ್ರೀತಿಯನ್ನು ಅಪೇಕ್ಷಿಸುತ್ತಾನೆ. ಆದರೆ ಕೊಡುವವರಿರುವುದಿಲ್ಲ. ತನ್ನ ತಂದೆ ತಾಯಿಗೆ ಕೊಡಲಾಗದವನು, ಆ ಪ್ರೀತಿಯನ್ನು ತನ್ನ ಸಂತಾನದಿಂದ ಹೇಗೆ ಪಡೆಯಬಲ್ಲ? ಪ್ರೀತಿಯನ್ನು ಕೊಡಬಲ್ಲ ಶಕ್ತಿ ಬರುತ್ತಿದ್ದಂತೆಯೇ ಅದನ್ನು ನೀಡುತ್ತ ಹೋಗುವುದೇ ಶಾಂತಿ.

ನಿನ್ನ ಗೆಲುವನ್ನು ನೀನು ಯಾವ ಮಾನದಂಡದಿಂದ, ಯಾವ ಮಾನದಂಡದ ಮೂಲಕ ಗುರುತಿಸುತ್ತೀಯೋ, ಮೊದಲು ನಿರ್ಧರಿಸು. ನಿನ್ನೊಂದಿಗೆ ಕೆಲಸ ಮಾಡುವವರ ಮೂಲಕವಾ? ನಿನ್ನ ಸಂಗಾತಿಯ ಮೂಲಕವಾ? ಮಕ್ಕಳ ಸಂತೋಷದ ಆಧಾರದ ಮೇಲಾ? ನಿನ್ನ ದುಡ್ಡು ಮತ್ತು ಕೀರ್ತಿಯ ಆಧಾರದ ಮೇಲಾ? ಹಾಗೇನೇ ನಿನ್ನ ಗೆಲುವನ್ನು ಯಾರು ಗುರುತಿಸಬೇಕು ಅಂತ ಬಯಸುತ್ತೀಯ ಎಂಬುದನ್ನು ತೀರ್ಮಾನಿಸಿಕೋ. ನೀನಾ? ನಿನ್ನವರಾ? ಸುತ್ತಲಿನ ಜನವಾ? ನಿನ್ನ ಯಶಸ್ಸು ಕಂಡು ಸಂತೋಷಿಸುವವರು ಯಾರು? ನಿನಗೆ ಸಂತೋಷವನ್ನು ಕೊಡದ ಯಶಸ್ಸು ತಗೊಂಡು ಏನು ಮಾಡ್ತೀಯಾ?

ಇಲ್ಲಿ ಕೆಲವು ಪ್ರಶ್ನೆಗಳಿವೆ, ಉತ್ತರಿಸು. ಹೋದ ವರ್ಷದ ವಿಶ್ವಸುಂದರಿ ಯಾರು? ಹೋದ ವರ್ಷದ ವಿಶ್ವ ಶ್ರೀಮಂತ ಯಾರು? ಹೋದ ವರ್ಷದ ಅತ್ಯಂತ ಹೆಚ್ಚು ಸ್ಕೋರ್ ಮಾಡಿದ ಕ್ರಿಕೆಟ್ ಪಟು ಯಾರು? ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಯಾವುದು? ಇತ್ತೀಚೆಗೆ ಸತ್ತ ಭಾರತೀಯ ರಾಷ್ಟ್ರನಾಯಕ ಯಾರು?

ಮತ್ತೆ ಕೆಲ ಪ್ರಶ್ನೆಗಳಿವೆ. ಯೋಚಿಸಿ ಉತ್ತರಿಸು. ನಿನ್ನ ಬದುಕಿನ ಒಂದು ಆನಂದಕರ ಘಟನೆ ಯಾವುದು? ಆತ್ಮೀಯರು ಅಂತ ನೀನು ಅಂದುಕೊಳ್ಳುವ ಮೂವರ ಹೆಸರುಗಳನ್ನು ಹೇಳು. ನಿನ್ನ ಹಾಗೂ ನಿನ್ನ ಅಮ್ಮನ (ಅಥವಾ ಅಪ್ಪನ) ಮಧ್ಯೆ ನಡೆದ ಮರೆಯಲಾಗದ ಘಟನೆ ಯಾವುದು? ನಿನ್ನ ಮೇಲೆ ದಟ್ಟ ಪ್ರಭಾವ ಬೀರಿದ ಮೂರು ಜನರ ಹೆಸರು ಹೇಳು?

ಮೊದಲು ಕೇಳಿದ ಐದು ಪ್ರಶ್ನೆಗಳಿಗೆ ಹೆಚ್ಚು ಕಡಿಮೆ ನಾವ್ಯಾರು ಉತ್ತರಿಸಲಾರೆವು. ಆದರೆ ಆನಂತರ ಕೇಳಿದ ನಾಲ್ಕು ಪ್ರಶ್ನೆಗಳಲ್ಲಿ ಹೆಚ್ಚು ಕಡಿಮೆ ಎಲ್ಲದಕ್ಕೂ ಉತ್ತರ ನೀಡಬಲ್ಲೆವು. ಇದರರ್ಥವೇನು? ನಾವು ಮಹಾನ್ ಸಂಗತಿಗಳು ಅಂದುಕೊಂಡಂಥವ್ಯಾವೂ ನಮಗೆ ಮಹಾನ್ ಸಂಗತಿಗಳಲ್ಲ. ಇದನ್ನು ಅರ್ಥ ಮಾಡಿಕೊಳ್ಳುವುದೇ ಶಾಂತಿ.

ಒಂದು ಕಥೆ ಹೇಳ್ತೀನಿ ಕೇಳಿ: ವ್ಯಾಪಾರದಲ್ಲಿ ತುಂಬ ನಷ್ಟವಾಗಿ ದಿಗಿಲಿಗೆ ಬಿದ್ದ ಒಬ್ಬ ತಂದೆಯ ಬಳಿಗೆ ಆತನ ಮಗಳು ಬಂದು ಹುಟ್ಟುಹಬ್ಬದ ಗಿಫ್ಟು ಅಂತ, ಬಂಗಾರ ಬಣ್ಣದ ಚಿನ್ನಾರಿ ಪೇಪರಿನಲ್ಲಿ ಸುತ್ತಿದ ಒಂದು ಪ್ಯಾಕೆಟ್ ಕೊಡುತ್ತಾಳೆ. ಮೊದಲೇ ದುಡ್ಡಿಲ್ಲ. ಅಂಥದರಲ್ಲಿ ಮಗಳು ಇದ್ಯಾಕೆ ಅನವಶ್ಯಕ ಖರ್ಚು ಮಾಡಿದಳೋ ಅಂದುಕೊಂಡ ಆತ ಪ್ಯಾಕೆಟ್ ಬಿಚ್ಚುತ್ತಾನೆ. ನೋಡಿದರೆ ಪ್ಯಾಕೆಟ್ ನಲ್ಲಿ ಏನು ಇಲ್ಲ. ಖಾಲಿ! ಮೊದಲೇ ದುಡ್ಡಿಲ್ಲದ ಸ್ಥಿತಿ, ದಿಗಿಲು, ಬೇಸರ. ಅಂಥದರಲ್ಲಿ ಹುಟ್ಟುಹಬ್ಬದ ದಿನ ಮಗಳು ಮಾಡಿದ ಕೆಲಸ ನೋಡಿ ಮೈಯುರಿದುಕೊಂಡು ಬಂದು ಕೆನ್ನೆ ತೆದುರಿ ಹೋಗುವಂತೆ ಹೊಡೆದ. ಆಮೇಲೆ ಮಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, "ಹಾಗೆಲ್ಲ ಖಾಲಿ ಪ್ಯಾಕೆಟ್ ಕೊಡಬಾರದು ಮಗಳೇ" ಅಂತ ಸಮಾಧಾನ ಮಾಡಲು ಮುಂದಾದ.

"ಅದು ಖಾಲಿ ಪ್ಯಾಕೆಟ ಅಲ್ಲ ಪಪ್ಪಾ, ಅದರ ತುಂಬ ನನ್ನ ಮುತ್ತುಗಳಿವೆ" ಅಂದಳಂತೆ ಮಗಳು.

ಮನುಷ್ಯನ ಬದುಕು ಕೂಡ ಅಂಥ ಪ್ಯಾಕೆಟ್ ನಂತಹುದು. ಸುತ್ತೂ ಬಂಗಾರವಿದೆಯಾ, ವಜ್ರಗಳಿವೆಯಾ ಅನ್ನೋದಲ್ಲ ಪ್ರಶ್ನೆ. ಒಳಗೇನಿದೆ? ಅದು ಪ್ರಶ್ನೆ. ಅದೇ ಮನಶ್ಶಾಂತಿ!

(ಇದು ಯಂಡಮೂರಿ ವೀರೇಂದ್ರನಾಥ ಬರೆದದ್ದು. ಇಷ್ಟವಾಯ್ತು ಅಂತ ನಿಮಗೆ ಓದಲು ಕೊಟ್ಟೆ.)

(ಸ್ನೇಹಸೇತು : ಹಾಯ್ ಬೆಂಗಳೂರು)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more