ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹದ್ದೂರ್ ಶೇಷಗಿರಿರಾಯರಿಗೆ ಗುರುವಂದನೆ

By Staff
|
Google Oneindia Kannada News

Bahaddur Sheshagiri Rao
ವಿದ್ಯಾರ್ಥಿ ಜೀವನದಲ್ಲಿ ಗುರುಗಳ ಪಾತ್ರ ಹಿರಿದು. ಅಂದಿನ ಕಾಲದಲ್ಲಿ ಹಿಡಿದು ಕೂಡಿಸಿ ಪಾಠ ಹೇಳಿದ್ದು, ಕಿವಿಹಿಂಡಿ ಬುದ್ಧಿ ಹೇಳಿದ್ದು, ತಿದ್ದಿತೀಡಿದ್ದು ಇಂದಿಗೂ ನೆನಪಿನಲ್ಲಿರುತ್ತದೆ. ಅಂಥ ಗುರುಗಳಲ್ಲೊಬ್ಬರಾದ ಬಳ್ಳಾರಿಯ ಬಹದ್ದೂರ್ ಶೇಷಗಿರಿರಾಯರನ್ನು ಅವರಡಿ ಕಲಿತ ರವಿ ಬೆಳಗೆರೆ ಮತ್ತಿತರ ವಿದ್ಯಾರ್ಥಿಗಳು ನವೆಂಬರ್ 16ರಂದು ಸನ್ಮಾನಿಸುತ್ತಿದ್ದಾರೆ. ಸಮಾರಂಭವನ್ನು ಅವಿಸ್ಮರಣೀಯಗೊಳಿಸಲು ಎಲ್ಲ ಹಳೆಯ ವಿದ್ಯಾರ್ಥಿಗಳು ಬರಬೇಕೆಂದು ಬೆಳಗೆರೆ ಆಹ್ವಾನಿಸಿದ್ದಾರೆ.

* ರವಿ ಬೆಳಗೆರೆ

ಬಳ್ಳಾರಿ ನಗರದ ಪ್ರತಿ ಪ್ರಜೆಗೂ ಚಿರಪರಿಚಿತವಾದ ಹೆಸರು ಗೌರವಾನ್ವಿತ ಬಹದ್ದೂರ್ ಶೇಷಗಿರಿರಾಯರದು. ಅವರು ಬಳ್ಳಾರಿಯ ಮುನಿಸಿಪಲ್ ಹೈಸ್ಕೂಲಿನ (ಆನಂತರ ಅದು ಮುನಿಸಿಪಲ್ ಕಾಂಪೋಸಿಟ್ ಜೂನಿಯರ್ ಕಾಲೇಜ್ ಆಯಿತು) ಹೆಡ್ಮಾಸ್ಟರ್ ಹಾಗೂ ಪ್ರಿನ್ಸಿಪಾಲ್ ಆಗಿ ಅನೇಕ ವರ್ಷ ಸೇವೆ ಸಲ್ಲಿಸಿದರು. ಆ ದಿನಗಳಲ್ಲಿ ಬಳ್ಳಾರಿಯಲ್ಲಿದ್ದದ್ದು ಕೆಲವೇ ಹೈಸ್ಕೂಲುಗಳು. ಮುನಿಸಿಪಲ್ ಹೈಸ್ಕೂಲ್, ವಾರ್ಡ್ಲಾ ಹೈಸ್ಕೂಲ್, ಶೆಟ್ರ ಗುರುಶಾಂತಪ್ಪ ಹೈಸ್ಕೂಲ್, ಮುಸ್ಲಿಂ ಹೈಸ್ಕೂಲ್ ಮತ್ತು ಗರ್ಲ್ಸ್ ಹೈಸ್ಕೂಲ್. ವಿಪರೀತವಾದ ಸಂಖ್ಯೆಯ ವಿದ್ಯಾರ್ಥಿಗಳಿದ್ದ ಮುನಿಸಿಪಲ್ ಹೈಸ್ಕೂಲನ್ನು ಬಂದರ್ ದೊಡ್ಡಿ (ಪಿಂಜರಾಪೋಲು) ಅಂತಲೇ ಕರೆಯುತ್ತಿದ್ದರು. ಬಹದ್ದೂರ್ ಶೇಷಗಿರಿರಾಯರು ಅಂಥ ಮುನಿಸಿಪಲ್ ಹೈಸ್ಕೂಲಿಗೆ ಹೆಡ್ಮಾಸ್ಟರ್ ಆದ ಮೇಲೆ ಶಾಲೆಗೊಂದು ಶಿಸ್ತು ಬಂತು. ಕಾಲಾಂತರದಲ್ಲಿ ದೊಡ್ಡ ಹೆಸರೂ ಆಯಿತು.

ಈಗ ಸಚಿವರಾಗಿರುವ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಬಳ್ಳಾರಿಯ ಶಾಸಕ ಸೋಮಶೇಖರ ರೆಡ್ಡಿಯಾದಿಯಾಗಿ ನಾವು ಸಾವಿರಾರು ವಿದ್ಯಾರ್ಥಿಗಳು ಅವರ ಕೈಯಲ್ಲಿ ರೂಪುಗೊಂಡವರು, ಬೆಳೆದವರು. ಇವತ್ತಿಗೂ ಬಹದ್ದೂರ್ ಶೇಷಗಿರಿರಾಯರ ಹೆಸರು ಕಿವಿಗೆ ಬಿದ್ದರೆ ಒಂದು ಶ್ರದ್ಧೆ, ಗೌರವ, ಚಿಕ್ಕ ಭಯ ಮತ್ತು ತಣ್ಣನೆಯ ಭಾವ ನಮ್ಮೆಲ್ಲರನ್ನೂ ಆವರಿಸಿಕೊಳ್ಳುತ್ತದೆ.

ಅಂಥ ಹಿರಿಯರಾದ ಬಹದ್ದೂರ್ ಶೇಷಗಿರಿರಾಯರಿಗೆ ಈಗ ಎಂಬತ್ತಾರರ ಇಳಿವಯಸ್ಸು. ಮೊನ್ನೆ ಮೊನ್ನೆಯಷ್ಟೆ ಹೃದ್ರೋಗ ಸಂಬಂಧಿ ಆಪರೇಶನ್ ಮಾಡಿಸಿಕೊಂಡಿದ್ದಾರೆ. ಆದರೂ ಅವರ ಅದೇ ಸರಳತೆ, ಶಿಸ್ತು, ಪ್ರಾಮಾಣಿಕತೆ, ನೇರವಂತಿಕೆ ಬದಲಾಗಿಲ್ಲ. ವಿದ್ಯಾರ್ಥಿಗಳ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಸೈಕಲ್ಲಿಗೆ ಚೀಲ ನೇತುಹಾಕಿಕೊಂಡು ಹೊರಟು ಬಿಡುವ ಉಮ್ಮೇದಿ ಇವತ್ತಿಗೂ ಇದೆ.

ಅವರು ರೂಪಿಸಿದ ಮುನಿಸಿಪಲ್ ಹೈಸ್ಕೂಲಿನ ವಿದ್ಯಾರ್ಥಿಗಳಾದ ನಾವು ಇವತ್ತು ಸಮಾಜದ ವಿವಿಧ ರಂಗಗಳಲ್ಲಿ ನಮ್ಮದೇ ಆದ ರೀತಿಯಲ್ಲಿ ಬೆಳೆದಿದ್ದೇವೆ. ಇವತ್ತು ನಾವೇನಾದರೂ ಆಗಿದ್ದರೆ, ಅದಕ್ಕೆ ಕಾರಣ ನಮ್ಮ ಬಹದ್ದೂರ್ ಸರ್. ಅಂಥ ಹಿರಿಯರನ್ನು ಗೌರವಿಸುವುದು ಅವರ ಶಿಷ್ಯರಾದ ಮತ್ತು ಬಳ್ಳಾರಿಗರಾದ ನಮ್ಮ ಹೊಣೆ. ಅವರ ಶಿಷ್ಯರಲ್ಲಿ ಕೆಲವರಾದ ನಾವು ಸಾಕಷ್ಟು ಪ್ರಯಾಸಪಟ್ಟು ಇಂಥದೊಂದು ಚಿಕ್ಕ ಗೌರವವನ್ನು ಸ್ವೀಕರಿಸಬೇಕೆಂದು ಬಹದ್ದೂರ್ ಶೇಷಗಿರಿರಾಯರನ್ನು ಒಪ್ಪಿಸಿದ್ದಾಗಿದೆ. ನವೆಂಬರ್ 16, 2008ರ ಸಂಜೆ 6 ಗಂಟೆಗೆ ಬಳ್ಳಾರಿಯ ಗಾಂಧೀಭವನ (ಬಹದ್ದೂರ್ ಅವರು ತಮ್ಮ ಮಿತ್ರರೊಂದಿಗೆ ಸೇರಿ ಕಟ್ಟಿದ ಮಲ್ಲಸಜ್ಜನ ವ್ಯಾಯಾಮಶಾಲೆಯ) ಆವರಣದಲ್ಲಿ ಬಹದ್ದೂರ್ ಶೇಷಗಿರಿರಾಯ ದಂಪತಿಗಳನ್ನು ಸನ್ಮಾನಿಸುತ್ತಿದ್ದೇವೆ. ಎಲ್ಲ ರೀತಿಯಿಂದಲೂ ರಾಜಕೀಯವಾಗಿ ಮುಕ್ತವಾದ ಈ ಸನ್ಮಾನ ಸಮಾರಂಭದಲ್ಲಿ ಯಾರೇ ಪಾಲ್ಗೊಂಡರೂ, ಅವರು ಕೇವಲ ಬಹದ್ದೂರ್ ಶೇಷಗಿರಿರಾಯರ ವಿದ್ಯಾರ್ಥಿಗಳಾಗಿ ಭಾಗವಹಿಸುತ್ತಾರೆ.

ನನ್ನ ವಿನಂತಿಯೆಂದರೆ, ಮುನಿಸಿಪಲ್ ಹೈಸ್ಕೂಲಿನಲ್ಲಿ ಕಲಿತು ಈಗ ಬೇರೆ ಬೇರೆ ಊರುಗಳಲ್ಲಿ, ಹುದ್ದೆಗಳಲ್ಲಿ ಇರಬಹುದಾದ ತಾವು ನವೆಂಬರ್ 16, 2008ರಂದು ಭಾನುವಾರ ಹೇಗಾದರೂ ಬಿಡುವು ಮಾಡಿಕೊಂಡು ಬಳ್ಳಾರಿಗೆ ಬರಬೇಕು. ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಬದುಕಲು ಕಲಿಸಿದ ಗುರುವಿಗೊಂದು ನಮಸ್ಕಾರ ಸಲ್ಲಿಸಬೇಕು. ಸನ್ಮಾನ ಸಮಾರಂಭದ ಜೊತೆಗೆ ಅಂತು ವೇದಿಕೆಯ ಮೇಲೆ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಬಿ.ಆರ್.ಛಾಯಾ ತಮ್ಮ ತಂಡದೊಂದಿಗೆ ಮಧುರ ಗೀತೆಗಳನ್ನು ಹಾಡುತ್ತಾರೆ. ಅದರ ನಿರೂಪಣೆ-ನಿರ್ವಹಣೆಯನ್ನು ನಾನು ನಡೆಸಿಕೊಡುತ್ತೇನೆ. ತಮ್ಮೆಲ್ಲರಿಗೂ ಸ್ವಾಗತ.

(ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X