ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವಾ... ದೇಹವೂ ಮೂಳೆ ಮಾಂಸದ ಗಡಿಗೆ!

By ರವಿ ಬೆಳಗೆರೆ
|
Google Oneindia Kannada News

Eating habits die hard
ದೇಹದ ಸ್ಪೆಶಾಲಿಟಿಯೆಂದರೆ, ಕೆಲವು ಮುದ್ದುಗಳಿಗೆ ಅದು ಬಲು ಬೇಗನೆ ಅಡಿಕ್ಟ್ ಆಗಿಬಿಡುತ್ತದೆ. ನೀವು ಗಮನಿಸಿ ನೋಡಿ, ಕೇಸರಿಭಾತ್ ನಲ್ಲಿ ಗೋಡಂಬಿ, ವಾಂಗಿಭಾತ್ ನಲ್ಲಿ ಕಳ್ಳೇಬೀಜ ಮುಂತಾದವು ಸಿಕ್ಕಾಗ ಅವು ಆರೋಗ್ಯಕ್ಕೆ ಒಳ್ಳೇಯದಲ್ಲ ಎಂದು ಗೊತ್ತಿದ್ದರೂ ಪಕ್ಕಕ್ಕೆ ಎತ್ತಿಡಲು ಮನಸ್ಸಾಗುವುದಿಲ್ಲ. ಆಕಸ್ಮಾತ್ ಡಾಕ್ಟರ್ ಮುಖ ನೆನಪಾದರೆ ಒಂದೋ ಎರಡೋ ಎತ್ತಿ ಪಕ್ಕಕ್ಕಿಟ್ಟು ಉಳಿದಿಷ್ಟನ್ನೂ ತಿಂದು ಮುಗಿಸುತ್ತೇವೆ.

* ರವಿ ಬೆಳಗೆರೆ

ಏನೂ ಮಾಡದೆ, ಏನೇನೂ ಮಾಡದೆ ಆಗಿಹೋಗುವುದು ಅಂದರೆ ವಯಸ್ಸು. ಮೊನ್ನೆಯಷ್ಟೆ ಇಪ್ಪತ್ತೈದಾಗಿತ್ತು. ಇವತ್ತು ಐವತ್ತು. ಅದಕ್ಕೊಸ್ಕರ ನಾವು ಮಾಡಿದ್ದೇನಾದರೂ ಇದೆಯಾ ಅಂತ ನೋಡಿದರೆ, ಏನೇನೂ ಇಲ್ಲ. Of course ಸುಮ್ಮನೆ ಅವಡುಗಚ್ಚಿಕೊಂಡು ಬದುಕುವುದೂ ಒಂದು ಸಾಧನೆಯೇ. ನಾನದನ್ನು ಗೌರವಿಸುತ್ತೇನೆ. ಎಂಬತ್ತು, ತೊಂಬತ್ತು ವರ್ಷ ವಯಸ್ಸಾದವರನ್ನು ನೋಡಿದಾಗ ನಿಜವಾದ ಗೌರವ ಹುಟ್ಟುತ್ತದೆ.

ಆದರೆ ಆಗಿ ಹೋದ ಐವತ್ತು ವರ್ಷಗಳ ಕುರಿತು ಯೋಚಿಸಿದಾಗ ಆ ಪೈಕಿ ತುಂಬ ವರ್ಷಗಳನ್ನು ವೃಥಾ ಕಳೆದುಬಿಟ್ಟೆ ಅಂತ ಮರುಗುವಂತಾಗುತ್ತದೆ. "ಐದು ವರ್ಷ ಪ್ರೀತಿಸಿದ ಹುಡುಗ ಕಳೆದುಹೋದ ಅನ್ನುವುದಕ್ಕಿಂತ, ಅಂಥವನ ಮೇಲೆ ಐದು ವರ್ಷ ಕಳೆದುಬಿಟ್ಟೆನಲ್ಲ ಅಂತ ನೋವಾಗುತ್ತದೆ" ಎಂದು ಸಂಕಟ ಪಟ್ಟಿದ್ದಳು ಒಬ್ಬ ಹುಡುಗಿ. ಅಂಥ ಸಂಕಟಗಳು, ಹಲುಬುವಿಕೆಗಳು ನನಗೆ ಅವೆಷ್ಟಿವೆಯೋ.

ಚಿಕ್ಕವನಿದ್ದಾಗ ಈ ದೇಹ ಹೀಗಿರಲಿಲ್ಲ. ತೆಳ್ಳಗಿದ್ದೆ. ಕಸುವಾಗಿದ್ದೆ, ಆಕ್ಟಿವ್ ಆಗಿದ್ದೆ. ಊರಿಂದ ಊರಿಗೆ ಸೈಕಲ್ಲು ತುಳಿಯುತ್ತಿದ್ದೆ. ಸಲೀಸಾಗಿ ಸ್ವಿಮ್ಮಿಂಗ್ ಪೂಲ್ ನ lengthಗಳನ್ನು ಈಜುತ್ತಿದ್ದೆ. ಆದರೆ ಇವತ್ತು ಐವತ್ತು ಮೆಟ್ಟಿಲು ಹತ್ತಿದರೆ ತೇಕು. ಅದ್ಯಾವಾಗ ಈ ದೇಹಕ್ಕೆ ಇಷ್ಟು ವಯಸ್ಸಾಯಿತು? ಈ ಪರಿ ಬಾತುಕೊಂಡಿದ್ದು ಯಾವಾಗ? ಹಣೆಯ ಮೇಲಿನ ಈ ಗೆರೆಯ ಹೊಸದಲ್ಲವೇ? ಕೆನ್ನೆಯ ಈ ಸುಕ್ಕು? ಕನ್ನಡಿಯ ಮುಂದೆ ಬೆತ್ತಲೆ ನಿಲ್ಲಲು ಸಂಕೋಟವಾಗುತ್ತದೆ. ಜಮೆಯಾದ ಇದಿಷ್ಟೂ ಭಾರವನ್ನ, ಮಾಂಸವನ್ನ, ಕೊಬ್ಬನ್ನ, ಶನಿಯಂಥ ನನ್ನದೇ ಮೈಯನ್ನ ಇಳಿಸಿಕೊಳ್ಳುವುದು ಹೇಗೆ? ಯಾವಾಗ? ಮತ್ತೆ ಇಪ್ಪತೈದಕ್ಕೆ ಮನಸ್ಸು ಮರುಳಬಹುದೇನೋ? ದೇಹ ಮರಳಲು ಆದೀತೇ? ಮಾನವ ಮಾಂಸದ ತಡಿಕೇ ಅಂತ ಹಾಡಿದ ಕವಿ ತುಂಬ ತೆಳ್ಳಗಿದ್ದಿರಬೇಕು. ನಮ್ಮಂಥವರ ಸೈಜುಗಳನ್ನು ನೋಡಿದ್ದಿದ್ದರೆ ಮೂಳೆ ಮಾಂಸದ ಗಡಿಗೆ ಅನ್ನುತ್ತಿದ್ದನೇನೋ?

ದೇಹದ ಸ್ಪೆಶಾಲಿಟಿಯೆಂದರೆ, ಕೆಲವು ಮುದ್ದುಗಳಿಗೆ ಅದು ಬಲು ಬೇಗನೆ ಅಡಿಕ್ಟ್ ಆಗಿಬಿಡುತ್ತದೆ. ನೀವು ಗಮನಿಸಿ ನೋಡಿ, ಕೇಸರಿಭಾತ್ ನಲ್ಲಿ ಗೋಡಂಬಿ, ವಾಂಗಿಭಾತ್ ನಲ್ಲಿ ಕಳ್ಳೇಬೀಜ ಮುಂತಾದವು ಸಿಕ್ಕಾಗ ಅವು ಆರೋಗ್ಯಕ್ಕೆ ಒಳ್ಳೇಯದಲ್ಲ ಎಂದು ಗೊತ್ತಿದ್ದರೂ ಪಕ್ಕಕ್ಕೆ ಎತ್ತಿಡಲು ಮನಸ್ಸಾಗುವುದಿಲ್ಲ. ಆಕಸ್ಮಾತ್ ಡಾಕ್ಟರ್ ಮುಖ ನೆನಪಾದರೆ ಒಂದೋ ಎರಡೋ ಎತ್ತಿ ಪಕ್ಕಕ್ಕಿಟ್ಟು ಉಳಿದಿಷ್ಟನ್ನೂ ತಿಂದು ಮುಗಿಸುತ್ತೇವೆ. ಭರ್ತಿ ಊಟವಾದ ಮೇಲೆ ಡೆಸರ್ಟು ಎಂಬ ಘೋಷಣೆ ಕೇಳಿಸುತ್ತದೆ. ಹಿಮಾಲಯದಷ್ಟು ತಣ್ಣಗಿನ ಐಸ್ ಕ್ರೀಮು, ದೀಪಿಕಾ ಪಡಕೋಣೆಯಷ್ಟು hot ಆಗಿರೋ ಗುಲಾಬ್ ಜಾಮೂನು. ಯಾವನಿಗೆ ನೆನಪಾಗುತ್ತದೆ ಡಾಕ್ಟರನ ಮುಖ? ನಾವೇನು ದಿನಾ ತಿಂತೇವಾ? once in a way ಈ ಥರದ ಬಿಂಜ್ ಇದ್ದರೆ ಅಪಾಯವಲ್ಲ ಬಿಡು ಅಂತ ನಮಗೆ ನಾವೇ ಹೇಳಿಕೊಂಡು ಐದು ಯಃಕಶ್ಚಿತ್ ನಿಮಿಷಗಳಲ್ಲಿ ಡೆಸರ್ಟು ಮುಗಿಸಿ ಪ್ಲೇಟನ್ನು ಮರುಳುಗಾಡಿನಂತಾಗಿಸಿ ತಿನ್ನಕ್ಕೆ ಇನ್ನೂ ಏನಾದರೂ ಇದೆಯಾ ಅಂತ ಕಣ್ಣಾಡಿಸುತ್ತಿರುತ್ತೇವೆ.

ನಮ್ಮ ದೇಹ ಇಂಥ ಮುದ್ದುಗಳಿಗೆ, once in a wayಗಳಿಗೆ ಬಲು ಬೇಗ ಅಡಿಕ್ಟ್ ಆಗಿಬಿಡುತ್ತದೆ. ಅದು ಕೇವಲ ಬಾಯಿ ಚಪಲವಲ್ಲ. ದೇಹವೆಂಬುದು ಆಹಾರ ಕಣ್ಣಿಗೆ ಬಿದ್ದಾಗ ಸಿಹಿಗಾಗಿ, ಕೊಬ್ಬಿಗಾಗಿ, ರುಚಿರುಚಿಯಾದ ಕೊಬ್ಬರಿ ಚಟ್ನಿಗಳಿಗಾಗಿ, ಫೈಬರ್ರೆ ಇಲ್ಲದ ಅಪ್ಪಟ ಮಾಂಸಕ್ಕಾಗಿ, ಮೊಸರಿಗಾಗಿ, ಕೆನೆಗಾಗಿ ಹಾತೊರೆದುಬಿಡುತ್ತದೆ. ಲೈಂಗಿಕ urgeಗಿಂತಲೂ ನೂರು ಪಟ್ಟು, ಸಾವಿರಪಟ್ಟು ತೀವ್ರವಾಗಿ ದೇಹದೊಳಗಿನಿಂದ ಹುಟ್ಟಿಕೊಳ್ಳುವ ಕೊಳಕುಬಾಕ ಚಪಲ ಸುಲಭಕ್ಕೆ ನಿಯಂತ್ರಣಕ್ಕೊಳಗಾಗುವುದಿಲ್ಲ.

ಒಬ್ಬರೇ ಇದ್ದಾಗ ನೋಡಿ ಅಸಹ್ಯಿಸಿಕೊಳ್ಳುತ್ತಿರುತ್ತೇವೆ, ಇದೇನಿದು ನೋಡ್ ನೋಡ್ತ ಇಷ್ಟು ದಪ್ಪವಾಗಿಬಿಟ್ಟೆ ಅಂದುಕೊಳ್ಳುತ್ತಿರುತ್ತೇವೆ. ಸ್ನಾನದ ಮನೆಯಲ್ಲಿ ಉದ್ದೋ ಉದ್ದಕ್ಕೆ ನಿಂತರೆ ಹೊಟ್ಟೆ ಅಡ್ಡ ಬಂದು, ಪಾದ ಕಾಣಿಸುವುದಿಲ್ಲ. ಎಲ್ಲಿಂದ ಬಂದು ಸೇರಿಕೊಂಡಿತೋ ಈ ದರಿದ್ರ ಬೊಜ್ಜು ಅಂತ ರೇಗಿಸಿಕೊಳ್ಳುತ್ತೇವೆ. ಗೋಡಂಬಿ, ಕಳ್ಳೇಬೀಜ, ಡೆಸರ್ಟು, ಜಾಮೂನುಗಳ ಸನ್ನಿಧಿಯಲ್ಲಿ ನಾವು ಮುದ್ದು ಮಾಡುವುದು ಅದೇ ದರಿದ್ರ ಬೊಜ್ಜನ್ನ. ಅದೇನೂ ಪಾಪ, ರಾತ್ರೋರಾತ್ರಿ ಬೆಳೆದು ಅರಳಿದಂತಹುದಲ್ಲ. ಡಾಕ್ಟರುಗಳು ಹೇಳುವ ಪ್ರಕಾರ (?) ಮೊದಲು ನಾವು ತಿಂದ ಕೊಬ್ಬು ಹೋಗಿ ಸೇರಿಕೊಳ್ಳುವುದು ಕಣ್ಣಿನ ಹಿಂಭಾಗದಲ್ಲಂತೆ, ಆಮೇಲೆ ಅದು ಗಂಟಲು ಸೇರಿಕೊಳ್ಳುತ್ತದೆಯಂತೆ, ನಾವು ನೋಡೋಕೆ ತೆಳ್ಳಗಿರಬಹುದು. ಆದರೆ ಕೊಬ್ಬಿನ ಪದರಗಳು ಆಲದ ಎಲೆಗಳಂತೆ ಒಂದರ ಕೆಳಗೊಂದು ಮಟ್ಟಸವಾಗಿ ಕೊರಳಲ್ಲಿ ಸೇರಿಕೊಂಡು ಬಿಡುತ್ತವಂತೆ. ಹೀಗಾಗಿ ನಾವು ನಿದ್ರೆಯಲ್ಲಿ ಅಂಗಾತ ಮಲಗಿ deep ಆಗಿ ಉಸಿರಾಡಿದಾಗ, ಗಾಳಿಯ ಹೊಡೆತಕ್ಕೆ ಎಲೆಗಳಂತಹ ಆ ಕೊಬ್ಬಿನ ಪದರುಗಳ ಥರಥರನೆ ನಡುಗಿ ಶಬ್ಧ ಹೊರಡಿಸುತ್ತವೆಯಂತೆ. ಅದನ್ನೇ ನಾವು ಗೊರಕೆ ಅನ್ನೋದು. ಹೀಗೆ ಕಣ್ಣು, ಗಂಟಲುಗಳಲ್ಲಿ ಮೊದಲು ಸೆಟ್ಲಾದ ಕೊಬ್ಬು ಆಮೇಲೆ ಎದೆ, ಸ್ತನ, ಹೊಟ್ಟೆ, ಕಿಬ್ಬೊಟ್ಟೆ, ಸೊಂಟ, ನಿತಂಬ ರಾಮರಾಮಾ ಇಪ್ಪತ್ತೈದು ವರ್ಷಗಳ ಹಿಂದೆ ಹೇಗೆ ಬಳುಕುತ್ತಿದ್ದವರು ಹೇಗಾಗಿ ಬಿಟ್ಟವಲ್ಲಾ ಅಂದುಕೊಳ್ಳುವಂತೆ ಮಾಡುತ್ತವಾದರೂ, ತಿಂದ ಗೋಡಂಬಿ, ಕಳ್ಳೇಬೀಜ, ಚಿಪ್ಸು, ಬೋಂಡ, ಡೆಸರ್ಟು, ಜಾಮೂನುಗಳ ಕೌಂಟ್ ಮರೆತುಹೋಗಿರುತ್ತದೆ.

ನಾನು ಕೆಲವು ದಿನ ಬೊಜ್ಜು ಇಳಿಸುವ ಶ್ರೀಮಂತರ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಗಾಧ ಗಾತ್ರದ ಹೊಟ್ಟೆ ನೇತು ಹಾಕಿಕೊಂಡು ಬರುತ್ತಿದ್ದ ಜನ ಅಲ್ಲಿ ಹದಿನೈದು ದಿನ ಅವಡುಗಚ್ಚಿ ಇದ್ದು, ಏಳೆಂಟು ಕೇಜಿ ತೂಕ ಕೊಡವಿಕೊಂಡು ಅಬ್ಬ ಅನ್ನುತ್ತ ಹೊರಬೀಳುತ್ತಿದ್ದರು. ಆದರೆ ಆರೇ ತಿಂಗಳಲ್ಲಿ ಮತ್ತದೇ ಹೊಟ್ಟೆ ನೇತಾಡಿಸಿಕೊಂಡು ಹಿಂತಿರುಗುತ್ತಿದ್ದರು. ಕಾರಣವೇನು ಅಂತ ಕೇಳಿದರೆ, ಇಲ್ಲಿ ಹದಿನೈದು ದಿನ ಬಾಯಿ ಕಟ್ಟಿದ್ದರಲ್ಲ? ಆ ಸೇಡನ್ನು ಮನೆಗೆ ಹೋದ ತಕ್ಷಣ ತೀರಿಸಿಕೊಂಡಿರುತ್ತಿದ್ದರು, ನೂರು ಹದಿನೈದು ದಿನ.

ಕೂಡುವುದು ಕುರ್ಚಿಯ ಮೇಲೆಯೇ ಆದರೂ ಪದ್ಮಾಸನ ಹಾಕಿಕೊಂಡು ಕೂತು ಬರೆಯುವುದು ನನ್ನ ರೂಢಿ. ಯಾವಾಗ ಪದ್ಮಾಸನ ಹಾಕಿಕೊಳ್ಳಲಾಗದಷ್ಟು ಹೊಟ್ಟೆ ಬಾತುಕೊಂಡಿತೋ, ನಾನು ಬಾಯಿ ಕಟ್ಟತೊಡಗಿದೆ. ಬಿಡುವು ಸಿಕ್ಕಾಗಲೆಲ್ಲಾ ನಡೆಯತೊಡಗಿದೆ. ಪಾರ್ಟಿಗಳಿಗೆ ಹೋಗುವುದನ್ನು ಆಲ್ ಮೋಸ್ಟ್ ನಿಲ್ಲಿಸಿದೆ. ನಾನು ಊಟಕ್ಕೆ ಕುಳಿತಾಗ ಸ್ವೀಟು ಎತ್ತಿಟ್ಟುಬಿಡಿ ಅಂತ ಕಟ್ಟಪ್ಪಣೆ ಮಾಡಿದೆ. ಮುಖ್ಯವಾಗಿ ಮಾಂಸ ಬಿಟ್ಟೆ. ಅಷ್ಟು ಮಾಡಿದ ಮಾತ್ರಕ್ಕೆ ದೇಹವೇನೂ ಶಿಲ್ಪಾ ಶೆಟ್ಟಿಗೆ ಕಾಂಪೀಟ್ ಮಾಡುವಷ್ಟು ತೆಳ್ಳಗೇನೂ ಆಗಿಲ್ಲ. ಆದರೆ ಗೋಡಂಬಿ, ಕಳ್ಳೇಬೀಜ ಎತ್ತಿಟ್ಟು, ಕೊಬ್ಬರಿ ಚಟ್ನಿ ಇಲ್ಲದಂತೆ ಮಾಡಿಕೊಂಡು ಉಣ್ಣುವುದು ರೂಢಿ ಮಾಡಿಕೊಂಡಾಗಿನಿಂದ ಬಚ್ಚಲು ಮನೆಯಲ್ಲಿ ಪಾದ ಕಾಣತೊಡಗಿದೆ. ಸಾಧನೆಯಲ್ಲವೆ? (ಸ್ನೇಹ ಸೇತು : ಹಾಯ್ ಬೆಂಗಳೂರು)

English summary
Ravi Belagere, Hi Bengaluru editor, writes about the eating habits and unhealthy diets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X