ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂಬಿಸಿಲಿನ ಅಂಜಿಕೆಯಿಲ್ಲದ ಸಂಪಾದಕನ ಕಮಾಲ್

By ಅಂಕಣಕಾರ : ರವಿ ಬೆಳೆಗೆರೆ
|
Google Oneindia Kannada News

Kannada journalist Vishweshwar Bhatಕನ್ನಡದಲ್ಲಿ ಅತಿ ಹೆಚ್ಚು ಬರೆಯೋ ಸಂಪಾದಕರು ಅಂದ್ರೆ ರವಿ ಬೆಳೆಗೆರೆ ಮತ್ತು ವಿಶ್ವೇಶ್ವರ ಭಟ್ಟರು. ವಾರಿಗೆಯ ಮಿತ್ರರು ಎದುರಾದಾಗಲೆಲ್ಲಾ ಇಂಥದೊಂದು ಮಾತನ್ನು ಹೇಳುತ್ತಲೇ ಇರುತ್ತಾರೆ. ಇದು ನಮ್ಮಿಬ್ಬರ ಮೇಲಿನ ಕಂಪ್ಲೆಂಟಾ ಅಥವಾ ಕಾಂಪ್ಲಿಮೆಂಟಾ? ಈ ಯೋಚನೆಯಲ್ಲಿ ನಾನಿದ್ದಾಗಲೇ ಈಚೆಗೆ ಬಿಡುಗಡೆಯಾದ 'ಹೂಬಿಸಿಲಿನ ನೆರಳು', 'ಕಲಾಂ ಕಮಾಲ್', 'ಸಂಪಾದಕ ಅಂದ್ರೆ ಗಂಡ ಇದ್ದಂತೆ' ಹಾಗೂ 'ಅಂಜಿಕೆಯಿಲ್ಲದ ಕರಂಜಿಯಾ' ಎಂಬ ನಾಲ್ಕು ಪುಸ್ತಕಗಳನ್ನು ವಿಶ್ವೇಶ್ವರಭಟ್ಟರು ಕಳಿಸಿಕೊಟ್ಟಿದ್ದಾರೆ.

ವಿಶ್ವನೊಂದಿಗೆ ನನ್ನದು ಕಾರಣಗಳೇ ಇಲ್ಲದ, ಕಾರಣಗಳನ್ನು ಮೀರಿದ ಗೆಳೆತನ. 'ವಿಜಯ ಕರ್ನಾಟಕ'ವೆಂಬ ಬೃಹತ್ ಹಡಗಿನಂಥ ಪತ್ರಿಕೆಯ ನೂರೆಂಟು ಕೆಲಸಗಳ ಮಧ್ಯೆ ಎಲ್ಲರಿಗೂ ಇಷ್ಟವಾಗುವ 'ನೂರೆಂಟು ಮಾತು' ಅಂಕಣವನ್ನು ವಿಶ್ವ ಬರೆಯುತ್ತಾನೆ. ಪತ್ರಿಕೋದ್ಯಮವೆಂಬ ಸುದ್ದಿ ಮನೆಯೊಳಗೆ ದಿನವೂ ನಡೆದುಹೋಗುವ ತಮಾಷೆ, ಸಂಕಟ, ವಿಚಿತ್ರ, ವಿಪರ್ಯಾಸದ ಸಂಗತಿಗಳೆಲ್ಲ ಆತನ 'ಸುದ್ದಿಮನೆ ಕತೆ' ಅಂಕಣದಲ್ಲಿ ಜಾಗ ಪಡೆದುಕೊಳ್ಳುತ್ತವೆ. ಪ್ರತಿ ವಾರವೂ ಹಾಗೆ ಬಂದು, ಹೀಗೆ ಒಂದೆರಡು ಮಾತಾಡಿ, ಯಾವುದೋ ಸಲಹೆ ನೀಡಿ, ಇನ್ಯಾವುದೋ ತಪ್ಪು ತೋರಿಸಿದ ವ್ಯಕ್ತಿಗಳು 'ಜನಗಳ ಮನ' ಎಂಬ ಇನ್ನೊಂದು ಅಂಕಣದಲ್ಲಿ ಪ್ರತ್ಯಕ್ಷರಾಗುತ್ತಾರೆ. ಪ್ರತಿ ಸಂದರ್ಭದಲ್ಲಿ ತುಂಬ ಶ್ರದ್ಧೆಯಿಂದ, ತುಂಬ ಸಹನೆಯಿಂದ ಬರೆಯುತ್ತಾರೆ ವಿಶ್ವೇಶ್ವರ ಭಟ್. ಬೇರೆ ಯಾವುದೋ ಕಾರಣಕ್ಕೆ ಭಟ್ಟರನ್ನು ಟೀಕಿಸುವವರು ಕೂಡ ಅವರ ಬರಹವನ್ನು, ಅಲ್ಲಿ ಕಾಣುವ ಶಿಸ್ತನ್ನು ಖಂಡಿತ ಒಪ್ಪಿಕೊಳ್ಳುತ್ತಾರೆ.

ಈಗ ಬಂದಿರುವ ಪುಸ್ತಕಗಳ ಪೈಕಿ ವಿಪರೀತ ಎನ್ನುವಷ್ಟು ಇಷ್ಟವಾದದ್ದು 'ಹೂಬಿಸಿಲಿನ ನೆರಳು'. ಇದು ವಿಜಯ ಕರ್ನಾಟಕದಲ್ಲಿ ಪ್ರತಿ ಗುರುವಾರ ಪ್ರಕಟವಾಗುವ 'ನೂರೆಂಟು ಮಾತು' ಅಂಕಣದ ನಾಲ್ಕನೇ ಭಾಗ. ಈ ಪುಸ್ತಕದ ಹೆಸರು ಬದಲಿಸಿರುವುದಕ್ಕೆ ವಿಶ್ವ ಹೀಗೆ ವಿವರಣೆ ನೀಡಿದ್ದಾನೆ. 'ಈ ಕೃತಿಗೆ ನೂರೆಂಟು ಮಾತು ಎಂದು ಕರೆಯಬಹುದಿತ್ತು. ಆದರೆ ಪ್ರತಿ ಸಲ ಪುಸ್ತಕ ಮಾಡುವಾಗ ಭಾಗ-1, 2, 3 ಎಂದು ತುಕಡಿ ಮಾಡಬೇಕಾಗುವುದರಿಂದ ಏಕತಾನತೆ ತಪ್ಪಿಸಲು ಬೇರೆ ಶೀರ್ಷಿಕೆ ನೀಡಿದ್ದೇನೆ.....'

ಈ ಪುಸ್ತಕದಲ್ಲಿ ಹೆಸರಿಗೆ ತಕ್ಕಂತೆ ನೂರೆಂಟು ವಿಷಯಗಳಿವೆ. ವಿಶ್ವ, ಪ್ರತಿಯೊಂದನ್ನು ತುಂಬ ಸಂಯಮದಿಂದ, ನಿರುದ್ವಿಗ್ನ ದನಿಯಲ್ಲಿ ಹೇಳುತ್ತ ಹೋಗುತ್ತಾನೆ. ಒಂದೊಂದು ಪ್ರಸಂಗಗಳನ್ನು ಒದುತ್ತ ಒದುತ್ತಲೇ ಯಾಕೋ ಸಂಕಟವಾಗುತ್ತದೆ, ಮತ್ತೊಮ್ಮೆ ಖುಷಿಯಾಗುತ್ತದೆ. ಮರುಕ್ಷಣವೇ ಬೇರೆಯೊಂದು ಕೈ ಜಗ್ಗುತ್ತದೆ. ಕೆಲವು ಸಂದರ್ಭದಲ್ಲಿ ಇಲ್ಲಿ ಬರೆದಿರುವುದೆಲ್ಲ ನಿಜಕ್ಕೂ ನಡೆದಿದೆಯಾ ಎಂದು ನಮ್ಮಷ್ಟಕ್ಕೆ ನಾವೇ ಉದ್ಗರಿಸುವಂತಾಗಿ ಬಿಡುತ್ತದೆ. ಅಂಥ ನಾಲ್ಕಾರು ಪ್ರಸಂಗಗಳನ್ನು ಇಲ್ಲಿ ತೆಗೆದುಕೊಟ್ಟಿದ್ದೇನೆ. ಖಂಡಿತ ನಿಮಗಿಷ್ಟವಾಗಬಹುದು. ಒದಿಕೊಳ್ಳಿ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರ್ ನನ್ನು ಬಗ್ಗುಬಡಿದವರ ಪೈಕಿ ಬ್ರಿಟನ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಗೆ ದೊಡ್ಡ ಸ್ಥಾನ, ಮಹಾಯುದ್ಧ ಮುಗಿದ ನಂತರ ಅದೊಮ್ಮೆ ಮ್ಯಾಂಚೆಸ್ಟರ್ ಗೆ ಹೋಗುತ್ತಾನೆ ಚರ್ಚಿಲ್. ಆತನ ಭಾಷಣ ಕೇಳಲು ಅಲ್ಲಿ ಐವತ್ತು ಸಾವಿರ ಜನ ಸೇರಿರುತ್ತಾರೆ. ಇನ್ನೇನು ವೇದಿಕೆ ಏರಿ ಮಾತು ಆರಂಭಿಸಬೇಕು ಎನ್ನುವಷ್ಟರಲ್ಲಿ ಐದಾರು ಮಹಿಳೆಯರು ಚರ್ಚಿಲ್ ಅವರನ್ನು ಸುತ್ತುವರೆದರು. ಅವರೆಲ್ಲ, ಯುದ್ಧದಲ್ಲಿ ಸತ್ತ ಸೈನಿಕರ ತಾಯಂದಿರು. ಕರುಳಬಳ್ಳಿ ಕಮರಿಹೋದ ದುಃಖವನ್ನು ಹೇಳಿಕೊಳ್ಳತ್ತಾ ಆ ತಾಯಂದಿರು ಗೋಳಾಡಲು ಆರಂಭಿಸಿದಾಗ, ಚರ್ಚಿಲ್ ಕೂಡ ಚಿಕ್ಕ ಮಕ್ಕಳಂತೆ ಬಿಕ್ಕಳಿಸುತ್ತಿದ್ದರು. ಅಷ್ಟೂ ತಾಯಂದಿರನ್ನು ಒಂದೇ ತೆಕ್ಕೆಗೆ ತಬ್ಬಿಕೊಂಡು ಅಳುತ್ತಿದ್ದರು. ಮಾತು ಕಟ್ಟಿತ್ತು. ಕಣ್ಣೀರು ಬರಿದಾಗಿತ್ತು. ಸುತ್ತಲೂ ನೆರೆದಿದ್ದವರ ಕಂಗಳಲ್ಲೂ ದುಃಖದ ನಾವೆ. ಕೆಲ ಸಮಯದ ಬಳಿಕ ವೇದಿಕೆ ಏರಿದ ಚರ್ಚಿಲ್ ಈ ಜನರ ದುಃಖದ ಮುಂದೆ ಮಾತು ಶುಷ್ಕ, ಕ್ಷಮಿಸಿ. ಮಾತನ್ನು ಯಾವಾಗ ಬೇಕಾದರೂ ಹೇಳಬಹುದು, ದುಃಖ ಹಾಗಲ್ಲ. ದುಃಖ ಮಾತಾಡತೊಡಗಿದರೆ ಮಾತು ಸುಮ್ಮನಾಗತೊಡಗುತ್ತದೆ ಎಂದು ಅಲ್ಲಿಂದ ಹೋಗಿಬಿಟ್ಟರು.

ಒಮ್ಮೆ ಜೆಆರ್ ಡಿ ಟಾಟಾ ಅವರನ್ನು ಪ್ರತಿಭಾವಂತ ಯುವಕನೊಬ್ಬ ಭೇಟಿಯಾಗಿ ತಾನು ಐಐಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದಿರುವುದಾಗಿ ಹೇಳಿದ. 'ನಿನ್ನ ಬಯೋಡಾಟ ಕೊಡು' ಎಂದು ಟಾಟಾ ಹೇಳಿದಾಗ ತಕ್ಷಣ ಕೊಟ್ಟ. ಆತನ ಬಯೋಡಾಟಾ ಮತ್ತು ಅರ್ಜಿಯನ್ನು ಕೂಲಂಕಷವಾಗಿ ಓದಿದ ಟಾಟಾ 'ನಿನಗೆ ನೌಕರಿ ಕೊಡುವುದಿಲ್ಲ' ಎಂದು ಸಿಟ್ಟಿನಿಂದ ಹೇಳಿದರು. ಯಾಕೆಂದು ಕೇಳಲು ಧೈರ್ಯವಿಲ್ಲದೆ ಆತ ಹಾಗೇ ನಿಂತಿದ್ದಾಗ ಟಾಟಾ ಹೇಳಿದರು. ನಿನ್ನ ಸಾಧನೆ ಶ್ಲಾಘನೀಯ. ನೀನು ನಿಜಕ್ಕೂ ಬುದ್ಧವಂತನಿದ್ದೀಯ. ಆದರೆ ನಿನ್ನ ಮನಸ್ಥಿತಿ ಬಗ್ಗೆ ನನಗೆ ಮರುಕವಿದೆ. ಹಾಗಾಗಿ ನೌಕರಿ ಕೊಡುವುದಿಲ್ಲ ಅಂದರು. ಈ ಯುವಕ ಆಗಲೂ ಕೆಕರು ಮಕರಾಗಿ ನೋಡುತ್ತ ನಿಂತಿದ್ದ. ಆಗ ಅವನ ಅರ್ಜಿಯನ್ನು ಮುಖಕ್ಕೆ ಹಿಡಿದ ಟಾಟಾ ಅಲ್ಲಿದ್ದ ಒಂದು ಸಾಲನ್ನು ತೋರಿಸಿದರು. 'ದಯವಿಟ್ಟು ನಿಮ್ಮ ಘನ ಸಂಸ್ಥೆಯಲ್ಲಿ ನನಗೊಂದು ನೌಕರಿ ಕೊಡಬೇಕಾಗಿ ಬೇಡಿಕೊಳ್ಳುತ್ತೇನೆ' ಎಂದು ಆತ ಬರೆದಿದ್ದ. ಅದನ್ನೇ ಎರಡೆರಡು ಬಾರಿ ಓದಿದ ಟಾಟಾ 'ಭಿಕ್ಷುಕನ ಹೊರತಾಗಿ ಬೇರೆ ಯಾರಿಗೂ ಬೇಡುವ ಹಕ್ಕಿಲ್ಲ. ನೌಕರಿ ಬೇಡಲು ನೀನು ಭಿಕ್ಷುಕನಲ್ಲ. ನೀನು ಎಂಜನಿಯರ್, ಯಾರನ್ನೂ, ಏನನ್ನೂ ಬೇಡಬಾರದು. ನಮ್ಮದನ್ನು ಕೇಳಿ ಪಡೆಯಬೇಕು. ಆ ಹಕ್ಕು ಎಲ್ಲರಿಗೂ ಇರುತ್ತದೆ. ಇನ್ನು ಮುಂದೆ ಹಾಗೆ ಬರೆಯಬೇಡ, ಭಿಕ್ಷುಕನ ಥರಾ ಬದುಕಬೇಡ' ಎಂದು ಬುದ್ಧಿ ಮಾತು ಹೇಳಿ ನೌಕರಿ ಕೊಟ್ಟರು.

ಸೆಪ್ಟೆಂಬರ್ 1ರಂದು ನ್ಯೂಯಾರ್ಕ್ ನ ಅವಳಿ ಗೋಪುರ ಹಾಗೂ ವಾಷಿಂಗ್ಟನ್ ನ ಪೆಂಟಗಾನ್ ಮೇಲೆ ದಾಳಿ ನಡೆಯುತ್ತಿದ್ದಂತೆಯೇ, ಅಮೆರಿಕದ ಅಧ್ಯಕ್ಷರು ಪ್ರಯಾಣಿಸುವ ಇನ್ನೊಂದು ಏರ್ ಫೋರ್ಸ್ ಒನ್ ಕೂಡ ಭಯೋತ್ಪಾದಕರ ದಾಳಿಗೆ ತುತ್ತಾಗಬಹುದೆಂದು ಭಯಪಡಲಾಗಿತ್ತು. ಅಂದು ಫ್ಲೋರಿಡಾದಿಂದ ವಾಷಿಂಗ್ಟನ್ ಗೆ ಬರುವ ಬದಲು ಅಧ್ಯಕ್ಷ ಜಾರ್ಜ್ ಬುಷ್ ಪ್ರಯಾಣಿಸುತ್ತಿದ್ದ ವಿಮಾನ ಮೂರು ಕಡೆ ಮಾರ್ಗ ಬದಲಿಸಿತು. ಏರಿ ಫೋರ್ಸ್ ಒನ್ ಗೆ ಇರುವಂಥ ಭದ್ರತೆ ಯಾವುದೇ ದೇಶದ ಅಧ್ಯಕ್ಷನಿಗೂ ಇರಲಿಕ್ಕಿಲ್ಲ. ಆಕಾಶದಲ್ಲೂ ಏರ್ ಫೋರ್ಸ್ ಒನ್ ನ್ನು ಆರು ಜೆಟ್ ವಿಮಾನಗಳು ಸುತ್ತುವರಿದಿರುತ್ತವೆ.

ಹೀಗೆ ಅಧ್ಯಾಯದಿಂದ ಅಧ್ಯಾಯಕ್ಕೆ ಹೊಸ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಕ್ಷರಗಳೊಂದಿಗೆ, ಅಂಕಣದೊಂದಿಗೆ ತಮ್ಮ ಪಾಡಿಗೆ ತಾನು ಆಟವಾಡಿದ್ದಾನೆ ವಿಶ್ವ. ಅವನ ಅಂಕಣದಲ್ಲಿ ಜವಾಹರ್ ಲಾಲ್ ರಂಥ ಪ್ರಧಾನಿಯನ್ನೇ ಗಿರಗಿಟ್ಲೆಯ ಥರಾ ಆಡಿಸಿದ ಎಂ.ಓ.ಮಥಾಯ್ ಎಂಬ ಸಮಯಸಾಧಕ ಕಥೆಯಿದೆ. ನಾವು- ನೀವ್ಯಾರೂ ತಿಳಿಯದೇ ಇರುವಂಥ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಜನ್ಮರಹಸ್ಯದ ಅನಾವರಣವಿದೆ. ಅತಿವೃಷ್ಠಿ-ಅನಾವೃಷ್ಠಿಯ ಸಂದರ್ಭವನ್ನೇ ನೆಪಮಾಡಿಕೊಂಡು ನಮ್ಮ ಜನನಾಯಕರು ಹೇಗೆಲ್ಲ ದುಡ್ಡು ಮಾಡಿಕೊಳ್ಳುತ್ತಾರೆ ಎಂಬುದರ ವಿವರಣೆಯಿದೆ. ನೊಬೆಲ್ ಪ್ರಶಸ್ತಿ ಪಡೆದ ಅಲ್ಬರ್ಟ್ ಐನ್ ಸ್ಟಿನ್ ನಂಥ ಮಹಾವಿಜ್ಞಾನಿ ಕೂಡ ಒಂದು ಕಾಲದಲ್ಲಿ ಕೆಲಸವಿಲ್ಲದೆ, ಕೈ ಖರ್ಚಿಗೂ ಕಾಸಿಲ್ಲ ದೈನೇಸಿಯಾಗಿ ಬದುಕು ನಡೆಸಿದ ಎಂಬ ನಂಬಲಾಗದ ಮಾಹಿತಿಯಿದೆ. ತಂದೆಯ ಅಂತಿಮ ಕ್ಷಣಗಳ ಮಧ್ಯೆಯೇ 'ರುದ್ರನೇತ್ರ' ಸಿನಿಮಾಕ್ಕೆ ನಾಯಕ-ನಾಯಕಿಯರ ಸರಸರದ ಸಂಭಾಷಣೆ ಬರೆದ ಯಂಡಮೂರಿ ವೀರೇಂದ್ರನಾಥರ ಬದುಕಿನ ಕಥೆಯಿದೆ. ಭವ್ಯ ಭಾರತದ ರಾಷ್ಟ್ರಪತಿಗಳಾಗಿದ್ದ ವಿ.ವಿ.ಗಿರಿಯವರ ಸಣ್ಣ ಮನಸ್ಸು ಹೇಗಿತ್ತು. ಎಂಬುದಕ್ಕೆ ಸಾಕ್ಷಿಯಿದೆ. ಭಾರತದ ರಾಜಕೀಯದಲ್ಲಿ ಉಲ್ಕೆಯಂತೆ ಮೇಲೇರಿ ಅಷ್ಟೇ ಬೇಗ ನೆಲಕಚ್ಚಿದ ಪ್ರಫುಲ್ಲ ಕುಮಾರ ಮಹಾಂತನ ಒಡೆದುಹೋದ ಬದುಕಿನ ಅಷ್ಟೂ ವಿವರಣೆಯಿದೆ.

ವಿಶ್ವ ಬರೆದ ಇನ್ನೊಂದು ಪುಸ್ತಕದ ಹೆಸರು 'ಸಂಪಾದಕ ಅಂದರೆ ಗಂಡ ಇದ್ದಂತೆ'. ಪತ್ರಿಕೋದ್ಯಮಕ್ಕೆ ಕಾಲಿಡುವ ನವ ತರುಣಿಯರು ಈ ಶೀರ್ಷಿಕೆ ನೋಡಿ ಕಂಗಾಲಾಗುತ್ತಾರೋ ಅಥವಾ ಖುಷಿಯಾಗುತ್ತಾರೋ ಅನ್ನುವುದು ಅವರವರಿಗೆ ಬಿಟ್ಟಿದ್ದು. ವಿಶ್ವೇಶ್ವರ ಭಟ್ಟರು ಅನ್ನಿಸಿದ್ದನ್ನು ಹೇಳಿಯೇ ಬಿಟ್ಟಿದ್ದಾರೆ ; ಸಂಪಾದಕ ಅಂದರೆ ಗಂಡ ಇದ್ದಂತೆ. ಅದರ ಅರ್ಥ ಸಂಪಾದಕ ನಿಷ್ಪ್ರಯೋಜಕನೂ, ನಿರುಪಯೋಗಿಯೂ ಎಂದು ಪತಿವ್ರತಾ ಶಿರೋಮಣಿಯರು ಭಾವಿಸಬೇಕಾಗಿಲ್ಲ. ಭಟ್ಟರು ಆ ಮಟ್ಟಿಗೆ ಬಿ.ಆರ್. ಲಕ್ಷ್ಮಣರಾಯರಷ್ಟೇ ತುಂಟರು. ಹೆಂಗಸರಿಗೆ ಏನು ಬೇಕು ಎಂದು ತಿಳಿದುಕೊಳ್ಳುವುದು ಸಂಪಾದಕನಿಗೂ ಸಾಧ್ಯ ಆಗುವುದಿಲ್ಲ. ಹೀಗಾಗಿ ಸಂಪಾದಕ ಅಂದರೆ ಗಂಡ. ಹಾಗಿದ್ದರೆ ಸಂಪಾದಕಿ ಅಂದರೆ ಹೆಂಡತಿ ಇದ್ದ ಹಾಗೆಯೋ, ಉಪಸಂಪಾದಕಿ ಉಪಪತ್ನಿಯೋ, ಸ್ಥಾನಿಕ ಸಂಪಾದಕ ಎಂದರೆ ಯಾರಿರಬಹುದು ಎಂದು ಭಟ್ಟರ ಕಾಲೆಳೆಯುವ ಮನಸ್ಸಾಗುತ್ತದೆ. ಆದರೆ ಪುಸ್ತಕ ಅದಕ್ಕೆ ಅವಕಾಶ ಕೊಡುವುದಿಲ್ಲ. ಭಟ್ಟರು ಅಷ್ಟು ಸೊಗಸಾಗಿ ಪತ್ರಕರ್ತರಿಗೆ ಮಾಹಿತಿಯೂ, ಕೈಪಿಡಿಯೂ, ದಾರಿದೀಪವೂ ಆಗುವಂಥ ಪುಸ್ತಕ ಬರೆದು ಕೈಗಿಟ್ಟಿದ್ದಾರೆ.

ಯಧಾಪ್ರಕಾರ, ಕನ್ನಡದಲ್ಲಿ ಪತ್ರಿಕೋದ್ಯದ ವಿದ್ಯಾರ್ಥಿಗಳಿಗೊಂದು ಒಳ್ಳೆಯ ಪುಸ್ತಕವೇ ಇಲ್ಲ. ನಾಡಿಗರು ಬರೆದ ಭಾರತೀಯ ಪತ್ರಿಕೋದ್ಯಮದ ಮಹಾಗ್ರಂಥ ಇತಿಹಾಸದ ಕತೆ ಹೇಳುತ್ತದೆಯೇ ಹೊರತು, ಇವತ್ತು ಸುದ್ದಿ ಬರೆಯುವ ಬುದ್ಧಿವಂತರಿಗೆ ನೆರವಾಗುವುದಿಲ್ಲ. ವರ್ತಮಾನ ಪತ್ರಿಕೆ ಎಂಬ ಹೆಸರಲ್ಲೇ ವರ್ತಮಾನ ಇರುವುದರಿಂದ, ಚರಿತ್ರೆಯ ಪಾಠ ಪತ್ರಿಕೋದ್ಯಮದ ವಿದ್ಯಾರ್ಥಿಗೆ ಅಗತ್ಯ ಇಲ್ಲ. ಇವತ್ತಿನ ತಂತ್ರಜ್ಞಾನದ ಯುಗದಲ್ಲಿ ಮಾಹಿತಿಗಳು ಬೆರಳ ತುದಿಯಲ್ಲಿ ಇರುವುದರಿಂದ ಹೊಸದಾಗಿ ಬರುವವವರಿಗೆ ನಾವು ನೀಡಬೇಕಾದದ್ದು ಒಳನೋಟ ಮಾತ್ರ.

ಅನಂತನಾಗ್ ಒಂದು ಪ್ರಸಂಗವನ್ನು ಆಗಾಗ ಹೇಳುತ್ತಿರುತ್ತಾರೆ. ವರ್ಷದ ಕೆಳಗೆ ಅವರನ್ನು ಸಂದರ್ಶಿಸಲು ಹೋದ ಟೈಮ್ಸಾಫಿಂಡಿಯಾದ ಪತ್ರಕರ್ತೆಯೊಬ್ಬಳು ನಿಮ್ಮ ಮೊದಲ ಸಿನೆಮಾ ಯಾವುದು? ಶಂಕರ್ ನಿಮ್ಮ ಅಣ್ಣನೋ, ತಮ್ಮನೋ ಎಂಬ ದಡ್ಡ ಪ್ರಶ್ನೆಗಳನ್ನು ಕೇಳುತ್ತಾಳೆ. ಸಿಟ್ಟಿಗೆದ್ದ ಅನಂತ್ ಅವಳನ್ನು ಬೈದು ವಾಪಸ್ ಅಟ್ಟುತ್ತಾರೆ. ಯಾರನ್ನು ಏನು ಬೇಕಾದರೂ ಕೇಳಬಹುದು ಎಂಬ ಉಡಾಫೆಗೆ ಸಾಕ್ಷಿ ಅದು.

ವಿಶ್ವೇಶ್ವರ ಭಟ್ಟರ ಪ್ರಕಾರ ಓದುಗ ಹೆಂಡತಿ, ಸಂಪಾದಕ ಗಂಡ. ಹೆಂಡತಿ ಸದಾ ಗೊಣಗುತ್ತಲೇ ಗಂಡನೊಂದಿಗೆ ಸಂಸಾರ ಮಾಡುತ್ತಾಳೆ. ಅವಳ ನಿಷ್ಠೆ ಬದಲಾಗುವುದಿಲ್ಲ. ಇವತ್ತಲ್ಲ ನಾಳೆ ಸರಿಹೋಗಬಹುದು ಎಂದು ಕಾಯುತ್ತಾಳೆ ಎನ್ನುತ್ತಾರೆ ಭಟ್ಟರು. ಆದರೆ ಭಟ್ಟರ ವಿಜಯ ಕರ್ನಾಟಕ ಆರಂಭವಾದಾಗ ಲಕ್ಷಾಂತರ ಹೆಂಡಂದಿರು 'ಗಂಡಾಂತರ' ಮಾಡಿಕೊಳ್ಳುವುದಕ್ಕೂ ಇದೇ ಭಟ್ಟರು ಕಾರಣರಾಗಿದ್ದರು.

ಟೀವಿ ಪತ್ರಿಕೋದ್ಯಮದ ಕುರಿತು ಅವರಿಗಿರುವ ಸಿಟ್ಟು ಕೂಡ ಇಲ್ಲಿ ವ್ಯಕ್ತವಾಗಿದೆ. ಅದರ ಜೊತೆಗೇ ಭಟ್ಟರು ಪತ್ರಿಕೋದ್ಯಮದ ಸ್ವಾರಸ್ಯಕರ ಸಂಗತಿಗಳನ್ನು ದಾಖಲಿಸುತ್ತಾ ಹೋಗುತ್ತಾರೆ. ಅಲ್ಲಲ್ಲಿ ವೈಎನ್ಕೆ ಬರುತ್ತಾರೆ. ಅವರು ಮೆಚ್ಚುವ ಪತ್ರಕರ್ತರ ಪ್ರಸ್ತಾಪ ಬರುತ್ತದೆ. ಪತ್ರಕೋದ್ಯಮದ 'ಭೀಷ್ಮ' ಟಿಜೆಎಸ್ ಜಾರ್ಜ್ ಆಡಿದ ಮಾತುಗಳನ್ನು ಭಟ್ಟರು ಬರೆಯದೇ ಬಿಡುವುದಿಲ್ಲ.

ಓದುಗರೊಂದಿಗಿನ ದಾಂಪತ್ಯದಲ್ಲಿ ಭಟ್ಟರು ಕಂಡ ಕಷ್ಟ ಸುಖಗಳ ದಾಖಲೆಯಷ್ಟೇ ಆಗದೇ, 'ಸಂಪಾದಕ ಅಂದ್ರೆ ಗಂಡ ಇದ್ದಂತೆ' ಭಟ್ಟರ ಲವಲವಿಕೆಯ ಬರಹಕ್ಕೆ ಮಾದರಿಯೂ ಆಗಿದೆ. ಅವರ ಅನುಭವವಲಯ ವಿಸ್ತಾರವಾದದ್ದು (ಹದಿನೈದಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ), ಪ್ರತಿಭೆಯೂ ಅಗಾಧ (ನಾಲ್ಕು ಚಿನ್ನದ ಪದಕ ವಿಜೇತ), ಸಂಪರ್ಕವೂ ಗಾಢ (ಅಬ್ದುಲ್ ಕಲಾಮ್ ಜೊತೆ ಹದಿನಾಲ್ಕು ದಿನ ನಾಲ್ಕು ದೇಶ ಸುತ್ತಾಟ), ಪತ್ರಿಕೋದ್ಯಮದಲ್ಲಿ ಅವರದು ಥಿಯರಿ ಮತ್ತು ಪ್ರಾಕ್ಟಿಕಲ್ ಅನುಭವ. ಪಾಠ ಕಲಿತವರು, ಕಲಿಸಿದವರು ಮತ್ತು ಪಠ್ಯವಾದವರು ಭಟ್ಟರು.

ಪತ್ರಿಕೋದ್ಯಮ ಗೋಡೆಯಿಲ್ಲದ ಕೋಟೆ. ಒಳಹೊಕ್ಕವರು ಹೊರಗೆ ಹೋಗಬಯಸುವ ಹೊರಗಿರುವವರು ಒಳಬರಲು ಬಯಸುವ ಪಂಜರ. ಇವತ್ತಿನ ಪತ್ರಿಕೋದ್ಯಕ್ಕೆ ಬರಹಗಾರರು ಬೇಕಾಗಿಲ್ಲ. ನಮಗೆ ಶೇಕ್ಸ್ ಪಿಯರ್ ಬೇಕಿಲ್ಲ ಅಂತ ಇಂಡಿಯನ್ ಎಕ್ಸ್ ಪ್ರೆಸ್ ಜಾಹೀರಾತು ಕೊಡುತ್ತದೆ. ಸಣ್ಣದಾರಿ ಹೇಳುತ್ತೇವೆ ಎಂದು ಡೆಕ್ಕನ್ ಕ್ರಾನಿಕಲ್ ಕನವರಿಸುತ್ತದೆ.

ಪತ್ರಿಕೆಯನ್ನು ಓದುತ್ತಾ ಭಾಷೆಯನ್ನೂ ಜೀವನಶೈಲಿಯನ್ನೂ ರೂಪಿಸಿಕೊಳ್ಳಬಹುದು ಎಂಬ ನಂಬಿಕೆ ಯಾರಲ್ಲೂ ಉಳಿದಿಲ್ಲ. ಅದೊಂದು ಪ್ರಾಡಕ್ಟ್ ಆಗಿ, ಜಾಹೀರಾತು ತರುವ ಮಾಧ್ಯಮವಾಗಿ ಕಾಣಿಸುತ್ತಿದೆ. ಇಂಥವರ ನಡುವೆ ಕೊಂಚ ವಿನಯ, ಗಡಸುತನ, ಸಿಟ್ಟು ಮತ್ತು ಸೈದ್ಧಾಂತಿಕತೆ ಉಳಿಸಿಕೊಂಡಿರುವುದು ಪ್ರಾದೇಶಿಕ ಭಾಷಾ ಪತ್ರಿಕೆಗಳು ಮತ್ತು ವಾರ ಪತ್ರಿಕೆಗಳು ಮಾತ್ರ. ಈ ಬದಲಾವಣೆ ಗಮನಿಸಿದರೆ ಭಟ್ಟರ ನಿಲುವು ಮತ್ತು ಗ್ರಹಿಕೆಗಳ ಇಷ್ಟವಾಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X