Monsoon: ಮುಂಗಾರು ಋತು ಮುನ್ನ ರೈತರಿಗೆ ಡಬಲ್ ಸಂಕಷ್ಟ; ಬಿತ್ತನೆ ಬೀಜ ಕೊರತೆ, ಗೊಬ್ಬರ ದರ ಏರಿಕೆ
ಹಾವೇರಿ: ರಾಜ್ಯದಲ್ಲಿ ಸುರಿದ ಪೂರ್ವ ಮುಂಗಾರು ಮಳೆಯಿಂದಾಗಿ ಹೊಲ ಹದ ಮಾಡಿಕೊಂಡು ಬಿತ್ತನೆಗೆ ಸಜ್ಜಾಗಿದ್ದ ರೈತರಿಗೆ ಸಂಕಷ್ಟ ಎದುರಾಗಿದೆ. ರಸಗೊಬ್ಬರದ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಬಿತ್ತನೆ ಬೀಜಗಳ ಕೊರತೆ ಅಲ್ಲಲ್ಲಿ ಕಂಡು ಬಂದಿದೆ. ಜಿಲ್ಲೆಯಲ್ಲಿ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬಿನ್ ಮತ್ತು ಶೇಂಗಾ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಆದರೆ ಅನೇಕ ಕಡೆಗಳಲ್ಲಿ ಗಂಟೆಗಟ್ಟಲೇ ಕ್ಯೂ ನಿಂತರು ಬಿತ್ತನೆ ಬೀಜಗಳು ಸಿಗದ ಸ್ಥಿತಿ ನಿರ್ಮಾಣವಾಗಿದ್ದು, ರೈತರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ರೈತರು ಮುಂಗಾರು ಮಳೆಗಾಗಿ ಕಾಯುತ್ತಿದ್ದಾರೆ. ಪೂರ್ವ ಮುಂಗಾರು ಮಳೆ ಒಳನಾಡು ಜಿಲ್ಲೆಗಳಲ್ಲಿ ಸುರಿದು ಕೃಷಿಗೆ ಪೂರಕ ವಾತಾವರಣ ನಿರ್ಮಿಸಿದೆ. ಇದೇ ಮಂಗಳವಾರ (ಮೇ 26) ಮುಂಗಾರು ಮಳೆ ಆಗಮಿಸುವ ಲಕ್ಷಣಗಳಿವೆ. ಜೂನ್ ತಿಂಗಳಿನಿಂದ ಮುಂಗಾರು ಋತು ಆರಂಭ ಹಿನ್ನೆಲೆಯಲ್ಲಿ ರೈತರು ಜಮೀನುಗಳನ್ನು ಸ್ವಚ್ಛ ಮಾಡಿಕೊಂಡು ಬಿತ್ತನೆಗೆ ಅಣಿಯಾಗಿದ್ದಾರೆ. ಗ್ರಾಮ, ಹೂಬಳಿ ಮಟ್ಟದಲ್ಲಿ ಸೋಯಾಬಿನ್ ಬೀಜಗಳು ಸಿಗದೇ ತಾಲೂಕು, ಜಿಲ್ಲಾ ರೈತ ಕೇಂದ್ರಗಳ ಮುಂದೆ ರೈತರು ಕ್ಯೂ ನಿಲ್ಲುವಂತಾಗಿದೆ.

ಬಿತ್ತನೆ ಬೀಜಗಳಿಗಾಗಿ ರೈತರ ಅಲೆದಾಟ
ಜಿಲ್ಲೆಯ ಹೊಸರಿತ್ತಿ ಗ್ರಾಮದ ರೈತ ಸಂಪರ್ಕದಲ್ಲಿ ಸೋಯಾಬಿನ್ ಸಿಗದ ಹಿನ್ನೆಲೆಯಲ್ಲಿ ಗ್ರಾಮದ ರೈತರು ಕರ್ಜಗಿ, ಗುತ್ತಲ, ನೆಗಳೂರು ಹಾಗೂ ಹಾವೇರಿ ಜಿಲ್ಲಾ ರೈತ ಕೇಂದ್ರಗಳಿಗೆ ಅಲೆಯುತ್ತಿದ್ದಾರೆ. ಮೂರು ನಾಲ್ಕು ದಿನಗಳಿಂದ ರೈತರು ಸರತಿ ಸಾಲಿನಲ್ಲಿ ನಿಂತು ಬೀಜ, ಗೊಬ್ಬರ ತರುತ್ತಿದ್ದಾರೆ. ಕೆಲವೆಡೆ ಶೇಂಗಾ, ಸೋಯಾಬಿನ್ ಸಿಗದೇ ಸಮಸ್ಯೆ ಆಗಿದ್ದು, ನಾಳೆ ಬನ್ನಿ ಎಂದು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಹೇಳಿ ಕಳಿಸುತ್ತಿದ್ದಾರೆ. ಹೀಗಾಗಿ ಬೇರೆ ಬೇರೆ ಗ್ರಾಮಗಳು ಮತ್ತು ತಾಲೂಕು ಕೇಂದ್ರಗಳತ್ತ ರೈತರು ಅಲೆದಾಡುವಂತಾಗಿದೆ.
ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಕೆಲವು ರೈತರು ಪ್ರತಿ ಋತುವಿನಲ್ಲಿ ಮಾರಾಟ ಮಾಡುವಂತೆ ಬಿತ್ತನೆಗೆ ಯೋಗ್ಯವಾದ ಸೋಯಾಬಿನ್ ಬೀಜಗಳನ್ನು ಮಾರಾಟ ಮಾಡುತ್ತಾರೆ. ಆದರೆ ಅಲ್ಲಿ 25 ಕೆಜಿ ಪಾಕೀಟ್‌ಗೆ ಸುಮಾರು 8.500 ರೂಪಾಯಿ ನಿಗದಿ ಮಾಡಲಾಗಿದೆ. ಖಾಸಗಿ ಮಳಿಗೆಗಳಲ್ಲಿ ದರ ಇದಕ್ಕಿಂತಲೂ ಹೆಚ್ಚಿದೆ ಎಂದು ಸೋಯಾ ಬೀಜ ಖರೀದಿಸಿದ ರೈತ ಷಣ್ಮುಖಪ್ಪ ಅವರು ತಿಳಿಸಿದ್ದಾರೆ.
ಎಕ್ರೆಗೆ 25-30 ಕೆಜಿ ಸೋಯಾ ಬೀಜ ಬೇಕು
ಸಾಮಾನ್ಯವಾಗಿ ಒಂದು ಎಕ್ರೆ ಜಮೀನಿನಲ್ಲಿ ಸೋಯಾಬಿನ್ ಬಿತ್ತಲು 25ರಿಂದ 30 ಕೆಜಿ ಬೀಜಗಳು ಬೇಕಾಗುತ್ತವೆ. ಸದ್ಯ 25 ಕೆಜಿ ಪಾಕೀಟ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ದರದಲ್ಲಿ ಏರಿಳಿತವಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 25 ಕೆಜಿ ಸೋಯಾಬಿನ್‌ಗೆ 1,675-1800 ರೂಪಾಯಿ ವರೆಗೆ ಇದೆ. ರೈತರ ಹೆಚ್ಚಾಗಿ 'ಕೆಡಿಎಸ್' ತಳಿಯ ಬೀಜದ ಪಾಕಿಟ್ ಅನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ.
ಬಿತ್ತನೆ ಬೀಜಗಳ ಕೊರತೆ ಆಗಿದ್ದೇಕೆ?
ಪ್ರತಿ ವರ್ಷ ಸರ್ಕಾರ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿಗೆ ಬಿತ್ತನೆ ಬೀಜ ಮಾರಾಟ ಮಾಡುತ್ತದೆ. ಅದೇ ರೀತಿ ಈ ಬಾರಿಯು ಅಗತ್ಯದಷ್ಟು ಬೀಜಗಳನ್ನು ದಾಸ್ತಾನು ಇಟ್ಟುಕೊಂಡಿದ್ದೇವೆ. ಯಾವುದೇ ಕೊರತೆ ಇಲ್ಲ ಎಂದು ಇತ್ತೀಚೆಗೆ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಬಾರಿ ಮೆಕ್ಕೆಜೋಳ, ಜೋಳ, ಕಡಲೆ, ಕುಸುಬಿ, ಬೆಂಡೆ ಬೆಳೆದವರು ಈ ಬಾರಿ ಬೆಳೆ ಬದಲಿಸಲು ಮುಂದಾಗಿದ್ದಾರೆ. ಉತ್ತಮ ಮಳೆ ಹಿನ್ನೆಲೆಯಲ್ಲಿ ಮುಂಗಾರು ಬೆಳೆಯಾಗಿ ಈ ವರ್ಷ ಹೆಚ್ಚಿನ ರೈತರು ಸೋಯಾಬಿನ್ ಬೆಳೆಯಲು ನಿರ್ಧರಿಸಿದ್ದಾರೆ. ಹೀಗಾಗಿ ಸೋಯಾಗೆ ಬೇಡಿಕೆ ಹೆಚ್ಚಾಗಿದ್ದು, ಒಬ್ಬ ರೈತರಿಗೆ ಎಕರೆಗೆ ಒಂದೇ ಪ್ಯಾಕೇಟ್ ಎಂದು ನಿರ್ಬಂಧ ವಿಧಿಸಿದರೂ ಬಿತ್ತನೆ ಬೀಜಗಳು ಸಾಲುತ್ತಿಲ್ಲ. ಕಳೆದ ಬಾರಿ ಮೆಕ್ಕೆಜೋಳ ಸಿಗದೇ ಜಿಲ್ಲೆಯ ರೈತರು ಕಂಗಾಲಾಗಿದ್ದರು. ಈ ವರ್ಷ ಸೋಯಾಗಾಗಿ ನಿತ್ಯ ಕೇಂದ್ರದ ಮುಂದೆ ನೂರಾರು ರೈತರ ಗಂಟೆ ಗಟ್ಟಲೇ ಸರತಿ ನಿಂತು ಬೀಜ ಕೊಳ್ಳಲು ಪರದಾಟ ನಡೆಸಿದ್ದಾರೆ. ಇದು ಹಾವೇರಿ ಜಿಲ್ಲೆಯ ಹಾನಗಲ್, ರಟ್ಟಿಹಳ್ಳಿ, ಸವಣೂರು ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ, ಹೋಬಳಿ, ಗ್ರಾಮಗಳಲ್ಲಿ ಈ ಸಮಸ್ಯೆ ಕಂಡು ಬಂದಿದೆ ಎಂದು ಸೋಯಾ ಬೀಜ ಸಿಗದೇ ಶೇಂಗಾ ಬಿತ್ತಲು ಸಜ್ಜಾಗಿರುವ ಶಂಭುಲಿಂಗಪ್ಪ ಅವರು ಮಾಹಿತಿ ಕೊಟ್ಟರು.
ರಸಗೊಬ್ಬರ ಬೆಲೆ ಭರ್ಜರಿ ಏರಿಕೆ, ಕಾರಣವೇನು?
ಉತ್ತಮ ಮುಂಗಾರು ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಆರಂಭಿಸುತ್ತಿದ್ದಂತೆ ರಸಗೊಬ್ಬರಕ್ಕೆ ಭಾರೀ ಬೇಡಿಕೆ ಬರುತ್ತದೆ. ಕೊಲ್ಲಿ ರಾಷ್ಟ್ರಗಳ ಯುದ್ಧದ ಪ್ರಭಾವದಿಂದಾಗಿ ರಸಗೊಬ್ಬರದ ಪೂರೈಕೆ ಕಡಿಮೆ ಆಗಿದ್ದರಿಂದ ಹಾಲಿ ಇರುವ ಹೊಸ ದಾಸ್ತಾನು ಗೊಬ್ಬರದ ಬೆಲೆ ರಾಜ್ಯದಲ್ಲಿ ತೀವ್ರವಾಗಿ ಏರಿಕೆ ಆಗಿದೆ.
ಕಾಂಪ್ಲೆಕ್ಸ್ ಮತ್ತು ಪೋಟ್ಯಾಸಿಯಂ 1 ಚೀಲದ (50ಕೆಜಿ ತೂಕ) ಬೆಲೆ-1400 ರೂ.ನಿಂದ 2200ಕ್ಕೆ ಏರಿಕೆ ಆಗಿದೆ. ಯೂರಿಯಾ ಮತ್ತು ಡಿಎಪಿ ಬೆಲೆಯಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ. 2020 ಸಂಖ್ಯೆಯ ಗೊಬ್ಬರದ ಬೆಲೆ 1600 ರೂ.ನಿಂದ 2000ಕ್ಕೆ ಹೆಚ್ಚಾಇದೆ. ಯೂರಿಯಾ 350 ರೂ. ಇದ್ದದ್ದು ಸುಮಾರು 500 ರೂ. ಗಡಿ ದಾಟಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಮತ್ತಷ್ಟು ಏರಿಕೆ ಆಗುವ ಲಕ್ಷಣಗಳು ದಟ್ಟವಾಗಿವೆ.
ಅಲ್ಲದೇ ಸರ್ಕಾರಗಳು ಈ ಅಭಾವ ಸರಿದೂಗಿಲು ಸೂಕ್ತ ಕ್ರಮ ಕೈಗೊಳ್ಳುವ ಬದಲಿಗೆ ಮಿತಿ ಹೇರಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಸರ್ಕಾರ ಕೆ ಕಿಸಾನ್ ಮೂಲಕ ರಸಗೊಬ್ಬರ ವಿತರಿಸುತ್ತಿದೆ. ರಸಗೊಬ್ಬರ ಖರೀದಿಗೆ ರೈತರಿಗೆ FID ಅಥವಾ FRUITS ಐಡಿ ಕಡ್ಡಾಯಗೊಳಿಸಿದೆ. ರೈತರು ಪಹಣಿ, ಜಮೀನು ಖಾತೆ, ಆಧಾರ ತೆಗೆದುಕೊಂಡು ಎಫ್‌ಐಡಿ ಸೃಷ್ಟಿಸಿಕೊಳ್ಳಬೇಕು. ಬಳಿಕ ರಸಗೊಬ್ಬರ ಪಡೆಯಬಹುದಾಗಿದೆ.













Click it and Unblock the Notifications