Eknath Shinde: ಸ್ಲಂ ಮುಕ್ತ ಮುಂಬೈ ಮಾಡಲು ಏಕನಾಥ್ ಶಿಂಧೆ ಮಹತ್ವದ ಯೋಜನೆ ಘೋಷಣೆ
Eknath Shinde: ದೇಶದ ಆರ್ಥಿಕ ರಾಜಧಾನಿ ಮುಂಬೈ ನಗರವನ್ನು ಕೊಳೆಗೇರಿ ಮುಕ್ತ ನಗರವನ್ನಾಗಿ ಮಾಡಲು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಘೋಷಣೆ ಮಾಡಿದ್ದಾರೆ. ಬೃಹತ್ ಪ್ರಮಾಣದ ಕ್ಲಸ್ಟರ್ ಪುನರಾಭಿವೃದ್ಧಿ, ಸಂಯೋಜಿತ ಮೂಲಸೌಕರ್ಯ ಯೋಜನೆ ಮತ್ತು ಸಾಮೂಹಿಕ ವಸತಿ ನಿರ್ಮಾಣದ ಮೂಲಕ ಈ ಗುರಿಯನ್ನು ತಲುಪಲು ಸರ್ಕಾರ ನಿರ್ಧರಿಸಿದೆ. 2030ರ ವೇಳೆಗೆ ಸುಮಾರು 15 ಲಕ್ಷ ಪುನರ್ವಸತಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ ಎಂದು ಅವರು ವಿವರಿಸಿದ್ದಾರೆ.
ಮುಂಬೈನಲ್ಲಿ ನಡೆದ 'ಹಾರಾಷ್ಟ್ರ ಮೂಲಸೌಕರ್ಯ ಸಮಾವೇಶ'ದಲ್ಲಿ ಮಾತನಾಡಿದ ಏಕನಾಥ್ ಶಿಂದೆ ಅವರು, ಸರ್ಕಾರವು ಈಗಾಗಲೇ ಮುಂಬೈ ಮಹಾನಗರ ಪ್ರದೇಶದಾದ್ಯಂತ 19 ಕ್ಲಸ್ಟರ್ ಪುನರಾಭಿವೃದ್ಧಿ ವಲಯಗಳನ್ನು ರಚಿಸಿದೆ. ಕಿಕ್ಕಿರಿದು ತುಂಬಿರುವ ಕೊಳೆಗೇರಿ ಪ್ರದೇಶಗಳನ್ನು ವಿಶಾಲವಾದ ರಸ್ತೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಶಾಲೆಗಳು ಮತ್ತು ಆಧುನಿಕ ನಾಗರಿಕ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ನಗರ ನೆರೆಹೊರೆಗಳಾಗಿ ಪರಿವರ್ತಿಸಲು ಸರ್ಕಾರವು ಸಮನ್ವಯಿತ ಪುನರಾಭಿವೃದ್ಧಿ ಮಾದರಿಯನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರು.

ಧಾರಾವಿ ಸೇರಿದಂತೆ ಹಲವಾರು ಕೊಳೆಗೇರಿ ಪ್ರದೇಶಗಳಲ್ಲಿನ ಕಳಪೆ ಜೀವನ ಪರಿಸ್ಥಿತಿಗಳನ್ನು ಉಲ್ಲೇಖಿಸಿ ಮಾತನಾಡಿದ ಏಕನಾಥ್ ಶಿಂದೆ ಅವರು, "ಮುಂಬೈ ನಿವಾಸಿಗಳು ಚರಂಡಿಗಳ ಬಳಿ ಮತ್ತು ಸೂಕ್ತ ನೈರ್ಮಲ್ಯವಿಲ್ಲದ ಪ್ರದೇಶಗಳಲ್ಲಿ ಅಮಾನವೀಯ ಪರಿಸ್ಥಿತಿಗಳಲ್ಲಿ ಬದುಕುವಂತೆ ಆಗಬಾರದು. ಈ ವಾಸ್ತವಿಕತೆಯನ್ನು ಬದಲಾಯಿಸುವ ಮತ್ತು ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಸೂಕ್ತವಾದ ಮನೆ ಸಿಗುವಂತೆ ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ಹೊತ್ತುಕೊಂಡಿದೆ," ಎಂದು ಹೇಳಿದರು.
ಕೊಳೆಗೇರಿ ಮುಕ್ತ ಮುಂಬೈ ಕನಸನ್ನು ನನಸು ಮಾಡಲು ಬಹು-ಸಂಸ್ಥೆಗಳ ವಿಧಾನದ ಮೂಲಕ ಈ ಪುನರಾಭಿವೃದ್ಧಿ ಕಾರ್ಯವನ್ನು ಜಾರಿಗೆ ತರಲಾಗುತ್ತಿದೆ. ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ, ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ, ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ ಹಾಗೂ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳು ಈ ಗುರಿಯನ್ನು ಸಾಧಿಸಲು ಸಮನ್ವಯದಿಂದ ಕೆಲಸ ಮಾಡುತ್ತಿವೆ.
ಕ್ಲಸ್ಟರ್ ಪುನರಾಭಿವೃದ್ಧಿ ಮಾದರಿಯು ದೊಡ್ಡ ಭೂಭಾಗಗಳನ್ನು ಅಭಿವೃದ್ಧಿಗೆ ಮುಕ್ತಗೊಳಿಸುವುದರ ಜೊತೆಗೆ, ಉತ್ತಮ ನಗರ ಮೂಲಸೌಕರ್ಯವನ್ನು ಸೃಷ್ಟಿಸುವ ಮತ್ತು ಲಕ್ಷಾಂತರ ನಿವಾಸಿಗಳ ಜೀವನಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. "ಇದು ಕೇವಲ ಕಟ್ಟಡಗಳ ಪುನರಾಭಿವೃದ್ಧಿಯಲ್ಲ, ಜನರ ಬದುಕಿನ ಮತ್ತು ಇಡೀ ನೆರೆಹೊರೆಯ ಪರಿಸರ ವ್ಯವಸ್ಥೆಯ ಪುನರಾಭಿವೃದ್ಧಿಯಾಗಿದೆ," ಎಂದು ಅವರು ಹೇಳಿದರು.
ನಗರದಲ್ಲಿ ನಡೆಯುತ್ತಿರುವ ಈ ಬೃಹತ್ ಬದಲಾವಣೆಯ ಪ್ರಮಾಣವನ್ನು ಉಲ್ಲೇಖಿಸಿದ ಅಧಿಕಾರಿಗಳು ಪ್ರೊಮೆನೇಡ್ ಮತ್ತು ರೇಸ್‌ಕೋರ್ಸ್ ಅಭಿವೃದ್ಧಿ ಯೋಜನೆಗಳಂತಹ ಉಪಕ್ರಮಗಳ ಮೂಲಕ ಮುಂಬೈಗೆ ಸುಮಾರು 300 ಹೆಕ್ಟೇರ್‌ಗಳಷ್ಟು ಮುಕ್ತ ಜಾಗ ಲಭ್ಯವಾಗಲಿದೆ ಎಂದು ತಿಳಿಸಿದರು. ಜೊತೆಗೆ ಬಿಬಿಡಿ ಚಾಲ್‌ಗಳ ಯಶಸ್ವಿ ಪುನರ್ ಅಭಿವೃದ್ಧಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಹಳೆಯ ವಸತಿ ಪ್ರದೇಶಗಳನ್ನು ಯೋಜಿತ ಪುನರ್ ಅಭಿವೃದ್ಧಿಯ ಮೂಲಕ ಆಧುನೀಕರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಮಾತನಾಡಿದ ಮಹೇಂದ್ರ ಕಲ್ಯಾಣ್ಕರ್ ಅವರು, ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ ಸ್ಥಾಪನೆಯಾದ ಸುಮಾರು ಎರಡೂವರೆ ದಶಕಗಳಲ್ಲಿ ಅಂದಾಜು 2.9 ಲಕ್ಷ ವಸತಿ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ ಕೇವಲ ಎಸ್‌ಆರ್‌ಎ ಒಂದೇ 2030ರ ವೇಳೆಗೆ ಸುಮಾರು ಏಳು ಲಕ್ಷ ಪುನರ್ವಸತಿ ವಸತಿ ಘಟಕಗಳನ್ನು ಸೇರ್ಪಡೆ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಡಾ.ಕಲ್ಯಾಣ್ಕರ್ ಅವರು ಮಾತನಾಡಿ ನೈರ್ಮಲ್ಯ ಮತ್ತು ವಸತಿ ಸೌಕರ್ಯಗಳು ದೊಡ್ಡ ಸವಾಲಾಗಿರುವ ಧಾರಾವಿಯಲ್ಲಿ ಸುಮಾರು 1.5 ಲಕ್ಷ ಪುನರ್ವಸತಿ ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಪ್ರಸ್ತುತ ಧಾರಾವಿಯ ಕೆಲವು ಪ್ರದೇಶಗಳಲ್ಲಿ ಸುಮಾರು 1,000 ನಿವಾಸಿಗಳಿಗೆ ಕೇವಲ ಒಂದು ಶೌಚಾಲಯವಿರುವ ಶೋಚನೀಯ ಸ್ಥಿತಿಯಿದೆ ಎಂದು ವಿವರಿಸಿದರು. ಧಾರಾವಿ ಎಕ್ಸ್‌ಪೀರಿಯನ್ಸ್ ಸೆಂಟರ್ ಇದು ಆಗಸ್ಟ್ 15 ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಮಿಥಿ ನದಿಯನ್ನು ಸ್ವಚ್ಛಗೊಳಿಸಿ ಸೌಂದರ್ಯೀಕರಿಸುವ ಯೋಜನೆಗಳ ಬಗ್ಗೆ ಅವರು ಮಾತನಾಡಿದರು. ವಿಮಾನ ನಿಲ್ದಾಣಗಳು, ಉಪನಗರ ರೈಲ್ವೆ, ಮೆಟ್ರೋ ಕಾರಿಡಾರ್‌ಗಳು, ದೂರದ ಪ್ರಯಾಣದ ರೈಲುಗಳು ಮತ್ತು ಬೆಸ್ಟ್ ಬಸ್ ಜಾಲವನ್ನು ಒಳಗೊಂಡಂತೆ ಧಾರಾವಿಯನ್ನು ಒಂದು ಸಮಗ್ರ ಸಾರಿಗೆ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಯಿದೆ ಎಂದು ಅವರು ತಿಳಿಸಿದರು.
ಶ್ರೀಕಾಂತ್ ಶಿಂಧೆ ಅವರು ಮಾತನಾಡಿ, ಬೃಹನ್‌ಮುಂಬೈ ಮಹಾನಗರ ಪಾಲಿಕೆ, ಮಹಾರಾಷ್ಟ್ರ ಹೌಸಿಂಗ್ ಅಂಡ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ, ಸಿಡ್ಕೋ (CIDCO) ಹಾಗೂ ಸ್ಲಂ ರಿಹ್ಯಾಬಿಲಿಟೇಶನ್ ಅಥಾರಿಟಿ (SRA) ಸೇರಿದಂತೆ ಹಲವು ಸಂಸ್ಥೆಗಳು ಸೇರಿ ಮುಂಬೈ ಮಹಾನಗರ ಪ್ರದೇಶದಾದ್ಯಂತ ಕ್ಲಸ್ಟರ್ ಪುನರ್ ಅಭಿವೃದ್ಧಿ ಯೋಜನೆಗಳನ್ನು ಜಂಟಿಯಾಗಿ ಮುಂದುವರಿಸುತ್ತಿವೆ ಎಂದು ಹೇಳಿದರು. ಮುಂಬೈ ಈಗಾಗಲೇ ವಿದೇಶಿ ನೇರ ಹೂಡಿಕೆ, ಸ್ಟಾರ್ಟ್‌ಅಪ್‌ಗಳು ಮತ್ತು ಮೂಲಸೌಕರ್ಯ ನಿರ್ಮಾಣ ಕ್ಷೇತ್ರಗಳಲ್ಲಿ ದೇಶದ ಪ್ರಮುಖ ಗಮ್ಯಸ್ಥಾನವಾಗಿ ಹೊರಹೊಮ್ಮಿದೆ. ಮುಂದಿನ ದಶಕಗಳಲ್ಲಿಯೂ ನಗರದ ಆರ್ಥಿಕ ನಾಯಕತ್ವವನ್ನು ಕಾಯ್ದುಕೊಳ್ಳಲು ವಿಶ್ವದರ್ಜೆಯ ನಗರ ಪರಿವರ್ತನೆ ಅತ್ಯಂತ ಅಗತ್ಯವಾಗಿದೆ ಎಂದು ಶಿಂಧೆ ಒತ್ತಿ ಹೇಳಿದರು.












Click it and Unblock the Notifications