ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಥ ಮೆರವಣಿಗೆ ಬೆಂಗಳೂರಲ್ಲಾಗಿದ್ದರೆ ಸಂಕೋಚವಾಗುತ್ತಿತ್ತು

By ರವಿ ಬೆಳಗೆರೆ
|
Google Oneindia Kannada News

ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಜೀವಿತಾವಧಿ ಸಾಧನೆಯ ಪ್ರಶಸ್ತಿಯನ್ನು ನನಗೆ ಕೊಟ್ಟಿದ್ದಾರೆ. ಪತ್ರಿಕೋದ್ಯಮಕ್ಕೆ ಬಂದು ಇಪ್ಪತ್ತೈದು ವರ್ಷಗಳಾಗಿವೆ. ಏನನ್ನಾದರೂ ಸಾಧಿಸಿದ್ದೇನೆ ಅಂತ ನನಗೂ ಅನ್ನಿಸಿಲ್ಲ. ಮಾಡಿದ್ದೆಲ್ಲ ಹೊಟ್ಟೆ ಪಾಡಿಗಾಗಿ, ಅಷ್ಟೆ. ಆದರೆ ಹೊಸದೇನನ್ನಾದರೂ ಮಾಡಲೇಬೇಕೆಂಬ ಹುರುಪು ತುಂಬಿದ್ದು ನನ್ನ ಓದುಗ ದೊರೆ. ಈ ಪ್ರಶಸ್ತಿ ಆತನಿಗೇ ಮುಡಿಪು.

ಪ್ರಶಸ್ತಿಗಳು ಒಂದು ಕಡೆ ಸಂತೋಷ ಉಂಟು ಮಾಡಿದರೂ, ಮತ್ತೊಂದು ಕಡೆ ಜವಾಬ್ದಾರಿ ಬೆಳೆಸುತ್ತವೆ. ಎಲ್ಲದರ ಮಧ್ಯೆ ಸಂತೋಷದ ಸಂಗತಿಯೆಂದರೆ, ಮಾಧ್ಯಮ ಅಕಾಡೆಮಿಯ ಈ ಪ್ರಶಸ್ತಿ ಘೋಷಿತವಾಗಿರುವಾಗ ಅಲ್ಲಿ ವಿಧಾನಸೌಧದಲ್ಲಿ ಯಾವುದೇ ರಾಜಕಾರಣಿ ಇಲ್ಲ. ಇದ್ದಿದ್ದರೆ, ಪ್ರಶಸ್ತಿ ತೆಗೆದುಕೊಳ್ಳಲು ಹಿಂಜರಿಕೆಯಾಗುತ್ತಿತ್ತು. ಪತ್ರಕರ್ತರು ಯಾವತ್ತಿಗೂ ರಾಜಕಾರಣಿಗಳಿಂದ ಪ್ರಶಸ್ತಿ ಸ್ವೀಕರಿಸಬಾರದು. ಅಷ್ಟರ ಮಟ್ಟಿಗಿನ ಸಂಕೋಚ ನಮಗಿರಬೇಕು.

ಉಳಿದಂತೆ, ಸಿರುಗುಪ್ಪದ ಸುದ್ದಿ ನಿಮಗೆ ಹೇಳಲೇಬೇಕು.

ಅದೊಂದು ಮೆರವಣಿಗೆ. ಹಿಂದಿನ ಕಾಲದಲ್ಲಿ ಹುಲಿ ಬೇಟೆಯಾಡಿದವರನ್ನು ಹಾಗೆ open jeepನಲ್ಲಿ ಹಾರ ಹಾಕಿ, ಹಣೆಗೆ ಹೆಬ್ಬೆಟ್ಟು ಗಾತ್ರದ ಕುಂಕುಮವಿಟ್ಟು ಮೆರವಣಿಗೆಯಲ್ಲಿ ಕರೆತರುತ್ತಿದ್ದರಂತೆ. ಹಾಗಿತ್ತು ಮೆರವಣಿಗೆ. ಮಧ್ಯದಲ್ಲಿ ಕುಂ.ವೀರಭದ್ರಪ್ಪ, ಇಕ್ಕೆಲಗಳಲ್ಲಿ ನಾನು ಮತ್ತು ಕೇಶವ ರೆಡ್ಡಿ ಹಂದ್ರಾಳ ನಿಂತಿದ್ದೆವು. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಎಂಬ ಪುಟ್ಟ ಊರಿನಲ್ಲಿ ಕುಂ.ವೀ.ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಪ್ರಯುಕ್ತ ಸನ್ಮಾನವಿರಿಸಿಕೊಂಡಿದ್ದರು. ಮೆರವಣಿಗೆಯಲ್ಲಿ ನನ್ನನ್ನೂ ಜೀಪು ಹತ್ತುವಂತೆ ಮಾಡಿದ್ದರು. ತಲೆಗೆ ಪೇಟವಿಟ್ಟು, ಸಾಲು ಹೊದೆಸಿ, ಉಂಗುರ ತೊಡಿಸಿ... ನಮ್ಮ ಜಿಲ್ಲೆಯವರದು ಕೊರಳ ಸೆರೆಯುಬ್ಬಿ ಬರುವಂಥ ಅಭಿಮಾನ.

ಅದರಲ್ಲೂ ಸಿರುಗುಪ್ಪ ಸೀಮೆ ಬಹಳ militant ಆದುದು. ಅಲ್ಲಿಯ ತೆಕ್ಕಲಕೋಟೆ, ನಾಡಂಗ, ರಾರಾವಿ, ಹರಿವಾಣ, ದರೂರು ಹಚ್ಚೊಳ್ಳಿ ಮುಂತಾದೆಡೆಗಳಲ್ಲೆಲ್ಲ ನನಗೆ ಸ್ನೇಹಿತರಿದ್ದಾರೆ. ಕುಂ.ವೀ. ಕೂಡ ಮೂಲತಃ ತೆಕ್ಕಲಕೋಟೆಯವರಂತೆ. ಬದುಕು ಹುಡುಕಿಕೊಂಡು ಅವರ ತಂದೆ ಕುಂಬಾರ ಹಾಲಪ್ಪ, ಕೊಟ್ಟೂರಿಗೆ ಹೋದವರಂತೆ. ಮೊನ್ನೆಯ ತನಕ ನನಗದು ಗೊತ್ತಿರಲಿಲ್ಲ. ಆತನ ಸಾವಿರಾರು ಅಭಿಮಾನಿಗಳು ಸೇರಿ ಅಪ್ಪಟ ದೇಸೀ ಶೈಲಿಯಲ್ಲಿ ಕುಂ.ವೀ.ಗೆ ಸನ್ಮಾನ ಮಾಡಿದರು. ಅಂಥದೊಂದು ಮೆರವಣಿಗೆ ಬೆಂಗಳೂರಿನಲ್ಲಿ ಮಾಡಿದ್ದಿದ್ದರೆ ಕೊಂಚ ಸಂಕೋಚವಾಗುತ್ತಿತ್ತೇನೋ? ಆದರೆ ಹುಂಬ ಸೀಮೆಯ ಗೆಳೆಯರ ಆತ್ಮೀಯತೆಗೆ, ಒತ್ತಾಯಕ್ಕೆ ಬದಲೆಲ್ಲಿಯದು?

ಮೆರವಣಿಗೆಯಲ್ಲಿ ಬರುತ್ತಿದ್ದರೆ ಜೀಪಿನ ಪಕ್ಕದಲ್ಲೇ ನಡೆದು ಬರುತ್ತಿದ್ದ ಅನೇಕರು ಕೈಕುಲುಕುತ್ತಿದ್ದರು, ಆಟೋಗ್ರಾಫ್ ತೆಗೆದುಕೊಳ್ಳುತ್ತಿದ್ದರು. ಆ ಗುಂಪಿನ ಮಧ್ಯೆ ಒಬ್ಬ ಹುಡುಗ, ಯಾಕೋ ಗೊತ್ತಿಲ್ಲ ಹಿಡಿದ ಕೈ ಬಿಡಲೊಲ್ಲ. "ನೀವು ಸಿನೆಮಾ, ಸ್ಕೂಲು, ಸಭೆ, ಭಾಷಣ ಅಂತ ಬೇಕಾದ್ದು ಮಾಡಿಕ್ಯಳ್ರಿ. ಆದರೆ ಹದಿನೈದು ದಿನಕ್ಕೊಂದು ಓ ಮನಸೆ ಕೊಟ್ಟು ಬಿಡ್ರಿ. ನಿಮ್ಮ ಅನುಭವದ ಮಾತು, ಸಮಾಧಾನದ ನಾಲ್ಕು ಸಾಲು... ಅಷ್ಟು ಸಾಕು" ಅನ್ನುವ ಹೊತ್ತಿಗೆ ಆ ಹುಡುಗ ತುಂಬ ಭಾವುಕನಾಗಿದ್ದ.

ಮನಸು ಮುದಗೊಳ್ಳುವುದೇ ಇಂಥ ಕಾರಣಗಳಿಗೆ.

(ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X