ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡು ಕಷ್ಟದ ಕೆಎಸ್ ನ ಮತ್ತು ಬಲು ಖಾರದ ಕಾರಂತ!

By Staff
|
Google Oneindia Kannada News

ಮಲ್ಲಿಗೆ ಕವಿ ಕೆಎಸ್ ನ ಬಳಿ ಬಸ್ ಚಾರ್ಜಿಗೂ ದುಡ್ಡಿರಲಿಲ್ಲ... ಕಾರಂತರು ಖಾರದ ಮಾತಿಗೆ ಎತ್ತಿದ ಕೈ.. ಹಾ.ಮಾ.ನಾಯಕ್ ಮಾಡಿದ ವ್ಯಂಗ್ಯ..

ರವಿ ಬೆಳಗೆರೆ

K.S. Narasimhaswamyಪಯಣ ಮುಗಿಯುವ ತನಕ..

ಸುಮಾರು ವರ್ಷಗಳ ಹಿಂದಿನ ಮಾತು. ಇವತ್ತು ಕನ್ನಡದಲ್ಲಿ ಸೊಗಸಾಗಿ ಬರೆಯುತ್ತಿರುವ, ಸದ್ಯಕ್ಕೆ ಅಮೆರಿಕಾದಲ್ಲಿರುವ ಕತೆಗಾರರೊಬ್ಬರ ಮದುವೆ ಸಂದರ್ಭ.

ಅವತ್ತು, ಮದುವೆ ಮುಗಿದು ವಧೂವರರು ಊರಿಗೆ ಹೊರಟಿದ್ದರು. ನಾಗಮಂಗಲದಲ್ಲಿ ಅವರ ಮನೆ. ಮದುವೆಗೆ ಬಂದವರಿಗೆ ಅನುಕೂಲವಾಗಲಿ ಎಂದು ಬಸ್ಸೊಂದನ್ನು ಮಾಡಿದ್ದರು. ಇನ್ನೇನು ಹೊರಡಬೇಕು ಅನ್ನುವ ಹೊತ್ತಿಗೆ ಆ ಬಸ್ಸಿಗೆ ಹಿರಿಯರೊಬ್ಬರು ಹತ್ತಿದರು.

ನಾನು ನಾಗಮಂಗಲಕ್ಕೆ ಹೋಗಬೇಕು. ದಯವಿಟ್ಟು ಅಲ್ಲೀ ತನಕ ಬಿಟ್ಟುಬಿಡಿ. ಬಸ್ಸಲ್ಲಿ ಹೋಗುವಷ್ಟು ಅನುಕೂಲಸ್ಥನಲ್ಲ ಅಂದರು. ಅವರನ್ನು ಬಸ್ಸಿಗೆ ಹತ್ತಿಸಿಕೊಳ್ಳಲಾಯಿತು.

ಎಷ್ಟೋ ದೂರ ಹೋದ ಮೇಲೆ ಅಲ್ಲಿದ್ದ ಒಬ್ಬರಿಗೆ ಅನುಮಾನ ಬಂತು. ಅವರು ನೋಡುವುದಕ್ಕೆ ಕೆ.ಎಸ್.ನರಸಿಂಹಸ್ವಾಮಿಯವರ ಥರ ಕಾಣುತ್ತಿದ್ದಾರಲ್ಲ ಅಂದುಕೊಂಡರು. ಕತೆಗಾರರೂ ಅವರನ್ನು ನೋಡಿರಲಿಲ್ಲ. ಸುತ್ತಿ ಬಳಸಿ ವಿಚಾರಿಸಲಾಗಿ ಅವರೇ ಕವಿ ಕೆ.ಎಸ್.ನರಸಿಂಹಸ್ವಾಮಿ ಅನ್ನುವುದು ಖಾತ್ರಿಯಾಯಿತು.

ನಾನು ಅವರನ್ನು ಮಾತಾಡಿಸಲು ಹೋಗಲಿಲ್ಲ. ಆ ಸ್ಥಿತಿಯಲ್ಲಿ ಅವರಿಗೂ ಅನಾಮಿಕತೆ ಬೇಕಿತ್ತೇನೋ? ನಾನು ಪರಿಚಯ ಮಾಡಿಕೊಂಡರೆ ಎಷ್ಟು ಮುಜುಗರ ಪಟ್ಟುಕೊಳ್ಳುತ್ತಿದ್ದರೋ ಏನೋ? ಆದರೆ ಅವರ ಹತ್ತಿರ ನಾಗಮಂಗಲಕ್ಕೆ ಹೋಗಲು ಬೇಕಾದಷ್ಟು ದುಡ್ಡೂ ಇದ್ದಂತಿರಲಿಲ್ಲ. ಇದೆಲ್ಲ ಮೊನ್ನೆ ಮೈಸೂರು ಮಲ್ಲಿಗೆ ನಾಟಕ ನೋಡಿದಾಗ ಮತ್ತೆ ನೆನಪಾಯಿತುಅಂದರು ಆ ಕತೆಗಾರರು.

ಇಂಥ ಮುಳ್ಳಬೆರಳಲ್ಲಿ ಅವರು ಮಲ್ಲಿಗೆಯ ಮಾಲೆ ಹಿಡಿದಿದ್ದರಾ? ಬೆಟ್ಟಗಳ ನಡುವಿನ ಹಾದಿಯಲ್ಲಿ ಸಾಗಿಯೂ ನೀ ಬರುವ ಹಾದಿಯಲಿ ತಂಪಾಗಿ, ಬೇಲಿಗಳ ಸಾಲಿನಲಿ ಹಸಿರು ಕೆಂಪಾಗಿ ಎಂದು ಬರೆದರಾ?

***

ಅಸ್ತೋನ್ಮುಖರೂ ಇರ್ತಾರಾ?

ತಮ್ಮ ಉಲ್ಟಾ ಸೀದಾ ಮಾತುಗಾರಿಕೆಯಿಂದ ಖಾರಂತ ಎಂದು ಕರೆಸಿಕೊಂಡವರು ಶಿವರಾಮ ಕಾರಂತರು.

ಅದೊಮ್ಮೆ ಸಾಲಿಗ್ರಾಮದ ಕಾರಂತರ ಮನೆಗೆ ಬಯಲು ಸೀಮೆಯ ಕಲಾ ತಂಡವೊಂದು ತೆರಳಿತ್ತು. ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಹಿರಿಯಾಸೆ ಕಲಾವಿದರಿಗೆ. ಕಾರಂತರೂ ಒಪ್ಪಿದ್ದರು. ಇವರ ನಾಟಕ ನೋಡಿ, ತಾವೂ ಒಂದೆರಡು ಪ್ರಸಂಗ ಅಭಿನಯಿಸಿ ತೋರಿಸಿದರು. ಎಲ್ಲರಿಗೂ ಚಹಾ, ತಿಂಡಿ ಕೊಡಿಸಿದರು. ಕಲಾವಿದರಿಗೆ ಹಿಗ್ಗೋ ಹಿಗ್ಗು.

ತಮ್ಮಲ್ಲಿಗೆ ಬಂದವರೆಲ್ಲ ಪ್ರಶ್ನೆ ಕೇಳುವುದನ್ನು ನೆನಪು ಮಾಡಿಕೊಂಡ ಕಾರಂತರು ನೀವು ಏನಾದ್ರೂ ಪ್ರಶ್ನೆ ಕೇಳುವುದಿದ್ದರೆ ಕೇಳಬಹುದು ಅಂದರು.

ಕಲಾತಂಡದ ಮುಖಂಡನಂತಿದ್ದ ಒಬ್ಬಾತ ಧೈರ್ಯ ತಂದುಕೊಂಡು ಕೇಳಿದ : ಸಾರ್ ಉದಯೋನ್ಮುಖ ಕಲಾವಿದರಿಗೆ ನಿಮ್ಮ ಸಲಹೆ ಏನು?

ಪ್ರಶ್ನೆ ಮುಗಿವ ಮುನ್ನವೇ ಕಾರಂತಜ್ಜ ಸಿಟ್ಟಾದರು. ಉದಯೋನ್ಮುಖರು ಅಂದರೇನು?ರಂಗಕ್ಕೆ ಹೊಸಬರಾಗಿ ಬಂದವರನ್ನು ಉದಯೋನ್ಮುಖರು ಅನ್ನುವುದಾದರೆ, ಐದಾರು ವರ್ಷಗಳಿಂದ ಇಲ್ಲೇ ಇರುವವರನ್ನು ಅಸ್ತೋನ್ಮುಖರು ಅಂತ ಕರೀ ಬೇಕಾ? ಹುಟ್ಟಿದಾಗಿನಿಂದ ಸಾಯುವವರೆಗೂ ಎಲ್ಲರೂ ಉದಯೋನ್ಮುಖರೇ.. ಅರ್ಥಮಾಡಿಕೊಳ್ಳಿ

ಈ ಉತ್ತರ ಕೇಳಿದ ನಂತರ ಯಾರೂ ಪ್ರಶ್ನಿಸುವ ಸಾಹಸ ಮಾಡಲಿಲ್ಲ.

***

ಹಿಂದೇನೇ ಸಾಯ್ಬೇಕಿತ್ತು..

ನಾಡಿನ ಎಲ್ಲ ಪತ್ರಿಕೆಗಳ ಸಂಪಾದಕರಿಂದ ಖ್ಯಾತ ಅಂಕಣಕಾರ ಎಂದು ಕರೆಸಿಕೊಂಡವರು ಹಾ.ಮ.ನಾಯಕ.

ಲಂಕೇಶ್ ಮಾತ್ರ ಅವರನ್ನು ಕುಖ್ಯಾತ ಅಂಕಣಕೋರ ಎಂದೇ ಕರೆಯುತ್ತಿದ್ದರು. ನಾಡಿನ ಯಾರೇ ಪ್ರಸಿದ್ಧ ಸಾಹಿತಿ/ಗಣ್ಯ ವ್ಯಕ್ತಿ ತೀರಿಕೊಂಡರೂ, ಮರುವಾರವೇ ಐದಾರು ಪತ್ರಿಕೆಗಳಲ್ಲಿ ಆ ವ್ಯಕ್ತಿಯ ವ್ಯಕ್ತಿತ್ವ ವಿಶೇಷವನ್ನು ಹಾ.ಮ.ನಾಯಕ ಹಾಡಿ ಹೊಗಳುತ್ತಿದ್ದರು. ಈ ಕಾರಣದಿಂದಲೇ ಅವರಿಗೆ ಸತ್ತವರ ಸಾಹಿತಿ ಎಂಬ ಲೇಬಲ್ಲೂ ಅಂಟಿಕೊಂಡಿತ್ತು.

ಇಂಥ ನಾಯಕರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದ ಸಂದರ್ಭ. ಅವರ ಶಿಷ್ಯರು, ಅಭಿಮಾನಿಗಳೆಲ್ಲ ಸೇರಿಕೊಂಡು ಒಂದು ಅಭಿನಂದನಾ ಸಮಾರಂಭಮಾಡಿದರು. ಅಂದಮೇಲೆ ಕೇಳಬೇಕೆ? ಆ ಸಭೆಯ ತುಂಬ ಭಟ್ಟಂಗಿಗಳೇ ತುಂಬಿಹೋಗಿದ್ದರು.

ಅಭಿನಂದನಾ ಭಾಷಣ ಮಾಡಿದವನೊಬ್ಬ ಹಾ.ಮಾ.ನಾ ಅವರಿಗೆ ಆ ಪ್ರಶಸ್ತಿ ಹಿಂದೆ ಎಂದೋ ಬರಬೇಕಿತ್ತು. ಅದು ತೀರಾ ತಡವಾಗಿ ಬೇದಿದೆಎಂದು ಶುರುಮಾಡಿ ಯದ್ವಾ ತದ್ವಾ ಹೊಗಳತೊಡಗಿದ. ಪುಣ್ಯಕ್ಕೆ ಅವನ ಭಾಷಣ ಬೇಗ ಮುಗಿಯಿತು.

ನಂತರ ಮೈಕ್ ನ ಮುಂದೆ ನಿಂತ ಹಾ.ಮಾ.ನಾ. ಹೀಗೆಂದರು : ಈಗ ಅಭಿನಂದನಾ ಭಾಷಣ ಮಾಡಿದವರು ನನಗೆ ಮುಜುಗರವಾಗುವಂತೆ ಮಾತಾಡಿದರು. ಅಕಸ್ಮಾತ್ ಇದೇ ಮನುಷ್ಯನಿಗೆ ನನ್ನ ಶ್ರದ್ಧಾಂಜಲಿ ಸಭೆಯಲ್ಲಿ ಮಾತಾಡಲು ಬಿಟ್ಟರೆ ಮಾನ್ಯ ಹಾ.ಮಾ.ನಾಯಕರು ಹಿಂದೆ ಎಂದೋ ಸಾಯಬೇಕಿತ್ತು. ದುರದೃಷ್ಟವಶಾತ್ ಈಗ ಸತ್ತಿದ್ದಾರೆ. ಸಾವೂ ಅವರಿಗೆ ತೀರ ತಡವಾಗಿ ಬಂದಿದೆಅನ್ನುತ್ತಾರೇನೋ ಎಂದೇ ಬಿಟ್ಟರು!

ಅಭಿನಂದನಾ ಭಾಷಣ ಮಾಡಿದ್ದನಲ್ಲ ಅವನ ಮುಖ ನೋಡಬೇಕಿತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X