• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓದಿಕೊಳ್ಳಿ ಒಂದು ಖಾಸ್ ಬಾತ್..ದಿನಾ ಸಾಯುವವರ ಅಳಲು ಕೇಳಲು ಒಂದಾದರೂ ಹಸೀನಾ ಡೇ?

By Staff
|
ಎಲ್ಲಿಗೆ ಹೋದರೂ ಬುರುಖಾ ಹಾಕ್ಕೊಂಡೇ ಹೋಗಬೇಕು. ಹತ್ರಕ್ಕೆ ಬರೋಕೇ ಜನ ಹಿಂಜರೀತಾರೆ. ಒಂದು ಸಮಾಧಾನ ಅಂದ್ರೆ, ಹಾಯ್ ಬೆಂಗಳೂರ್ ಓದುಗರು ಆಗಾಗ ಫೋನ್ ಮಾಡ್ತಿರ್ತಾರೆ. ವಿಚಾರಿಸ್ಕೋತಾರೆ.ಅದೇ ಸಮಾಧಾನ!ಅಂತಾಳೆ ನನ್ನ ಮಗಳು ಹಸೀನಾ.

Flash back of an acid attackಅತ್ಯಂತ ಅಕ್ಕರೆಯಿಂದ ಮಗಳೇ.. ಅಂತ ನಾನು ಕರೆದ ನತದೃಷ್ಟ ಹುಡುಗಿಯದು. ಎಂಟು ವರ್ಷಕ್ಕೆ ಮುಂಚೆ ಅದೆಷ್ಟು ಮುದ್ದಾಗಿದ್ದಳು! ಅಪ್ಪ ಮಿಲಿಟರಿಯಲ್ಲಿದ್ದ. ಮನೆಯಲ್ಲಿ ಅಜ್ಜಿ, ಅಮ್ಮ, ಒಬ್ಬ ತಂಗಿ. ಒಂದು ಹಂತದ ತನಕ ಓದಿ, ಅಷ್ಟಿಷ್ಟು ಕಂಪ್ಯೂಟರ್ ಕಲಿತು ಈ ಐಟಿ ಯುಗದಲ್ಲಿ ತನ್ನ ಬದುಕು ರೂಪಿಸಿಕೊಳ್ಳಲು ಚಡಪಡಿಸಿದ ಹುಡುಗಿಯ ಗತಿ ಏನಾಯಿತು? ಅವನ್ಯಾರು ಜೋಸೆಫ್ ರಾಡ್ರಿಕ್ಸ್? ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಅನ್ನೋ ಕಾರಣಕ್ಕೆ ಅನಾಮತ್ತು ಒಂದು ಲೀಟರ್ ಸಲ್ಫೂರಿಕ್ ಆಸಿಡ್ ತಂದು 1999ರ ಏಪ್ರಿಲ್ 21ರಂದು ಹಸೀನಾಳ ಮೇಲೆ ಸುರಿದು ಬಿಟ್ಟ. ತಲೆ ಬುರುಡೆ ಕರಗಿತ್ತು. ಮೂಗು ಬಿಚ್ಚಿ ಹೋಯಿತು. ಕಣ್ಣು ಕುರುಡಾದವು... ಭಗವಂತಾ! ಈ ಹುಡುಗಿ ಯಾಕಾದರೂ ಬದುಕುಳಿದಳೋ ಅಂತ ಪ್ರತಿಯೊಬ್ಬರೂ ಕನಲಿದರು. ಇರಲಿ ಬಿಡಿ, ಈ ಹುಡುಗೀನ ನಾವು ಬದುಕಿಸಿಕೊಳ್ಳೋಣ.. ಅಂದದ್ದು ಹಾಯ್ ಬೆಂಗಳೂರ್ ಪತ್ರಿಕೆ.

ಹಸೀನಾ ಇನ್ನೂ ಆಸ್ಪತ್ರೆಯಲ್ಲಿದ್ದಾಗಲೇ ಹೋಗಿ ನೋಡಿದೆ. ಅವಳ ತಂದೆಯ ಸಂಕಟ ದೊಡ್ಡದು. ಬೆಳೆದ ಮಗಳ ಕೈಲಿ ಎಡಗೈ ಬಲಗೈ ಅನ್ನದೆ ಸೇವೆ ಮಾಡಿಸಿಕೊಳ್ಳುವುದಕ್ಕೆ ಮುಜುಗರ, ಸಂಕೋಚ ಆಗುತ್ತದೆ. ಅಂಥದರಲ್ಲಿ ಬೆಳೆದು ನಿಂತ ಮಗಳ ದೇಹ ಸುಟ್ಟು ಹೋಗಿದೆ, ಕರಗಿ ಹೋಗಿದೆ, ವಿರೂಪಗೊಂಡಿದೆ. ಪ್ರತಿ ನಿತ್ಯ ಅವಳನ್ನು ತೊಳೆದು, ಒರೆಸಿ, ತಿನ್ನಿಸಿ, ತಟ್ಟಿ ಮಲಗಿಸಬೇಕು. ಅದನ್ನೆಲ್ಲ ಮಾಡಿಸುತ್ತದೆ ಪ್ರೀತಿ. ಆದರೆ ದುಡ್ಡು?

ಕೇವಲ ಸರ್ಕಾರಿ ಸಂಬಳ ನಂಬಿಕೊಂಡ ತಂದೆ ಪ್ಲಾಸ್ಟಿಕ್ ಸರ್ಜರಿಗೆ, ಆಪರೇಷನ್ನುಗಳಿಗೆ, ಔಷಧಿಗಳಿಗೆ ಎಲ್ಲಿಂದ ಹಣ ತಂದಾನು? ನಾವೊಂದಿಷ್ಟು ಹಣ ಕೊಟ್ಟೆವು. ಹಾಯ್ ಬೆಂಗಳೂರ್ ಓದುಗರು ಧಾರಾಳಿಗರಾದರು. ಹಸೀನಾಳನ್ನು ನಮ್ಮ ನಿವೇದಿತಾ ಬೆನ್ನಲ್ಲಿ ಹುಟ್ಟಿದ ತಂಗಿಯಂತೆ ಹಚ್ಚಿಕೊಂಡಳು. ಆಗ ಮಂತ್ರಿಯಾಗಿದ್ದ ಅನಂತಕುಮಾರ್ ಗೆ ಹೇಳಿ ಫ್ಲೈಟ್ ಟಿಕೆಟ್ ಕೊಡಿಸಿ ಹಸೀನಾಳನ್ನು ಪಂಜಾಬಕ್ಕೆ ಕಳಿಸಿ ಪ್ರಸಿದ್ಧ ವೈದ್ಯೆ ಡಾ.ನೀತೂ ಸಿಂಗ್ ಕೈಲಿ ಕಣ್ಣಿನ ಆಪರೇಷನ್ ಮಾಡಿಸಿದೆ.

ಎರಡರ ಪೈಕಿ ಒಂದು ಕಣ್ಣಿನೊಳಕ್ಕೆ ಆಸಿಡ್ ಇಳಿದು, ಅದು ಪೂರ್ತಿಯಾಗಿ ಸುಟ್ಟು ಹೋಗಿದೆ. ಆದರೆ ಇನ್ನೊಂದು ಕಣ್ಣಿಗೆ ಬೆಳಕು ಬರಬಹುದು, let me try ಅಂದಿದ್ದರು ಡಾ.ನೀತೂ ಸಿಂಗ್. ನಂಗೆ ಕಣ್ಣು ಬಂದ ಕೂಡಲೆ ಮೊದ್ಲು ರವಿ ಅಂಕಲ್ ನ ನೋಡಬೇಕು. He is the light of my life ಅಂದಿದ್ದಳು ಹಸೀನಾ. ಕಣ್ಣು ಕೊಂಚ ಮಟ್ಟಿಗೆ ಬಂದೂ ಬಂತು. ಅಂಕಲ್, ನಾನು ಕಂಪ್ಯೂಟರಿನಲ್ಲಿ ಕೆಲ್ಸ ಮಾಡೋ ಹಂಗಾಗಬೇಕೂ.. ಅಂತ ಉದ್ಗರಿಸಿತ್ತು ಹುಡುಗಿ. ಆದರೆ ಬಂದ ಕಣ್ಣು ಬಂದ ಹಾಗೆಯೇ ಮುರುಟಿಹೋಯಿತು.

ಇವತ್ತು ಕುಳಿತು ಲೆಕ್ಕ ಹಾಕಿದರೆ ಹಸೀನಾಳ ಚಿಕಿತ್ಸೆಗೆ ಸುಮಾರು ಹತ್ತು ಲಕ್ಷ ರೂಪಾಯಿ ಖರ್ಚಾಗಿದೆ. ಕರಗಿ ಹೋದ ಮೂಗು, ಚರ್ಮವೇ ನಶಿಸಿಹೋದ ತುಟಿ ಮತ್ತು ಅಕಸ್ಮಾತು ದೃಷ್ಟಿ ಸರಿಹೋದೀತು ಎಂಬ ಭರವಸೆ ಉಳಿಸಿರುವ ಕಣ್ಣು -ಈ ಮೂರರವು ಆಪರೇಷನ್ನುಗಳಾಗಬೇಕು. ಇದಕ್ಕೆಲ್ಲ ಹಸೀನಾಳ ಅಪ್ಪ ತಾವಿದ್ದ ಸ್ವಂತ ಮನೆಯ ಮೇಲೆ ಸಾಲ ಮಾಡಿದರು. ಪ್ರಾವಿಡೆಂಟ್ ಫಂಡ್ ನಿಂದ ಹಣ ಕಿತ್ತು ತಂದರು. ಮನೆ ಮೇಲೆ ಸಾಲ ಮಾಡಿದ ಸಾಲಕ್ಕೆ ಬಡ್ಡಿಗೆ ಬಡ್ಡಿ ಸೇರಿ, ಅದನ್ನಿನ್ನು ಸ್ವಂತ ಮಾಡಿಕೊಳ್ಳಲಾಗದು ಅನ್ನಿಸಿದಾಗ ಇದ್ದೊಂದು ಮನೆಯನ್ನೂ ಮಾರಿಯೇಬಿಟ್ಟರು ಹುಸೇನ್. ಈಗ ಇರಲಿಕ್ಕೆ ಮನೆಯಿಲ್ಲ. ಬಾಡಿಗೆ ಮನೆಗೆ ಹೋಗೋಣವೆಂದರೆ ಯಾರೂ ಅವರಿಗೆ ಬಾಡಿಗೆ ಮನೆ ಕೊಡುವುದಿಲ್ಲ.

ಹಸೀನಾಳನ್ನು ನೋಡಿದರೆ ಮಕ್ಕಳು ಹೆದರುತ್ತಾರೆ, ನಾವು ಮನೆ ಕೊಡಲ್ಲ!ಅನ್ನುತ್ತಾರಂತೆ. ಇದಕ್ಕಿಂತ ಬದುಕು ಭಯನಾಕವಾಗಲು ಸಾಧ್ಯವೇ? ಮಿಲಿಟರಿ ನಿಯಮಗಳನ್ನು ಮೀರಿ ಅವರಿಗೀಗ ಗಂಗಮ್ಮ ಗುಡಿ ಸರ್ಕಲ್ಲಿನ ಬಳಿ ಮನೆಯೊಂದನ್ನು ಕ್ವಾರ್ಟರ್ಸ್ ಎಂಬಂತೆ ಕೊಡಲಾಗಿದೆ. ಚಿಕ್ಕ ಮಗಳಿಗೆ ಮದುವೆ ಮಾಡಿದ್ದಾರೆ. ಹೀಗಾಗಿ ಮನೆಯಲ್ಲಿ ಹಸೀನಾ, ತಾಯಿ ಜೀನತ್ ಮತ್ತು ತಂದೆ ಹುಸೇನ್ ಮಾತ್ರ. ಇಡೀ ದಿನ ಅವಳನ್ನು ತಾಯಿ ಬಿಟ್ಟು ಕದಲುವಂತಿಲ್ಲ.

ನನ್ನ ಕೆಲಸ ನಾನು ಮಾಡಿ ಕೊಳ್ತೀನಿಅಂತ ಹೊರಟ ಹುಡುಗಿ ಒಮ್ಮೆ ಬಿದ್ದು ಪೆಟ್ಟು ಮಾಡಿಕೊಂಡಳು. ಹೋಗಲಿ ಬ್ರೆಯಿಲ್ ಲಿಪಿಯಾದರೂ ಕಲಿಯುತ್ತೇನೆ ಅಂತ ಆಸೆಪಟ್ಟವಳಿಗೆ, ಇಪ್ಪತ್ತು ವರ್ಷಕ್ಕೆ ಮೇಲ್ಪಟ್ಟವರಿಗೆ ಬ್ರೆಯಿಲ್ ಲಿಪಿ ಕಲಿಸಲು ಸಾಧ್ಯವಿಲ್ಲ ಅಂದರಂತೆ. ಅದಕ್ಕಿಂತ ಮುಖ್ಯವಾದ ಸಮಸ್ಯೆಯೆಂದರೆ, ಹಸೀನಾಗೆ ಹೊರಕ್ಕೆ ಹೋಗುವುದೇ ಕಷ್ಟ. ಹೊರಬಿದ್ದರೆ ಬುರುಖಾ ಹಾಕಿಕೊಳ್ಳಬೇಕು. ಹೆಚ್ಚಿನ ಧೂಳು ಗಾಳಿಗೆ ಹೋದರೆ ಇನ್ ಫೆಕ್ಷನ್ ಗಳಾಗುತ್ತವೆ.

ದಿನವಿಡೀ ಮನೆಯಲ್ಲಿ ಹಾಡು ಕೇಳುತ್ತಾಳೆ, ನ್ಯೂಸ್ ಕೇಳುತ್ತಾಳೆ : ಆದರೆ ಕಷ್ಟದಲ್ಲಿರುವವರಿಗೆ ಕಾಲವೆಂಬುದು ಬೇಗ ಸರಿಯುವುದೇ ಇಲ್ಲ. ವಿರೂಪ, ಕುರುಡು, ನಿಸ್ಸಾಹಾಯಕತೆ ಎಲ್ಲ ಸೇರಿ ವಿಪರೀತ ಭಾವುಕಲಾಗಿಬಿಡುವ ಹಸೀನಾ ಒಮ್ಮೆ ನ್ಯಾಯಾಲಯದಲ್ಲೇ ಕಿಟಾರಣೆ ಕಿರುಚಿ, ಕೂಗಾಡಿ ಬಿಟ್ಟಿದ್ದಳು. ಅವಳು ಹಾಗೆ ಮೈತುಂಬ ವ್ರಣಗಳನ್ನಿಟ್ಟುಕೊಂಡು ನ್ಯಾಯಲಯಕ್ಕೆ ಹೋದದ್ದೇ ಹೆಚ್ಚು.

ಆದರೆ ನ್ಯಾಯಲಯ ನೀಡಿದ ಶಿಕ್ಷೆಯಾದರೂ ಎಷ್ಟು? 1999ರ ಏಪ್ರಿಲ್ 21ರಂದು ಸುರಿದ ಆಸಿಡ್ಡಿಗೆ 2004ರ ಜುಲೈ ತಿಂಗಳಲ್ಲಿ ಜೋಸೆಫ್ ರಾಡ್ರಿಕ್ಸ್ ಗೆ ನ್ಯಾಯಾಧೀಶರು ಐದು ವರ್ಷ, 3ತಿಂಗಳ ಸಜೆ ವಿಧಿಸಿದರು! ಜೊತೆಗೆ 3ಲಕ್ಷ ದಂಡ ಹಾಕಿದರು. ಅಷ್ಟೊತ್ತಿಗಾಗಲೇ ರಾಡ್ರಿಕ್ಸ್ ಐದು ವರ್ಷ ಜೈಲು ಕಳೆದಿದ್ದ. ಈಚೆಗೆ ಬಂದವನು 3 ಲಕ್ಷ ಕಟ್ಟಿ ಸ್ವತಂತ್ರ್ಯನಾಗಲು ಹವಣಿಸಿದ. ಆ 3 ಲಕ್ಷ ಪಡೆಯಲಿಕ್ಕೂ ಹಸೀನಾಳ ತಂದೆ ಪರದಾಡಬೇಕಾಯಿತು.

ಹಸೀನಾಳನ್ನು ಮನೆಯಲ್ಲಿ ಕೂಡಿ ಹಾಕಿ, ಬೀಗ ಹಾಕಿ, ತಂದೆ ತಾಯಿಗಳಿಬ್ಬರೂ ಹೋಗಿ 3 ಲಕ್ಷ ಬಿಡಿಸಿಕೊಂಡು ಬಂದರು. ಯಾವ ಶತ್ರುವಿಗೆ ಬೇಕು ಇಂಥ ಶಿಕ್ಷೆ? ಕೈಗೆ ಬಂದ 3 ಲಕ್ಷವನ್ನೂ ಅವರು ಖರ್ಚು ಮಾಡುವಂತಿರಲಿಲ್ಲ. ಐದು ವರ್ಷ ಫಿಕ್ಸೆಡ್ ಡೆಪಾಸಿಟ್ ಮಾಡಿಡಬೇಕು. ಇದೆಲ್ಲದರ ಮಧ್ಯೆ ಚಿಕ್ಕದೊಂದು ರಿಲೀಫು ಅಂದರೆ ಕರ್ನಾಟಕದ ಉಚ್ಚ ನ್ಯಾಯಾಲದ ಜೋಸೆಫ್ ರಾಡ್ರಿಕ್ಸ್ ಗೆ 2006ರಲ್ಲಿ ಜೀವಾವಧಿ ಶಿಕ್ಷೆ ನೀಡಿ ಮತ್ತೆರಡು ಲಕ್ಷ ಜುಲ್ಮಾನೆ ಹಾಕಿತು

. ಅವ್ನು ಸಾಯೋತಂಕಾ ಜೈಲಲ್ಲಿರಬೇಕು ಅಂಕಲ್! He should never be released. ನನ್ನನ್ನು ಈ ಗತೀಗೆ ತಂದುಬಿಟ್ಟ ಅವ್ನು. ಎಲ್ಲಿಗೆ ಹೋದರೂ ನಾನು ಬುರುಖಾ ಹಾಕ್ಕೊಂಡೇ ಹೋಗಬೇಕು. ಹತ್ರಕ್ಕೆ ಬರೋಕೇ ಜನ ಹಿಂಜರೀತಾರೆ. ವಿಧವೇನ ನೋಡಿದಂಗೆ ನೋಡ್ತಾರೆ. ಒಂದು ಸಮಾಧಾನ ಅಂದ್ರೆ, ಹಾಯ್ ಬೆಂಗಳೂರ್ ಓದುಗರು ಆಗಾಗ ಫೋನ್ ಮಾಡ್ತಿರ್ತಾರೆ. ವಿಚಾರಿಸ್ಕೋತಾರೆ.ಬೇರೆ ಬೇರೆ ಊರುಗಳಿಂದ ಬರೋರು, ಬಿಡುವು ಮಾಡ್ಕೊಂಡು ನಮ್ಮನೇಗೆ ಬಂದು ಹೋಗ್ತಾರೆ. ಅದೇ ಸಮಾಧಾನ!ಅಂತಾಳೆ ನನ್ನ ಮಗಳು ಹಸೀನಾ.

ಆದರೆ ಈ ಸಮಾಧಾನ ಜೀವನ ಪರ್ಯಂತದ್ದಾ? ಕಾರ್ಗಿಲ್ ನ ವಿಧವೆಯನ್ನು ಹೇಗಿದ್ದೀರಿ?ಅಂತ ನಾವ್ಯಾರಾದರೂ ವಿಚಾರಿಸಿದೆವಾ? ನಾಳೆ ಹಸೀನಾಳ ತಂದೆ ತಾಯಿ ತೀರಿಹೋದರೆ ಈ ಹುಡುಗಿಯ ಗತಿಯೇನು? ದಿನಾ ಸಾಯುವವರಿಗೆ ಅಳುವವರ್ಯಾರು ಅನ್ನುತ್ತೇವೆ. ವರ್ಷಕ್ಕೊಂದು ಬರ್ತ್ ಡೇ , ತಿಥಿ, ಫಾದರ್ಸ್ ಡೇ, ಟೀಚರ್ಸ್ ಡೇ, ಮದರ್ಸ್ ಡೇ, ಫ್ರೆಂಡ್ ಶಿಪ್ ಡೇ , ವ್ಯಾಲಂಡೈನ್ಸ್ ಡೇ ಅಂತ ಸಂಭ್ರಮಿಸುತ್ತೇವಲ್ಲ? ನಮ್ಮ ನತದೃಷ್ಟ ಹುಡುಗಿಗಾಗಿ ಒಂದೇ ಒಂದು ಹಸೀನಾ ಡೇ?

ಸುಮ್ಮನೇ ಒಮ್ಮೆ ಹೋಗಿ ಬನ್ನಿ. ಅವಳ ನಂಬರು 080 2838 6351. ಇದಕ್ಕೆ ಫೋನು ಮಾಡಿ ವಾರಕ್ಕೊಮ್ಮೆಯಾದರೂ ಮಾತನಾಡಿಸಿ. ಹೋಗುವ ಮುನ್ನ ಒಂದಷ್ಟು ಹಣ್ಣು, ಕೈಲಾದರೆ ಹಣ, ಒಂದು ಹಿಡಿ ಪ್ರೀತಿ ಒಯ್ಯಿರಿ. ಪಕ್ಕ ಕುಳಿತು ನಾಲ್ಕು ಸಮಾಧಾನದ ಮಾತಾಡಿ. ಒಂದು ಫೊಟೋ ತೆಗೆಸಿಕೊಳ್ಳಿ.

ಒಂದು ವಿನಂತಿಯೆಂದರೆ, ರಾತ್ರಿ ಹೊತ್ತು ಫೋನು ಮಾಡಬೇಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more