ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣ ರಾಜಕುಮಾರು : ಎಷ್ಟಾದರೂ ನಿಜ ಮಾನವ ನಮ್ಮಂತೆ, ನಿಮ್ಮಂತೆ!

By Staff
|
Google Oneindia Kannada News

ಅಣ್ಣ ರಾಜಕುಮಾರು : ಎಷ್ಟಾದರೂ ನಿಜ ಮಾನವ ನಮ್ಮಂತೆ, ನಿಮ್ಮಂತೆ!
ದೂರ ನಿಂತು ಒಬ್ಬ ಕಲಾವಿದನ ಕುಟುಂಬವನ್ನು ಗಮನಿಸಿ ನೋಡಿ? ಅಲ್ಲಿ ಪ್ರೀತಿ, ಮುನಿಸು, ರಾಗ, ದ್ವೇಷ, ತಕರಾರು, ಮದುವೆಯಾಚೆಗಿನ ಸಂಬಂಧ, ಹಳೆಯದೊಂದು ಮರೆಯಲಾಗದ ಕಹಿ, ಬಿಡಿಸಿಕೊಳ್ಳಲಾಗದ ಸಂಕಟ, ತೆಂಚಿಕೊಂಡೇನೆಂದರೂ ತೆಂಚಿಕೊಳ್ಳಲಾಗದ ಸಂಬಂಧ, ಅದರೆಡೆಗೆ ಹೆಂಡತಿಯ ಕಕ್ಕಲತಿ, ಮಕ್ಕಳ ಮೌನ- ಇವೆಲ್ಲ ಎಲ್ಲ ಕುಟುಂಬಗಳಲ್ಲಿ ಇದ್ದಂತೆಯೇ ರಾಜಕುಮಾರ್‌ ಕುಟುಂಬದಲ್ಲೂ ಇದ್ದೇ ಇತ್ತು.

Ravi Belagere on Thatskannada.com ರವಿ ಬೆಳಗೆರೆ

ಹೊರಗೆ ಹುಟ್ಟುಹಬ್ಬದ ಸಿದ್ಧತೆ ಅಂಗಳದಲ್ಲಿ ನಡೆದಿತ್ತು. ಹಿತ್ತಿಲಲ್ಲಿ ಮಗು ತೊಟ್ಟಿಯಲ್ಲಿ ಬಿದ್ದು ಸತ್ತು ಹೋದ ಹಾಗೆ: ರಾಜಕುಮಾರ್‌ ಅವರ ನಿರ್ಗಮನ. ಅವರಿಗಿದ್ದ ಆರೋಗ್ಯ ನೋಡಿದರೆ, ಸಲೀಸಾಗಿ ನೂರು ದಾಟುತ್ತಾರೆ ಎನ್ನುವ ಹಾಗಿದ್ದರು. ಎಪ್ಪತ್ತೆಂಟಕ್ಕೆ ಮೊದಲೇ ನೂರಾಯಿತು. ನಿರಂತರ ಯೋಗ, ಹಿತಮಿತ ಅಭ್ಯಾಸ, ಶಿಸ್ತಿನ ಜೀವನ, ನಿಯಮಿತ ಆಹಾರ, ಚಿಂತೆಗಳಿಲ್ಲದ ಜೀವನ, ಸಾಧನೆಗಳ ಕುರಿತಾದ ನೆಮ್ಮದಿ- ಎಲ್ಲವೂ ಅವರಿಗಿದ್ದವು. ಸಾಯಲು ಕಾರಣವೇ ಇರಲಿಲ್ಲ. ಹಿಂಚು ಮುಂಚು ಅವರದೇ ವಯಸ್ಸಿನ ಎಚ್‌.ಸಿ.ಶ್ರೀಕಂಠಯ್ಯ ಮೈತುಂಬ ಕಾಯಿಲೆಯಿಟ್ಟುಕೊಂಡು ಪರಾತಗಟ್ಟಲೆ ಮಾಂಸ ತಿನ್ನುತ್ತಾರೆ. ಇಂಥವುಗಳನ್ನು ನೋಡಿದಾಗ ಆರೋಗ್ಯ ಮತ್ತು ಆಯುಷ್ಯ ಸಂಬಂಧಿ ಥಿಯರಿಗಳೆಲ್ಲ ಸುಳ್ಳೇನೋ ಅನ್ನಿಸಿಬಿಡುತ್ತದೆ.

ಆದರೂ ರಾಜಕುಮಾರ್‌, ವೀರಪ್ಪನ್‌ ತೆಕ್ಕೆಗೆ ಸಿಕ್ಕು ಬೀಳುವ ಹೊತ್ತಿಗಾಗಲೇ ಸಣ್ಣಗೆ ಅರುಳುಮರಳಿಗೊಳಗಾಗಿದ್ದರು. ಅವರಿಗೆ ಲೌಕಿಕದ ಆಗುಹೋಗುಗಳೆಡೆಗೆ ಗಮನ ಕಡಿಮೆ ಇತ್ತು. ಸೋದರ ವರದಪ್ಪನಾದರೂ ರಾಜಕುಮಾರ್‌ ಪಾಲಿಗೆ ಹೊರಜಗತ್ತಿನ ಬೆಳಕಿಂಡಿಯಿದ್ದಂತೆ ಇದ್ದರು ಅನ್ನುತ್ತಾರೆ: ಆದರೆ ಆ ಬೆಳಕಿಂಡಿ ಕೇವಲ ಸಿನೆಮಾ, ಕಥೆ,ಇಮೇಜು ಇತ್ಯಾದಿಗಳಿಗೆ ಸಂಬಂಧಿಸಿದುದಾಗಿತ್ತೇ ಹೊರತು ಅದನ್ನು ಮೀರಿದುದಾಗಿರಲಿಲ್ಲ. ತುಂಬ ಭಾವುಕರಾಗುತ್ತಿದ್ದ ರಾಜಕುಮಾರ್‌ ಪತ್ನಿ ಮತ್ತು ಮಕ್ಕಳೊಂದಿಗೆ ಜಗಳಕ್ಕೆ ಬೀಳುತ್ತಿದ್ದರು. ಅನೇಕ ಕಾಲ ಅವರು ಪತ್ನಿ ಪಾರ್ವತಮ್ಮನವರೊಂದಿಗೆ ಮಾತು ಬಿಟ್ಟಿದ್ದರು. ಮತ್ತೆ ಅವರಿಬ್ಬರ ಮಧ್ಯೆ ಬಂಧ ಬೆಸೆದದ್ದೇ ವೀರಪ್ಪನ್‌ನಿಂದಾದ ಅಪಹರಣ. ಈ ಮಧ್ಯೆರಾಜ್‌ಕುಮಾರ್‌ವಿಷ ಕುಡಿದರೆಂಬ ಪ್ರಕರಣವೂ ನಡೆದುಹೋಯಿತು.

Dr. Rajkumarಇವತ್ತು ರಾಜ್‌ಕುಮಾರ್‌ ತೀರಿಹೋಗಿರುವ ಸಂದರ್ಭದಲ್ಲಿ ಇವುಗಳನ್ನೆಲ್ಲ ಬರೆದರೆ, ಹೌದಾ? ಅಂತ ಅನ್ನಿಸಬಹುದು. ಆದರೆ ದೂರ ನಿಂತು ಒಬ್ಬ ಕಲಾವಿದನ ಕುಟುಂಬವನ್ನು ಗಮನಿಸಿ ನೋಡಿ? ಅಲ್ಲಿ ಪ್ರೀತಿ, ಮುನಿಸು, ರಾಗ, ದ್ವೇಷ, ತಕರಾರು, ಮದುವೆಯಾಚೆಗಿನ ಸಂಬಂಧ, ಹಳೆಯದೊಂದು ಮರೆಯಲಾಗದ ಕಹಿ, ಬಿಡಿಸಿಕೊಳ್ಳಲಾಗದ ಸಂಕಟ, ತೆಂಚಿಕೊಂಡೇನೆಂದರೂ ತೆಂಚಿಕೊಳ್ಳಲಾಗದ ಸಂಬಂಧ, ಅದರೆಡೆಗೆ ಹೆಂಡತಿಯ ಕಕ್ಕಲತಿ, ಮಕ್ಕಳ ಮೌನ- ಇವೆಲ್ಲ ಎಲ್ಲ ಕುಟುಂಬಗಳಲ್ಲಿ ಇದ್ದಂತೆಯೇ ರಾಜಕುಮಾರ್‌ ಕುಟುಂಬದಲ್ಲೂ ಇದ್ದೇ ಇತ್ತು. ಕಡೆಗಾಲದಲ್ಲಿ ‘ಲಕ್ಷ್ಮೀಶಿವ ಪಾರ್ವತಿ ಎಂಬಾಕೆಯನ್ನು ನನ್ನ ಬುದುಕಿನ ಅವಶ್ಯಕತೆ’ ಎಂಬುದಾಗಿ ಬಹಿರಂಗವಾಗಿ ಎನ್‌.ಟಿ. ರಾಮರಾಯರು ಘೋಷಿಸಿದಂತೆ ರಾಜಕುಮಾರ್‌ ಅವರು ತಮ್ಮ ಬದುಕಿನ ಯಾವ ಹಂತದಲ್ಲೂ ಘೋಷಿಸಲಿಲ್ಲವಾದರೂ, ಅವರ ಮತ್ತು ಅಭಿನೇತ್ರಿ ಲೀಲಾವತಿಯವರ ನಡುವಿನ ಸಂಬಂಧದ ಬಗ್ಗೆ ನಾಡಿಗೆ ನಾಡೇ ಮಾತನಾಡಿತು. ಸುಮ್ಮನಿದ್ದವರು ಅವರಿಬ್ಬರೇ. Of course, ಸುಮ್ಮನಿರುವ ಹಕ್ಕು ಕೂಡ ಅವರಿಬ್ಬರಿಗೇ ಇತ್ತು. ತೀರ, ಈಗೊಂದು ಇಪ್ಪತ್ತು ವರ್ಷಗಳ ಹಿಂದೆಯೂ ಪತ್ರಕರ್ತರ ಮುಂದೆ ನಟ ಬಾಲಕೃಷ್ಣ ತಮ್ಮ ಮದ್ರಾಸಿನ ಮನೆಯಲ್ಲಿ ರಾಜಕುಮಾರ್‌ ಮತ್ತು ಲೀಲಾವತಿ ಭೇಟಿಯಾಗುತ್ತಿದ್ದರೆಂಬ ಸಂಗತಿಯನ್ನು ರಸವತ್ತಾಗಿ ವಿವರಿಸಿ ಹೇಳುತ್ತಿದ್ದರು.

ಅವೆಲ್ಲವೂ, ದೈವಾಂಶ ಸಂಭೂತ ಪಟ್ಟಕ್ಕೇರುವ ಮುಂಚಿನ ದಿನದ ಕಥೆಗಳು! ಏರಿದ ನಂತರವೂ ರಾಜಕುಮಾರ್‌ ಮಾನವಾಂಶ ಸಂಜಾತರಾಗಿಯೇ ಉಳಿದಿದ್ದರು. ಆಗೊಂದು ಈಗೊಂದು ಕದ್ದು ಸಿಗರೇಟು ಸೇದುತ್ತಿದ್ದರು. ಶಂಕರ್‌ನಾಗ್‌ರ ಕಂಟ್ರಿಕ್ಲಬ್‌ನಲ್ಲಿ ಅವರು ಅರುಂಧತಿ ಕೈಗೆ ಸಿಗರೇಟು ಸೇದುತ್ತ ಸಿಕ್ಕಿಬಿದ್ದರು ಎಂಬುದಕ್ಕಿಂತ ಹೆಚ್ಚಾಗಿ ಒಬ್ಬ ಹೆಂಗಸಾಗಿ ಅರುಂಧತಿ ಸಿಗರೇಟು ಸೇದುತ್ತಿದ್ದಾರಲ್ಲಾ ಅಂತ shock ಆಗಿದ್ದರು!

ಹಾಗೇನೇ, ರಾಜ್‌ಕುಮಾರ್‌ ಅಪರೂಪಕ್ಕೊಂದು ಗುಂಡು ಹಾಕುತ್ತಿದ್ದರು. ಆದರೆ ಅವೆಲ್ಲಕ್ಕಿಂತ ಹೆಚ್ಚಾಗಿ ಅವರು ಇಷ್ಟಪಟ್ಟು ಮಾಡುತ್ತಿದ್ದುದು ಮಾಂಸದ ಊಟ. ದಿನವಿಡೀ ದುಡಿದ ಕಷ್ಟ ಜೀವಿಯಾಬ್ಬ ಮಾಡಬಹುದಾದ ಪೊಗದಸ್ತಾದ ಊಟವಿದೆಯಲ್ಲ ?ಅದು ಬೇಕು ಅವರಿಗೆ. ಪಕ್ಕದಲ್ಲಿದ್ದವರಿಗೂ ತಿನ್ನಿಸುತ್ತಾ, ಪ್ರಚೋದಿಸುತ್ತಾ, ಚಪ್ಪರಿಸುತ್ತಾ ಅದ್ಭುತವಾಗಿ, ಒಂದು ಅಗಳೂ ಬಿಡದೆ ಉಂಡು ಎಲಡಿಕೆ ಹಾಕಿಕೊಂಡರೇನೇ ತೃಪ್ತಿ.

‘ನಾವು ಈಡಿಗರೂ. ಮಾಂಸಾಹಾರಿಗಳೂ...’ ಅಂತ ಸಂಕೋಚವಿಲ್ಲದೆ ಹೇಳಿಕೊಳ್ಳುತ್ತಿದ್ದರು ರಾಜಕುಮಾರ್‌. ಭಕ್ತಿ ಪ್ರಧಾನವಾದ ಪಾತ್ರಗಳನ್ನ, ದೇವರ ಪಾತ್ರಗಳನ್ನ ಮಾಡುವಾಗ ಮದ್ಯ, ಮಾಂಸ, ಮಾನಿನಿಯರಿಂದ ದೂರವಿದ್ದು ಬಿಡುತ್ತಿದ್ದರು. ಅಂಥದೊಂದು ವೃತ್ತಿನಿಷ್ಠೆ ರಾಜಕುಮಾರ್‌ ಅವರಲ್ಲಿತ್ತು. ರಾತ್ರಿ ತೀರ ತಡವಾಗಿ ಮಲಗೋದು, ಬೆಳಗ್ಗೆ ಸೆಟ್‌ಗೆ ತಡವಾಗಿ ಬರೋದು- ಆ ನಖರೆಗಳೆಲ್ಲ ಇರಲಿಲ್ಲ. ಮಕ್ಕಳ ಪೈಕಿ ಶಿವಣ್ಣನಿಗೆ ಆ ಶಿಸ್ತು ಬಂದಿದೆ.

ರಾಜಕುಮಾರ್‌ಗೆ ವ್ಯವಹಾರ ತಿಳಿಯುತ್ತಿರಲಿಲ್ಲ. ರಾಜಕೀಯ ತಿಳಿಯುತ್ತಿರಲಿಲ್ಲ. ಸಾಮಾಜಿಕ ಜವಾಬ್ದಾರಿಗಳು ಅರ್ಥವಾಗುತ್ತಿರಲಿಲ್ಲ. ವ್ಯವಹಾರ ತಿಳಿದಿದ್ದರೆ ಅವರು ತುಂಬ ದಿನ ಚಿನ್ನೇಗೌಡರಂಥ ಭಾವಮೈದುನರನ್ನು ಹತ್ತಿರವಿಟ್ಟುಕೊಳ್ಳುತ್ತಿರಲಿಲ್ಲ. ರಾಜಕೀಯ ತಿಳಿದಿದ್ದಿದ್ದರೆ ಕೆಂಪಯ್ಯನಂಥ ಪೊಲೀಸ್‌ ಅಧಿಕಾರಿಯನ್ನೇ ಪರಮಸೇನಾಪತಿ ಅಂದುಕೊಳ್ಳುತ್ತಿರಲಿಲ್ಲ. ಸಾಮಾಜಿಕ ಜವಾಬ್ದಾರಿ ಗೊತ್ತಿದ್ದಿದ್ದರೆ, ಆರಂಭದ ದಿನಗಳಿಂದಲೂ ಪೋಲಿಪುಂಡರ ಕೈಗೆ ಸಿಕ್ಕು ಹೋದ ಅಭಿಮಾನಿಗಳ ಸಂಘವನ್ನು ಅವರು ಬಹಿರಂಗವಾಗಿ ಖಂಡಿಸದೆ ಇರುತ್ತಿರಲಿಲ್ಲ. ಎಂಥ ದುರಂತವೆಂದರೆ, ಆಂಧ್ರದಲ್ಲಿ ಎನ್ಟಿ ರಾಮಾರಾವು ತನ್ನ ಅಭಿಮಾನಿಗಳನ್ನು ಒಂದು political partyಯನ್ನಾಗಿಬೆಳೆಸಿದರು. ಇವತ್ತಿಗೆ ತಮಿಳುನಾಡಿನಲ್ಲಿ ರಜನಿ ತಮ್ಮ ಅಭಿಮಾನಿ ಸಂಘಕ್ಕೆ ದೊಡ್ಡದೊಂದು ಸಾಮಾಜಿಕ ಜವಾಬ್ದಾರಿ ಹೊರೆಸಿ ಮುನ್ನಡೆಯುವಂತೆ ಮಾಡಿದ್ದಾರೆ. ರಾಜಕುಮಾರ್‌ಗೆ ಆ ಮಟ್ಟಿಗಿನ ಚಿಂತನೆಯೇ ಇರಲಿಲ್ಲ.

ಈ ಅಪಾಯ ದುಡ್ಡು ಕಾಸಿನ ವಿಷಯದಲ್ಲಿ ಸಂಭವಿಸಿಬಿಡುತ್ತಿತ್ತೇನೋ? ಆ ಕಾಲಕ್ಕೆ ಎಂಟುನೂರು, ಸಾವಿರ ರೂಪಾಯಿ ತೆಗೆದುಕೊಂಡು ಸಿನೆಮಾ ಮಾಡಿದ, ಎಲ್ಲ 200ಸಿನೆಮಾ ಮಾಡಿ ಗುಡ್ಡೆ ಹಾಕಿದರೂ ಕೆಲವು ಕೋಟಿಗಳನ್ನು ದಾಟದ ರಾಜಕುಮಾರ್‌ ಅವರ ದುಡಿಮೆಯನ್ನ ಅವರ ಭಾವ ಮೈದುನಂದಿರೇ ಉಂಡು ಕೈತೊಳೆದುಬಿಡುತ್ತಿದ್ದರೇನೋ? ಆಪದ್ಬಾಂಧವಳಂತೆ ಉದ್ಭವಿಸಿ ಆಲದಮರವಾಗಿ ಬೆಳೆದಾಕೆ ಪಾರ್ವತಮ್ಮ. ಆಕೆ ರಾಜ್‌ ಕುಟುಂಬದ ತಾಯಿ ಬೇರು. ಆಕಸ್ಮಾತ್‌ ರಾಜಕುಮಾರ್‌ಗಿಂತ ಮೊದಲು ಪಾರ್ವತಮ್ಮ ತೀರಿ ಹೋಗಿದ್ದಿದ್ದರೆ, ಸ್ವತಃ ರಾಜಕುಮಾರ್‌ ಆ ಬಂಗಲೆಯಲ್ಲಿ ನಿರ್ಗತಿಕರಾಗಿ ಬಿಡುತ್ತಿದ್ದರೇನೋ?

ನಿಮಗೆ ಆಶ್ಚರ್ಯವಾಗಬಹುದು. ಇನ್ನೂರೂ ಚಿಲ್ರೆ ಸಿನೆಮಾಗಳನ್ನು ಮಾಡಿದ ರಾಜಕಮಾರ್‌, ಆ ಪರಿ ದುಡ್ಡು ದುಡಿದ ವಜ್ರೇಶ್ವರಿ ಕಂಬೈನ್ಸ್‌, ಅದರ ಪಕ್ಕದಲ್ಲೇ ಹಣ ಮಾಡಿದ ಭಾವಮೈದುನರು, ತಂದೆಯ ಹಾದಿಯಲ್ಲೇ ದುಡಿದು ಬೆಳೆದ ಮಕ್ಕಳು ಇವರೆಲ್ಲ ದುಡಿದ ಬೊಕ್ಕಸ ಇತ್ತು ಅಂತಲೇ ಜಗತ್ತು ಭಾವಿಸಿತ್ತು. ಆದರೆ ಕಾಡುಗಳ್ಳ ವೀರಪ್ಪನ್‌ ರಾಜಕುಮಾರ್‌ ಅವರನ್ನು ಹೊತ್ತುಕೊಂಡು ಹೋಗಿ ಸರ್ಕಾರದ ಎದುರಿಗೆ ಕೋಟ್ಯಂತರ ರೂಪಾಯಿಗಳ ransom amountಗೆ ಬೇಡಿಗೆ ಇಟ್ಟಂತೆಯೇ, ರಾಜ್‌ ಕುಟುಂಬದವರೆದುರಿಗೂ ಬೇಡಿಕೆಯನ್ನಿರಿಸಿದಾಗ- ಕೊಡಲಿಕ್ಕೆ ಇವರ ಬಳಿ liquid cash ಇರಲಿಲ್ಲ ! ಇವರು ಹಣ ಕೇಳಿಕೊಂಡು, ಸಾಲ ಕೇಳಿಕೊಂಡು ಅಲೆದದ್ದು ಒಬ್ಬಿಬ್ಬರ ಬಳಿಯಲ್ಲಲ್ಲ. ಲೋಕ ಜ್ಞಾನವೇ ಇಲ್ಲದ ರಾಜಕುಮಾರ್‌ ಎಂಥ ಅಮಾಯಕ ಮನುಷ್ಯ ಎಂಬುದು ಆತನ ಹತ್ತಿರದ ಜಗತ್ತಿಗೆ ಗೊತ್ತಾದದ್ದೇ ಅವತ್ತು. ಆ ಹಂತದಲ್ಲಿ ರಾಜ್‌ ಬಿಡುಗಡೆಗೆ ನೆಡುಮಾರನ್‌, ಕಲ್ಯಾಣಿ ಮುಂತಾದವರು ಪ್ರಯತ್ನ ಪಡುತ್ತಿದ್ದರೆ, ಅಸಲಿ ಅಮೌಂಟಿನ ಬಗ್ಗೆ ಮಾತನಾಡಲು ಹವಣಿಸುತ್ತಿದ್ದುದು ರಜನೀಕಾಂತ್‌!

ಕಾಡಿಗೆ ಹೋಗುವ ಹೊತ್ತಿಗಾಗಲೇ ಅರಳುಮರಳಾಗಿಬಿಟ್ಟಿದ್ದ ರಾಜಕುಮಾರ್‌, ಅಲ್ಲಿ ತುಂಬ ಭಯ-ಪುಕ್ಕಲು ಬೆಳೆಸಿಕೊಂಡರು. ವೀರಪ್ಪನ್‌ ಕೊರಳಿಗೆ ತೊಲಗಟ್ಟಲೆ ತೂಕದ ಚಾಮುಂಡೇಶ್ವರಿ ಪದಕ ಮಾಡಿಸಿ ಕಳಿಸಬೇಕೆಂದು ಪಾರ್ವತಮ್ಮನಿಗೆ ಹೇಳಿ, ಮಾಡಿಸಿ ತರಿಸಿ ಆತನಿಗೆ ತೊಡಿಸಿ ಬಂದರು. ಕೆಲವು ವದಂತಿಗಳ ಪ್ರಕಾರ ಮನೆಗೆ ಹಿಂತಿರುಗಿದ ಮೇಲೂ ಅವರು ನಡುರಾತ್ರಿಗಳಲ್ಲಿ ಬೆಡ್‌ರೂಮಿನಿಂದ ಎದ್ದು ಬಂದು ಅಂಗಳದಲ್ಲಿ ಹುಲ್ಲು ಹಾಸಿನ ಮೇಲೆ ಮಲಗುತ್ತೇನೆಂದು ಹಟ ಮಾಡುತ್ತಿದ್ದರು. ಈಗಿದ್ದ normal ವರ್ತನೆ ಈಗಿರುತ್ತಿರಲಿಲ್ಲ. ಒಟ್ಟಿನಲ್ಲಿ ಕಾಡು ಅವರಲ್ಲಿನ ಜೀವನೋತ್ಸಾಹ ಕೊಂದು ಹಾಕಿತ್ತು.

ನಂತರದ ಆಘಾತ ವರದಪ್ಪನ ಸಾವು. ಇದ್ದಕ್ಕಿದ್ದಂತೆ ರಾಜಕುಮಾರ್‌ ಫ್ರೆಂಡ್‌ಲೆಸ್‌ ಆಗಿ ಹೋದರು ಅನ್ನಿಸುತ್ತೆ. ವರದಪ್ಪನ ಸಾವಿನ ನಂತರ ಆ ಮನೆಗೆ ಅವರು ಹೋಗಲೇ ಇಲ್ಲ. ಅವರ ಕಣ್ಣೀರೂ ಬತ್ತಲಿಲ್ಲ. ಆಮೇಲೆ ನೋಡಿದೆವಲ್ಲ : ತುಂಬ ದಿನ ಬದುಕಲಿಲ್ಲ.

ಆದರೆ ಬದುಕಿದಷ್ಟು ದಿನ ತುಂಬ ಚೆಂದಗೆ ಬದುಕಿದರು. ಅತ್ಯುತ್ತಮ ಊಟ ಮಾಡಿದರು. ಅದ್ಭುತವಾದ ಉಡುಗೆ ತೊಟ್ಟರು. ಸುರಸುಂದರಿಯರೊಂದಿಗೆ ಇದ್ದರು. ಅಪಾರ ಕೀರ್ತಿ ಪಡೆದರು. ಬಯಸಿದಷ್ಟೂ ಧನ ಕನಕ ಕಂಡರು. ಮನೆ ತುಂಬ ಜನವಿದ್ದರು. ಜನಮನದ ತುಂಬ ತಾವಿದ್ದರು. ಎಪ್ಪತ್ತೆಂಟು ವರ್ಷಗಳ ಜೀವನದಲ್ಲಿ ಕೇವಲ ನೂರೆಂಟು ದಿನಗಳ ವನವಾಸ... ಅಂಥ ಶ್ರೀರಾಮನೇ ಹದಿನಾಲ್ಕು ವರ್ಷ ಹೋಗಿದ್ದನಂತೆ... ಅಣ್ಣ, ಎಷ್ಟಾದರೂ ನಿಜಮಾನವ. ನಮ್ಮಂತೆ, ನಿಮ್ಮಂತೆ!

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X