ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವರೆಲ್ಲ ಗೋಡೆಗಳ ಮೇಲೇಕಿರಬೇಕು: ಹಲ್ಲಿ ನಡೆದಾಡುವ ಜಾಗದಲ್ಲಿ?

By Staff
|
Google Oneindia Kannada News

ಇವರೆಲ್ಲ ಗೋಡೆಗಳ ಮೇಲೇಕಿರಬೇಕು: ಹಲ್ಲಿ ನಡೆದಾಡುವ ಜಾಗದಲ್ಲಿ?
ದಂಗೆ-ಗಲಾಟೆ ಆದರೆ ಮಗ್ಗಲು ಮುರಿಯಲು ಪೊಲೀಸರಿರುತ್ತಾರೆ. ಕಾನೂನಿರುತ್ತದೆ. ಆದರೆ ಸರ್ಕಾರದ ಮಟ್ಟದಲ್ಲಿ, ವಿಧಾನ ಸೌಧದಲ್ಲಿ ಇಂಥವು ಏಕಾಗಬೇಕು? ನಮ್ಮದು ಧರ್ಮ ನಿರಪೇಕ್ಷ ಸರ್ಕಾರ ಅಂತ ಹೇಳಿಕೊಳ್ಳುತ್ತಾರೆ. ದೇವರುಗಳ ಜಾಗದಲ್ಲಿ ನಾಯಕರ ಫೋಟೋಗಳನ್ನು ತಂದಿಡುತ್ತಾರೆ. ಈ ನಾಯಕರಿಗೆ ಮತ್ತೆ ಜಾತಿಗಳ ಟ್ಯಾಗು...

Ravi Belagere on Thatskannada.com ರವಿ ಬೆಳಗೆರೆ

ಮೊದಲು ಮಲ್ಲಿಕಾರ್ಜುನ ಖರ್ಗೆ ಇದ್ದ ಕೋಣೆಯ ಗೋಡೆಯ ಮೇಲೆ ಅಂಬೇಡ್ಕರ್‌ ಭಾವಚಿತ್ರವಿತ್ತು. ಅದನ್ನು ಯಡಿಯೂರಪ್ಪನವರ ಬಂಟರು ಗೋಡೆಯಿಂದ ಇಳಿಸಿದರು. ಅದಕ್ಕೆ ರಾಜ್ಯಾದ್ಯಂತ ಪ್ರತಿಭಟನೆ. ‘ನಾನು ಭಾವಚಿತ್ರ ಇಳಿಸಿ ಅಂತ ಹೇಳಿಯೂ ಇಲ್ಲ. ನಮ್ಮವರು ಇಳಿಸಿಯೂ ಇಲ್ಲ. ಇದು ಕಿಡಿಗೇಡಿ ವರದಿ’ ಅಂತ ಯಡಿಯೂರಪ್ಪನವರ ವಿವರಣೆ. ಸದ್ಯಕ್ಕೆ ಇದೊಂದು ಭಯಂಕರ ತಳಮಳ ಮೂಡಿಸಿದ issue. ‘ಮೊದಲೇ ನಮ್ಮನ್ನ ಮುಸ್ಲಿಮರ ಶತ್ರುಗಳು ಅಂತ ಬಣ್ಣ ಬಳಿದು ಬಿಟ್ಟಿದ್ದಾರೆ. ಈಗ ದಲಿತ ವಿರೋಧಿಗಳು ಅಂತ ಚಿತ್ರಿಸ್ತಿದಾರೆ... ನಮ್ಮ ಗತಿ ಏನೂ...’ ಅನ್ನೋದು ಬಲಪಂಥೀಯರ ಚಡಪಡಿಕೆ.

‘ಆಯ್ತು. ಅಂಬೇಡ್ಕರ್‌ ಫೊಟೋನ ಗೋಡೆ ಮೇಲಿಂದ ತೆಗೆಸಿದ್ದು ನಾನೇ. ನಂಗೆ ಗೋಡೆ ಮೇಲಿನ ಫೋಟೋಗಳಲ್ಲಿ ನಂಬಿಕೆಯಿಲ್ಲ. ಸಂವಿಧಾನದ ಮೇಲೆ ನಂಬಿಕೆಯಿದೆ. ಅದರ ಹೆಸರಿನಲ್ಲೇ ಪ್ರಮಾಣವಚನ ಸ್ವೀಕರಿಸಿದ್ದೇನೆ. ಅದರರ್ಥ, ನನಗೆ ಅಂಬೇಡ್ಕರರ ಬಗ್ಗೆ ಗೌರವ ವಿಶ್ವಾಸಗಳಿವೆ. ಎಲ್ಲ ಜಾತಿಯವರಿಗೂ ನಾನು ಹೇಗೆ ಉಪಮುಖ್ಯಮಂತ್ರಿಯೋ, ದಲಿತರಿಗೂ ಹಾಗೆಯೇ ಉಪಮುಖ್ಯಮಂತ್ರಿ. ಎಲ್ಲ ಜಾತಿಯ ನಾಯಕರ, ಸಂತರ ಫೊಟೋಗಳನ್ನು ನನ್ನ ಕೋಣೆಯ ಗೋಡೆಯ ಮೇಲೆ ಹಾಕಿಕೊಳ್ಳಲು ಆಗುವುದಿಲ್ಲವಲ್ಲ ?’

ಅಂತ ಒಂದು ಹೇಳಿಕೆ ಕೊಡಬಹುದಿತ್ತು ಯಡಿಯೂರಪ್ಪ. ಅಂಥದೊಂದು ನೈತಿಕ ತಾಕತ್ತು ಈ ದೇಶದ ಯಾವ ರಾಜಕಾರಣಿಗೂ ಇಲ್ಲ. ಹಾಗೇನೇ, ಗೋಡೆಯ ಮೇಲಿಂದ ಚಿತ್ರ ಸರಿಸಿ ಹಾಕುವುದು ಅಪರಾಧವಲ್ಲ ಅಂತ ಅದನ್ನು ವರದಿ ಮಾಡಿದಾತನಿಗೆ ಅನ್ನಿಸಿಲ್ಲ. ಅಂಬೇಡ್ಕರರ ಭಾವಚಿತ್ರದ ಜೊತೆಗೆ ಇಂದಿರಾ ಗಾಂಧಿ ಭಾವಚಿತ್ರವನ್ನು ತೆಗೆಸಿ ಹಾಕಿದ್ದರು ಯಡಿಯೂರಪ್ಪ. ಆ ಬಗ್ಗೆ ಎಲ್ಲೂ ಪ್ರತಿಭಟನೆ ವ್ಯಕ್ತವಾಗಲಿಲ್ಲ. ಯಾಕೆಂದರೆ, ಇಂದಿರಾ ಜಾತಿಯವರು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಇಲ್ಲ.

ಅಷ್ಟೇಕೆ, ಸಿದ್ರಾಮಯ್ಯನವರನ್ನು ಕಿತ್ತು ಕೆಳಗಿಳಿಸಿದ ದಿನ ರಾಜ್ಯದ ಅನೇಕ ಊರು ಪಟ್ಟಣಗಳಲ್ಲಿ ಪ್ರತಿಭಟನೆಗಳಾದವು. ದೇವೇಗೌಡ, ಕುಮಾರಸ್ವಾಮಿ ಕಟೌಟುಗಳಿಗೆ ಚಪ್ಪಲಿ ಹಾರ ಹಾಕಿದರು. ಆದರೆ ಮೊನ್ನೆ ಸರ್ಕಾರಕ್ಕೆ ಸರ್ಕಾರವನ್ನೇ ಕಿತ್ತು ಕೆಳಗಿಳಿಸಲಾಯಿತು. ಎಂ.ಪಿ.ಪ್ರಕಾಶರನ್ನು ಕೇಳದೆ ಪಕ್ಕಕ್ಕೆ ಸರಿಸಿ ಯಡಿಯೂರಪ್ಪನನ್ನು ತಂದು ಕೂರಿಸಿದರು. ಕುಮಾರ ಬಂಡಾಯದ ನಾಟಕ ದಿನಗಟ್ಟಲೆ ನಡೆಯಿತು. ಯಾರೂ ಬೀದಿಗಿಳಿಯಲಿಲ್ಲ. ಚಪ್ಪರಿಸಿಕೊಂಡು ಎಲ್ಲರೂ ಸುದ್ದಿ ಬರೆದರು.

ಅಂಬೇಡ್ಕರ್‌, ಜಯಪ್ರಕಾಶ್‌ ನಾರಾಯಣ್‌ ಮುಂತಾದವರ ಭಾವಚಿತ್ರದ ಮಾತು ಹಾಗಿರಲಿ: ಅವರ ಸಿದ್ಧಾಂತಗಳನ್ನೇ ಗೋಡೆಗಳ ಮೇಲಿಂದ ಕೆಳಕ್ಕೆ ಕೆಡವಿ ಅದರ ಮೇಲೆ ಜಮೀರ್‌ ಬಸ್ಸು -ರೆಡ್ಡಿ ಬಸ್ಸುಗಳ ಮೆರವಣಿಗೆಯಾಯಿತು. ಯಾವನೂ ಪಿಟ್ಟಂತ ದನಿಯೆತ್ತಲಿಲ್ಲ. ಒಬ್ಬ ದೇವೇಗೌಡರು ಮಾತ್ರ ಸ್ವಿಮ್ಮಿಂಗ್‌ ಪೂಲಿಗೆ ಆಗುವಷ್ಟು ಮೊಸಳೆ ಕಣ್ಣೀರು ಹಾಕಿದರು. ಪ್ರತಿಭಟಿಸಲಿಕ್ಕೆ ಬೇಕಾದಷ್ಟು ಜನ ಪ್ರಕಾಶ್‌ ಅವರ ಜಾತಿಯಲ್ಲಿ ಇರಲಿಲ್ಲ. ಅಥವಾ ಅವರಲ್ಲಿ ಅರ್ಧ ಜನ ಯಡಿಯೂರಪ್ಪನವರ ಪರಾಕು ಹೇಳುವುದರಲ್ಲಿ ತೊಡಗಿದ್ದರು.

ನೀವು ಗಮನಿಸಿ ನೋಡಿ: ಭಾವಚಿತ್ರ ಕದಲಿಸುವ, ಪ್ರತಿಮೆ ಭಗ್ನಗೊಳಿಸುವ, ಪುತ್ಥಳಿಗಳಿಗೆ ಅವಮಾನ ಮಾಡುವ, ಮಂದಿರ - ಮಸೀದಿಗಳಲ್ಲಿ ಕೊಳಕು ಚೆಲ್ಲುವ ಕೆಲಸಗಳಲ್ಲಿ ಒಂದು ಕಿಡಿಗೇಡಿತನದ ಅಂಶ ಇದ್ದೇ ಇರುತ್ತದೆ. ನಮ್ಮ ದೇಶದಲ್ಲಿ ಬಹುಶಃ ಮೊದಲ ಬಾರಿಗೆ ವ್ಯಾಪಕ ರೀತಿಯ ಪ್ರತಿಮೆ-ಪುತ್ಥಳಿಗಳನ್ನು ಭಗ್ನಗೊಳಿಸುವ ಚಳವಳಿ ಆರಂಭಿಸಿದವರು ಪಶ್ಚಿಮ ಬಂಗಾಲದ ನಕ್ಸಲೀಯರು. 1969ರಲ್ಲಿ ನಕ್ಸಲ್‌ ಬರಿ ಹೋರಾಟ ಆರಂಭವಾದಾಗ ಕಲ್ಕತ್ತಾದ ವಿದ್ಯಾರ್ಥಿಗಳನೇಕರು ನಕ್ಸಲ್‌ ಸಿದ್ಧಾಂತದಿಂದ ಪ್ರೇರೇಪಿತರಾಗಿ ಈಶ್ವರ ಚಂದ್ರ ವಿದ್ಯಾಸಾಗರರಂತಹ ನಾಯಕರ ಪ್ರತಿಮೆಗಳನ್ನು ಭಗ್ನಗೊಳಿಸಿದರು. ಒಂದೊಂದು ಪ್ರತಿಮೆ ಕೆಡವಿದಾಗಲೂ ‘ನಾವೇ ಕೆಡವಿದ್ದು’ ಅಂತ ನಕ್ಸಲರು claim ಮಾಡಿ ಪತ್ರಿಕೆಗಳಿಗೆ ಪತ್ರ ಬರೆಯುತ್ತಿದ್ದರು. ಅವರ ದೃಷ್ಟಿಯಲ್ಲಿ ಅದು ಕೇವಲ ಪ್ರತಿಮೆ ಮುರಿಯುವ ಕಿಡಿಗೇಡಿತನವಲ್ಲ. ಅದು ಮೂರ್ತಿ ಭಂಜಕ ಕ್ರಿಯೆ! ಹಳೆಯ ಗೊಡ್ಡು ಮೌಲ್ಯಗಳನ್ನು ಪ್ರತಿಪಾದಿಸಿದ ನಾಯಕರ ಪ್ರತಿಮೆಗಳನ್ನು ಮುರಿಯವ ಮೂಲಕ ಹೊಸದರೆಡೆಗೆ ಕ್ರಾಂತಿಕಾರಿ ಹೆಜ್ಜೆ ಇರಿಸಿದ್ದೇವೆಂದು ಸೂಚಿಸುವ ಕಾರ್ಯ.

ಮುಂದೆ ಈ ಕೆಲಸವನ್ನೇ ನಾನಾ ಕಾರಣಗಳಿಗಾಗಿ ಅನೇಕರು ಮಾಡಿದರು. ಅಂಬೇಡ್ಕರ್‌ ಪ್ರತಿಮೆಯ ಕನ್ನಡಕ ಕಿತ್ತು ಹಾಕಿದರೆ ದಲಿತರಿಗೆ ಸಿಟ್ಟು ಬರುತ್ತದೆ. ಕುದುರೆ ಮೇಲೆ ಕುಳಿತ ಬಸವಣ್ಣನ ಕೈಲಿರುವ ಕತ್ತಿ ಮುರಿದರೆ ಲಿಂಗಾಯತರಿಗೆ ಸಿಟ್ಟು ಬರುತ್ತದೆ. ಮಸೀದಿಯಲ್ಲಿ ಸತ್ತ ಪ್ರಾಣಿ ಎಸೆದರೆ ಮುಸ್ಲಿಮರು ಕೆರಳುತ್ತಾರೆ. ಹಿಂದೂಗಳ ಮೆರವಣಿಗೆಗೆ ಕಲ್ಲು ತೂರಿದರೆ ಮತೀಯ ದಂಗೆಗಳಾಗುತ್ತವೆ.

ಇಂಥ ಸ್ಪಷ್ಟ ಕಾರಣಗಳಿರುವಾಗ, ಅವರಿವರನ್ನು ಕೆರಳಿಸಲೆಂದೇ ಪ್ರತಿಮೆಗಳನ್ನು ಬಳಸಿ ಕೊಳ್ಳಲಾಯಿತು. ಅಂಬೇಡ್ಕರ್‌ ಪ್ರತಿಮೆ ಮೇಲೆ ಮಗ ಬಿಯರ್‌ ಸುರಿದನೆಂಬ ಕಾರಣಕ್ಕೆ ಬಿ.ಟಿ.ಲಲಿತಾ ನಾಯಕ್‌ ಮಂತ್ರಿ ಪದವಿ ಕಳೆದುಕೊಂಡಿದ್ದರು. ಹುಬ್ಬಳ್ಳಿಯ ಅನಿಲ್‌ ಪಾಟೀಲನೆಂಬ ಗೂಂಡಾ, ಅಂದಿನ ಮಂತ್ರಿ ಎಚ್ಕೆ. ಪಾಟೀಲರ ಕಚೇರಿಯ ನೆತ್ತಿಯ ಮೇಲೆ ಬಸವಣ್ಣನ ಫೋಟೋ ಇಟ್ಟು ಅದಕ್ಕೆ ಚಪ್ಪಲಿ ಹಾರ ಹಾಕಿದ್ದ. ಇದೆಲ್ಲವೂ ಕಿಡಿಗೇಡಿತನವೇ. ಭಾರತದಂತಹ ದೇಶದಲ್ಲಿ ಒಂದು ವಿಗ್ರಹ, ಒಂದು ಕಟ್ಟಡ, ಒಂದು ಮೆರವಣಿಗೆ- ಕೂಡ ನೂರಾರು ಮಂದಿಯ ಜೀವ ತೆಗೆದು ಬಿಡಬಹುದು.

ಆದರೆ ಇದು ಭಾರತಕ್ಕೆ ಮಾತ್ರ ಸೀಮಿತ ಅಂದುಕೊಳ್ಳಬೇಡಿ. ತೀರ ಮೊನ್ನೆ, ಲಾಹೋರದ ಚರಂಡಿಯಾಂದರಲ್ಲಿ ಮುಸ್ಲಿಮರ ಧರ್ಮಗ್ರಂಥ ಕುರಾನ್‌ ಸಿಕ್ಕು, ಮೂರು ಸಾವಿರ ಮಂದಿ ಬೀದಿಗಿಳಿದು ಗೋಲಿಬಾರ್‌ ಕೂಡ ನಡೆದು ಹೋಗಿದೆ. ಕೇವಲ ಮುಸ್ಲಿಮರೇ ಇರುವ, ಅವರದೇ ಆಧಿಪತ್ಯವಿರುವ ಪಾಕಿಸ್ತಾನದಲ್ಲೇ ಮುಸ್ಲಿಮರ ಧರ್ಮಗ್ರಂಥವನ್ನು ಅವಮಾನಿಸಿದವರು ಯಾರು? ಅದರ ಹಿಂದೆ ಇರಬಹುದಾದ ಏಕೈಕ ಉದ್ದೇಶ- ಕಿಡಿಗೇಡಿತನ!

ಇವು ಸಾರ್ವಜನಿಕರ ಮಟ್ಟದಲ್ಲಿ ನಡೆದು ಹೋದಾಗ ತಲೆ ಕೆಡಿಸಿಕೊಳ್ಳಬೇಕಿಲ್ಲ. ದಂಗೆ-ಗಲಾಟೆ ಆದರೆ ಮಗ್ಗಲು ಮುರಿಯಲು ಪೊಲೀಸರಿರುತ್ತಾರೆ. ಕಾನೂನಿರುತ್ತದೆ. ಆದರೆ ಸರ್ಕಾರದ ಮಟ್ಟದಲ್ಲಿ, ವಿಧಾನ ಸೌಧದಲ್ಲಿ ಇಂಥವು ಏಕಾಗಬೇಕು? ನಮ್ಮದು ಧರ್ಮ ನಿರಪೇಕ್ಷ ಸರ್ಕಾರ ಅಂತ ಹೇಳಿಕೊಳ್ಳುತ್ತಾರೆ. ದೇವರುಗಳ ಜಾಗದಲ್ಲಿ ನಾಯಕರ ಫೋಟೋಗಳನ್ನು ತಂದಿಡುತ್ತಾರೆ. ಈ ನಾಯಕರಿಗೆ ಮತ್ತೆ ಜಾತಿಗಳ ಟ್ಯಾಗು. ನೀವು ಕರ್ನಾಟಕದ ಯಾವ ಮೂಲೆಯ ಯಾವ ಊರಿಗೆ ಹೋದರೂ ಅಲ್ಲೊಂದು ಗಾಂಧೀಜಿ ವಿಗ್ರಹವಿರುತ್ತದೆ. ಅದರ ಮೈತುಂಬ ಕಾಗೆ ಹಿಕ್ಕೆ, ಧೂಳು, ಅಸಹ್ಯದ ಕಲೆಗಳು. ಎಷ್ಟೋ ಕಡೆ ಕೋಲು ಮುರಿದಿರುತ್ತದೆ, ಕನ್ನಡಕ ಕಳಚಿ ಬಿದ್ದಿರುತ್ತದೆ. ಆದರೆ ಆ ಬಗ್ಗೆ ಯಾರೂ ಪ್ರತಿಭಟಿಸುವುದಿಲ್ಲ, ತಲೆ ಕೆಡಿಸಿಕೊಳ್ಳುವುದಿಲ್ಲ, ರಿಪೇರಿ ಕೂಡ ಮಾಡಿಸುವುದಿಲ್ಲ. ಏಕೆಂದರೆ ಗಾಂಧೀಜಿ ಒಂದು ಜಾತಿಗೆ ನಾಯಕನಲ್ಲ. ಅಥವಾ ಆತನ ಜಾತಿಯವರು ದೊಡ್ಡ ಸಂಖ್ಯೆಯಲ್ಲಿಲ್ಲ. ಅವರ ಮತಗಳು ನಿರ್ಣಾಯಕವೂ ಅಲ್ಲ. ಆದರೆ ಅಂಬೇಡ್ಕರ್‌, ಬಸವಣ್ಣ, ಕಿತ್ತೂರು ಚೆನ್ನಮ್ಮ ಇವರೆಲ್ಲ ಜಾತಿಗಳನ್ನು ಕೆರಳಿಸಿ ಬಿಡುವಷ್ಟು ಸಮರ್ಥರು!

ಇಷ್ಟಕ್ಕೂ ಇವರನ್ನೆಲ್ಲ ಸರ್ಕಾರದ, governanceನ ನಿತ್ಯಾಡಳಿತದ ಪರಿಧಿಗೆ ತಂದವರು ಯಾರು?

ಯಡಿಯೂರಪ್ಪನ ಛೇಂಬರಿನಲ್ಲಿ ಅಂಬೇಡ್ಕರ್‌ ಭಾವಚಿತ್ರ ಇರಲೇಬೇಕು ಅಂತ ಯಾವ ದಲಿತ ಹಟ ಮಾಡಿದ್ದ ? ಇಷ್ಟಕ್ಕೂ ಯಡಿಯೂರಪ್ಪನ ಛೇಂಬರಿನಲ್ಲಿ ಯಾರದಾದರೂ ಭಾವಚಿತ್ರ ಯಾಕಿರಬೇಕು?ಗಾಂಧಿ, ಇಂದಿರಾಗಾಂಧಿಗಳ ಭಾವಚಿತ್ರಗಳು ಪೊಲೀಸು ಠಾಣೆಗಳಲ್ಲಿ, ನ್ಯಾಯಾಲಯಗಳಲ್ಲಿ ಯಾಕಿರಬೇಕು? ಇದನ್ನು ನೀವು ಇಂಗ್ಲಿಷರಿಂದ ಕದ್ದು ತಂದಿದ್ದೀರಲ್ಲವೆ? ಅವರು ರಾಣಿ ವಿಕ್ಟೋರಿಯಾಳ ಚಿತ್ರ ತಂದು ಹಾಕಿಕೊಂಡಿದ್ದರು. ನೀವು ಅದನ್ನಿಳಿಸಿ ಗಾಂಧಿಯದನ್ನು ಗೋಡೆಗೆ ಅಂಟಿಸಿದಿರಿ. ಅಷ್ಟೇ ತಾನೆ? ನಿಮ್ಮದು ಗುಲಾಮಗಿರಿ ಮನಸಲ್ಲವೇ?ಗುಲಾಮಗಿರಿ ವಿರುದ್ಧ ಹೋರಾಡಿದವರು ಗಾಂಧಿ, ಅಂಬೇಡ್ಕರ್‌, ಬಸವಣ್ಣ. ಅವರವೇ ಚಿತ್ರಗಳನ್ನು ಅಂಟಿಸಿಕೊಂಡು ಇದ್ಯಾವ ಹೊಸ ಗುಲಾಮಗಿರಿಗೆ ಬಿದ್ದಿರಿ?

ನಮ್ಮದು ಧರ್ಮ ನಿರಪೇಕ್ಷ ಸರ್ಕಾರ ಅಂತಾರೆ. ದೇವರ ಫೋಟೋ ಇಟ್ಟು, ಪುರೋಹಿತರನ್ನು ಕರೆಯಿಸಿ ಸರ್ಕಾರಿ ಕಟ್ಟಡದ ಗುದ್ದಲಿ ಪೂಜೆ ಮಾಡುತ್ತಾರೆ. ಮುಖ್ಯಮಂತ್ರಿಯಾದವನು ಕೃಷ್ಣಾದಲ್ಲಿರಬೇಕೋ,‘ಕೃತ್ತಿಕಾ’ದಲ್ಲಿರಬೇಕೋ, ಬಾಲಬ್ರೂಯಿಯಲ್ಲಿರಬೇಕೋ?ಯಾವ ಮನೆಯಲ್ಲಿದ್ದರೆ ಪೂರ್ಣಾವಧಿ ಆಡಳಿತ ನಡೆಸುತ್ತಾರೆ?ಯಾವುದರ ವಾಸ್ತು ಅಪಾಯಕಾರಿ?ಯಾವ ಜಿಲ್ಲೆಗೆ ಭೇಟಿ ಕೊಟ್ಟರೆ ಸರ್ಕಾರ ಹೋಗುತ್ತೆ ?ಯಾವ ಮುಹೂರ್ತದಲ್ಲಿ ಅಧಿಕಾರ ಸ್ವೀಕರಿಸಿದರೆ ಒಳ್ಳೆಯದು?ಈ ಸಂಗತಿಗಳು ಅತ್ಯಂತ ಮುಖ್ಯವಾದವುಗಳೇನೋ ಎಂಬಂತೆ ದಿನಪತ್ರಿಕೆಗಳಲ್ಲಿ ಪುಂಖಾನುಪುಂಖವಾಗಿ ದಿನಗಟ್ಟಲೆ, ರೀಮುಗಟ್ಟಲೆ ಪ್ರಕಟವಾಗುತ್ತವೆ. ಒಟ್ಟಿನಲ್ಲಿ, ಹತ್ತು ಮಂದಿಯಿಂದ ಜ್ಯೋತಿಷ್ಯ ಹೇಳಿಸಿಕೊಂಡು, ಮುಹೂರ್ತಕ್ಕೆ ಸರಿಯಾಗಿ ಅಧಿಕಾರಕ್ಕೆ ಬರುವ ಮುಖ್ಯಮಂತ್ರಿ ನೋಡ ನೋಡುತ್ತಿದ್ದಂತೆಯೇ ಗೋತಾ ಹೊಡೆಯುತ್ತಾನೆ. ಹೋಗಲಿ, ಇವರ ಸಿದ್ಧಾಂತಗಳಾದರೂ ಶಾಶ್ವತವಾ ? ಕರ್ನಾಟಕದಲ್ಲಿ ಬಿಜೆಪಿ ಹುಟ್ಟಿದಾಗಿನಿಂದ ಮುಸ್ಲಿಮರನ್ನು ಬೈಕೊಂಡೇ ದೊಣ್ಣೆ ತಿರುಗಿಸಿದ ಇದೇ ಯಡಿಯೂರಪ್ಪ, ನಾಳೆ ಮುಸ್ಲಿಮರ ಹಬ್ಬಕ್ಕೆ ಸಂದೇಶ ಕೊಟ್ಟು, ತೂತು ತೂತಿನ ಟೋಪಿ ಧರಿಸಿ ಫೋಟೋ ತೆಗೆಸಿಕೊಳ್ಳುತ್ತಿರುತ್ತಾರೆ: ನೋಡುತ್ತಿರಿ.

ಇವರ್ಯಾರಿಗೂ ಧರ್ಮ, ದೇಶ, ನಾಯಕರುಗಳಲ್ಲಿ ನಂಬಿಕೆಯಿರುವುದಿಲ್ಲ. ಅಕಸ್ಮಾತ್‌ ಇದ್ದರೆ ಅದನ್ನು ಅವರ ಮನೆಗಳಲ್ಲಿಟ್ಟುಕೊಳ್ಳಲಿ. ಗಾಂಧಿ, ಇಂದಿರಾಗಾಂಧಿ, ಅಂಬೇಡ್ಕರ್‌, ಬಸವಣ್ಣ, ವಾಜಪೇಯಿ, ಗೋಳವಲ್ಕರ್‌, ಗೋಡ್ಸೆ ಎಲ್ಲ ಅವರವರ ಮನೆಗಳ ಗೋಡೆಗಳ ಮೇಲಿರಲಿ. ಸರ್ಕಾರ ನಡೆಸುವ ಜಾಗಕ್ಕೆ ತರುವುದೇಕೆ? ಒಬ್ಬೊಬ್ಬ ಮಂತ್ರಿ ಬಂದಾಗಲೂ ಅವನ ಜಾತಿಯ, ಧರ್ಮದ ಅಥವಾ ಸಿದ್ಧಾಂತದ ಅಧಿ ನಾಯಕ ಸರ್ಕಾರಕ್ಕೂ ಅಧಿನಾಯಕನೇಕಾಗಬೇಕು?ನನ್ನ ದೃಷ್ಟಿಯಲ್ಲಿ ಅಂಬೇಡ್ಕರ್‌ ಒಬ್ಬ ಮಹಾನ್‌ ಚಿಂತಕ. ಸಂವಿಧಾನ ರೂಪಿಸಿದ ಹಲವು ಬುದ್ಧಿವಂತರ, ಮೇಧಾವಿಗಳ ಪೈಕಿ ಒಬ್ಬರು. ಒಂದು ತಲೆಮಾರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲೆತ್ನಿಸಿದ ಕ್ರಾಂತಿಕಾರಿ. ಅವರು ಕೂಡ ತಮ್ಮ ಶಿಲ್ಪ, ಪ್ರತಿಮೆ, ಮೂರ್ತಿ, ಭಾವಚಿತ್ರ ಇಷ್ಟಪಡುತ್ತಿರಲಿಲ್ಲವೇನೋ? ಅಂಬೇಡ್ಕರರನ್ನು ಗೌರವಿಸುವುದೆಂದರೆ, ದಲಿತೋದ್ಧಾರ ಮಾಡಿದಂತಾಗಿ ಬಿಡುವುದು ಎಂಬ ವಾದವನ್ನು ಅವರೂ ಒಪ್ಪುತ್ತಿರಲಿಲ್ಲವೇನೋ?

ಕನಕ ಕುರುಬರಿಗೆ ಮಾತ್ರ ಬೇಕು, ಅಂಬೇಡ್ಕರ್‌ ದಲಿತರಿಗೆ ಮಾತ್ರ ಬೇಕು, ಬಸವಣ್ಣ ಲಿಂಗಾಯತರಿಗೆ ಮಾತ್ರಬೇಕು, ರಾಘವೇಂದ್ರ ಸ್ವಾಮಿ ಬ್ರಾಹ್ಮಣರ ದೇವರು ಅಂತೆಲ್ಲ ಇವರ್ಯಾಕೆ ಭಾವಿಸಿಕೊಂಡಿದ್ದಾರೆ? ಅಂಬೇಡ್ಕರ್‌ ನನ್ನ ಪಾಲಿಗೆ ಒಂದು ಜಿಜ್ಞಾಸೆ, ಚರ್ಚೆ, ಮೆಚ್ಚುಗೆಗೆ ಪಾತ್ರವಾಗುವ ವ್ಯಕ್ತಿತ್ವ. ಕನಕ ಅದ್ಭುತ ಸಾಹಿತಿ. ಬಸವಣ್ಣ ಚಿಂತಕ. ರಾಘವೇಂದ್ರ ಸ್ವಾಮಿ ಸಾಧಕ, ಸಂಘಟಕ, ಇವರೆಲ್ಲ ಅವರವರಿಗೆ ಇಷ್ಟವಾಗುವವರ ಮನೆಗಳಲ್ಲಿರಲಿ, ಮನಗಳಲ್ಲಿರಲಿ. ಗೋಡೆಗಳ ಮೇಲೇಕೆ? ಹಲ್ಲಿ ನಡೆದಾಡುವ ಜಾಗದಲ್ಲಿ.

(ಸ್ನೇಹ ಸೇತು: ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X