• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಊರು ಕೆಡವಿ ಊರು ಕಟ್ಟಲು ಇಲ್ಲಿ ಯಾವನಿಗೂ ನಾಯಿ ಕಚ್ಚಿಲ್ಲ!

By Staff
|

'ನಿಂಗೆ ತಲೆ ಸರಿಯಿಲ್ಲ" ಎನ್ನುವುದರಿಂದ ಹಿಡಿದು trash, bull shit, non sense, fu.. you man ವರೆಗೆ ಎಲ್ಲ ತರಹದ ಬೈಗುಳಗಳನ್ನೂ ಕೇಳಿಸಿಕೊಂಡಿದೆ, ಸುಧಾಮೂರ್ತಿ ಅವರಿಗೆ ನಾನು ಬರೆದ ಬಹಿರಂಗ ಪತ್ರ. ಜಗತ್ತಿನ ನಾನಾ ದೇಶಗಳಲ್ಲಿರುವ ಕನ್ನಡಿಗ IT ಇಂಜಿನೀರ್‌ಗಳು ಈ ಸಂಪಾದಕೀಯಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ನಿಮಗೂ ಗೊತ್ತಿರಬೇಕು. ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ಎಸ್‌.ಕೆ.ಶಾಮಸುಂದರ್‌(ನಾವು ಕರೆಯೋದು ಶಾಮಿ ಅಂತ) thatskannada.comನ ನಿರ್ವಹಣೆ ಹೊತ್ತಿದ್ದಾರೆ. ಅದರಲ್ಲಿ ಪ್ರತೀವಾರ 'ಸೂರ್ಯಶಿಕಾರಿ" ಹೆಸರಿನ ಒಂದು ಅಂಕಣ ನನ್ನದು ಪ್ರಕಟವಾಗುತ್ತದೆ. ತುಂಬ ಸಲ'ಹಾಯ್‌ ಬೆಂಗಳೂರ್‌!"ನಲ್ಲಿ ಪ್ರಕಟವಾದ ನನ್ನ ಅಂಕಣಗಳ ಪೈಕಿ ಒಂದನ್ನು ಆಯ್ದು ತಮ್ಮ ಪೋರ್ಟಲ್‌ನಲ್ಲಿ ಪ್ರಕಟಿಸುತ್ತಾರೆ ಶ್ಯಾಮಿ, ಎರಡು ವಾರದ ಹಿಂದೆ ಅದರಲ್ಲಿ ಪ್ರಕಟವಾದದ್ದು ಸುಧಾಮೂರ್ತಿಗೆ ಬರೆದ ಪತ್ರ. ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ಅದು ಓದಲು ಸಿಗುತ್ತದೆ. ಹೀಗಾಗಿ ಜಗತ್ತಿನ ಮೂಲೆ ಮೂಲೆಯಿಂದ ಪ್ರತಿಕ್ರಿಯೆಗಳು. ಇಲ್ಲೇ ಇರುವ ಇನ್ಫೋಸಿಸ್ಸು, ವಿಪ್ರೋ ಮುಂತಾದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಐ.ಟಿ.ನೌಕರರೂ ತಮ್ಮ ಪ್ರತಿಕ್ರಿಯೆ ಕಳಿಸಿದ್ದಾರೆ.

'ಖಂಡಿತವಾಗ್ಯೂ ನಿಮ್ಮ ವಾದ ಸರಿಯಾಗಿದೆ. ಐಟಿ ದೊರೆಗಳ ವಿರುದ್ಧದ ನಿಮ್ಮ ಪ್ರತಿಭಟನೆಗೆ ನಾವೂ ಬರುತ್ತೇವೆ. ಪ್ರತಿಭಟನೆ ನಡೆಯುವ ಸ್ಥಳ, ಸಮಯ, ದಿನಾಂಕ ಮುಂತಾದ ವಿವರಗಳನ್ನು ತಕ್ಷಣ ತಿಳಿಸಿ" ಅಂತ ಬರೆದವರೂ ಐ.ಟಿ ಇಂಡಸ್ಟ್ರಿಯ ಗೆಳೆಯರೇ.

ಉಳಿದಂತೆ, ಪತ್ರಿಕೆಯ ದನಿಯಾಂದಿಗೆ ದನಿ ಬೆರೆಸಿದ ಸಾವಿರಾರು ಓದುಗ ಮಿತ್ರರು ಇದ್ದೇ ಇದ್ದಾರೆ. ನಾನು ಎಲ್ಲ ಅಭಿಪ್ರಾಯಗಳಿಗೂ ಕಣ್ಣರಳಿಸಿದ್ದೇನೆ. ಎಲ್ಲವನ್ನೂ ಗೌರವಿಸಿದ್ದೇನೆ.'ನೋಡಿ ಬೆಳಗೆರೇ, ನೀವು ಬರೆದಿರೋದು ಅರ್ಥಹೀನ. ಅದು ridiculous. ಅದು trash. ಹೇಗೆ ಅರ್ಥಹೀನ ಅಂತ ವಿವರಿಸೋದಕ್ಕೆ ನನಗೆ ಟೈಮಿಲ್ಲ. ಗೊತ್ತಾಯ್ತಾ? ಸದ್ಯಕ್ಕೆ ಇಷ್ಟು ತಿಳ್ಕಂಡಿರಿ. ನಿಮ್ಮವಾದ ಅರ್ಥಹೀನ" ಎಂಬಂತಹ ಅರ್ಥಪೂರ್ಣ(!) ಮೇಲ್‌ಗಳು ಬಂದಿವೆ. ನಕ್ಕು ಸುಮ್ಮನಾಗಿದ್ದೇನೆ.

ಆದರೆ ನಿಜವಾದ ಮತ್ತು ಉಪಯುಕ್ತವಾದ ಪ್ರತಿಕ್ರಿಯೆ ಬಂದಿರುವುದು ಸುಧಕ್ಕನ 'ಇನ್ಫೋಸಿಸ್‌"ಕಡೆಯಿಂದಲೇ! ಅವರು ಅಮೆರಿಕಾದ ಕತ್ರೀನಾ ಅನಾಹುತಕ್ಕೆ ಪರಿಹಾರ ನಿಧಿಯಾಗಿ ಐದು ಮಿಲಿಯನ್‌ ರುಪಾಯಿಗಳನ್ನು ಕೊಟ್ಟಿದ್ದಾರೆ. ಹಾಗೆಯೇ ಉತ್ತರ ಕರ್ನಾಟಕದ ನೆರೆಹಾವಳಿ ಸಂತ್ರಸ್ತರಿಗಾಗಿ ಐದು ಮಿಲಿಯನ್‌ ರುಪಾಯಿಗಳನ್ನು ಮುಖ್ಯಮಂತ್ರಿಗಳ ಕಲ್ಯಾಣ ನಿಧಿಗೆ ಕೊಡಲು ತೀರ್ಮಾನಿಸಿದ್ದಾರೆ. ಆ ಹಣದ ಸಂಗ್ರಹಣೆ ಕೂಡ ಇನ್ಫೋಸಿಸ್‌ ವಲಯದಲ್ಲಿ ಆರಂಭವಾಗಿದೆ. ಒಂದು ಬಹಿರಂಗ ಪತ್ರ ಈ ಮಟ್ಟದ ಪರಿಣಾಮ ಬೀರುತ್ತದೆಂದರೆ, ಅದಕ್ಕಿಂತ ಸಂತೋಷವೇನಿದೆ. Thanks to Sudhakka. ಆದರೆ, ಸಮಸ್ಯೆ ಕೇವಲ ಇನ್ಫೋಸಿಸ್‌ಗೆ ಸಂಬಂಧಿಸಿದುದಲ್ಲ. ಕನ್ನಡದ ಮನೆಯ ಹೆಣ್ಣುಮಗಳು ಎಂಬ ಕಾರಣಕ್ಕೆ ಸುಧಾ ಮೂರ್ತಿ ಅವರನ್ನು ಕೇಂದ್ರವಾಗಿಟ್ಟುಕೊಂಡು ಆ ಪತ್ರವನ್ನು ಬರೆದಿದ್ದೆ. ಹಾಗಂತ ಪತ್ರದಲ್ಲೇ ಸ್ಪಷ್ಟಪಡಿಸಿದ್ದೆ. ಈ ಸಮಸ್ಯೆ ಕೇವಲ ಉತ್ತರ ಕರ್ನಾಟಕದ ಜನತೆಗೆ ನೆರವಾಗುವುದಕ್ಕೆ ಸೀಮಿತವಾದುದೂ ಅಲ್ಲ.

ಬೆಂಗಳೂರು ಐ.ಟಿ. ಇಂಡಸ್ಟ್ರಿಯ ಸ್ಥಾಪನೆಗೆ ಸೂಕ್ತವಾದುದು ಅಂತ ಅನ್ನಿಸಿದ್ದರಿಂದಲೇ ಐಟಿ ದೊರೆಗಳು ಇಲ್ಲಿಗೆ ಬಂದರು. ಅವರು ಬರಲಾರಂಭಿಸಿದರು ಅಂತಲೇ ನಮ್ಮ ಸರ್ಕಾರಗಳು ಅವರಿಗೆ ರೆಡ್‌ ಕಾರ್ಪೆಟ್‌ ಹಾಸತೊಡಗಿದವು. ದೇವೇಗೌಡ ಮತ್ತೆ ಜೆ.ಎಚ್‌. ಪಟೇಲರು ಮುಖ್ಯಮಂತ್ರಿಗಳಾಗಿದ್ದ ಕಾಲದಿಂದಲೇ ಐಟಿ ದೊರೆಗಳ ಬೇಡಿಕೆ- ಹಕ್ಕೊತ್ತಾಯ-ಬೆದರಿಕೆ-ಬ್ಲ್ಯಾಕ್‌ ಮೇಲ್‌ಗಳೆಲ್ಲ ಶುರುವಾದವು. ಹಾಗೆ ನೋಡಿದರೆ, ಪಟೇಲರೇ ಕೊಂಚ ಸಿಡಿಮಿಡಿಗೊಂಡು'ಇದ್ರೆ ಇರಿ. ಹೋಗ್ತಿದ್ರೆ ಹೋಗಿ, ನೀವಿಲ್ದೆ ಹೋದ್ರೆ ನಾವೇನು ಉಪಾಸ ಸಾಯ್ತೀವಾ? ಹತ್ತು ಕ್ಯಾಬರೆ ಜಾಯಿಂಟ್‌ ತೆರೆದರೆ ಬರೋ ಶ್ರೀಮಂತರು ಬಂದೇ ಬರ್ತಾರೆ!" ಅಂತ ಅರ್ಧಕ್ರಾಂತಿಕಾರಿಯಂತೆ, ಇನ್ನರ್ಧ ಪಡಪೋಶಿಯಂತೆ ಮಾತನಾಡಿದ್ದರು. ಆಗ ಆಂಧ್ರದಲ್ಲಿ ಚಂದ್ರಬಾಬು ನಾಯುಡು ಇದ್ದರು.

ಅಪ್ಪಟ ಐಟಿ ಕಂಪನಿಗಳ CEOಗಳಂತೆಯೇ ರಾಜ್ಯವಾಳಿದ ನಾಯ್ಡು, ಇದೇ ಇನ್‌ಫ್ರಾಸ್ಟ್ರಕ್ಚರ್‌ಗಾಗಿ ಕೋಟ್ಯಂತರ ರುಪಾಯಿಗಳ ಸಾಲ ಮಾಡಿ ಹೈದ್ರಾಬಾದಿನ ರಸ್ತೆಗಳಿಗೆ ಹಾಕಿದರು. ಅಲ್ಲಿ ಐಟಿ ಇಂಡಸ್ಟ್ರಿ ಸೊಗಸಾಗಿ ಬೆಳೆದದ್ದೂ ಹೌದು. ಆದರೆ ನಗರ ಮತ್ತು ಗ್ರಾಮೀಣ ಬದುಕುಗಳ ನಡುವೆ ಐಟಿ ಇಂಡಸ್ಟ್ರಿ ಎಂಥ ದೊಡ್ಡ ಕಂದಕ ಸೃಷ್ಟಿಸುತ್ತದೆ ಎಂಬುದು ಚಂದ್ರಬಾಬು ನಾಯುಡೂಗೆ ಗೊತ್ತಾಗುವ ಹೊತ್ತಿಗೆ ಆಂಧ್ರದ ಹಳ್ಳಿಗಾಡಿನಲ್ಲಿ ನಕ್ಸಲೀಯರು ಎದ್ದು ನಿಂತಿದ್ದರು. ರಾಯಲಸೀಮಾ ಹೋರಾಟ ಪ್ರತ್ಯೇಕ ರಾಜ್ಯವನ್ನೇ ಬೇಡಿತ್ತು. ತಿರುಪತಿಗೆ ಬಂದ ನಾಯುಡುವಿನ ಕಾರಿನಡಿಗೇ ನಕ್ಸಲೀಯರು ಬಾಂಬು ಸಿಡಿಸಿದರು. ಆಗ ಪತರಗುಟ್ಟಿ ಹೋಯಿತು ಐಟಿ ಇಂಡಸ್ಟ್ರಿ.

ಕರ್ನಾಟಕದಲ್ಲಿ ಈ ತನಕ ಆದ್ಯಾವುದೂ ಆಗಿಲ್ಲ. ಬೆಂಗಳೂರಿನಲ್ಲಿ ಜನ ಶಾಂತಿಪ್ರಿಯರು. ಇಲ್ಲಿನ ಐಟಿ ಕಂಪನಿಗಳ ಪೈಕಿ ಒಂದೇ ಒಂದು ಕಂಪನಿಯಲ್ಲೂ ಟ್ರೇಡ್‌ ಯೂನಿಯನ್‌ ಇಲ್ಲ. ಬೆಂಗಳೂರಿಗೆ ನರೆ ಹಾವಳಿಯಿಲ್ಲ. ಬಿಸಿಲ ಹೊಡೆತವಿಲ್ಲ. ಇದು ಸ್ವಿಚ್ಚು ಹಾಕದೇನೇ ಕೆಲಸ ಮಾಡುವ ಖಾಯಂ ಏರ್‌ ಕಂಡೀಷನ್ಡ್‌ ನಗರಿ. ಇಲ್ಲಿ ಕೆಲವೇ ತಿಂಗಳುಗಳಿಗೆ ಮುಂಚೆ ಐಟಿ ದೊರೆಗಳಿಗೇ ಹುಟ್ಟಿದ್ದಾರೇನೋ ಎಂಬಂತೆ ವರ್ತಿಸುತ್ತಿದ್ದ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಇದ್ದರು. ದೊರೆಗಳು ಕಾಲಲ್ಲಿ ತೋರಿಸಿದ್ದನ್ನು ಅವರು ನಾಲಗೆಯಿಂದ ಮಾಡುತ್ತಿದ್ದರು. ಹತ್ತು ವರ್ಷದ tax holiday ಕೊಡುವುದರಿಂದ ಹಿಡಿದು, ಸಾವಿರಾರು ಎಕರೆ ಭೂಮಿಯನ್ನು ರೈತರಿಂದ ಕಿತ್ತುಕೊಂಡು ಐಟಿ ದೊರೆಗಳಿಗೆ ಕೊಟ್ಟು -'ಇನ್ನೇನಾದರೂ ಬೇಕಾ" ಎಂಬಂತೆ ಕಂಪನಿಗಳೆದುರು ಕೈ ಜೋಡಿಸಿನಿಂತರು. ಆಗಲೇ ಶುರುವಾದದ್ದು ಐಟಿ ದೊರೆಗಳ ಅಸಲಿ ಬ್ಲ್ಯಾಕ್‌ಮೇಲ್‌. ಅವರ ಅಪ್ಪಣೆಗೆ ಅನುಸಾರವಾಗಿಯೇ ಎಸ್ಸೆಂ ಕೃಷ್ಣ, ಕರ್ನಾಟಕದ ಎಲ್ಲ ನಗರಗಳಿಗೂ ರಸ್ತೆ ಮಾಡಿಕೊಂಡಬಹುದಾದಷ್ಟು ಹಣವನ್ನು ಒಂದು ಬೆಂಗಳೂರಿಗಷ್ಟೇ ಸುರಿದು, ಇಲ್ಲಿ ರಸ್ತೆಗಳನ್ನು ಮಾಡಿದ್ದು. ನಯಾಪೈಸೆಯ ಪ್ರಯೋಜನವಿಲ್ಲದ flyoverಗಳನ್ನು ಮಾಡಿದ್ದು ಮತ್ತು ಆ ಹಂತದಲ್ಲೇ ಅವರ ಐಟಿ ದೊರೆಗಳಿಗೆ, ಸಾಕ್ಷಾತ್ತು ಇಂದ್ರಲೋಕವನ್ನೇ ಕಿತ್ತು ತಂದಿಟ್ಟು ಬೆಂಗಳೂರನ್ನು ಸಿಂಗಪೂರ್‌ ಮಾಡುತ್ತೇನೆಂದು ಆಣೆ ಮಾಡಿ ಹೇಳಿದ್ದು.

ಅದನ್ನೇ ಈಗ ದೊರೆಗಳು ಕೇಳುತ್ತಿದ್ದಾರೆ. ಧರಂ ಬೆಚ್ಚಿ ಬಿದ್ದಿದ್ದಾರೆ.

ಒಂದು ಸರ್ಕಾರವನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ಕಪಾಳಕ್ಕೆ ಹೊಡೆಯುವುದಕ್ಕೆ ವರ್ಲ್ಡ್‌ ಬ್ಯಾಂಕಿನ ರಿಪೋರ್ಟೇ ಬೇಕಾಗಿಲ್ಲ. ಇಲ್ಲಿ ರಸ್ತೆ ಚೆನ್ನಾಗಿಲ್ಲ. ತುಂಬ ಸಲ ಕರೆಂಟು ಹೋಗುತ್ತದೆ. ಪದೇ ಪದೆ ಟ್ರಾಫಿಕ್‌ ಜಾಮ್‌ಗಳಾಗುತ್ತವೆ. ಮಳೆ ಬಂದರೆ ತಗ್ಗು ಪ್ರದೇಶಗಳಿಗೆ ನೀರು ಹರಿಯುತ್ತದೆ- ಈ ತರೆನಾದ ಸಮಸ್ಯೆಗಳಿವೆಯಲ್ಲ? ಇವು ಬೆಂಗಳೂರಿನಂಥ ತೃತೀಯ ಪ್ರಪಂಚದ ಯಾವುದೇ ದೇಶದ ಯಾವುದೇ ನಗರಿಯಲ್ಲೂ ಇದ್ದೇ ಇರುತ್ತದೆ. ಬೆಂಗಳೂರಿಗಿಂತ ತುಂಬ ವ್ಯವಸ್ಥಿತವಾಗಿ ನಿರ್ಮಾಣಗೊಂಡ, ಅದ್ಭುತವಾಗಿ ಬೆಳೆದ ಮುಂಬಯಿ ಮೊನ್ನೆ ಮಳೆಗೆ ಸಿಕ್ಕು ಹೇಗೆ ತತ್ತರಿಸಿ ಹೋಯಿತೋ ನೋಡಿ?

ಅಮೆರಿಕಾದಂಥ ಅಮೆರಿಕಾ ಕತ್ರೀನಾ ಹೊಡೆತ ತಾಳಲಾಗದೆ ಬೀದಿಗೆ ನಿಂತು ಭಿಕ್ಷೆ ಬೇಡಿಬಿಟ್ಟಿತೆಂದರೆ, ಬೆಂಗಳೂರಿನ ಭೂಪಸಂದ್ರ, ಶಿವನಳ್ಳಿ, ಕೇತಮಾರನಹಳ್ಳಿಯ ರಸ್ತೆಗಳದು ಯಾವ ಲೆಕ್ಕ?ನಿಮಗೇ ಗೊತ್ತಿರುವಂತೆ, ಟೈಮ್ಸ್‌ ಆಫ್‌ ಇಂಡಿಯಾದಿಂದ ಹಿಡಿದು ವಿಜಯ ಕರ್ನಾಟಕದ ತನಕ ಎಲ್ಲ ದಿನಪತ್ರಿಕೆಗಳೂ ದಿನ ಬಿಟ್ಟು ದಿನ ಬೆಂಗಳೂರಿನ ರಸ್ತೆಗಳ ಬಗ್ಗೆ ವರದಿ, ದೂರು-ದುಮ್ಮಾನ ಪ್ರಕಟಿಸುತ್ತಲೇ ಇವೆ. POT HOLES IN INDIRANAGAR ಅಂತ ದೊಡ್ಡ ದನಿಯಲ್ಲಿ ಟೈಮ್ಸ್‌ ಬಾಯಿ ಬಡಿದುಕೊಳ್ಳುತ್ತದೆ. ಈ ಎಲ್ಲ ಪತ್ರಿಕೆಗಳೂ ವರ್ಷಗಟ್ಟಲೆ ಇಂಥ ವರದಿಗಳನ್ನು ಪ್ರಕಟಿಸಿದ ನಂತರವೂ ಬೆಂಗಳೂರಿನಲ್ಲಿ ಕೆಟ್ಟ ರಸ್ತೆ, ತೆಗ್ಗುಹೊಂಡ, ನೀರು ನುಗ್ಗುವ ಪ್ರದೇಶಗಳು ಇದ್ದೇ ಇರುತ್ತವೆ. ಹಾಗಂತ ಇವುಗಳನ್ನು ಪ್ರಕಟಸಬಾರದು ಅಂತ ಅಲ್ಲ.

ಒಂದು ಕಡೆ ಮನೆಗಳೇ ಇಲ್ಲದೆ, ರಸ್ತೆಗಳ ಗುರುತೂ ಇಲ್ಲದೆ, ತಿನ್ನಲಿಕ್ಕೆ ಅನ್ನವೇ ಇಲ್ಲದೆ-ಎಲ್ಲ ಕೊಚ್ಚಿಕೊಂಡು ಹೋಗಿ ನೀರಿನಲ್ಲಿ ಮುಳುಗಿದ ಮನುಷ್ಯ'ನೆತ್ತಿಗೊಂದು ಸೂರಾದರೂ ಕೊಡಿ" ಅಂತ ಮೊರೆಯಿಡುತ್ತಿರುವಾಗ,'ನಮ್ಮ ಕಾರು ಅಡೆತಡೆಯಿಲ್ಲದೆ ಐದು ನಿಮಿಷದಲ್ಲಿ ಏರ್‌ಪೋರ್ಟ್‌ ತಲುಪಲಿಕ್ಕೆ ಬೇಕಾದಂಥ ರಸ್ತೆಯನ್ನ ಈ ತಕ್ಷಣ ಮಾಡಿಕೊಡಿ" ಅಂತ ಅಪ್ಪಣೆ ಕೊಡುವ ಐಟಿ ದೊರೆಗೆ ನಾವು ಕಾಲಿಗೆ ಬಿಸಿ ನೀರು ಕೊಟ್ಟು ಸ್ವಾಗತಿಸಬೇಕಿಲ್ಲ.

ಇರುಕು ರಸ್ತೆ, ಕೊಳಗೇರಿಗಳು, ಟ್ರಾಫಿಕ್‌ ಜಾಮ್‌ಗಳು, ಸಣ್ಣ ಮಳೆಗೂ ಚೆದುರಿಹೋಗುವ ಜನಜೀವನ, ಅನವಶ್ಯಕ ವಾಹನ ದಟ್ಟಣೆ- ಇವೆಲ್ಲವುಗಳ ನಡುವೆಯೇ ಇಲ್ಲಿ ಬದುಕು ಬೆಳೆದಿದೆ. ಹೊಸತು ಚಿಗುರಿದೆ. ನಮ್ಮ ಹುಡುಗರು ಓದಿ ಬುದ್ಧಿವಂತರಾಗಿದ್ದಾರೆ. ಅಮೆರಿಕ, ಅವರನ್ನು ಕೈಬೀಸಿ ಕರೆದು ಕೆಲಸಕೊಟ್ಟಿದೆ. ಇನ್‌ಫ್ರಾಸ್ಟ್ರಕ್ಟರ್‌ ಅಂದರೆ ಕೇವಲ ರಸ್ತೆ, ಟಾಯ್ಲೆಟ್ಟು, ಏರ್‌ಪೋರ್ಟ್‌ ಅಲ್ಲವಲ್ಲ?

ಆದರೆ ಐಟಿ ದೊರೆಗಳೆತ್ತಿರುವ ತಕರಾರಿನ ಈ ಅವಕಾಶವನ್ನೇ ತೆಗೆದುಕೊಂಡು ನಮ್ಮವರನ್ನೂ ಕೊಂಚ ಝಾಡಿಸೋಣ. ನಾವು ಕಟ್ಟಿದ road tax ಏನು ಮಾಡಿದಿರಿ?ಇಷ್ಟು ಸಾವಿರ ಕೋಟಿ ಮೊತ್ತದ ಪ್ರಾಜೆಕ್ಟುಗಳನ್ನು ಐದು ವರ್ಷಗಳಿಗೆ ಮುಂಚೆ ಹಾಕಿಕೊಂಡಿದ್ದಿರಿ?ಅದರಲ್ಲಿ ಎಷ್ಟು ತಿಂದಿರಿ?ಬೆಂಗಳೂರನ್ನು ಸಿಂಗಪೂರ್‌ ಮಾಡುತ್ತೇವೆಂದು ಹೇಳಿದವರು, ಅದಕ್ಕಾಗಿ ಕೋಟ್ಯಂತರ ರುಪಾಯಿ ಬಿಡುಗಡೆ ಮಾಡಿದವರು ಈಗೆಲ್ಲಿದ್ದಾರೆ?ಅವರು ಲೆಕ್ಕ ಕೊಡಲಿ. ಬೆಂಗಳೂರಿನ ಅಷ್ಟೂ ಶಾಸಕರನ್ನ, ಕಾರ್ಪೊರೇಟರುಗಳನ್ನ ಒಟ್ಟಾಗಿ ಕೂಡಿಸಿ ಅವರ ಹಯಾಮಿನಲ್ಲಿ, ಅವರ ಏರಿಯಾದಲ್ಲಿ ಅದೆಷ್ಟು ಕೋಟಿಗಳ ಕಾಮಗಾರಿ ನಡೆಯಿತು?ಬಿಲ್‌ ಮಂಜೂರಾದದ್ದು ಯಾವಾಗ?ನಿನ್ನೆ ಮಾಡಿದ ರಸ್ತೆಗಳು ಇವತ್ತೇನಾಗಿವೆ?ನಿನ್ನೆ ಅವರಿದ್ದ ಮನೆಗಳು ಇವತ್ತು ಹೇಗಿವೆ?ಎಷ್ಟು ಸಲ ಮಂತ್ರಿಯಾದೆ?ಎಷ್ಟನೇ ಸಲ ಶಾಸಕ?ಯಾವವಾರ್ಡಿನಿಂದ ಎಷ್ಟು ಸಲ ಗೆದ್ದ ಕಾರ್ಪೊರೇಟರು ನೀನು?ಆದ ಕೆಲಸವೆಷ್ಟು?ಅವತ್ತಿಗೂ-ಇವತ್ತಿಗೂ ನಿನ್ನ ಆಸ್ತಿಯೆಷ್ಟು?

ಇಂಥದ್ದೊಂದು ಲೆಕ್ಕ ಕೇಳುವ ಪರಿಪಾಠ ಐಟಿ ದೊರೆಗಳ ತಕರಾರಿನ ನೆಪದಲ್ಲಾದರೂ ನಮ್ಮಲ್ಲಿ ಆರಂಭವಾಗಲಿ. ಬೆಂಗಳೂರು ಸಿಂಗಪೂರ್‌ ಆಗಬೇಕಾದುದು ಸಿಂಗಪೂರ್‌ನಿಂದ ಬರುವ ದೊರೆಗಳಿಗಾಗಿ ಅಲ್ಲ : ಅದು ಈ ನೆಲದ ಮನುಷ್ಯನಿಗಾಗಿ ಆಗಬೇಕು. ಬಂದು ಕೂಡುವ ಐಟಿ ದೊರೆ, ಇಲ್ಲಿ ವ್ಯಾಪಾರ ವಹಿವಾಟು ನಡೆಸುತ್ತೇನೆಂದರೆ ಇಲ್ಲಿನ ಕಾನೂನು, ಕಾಯಿದೆ, ಸಾಮಾಜಿಕ ಸ್ವಾಸ್ಥ್ಯ, ಸ್ಥಳೀಯ ಸ್ಥಾನಮಾನ- ಎಲ್ಲವನ್ನೂ ಕಾಪಾಡಬೇಕು, ಗೌರವಿಸಬೇಕು. ಬಂದ ದೊರೆಗಳಿಗೆಲ್ಲ ಮಣೆ ಹಾಕಿ, ನಮ್ಮ ಸಮಾಜದ fabric ಹಾಳು ಮಾಡಿಕೊಳ್ಳಲಿಕ್ಕೆ ಭಾರತವೇನೂ ಸೂಳೆಗಾರಿಕೆಯ ಮೇಲೆ ಆಧಾರಪಟ್ಟು ಬದುಕುತ್ತಿರುವ ಥಾಯ್ಲಂಡ್‌ನಂತಹ ದೇಶವಲ್ಲ.

ಇಷ್ಟಾಗಿ ಐಟಿ ದೊರೆಗಳ ನಡುವಿನ ಕೆಲವು ಪುಂಡರು ಹೀಗೂ ಮಾತನಾಡಿದ್ದಾರೆ: ' Not a bad idea. ಕೆಲವು ಶಾಸಕರನ್ನ, ಸಂಸದರನ್ನ, ಕಾರ್ಪೋರೇಟರುಗಳನ್ನ ಇನ್‌ಫ್ರಾಸ್ಟ್ರಕ್ಟರ್‌ ಅಂದರೆ ಏನೆಂದು ತಿಳಿದುಕೊಳ್ಳುವುದಕ್ಕಾಗಿ ಗುಡಗಾಂವ್‌, ಅಂದರೆ ಏನೆಂದು ತಿಳಿದುಕೊಳ್ಳುವುದಕ್ಕಾಗಿ ಗುಡಗಾಂವ್‌, ಹೈದರಾಬಾದ್‌ ಅಥವಾ ಮುಂಬಯಿಗೆ ಕಳಿಸಿಕೊಡಿ. ಬೆಂಗಳೂರು ಅನ್ನೋದು, ಇದೊಂದು ಊರಾ?ಇದನ್ನು ಪೂರ್ತಿಯಾಗಿ ಹಾಳುಗೆಡವಿ ಮತ್ತೆ ಕಟ್ಟಬೇಕಷ್ಟೆ"

ಈ ಮಾತನ್ನು ಅಂದವನು NOVASOFT ಎಂಬ ಕಂಪನಿಯ ಜಾಕ್‌ ಆ್ಯಂಡರ್‌ ಸನ್‌. ಇದಕ್ಕಿಂತ ಮುಂಚೆ ಒಬ್ಬ ಅವಿವೇಕಿ, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಅಂದಿದ್ದ. ಬೆಂಗಳೂರನ್ನು dead city ಅಂದವರಿದ್ದಾರೆ. ಆದರೆ ಹೀಗೆ ಮಾತಾಡುವವರೆಲ್ಲರಿಗೂ ಗೊತ್ತಿದೆ: ಗುಡಗಾಂವದಲ್ಲಿ ತಳವೂರಿದ ವಿದೇಶಿ ಸಂಸ್ಥೆಗಳು ಸದ್ಯಕ್ಕೆ ಫ್ಯಾಕ್ಟರಿಯ ತುಂಬ ಪೊಲೀಸರನ್ನು ನಿಲ್ಲಿಸಿಕೊಂಡು ಕೆಲಸ ಮಾಡಿಸುತ್ತಿವೆ. ಕೊಲ್ಕತ್ತಾದಲ್ಲಿ ಒಂದು ಸಲ ಟ್ರಾಫಿಕ್‌ ಜಾಮ್‌ ಆದರೆ, ಬಿಡುಗಡೆಯಾಗಲು ಎಂಟು ತಾಸುಬೇಕು. ಹೈದರಾಬಾದ್‌ನಲ್ಲಿ ನಕ್ಸಲೀಯರು ಒಂದು ಬಾಂಬು ಸಿಡಿಸಿದರೆ ಸಾಕು ಅಜೀಮ್‌ ಪ್ರೇಮ್‌ಜಿಯ ಅಂಗಡಿ ಬಾಗಿಲು ಮುಚ್ಚುತ್ತದೆ. ಮುಂಬಯಿಯ ಮಳೆಗೆ, ಯಾವ ಐಟಿ ದೊರೆ ಛತ್ತರಿ ಹೊಲಿಸುತ್ತಾನಂತೆ? Non sense.

ಊರಿಗೆ ಬಂದ ವ್ಯಾಪರಿಗೆ, ಉದ್ದಿಮೆದಾರನಿಗೆ ಸವಲತ್ತು ಮಾಡಿಕೊಡೋಣ. ಆ ಮಾತು ಬೇರೆ: ಅವನಿಗೋಸ್ಕರ ಊರು ಕೆಡವಿ ಊರು ಕಟ್ಟಲು ಇಲ್ಲಿಯಾವನಿಗೂ ನಾಯಿ ಕಡಿದಿಲ್ಲ.'ಇವತ್ತು ಕನ್ನಡಿಗ ದನಿಯೆತ್ತಿದರೆ ಐಟಿ ದೊರೆಗಳು ಹೈದರಾಬಾದಕ್ಕೆ ಹೋಗಿ ಬಿಡುತ್ತಾರೆ. ಆಮೇಲೆ ನಮ್ಮ ಗತಿಯೇನು?" ಅಂತ ಬಾಯಿ ಬಡಿದುಕೊಳ್ಳುತ್ತಿರುವ ಯಡಿಯೂರಪ್ಪ ನಂತಹ ಹೇತ್ಲಾಂಡಿಗಳಿಗೆ ಒಂದು ವಿಷಯ ಗೊತ್ತಿರಲಿ: ದನಿಯೆತ್ತುವುದು ತೆಲುಗನಿಗೂ, ಮರಾಠಿಗನಿಗೂ, ಬಂಗಾಳಿಗೂ, ಮಧ್ಯಪ್ರದೇಶದವನಿಗೂ ಗೊತ್ತಿದೆ.

ಆಮೇಲೇನು ಅಜೀಮ್‌ ಪ್ರೇಮ್‌ಜಿ ಆಕಾಶದಲ್ಲಿ ಕಟ್ಟುತ್ತಾನಾ ಐಟಿ ಇಂಡಸ್ಟ್ರಿ?

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more