• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾರ್ಥ್‌ ಇಂಡಿಯನ್‌ ವಲಸೆಯ ವಿರುದ್ಧ ಈಗ ಕೂಗು ಹಾಕದಿದ್ದರೆ...

By Staff
|
Ravi Belagere on Thatskannada.com ರವಿ ಬೆಳಗೆರೆ
ತೀರ ಬೆಂಕಿ ಬಿದ್ದು ಹೋಗುವಂಥದ್ದೇನೂ ಆಗಿಲ್ಲ.

ಬೆಂಗಳೂರಿನ ಹೆಸರು ದಿಲ್ಲಿಯಲ್ಲಿ ಕೇಳಿಸಿದೆ ಉಗ್ರರ ಬಾಯಲ್ಲಿ. ಅವರನ್ನು ಅಲ್ಲಿ ಹೊಡೆದುಹಾಕದ್ದಿದ್ದರೆ, ಅವರು ಇಲ್ಲಿ ನಾರಾಯಣ ಮೂರ್ತಿ ಮತ್ತು ಅಜೀಂ ಪ್ರೇಮ್‌ಜಿಗಳ ಸಂಸ್ಥೆಗಳನ್ನು ಬಾಂಬಿಕ್ಕಿ ಉಡಾಯಿಸುತ್ತಿದ್ದರಂತೆ. ಅಂಥ ಬೆಂಕಿಬಿದ್ದು ಹೋಗುವಂಥ ಸುದ್ದಿಯೇನಲ್ಲ. ದಿಲ್ಲಿಯಲ್ಲಿ ಉಗ್ರರು ಸಿಕ್ಕ ಹಿಂಚುಮುಂಚಿನಲ್ಲೇ ಇಲ್ಲಿ ಬೆಂಗಳೂರಿನ ಕಂಟೋನ್ಮೆಂಟಿನಲ್ಲಿ ಪೊಲೀಸರ ಕೈಗೊಂದು ಬ್ಯಾಗು ಸಿಕ್ಕಿತು. ಬಿಚ್ಚಿ ನೋಡಿದ ಪೊಲೀಸರ ಕೈಗೆ ಗನ್ನು, ಕಾಡ ತೂಸು, ಚಾಕು-ಪಾಕು ಕಾಣಿಸಿದ್ದೇ ತಡ; ಅವರು ಧರಂಸಿಂಗ್‌ನ ಕರೆಸಿ ಅವರ ಕೈಗೇ ಕಾರ್ಬೈನು ಕೊಟ್ಟು ಫೋಟೋ ಹೊಡೆಸಿಟ್ಟುಕೊಂಡರು. ಗಾವಿಲರಂಥ ಕೆಲವು ಪತ್ರಕರ್ತರು ಅವುಗಳನ್ನು ಟೆರರಿಸ್ಟುಗಳು ತಂದ ವೆಪನ್ನುಗಳು ಅಂತ ಬರೆದು ಕೈ ನೀವಿಕೊಂಡರು. ಕಡೆಗೆ ನೋಡಿದರೆ, ಅದು ನಮ್ಮ ಬೈಲನರಸಾಪುರದ ಕೊಲುಮೆಯಲ್ಲಿ ತಯಾರಾಗು ವಂಥ ನಾಡಪಿಸ್ತೂಲುಗಳಿಗಿಂತ ಕೊಂಚ ಸೊಫೆಸ್ಟಿಕೇಟೆಡ್‌ ಆದ ಕಂಟ್ರಿಕಾರ್ಬೈನು. ಇಲ್ಲೇ ಯಾವನೋ ಶಿವಾಜಿ ನಗರದ ರೌಡಿಯಾಬ್ಬ ತನ್ನ ಬಿಹಾರ್‌ ಅಥವಾ ಜಾರ್ಖಂಡದ ಛೇಲಾಗಳಿಂದ ತರಿಸಿಕೊಂಡದ್ದು ಅಂತಾಯಿತು. ಟೆರರಿಸ್ಟುಗಳು ತರುವಂಥ ವೆಪನ್‌ಗಳೂ ಅವಲ್ಲ. ಅವರು ತರುವ ರೀತಿಯೂ ಅದಲ್ಲ. ಬಿಟ್ಟಾಕಿ ಅದನ್ನ. ಅದ್ಯಾವುದೂ ಅಂಥ ಬೆಂಕಿಬಿದ್ದೋಗುವಂಥ ಸುದ್ದಿಯಲ್ಲ .

ಆದರೆ ಈಗಾಗಲೇ ಬೆಂಕಿ ಬಿದ್ದಿದೆ. ಅದು ಸುದ್ದಿಯಾಗಿಲ್ಲ. ಆ ಬಗ್ಗೆ ಪ್ರಸ್ತಾಪಿಸುತ್ತಿದ್ದೇನೆ. ನಿಮಗೆ ಇದು silly ಅನ್ನಿಸಿದರೆ, ಹತ್ತು ವರ್ಷಗಳ ನಂತರ ಇದನ್ನು ನೆನಪು ಮಾಡಿಕೊಂಡು ಓದಿ.

Prices are zooming due to entry of North Indians in Bangaloreನಿಜಕ್ಕೂ ಬೆಂಗಳೂರಿಗೆ ಬೆಂಕಿ ಬಿದ್ದಿದೆ! ಹಿಂದೆ ನೀವೆಂದೂ ಕಾಣದಷ್ಟು ಸಂಖ್ಯೆಯಲ್ಲಿ ಒರಿಸ್ಸಾದ ಜನ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೇ ಸ್ಟಾರ್‌ ಹೋಟೆಲ್‌ಗೆ ಹೋಗಿ : ಅಲ್ಲಿರುವ ಟ್ರೆೃನಿಗಳು ಒರಿಸ್ಸನ್ನರು. ಯಾವುದೇ ಉತ್ತರ ಭಾರತದ ಶ್ರೀಮಂತನ ಮನೆ ಹೊಕ್ಕು ನೋಡಿ: ಅಡುಗೆಯವರು ಒರಿಸ್ಸನ್ನರು. ಸುಮ್ಮನೆ ಒಂದು ಐ. ಟಿ. ಕಂಪೆನಿಗಳು ಗೆಸ್ಟ್‌ ಹೌಸಿನ ಬಾಗಿಲು ತಟ್ಟಿ ನೋಡಿ: ಅಲ್ಲೂ ಒರಿಸ್ಸಾದ ಅಡುಗೆಯವರೇ. ಹಾಗಂದ ಮಾತ್ರಕ್ಕೇ ಬೆಂಗಳೂರಿಗೆ ಬೆಂಕಿ ಬಿದ್ದೇ ಬಿಟ್ಟಿದೆಯೇನೋ ಎಂಬಂತೆ ಯಾಕಾಡ್ತಿದೀಯ ಅಂತ ನೀವು ಕೇಳಬಹುದು.

ನಿಮ್ಮಲ್ಲಿ ಕೆಲವು ಪ್ರಶ್ನೆ ಕೇಳಬೇಕಿದೆ, ಪ್ರೀತಿಯಿಂದ ಉತ್ತರಿಸಿ. ನೀವು ಒಂದು ಅಂಗಿ ಅಥವಾ ಪ್ಯಾಂಟು ಹೊಲಿಸಲಿಕ್ಕೆ ಟೈಲರ್‌ ಷಾಪಿಗೆ ಹೋಗಿ ಎಷ್ಟು ದಿನಗಳಾದವು ? ಬೆಂಗಳೂರೂ ಸೇರಿ ದಂತೆ ಅನೇಕ ನಗರಗಳಲ್ಲಿ gents tailors ಅಂತಿದ್ದವರು ಕ್ರಮೇಣ ಅಂಗಡಿಗಳನ್ನು ಮುಚ್ಚಿಹಾಕಿದ್ದಾರೆಂಬ ಸಂಗತಿ ನಿಮ್ಮ ಗಮನಕ್ಕೆ ಬಂದಿದೆಯೇ? ಇವತ್ತು ಬ್ಲೌಸು, ಚೂಡಿ ದಾರ್‌ ಹೊಲಿಸುವ ಹೆಣ್ಣುಮಕ್ಕಳು ಇದ್ದಾರಾದ್ದರಿಂದ ಲೇಡೀಸ್‌ ಟೈಲರುಗಳು ಉಳಿದುಕೊಂಡಿದ್ದಾರೆ. ಉಳಿದಂತೆ ಅಷ್ಟೂ ರೆಡಿಮೇಡ್‌ ಇಂಡಸ್ಟ್ರಿ ನಮ್ಮ ದೇಹಗಳನ್ನು ಆಕ್ರಮಿಸಿಕೊಂಡಿದೆ ಮತ್ತು ಇಡೀ ಇಂಡಸ್ಟ್ರಿ ಉತ್ತರ ಭಾರತದವರ, ಅದರಲ್ಲೂ ಸಿಂಧಿಗಳ ಕೈಯಲ್ಲಿದೆ. ಅಂದ್ಹಾಗೆ, ನೀವು ಅಕ್ಕಸಾಲಿಗರ ಬಳಿಗೆ ಹೋಗಿ ಒಡವೆ ಮಾಡಿಸಲು ಕೊಟ್ಟ ಕೊನೆಯ ದಿನಾಂಕ ಯಾವುದು? ಸಾವಿರಾರು ಅಕ್ಕಸಾಲಿಗರು ತಂತಮ್ಮ ಅಂಗಡಿಗಳನ್ನು ಮುಚ್ಚಿ ಬೀದಿಗೆ ಬಿದ್ದಿರುವ ಸಂಗತಿ ನಿಮಗೆ ಗೊತ್ತಿದೆಯೆ? ಒಡವೆಗಳು ಈಗ ಮೊದಲಿನಂತೆ ಅಕ್ಕಸಾಲಿಗರ ಮನೆಗಳಲ್ಲಾಗುತ್ತಿಲ್ಲ. ಅವುಗಳನ್ನು ಮಷೀನುಗಳನ್ನು ಹಾಕಿ, ಕಟ್ಟಡದೊಳಕ್ಕೆ ಕೆಲಸಗಾರರನ್ನು ಬಿಟ್ಟು ಕದಮುಚ್ಚುತ್ತಾರೆ. ಮತ್ತೆ ಕದ ತೆರೆಯುವುದು ಹದಿನೈದು ದಿನಗಳ ನಂತರವೇ. ಅಂಥ ಮಷೀನುಗಳಲ್ಲಿ ತಯಾರಾದ machine cut jewellary ಯನ್ನೇ ನಾವು ಕೊಳ್ಳುತ್ತಿರುವುದು. ಆ ಮಷೀನುಗಳ ಒಡೆಯರು ಗುಜರಾತಿಗಳು, ಮಾರವಾಡಿಗಳು -ಇತ್ಯಾದಿ.

ಇದೆಲ್ಲ ಕೇವಲ ಸ್ಯಾಂಪಲ್ಲಿಗೆ ಅಂತ ಹೇಳಿದೆ. ಇದಕ್ಕೆ ಕಾರಣ ಜಾಗತೀಕರಣವೂ ಇರಬಹುದು. ಆದರೆ ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಒರಿಯನ್ನರು, ಬಿಹಾರಿಗಳು, ಜಾರ್ಖಂಡಿಗಳು, ಬಂಗಾಲಿಗಳು ಕಾಣಿಸಿಕೊಳ್ಳುತ್ತಿದ್ದಾರೆ: ದೊಡ್ಡ ಸಂಖ್ಯೆಯಲ್ಲಿ ! ಅದನ್ನು ಗಮನಿಸಿದ್ದೀರಾ? ಬೆಂಗಳೂರಿನ ಕಾಲೇಜುಗಳ ತುಂಬ ಬಿಹಾರಿ, ಉತ್ತರ ಪ್ರದೇಶಿ, ಜಮ್ಮು-ಕಾಶ್ಮೀರ ಮತ್ತು ಪಂಜಾಬಿ ವಿದ್ಯಾರ್ಥಿಗಳು ರಾರಾಜಿಸುತ್ತಿದ್ದಾರೆ. ಪರಿಶೀಲಿಸಿದ್ದೀರಾ? ಅಷ್ಟೂ live bankಗಳು ನಡೆಯುತ್ತಿರುವುದು ಬಂಗಾಳಿಗಳಿಂದ. ಹಾಡುವವರು, ಬೆತ್ತಲೆ ಕುಣಿಯುವವರು, ಕುಣಿಸುವವರು -ಎಲ್ಲಾ ಬೆಂಗಾಲಿಗಳೇ.

ಕಾರ್ಪೆಂಟರುಗಳೆಲ್ಲ ಉತ್ತರ ಪ್ರದೇಶದಿಂದ ಬರುತ್ತಿದ್ದಾರೆ. ನೆಲಕ್ಕೆ ಟೈಲ್ಸ್‌ ಹಾಕುವವರಲ್ಲಿ ಬಿಹಾರಿಗಳದು ಸಿಂಹಪಾಲು. ನಮ್ಮ ಐ.ಟಿ. ಇಂಡಸ್ಟ್ರಿಯ ತುಂಬ ಉತ್ತರ ಪ್ರದೇಶದ, ಬಿಹಾರ, ಮಧ್ಯಪ್ರದೇಶದ ಹುಡುಗರು ತುಂಬಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಪೂರ್ತಾನುಪೂರ್ತಿ ರಿಯಲ್‌ಎಸ್ಟೇಟ್‌ ದಂಧೆ ಉತ್ತರ ಭಾರತದವರ ಸುಪರ್ದಿಗೆ ಸೇರಿಬಿಟ್ಟಿದೆ. ಇದೆಲ್ಲದರ ಪರಿಣಾಮ ನೋಡಿ: ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಮೂಟೆಗಳಲ್ಲಿ ಚಾಕು ಚೂರಿ, ನಾಡ ಪಿಸ್ತೂಲು, ಕಾಡತೂಸು, ನಾಡ ಕಾರ್ಬೈನು ಬಂದಿಳಿಯತೊಡಗಿವೆ. ನಮ್ಮ ಶಿವಾಜಿನಗರದಲ್ಲಿ ಮೊನ್ನೆ ಮೊನ್ನೆಯ ತನಕ ಮಚ್ಚು ಬೀಸಿ ಕೊಂಡು ಓಡಾಡುತ್ತಿದ್ದ ಮುಸಲ್ಮಾನರ ಹುಡುಗರ ಕೈಗಳಲ್ಲಿ ಕಂಟ್ರಿ ಪಟಾಕಿ ! ಅವರ ಪೈಕಿಯೇ ನಾಲ್ಕಾರು ಜನ ಡಾನ್‌ಗಳು. ಎಲ್ಲರ ಜೇಬಿನಲ್ಲೂ ಕಂತೆ ಕಂತೆ ದುಡ್ಡು. ಪ್ರತಿಯಾಬ್ಬರ ತಂಡದಲ್ಲೂ ಒಬ್ಬಿಬ್ಬರು ಬಿಹಾರಿಗಳು. ಒಂದು ಸಲ ಕೂತು ಕಳೆದ ಆರು ತಿಂಗಳ ದಿನಪತ್ರಿಕೆಗಳನ್ನು ಬಿಚ್ಚಿನೋಡಿ. ಎಷ್ಟು ದಿನ ಬಿಹಾರಿಗಳು ಬೆಂಗಳೂರಿನ ಕ್ರೆೃಂ ಛಾರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾ ರೆಂಬುದು ನಿಮಗೇ ಲೆಕ್ಕ ಸಿಗುತ್ತದೆ. ಕೆಲವಾರು ವರ್ಷಗಳ ಹಿಂದೆಯೇ ಬಂದು ಇಲ್ಲಿ ನೆಲೆಯೂರಿದ್ದ ಬಿಹಾರಿಗಳೊಂದಿಗೆ ಇತ್ತೀಚೆಗೆ ಬಂದ ಬಿಹಾರಿಗಳು ಸೇರಿಕೊಂಡು ಕಿಡ್ನಾಪ್‌ಗಳನ್ನು ಮಾಡಿದರು. ಕೊಲೆಗಳಲ್ಲಿ ಭಾಗಿಯಾದರು. ಗುಂಡು ಹಾರಿಸಿದರು. ಈ ಕೆಲಸವನ್ನು ಒಬ್ಬ ಕನ್ನಡಿಗ ಬಿಹಾರಕ್ಕೆ ಹೋಗಿ ಮಾಡಲು ಸಾಧ್ಯವಾದೀತು ಅಂದುಕೊಂಡಿರಾ ? ಒಬ್ಬ ಬಿಹಾರಿಗೆ ಇದು ಸಾಧ್ಯವಾಗುತ್ತದೆ. ಏಕೆಂದರೆ, ಅವನಿಗೆ ಅವಶ್ಯಕವಾದ ಬೆಂಬಲ, ವ್ಯವಸ್ಥೆ , ಅನುಕೂಲಗಳನ್ನು ಒದಗಿಸಬಲ್ಲ ಮಟ್ಟದ ದೊಡ್ಡ ಸಂಖ್ಯೆಯಲ್ಲಿ ಅವನ ಬಿಹಾರಿ ಬಂಧುಗಳು ಬೆಂಗಳೂರಿನಲ್ಲಿ ಹರಡಿದ್ದಾರೆ. ಯಾರಿಗಾದರೂ ಆತಂಕವಾಗ ಬೇಕಾಗಿರುವುದು, ಬೆಳೆಯುತ್ತಿರುವ ಈ ಉತ್ತರ ಭಾರತದವರ ಸಂಖ್ಯೆಯೇ.

ಇದೇನಿದೂ, ತೀರ sectarian ಆಗಿ ಮಾತಾಡ್ತಿದೀಯ? ಉತ್ತರ ಭಾರತದವರೂ ಭಾರತೀಯರಲ್ಲವೆ? ಸಂವಿಧಾನದ ಪ್ರಕಾರ ಒಬ್ಬ ಭಾರತೀಯ ಎಲ್ಲಿ ಬೇಕಾದರೂ ನೆಲೆಗೊಳ್ಳಬಹುದು ಅಂತಿರುವಾಗ ನಿಂದೇನು ಗುನುಗು? ಅಂತೀರೇನೋ-ಅನ್ನಿ.

ಈಗಾಗಲೇ ಬೆಂಗಳೂರಿನಲ್ಲಿ ಒಬ್ಬೇ ಒಬ್ಬ ಕನ್ನಡಿಗನಿಲ್ಲದಂಥ (ಇರಲಾಗದಂಥ) North Indian ಏರಿಯಾಗಳಿವೆ. ಶಿವಾಜಿನಗರದಿಂ ದಾಚೆಗೆ- ಅದು ಕನ್ನಡದ ಊರೇ ಅಲ್ಲ. ಸರಿ, ಒಂದಷ್ಟು ಜನ ಎಲ್ಲಿಂದಲೋ ಬಂದವರು ಇದ್ದರೆ ಇದ್ದುಕೊಳ್ಳಲಿ ಬಿಡು ಅಂತೀರೇನೋ ? ವಿಷಯ ಆದಷ್ಟೇ ಅಲ್ಲ. ಅವರ್ಯಾರೂ ಕನ್ನಡ ಮಾತಾಡುವುದಿಲ್ಲ ಎಂಬುದೂ ಗಾಬರಿಗೊಳ್ಳುವ ಅಂಶವಲ್ಲ.

ಗಾಬರಿಗೊಳಿಸುವ ಸಂಗತಿ, ದುಡ್ಡಿನದು! ಬೆಂಗಳೂರು ಈ ಹಿಂದೆಂದೂ ಕಾಣದಷ್ಟು ದುಡ್ಡು ಕಾಣುತ್ತಿದೆ. ಪದ್ಮನಾಭನಗರದಲ್ಲಿ ಹತ್ತು ವರ್ಷದ ಹಿಂದೆ ಇದ್ದ ಸೈಟಿನ ಬೆಲೆ, ಈಗ ಅಕ್ಷರಶಃ ದುಪ್ಪಟ್ಟಾಗಿದೆ. Stand boom ಅಂತ ಇವರೇನನ್ನುತ್ತಿದ್ದಾರೆ; ಇದನ್ನು ಸೃಷ್ಟಿಸಿದವರೇ ನಾರ್ತಿ (North Indian) ಗಳು. ಸೈಟು-ಮನೆಗಳ ಬೆಲೆ ಯಾವ ಪರಿ ಬೆಳೆದುಬಿಟ್ಟಿವೆಯೆಂದರೆ,ಇನ್ನೆರಡು ಮೂರು ವರ್ಷಗಳ ನಂತರ ತೀರ ಚಾಮರಾಜ ಪೇಟೆ, ಶ್ರೀನಗರ, ಬನಶಂಕರಿಗಳಂಥ ಅಚ್ಚ ಕನ್ನಡದ areaಗಳಲ್ಲೂ ಕನ್ನಡಿಗರು ಸೈಟು ಕೊಳ್ಳಲಾರರು, ಮನೆ ಕಟ್ಟಲಾರರು. ಬೆಂಗಳೂರು ಈ ಪರಿ ದುಬಾರಿಯಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ .

ಅಲ್ಲದೆ, ಇನ್ನೂರು ವರ್ಷಗಳ ಹಿಂದೆ ಮದ್ರಾಸ್‌ ಇಂಜಿನೀರಿಂಗ್‌ ಗ್ರೂಪ್‌(MEG) ಜೊತೆಯಲ್ಲಿ ಬಂದು ಕಂಟೋನ್ಮೆಂಟಿನಲ್ಲಿ ನೆಲೆಗೊಂಡ ತಮಿಳರಾಗಲೀ, ಅದಕ್ಕೂ ಮುಂಚೆ ಬಂದ ತೆಲುಗರಾಗಲೀ, ಚಹದ ಕೆಟಲು-ಕಪ್‌ಗಳೊಂದಿಗೆ ಬಂದ ಮಲಯಾಳಿಗಳಾಗಲೀ ಬೆಂಗಳೂರ ನ್ನು ಈ ಪರಿ ದುಬಾರಿಗೊಳಿಸಿರಲಿಲ್ಲ .

‘ಕೊಂಗರು ಕನ್ನಡ ಕಲಿಯೋದಿಲ್ಲ’ ಅಂತ ಸಿಡುಕುತ್ತೇವಾದರೂ, ತಮಿಳರು ತುಂಬ ಅಗ್ರೆಸ್ಸಿವ್‌ ಅಲ್ಲ . ನಮಗೂ ಅವರಿಗೂ (ಇತರೆ ದಕ್ಷಿಣ ಭಾರತದವರಿಗೂ ) ಅನೇಕ ಸಾಂಸ್ಕೃತಿಕ ಸಾಮ್ಯಗಳಿವೆ.

ಆದರೆ ನಿಮಗೆ ಗೊತ್ತಿರಲಿ: ಹಣದ ಥೈಲಿಗಳೊಂದಿಗೆ ಬರುತ್ತಿರುವ ನಾರ್ತಿಗಳು ತುಂಬ ಆಕ್ರಮಣಕಾರಕ ಜನ. ಸಿಂಧಿ, ಪಂಜಾಬಿ, ಬಿಹಾರಿ, ಉತ್ತರ ಪ್ರದೇಶಿ, ಬಂಗಾಳಿ-ಈ ಜನ ಬೆಂಗಳೂರನ್ನು ಆಕ್ರಮಿಸಿಕೊಳ್ಳುತ್ತಿರುವ ವೇಗ ನಿಜಕ್ಕೂ ಆತಂಕಕಾರಿಯಾಗಿದೆ. ಅವರೊಂದಿಗೆ ಬರುತ್ತಿರುವ ಅಲ್ಲಿನ ಪಾತಕ ಪ್ರಪಂಚಕ್ಕೆ ಬೆಂಗಳೂರು ಹೇಳಿಮಾಡಿಸಿದ ಆಡುಂಬೊಲ. ಅಲ್ಲಿಂದ ತಂದು ಇಲ್ಲಿ ದುಡ್ಡು ಹಾಕುವ ನಾರ್ತಿಗಳಿಗೆ ಬೆಂಗಳೂರು ಎಲ್ಲ ದೃಷ್ಟಿಯಿಂದಲೂ safe heaven. ಅವರು ಒಮ್ಮೆ ಬಂದು ಇಲ್ಲಿ ಕಾಲೂರಿದ ಮೇಲೆ ಮತ್ತೆ ಎದ್ದು ಹೋಗುವವರಲ್ಲ. ಅವರು ಎಷ್ಟು ಅಗ್ರೆಸ್ಸಿವ್‌ ಆದ ಜನ ಅಂದರೆ, ಕನ್ನಡಿಗರು ಅವರು ವಿರುದ್ಧ ಬಡಿದಾಡಲಾರರು.

ಇಲ್ಲಿನ ಪೊಲೀಸು, ರಾಜಕಾರಣಿ, ಅಂಡರ್‌ವರ್ಲ್ಡ್‌, ಜಮೀನು, ಇಂಡಸ್ಟ್ರಿ- ಎಲ್ಲ ವನ್ನೂ ಕೊಂಡುಬಿಡುವ ನಾರ್ತಿ ಕನ್ನಡಿಗರನ್ನು ಸದೆಬಡಿದುಬಿಡುತ್ತಾರೆ. ಈ ಕೆಲಸ ತುಂಬ ಢಾಳಾಗಿ ಮುಂಬಯಿಯಲ್ಲಾಗಿದೆ. ಅಲ್ಲಿ ಇವತ್ತಿಗೂ ನೀವು ನೋಡುವ ಫಿಯೆಟ್‌ ಟ್ಯಾಕ್ಸಿಗಳ ಮಾಲಿಕರು- ಚಾಲಕರು ಬಾಂಗ್ಲಾದೇಶಿಗಳು. ಅವರೆಲ್ಲ 1971ರಲ್ಲಿ ಬಾಂಗ್ಲಾದೇಶದಿಂದ ಬಂದ ನಿರಾಶ್ರಿತರು: ಮತ್ತೆ ಹಿಂತಿರುಗಿ ಹೋಗಲೇ ಇಲ್ಲ. ಅಲ್ಲಿನ ಅಷ್ಟೂ ಆರ್ಥಿಕ ವಹಿವಾಟು ಗುಜರಾತಿಗಳದು. ಅಂಡರ್‌ವರ್ಲ್ಡ್‌ನ ಮೇಲೂ ‘ಗುಜ್ಜು’ ಗಳದೇ ಹಿಡಿತ. ಇನ್ನರ್ಧ ಅಂಡರ್‌ ವರ್ಲ್ಡ್‌ ಆಳಿದ್ದು ಕನ್ನಡಿಗರು. ಇಡೀ ಹೊಟೇಲ್‌ ಇಂಡಸ್ಟ್ರಿ ಕನ್ನಡಿಗರದು. ಮೂಲ ಮರಾಠಿಗ ಅಲ್ಲಿ ಚಪ್ರಾಸಿಯಾಗಿಬಿಟ್ಟ. ಆಮೇಲಿನ ಕತೆ ಏನೇ ಇರಲಿ, ಇಬ್ರಾಹಿಂ ಕಸ್ಕರ್‌ ಮತ್ತು ರಾಜೇಂದ್ರ ನಿಖಿಲ್‌ ಕಾಲ್ಜೆ ಎಂಬಿಬ್ಬರು ಮರಾಠಾ ಹುಡುಗರೇ ಅನಿವಾರ್ಯವಾಗಿ ದಾವೂದ್‌ ಇಬ್ರಾಹಿಂ ಮತ್ತು ಛೋಟಾ ರಾಜನ್‌ ಆದರು. ‘ಮರಾಠಿ ಮಾನುಸ್‌’ನ ಪರವಾಗಿ ಬಾಳಠಾಕ್ರೆ ಆದೆಷ್ಟು ಬಡಿದಾಡಬೇಕಾಯಿತು. ಅಂಡರ್‌ವರ್ಲ್ಡ್‌ ನಿಗ್ರಹಿಸಲು ಅದೇನು ರಕ್ತಪಾತ, ಎಂಥ ಪಡಿಪಾಟಲು! ಒಂದು ಕಾಸ್ಮೋಪಾಲಿಟನ್‌ ನಗರಿಯಾಗಿ ಬೆಳೆಯಲು ಬಾಂಬೆ ಕಟ್ಟಿದ ಕಂದಾಯವೆಂಥದ್ದು ?

ಬೆಂಗಳೂರು ಈಗ exactly, ಬಾಂಬೆಯಾಗಲು ಅಣಿಯಾಗುತ್ತಿದೆ. ನಮ್ಮ ಕನ್ನಡ ಹೋರಾಟಗಾರರು ಅಪಾಯವೆಲ್ಲಿದೆಯೆಂಬುದನ್ನು ಗುರುತಿಸುತ್ತಿಲ್ಲ. ಬಿಲ್ಡರುಗಳನ್ನು ಕೇವಲ ರೌಡಿಗಳು ಹರಕೊಂಡು ತಿನ್ನುತ್ತಿದ್ದಾರೆ. ಗುಳೇ ಏಳುತ್ತಿರುವ ಬೆಂಗಳೂರಿನ ಹೃದಯಭಾಗದ ಕನ್ನಡಿಗನ ರಕ್ಷಣೆಗೆ ಯಾರೂ ಬರುತ್ತಿರಲಿಲ್ಲ. ಲೈವ್‌ ಬ್ಯಾಂಡ್‌ಗಳಿಂದ ಕೇವಲ ಯುವಕರು ಕೆಡುತ್ತಿದ್ದಾರೆ ಅಂತ ಅನಂತಮೂರ್ತಿ, ಸಿ.ಜಿ.ಕೆ, ಹೆಸರಿಗೆ ತಕ್ಕಂತಿರುವ ಹನುಮಂತಯ್ಯನಂಥವರು ಬೊಬ್ಬಿರಿಯುತ್ತಿದ್ದಾರೆ. ನಾರ್ತಿಗಳ onslaught ಎಂಥದ್ದೆಂಬುದನ್ನು ಯಾರೂ ಗಮನಿಸುತ್ತಿಲ್ಲ. ಇಂಡೋ ಅಮೇರಿಕನ್‌ ಶಾಲೆಗಳು ಕನ್ನಡವನ್ನು ಪೂರ್ತಿ ಒರೆಸಿಹಾಕುತ್ತಿವೆ. ನಮ್ಮ ಬುದ್ಧಿಜೀವಿಗಳು ತಮ್ಮ ಮೊಮ್ಮಕ್ಕಳಿಗೆ ಅಲ್ಲಿ ಸೀಟು ಸಿಗುತ್ತದಾ ಅಂತ ಎಲ್ಲ ಗಿಂಜಿಕೊಂಡು ಓಡಾಡುತ್ತಿದ್ದಾರೆ.

ಕಡೇಪಕ್ಷ, ನಾರ್ಥ್‌ ಇಂಡಿಯನ್‌ ವಲಸೆಯ ವಿರುದ್ಧ ಈ ಹಂತದಲ್ಲೇ ಚಿಕ್ಕದೊಂದು ಚಳವಳಿ ಆರಂಭಿಸಿ ಒಂದು ಕೂಗು ಹಾಕದಿದ್ದರೆ ಬೆಂಗಳೂರಿಗೆ ನಿಜವಾಗ್ಯೂ ಬೆಂಕಿ ಬಿದ್ದೀತು. ಇಷ್ಟೆಲ್ಲ ಚರ್ಚಿಸಿದ ನಂತರವೂ ನಿಮ್ಮಲ್ಲಿ ನನ್ನದೊಂದೇ ವಿನಂತಿ. ದಯವಿಟ್ಟು ಒಂದು ಸಲ ಬೆಂಗಳೂರಿನ ಎಂ. ಎಸ್‌. ರಾಮಯ್ಯ ಕಾಲೇಜಿಗೆ ಹೋಗಿ ಅಲ್ಲಿ ಓದುತ್ತಿರುವ ಉತ್ತರ ಭಾರತೀಯರ ತಲೆ ಎಣಿಸಿಬನ್ನಿ. ಕನ್ನಡಿಗರು ಔಷಧಿಗೆ ಬೇಕು ಅಂದರೂ ಸಿಗಲಾರರು. ಆದರೆ ನಿಮಗೆ ಗೊತ್ತಿರಲಿ : ಎಂ. ಎಸ್‌.ರಾಮಯ್ಯನೆಂಬ ದಗಲುಬಾಜಿ ಕಾಂಟ್ರಾಕ್ಟರು ಅದೆಲ್ಲ ಸಮೃದ್ಧ ಸಾಮ್ರಾಜ್ಯ ಕಟ್ಟಿದ್ದು ಕನ್ನಡಿಗರನ್ನು ಮುಳುಗಿಸಿಯೇ ಮತ್ತು ಕನ್ನಡಿಗರ ಹಣದಿಂದಲೇ! ಆ ಸಂಸ್ಥೆಗಳಿಗೆ ಇವತ್ತಿಗೂ ನಾವು ಕರೆಂಟು ಕೊಡುತ್ತೇವೆ. ರಸ್ತೆ ಮಾಡಿ ಕೊಡುತ್ತೇವೆ. ಅಲ್ಲಿನ ಚಪರಾಸಿಗಳೆಲ್ಲ ಕನ್ನಡದವರು. ಸೀಟು ಮಾತ್ರ ರಾಮಯ್ಯನ ಮಕ್ಕಳು ನಾರ್ಥ್‌ ಇಂಡಿಯನ್‌ಗಳಿಗೆ ಕೊಡುತ್ತಾರೆ.

ಇಷ್ಟಾದ ಮೇಲೂ ಬೆಂಗಳೂರಿಗೆ ಬೆಂಕಿ ಬಿದ್ದಿಲ್ಲ ಅಂತ ನಿಮಗನ್ನಿಸುತ್ತದಾ?

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more