ಇವತ್ತು ರಿಸಲ್ಟ್ ದಿನ, ಅಂದ್ರೆ ಪೋಷಕರಾಗಿ ನೀವು ಪಾಸ್ ಅಥವಾ ಫೇಲ್ ಆಗುವ ದಿನ: ಡಾ ರೂಪಾರಾವ್ ಬರಹ
ಇಂದು ಅನೇಕ ಮನೆಗಳಲ್ಲಿ ಅಂಕಗಳು, ಶೇಕಡಾವಾರು, ರ‍್ಯಾಂಕ್‌ಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವು ಮನೆಗಳಲ್ಲಿ ನಿರೀಕ್ಷೆಯ ಸಂಭ್ರಮ... ಕೆಲವು ಮನೆಗಳಲ್ಲಿ ಮೌನ... ಇನ್ನೂ ಕೆಲವು ಮನೆಗಳಲ್ಲಿ ಮನಸ್ಸಿನ ಭಾರ. ಇವತ್ತು ರಿಸಲ್ಟ್ ದಿನ. ಇದು ಕೇವಲ ಮಕ್ಕಳ ಓದಿದ ಪ್ರಯತ್ನಕ್ಕೆ ಸಿಗುವ ರಿಸಲ್ಟ್ ಅಂತ ನೀವು ಅಂದುಕೊಂಡಿದ್ದರೆ ನಾನು ಹೇಳುವೆ ಕೇಳಿ ಇವತ್ತು ನೀವು ಪೋಷಕರಾಗಿ ಪಾಸ್ ಅಥವಾ ಫೇಲ್ ಆಗುವ ದಿನ.. ಸೋಲು ಗೆಲುವನ್ನು ಹೇಗೆ ಸ್ವೀಕರಿಸಬೇಕು ಎಂದು ನಿಮ್ಮ ಮಕ್ಕಳಿಗೆ ನೀವು ತೋರಿಸುವ ದಿನ.

ಇವತ್ತಿನ ದಿನ ನಿಮಗೂ ಹಾಗೂ ನಿಮ್ಮ ಮಕ್ಕಳಿಗೂ ಜೀವನಪೂರ್ತಿ ಹೇಗೆ ನೆನಪಿಸಿಕೊಳ್ಳುವ ದಿನ. ಇಂದು ಮೂರು ಬಗೆಯ ರಿಸಲ್ಟ್ ಬರುವ ಸಾಧ್ಯತೆಗಳಿವೆ. ಮಗುವು ಕಡಿಮೆ ಅಂಕ ಗಳಿಸಿ ಫೇಲಾ ಆಗಿದ್ದಿರಬಹುದು. ಆ ಸಮಯದಲ್ಲಿ ಮಕ್ಕಳ ಮನಸಲ್ಲಿ ಬಗೆ ಬಗೆಯ ಆಲೋಚನೆಗಳು ಒಟ್ಟೊಟ್ಟಿಗೆ ಹುಟ್ಟಿಕೊಳ್ಳುತ್ತವೆ. "ನಾನು ವ್ಯರ್ಥ ""ನಾನು ಅಮ್ಮ-ಅಪ್ಪನಿಗೆ ನಿರಾಶೆ ತಂದಿರುವೆ?" ನನ್ನ ಭವಿಷ್ಯ ಮುಗಿಯಿತು". ಈ ವಯಸ್ಸಿನಲ್ಲಿ ಫೇಲ್ ಎಂಬುದು ಅವರ ಇಡೀ ಜೀವನವನ್ನು ಹಾಳು ಮಾಡುವುದಿಲ್ಲ. ಆದರೆ ಪೋಷಕರಿಗಾಗಿ ಪ್ರತಿಕ್ರಿಯೆ ಅವರ ವ್ಯಕ್ತಿತ್ವವನ್ನೇ ಬದಲಾಯಿಸಬಹುದು ಅಥವಾ ಅದನ್ನು ಮತ್ತೆಂದೂ ಮೇಲೇಳದ ಹಾಗೇ ಒಡೆಯಬಹುದು. ಈ ಕ್ಷಣದಲ್ಲಿ ಮಕ್ಕಳ ಮನಸ್ಸು ಭಯ, ನಾಚಿಕೆ, ಹೋಲಿಕೆಗಳಿಂದ ತುಂಬಿ ಹೋಗಿರುತ್ತದೆ.
ಇದನ್ನೂ ಓದಿ: ರ‍್ಯಾಂಕ್ ಪಡೆದವರೇ ಬುದ್ಧಿವಂತರು ಎಂಬ ಭ್ರಮೆ ಬೇಡ, ಫೇಲಾದರೆ ಜೀವನ ಮುಗಿದಿಲ್ಲ
ಈ ಸಮಯದಲ್ಲಿ ಏನೇ ತೊಂದರೆ ಆದರೂ ಅವರನ್ನು ರಕ್ಷಿಸುವಿರೆಂದುಕೊಂಡ ಪೋಷಕರಿಂದ ಅಂದರೆ ನಿಮ್ಮಿಂದ ಕಟು ಟೀಕೆ ಬಂದರೆ, ಅವರಲ್ಲೀ "ನಾನೊಂದು ಫೇಲ್ಯೂರ್ "ಎಂಬ ಹುಸಿ ನಂಬಿಕೆ ಬೇರೂರುತ್ತದೆ. ಅದೇ ನೀವು ಅವರಿಗೆ ಅವರ ಈ ಕ್ಷಣದ ಭಯಾತಂಕದ ಸಮಯದಲ್ಲಿ ಒತ್ತಾಸೆಯಾಗಿ ಈ ಹೆಗಲು ನೀಡಿದರೆ, ಅವರಲ್ಲಿ "ನಾನು ಕೇವಲ ಬಿದ್ದಿರುವೆ ಮತ್ತೆ ಎದ್ದು ನಿಲ್ಲಬಹುದು." ಎಂಬ ನಂಬಿಕೆ ಬೆಳೆಸಬಹುದು
ಇಂದು ಅವರಿಗೆ ಬೇಕಾಗಿರುವುದು ಉದ್ದುದ ಸಲಹೆ ,ಹೋಲಿಕೆ ಅಲ್ಲ. ಲೆಕ್ಚರ್ ಅಲ್ಲ. ಇವತ್ತು ಅವರಿಗೆ ಬೇಕಿರುವುದು ಆ ಒತ್ತಾಸೆ,ಬೆಂಬಲ, ಬೆಚ್ಚಗಿನ ಭಾವ. ಅವರೊಡನೆ ಮಾತಾಡಿ. ಹಾಗಂತ ಎದುರಿಗೆ ನಿಂತು ತೋರು ಬೆರಳು ಹಿಡಿದೋ ಅಥವಾ ಮುಖಭಾವದಲ್ಲಿ ಎಲ್ಲಾ ಮುಗಿಯಿತು ಎಂಬ ಭಾವನೆ ಹೊತ್ತು ನಿಲ್ಲಬೇಡಿ. ಅವರ ಪಕ್ಕದಲ್ಲಿ ಕೂತು ಕೈ ಹಿಡಿದು ಮಾತಾಡಿ. "ಇದು ಒಂದು ಫೀಡ್‌ಬ್ಯಾಕ್ ಅಷ್ಟೇ . ನಿನ್ನ ಪ್ರಯತ್ನಕ್ಕೆ ದೊರಕಿರುವ ಫೀಡ್‌ಬ್ಯಾಕ್ ಅಷ್ಟೇ ಇದು ನೀನು ಫೇಲ್ ಅಥವಾ ಪಾಸ್ ಎಂದು ನಿರ್ಧಾರ ಮಾಡಬೇಕಿಲ್ಲ, ಮುಂದಿನ ಪರೀಕ್ಷೆಯಲ್ಲಿ ಯಾವ ರೀತಿಯಲ್ಲಿ ಪ್ರಯತ್ನ ಹಾಕಿದರೆ ಇನ್ನೂ ಉತ್ತಮ ಫಲಿತಾಂಶ ಬರುತ್ತೆ ಎಂದು ಹುಡುಕೋಣ, ಮುಂದೆ ಹೋಗೋಣ"
ನೆನಪಿಡಿ ಜೀವನ ಒಂದು ಪರೀಕ್ಷೆಯ ಕಥೆ ಅಲ್ಲ. ಅಥವಾ ಕೊನೆಯ ಪರೀಕ್ಷೆಯೂ ಅಲ್ಲ. ಕೇವಲ ಆದರೆ ಒಮ್ಮೆ ಮಕ್ಕಳ ಮನಸನ್ನು ಒಡೆದರೆ ಅದೇ ಅವರ ಕೊನೆಯ ಹೆಜ್ಜೆ ಆಗಿರುತ್ತೆ ನೆನಪಿಡಿ. ಇನ್ನು ಪಾಸ್ ಆದರೂ ಹೆಚ್ಚು ಅಂಕ ಪಡೆಯದ ಮಕ್ಕಳ ಪೋಷಕರಿಗೆ ನಿಮಗೆ ಸ್ವಲ್ಪ ನಿಟ್ಟುಸಿರು ಜೊತೆಗೆ ಸ್ವಲ್ಪ ನಿರಾಸೆಯೂ ಇರಬಹುದು. ನಿಮ್ಮ ಮನಸ್ಸಿನಲ್ಲಿ ಇರಬಹುದು: "ಇನ್ನೂ ಚೆನ್ನಾಗಿ ಓದಬಹುದಿತ್ತು, ಬರೆಯಬಹುದಿತ್ತು. "
ಹೌದು, ಎಲ್ಲವೂ ನಿಜ ಆದರೆ ಒಂದು ಕ್ಷಣ ಯೋಚಿಸಿ. ನಿಮ್ಮ ಮಗ/ ಮಗಳು ಈಗ ಒಂದು ಸೂಕ್ಷ್ಮ ಮನಸ್ಥಿತಿ ಇದಾನೆ/ಳೆ. ಇತ್ತು ಫೇಲ್ ಅತ್ತ ಟಾಪರ್ ಸಹಾ ಅಲ್ಲ
ನಡು ಮಧ್ಯದಲ್ಲಿ. ಈ ಗುಂಪಿನ ಮಕ್ಕಳು ನಿಧಾನವಾಗಿ "ನಾನು ಆವರೇಜ್" ಅನ್ನೋ ಗುರುತು ಬೆಳೆಸಿಕೊಳ್ತಾರೆ. ಈ ನಂಬಿಕೆ ಮೂಡದ ಹಾಗೆ ತಡೆಯುವುದೇನೆಂದರೆ ನಿಮ್ಮ ಮಾತು. "ಏಕೆ ಹೆಚ್ಚು ಅಂಕ ಬರಲಿಲ್ಲ?" ಎಂದು ಕೇಳುವ ಬದಲು "ಇಲ್ಲಿಂದ ಇನ್ನೂ ಮುಂದೆ ಹೇಗೆ ಇನ್ನೂ ಚೆನ್ನಾಗಿ ಮಾಡಬಹುದು ನೋಡೋಣ."
ಸ್ಯಾಂಡ್ವಿಚ್ ಮಾದರಿಯ ಮಾತನಾಡಿ. ಅಂದರೆ ಮೊದಲು ಅವರು ಹಾಕಿದ ಪ್ರಯತ್ನವನ್ನು ಗುರುತಿಸಿ ಹೇಳಿ. ನಂತರ ಇನ್ನೂ ಉತ್ತಮ ಫಲಿತಾಂಶವನ್ನು ಪಡೆಯುವುದು ಹೇಗೆ ಎಂಬುನ್ನು ಮುಂದೆ ನೋಡೋಣ ಎನ್ನಿ ನಂತರ ಮತ್ತೆ ಹೋಪ್ ಕೊಟ್ಟು ಮುಗಿಸಿ.
ಇದನ್ನೂ ಓದಿ: SSLC ಪರೀಕ್ಷೆ-2: ಫೇಲಾದವರಿಗೆ ಇನ್ನೊಂದು ಅವಕಾಶ; ವೇಳಾಪಟ್ಟಿ ಮತ್ತು ಶುಲ್ಕದ ವಿವರ ಇಲ್ಲಿದೆ
ಅವರ ಜೊತೆ ಮಾತನಾಡಿ, ಅವರಿಗೆ ಯಾವ ಹಾಗೇಯೇ ಓದು ಸಹಾಯವಾಯಿತು , ಎಲ್ಲಿ ಕಷ್ಟವಾಯಿತು? ಮುಂದೆ ಹೇಗೆ ಸುಧಾರಿಸಬಹುದು ಎಂದೆಲ್ಲಾ ಅವರೊಡನೆಯೇ ಕೇಳಿ ಹಾಗಂತ ಮಾತಾಡಲು ಬಲವಂತ ಮಾಡಬೇಡಿ. ಕಡಿಮೆ ಮಾರ್ಕ್ ಬಂತು ಎಂದರೆ ಅವರ ಸಾಮರ್ಥ್ಯವೇ ಕಡಿಮೆ ಅಂತಲ್ಲ. ಬಹಳ ಮಕ್ಕಳು ಮುಂದೆ ಬೆಳೆಯುತ್ತಾರೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಪ್ರತಿಭೆಗಳು ಕಲಿಯುವ ವಿಧಾನಗಳು, ಆಸಕ್ತಿ, ಪ್ರೇರಣೆ ಎಲ್ಲವೂ ಇವೆ. ಅವುಗಳು ಸರಿಯಾದ ರೀತಿಯಲ್ಲಿ ಸಿಕ್ಕಾಗ ಅವರು ತಮ್ಮ ಸಾಮರ್ಥ್ಯ ತೋರುತ್ತಾರೆ.
ಹೆಚ್ಚು ಅಂಕ ಪಡೆದ ಮಕ್ಕಳ ಪೋಷಕರಿಗೆ ಇವತ್ತು ನಿಮ್ಮ ಮನೆಯಲ್ಲಿ ಸಂತೋಷ, ಸಂಭ್ರಮ ನಡೆಯುತ್ತಿದೆ. ಆದರೆ ಒಂದು ಅಂಶವೇನೆಂದರೆ ಹೆಚ್ಚು ಅಂಕಗಳು ಬಾಹ್ಯ ಮೆಚ್ಚುಗೆಯನ್ನು ತರುತ್ತವೆ. ಜೊತೆಗೇ ವಿದ್ಯಾರ್ಥಿಗಳಲ್ಲಿ ಒಂದು ಒತ್ತಡವನ್ನು ಕೂಡ ತರುತ್ತವೆ: "ಮುಂದಿನ ಸಲವೂ ಇದೇ ರೀತೀ ಅಂಕ ಯಶಸ್ಸು ಗಳಿಸಬೇಕು ", " ಒಂದು ವೇಳೆ ನಾನು ಇದನ್ನು ಮುಂದುವರಿಸದಿದ್ದರೆ ಈ ಮೆಚ್ಚುಗೆ ನಿರೀಕ್ಷೆ ಹತಾಶೆ ಆಗುತ್ತೇನೋ". ಹೀಗೇ , ಯಶಸ್ಸು ಸಹಾ ಆತಂಕಕ್ಕೆ ಕಾರಣವಾಗಬಹುದು. ಹೀಗಾಗಿ ಇಂದು ಸಂಭ್ರಮಿಸಿ. ಆದರೆ ಅದನ್ನು ಶಾಶ್ವತ ನಿರೀಕ್ಷೆಯಾಗಿ ಹೇರಬೇಡಿ.
"ನೀನು ಯಾವಾಗಲೂ ಹೀಗೇ ಮಾರ್ಕ್ಸ ಪಡೆಯಬೇಕು." ಅನ್ನುವುದರ ಬದಲು, "ನಿನ್ನ ಪ್ರಯತ್ನದ ಮೇಲೆ ನಮಗೆ ಹೆಮ್ಮೆ ಇದೆ, ಈ ಹೆಮ್ಮೆ ನೀನು ಪಡೆದ ಅಂಕಗಳಿಂದ ಮಾತ್ರ ಬಂದಿದ್ದಲ್ಲ." ಈ ಸಣ್ಣ ಮಾತು ನಿಮ್ಮ ಮಗುವನ್ನು ವಿಫಲತೆಯ ಭಯದಿಂದ, ಅತಿಯಾದ ಪರಿಪೂರ್ಣತೆಯ ಒತ್ತಡದಿಂನಾನೊಂದು ಕೇವಲ ಅಂಕಗಳಷ್ಟೇ" ಎಂಬ ಗುರುತಿನ ಬಲೆಯೊಳಗೆ ನುಗ್ಗದಂತೆ , ಮುಗಿಯದ ರೇಸಿನೊಳಗೆ ಬೀಳದಂತೆ ಕಾಪಾಡುತ್ತದೆ.
ಎಲ್ಲಾ ಪೋಷಕರೂ ನೆನಪಿಡಿ
ಅಂಕಗಳು ತಾತ್ಕಾಲಿಕ. ಆದರೆ ಆತ್ಮವಿಶ್ವಾಸ ಯಾವತ್ತಿಗೂ ಶಾಶ್ವತ. ದಡ್ಡ, ಕಷ್ಟ ಜೀವಿ, ಸ್ಮಾರ್ಟ್ , ಬುದ್ದಿವಂತ , ಸಾಮಾನ್ಯ ಯಾರಿದ್ದರೂ ಬದುಕಬಹುದು . ಪ್ರಪಂಚದ ಹೃದಯ ದೊಡ್ಡದು , ಮೇಲು ಕೀಳು ಇಲ್ಲಿಲ್ಲ ಬದುಕಿಗೂ ಬೇಧಭಾವವಿಲ್ಲ, ಬದುಕು ಎಲ್ಲರಿಗೂ ಅವಕಾಶ ಕೊಡುತ್ತದೆ. ಎಷ್ಟರ ಮಟ್ಟಿಗೆ ಅದನ್ನು ಉಪಯೋಗಿಸಿಕೊಂಡು ಬೆಳೆಯುತ್ತೇವೆ ಎಂಬುದು ಮುಖ್ಯ. ಅದರ ಬಗ್ಗೆ ಕಲಿಸಿ. ಹಾಗಾಗಿ ಇಂದು ನಿಮ್ಮ ಮಗು ಫಲಿತಾಂಶದ ಜೊತೆಗೆ ನೀವು ಕೊಡುವ ಸಂದೇಶವನ್ನೂಸಹಾ ಪಡೆಯುತ್ತೆ, ಅವರಿಗೆ ಜೀವನವನ್ನು ಎದುರಿಸಲು ಬೇಕಾದುದನ್ನು ಅಂಕ ಮಾತ್ರ ಅಲ್ಲ ಜೀವನ ಸ್ಥೈರ್ಯ ಎಂಬುದನ್ನು ತೋರಿಸಿ.
ಇದನ್ನೂ ಓದಿ: ಮೊಬೈಲ್‌ನಿಂದ ದೂರ, ಏಕಾಗ್ರತೆಯೇ ಮಂತ್ರ: 625ಕ್ಕೆ 625 ಅಂಕ ಗಳಿಸಿದ ಮೈಸೂರಿನ SSLC ಟಾಪರ್ ಧನುಷ್ ಸಾಧನೆಯ ಹಿಂದಿನ ಗುಟ್ಟು
ಕೆಲ ವರ್ಷಗಳಲ್ಲಿ ನಂತರ ಅವರು ಶೇಕಡಾವಾರು ಅಂಕಗಳನ್ನು ಮರೆತುಬಿಡಬಹುದು. ಆದರೆ ನೀವು ಅವರನ್ನು ಈ ದಿನ ಯಾವ ರೀತಿಯ ಫೀಲ್ ಕೊಟ್ಟಿದ್ದೀರಿ , ಏನು ಹೇಳಿದ್ದೀರಿ ಎಂಬುದನ್ನು ಅವರ ಸಬ್ಕಾನ್ಸಿಯಸ್ ಮನಸಿನಿಂದ ಎಂದೂ ತೆಗೆಯಲು ಸಾಧ್ಯವಿಲ್ಲ. ಆತ್ಮವಿಶ್ವಾಸಿ ಮಕ್ಕಳು ಅಂಕಗಳಿಂದ ರೂಪುಗೊಳ್ಳುವುದಿಲ್ಲ, ಅವರು ರೂಪುಗೊಳ್ಳುವುದು ಅರ್ಥಮಾಡಿಕೊಳ್ಳುವಿಕೆ, ಭದ್ರತೆ ಮತ್ತು ನಂಬಿಕೆಯಿಂದಎಂಬುದನ್ನು ಮರೆಯದಿರಿ.
ಇನ್ನೊಂದು ಮುಖ್ಯ ಅಂಶ ನಿಮ್ಮ ಮಗು ಕಡಿಮೆ ಅಂಕ ಪಡೆದಿದ್ದಾನೆ ಎಂದು ಆರ್ಟ್ಸಿಗೆ ಅಥವಾ ಹೆಚ್ಚು ಅಂಕ ತೆಗೆದಿದ್ದಾಳೆ ಎಂದು ಸೈನ್ಸಿಗೆ ಸೇರಿಸಿಬಿಡಬೇಡಿ. ಅವರಿಗೊಂದು ಕರಿಯರ್ ಕೌನ್ಸೆಲಿಂಗ್ ಮಾಡಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ.
ಬೆಂಗಳೂರಿನಲ್ಲಿ ಆಪ್ತಸಮಾಲೋಚಕರಾಗಿರುವ ಡಾ ರೂಪಾ ರಾವ್ ಅವರನ್ನು ಮೊಬೈಲ್ ಸಂಖ್ಯೆ 97408 66990 ಮೂಲಕ ಸಂಪರ್ಕಿಸಬಹುದು.












Click it and Unblock the Notifications