'ಹಣೆಬರಹ, ಪೂರ್ವ ಜನ್ಮದ ಕರ್ಮ ಅಥವಾ ಡೆಸ್ಟಿನಿ' ಎನ್ನುವ ಪದಗಳ ಸೃಷ್ಟಿ

ಜಗತ್ತಿನಲ್ಲಿ ಇಷ್ಟೊಂದು ಜನರಿದ್ದೇವೆ ಒಬ್ಬಬ್ಬರ ಬದುಕು ಒಂದೊಂದು ತರಹವಿದೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಮಕ್ಕಳಲ್ಲಿ , ಅವರ ಬದುಕಲ್ಲಿ ಬಹಳಷ್ಟು ಅಂತರವಿರುತ್ತದೆ . ಹೀಗೇಕೆ ? ಅವರು ಬೆಳೆದ ವಾತಾವರಣ , ನೀಡಿದ ಶಿಕ್ಷಣ , ಪ್ರೀತಿ , ಸುರಕ್ಷತಾ ಭಾವ ಎಲ್ಲವೂ ಒಂದೇ ಇದ್ದೂ ಬೆಳೆಯುತ್ತಾ ಅವರ ಜೀವನದಲ್ಲಿ ಬಹಳಷ್ಟು ಅಂತರ ಸೃಷ್ಟಿಯಾಗುತ್ತದೆ ಹೀಗೇಕೆ ? ಇಲ್ಲಿ ಏಕೆ ಎನ್ನವುದಕ್ಕೆ ಉತ್ತರವನ್ನ ನಿಖರವಾಗಿ ನೀಡಲು ಸಾಧ್ಯವಿಲ್ಲದ ಸಮಯದಲ್ಲಿ ' ಹಣೆಬರಹ , ಪೂರ್ವ ಜನ್ಮದ ಕರ್ಮ ಅಥವಾ ಡೆಸ್ಟಿನಿ ' ಎನ್ನುವ ಪದಗಳು ಸೃಷ್ಟಿಯಾಗಿರಬಹದು .

ಅಲ್ಲದೆ ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಕೆಲವೊಂದು ವಿಷಯಗಳಿಗೆ ನಿಖರ ಉತ್ತರ ಹುಡುಕುವುದು ಅಥವಾ ಕಾರಣ ಕೊಡುವುದು ಕಷ್ಟಸಾಧ್ಯ . ನಾವು ನಂಬಲಿ ಅಥವಾ ಬಿಡಲಿ ಕೆಲವೊಂದು ವಿಷಯವನ್ನ ಇದ್ದಹಾಗೆ ಒಪ್ಪಿಕೊಳ್ಳುವುದ ಬಿಟ್ಟು ಹೆಚ್ಚಿನದೇನೂ ನಾವು ಮಾಡಲು ಸಾಧ್ಯವಿಲ್ಲ . ಜೀವನದಲ್ಲಿ ಎಲ್ಲಾ ತರದ ಸೋಲು, ನೋವು ತಿಂದ ವ್ಯಕ್ತಿಯೊಬ್ಬ ಇನ್ನು ಈ ಜೀವನ ನನಗೆ ಸಾಕು ಎಂದು ತನ್ನ ಜೀವನವನ್ನ ಕೊನೆಗೊಳಿಸಲು ಪ್ರಯತ್ನಿಸುತ್ತಾನೆ . ಅಲ್ಲಿಯೂ ಹಲವು ವಿಫಲಗಳನ್ನ ಕಂಡು ಕೊನೆಗೆ ಸಮುದ್ರದಲ್ಲಿ ಮುಳುಗಿ ಸಾಯುವ ನಿಶ್ಚಯಕ್ಕೆ ಬರುತ್ತಾನೆ .

ಹೀಗೆ ಸಮುದ್ರ ಹೊಕ್ಕಾಗ ಅಲ್ಲಿನ ನೀರು ಕೂಡ ಹಿಂಗಿ ಹೋಗಿ ಕೇವಲ ಮೊಳಕಾಲವರೆಗೆ ಮಾತ್ರ ನೀರು ಇರುತ್ತದೆ . ಕೊನೆಗೆ ಅವನ ಸಾಯುವ ಪ್ರಯತ್ನಕ್ಕೆ ಸಮುದ್ರ ಹೊಕ್ಕರು ಜಯ ಸಿಗುವುದಿಲ್ಲ . ಇಲ್ಲಿ ಋಣಾತ್ಮಕ ಉದಾಹರಣೆ ಕೊಡಲಾಗಿದೆ ಆದರೆ ಇದನ್ನ ಬದುಕಿನ ಎಲ್ಲಾ ಮಜಲುಗಳಲ್ಲೂ ಅನ್ವಯಿಸಬಹದು . ಅರ್ಥ ಬಹಳ ಸರಳ ಕೆಲವೊಮ್ಮೆ ಮನುಷ್ಯ ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಅದರಲ್ಲಿ ಜಯ ಸಿಗದೇ ಹೋಗಬಹದು ಏಕೆಂದರೆ ಅವರ ಹಣೆಬರಹದಲ್ಲಿ ಅದು ಇರುವುದಿಲ್ಲ , ಅಥವಾ ಆ ವಸ್ತು ಅಥವಾ ವಿಷಯದ ಪ್ರಾಪ್ತಿ ಅಥವಾ ಲಬ್ಧತೆ ಇರುವುದಿಲ್ಲ.

Barcelona Memories Column By Rangaswamy Mookanahalli Part 61

ಇಂತಹ ಪರಿಸ್ಥಿತಿಯಲ್ಲಿ ನಮಗಿಂತ ಹೆಚ್ಚಿನ ಬಲವುಳ್ಳ ಕಣ್ಣಿಗೆ ಕಾಣದ ಶಕ್ತಿಯ ಬಗ್ಗೆ ಜೊತೆಗೆ ನಮ್ಮ ಡೆಸ್ಟಿನಿ ಬಗ್ಗೆ ನಂಬಿಕೆ ಹೆಚ್ಚಿಸುವ ಮಾತನಾಡುತ್ತದೆ . ನಾವೆಲ್ಲಾ ನಮ್ಮ ಹಣೆಬರಹವನ್ನ ಹೊತ್ತು ಬಂದಿರುತ್ತೇವೆ ಎನ್ನವುದು ಸಾಮಾನ್ಯ ಅರ್ಥ . ಇದೆಲ್ಲ ಭಾರತೀಯರ ಕಥೆಯಾಯ್ತು , ಯೂರೋಪಿಯನ್ನರು ಇಂತಹ ವಿಷಯಗಳನ್ನ ನಂಬುತ್ತಾರೆಯೇ ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಈಗಾಗಲೇ ಮೂಡಿರುತ್ತದೆ. ಖಂಡಿತ ನಂಬುತ್ತಾರೆ. ಯೂರೋಪು ತನ್ನತನವನ್ನ ಉಳಿಸಿಕೊಂಡು ಹೊಸತನ್ನ ಕೂಡ ಅಪ್ಪಿಕೊಂಡಿರುವ ಭೂಭಾಗ.

ಒಂದು ಉದಾಹರಣೆ ನಿಮ್ಮ ಸಂದೇಹವನ್ನ ನಿವಾರಿಸಬಲ್ಲದು. ಹೀಗಾಗಿ ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ತಮಾಲ್ ಎನ್ನುವುದು ಲಾಟಿನ್ ಭಾಷಿಕರು ಮಾಡುವ ಒಂದು ಖಾದ್ಯ . ಜೋಳ ಮತ್ತು ಮಾಂಸವನ್ನ ಸೇರಿಸಿ ಬೇಯಿಸಿ ಮಾಡುವ ಒಂದು ಆಹಾರ ಪದಾರ್ಥ. ಸ್ಪಾನಿಷರಲ್ಲಿ ಈ ತಮಾಲ್ ಕುರಿತು ಒಂದು ಆಡು ಮಾತಿದೆ 'ಎಲ್ ಕೆ ನಾಸೆ ಪರ ತಮಾಲ್ , ದೆಲ್ ಸಿಯಲೋ ಕಾಯೆನ್ ಲಾಸ್ ಹೋಹಾಸ್' ಅಂದರೆ ಕೆಲವರು ತಮಾಲ್ ಖಾದ್ಯವನ್ನ ಮಾಡಲೆಂದೇ ಹುಟ್ಟಿರುತ್ತಾರೆ ಅಂತವರಿಗೆ ಎಲೆಯಲ್ಲಿ ಕಟ್ಟಿದ ಮಾಂಸ ಮತ್ತು ಜೋಳ ಆಕಾಶದಿಂದ ಬೀಳುತ್ತದೆ ಎಂದರ್ಥ.

ಯಾರಿಗೆ ಯೋಗವಿರುತ್ತದೆ , ಹಣಬರಹವಿರುತ್ತದೆ ಅಂತಹವರಿಗೆ ಹೇಗೋ ಕೊನೆಗೆ ಆಕಾಶದಿಂದ ಯಾರೋ ಎಲೆಯಲ್ಲಿ ಕಟ್ಟಿ ಎಸೆಯುತ್ತಾರೆ , ಅವರಿಗೆ ಸಿಗುತ್ತದೆ , ಅವರು ಖಾದ್ಯವನ್ನ ತಯಾರಿಸುತ್ತಾರೆ. ಇನ್ನು ಕೆಲವರು ಎಷ್ಟೇ ಕಷ್ಟ ಪಟ್ಟರೂ , ಮಾಂಸವನ್ನ ತಂದಿಟ್ಟು ಕೊಂಡಿದ್ದರೂ ಕೊನೆ ಘಳಿಗೆಯಲ್ಲಿ ಅದನ್ನ ಬೇರೆ ಯಾರೋ ಲಪಟಾಯಿಸಿಬಿಡುತ್ತಾರೆ. ಇವೆಲ್ಲ ಕೇಳಲು ಕಥೆಯಂತೆ ಕಾಣಬಹುದು. ಆದರೆ ಮನುಶ್ಯನ ಉನ್ನತಿ ಮತ್ತು ಅವನತಿಗೆ ಕೇವಲ ಮತ್ತು ಕೇವಲ ಪ್ರಯತ್ನ , ಪರಿಶ್ರಮ ಮಾತ್ರವಿದ್ದರೆ ಸಾಲದು ಜೊತೆಗೆ ಹಣೆಬರಹ ಕೂಡ ಮುಖ್ಯ ಎನ್ನುವುದು ಮನಷ್ಯನಿರುವ ಸಕಲ ಭೂಭಾಗದಲ್ಲಿ ನಂಬುವ ಮಾತು.

ಲ್ಯಾಟಿನ್ ದೇಶಗಳು ಮಾತ್ರವಲ್ಲ ಬ್ರಿಟಿಷರು ಕೂಡ ಈ ಡೆಸ್ಟಿನಿ , ಹಣೆಬರಹ , ಅದೃಷ್ಟವನ್ನ ಬಹಳವಾಗಿ ನಂಬುತ್ತಾರೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ , ಬ್ಲಾಕ್ ಮ್ಯಾಜಿಕ್ ಅಂದರೆ ಮಾಟ , ಮಂತ್ರದಲ್ಲಿ ಕೂಡ ವಿಶ್ವಾಸವನ್ನ ಇಟ್ಟಿದ್ದಾರೆ. ನಮ್ಮಲ್ಲಿ ಕೆಲವರು ಹಣೆಬರಹ ಎಲ್ಲಾ ಏನಿಲ್ಲ , ನಮ್ಮ ಪರಿಶ್ರಮ ಬಹಳ ಮುಖ್ಯ ಎನ್ನುವ ಮಾತನ್ನ ಕೂಡ ಆಡುತ್ತಾರೆ. ಆದರೆ ಅವರ ಕಣ್ಣೆದುರೇ ಎಲ್ಲಾ ಕೋನದಲ್ಲೂ ಕಡಿಮೆ ಎನಿಸಿಕೊಂಡ ವ್ಯಕ್ತಿ ಅವರ ಮುಂದೆಯೇ ಅವರನ್ನೇ ಮೀರಿ ಬೆಳೆದಾಗ , ಅದೃಷ್ಟ , ಹಣೆಬರಹ ಮತ್ತೆ ಮುಂಚೂಣಿಗೆ ಬರುತ್ತವೆ.

ಹೀಗೆ ಒಮ್ಮೆ ನಾವೆಂದು ಕೊಂಡದ್ದು ಆಗಲಿಲ್ಲ ಎಂದ ಮಾತ್ರಕ್ಕೆ ನಿರಾಶರಾಗಬೇಕಿಲ್ಲ . ಕತ್ತಲ ನಂತರ ಬೆಳಕಾಗಲೇ ಬೇಕಲ್ಲವೇ ? ಹಾಗೆಯೇ ಬದುಕಿನಲ್ಲಿ ಏರಿಳಿತಗಳು ಕೂಡ ! ಇಂದಿನ ದಿನದ ಸ್ಥಿತಿ ಸದಾ ಇರುವುದಿಲ್ಲ . ಬದುಕಿನಲ್ಲಿ ಬದಲಾವಣೆಯೊಂದೇ ನಿರಂತರ . ಬದುಕಿನ ಹಾದಿಯಲ್ಲಿ ನಮಗೆ ತೀರಾ ಬೇಕಾದವರನ್ನ ಕಳೆದುಕೊಳ್ಳುತ್ತೇವೆ ಅಂದಿನ ದಿನದ ದುಃಖ ಸದಾ ಇದ್ದಿದ್ದರೆ ? ನಾವು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲಾಗದೆ ಅದೇ ದುಃಖದಲಿ ನಮ್ಮ ಜೀವನ ಪಯಣವನ್ನೂ ಮುಗಿಸಬೇಕಿತ್ತು ಅಲ್ಲವೇ ?

ಆದರೆ ಬದುಕು ಜೀವನ್ಮುಖಿ ಹಾಗೆ ಆಗಲು ಬಿಡುವುದಿಲ್ಲ . ನೋವಿನ ನಂತರ ಏನಾದರೊಂದು ಬದುಕಿಗೆ ಆಶಾಭಾವನೆಯನ್ನ ನೀಡುತ್ತದೆ . ನಾವು ಬದುಕಲೇ ಬೇಕು ಎನ್ನುವುದಕ್ಕೊಂದು ಕಾರಣವನ್ನೂ ಕೊಡುತ್ತದೆ . ಸುಖವೇ ಇರಲಿ ದುಃಖವೇ ಇರಲಿ ಯಾವುದೂ ಈ ಬದುಕಿನಲ್ಲಿ ಶಾಶ್ವತವಲ್ಲ. ಸೋಲು ಎನ್ನುವುದು ಮನುಷ್ಯನನ್ನ ಹತಾಶೆಗೆ ದೂಡುತ್ತದೆ ಆದರೆ ಸೋಲಿನ ಹಿಂದೆಯೇ ನೆರಳಿನಂತೆ ಗೆಲುವು ಕೂಡ ಇರುತ್ತದೆ . ಗೆಲುವು ಸೋಲು ಎರಡೂ ಒಂದೇ ನಾಣ್ಯದ ಎರಡು ಮುಖಗಳು . ಅಥವಾ ಒಂದನ್ನೊಂದು ನೆರಳಿನಂತೆ ಹಿಂಬಾಲಿಸುತ್ತಲೇ ಇರುತ್ತವೆ.

ಈ ಮಾತನ್ನ ಸದಾ ನೆನಪಲ್ಲಿಟ್ಟು ಕೊಂಡರೆ ಉತ್ತಮ.ಇದನ್ನ ಸ್ಪಾನಿಶರು ದಿಸ್ಪೊಯೆಸ್ ದೆ ಲ ತೊರ್ಮೆಂತ ಸಿಯಂಪ್ರೇ ಯೇಗ ಲ ಕಾಲ್ಮಾ ಎನ್ನುತ್ತಾರೆ . ಅಂದರೆ ಚಂಡಮಾರುತದ ನಂತರ ಖಂಡಿತ ಶಾಂತಿ ನೆಲೆಸುತ್ತದೆ ಎಂದರ್ಥ. ಇನ್ನು ಇಟಲಿಯಲ್ಲಿ ಯೋಗಿಣಿಯರು (ನನ್ ) ಮತ್ತು ಆಂಬುಲೆನ್ಸ್ ಎಲ್ಲಿಗಾದರೂ ಹೊರಟಾಗ ಎದುರಾದರೆ ಅದನ್ನ ಅಪಶಕುನ ಎಂದು ಭಾವಿಸಲಾಗುತ್ತದೆ. ಒಂದಷ್ಟು ಹೊತ್ತು ನಿಂತು ನಂತರ ಉಪಕ್ರಮಿಸುವುದು ಇಲ್ಲಿನ ಪದ್ಧತಿ. ನಮ್ಮಲ್ಲಿ ಬೆಕ್ಕು ರಸ್ತೆಯಲ್ಲಿ ಬಂದರೆ ನಾವು ಇದನ್ನೇ ತಾನೇ ಮಾಡುವುದು.

ಬೆಂಕಿಯ ಕೆಂಡದ ಮೇಲೆ ನಡೆಯುವುದು , ಓಡುವುದು , ಮಕ್ಕಳನ್ನ ಅಂದರೆ ವರ್ಷದ ಕೆಳಗಿನ ಮಗುವನ್ನ ಮೂರ್ನಾಲ್ಕು ಎತ್ತರದ ಮಹಡಿಯಿಂದ ನೆಲಕ್ಕೆ ಎಸೆಯುವುದು ಹೀಗೆ ಇಲ್ಲಿಯೂ ಅನೇಕ ನಂಬಿಕೆಗಳಿವೆ. ಮಹಡಿಯಿಂದ ಮಗುವನ್ನ ಕೆಳಕ್ಕೆ ಬಿಸಾಕುತ್ತಾರೆ. ಕೆಳಗೆ ದೊಡ್ಡ ಬಟ್ಟೆಯನ್ನ ಹಿಡಿದ ಜನ ಮಗುವನ್ನ ಸುರಕ್ಷಿತವಾಗಿ ಕಾಪಾಡುತ್ತಾರೆ. ಹೀಗೆ ಮಗುವನ್ನ ಎಸೆಯುವ ಉದ್ದೇಶ ಮಗು ತನ್ನ ಮುಂದಿನ ದಿನಗಳಲ್ಲಿ ಭಯವಿಲ್ಲದ ಜೀವನವನ್ನ ನಡೆಸುತ್ತದೆ ಎನ್ನುವ ನಂಬಿಕೆ. ಹೀಗೆ ಇಂತಹ ವಿಷಯಗಳ ಒಂದು ದೊಡ್ಡ ಪಟ್ಟಿಯನ್ನ ತಯಾರಿಸಬಹುದು. ಇರಲಿ .

ಇವತ್ತು ದೇಶ , ಭಾಷೆ ಗಡಿಗಳ ಮೀರಿ ಜಗತ್ತು ಎದಿರುಸುತ್ತಿರುವ ಮಹಾನ್ ಸಮಸ್ಯೆ ವಿಷಯ ಪರಿಣಿತರ ಅಥವಾ ವಿಷಯದಲ್ಲಿ ಆಸಕ್ತಿ ಇರುವರ ಕೊರತೆ . ಹೇಳಿಕೊಳ್ಳಲು ಜಗತ್ತಿನಲ್ಲಿ ೭೫೦ ಕೋಟಿಗೂ ಮೀರಿದ ಜನಸಂಖ್ಯೆಯಿದೆ . ಆದರೇನು ಕೆಲವೊಂದು ಹುದ್ದೆ ನಿರ್ವಹಿಸಲು ಜನರ ಕೊರತೆಯಿದೆ . ತತ್ಕಾಲಕ್ಕೆ ಯಾರನ್ನೋ ಆ ಜಾಗಕ್ಕೆ ತುಂಬಬಹುದು ಆದರೆ ಅಲ್ಲಿಗೆ ಬೇಕಾದ ನಿಖರತೆ , ನೈಪುಣ್ಯತೆ ಕೊರತೆ ಇದ್ದೆ ಇರುತ್ತದೆ . ಇವತ್ತು ನಮಗೇನು ಬೇಕು ಅದಾಗಲು ಯಾರ ಅಡ್ಡಿಯೂ ಇಲ್ಲ , ಹಿಂದಿನಂತೆ ನೂರಾರು ಕಷ್ಟಗಳು ಕೂಡ ಇಲ್ಲ . ಹೀಗಿದ್ದೂ ನಾವು ಒಕ್ಕಣ್ಣ ರಾಜರಾಗಬೇಕೇ ?

ಹಾಗೆ ನೋಡಲು ಹೋದರೆ ಕುರುಡರ ಸಾಮ್ರಾಜ್ಯವೂ ಇರಬಾರದು . ಸಂಸ್ಕೃತ ಶ್ಲೋಕವೊಂದು ' ಯಾ ಸುಪ್ತೇಷು ಜಾಗ್ರತ ' ಎನ್ನುತ್ತದೆ . ಮಲಗಿದ್ದರು /ವಿಶ್ರಾಂತಿ ಪಡೆಯುತ್ತಿದ್ದರು ಜಾಗೃತನಾಗಿರು ಎನ್ನುವುದು ಸಂದೇಶ . ಇದನ್ನ ಪಾಲಿಸಿದರೆ ಕುರುಡರ ಸಾಮ್ರಾಜ್ಯ ಇರುವುದಿಲ್ಲ , ಸಾಮ್ರಾಜ್ಯವೇ ಇಲ್ಲದ ಮೇಲೆ ರಾಜನ ಮಾತೆಲ್ಲಿ ? ಈ ಮಾತು ಬರಲು ಕಾರಣವನ್ನ ವಿವರಿಸಿ ಈ ವಾರದ ಬರಹಕ್ಕೆ ವಿರಾಮ ಹಾಕುವೆ.

ಬಾರ್ಸಿಲೋನಾ ನಗರದಲ್ಲಿ ಆಗಲೇ ಹತ್ತು ವರ್ಷ ಕಳೆದು ಅಲ್ಲಿನ ಭಾಷೆ ಕಲಿತು , ಅಲ್ಲಿನ ಜನರೊಂದಿಗೆ ಬೆರೆತು ಅಲ್ಲಿನ ಗಾದೆಗಳ ಸಂಗ್ರಹಣೆಯಲ್ಲಿ ತೊಡಗಿದ್ದ ದಿನಗಳವು . ನಿತ್ಯವೂ ಒಂದಲ್ಲ ಒಂದು ಹೊಸತು ಕಲಿಯಲು ಸಿಗುತ್ತಿತ್ತು . ಭಾಷೆ ಎನ್ನುವುದು ಹಾಗೆಯೇ , ನನಗೆ ಪೂರ್ಣ ಗೊತ್ತು ಎಂದು ಎದೆ ಉಬ್ಬಿಸಿ ಹೇಳುವ ಹಾಗಿಲ್ಲ ! ಒಂದಲ್ಲ ಒಂದು ಹೊಸ ಪದ ಕಲಿಯಲು ಸಿಗುತ್ತದೆ . ಮಾತೃ ಭಾಷೆಯ ವಿಷಯ ಹೊರತು ಪಡಿಸಿ ನಾವು ಕಲಿಯುವ , ಕಲಿತ ಎನ್ನುವದಕ್ಕಿಂತ ಕಲಿಯುತ್ತಲೇ ಇರುವ ಭಾಷೆಗಳ ವಿಷಯದಲ್ಲಿ ಇದು ಸತ್ಯ . ಗಾದೆಯ ವಿಷಯದಲ್ಲೂ !! .

ಅಂದು ಹೀಗೆ ಆಯಿತು ನಮ್ಮ ಸಂಸ್ಥೆಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡ ಅಂದ್ರೆಯ ಎನ್ನುವ ಹುಡುಗಿಗೆ ಬಿಯಟ್ರಿಸ್ ಎನ್ನುವ ಹುಡುಗಿ ಏನನ್ನೋ ತಿಳಿಸಿ ಹೇಳುತ್ತಿದ್ದಳು . ನನ್ನ ವಿಭಾಗದ ಉಪ ಮುಖ್ಯಸ್ಥೆ ,ಗೆಳತಿ ಎವಾ ಅವರನ್ನ ನೋಡಿ ' ಮಿರಾ ರಂಗ ಉನ್ ಸಿಯಗೊ ಗಿಯಾಂದೋ ಆ ಒತ್ರೋ ಸಿಯಗೊ' ಎಂದಳು . ನಾನು ಎನ್ನಾಯ್ತು ಎನ್ನುವಂತೆ ಅವಳತ್ತ ನೋಡಿದೆ . ಅವಳು ಮುಂದುವರಿದು ಬಿಯಟ್ರಿಸ್ ಕೆಲಸಕ್ಕೆ ಸೇರಿ ಇನ್ನು ವಾರ ಆಗಿಲ್ಲ ಆಗಲೇ ಅವಳನ್ನ ನಿನ್ನೆ ಸೇರಿದವಳಿಗೆ ಟ್ರೈನ್ ಮಾಡು ಎನ್ನುವುದು ಎಷ್ಟು ಸಮಂಜಸ ಈಸ್ ಕೊಮೊ ಉನ್ ಸಿಯಗೊ ಗಿಯಾಂದೋ ಆ ಊತ್ರೋ ಸಿಯಗೊ ಅಂದಳು .

ಅರ್ಥ ಕಣ್ಣಿಲ್ಲದವನು/ವಳು ಇನ್ನೊಬ್ಬ ಕಣ್ಣಿಲ್ಲದವನಿಗೆ /ವಳಿಗೆ ಗೈಡ್ ಮಾಡುವಂತಿದೆ ಎನ್ನುವುದಾಗಿದೆ . ಅಂದರೆ ಈ ಸಂದರ್ಭದಲ್ಲಿ ಅಂದ್ರೆಯ ಮತ್ತು ಬಿಯಟ್ರಿಸ್ ಇಬ್ಬರೂ ಸಂಸ್ಥೆಗೆ ಹೊಸಬರು ಯಾರಿಗೂ ವಿಷಯದ ಮೇಲೆ ಹಿಡಿತವಿಲ್ಲ ಒಬ್ಬಳು ಇನ್ನೊಬ್ಬಳಿಗೆ ಏನು ತಾನೇ ಹೇಳಿಕೊಟ್ಟಾಳು ? ಅವರವರ ನಂಬಿಕೆ ಅವರಿಗೆ ದೊಡ್ಡದು. ನಮ್ಮಲ್ಲಿ ಯಾವುದೋ ಒಂದು ನಂಬಿಕೆ ಅಷ್ಟೊಂದು ಪ್ರಬಲವಾಗಿ ನೂರಾರು ವರ್ಷ ಬೆಳೆದುಕೊಂಡು ಬಂದಿದೆ ಎಂದರೆ ಅದರಲ್ಲಿ ಏನೂ ಶಕ್ತಿ ಇದ್ದೆ ಇರುತ್ತದೆ. ಇದೆಲ್ಲ ಏನೇ ಇರಲಿ , ಇವುಗಳ ವಿಷಯದಲ್ಲಿ ಮೇಲಿರಿಮೆ , ಕೀಳಿರಿಮೆ ಎರಡೂ ಬೇಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+