• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವತ್ತಿಗೆ ಅಮ್ಮ ಏನೂ ಹೇಳುತ್ತಾಳೆ ಎನ್ನುವುದು ಬಿಟ್ಟರೆ ಆ ಪದಗಳ ಅರ್ಥ ತಿಳಿದಿರಲೇ ಇಲ್ಲ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಸ್ಪೇನ್ ದೇಶದ ಮ್ಯಾಡ್ರಿಡ್ ಅಥವಾ ಬಾರ್ಸಿಲೋನಾ ಇರಬಹುದು , ಫ್ರಾನ್ಸ್ ನ ಪ್ಯಾರಿಸ್ , ಜರ್ಮನಿಯ ಫ್ರಾಂಕ್ಫರ್ಟ್ , ಹೀಗೆ ಯೂರೋಪಿನ ಬಹುತೇಕ ದೊಡ್ಡ ನಗರಗಳಲ್ಲಿ ನಿಮಗೆ ಕಾಣ ಸಿಗುವ ಒಂದು ಸಾಮಾನ್ಯ ದೃಶ್ಯವೇನು ಗೊತ್ತೇ ? ಈ ನಗರಗಳ ರಸ್ತೆಯಲ್ಲಿ ಮಾರಾಟ ಮಾಡುವ ವಲಸಿಗರು. ಈ ಹಿಂದೆ ವಲಸಿಗರ ಬಗ್ಗೆ ಬರೆದಿದ್ದೆ. ಆದರೆ ಇಂದಿನ ನೆನಪು ವಲಸಿಗರ ಬದುಕಿನ ಇನ್ನೊಂದು ಮಜಲನ್ನ ನೋಡುವುದು.

ರಸ್ತೆಯಲ್ಲಿ ಸಮಯಕ್ಕೆ ತಕ್ಕ ಹಾಗೆ ಬದಲಾಗುತ್ತ ವಸ್ತುಗಳ ಮಾರಾಟ ಮಾಡುತ್ತಾ ಹೀಗೆ ಜೀವನ ಸವೆಸುವ ಬಹುತೇಕರು ಇಲೀಗಲ್ , ಅಂದರೆ ಕಾನೂನು ಬಾಹಿರ ವಾಸಿಗಳು. ಹಾಗೆ ನೋಡಲು ಹೋದರೆ ಅವರ ಬದುಕು ಹೇಗಿರಬಹದು ? ಅವರ ಮನಸ್ಸಿನಲ್ಲಿ ಆಗುತ್ತಿರುವ ತಲ್ಲಣಗಳೇನು ? ಎನ್ನುವುದರ ಬಗ್ಗೆ ಬಹಳ ಚಿಂತಿಸಲು ಹೋಗಿರಲಿಲ್ಲ. ಅಂದಿನ ದಿನದಲ್ಲಿ ಕೈಲಾದ ಒಂದಷ್ಟು ಜನರಿಗೆ ಸಹಾಯ ಮಾಡಿದ್ದು ಬಿಟ್ಟರೆ , ತೀರಾ ಅವರ ಬದುಕು ಹೇಗಿರಬಹದು ಎನ್ನುವುದರ ಬಗ್ಗೆ ಯೋಚಿಸುವ ಸಂದರ್ಭ ಬಂದಿರಲಿಲ್ಲ , ಹೌದು ಮೊನ್ನೆಯವರೆಗೆ !

ಅದೃಷ್ಟ , ದುರಾದೃಷ್ಟ , ಡೆಸ್ಟಿನಿ ಪದಗಳು ಪಟಾಕಿಯಷ್ಟೇ ಯೂನಿವರ್ಸಲ್!ಅದೃಷ್ಟ , ದುರಾದೃಷ್ಟ , ಡೆಸ್ಟಿನಿ ಪದಗಳು ಪಟಾಕಿಯಷ್ಟೇ ಯೂನಿವರ್ಸಲ್!

ನಾವು ಸಾಮಾನ್ಯವಾಗಿ ಎಳವೆಯಲ್ಲಿ ಏನಾದರೂ ತಪ್ಪು ಮಾಡಿದರೆ , ಅಂದರೆ ಅಪ್ಪ ಅಮ್ಮನಿಗೆ ನೋವುಂಟು ಮಾಡುವ ರೀತಿಯಲ್ಲಿ ನಡೆದುಕೊಂಡರೆ ಆಗ ಸಾಮಾನ್ಯವಾಗಿ ಕೇಳಿ ಬರುವ ಮಾತು ' ನಿನಗೆ ಮಕ್ಕಳಾಗಲಿ ಆಗ ನೋವು ಏನು ಎಂದು ಗೊತ್ತಾಗುತ್ತದೆ ' ಎನ್ನುವುದು. ಒಮ್ಮೆ ಬೆಳಗ್ಗೆ ಆಡಲು ಹೋದವನು ಸಂಜೆಯಾದರೂ ಮನೆಗೆ ಹೋಗಿರಲಿಲ್ಲ. ಎಲ್ಲಿಗೆ ಹೋಗುತ್ತೇನೆ ಎಂದು ಕೂಡ ಹೇಳದೆ ಸ್ನೇಹಿತರ ಜೊತೆ ಕ್ರಿಕೆಟ್ ಆಡಲು ಹೊರಟು ಹೋಗಿದ್ದೆ.

ಸಾಯಂಕಾಲ ಮನೆ ತಲುಪಿದಾಗ ಅಮ್ಮನ ಮುಖವನ್ನ ನೋಡುವಂತಿರಲಿಲ್ಲ. ಅಷ್ಟೊಂದು ಯಾಕೆ ಟೆನ್ಶನ್ ಮಾಡ್ಕೋತೀಯ ? ಎಲ್ಲಿ ಹೋಗುತ್ತೇನೆ ? ಎನ್ನುವ ನನ್ನ ಮಾತಿಗೆ ಅಮ್ಮ ಹೇಳಿದ್ದು ಅದೇ ಮಾತು ' ನಿನಗೆ ಮಕ್ಕಳಾದಾಗ ಗೊತ್ತಾಗುತ್ತೆ '. ಅವತ್ತಿಗೆ ಅಮ್ಮ ಏನೂ ಹೇಳುತ್ತಾಳೆ ಎನ್ನುವುದು ಬಿಟ್ಟರೆ ಆ ಪದಗಳ ಅರ್ಥ ತಿಳಿದಿರಲೇ ಇಲ್ಲ . ಆ ಅಕ್ಷರಕ್ಕೆ ಜೀವ ತುಂಬಿದ್ದು ನನ್ನ ಮಗಳು ಅನನ್ಯ .

ನಾವಿದ್ದ ಊರಿನಲ್ಲಿ ಭಾರತಕ್ಕಿಂತ ಒಂದಷ್ಟು ಬದಲಾವಣೆಯಿದೆ. ಅಂದರೆ ಸತಿ ಪತಿ ಅಪ್ಪ ಅಮ್ಮನಾಗಿ ಬದಲಾಗುತ್ತಾರೆ ಎನ್ನುವುದು ತಿಳಿದ ನಂತರ ಒಂದು ವಾರ ' ಅಪ್ಪ ಅಮ್ಮನ ಕಾರ್ಯ ನಿರ್ವಹಿಸುವ' ಬಗ್ಗೆ ಆಸ್ಪತ್ರೆಯವರೇ ಒಂದು ಸಣ್ಣ ಸೆಮಿನಾರ್ ನಡೆಸುತ್ತಾರೆ. ಇದು ಕಡ್ಡಾಯ. ಯಾರೂ ತಪ್ಪಿಸುವಂತಿಲ್ಲ. ಸರಕಾರವೂ ಈ ವಿಷಯದಲ್ಲಿ ಸಾಥ್ ನೀಡುತ್ತದೆ. ಮೂರು ತಿಂಗಳ ವೇಳೆಗೆ ಗರ್ಭವನ್ನು ಪರೀಕ್ಷಿಸಿ ಮಗು ಹೆಣ್ಣೋ ಅಥವಾ ಗಂಡೋ ಎನ್ನುವುದನ್ನ ಕೂಡ ಹೇಳುತ್ತಾರೆ.

ಮಗುವಿನ ಹೆಸರನ್ನ ಇಟ್ಟು ಕೊಳ್ಳಲು ಕೂಡ ಸೂಚಿಸುತ್ತಾರೆ. ನಾವು ಮಗುವಿನ ಹೆಸರನ್ನ ಹೇಳಿದರೆ ಸಾಕು , ಮಗುವಿನ ಹೆಸರಲ್ಲಿ ಆ ತಕ್ಷಣವೇ ಒಂದು ಹೆಲ್ತ್ ಬುಕ್ ಸಿದ್ದ ಪಡಿಸುತ್ತಾರೆ. ಪ್ರತಿ ಬಾರಿ ತಪಾಸಣೆಗೆ ಹೋದಾಗ ಮಗುವಿನ ಬೆಳವಣಿಗೆಯನ್ನ ದಾಖಲಿಸುತ್ತ ಹೋಗುತ್ತಾರೆ. ಇದೊಂದು ವಿಶೇಷ ಅನುಭವ. ಇನ್ನು ಇಲ್ಲಿ ಅಂದರೆ ಬಾರ್ಸಿಲೋನಾ ದಲ್ಲಿ ಅಪ್ಪನನ್ನ ಕೂಡ ವೈದ್ಯರ ಜೊತೆಗೆ ಹೆರಿಗೆಯಲ್ಲಿ ಭಾಗವಹಿಸಲು ಬಿಡುತ್ತಾರೆ.

ಅನನ್ಯಳನ್ನ ಮತ್ತು ರಮ್ಯಳನ್ನ ಸ್ವಲ್ಪ ಹೆಚ್ಚು ಎನ್ನುವಷ್ಟು ಸೂಕ್ಷ್ಮವಾಗಿ ನೋಡಿಕೊಂಡಿದ್ದೇನೆ. ಇದಕ್ಕೆ ಕಾರಣ ಅಲ್ಲಿ ನಮ್ಮವರು ಎನ್ನುವರು ಯಾರೂ ಇರಲಿಲ್ಲ. ಮಗು ಜನಿಸಿದ ತಕ್ಷಣ ಒಂದಷ್ಟು ಮಾತ್ರ ಸ್ವಚ್ಛಗೊಳಿಸಿ 'ತೋಮ ಪಾಪಿ ತು ಹೀಹಾ ' ( ಅಪ್ಪ , ನಿನ್ನ ಮಗಳನ್ನ ತೆಗೆದು ಕೋ ) ಎಂದು ವೈದ್ಯರು ಅನನ್ಯಳನ್ನ ನನ್ನ ಕೈಗಿತ್ತ ದಿನವನ್ನ ಮರೆಯುವುದಾದರೂ ಹೇಗೆ ? ವ್ಯಕ್ತಿಯಾಗಿ ಅತ್ಯಂತ ಬಿಡುಬೀಸಾಗಿದ್ದ ನನಗೆ ' ಅನನ್ಯ' ಳ ಬರುವಿಕೆ ನನಗೆ ಗೊತ್ತಿಲ್ಲದೆ ಬಹಳ ಪ್ರಜ್ಞಾವಂತ ಸ್ಥಿತಿಗೆ ದೂಡಿಬಿಟ್ಟಿತು.

 ಆಧುನಿಕ ಬದುಕಿನ ಸೈಡ್ ಎಫೆಕ್ಟ್ 'ಒಂಟಿತನ '! ಆಧುನಿಕ ಬದುಕಿನ ಸೈಡ್ ಎಫೆಕ್ಟ್ 'ಒಂಟಿತನ '!

ಕಾರನ್ನ ಚಲಾಯಿಸುವದರಿಂದ , ಇತರ ಸಹಜೀವಿಗಳೊಂದಿಗೆ ವ್ಯವಹರಿಸುವ ರೀತಿ ಕೂಡ ಬದಲಾಯಿತು. ಮೊದಲಿದ್ದ ಕೋಪ , ಎಲ್ಲವೂ ಕ್ಷಣಾರ್ಧದಲ್ಲಿ ಆಗಿಬಿಡಬೇಕು ಎನ್ನುವ ಆತುರ ಎಲ್ಲಿ ಹೋದವು ಎನ್ನುವಷ್ಟು ಬದಲಾವಣೆ. ಇದಕ್ಕೆಲ್ಲ ಕಾರಣ ನಮ್ಮ ಮನೆಗ ಅನನ್ಯಳ ಆಗಮನವಾಗುತ್ತದೆ ಎನ್ನುವುದು. ಹೆಣ್ಣು ಮಗುವೊಂದು ಬೇಕು ಎನ್ನುವುದು ನನ್ನಪ್ಪ ಅಮ್ಮನ ಆಸೆಯಾಗಿತ್ತು. ಆದರೆ ನಾವು ಮೂವರೂ ಗಂಡು ಮಕ್ಕಳು , ಹೀಗಾಗಿ ನಮ್ಮ ಮನೆಯಲ್ಲಿ ಜನಿಸಿದ ಪ್ರಥಮ ಹೆಣ್ಣು ಮಗು ಅನನ್ಯ .

ಮಗು ಹುಟ್ಟುವ ಮುನ್ನವೇ ನಾನೊಬ್ಬ ಬದಲಾದ ವ್ಯಕ್ತಿಯಾಗಿದ್ದೆ. ಇನ್ನು ಅನನ್ಯ ಹುಟ್ಟಿದ ಮೇಲಿನ ಕಥೆಯೇ ಬೇರೆ. ಯಾವುದೇ ಮಗುವನ್ನ ನೋಡಲಿ ಆ ಮಗುವಿನಲ್ಲಿ ನಾನು ಅನನ್ಯಳನ್ನ ಕಾಣಲು ಶುರು ಮಾಡಿದೆ. ಅಬ್ಬಾ ಅದೆಂತಹ ಶಕ್ತಿಯಿದೆ ಈ ಮಮಕಾರದಲ್ಲಿ ಎನ್ನಿಸಿದ್ದು ಉಂಟು. ಅಲ್ಲಿಯವರೆಗೆ ಎಷ್ಟೋ ಮಕ್ಕಳನ್ನ ನೋಡಿದ್ದೆ . ನನ್ನ ಮನೆಯಲ್ಲಿ ನನ್ನ ಅಣ್ಣನ ಮಗುವನ್ನ ಕೂಡ ಕಂಡವನು. ಉಹೂ ಅದ್ಯಾವುದೂ ನಮಗೆ ಮಗುವಾದಾಗ ಅನುಭವದ ಮುಂದೆ ಸೊನ್ನೆ. ಆ ಮಕ್ಕಳನ್ನ ಪ್ರೀತಿಸಲಿಲ್ಲ ಎಂದಲ್ಲ . ಆದರೆ ಇದು ಅಕ್ಷರದಲ್ಲಿ ಬರೆಯಲಾಗದ ಸಂವೇದನೆ.

ಯಾವುದೇ ಕೆಲಸವಿರಲಿ , ಅದೆಷ್ಟೇ ಮುಖ್ಯವಾಗಿರಲಿ ಮೊದಲು ಮಗಳು ನಂತರ ಎಲ್ಲವೂ ಎನ್ನುವ ಮಟ್ಟಕ್ಕೆ ಬದುಕು ಬದಲಾಗಿ ಹೋಯ್ತು. ಅನನ್ಯಳನ್ನ ಮೊದಲ ಬಾರಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡಲು ಬಿಟ್ಟಾಗ ಅವಳಿಗೆ ಕೇವಲ ಹದಿನೆಂಟು ತಿಂಗಳು. ಅವಳ ಪ್ರೀ ಸ್ಕೂಲ್ ಟೀಚರ್ ಅವಳಿಗೆ ಸ್ವಿಮ್ಮಿಂಗ್ ಕಲಿಸುವ ಜವಾಬ್ದಾರಿ ಕೂಡ ಹೊತ್ತಿದ್ದರು. ಅವರು ಸರಾಗವಾಗಿ ಮಗುವನ್ನ ನೀರಿಗೆ ಹಾಕಿ ಕೈಕಾಲಾಡಿಸಲು ಹೇಳುತ್ತಿದ್ದರು. ಅನನ್ಯ ಖುಷಿಯಿಂದ ಇರುತ್ತಿದ್ದಳು. ನನಗೆ ಮಾತ್ರ ಜೀವ ಬಾಯಿಗೆ ಬಂದಿರುತ್ತಿತ್ತು .

ಒಂದೆರೆಡು ತರಗತಿಯ ನಂತರ ರಮ್ಯ ಒಬ್ಬಳೇ ಹೋಗುತ್ತಿದ್ದಳು. ಶಾಲೆಗೆ ಬಿಡುವುದಕ್ಕೆ ನನ್ನ ಮತ್ತು ರಮ್ಯಳ ನಡುವೆ ಪುಟಾಣಿ ಕದನ ಏರ್ಪಡುತ್ತಿತ್ತು. ಶಾಲೆಗೆ ಬಿಡುವಾಗ ಕಣ್ತುಂಬ ನೀರು ತುಂಬಿಕೊಂಡು 'ಪಪ್ಪಾ ಬಿಟ್ಟು ಹೋಗಬೇಡ ' ಎಂದಾಗ ಕರುಳು ಕಿತ್ತು ಬರುತ್ತಿತ್ತು . ರಮ್ಯ ಮಾತ್ರ ನಿತ್ಯವೂ ಶಾಲೆಯಿಂದ ಕರೆತರುವ ಕೆಲಸವನ್ನ ಹೊತ್ತಿದ್ದಳು. ಬರುವಾಗ ಮಕ್ಕಳು ಬಹಳ ಖುಷಿಯಾಗಿರುತ್ತವೆ.

ಹಣದ ಮೌಲ್ಯ ತಿಳಿಯಬೇಕಾದರೆ ಪರಿಶ್ರಮ ಮೀರಿದ ಸವಲತ್ತು ನೀಡಬಾರದು !ಹಣದ ಮೌಲ್ಯ ತಿಳಿಯಬೇಕಾದರೆ ಪರಿಶ್ರಮ ಮೀರಿದ ಸವಲತ್ತು ನೀಡಬಾರದು !

ರಮ್ಯಳಿಗೆ ಅನನ್ಯಳನ್ನ ಬೆಂಗಳೂರಿನಲ್ಲಿ ಓದಿಸಬೇಕು , ಕನಿಷ್ಠ ಪ್ರಾಥಮಿಕ ಶಿಕ್ಷಣ ಭಾರತದಲ್ಲಿ ಆದರೆ ಮಗುವಿಗೆ ಸರಿ ತಪ್ಪುಗಳ ನಡುವಿನ ಅಂತರವನ್ನ ಕಲಿಸಲು ಸಾಧ್ಯ ಎನ್ನುವ ಮನೋಭಾವ. ಅವರಿಬ್ಬರೂ ಬೆಂಗಳೂರನ್ನು ಸೇರಿದರು. ಕೆಲಸದ ನಿಮಿತ್ತ ನಾನು ತಕ್ಷಣ ಬರಲಾಗಲಿಲ್ಲ. ಆ ಒಂದು ವರ್ಷ ನನ್ನ ಜೀವನದ ಅತ್ಯಂತ ಕಠಿಣ ವರ್ಷ. ನನ್ನ ಕೆರಿಯರ್ ನ ಉತ್ತುಂಗ ಸ್ಥಿತಿಯನ್ನ ಬಿಟ್ಟು ಮರಳಿ ಭಾರತಕ್ಕೆ ಬರಲು ನನ್ನ ಮಗಳು ಕಾರಣ. ನನ್ನ ಮುಂದೆ ಎರಡು ಆಯ್ಕೆಯಿತ್ತು ಒಂದು ಹಣ, ಕೆರಿಯರ್ ಮತ್ತು ಎರಡನೆಯದಾಗಿ ನನ್ನ ಪರಿವಾರ , ಮಗಳು. ನಾನು ಎರಡನೇಯದನ್ನ ಆಯ್ಕೆ ಮಾಡಿಕೊಂಡೆ.

ಸರಳವಾಗಿ ಹೇಳಬೇಕೆಂದರೆ ಜೀವನದಲ್ಲಿ ನಾನು ಬಹಳಷ್ಟು ಸಿಂಪಥಿಯ ಮಾತುಗಳನ್ನ ಬೇರೆಯವರ ಕುರಿತು ಆಡಿದ್ದೇನೆ. ಯಾರದಾದರೂ ಕಷ್ಟ ಕಂಡಾಗ ಮರುಗುವುದು ಅಯ್ಯೋ ಪಾಪ ಎನ್ನುವುದು ಮಾಡಿದ್ದೇನೆ. ಅದು ಸಿಂಪಥಿ. ಆದರೆ ಅವರಿರುವ ಸ್ಥಿತಿಯಲ್ಲಿ ನಮ್ಮನ್ನ ಊಹಿಸಿಕೊಂಡರೆ ಮಾತ್ರ ನಿಜವಾದ ನೋವಿನ ಅರ್ಥವಾಗುತ್ತದೆ. ಬಾಯಿ ಮಾತಿಗೆ ಅಯ್ಯೋ ಪಾಪ ಎನ್ನುವುದಕ್ಕೂ ನಿಜವಾಗಿ ಮರುಕ ಪಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಅಂತಹ ಒಂದು ವ್ಯತ್ಯಾಸವನ್ನು ನನ್ನಲ್ಲಿ ತಂದಿದ್ದು ನನ್ನ ಮಗಳು. ಜಗತ್ತಿನ ಜನರಿಗೆಲ್ಲಾ ಸಹಾಯ ಮಾಡುತ್ತೇನೆ ಎನ್ನುವ ಸಿನಿಕತನವಿಲ್ಲ. ಆದರೆ ನನ್ನ ಮಗಳ ವಯಸ್ಸಿನ ಮಕ್ಕಳು ಕಷ್ಟದಲ್ಲಿರುವುದು ಕಂಡಾಗ ಮನಸ್ಸು ಕರಗಿಹೋಗುತ್ತದೆ. ಅದು ಎಂಪಥಿ. ಹೀಗಾಗಿ ಮಗಳ ಜೊತೆಗೆ ಹುಟ್ಟಿದ್ದು 'ಅನನ್ಯ ಮೂಕನಹಳ್ಳಿ ಫೌಂಡೇಶನ್' .

ಮನುಷ್ಯ ಅದು ಯಾರೇ ಆಗಿರಲಿ ಹೆಣ್ಣು ಅಥವಾ ಗಂಡು , ಪರಿಪೂರ್ಣತೆಯ ಅನುಭವ ಪಡೆಯಲು ಅವರ ಬಾಳಿನಲ್ಲಿ ಮಕ್ಕಳು ಬರಬೇಕು. ಎಂತಹ ದುಷ್ಟರನ್ನೂ ಬದಲಾಯಿಸುವ ದೈವತ್ವ ಮಕ್ಕಳಿಗಿದೆ. ಅಂದ ಮೇಲೆ ಸಾಮಾನ್ಯ ಜನರ ಮಾತೇನು ? ಪೋಷಕರ ಜೀವನ ಪೂರ್ತಿ ಮಕ್ಕಳ ಸುತ್ತಮುತ್ತ ತಿರುಗುತ್ತಿರುತ್ತದೆ. ಆದರೆ ಮಕ್ಕಳು ಬೆಳೆಯುತ್ತಾ ಹೋದಂತೆ ಕೇವಲ ಭಾವನೆ , ಪ್ರೀತಿ ಮಾತ್ರ ಕೆಲಸಕ್ಕೆ ಬರುವುದಿಲ್ಲ. ಪ್ರೀತಿಯ ಜೊತೆಗೆ ಕಲಿಕೆಯ ಬಗ್ಗೆ ಕೂಡ ಗಮನವನ್ನ ಹರಿಸಬೇಕಾಗುತ್ತದೆ.

ಈ ಜಗತ್ತಿನಲ್ಲಿ ಮುಕ್ಕಾಲು ಮೂರುಪಾಲು ಜನ ಮಕ್ಕಳನ್ನ ಹೆತ್ತ ಮೇಲೆ ಗೆದ್ದೆವು ಎನ್ನುವ ಭಾವನೆಯನ್ನ ಇಟ್ಟುಕೊಂಡಿದ್ದಾರೆ. ಆದರೆ ನಿಮಗೆ ತಿಳಿದಿರಲಿ ಮಕ್ಕಳನ್ನ ಸಾಕುವುದು , ಬೆಳೆಸುವುದು ಹೆಚ್ಚೇನಿಲ್ಲ ಕೇವಲ 18/20 ವರ್ಷದ ತಪಸ್ಸು. ಮಕ್ಕಳು ನಮ್ಮನ್ನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ. ನಾವು ಹೇಳಿದ್ದು ಅವು ಮಾಡುವುದಿಲ್ಲ . ನಾವು ಮಾಡಿದ್ದನ್ನ ಖಂಡಿತ ಅವು ನಕಲು ಮಾಡುತ್ತವೆ. ಈ ನಿಟ್ಟಿನಲ್ಲಿ ಮೊದಲೇ ಹೇಳಿದಂತೆ ಒಂದು ಮಗು ಎಂದರೆ ಅದು 20 ವರ್ಷದ ಪ್ರಾಜೆಕ್ಟ್.

ಅವೇನು ಈ ಭೂಮಿಗೆ ಬರುತ್ತೇವೆ ಎಂದು ಬಯಸಿರುವುದಿಲ್ಲ , ನಾವು ನಮ್ಮ ಇಚ್ಚೆಯಿಂದ ಅವುಗಳನ್ನ ಈ ಭೂಮಿಗೆ ತಂದಿರುತ್ತೇವೆ. ಹೀಗಾಗಿ ಅವುಗಳನ್ನ ಉನ್ನತಿಯ ಕಡೆಗೆ ನಡೆಸುವ ಜವಾಬ್ದಾರಿ ನಮ್ಮದು. ನಮ್ಮ ಅಪ್ಪ ಅಮ್ಮ ಎಷ್ಟೆಲ್ಲಾ ಕಷ್ಟ ಪಟ್ಟಿರಬಹದು , ನಮ್ಮ ಭವಿಷ್ಯ , ಆರೋಗ್ಯ ಇತ್ಯಾದಿ ಕುರಿತು ಅವರೆಷ್ಟು ಚಿಂತಿಸಿರಬಹದು ಎನ್ನುವ ಯೋಚನೆಗಳನ್ನ ಕೂಡ ಬಂದದ್ದು ಮಗಳು ಬಂದ ನಂತರವೇ!

ಹೀಗೆ ಅನನ್ಯ ನಮ್ಮ ಬಾಳನ್ನ ಪೂರ್ಣ ಅವರಿಸಿದ್ದಾಳೆ. ಮೊನ್ನೆ ನಿಮ್ಮ ಮಗಳು ಭಾರತದಲ್ಲಿ ಇಲ್ಲೀಗಲ್ , ಅವಳ ಸ್ಪ್ಯಾನಿಷ್ ಪಾಸ್ಪೋರ್ಟ್ ವಾಯಿದೆ ಮುಗಿದ ನಂತರ ನೀವು ಅದನ್ನ ನವೀಕರಿಸಲು 8 ತಿಂಗಳು ಹೆಚ್ಚುವರಿ ತೆಗೆದುಕೊಂಡಿದ್ದೀರಿ ಹೀಗಾಗಿ ಅವಳು ಈ ಎಂಟು ತಿಂಗಳ ಕಾಲ ಭಾರತದಲ್ಲಿ ಕಾನೂನು ಬಾಹಿರವಾಗಿ ಜೀವಿಸಿದ್ದಾಳೆ . ಇದನ್ನ ನೀವು ತಿದ್ದಿ ಕೊಳ್ಳಲು ಅವಕಾಶವಿದೆ.

ನೋಟರಿ ಬಳಿ ಹೋಗಿ ಒಂದು ಅಫಿಡವಿಟ್ ಮಾಡಿಸಿ , ಅದರಲ್ಲಿ ಈ ರೀತಿಯ ಹೆಚ್ಚುವರಿ ಸಮಯಕ್ಕೆ ಕಾರಣವೇನು ಎನ್ನುವುದನ್ನ ನಮೂದಿಸಿ , ಹೊಸ ಪಾಸ್ಪೋರ್ಟ್ ಮತ್ತು ಹಳೆ ಪಾಸ್ಪೋರ್ಟ್ ಕಾಪಿಗಳನ್ನು ಕಳುಹಿಸಿ ನಂತರ ಪರಿಶೀಲನೆ ಮಾಡಿ ಜುಲ್ಮಾನೆಯ ಮೊತ್ತವನ್ನ ಹೇಳುತ್ತೇವೆ ನೀವು ಕಟ್ಟಿದರೆ ಎರಡು ದಿನದಲ್ಲಿ ಹೊಸ ಸರ್ಟಿಫಿಕೇಟ್ ನೀಡುತ್ತೇವೆಎನ್ನುವ ನೋಟೀಸು ಮತ್ತು ಮಾಹಿತಿ ಹೊತ್ತ ಮಿಚಂಚೆ ಮೇಲ್ ಗೆ ಬಂದು ಕುಳಿತ್ತಿತ್ತು.

ಬದುಕು ಎಷ್ಟೊಂದು ಸ್ವಾರ್ಥದಿಂದ ತುಂಬಿದೆ ಅಲ್ಲವೇ ? ಕಣ್ಣೆದೆರು ಅಷ್ಟೊಂದು ಜನ ಕಾನೂನು ಬಾಹಿರ ವಲಸಿಗರನ್ನ ಕಂಡು ಮರುಗಿರಲಿಲ್ಲ , ಮಗಳು ಕೇವಲ ಎಂಟು ತಿಂಗಳು ಭಾರತದಲ್ಲಿ ಮಾಹಿತಿ ನೀಡದೆ ಹೆಚ್ಚುವರಿ ಜೀವಿಸಿದ್ದಾಳೆ ಎನ್ನುವುದು ಮನಸ್ಸಿಗೆ ಕಿರಿಕಿರಿ ಮಾಡಿತು. ಇದಕ್ಕೆಲ್ಲವೂ ಕಾರಣ ಕೊರೊನಾ. ಟ್ರಾವೆಲ್ ಮಾಡಲಾಗದ ಪರಿಸ್ಥಿತಿ ಇದ್ದುದರಿಂದ ನಾವು ಪಾಸ್ಪೋರ್ಟ್ ರಿನ್ಯೂಯಲ್ ಮಾಡುವುದು ತಡವಾಯಿತು. ಸ್ಪೇನ್ ಗೆ ಹೊರಡಲು ತಯಾರಾಗಿದ್ದ ನಮಗೆ ಲಾಕ್ ಡೌನ್ ನಿಂದ ಟಿಕೆಟ್ , ಹೋಟೆಲ್ ಬುಕಿಂಗ್ ಹೀಗೆ ಎಲ್ಲದಕ್ಕೂ ಒಂದಷ್ಟು ದಂಡವನ್ನ ಕಟ್ಟುವಂತಾಯಿತು. ಜೊತೆಗೆ ಎಂಟು ತಿಂಗಳ ನಂತರ ಹೊಸ ಸಮಸ್ಯೆ ಬೇರೆ.

ನೋಟರಿಯವನು ನನ್ನ ಮುಖವನ್ನೇ ನೋಡಲಿಲ್ಲ , ಇನ್ನು ನಾನು ತೆಗೆದುಕೊಂಡು ಹೋಗಿದ್ದ ಪಾಸ್ಪೋರ್ಟ್ ಪರಿಶೀಲನೆ ಎಲ್ಲಿಂದ ಮಾಡುತ್ತಾರೆ ? ಕೇವಲ 50 ರೂಪಾಯಿ ಪಡೆದು ಸೈನ್ ಮತ್ತು ಸೀಲ್ ಹಾಕಿ ಕೈಯಾಡಿಸಿ ಬೀಳ್ಕೊಟ್ಟಿದ್ದರು . ನಮ್ಮ ದೇಶದ ನೋಟರಿಯ ಅವಸ್ಥೆ ತಿಳಿದಿದ್ದೂ ಅದೇಕೆ ನಮ್ಮ ಫಾರಿನ್ ನ್ಯಾಷನಲ್ ರಿಜಿಸ್ಟ್ರೇಷನ್ ಆಫೀಸ್ ನವರು ಇಂತಹ ಪತ್ರಗಳನ್ನ ಕೇಳುತ್ತಾರೆ ಭಗವಂತ ಬಲ್ಲ , ಜೊತೆಗೆ ಮಗಳ ಎಲ್ಲಾ ಖರ್ಚನ್ನ ನೋಡಿಕೊಳ್ಳುತ್ತೇವೆ ಎನ್ನುವ ಮುಚ್ಚಳಿಕೆ ಬೇರೆ ಬರೆದುಕೊಡಬೇಕಂತೆ !!

   ಕಡೇ ಓವರ್ನಲ್ಲಿ Deepak chahar ಸಿಡಿಸಿದ್ದು ಎಷ್ಟು ಗೊತ್ತಾ | Oneindia Kannada

   ಎಲ್ಲವನ್ನೂ ಮಾಡಿಯಾಗಿದೆ , ಸರ್ಟಿಫಿಕೇಟ್ ಬರುವುದು ಬಾಕಿಯಿದೆ. ಬಾರ್ಸಿಲೋನಾ ದಲ್ಲಿ ಅನ್ನಿ ಹುಟ್ಟಿದಾಗ ಮುಂದೊಂದು ದಿನ ಇಂತಹ ಅನುಭವ ಕೂಡ ಆಗಬಹದು ಎಂದು ಎಣಿಸಿರಲಿಲ್ಲ . ಬದುಕೆಂದರೆ ಅದು ಅನುಭವಗಳ ಮೊತ್ತ .

   English summary
   Barcelona Memories Column By Rangaswamy Mookanahalli Part 58,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X