• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಣ್ಣಿಗೆ ಕಾಣುವ ಆನೆಯೇ ಲೆಕ್ಕವಿಲ್ಲ ,ಇನ್ನು ಪಾದದಡಿಯ ಕಾಣದ ಇರುವೆ ಯಾವ ಲೆಕ್ಕ?

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ನನ್ನಜ್ಜಿ ಬದುಕಿರುವವರೆಗೆ ಇರುವೆ ಗೂಡಿನ ಸುತ್ತ ರವೆ -ಸಕ್ಕರೆ ಮಿಶ್ರಣವನ್ನ ಹಾಕುವುದು ತಪ್ಪಿಸಲಿಲ್ಲ . ಬಾಲ್ಯದಲ್ಲಿ ಬೆಳಿಗ್ಗೆ ಎದ್ದು ಅಜ್ಜಿ ಜೊತೆ ಹೊರಟು ಆಕೆಗೆ ಇರುವೆ ಗೂಡು ಹುಡುಕಿ ಕೊಡುವುದು ಮನಸ್ಸಿಗೆ ಬಹಳ ಇಷ್ಟವಾದ ಕೆಲಸವಾಗಿತ್ತು . ನನ್ನಜ್ಜಿ ಒಬ್ಬರೆ ಹಾಗೆ ಮಾಡುತ್ತಿದ್ದದು ಅಂತಲ್ಲ ಹಲವಾರು ಅಜ್ಜಿಯರು ಹೀಗೆ ಮಾಡುತ್ತಿದ್ದರು .ಬೇಸಿಗೆ ಬಂತೆಂದರೆ ಸಣ್ಣ ಪಾತ್ರೆಯಲ್ಲಿ ನೀರಿಡುವುದಿರಬಹದು , ಹಸುವಿಗೆ ಬಾಳೆಹಣ್ಣು ನೀಡುವುದಿರಬಹದು .ಅವರ ಬದುಕು ಪರಿಸರಕ್ಕೆ ಬಹಳ ಹತ್ತಿರವಾಗಿತ್ತು .

ನಾನು ಅಜ್ಜಿಯನ್ನ ಬಹಳಷ್ಟು ಪ್ರಶ್ನೆ ಕೇಳುತ್ತಿದ್ದೆ . ನೀನು ಊಟ ಹಾಕದಿದ್ದರೆ ಈ ಇರುವೆಗಳು ಸತ್ತು ಹೋಗುತ್ತವಾ ? ಎನ್ನುವುದು ಸದಾ ನೆನಪಲ್ಲಿರುವ ಪ್ರಶ್ನೆ . ಅಜ್ಜಿ ನಕ್ಕು ಇಲ್ಲ ಕಣೋ ಸೃಷ್ಟಿಯಲ್ಲಿ ನಾವೆಲ್ಲಾ ನಿಮಿತ್ತ ಮಾತ್ರ! ಇರುವೆಗೆ ನಾನು ರವೆ ಸಕ್ಕರೆ ಹಾಕದಿದ್ದರೂ ಅದಕ್ಕೆ ಊಟ ಸಿಗುತ್ತೆ. ಈ ಪ್ರಪಂಚ ಸೃಷ್ಟಿಯಾಗಿರುವುದೇ ಅವಲಂಬನೆಯಲ್ಲೂ ಸ್ವಾವಲಂಬಿಯಾಗಿ ಬದುಕಬೇಕು ಆ ಆಧಾರದ ಮೇಲೆ ,ಹೀಗಿದ್ದೂ ನಾನು , ನನ್ನಿಂದ ಅನ್ನುವುದು ಮಾತ್ರ ನಾವು ಬಿಡುವುದಿಲ್ಲ . ಇದಕ್ಕೆಲ್ಲ 'ಕಲಿ' ಕಾರಣ .

ನಾಯಿ ಸಾಕುವುದು ಶೋಕಿಯಲ್ಲ ! ಅದರ ಕಕ್ಕವನ್ನ ಎತ್ತುವುದು ಇಲ್ಲಿ ಶಿಷ್ಟಾಚಾರ !!ನಾಯಿ ಸಾಕುವುದು ಶೋಕಿಯಲ್ಲ ! ಅದರ ಕಕ್ಕವನ್ನ ಎತ್ತುವುದು ಇಲ್ಲಿ ಶಿಷ್ಟಾಚಾರ !!

ಸತ್ಯಯುಗ ಅಥವಾ ಕೃತ ಯುಗದಲ್ಲಿ ಸತ್ಯ, ಅಹಿಂಸೆ, ಮಾನವತೆಯೇ ಧರ್ಮವಾಗಿ ಸುಖ ಶಾಂತಿ ನೆಲೆಸಿದ್ದ ಕಾಲ. ಜೀವಿಗಳ ವಿಕಾಸವಾದದ ಕಾಲ. ವೇದ ಉದಯಿಸಿತು. ತ್ರೇತಾಯುಗದಲ್ಲಿ ರಾಜ್ಯ,ಸಾಮ್ರಾಜ್ಯ, ರಾಜ,ಸಾಮ್ರಾಟರು ಉದಯಿಸಿದ ಕಾಲ. ಕೃಷಿ, ಅಸ್ತ್ರ-ಶಸ್ತ್ರ ತಯಾರಿಕೆ, ಗಣಿಗಾರಿಕೆ ಮುಂತಾದ ಶ್ರಮವಿರುವ ಕಾರ್ಯಗಳು ನೆಡೆದವು. ದ್ವಾಪರಯುಗದಲ್ಲಿ ಸಾಮ್ರಾಜ್ಯಶಾಹೀ ಮನಸ್ಥಿತಿ ಉನ್ನತವಾಗಿ ರಾಜ್ಯ-ಸಾಮ್ರಾಜ್ಯಗಳ ನಡುವೆ ಕದನ ನಡೆದ ಕಾಲ. ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತುಂಗದಲ್ಲಿತ್ತು . ಇಂದು ನಾವು ಇನ್ನೂ ಅನ್ವೇಷಿಸಲು ಆಗದ ಎಷ್ಟೋ ತಂತ್ರಜ್ಞಾನ ಈ ಕಾಲದಲ್ಲಿತ್ತು .

ಕಲಿಯುಗ ನಾವಿರುವ ಕಾಲ. ಸ್ವಾರ್ಥ, ಲಾಲಸೆ, ಅತ್ಯಾಚಾರ ಮಿತಿ ಮೀರಿ ಅಧರ್ಮ ತಾಂಡವವಾಡುತ್ತಿದೆ ಧರ್ಮ ತೆವಳುತ್ತಿದೆ . ಇದರಲ್ಲಿ ಕೂಡ ಹಲವು ಪಾದಗಳಿವೆ . ಕಲಿ ಸದ್ಯಕ್ಕೆ ಇನ್ನೂ ಮೂರನೇ ಪಾದದಲ್ಲಿದ್ದಾನೆ . ನಾಲ್ಕನೇ ಪಾದದಲ್ಲಿ ಮನುಷ್ಯಮನುಷ್ಯನ ಕೊಂದು ತಿನ್ನುವ ಕಾಲ ಬರುತ್ತದೆ. ಹೀಗೆ ಅಜ್ಜಿ ಹೇಳುತ್ತಾ ಗರುಡಪುರಾಣದ ಕಥೆಗಳನ್ನ ರಸವತ್ತಾಗಿ ವಿವರಿಸುತ್ತಿದ್ದರು . ಆಗ ನನಗೆ ಅದು ಕತೆಯಷ್ಟೇ ಆಗಿತ್ತು . ಇಂದು ಅಜ್ಜಿಯ ಮಾತುಗಳನ್ನ ಮೆಲುಕು ಹಾಕಿದರೆ ಅಜ್ಜಿ ಹೇಳುತ್ತಿದ್ದ ಕಲಿಯ ನಾಲ್ಕನೇ ಪಾದದ ಕತೆಗಳು ನೆನೆಪಾಗುತ್ತದೆ.

ಇಂದಿನ ಸಮಾಜದಲ್ಲಿ ಆಗುತ್ತಿರುವ ಘಟನೆಗಳ ನೋಡುವಾಗ ಕಲ್ಕಿ ನಾಲ್ಕನೇ ಪಾದವನ್ನ ಊರಿಬಿಟ್ಟನೋ ಏನೋ ಎನ್ನುವ ಆತಂಕ ಕಾಡುತ್ತದೆ . ಇವತ್ತು ಕಣ್ಣಿಗೆ ಕಾಣುವ ಆನೆಯೇ ನಮಗೆ ಲೆಕ್ಕವಿಲ್ಲ ಇನ್ನು ಕಾಣದ ಪಾದದಡಿಯ ಇರುವೆ ಯಾವ ಲೆಕ್ಕ ? ರವೆ -ಸಕ್ಕರೆ ಮಿಶ್ರಣ ಹಾಕುವರ ಸಂತತಿ ನಶಿಸಿ ಹೋಗಿದೆ . ಇನ್ನೂ ಅದನ್ನ ನೆನಪಿಸಿಕೊಳ್ಳುವ ಮಂದಿ ಉಳಿದುಕೊಂಡಿದ್ದೇವೆ . ಮುಂದಿನ ಎರಡು ಅಥವಾ ಮೂರು ದಶಕದಲ್ಲಿ ಅದೂ ಮಾಯ.

ದೇಶ ಭಾಷೆ ಬದಲಾಗಬಹುದು ಮನುಷ್ಯನ ಮೂಲ ಗುಣವೊಂದೆ ! ಸ್ಪೇನ್ ನಲ್ಲಿ ಕೂಡ ಅಜ್ಜಿಯರು ಪರಿವಾಳಕ್ಕೆ ಗೋಧಿ ಅಥವಾ ಇನ್ನಿತರ ಕಾಳು ಅಥವಾ ಒಣಗಿದ ಬ್ರೆಡ್ ತುಂಡು ಹಾಕುವುದು ಸಂಪ್ರದಾಯ. ನಮ್ಮಲ್ಲಿ ಇರುವೆ ಗೂಡಿಗೆ ಆಹಾರ ಹಾಕುವುದು ಅಜ್ಜಿಯೊಂದಿಗೆ ಮಾಯವಾದ ಹಾಗೆ ಸ್ಪೇನ್ ನಲ್ಲೂ ನಿಧಾನವಾಗಿ ಪರಿವಾಳಕ್ಕೆ ಆಹಾರ ನೀಡುವುದು ನಶಿಸುತ್ತಿದೆ. ಇಲ್ಲಿಯ ಯುವ ಜನತೆ ಮಾದಕ ಪದಾರ್ಥಗಳಿಗೆ ಹೆಚ್ಚು ಮನಸೋಲುತ್ತಿದ್ದಾರೆ.

ತಮ್ಮ ಅಜ್ಜನ ಕಾಲದ ಮೌಲ್ಯಗಳು ಇಲ್ಲಿಯ ಯುವ ಜನತೆಗೂ ರುಚಿಸುತ್ತಿಲ್ಲ ಎನ್ನುವುದು ಸತ್ಯ. ಈ ವಿಷಯದಲ್ಲಿ ಮಾತ್ರ ಜಗತ್ತು ಪೂರ್ಣ ಒಂದು ಎನ್ನಬಹದು ನೋಡಿ. ಊಟ ತಿಂಡಿಯ ವಿಚಾರದಲ್ಲೂ ಜಗತ್ತು ಒಂದು ಕಡೆಗೆ ವಾಲುತ್ತಿದೆ ಎನ್ನಿಸುತ್ತದೆ. ಸ್ಪೇನ್ ನಲ್ಲಿ ಕಾಳು ಮತ್ತು ಬೆಳೆಗಳ ಜೊತೆಯಲ್ಲಿ ಮಾಂಸವನ್ನ ಬೇಯಿಸಿ ಅದನ್ನ ಬ್ರೆಡ್ಡಿನ ತುಂಡಿನ ಜೊತೆಗೆ ತಿನ್ನುವುದು ಸಂಪ್ರದಾಯ.

 ಕಲ್ಸೊಟ್ಸ್ ! ಸುಟ್ಟ ಈರುಳ್ಳಿ ತಿನ್ನುವುದೂ ಇಲ್ಲಿ ಸಡಗರ !! ಕಲ್ಸೊಟ್ಸ್ ! ಸುಟ್ಟ ಈರುಳ್ಳಿ ತಿನ್ನುವುದೂ ಇಲ್ಲಿ ಸಡಗರ !!

ಕೆಎಫ್ಸಿ ಮತ್ತು ಮ್ಯಾಕ್ ಡೊನಾಲ್ಡ್ ಜಗತ್ತು ತಿನ್ನುವ ಪರಿಯನ್ನ ಬದಲಾಯಿಸಿ ಬಿಟ್ಟಿದೆ. ಕೆಲ ಮಧ್ಯಮ ವರ್ಗದ ಜನ ಇಲ್ಲಿ ತಿನ್ನಲು ಬಯಸುತ್ತಾರೆ. ಆದರೆ ಒಂದು ವರ್ಗದ ಜನ ಇಂದಿಗೂ ಮ್ಯಾಕ್ ಡೊನಾಲ್ಡ್ ನಲ್ಲಿ ತಿನ್ನುವುದನ್ನ ಕೆಳಮಟ್ಟದ್ದು ಎನ್ನುವಂತೆ ನೋಡುತ್ತಾರೆ. ಭಾರತದಲ್ಲಿ ಮ್ಯಾಕ್ ನಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು , ಅಲ್ಲಿ ಹೋಗಿ ತಿನ್ನುವುದು ಪ್ರತಿಷ್ಠೆ ಎನ್ನುವಂತಾಗಿದೆ , ಆದರೆ ಸ್ಪೇನ್ ನಲ್ಲಿ ಇದು ಕೇವಲ ಬಡವರ ತಾಣವಾಗಿದೆ.

ಮೂಲದಲ್ಲಿ ನಾವೆಲ್ಲಾ ಒಂದೇ ಆಗಿದ್ದರೂ ನಿತ್ಯವೂ ನಾವು ನಮ್ಮ ನಡುವೆ ಇರುವ ಅವಗುಣಗಳ ಪಟ್ಟಿ ಮಾಡುತ್ತಾ ಛಿದ್ರವಾಗಿ ಹೋಗುತ್ತಿದ್ದೇವೆ. ನಮ್ಮಲ್ಲಿ ಉಳ್ಳಾಗಡ್ಡಿ , ಮೆಣಸಿನಕಾಯಿ , ಚಮ್ಮಾರ ..,ಹೀಗೆ ಹಲವು ಹತ್ತು ಸರ್ ನೇಮು ಗಳಿವೆ ಅಲ್ವಾ .., ಇಲ್ಲಿ ನಮಗಿಂತ ಭಿನ್ನವೇನಿಲ್ಲ !! zapatero (ಸಪಾತೆರೋ ) ಅಂದರೆ ಚಪ್ಪಲಿ ಹೊಲೆಯುವನು , ಕಾರ್ಬೋನೆರೋ (carbanero) ಕಲ್ಲಿದ್ದನಲ್ಲಿ ಕೆಲಸ ಮಾಡುವವ , ಹೀಗೆ ಪಟ್ಟಿ ಬೆಳೆಯುತ್ತದೆ .

ಗಂಗಕ್ಕ , ಗಂಗಣ್ಣ . ರಾಮಕ್ಕ , ರಾಮಣ್ಣ .., ಇವುಗಳ ಪಟ್ಟಿ ದೊಡ್ಡದೇ .., ಇಲ್ಲೂ ಅಷ್ಟೇ ., antonio -ಗಂಡು , antonia -ಹೆಣ್ಣು . fernando -ಗಂಡು ,fernanda -ಹೆಣ್ಣು . ಭಾಷೆ ಕಲಿಯುತ್ತಾ ಹೋದಂತೆ , ಅರೇರೆ ಅನ್ನಿಸದೆ ಇರುವುದಿಲ್ಲ .., ಪ್ರಕೃತಿ ಒಂದಲ್ಲ ನೂರಾರು ಉದಾಹರಣೆ ಕೊಟ್ಟು ನಿತ್ಯ ಸಾರುತ್ತದೆ ..., ನಾವೆಲ್ಲಾ ಒಂದೇ ..ಎಂದು . ಕೇಳುವ ತಾಳ್ಮೆ , ಮನಸ್ಥಿತಿ ನಮಗಿರಬೇಕು ಅಷ್ಟೇ.

ನಮ್ಮ ತುಳು , ನಮ್ಮ ಕೊಂಕಣಿ ,ನಮ್ಮ ತಮಿಳು ,ನಮ್ಮ ಕನ್ನಡ , ನಮ್ಮ ಮಲಯಾಳಂ ,ನಮ್ಮ ತೆಲುಗು ಭಾಷೆಗಳ ನಡುವೆ ಎಷ್ಟೊಂದು ಸಾಮ್ಯತೆ ಇದೆ ಅಲ್ವಾ ., ಹಾಗೆ .., ಸ್ಪ್ಯಾನಿಷ್ , ಕಾತಲನ್ ,ಫ್ರೆಂಚ್ ,ಇಟಾಲಿಯನ್ ,ಗಯೇಗೋ ,ವಾಸ್ಕೋ , ಪೋರ್ಚಗೀಸ್ ಗಳ ನಡುವೆ ಬಹಳ ಸಾಮ್ಯತೆ ಇದೆ .ನಾವೆಲ್ಲ ಒಂದಲ್ಲ ಒಂದು ರೀತಿ ನೆಂಟರೆ ! ಕೇವಲ ಐವತ್ತು , ಅರವತ್ತು ವರ್ಷಗಳ ಹಿಂದಿನ ತಲೆಮಾರಿನವರ ಜೀವನ ಪದ್ದತಿಯನ್ನ ನೋಡಿ ಸಾಕು , ನಾನು ಹೇಳಿದಕ್ಕೆ ಪುರಾವೆ ಸಿಗುತ್ತದೆ.

ಪುಣ್ಯಕ್ಕೆ ಇನ್ನು ಸ್ಪೇನ್ ನಲ್ಲಿ ಹಳೆಯ ಕಥೆಗಳನ್ನ ಹೇಳುವ ಹಲವಾರು ಹಿರಿಯ ಜೀವಗಳು ಉಳಿದುಕೊಂಡಿವೆ. ಇನ್ನೊಂದು ವಿಷಯವನ್ನ ಕೂಡ ಇಲ್ಲಿ ಪ್ರಸ್ತಾಪಿಸುವೆ, ಅದು ಇಲ್ಲಿನ ಓಘಕ್ಕೆ ಹೊಂದಿಕೊಳ್ಳುವುದು ಎಂದು ಭಾವಿಸುವೆ. ಹಳೆಯ ಸ್ಪ್ಯಾನಿಷ್ ಚಿತ್ರಗಳನ್ನ ನೋಡಿದರೆ , ಅಲ್ಲಿ ಹಾಡುಗಳಿವೆ . ಥೇಟ್ ನಮ್ಮ ರಾಜಕುಮಾರ್ ಚಿತ್ರದ ಹಾಡುಗಳಂತೆ ಅನ್ನಿಸುತ್ತದೆ. ಯೂರೋಪಿಯನ್ ಚಿತ್ರಗಳಲ್ಲಿ ಹಾಡುಗಳನ್ನ ಇಂದು ನೆನಪಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ ಎನ್ನವಂತಾಗಿದೆ.

ಆದರೆ ಕೇವಲ 40/50 ವರ್ಷದ ಹಿಂದಿನ ಚಿತ್ರಗಳಲ್ಲಿ ಹಾಡುಗಳಿದ್ದವು. ಅವುಗಳಲ್ಲಿ ನಮ್ಮ ಹಾಡುಗಳಂತೆ ಜೀವನ ಪಾಠ ಹೇಳುವ ಅರ್ಥಗಳು ಕೂಡ ತುಂಬಿರುತ್ತಿದ್ದವು. ಹಿಂದೆಲ್ಲಾ ಶಿಕ್ಷಕ ವೃತ್ತಿಗೆ ಬಹಳ ಮರ್ಯಾದೆಯನ್ನ ನೀಡುತ್ತಿದ್ದರು. ವೈದ್ಯರಿಗೆ , ಸೈನಿಕರಿಗೆ , ಸಾರ್ವಜನಿಕ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೆ ಬಹಳ ಗೌರವವನ್ನ ಸಮಾಜ ನೀಡುತ್ತಿತ್ತು. ಅವರಲ್ಲೂ ಆ ಬದ್ಧತೆ ಇರುತ್ತಿತ್ತು, ಇಂದು ಎಲ್ಲವೂ ತದ್ವಿರುದ್ಧವಾಗಿದೆ.

 ಗಲಿಬಿಲಿ ಮನಸ್ಸಿನಿಂದಲೇ ಸ್ಥಿರತೆ, ಸಾವಿನ ನೆರಳಲ್ಲೇ ಬದುಕಿನ ಚಿಗುರು ಕೊನರುತ್ತದೆ!! ಗಲಿಬಿಲಿ ಮನಸ್ಸಿನಿಂದಲೇ ಸ್ಥಿರತೆ, ಸಾವಿನ ನೆರಳಲ್ಲೇ ಬದುಕಿನ ಚಿಗುರು ಕೊನರುತ್ತದೆ!!

ಸೈನಿಕರಿಗೆ ಇಲ್ಲಿ ಬಹಳಷ್ಟು ಗೌರವವನ್ನ ನೀಡುತ್ತಾರೆ. ಉಳಿದಂತೆ ನಮ್ಮಲ್ಲಿ ಕ್ರಿಕೆಟಿಗರಿಗೆ ಸಿಗುವ ಮರ್ಯಾದೆಯನ್ನ ಇಲ್ಲಿ ಫುಟ್ಬಾಲ್ ಆಟಗಾರರು ಪಡೆದುಕೊಳ್ಳುತ್ತಿದ್ದಾರೆ. ಒಂದು ಸೀಸನ್ ನಲ್ಲಿ ಇವರು ಗಳಿಸುವ ಹಣವನ್ನ ಸಾಮಾನ್ಯ ಮನುಷ್ಯ ಜೀವಿತಾವಧಿಯಲ್ಲಿ ಕೂಡ ಗಳಿಸಲಾಗದು. ಅಷ್ಟರಮಟ್ಟಿಗೆ ಇಲ್ಲಿ ಕೂಡ ಮನುಷ್ಯ ಮತ್ತು ಮನುಷ್ಯರ ನಡುವಿನ ಅಂತರ ಹೆಚ್ಚಿದೆ. ಇಲ್ಲಿನ ಸಮಾಜ ಕೂಡ ಇಂದಿನ ಹಣದ ಹಿಂದಿನ ಓಟದಲ್ಲಿ ಎಷ್ಟರ ಮಟ್ಟಿಗೆ ಬದಲಾಗಿದೆ ಎಂದರೆ , ಅದಕ್ಕೆ ಒಂದು ಸಣ್ಣ ಉದಾಹರಣೆಯನ್ನ ಹೇಳುತ್ತೇನೆ.

ಒಬ್ಬ ಕರಿಯ , ಅಥವಾ ಕಂದು ಬಣ್ಣದ ವಲಸಿಗ ಹಣವಿಲ್ಲದಿದ್ದರೆ ಅವನು ಕರಿಯ ಅಥವಾ ಬ್ರೌನ್ ಮನುಷ್ಯ. ಅದೇ ಅವನ ಬಳಿ ಹಣವಿದ್ದು ಆತ ಹತ್ತಾರು ಜನರಿಗೆ ಕೆಲಸ ನೀಡಲು ಒಂದು ಸಂಸ್ಥೆಯನ್ನ ತೆಗೆಯಲು ತೈಲಿಯ ಸಮೇತ ಇಲ್ಲಿಗೆ ಬಂದರೆ ಅವನು ' ಸಿನ್ಯೂರ್ ' (ಅಂದರೆ ಸರ್ ಎನ್ನುವ ಅರ್ಥ ) ಉಳಿದಂತೆ ಇಂದು ಜಗತ್ತು ಕೆಲವೊಂದು ವಿಷಯದಲ್ಲಿ ಪೊಲರೈಸ್ ಆಗುತ್ತಿರುವುದನ್ನ ನಾವು ಕಾಣಬಹುದು. ಹಣ ಮತ್ತು ಅಧಿಕಾರ ಕೇವಲ ಕೆಲವೇ ಕೆಲವು ಜನರ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ.

ಇದಕ್ಕೆ ಸ್ಪೇನ್ ಕೂಡ ಹೊರತಲ್ಲ . ಆದರೆ ಇಲ್ಲಿ ಕೂಡ ಒಂದು ವಿಷಯದಲ್ಲಿ ಇವರು ಬೇರ್ಪಟ್ಟು ನಿಲ್ಲುತ್ತಾರೆ. ಹೆಚ್ಚು ಹಣವಂತರು ಅಥವಾ ಸ್ಥಿತಿವಂತರು ಇಲ್ಲಿ ಸಣ್ಣಗಿರುತ್ತಾರೆ, ಅಂದರೆ ಹೆಚ್ಚು ಹಣವಂತರು ತಮ್ಮ ದೇಹದ ಬಗ್ಗೆ ತಮ್ಮ ಲುಕ್ಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ನಮ್ಮಲ್ಲಿ ಮಾತ್ರ ಒಂದಷ್ಟು ಹಣ ಸಂಗ್ರಹವಾದರೆ ಸಾಕು , ಜೊತೆ ಜೊತೆಯಲ್ಲಿ ದೇಹದಲ್ಲಿ ಕೊಬ್ಬು ಕೂಡ ಸಂಗ್ರಹವಾಗುತ್ತಾ ಹೋಗುತ್ತದೆ.

ಜಗತ್ತಿನ ಮುಕ್ಕಾಲು ಪಾಲು ಜನ ಮಧ್ಯ ಸೇವಿಸುತ್ತಾರೆ. ಆದರೆ ಇಲ್ಲಿ ಕುಡಿದು ರಸ್ತೆಗೆ ಬೀಳುವರ ಸಂಖ್ಯೆ ಕಡಿಮೆ. ಇನ್ನೊಂದು ಆಶ್ಚರ್ಯ ಗೊಳಿಸುವ ಸಂಗತಿಯೆಂದರೆ ಇಲ್ಲಿ ಬಡವರು ಹೆಚ್ಚು ದಪ್ಪಗಿರುತ್ತಾರೆ, ಮತ್ತು ಅವರು ತಮ್ಮ ಸಂತಾನದ ಸಂಖ್ಯೆಯನ್ನ ಒಂದಕ್ಕೆ ಸೀಮಿತ ಗೊಳಿಸಕೊಳ್ಳುತ್ತಾರೆ. ಶ್ರೀಮಂತರು ಎರಡು ಅಥವಾ ಮೂರು , ಕೆಲವೊಮ್ಮೆ ನಾಲ್ಕು ಮಕ್ಕಳನ್ನ ಹೊಂದಿರುತ್ತಾರೆ. ಭಾರತದಲ್ಲಿ ಎಲ್ಲವೂ ವಿರುದ್ದು.

 ಜಗತ್ತಿನಲ್ಲಿ ಕೆಟ್ಟದ್ದು ಎಷ್ಟಿದೆಯೋ ಅದರ 100 ಪಟ್ಟು ಒಳ್ಳೆಯದೂ ಇದೆ! ಜಗತ್ತಿನಲ್ಲಿ ಕೆಟ್ಟದ್ದು ಎಷ್ಟಿದೆಯೋ ಅದರ 100 ಪಟ್ಟು ಒಳ್ಳೆಯದೂ ಇದೆ!

ಡೆವಲಪ್ಮೆಂಟ್ ತರಾತುರಿಯಲ್ಲಿ ನಶಿಸಿ ಹೋದ ನಮ್ಮ ಒಳ್ಳೆಯ ಸಂಸ್ಕಾರಗಳ ಪಟ್ಟಿ ಮಾಡುತ್ತಾ ಹೋದಂತೆ ನಾವೆಷ್ಟು ಈ ಭೂಮಿಯ ಮೇಲೆ ಭಂಡ ಬಾಳು ಬಾಳುತ್ತಿದ್ದೇವೆ ಅನ್ನಿಸುತ್ತೆ . ಆದರೆ..? ಇಷ್ಟೆಲ್ಲಾ ಚಿಂತಿಸಲು , ಹಳೆಯ ಸಂಸ್ಕಾರವನ್ನ ಮತ್ತೆ ಎತ್ತಿಡಿಯಲು ವೇಳೆ ಎಲ್ಲಿದೆ ? ನಾವು ಇಷ್ಟ ಪಟ್ಟು ಭಾಗಿಯಾಗಿರುವ ಹಣಕಾಸು ಆಟದಲ್ಲಿ ಗೆಲ್ಲ ಬೇಡವೇ ? ನಾವು ಸುಮ್ಮನೆ ಕೊತರೆ ಉಳಿದವರರು ಮುಂದೋಗುವುದಿಲ್ಲವೇ ?

ಪ್ರಶ್ನೆಗಳು ಹಲವು ಉತ್ತರ ಮಾತ್ರ ಸೊನ್ನೆ . ನಿಮಗಾರಿಗಾದರು ಉತ್ತರ ಸಿಕ್ಕರೆ ನನಗೂ ಸ್ವಲ್ಪ ತಲುಪಿಸಿ .

English summary
Barcelona Memories Column By Rangaswamy Mookanahalli Part 34
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X