• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಳೆಯ ಗುಟ್ಟು ಬಿಟ್ಟು ಕೊಡದ ಬದುಕು ಅಚ್ಚರಿಗಳ ಸಾಗರ!

By ರಂಗಸ್ವಾಮಿ ಮೂಕನಹಳ್ಳಿ
|

ಬಾರ್ಸಿಲೋನಾದಲ್ಲಿ ಜೀವನ ಮಾಡಲು ಶುರು ಮಾಡಿ ಒಂದೂವರೆ ವರ್ಷದಲ್ಲಿ ಶ್ರೀನಿ ದುಬೈನಿಂದ ಬಂದು ಸೇರಿದ್ದ. ಬದುಕು ಒಂದು ಮಟ್ಟಕ್ಕೆ ಬದಲಾಗಿತ್ತು. ವಾರಕೊಮ್ಮೆ ಅಮ್ಮ ಮತ್ತು ತಮ್ಮನೊಡನೆ ಮಾತುಕತೆ ನಡೆಯುತ್ತಿತ್ತು . ತಮ್ಮ ಲಕ್ಷ್ಮೀಕಾಂತ ಎಂದೂ ಏನನ್ನೂ ಕೇಳಿದವನಲ್ಲ. ನಾವಿಬ್ಬರೂ ಒಂದು ಜೀವ ಎರಡು ದೇಹ ಎನ್ನುವಂತೆ ಬದುಕಿದವರು. ಪೀಣ್ಯದಲ್ಲಿನ ಜೀವನದಲ್ಲಿ ಅದ್ಯಾವ ಕ್ಷಣದಲ್ಲಿ ಈ ರೀತಿಯ ರಾಮ ಲಕ್ಷ್ಮಣರ ಅನ್ಯೋನ್ಯತೆ ಬೆಳೆದುಕೊಂಡಿತು ತಿಳಿಯಲಿಲ್ಲ. ನಾನು ದುಬೈಗೆ ಹೊರಟಾಗ ಅವನು ಮಂಗಳೂರು ಬಳಿಯ ಸುರತ್ಕಲ್ ನಲ್ಲಿ ಎಂಟೆಕ್ ಮಾಡುತ್ತಿದ್ದ.

ನಾನು ಹೊರಟ ನಂತರ ಕಾಂತನಿಗೆ ಬೇಸರವಾಗಿ ಬಿದ್ದು ಆಸ್ಪತ್ರೆಯನ್ನ ಕೂಡ ಸೇರಿದ್ದನಂತೆ. ಇದು ನನಗೆ ಆಮೇಲೆ ಗೊತ್ತಾಯಿತು. ಅಣ್ಣತಮ್ಮ ಇಷ್ಟೊಂದು ಒಬ್ಬರನ್ನ ಒಬ್ಬರು ಹಚ್ಚಿಕೊಂಡಿರುವುದು ಈ ದಿನಗಳಲ್ಲಿ ಕಡಿಮೆ. ದುಬೈ ನಲ್ಲಿ ಕೆಲಸ ಮಾಡಿ ಬಂದ ಮೊದಲ ತಿಂಗಳ ಸಂಬಳದಲ್ಲಿ ಮೊದಲು ಮಾಡಿದ ಕೆಲಸ ಒಂದೊಳ್ಳೆ ಮೊಬೈಲ್ ಕೊಂಡು ಅದನ್ನ ತಮ್ಮನಿಗೆ ಕಳುಹಿಸಿಕೊಟ್ಟಿದ್ದು.

ಬದುಕು ನಮ್ಮ ಅನುಭವಗಳ ಒಟ್ಟು ಮೊತ್ತ, ಇಂದಿಗೆ ನಿಷಿದ್ಧ ಅನ್ನಿಸಿದ್ದು ನಾಳೆ ಪ್ರಸಿದ್ಧವಾಗಬಹದು!

ಪ್ರವೀಣ್ ಸರಾಪುರೆ ಎನ್ನುವ ನನ್ನ ಗೆಳೆಯ ಭಾರತಕ್ಕೆ ಹೋಗುವನಿದ್ದ ಅವನ ಮುಖಾಂತರ ಕಾಂತನಿಗೆ ಮೊಬೈಲ್ ತಲುಪಿಸುವ ವ್ಯವಸ್ಥೆ ಮಾಡಿದ್ದೆ. ಅಂದಿನ ದಿನಗಳಲ್ಲಿ ಕರೆ ಸ್ವೀಕರಿಸಲು 15/20 ರೂಪಾಯಿ ನಿಮಷಕ್ಕೆ , ಕರೆ ಮಾಡಲು 35/40 ರೂಪಾಯಿ ನಿಮಿಷಕ್ಕೆ ! ತಮ್ಮ ಕಾಲೇಜಿನಲ್ಲಿ ಓದುತ್ತಿದ್ದಾನೆ ಅವನಿಗೆ ಎಲ್ಲವೂ ಸಿಕ್ಕಲಿ ಎನ್ನುವುದು ನನ್ನ ಆಶಯವಾಗಿತ್ತು. ಆದರೆ ಕಾಂತ ಮಾತ್ರ ಎಂದೂ ಏನನ್ನೂ ಕೇಳಿದವನಲ್ಲ.

ಹೀಗೆ ಒಂದು ದಿನ ಅಮ್ಮನಿಗೆ ಕರೆ ಮಾಡಿದಾಗ ' ಕಾಂತ ಪಿಎಚ್ಡಿ ಮಾಡಲು ಯೋಚಿಸುತ್ತಾ ಇದ್ದಾನೆ , ಕೆನಡಾ ಮತ್ತು ಸ್ಪೇನ್ ನಡುವೆ ಯಾವುದು ಎಂದು ತೊಳಲಾಡುತ್ತ ಇದ್ದಾನೆ ' ಎಂದಳು. ನಾನು ಕಾಂತನ ಬಳಿ ಮಾತನಾಡಿದಾಗ ಅವನು ಡಾ. ಪೆರೆ ಪ್ರಾತ್ ಎನ್ನುವರ ಹೆಸರು ಹೇಳಿದ. ಅವರು ಮನಸ್ಸು ಮಾಡಿದರೆ ನನಗೆ ಅಲ್ಲಿ ಪಿಎಚ್ಡಿ ಮಾಡಲು ಸೀಟು ಸಿಕ್ಕುವುದು ಕಷ್ಟವೇನಲ್ಲ ಎಂದ. ಒಂದು ದಿನ ಡಾ. ಪೆರೆ ಪ್ರಾತ್ ಅವರಿಗೆ ಕರೆ ಮಾಡಿದೆ. ಅವರು ಯೂನಿವೆರ್ಸಿಟಿಗೆ ಬಂದು ಕಾಣು ಎಂದರು.

ನೇರವಾಗಿ ಹೋಗಿ ಅವರನ್ನ ಕಂಡು ಈ ರೀತಿ ತಮ್ಮನಿಗೆ ಪಿಎಚ್ಡಿ ಮಾಡಲು ಆಸಕ್ತಿಯಿದೆ ಎಂದೇ , ಅವರು ಆಕಸ್ಮಾತ್ ಅವನಿಗೆ ವಿದ್ಯಾರ್ಥಿ ವೇತನ ಸಿಗದಿದ್ದರೆ ನಿನಗೆ ಅವನಿಗೆ ಸಪೋರ್ಟ್ ಮಾಡಲು ಆಗುತ್ತದೆಯೇ ? ಎಂದು ಕೇಳಿದರು . ಖಂಡಿತ ಸಾಧ್ಯವಿದೆ ಸಾರ್ ಎಂದಿದ್ದೆ . ಮುಂದಿನದು ಇಂದಿಗೆ ಕನಸು ಎನ್ನುವಂತಾಗಿದೆ. ಕಾಂತ ಬಂದ , ಮೂರು ತಿಂಗಳಲ್ಲಿ ವಿದ್ಯಾರ್ಥಿ ವೇತನ 1,200 ಯುರೋ ಸಿಗಲು ಶುರುವಾಯ್ತು. ಪಿಎಚ್ಡಿ ಮುಗಿಸಿದ , ಲಂಡನ್ , ಪ್ಯಾರಿಸ್ , ಅಮೆರಿಕಾದ ಟೆಕ್ಸಸ್ ನಗರಗಳಲ್ಲಿ ವಿಶ್ವ ವಿಖ್ಯಾತ ತೈಲ ಕಂಪೆನಿಗಳಲ್ಲಿ ಕೆಲಸ ಮಾಡಿದ.

ಯಾವ ಯೂನಿವೆರ್ಸಿಟಿಯಲ್ಲಿ ಸ್ಪ್ಯಾನಿಷ್ , ಕತಲಾನ್ ಭಾಷೆಗಳ ಒಂದಕ್ಷರ ಬಾರದೆ , ವಿದ್ಯಾರ್ಥಿ ವೇತನವಿಲ್ಲದೆ ಅತಿ ಸಾಮಾನ್ಯ ಹುಡುಗನಂತೆ ಸೇರಿದ್ದ , ಇಂದು ಅದೇ ಯೂನಿವೆರ್ಸಿಟಿಗೆ ಪಿಎಚ್ಡಿ ಪದವಿ ನೀಡುವಾಗ ಆಯಾ ಅಭ್ಯರ್ಥಿಯ ಕ್ಷಮತೆಯನ್ನ ಅಳೆಯಲು ಹೊರಗಿನಿಂದ ಬರುವ ವ್ಯಕ್ತಿಯಾಗಿ ಬದಲಾಗಿದ್ದಾನೆ. ಹತ್ತಾರು ಪೇಟೆಂಟ್ ಗಳು ಅವನ ಹೆಸರಿನಲ್ಲಿವೆ. ಇವತ್ತು ಅರವತ್ತು ಸೈಟೇಷನ್ ಕೂಡ ಇವನದಾಗಿದೆ. ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಇವನ ಬರಹಗಳು ಪ್ರಕಟವಾಗುತ್ತಿವೆ.

ಬದುಕು ನಮ್ಮ ಅನುಭವಗಳ ಒಟ್ಟು ಮೊತ್ತ, ಇಂದಿಗೆ ನಿಷಿದ್ಧ ಅನ್ನಿಸಿದ್ದು ನಾಳೆ ಪ್ರಸಿದ್ಧವಾಗಬಹದು!

2003ರಲ್ಲಿ ಬಾರ್ಸಿಲೋನಾ ಗೆ ಬಂದಿಳಿದಾಗ ಅವನಿಗೆ ಇದೊಂದು ವಿಚಿತ್ರ ಪ್ರಪಂಚದಂತೆ ತೋರಿತ್ತು. ನಾನಾಗಲೇ ಸ್ಪ್ಯಾನಿಷ್ ಭಾಷೆಯಲ್ಲಿ ಹಿಡಿತವನ್ನ ಸಾಧಿಸಿದ್ದೆ. ಅವನಿಗೆ ನಾನು ಸ್ಪ್ಯಾನಿಷ್ ಮಾತನಾಡುವುದು ನೋಡುವುದೇ ಖುಷಿ. ಕಾಂತ ಎಲ್ಲವನ್ನೂ , ಎಲ್ಲರನ್ನೂ ಮೀರಿ ಅತ್ಯಂತ ವೇಗವಾಗಿ ಬೆಳೆದ. ಮೊದಲ ದಿನಗಳಲ್ಲಿ ಮನೆಯಿಂದ ಮೆಟ್ರೋ ಸ್ಟೇಷನ್ , ನಂತರ ಅವನ ಯೂನಿವೆರ್ಸಿಟಿ ಸ್ಟಾಪ್ ಎಲ್ಲವನ್ನೂ ಒಂದು ದಿನ ಅವನಿಗೆ ತೋರಿಸಿಕೊಟ್ಟಿದ್ದೆ.

ಇಷ್ಟಾದರೂ ಅವನ ಪ್ರಥಮ ದಿನ ಯಾವ ದಿಕ್ಕಿಗೆ ಹೋಗಬೇಕು ಅದರ ವಿರುದ್ಧ ದಿಕ್ಕಿಗೆ ಹೋಗಿದ್ದ. ಮೂರು ತಿಂಗಳಲ್ಲಿ ಭಾಷೆ ಕಲಿತ. ಓದಲು ಬರೆಯಲು ಅಷ್ಟೇ ಅಲ್ಲದೆ ಸ್ಪ್ಯಾನಿಷ್ ಭಾಷೆಯ ಮೇಲಿನ ಹಿಡಿತವನ್ನ ತೋರಿಸುವ ಅತ್ಯಂತ ಕಠಿಣ ಡಿಪ್ಲೋಮ ಪರೀಕ್ಷೆಗಳನ್ನ ಪಾಸು ಮಾಡಿಕೊಂಡ, ಇದ್ಯಾವುದೂ ಅವನ ಪಿಎಚ್ಡಿ ಗೆ ಬೇಕಿರಲಿಲ್ಲ . ಅದನ್ನೆಲ್ಲಾ ಕಲಿತದ್ದು ಖುಷಿಯಿಂದ , ಭಾಷೆಯ ಮೇಲಿನ ಪ್ರೀತಿಗಾಗಿ , ಕಲಿಯಬೇಕು ಎನ್ನುವ ಹಂಬಲದಿಂದ.

ಹೀಗೆ ಕಾಂತ ಬಂದ ದಿನ ಅವನಿಗಾಗಿ ಮನೆಯಲ್ಲಿ ಬಿಸಿಬೇಳೆ ಬಾತ್ ಮಾಡಿಟ್ಟು ಅವನನ್ನ ಕರೆತರಲು ಏರ್ಪೋರ್ಟ್ ಗೆ ಹೋಗಿದ್ದೆ. ನನಗಾದ ಯಾವುದೇ ತೊಂದರೆ ಅವನಿಗಾಗಲಿಲ್ಲ .ಒಂದು ವಾರ ಭಾರತೀಯ ಊಟದ ನಂತರ ಅವನಿಗೆ ಲೋಕಲ್ ಫುಡ್ ಅಭ್ಯಾಸ ಮಾಡಿಸಬೇಕಿತ್ತು. ಇಲ್ಲಿನ ಬೆಳಗಿನ ಆಹಾರ ಸಾಮಾನ್ಯವಾಗಿ 'ಬೊಕಾತ್ತ' ಹೆಸರಿನ ಗಟ್ಟಿಯಾದ ಬ್ರೆಡ್ಡು ಮತ್ತು ಅದರ ಮಧ್ಯ ಚೀಸ್ ಇಟ್ಟಿರುವ ಒಂದು ಸ್ಯಾಂಡ್ವಿಚ್. ಸ್ಥಳೀಯರು ವಿವಿಧ ಮಾಂಸವನ್ನ ಕೂಡ ಇದರ ಜೊತೆಯಲ್ಲಿ ಸೇವಿಸುತ್ತಾರೆ.

ನಮ್ಮ ಪಾಲಿಗೆ ಚೀಸ್ ಸ್ಯಾಂಡ್ವಿಚ್ ಮಾತ್ರವೇ ಇದ್ದ ಒಂದು ಆಯ್ಕೆ. ಈ ಬ್ರೆಡ್ಡು ಬಹಳ ಗಟ್ಟಿ . ಬರಿ ಬ್ರೆಡ್ಡನ್ನ ಇಲ್ಲಿ 'ಪಾನ್' ಎನ್ನುತ್ತಾರೆ . ಇದನ್ನ ತಿನ್ನುವಾಗ ಸ್ವಲ್ಪ ನಿಧಾನಿಸಬೇಕು. ಇದು ದವಡೆಗೆ ಏನಾದರೂ ಸಿಕ್ಕಿದರೆ ದವಡೆ ಕಿತ್ತು ಬರುವುದು ಗ್ಯಾರಂಟಿ. ಹೀಗೆ ಬೊಕಾತ್ತ ಸ್ಯಾಂಡ್ವಿಚ್ ಅಗಿಯುವಾಗ ಒಂದು ತುಂಡು ಹಲ್ಲು ಮತ್ತು ವಸಡಿನ ಮಧ್ಯೆ ಸಿಕ್ಕಿ ಹಾಕಿಕೊಂಡಿತು. ಕಾಂತನ ಮುಖ ಬುರ್ರನೆ ಊದಿಕೊಂಡಿತು. ತಕ್ಷಣ ಅವನನ್ನ ವೈದ್ಯರ ಬಳಿ ಕರೆದುಕೊಂಡು ಹೋದದ್ದಾಯ್ತು .

ಹೀಗೆ ತೊಂದರೆ ಕೊಟ್ಟ ಬೊಕಾತ್ತ ಎನ್ನುವ ಸ್ಪ್ಯಾನಿಷ್ ಉಪಹಾರ ಎರಡು ದಶಕದ ನಂತರವೂ ಅವನ ಆಹಾರವಾಗಿರುತ್ತದೆ ಎನ್ನುವುದು ನಮಗೆ ಅಂದಿಗೆ ತಿಳಿದಿರಲಿಲ್ಲ . ಬದುಕೆಂದರೆ ಇಷ್ಟೇ , ನಮ್ಮ ಅನ್ನ ನೀರಿನ ಋಣ ಎಲ್ಲಿದೆಯೂ ಅಲ್ಲಿಗೆ ಅದು ನಮ್ಮನ್ನ ಕರೆದುಕೊಂಡು ಹೋಗುತ್ತದೆ.

ಮೂರು ತಿಂಗಳಲ್ಲಿ ಕಾಂತನಿಗೆ ವಿದ್ಯಾರ್ಥಿ ವೇತನ ಸಿಕ್ಕಿತು. ನಮ್ಮ ಮನೆಯಿಂದ ಅವನ ಯೂನಿವೆರ್ಸಿಟಿಗೆ ಮುಕ್ಕಾಲು ಗಂಟೆ ರೈಲು ಪ್ರಯಾಣ. ನಿತ್ಯವೂ ಹೋಗಿ ಬರಲು ಒಂದೂವರೆ ಗಂಟೆ ವ್ಯಯವಾಗುತ್ತಿದೆ. ಯೂನಿವೆರ್ಸಿಟಿ ಬಳಿಯೇ ಒಂದು ರೂಮ್ ಮಾಡಿಕೊಳ್ಳುತ್ತೇನೆ ಎಂದ. ನನಗೆ ಸಂಸ್ಥೆ ನೀಡಿದ್ದ ಮೂರು ಬೆಡ್ ಫ್ಲಾಟ್ ಇತ್ತು.

ಅದರಲ್ಲಿ ನಾನು ಮತ್ತು ಶ್ರೀನಿ ಇಬ್ಬರೇ ಇದ್ದೆವು . ಆದರೂ ಕಾಂತನಿಗೆ ಆಯ್ತು ಹೋಗು ಎಂದೆ. ಅವನು ಸಿಕ್ಕ ಸ್ವಂತಂತ್ರ್ಯವನ್ನ ಹಾಳು ಮಾಡಿಕೊಳ್ಳದೆ ತನ್ನ ಒಳಿತಿಗಾಗಿ , ಎಳೆಗೆಗಾಗಿ ಬಳಸಿಕೊಂಡ ಎನ್ನುವುದು ನೆಮ್ಮದಿಯ ವಿಷಯ. ನಮ್ಮ ಮೂಲ ಗುರಿಯಿಂದ ಬೇರ್ಪಡಿಸಲು ಒಂದಲ್ಲ ಹಲವಾರು ಆಮಿಷಗಳು ಈ ಜಗತ್ತಿನಲ್ಲಿ ನಿತ್ಯವೂ ನಮ್ಮ ಮುಂದೆ ಕಾಣುತ್ತವೆ.

ಕಾಂತ ಬಾರ್ಸಿಲೋನಾ ಬದುಕಿನಲ್ಲಿ ಹೀಗೆ ಬಂದವನು ಅಷ್ಟೇ ವೇಗವಾಗಿ ತನ್ನ ನೆಲೆಯನ್ನ ಕಂಡುಕೊಂಡ. ವಾರಕೊಮ್ಮೆ ಅವನ ಫ್ಲಾಟ್ ನಲ್ಲಿ ಅಥವಾ ಯೂನಿವೆರ್ಸಿಟಿ ಕ್ಯಾಂಪಸ್ ನಲ್ಲಿ ನಮ್ಮ ಭೇಟಿ , ಮಾತುಕತೆ ಮತ್ತು ಕೊನೆಯಲ್ಲಿ ಊಟ ಹೀಗೆ ಬದುಕು ಬಹಳ ವೇಗವಾಗಿ ಸರಿದು ಹೋಯ್ತು. 2004/2005ರ ಸಮಯದಲ್ಲಿ ಆರ್ಥಿಕವಾಗಿ ಕೂಡ ಸಾಕಷ್ಟು ಬಲವಾಗಿದ್ದ ನಾನು ಬಾರ್ಸಿಲೋನಾ ದಲ್ಲಿ ಮನೆಯನ್ನ ಕೊಳ್ಳಬೇಕು ಎನ್ನುವ ತೀರ್ಮಾನವನ್ನ ಮಾಡಿದ್ದೆ. ಈ ಮಧ್ಯೆ ನನ್ನ ಮೊದಲಿನ ದಿನಗಳ ಫ್ಲಾಟ್ ಬಿಟ್ಟು ಬಾರ್ಸಿಲೋನಾ ಒಲಂಪಿಕ್ ಆಟಗಾರರಿಗೆ ಎಂದು ಕಟ್ಟಲಾಗಿದ್ದ ಕಟ್ಟಡದಲ್ಲಿ ಒಂದು ಫ್ಲಾಟ್ ನಲ್ಲಿ ಬಾಡಿಗೆಗೆ ಹಿಡಿದು ವಾಸಿಸಲು ಶುರು ಮಾಡಿದ್ದೆ.

92ರ ಸಮಯದಲ್ಲಿ ಬಾರ್ಸಿಲೋನಾ ನಗರದಲ್ಲಿ ಒಲಂಪಿಕ್ ನಡೆಯುವ ಸಮಯದಲ್ಲಿ ನಾವು ಪೀಣ್ಯ ಸ್ಲಂ ನಲ್ಲಿ ವಾಸಿಸುತ್ತಿದ್ದೆವು. ಈ ಕ್ರೀಡೆಗಳನ್ನ ನೋಡಲು ಕೂಡ ನಮ್ಮ ಮನೆಯಲ್ಲಿ ಅಂದಿನ ದಿನದಲ್ಲಿ ಟಿವಿ ಇರಲಿಲ್ಲ.ಇನ್ನೊಂದು ಏಳೆಂಟು ವರ್ಷದಲ್ಲಿ ನಾನು ಅದೇ ನಗರದಲ್ಲಿ ವಾಸಿಸುತ್ತೇನೆ ಎನ್ನುವ ಲವಲೇಶ ಗುಟ್ಟನ್ನ ಕೂಡ ಬದುಕು ಬಿಟ್ಟುಕೊಟ್ಟಿರಲಿಲ್ಲ. ಬದುಕೆಂದರೆ ಇಷ್ಟು ಇದು ಅಚ್ಚರಿಗಳ ಆಗರ.

2004ರ ಅಂತ್ಯಕ್ಕೆ ಬಾರ್ಸಿಲೋನಾ ನಗರದಲ್ಲಿ ಮೂರು ಕೋಣೆಯ ಒಂದು ಫ್ಲಾಟ್ ನನ್ನದಾಯಿತು. ಈ ವೇಳೆಗಾಗಲೇ ಬೆಂಗಳೂರು ನಗರದಲ್ಲಿ ಕೂಡ ಅಪ್ಪ ಅಮ್ಮನಿಗೆ ಒಂದು ಸುಂದರ ಮನೆಯನ್ನ ಕಟ್ಟಿಸಿಕೊಟ್ಟಿದ್ದೆ. ಜೀವನ ಪೂರ್ತಿ ಅಡುಗೆ ಮನೆಯಲ್ಲಿ ಕಳೆದ ಅಮ್ಮನಿಗೆ , ತನ್ನಿಚ್ಚೆಗೆ ವಿರುದ್ಧವಾಗಿ ಸದಾ ನಮಗಾಗಿ ದುಡಿದ ಅಣ್ಣನಿಗೆ ಅದು ನಾನು ಮಾಡಬಹುದಾದ ಕನಿಷ್ಠ ಸೇವೆ. ಕಾರು , ಡ್ರೈವರ್ ಕೂಡ ಅಂದಿನಿಂದಲೇ ಇವರಿಗಾಗಿ ವ್ಯವಸ್ಥೆ ಮಾಡಿದ್ದೆ. 2005, ನನಗೆ ಮೂವತ್ತು ತುಂಬುವ ಮೊದಲೇ ಸಾಮಾನ್ಯವಾಗಿ ಜನ ಜೀವಿತಾವಧಿಯಲ್ಲಿ ಗಳಿಸಲಾಗದ ಆರ್ಥಿಕ ಸಬಲತೆ ನನ್ನದಾಗಿತ್ತು. ಅಮ್ಮನದು ಮದುವೆಯಾಗು ಎಂದು ಒಂದೇ ಸಮನೆ ಹಿಂದೆ ವರಾತ ಬೇರೆ ಶುರುವಾಗಿತ್ತು.

ನನ್ನ ಬಾಳಸಂಗಾತಿಯನ್ನ ಹುಡುಕುವ ಜವಾಬ್ದಾರಿಯನ್ನ ಅಮ್ಮನಿಗೆ ವಹಿಸಿದ್ದೆ. ಅಮ್ಮ ರಮ್ಯಳನ್ನ ನನಗಾಗಿ ಹುಡುಕಿದ್ದರು. ಹಾಗೆ ನೋಡಲು ಹೋದರೆ ರಮ್ಯ ಹೊಸ ಪರಿಚಯವೇನೂ ಆಗಿರಲಿಲ್ಲ . ಬಾಲ್ಯದಲ್ಲಿ ಅವಳನ್ನ ನೋಡಿದ್ದೇ, ಆದರೆ ನಾವು ಒಂದಾಗಿ ಬಾಳ ಸಾಗಿಸಬಹದು ಎನ್ನುವುದು ಗೊತ್ತಿರಲಿಲ್ಲ. 2005ರ ಆಗಸ್ಟ್ ನಲ್ಲಿ ಮದುವೆ ಎಂದು ಗುರು ಹಿರಿಯರು ನಿಶ್ಚಯಿಸದ್ದರು. ಬಾರ್ಸಿಲೋನಾ ದಿಂದ ಅಂದಿಗೆ ನೇರವಾಗಿ ಬೆಂಗಳೂರಿಗೆ ವಿಮಾನದ ವ್ಯವಸ್ಥೆ ಇರಲಿಲ್ಲ. ಬಾರ್ಸಿಲೋನಾ ದಿಂದ ಫ್ರಾಂಕ್ಫರ್ಟ್ ಅಲ್ಲಿಂದ ಬಾಂಬೆ ಆ ನಂತರ ಬೆಂಗಳೂರು ಸೇರಬೇಕಾಗಿತ್ತು.

ಬಾರ್ಸಿಲೋನಾ ದಲ್ಲಿ ವಿಮಾನವನ್ನ ಏರಿದೆ , ಅಲ್ಲಿಂದ ಫ್ರಾಂಕ್ಫರ್ಟ್ ಪ್ರಯಾಣ ಸುಖಕರವಾಗಿತ್ತು. ಅಲ್ಲಿಂದ ಮುಂಬೈಗೂ ಪ್ರಯಾಣ ಚನ್ನಾಗೇ ಇತ್ತು. ಮುಂಬೈನಲ್ಲಿ ನಭೂತೋ ನ ಭವಿಷ್ಯತಿ ಎನ್ನುವಂತಹ ವರ್ಷಧಾರೆ. ನನ್ನ ಜೊತೆಗೆ ಬಾರ್ಸಿಲೋನಾ ದಿಂದ ಮದುವೆಗೆ ಸಾಕ್ಷಿಯಾಗಲು ಕಾಂತ , ಓಲ್ಗಾ , ಆಸ್ಕರ್ , ಲಿಲ್ಲಿ ಹೀಗೆ ಐದಾರು ಜನ ಸ್ಪ್ಯಾನಿಶರು ಕೂಡ ಇದ್ದರು.

ಇವೆರೆಲ್ಲರ ಜೊತೆಗೆ ನನ್ನ ಅಂದಿನ ಸಂಸ್ಥೆಯ ಡೈರೆಕ್ಟರ್ ಮನೆಯ ಕೆಲಸ ಮಾಡುವ ಮರಾಠಿ ಹೆಣ್ಣುಮಗಳು ಬೀನಾ ಎನ್ನುವಳು ಕೂಡ ಇದ್ದಳು. ಆಕೆಯನ್ನ ಮುಂಬೈನಲ್ಲಿ ಮನೆ ಸೇರಿಸುವ ಕೆಲಸ ನನ್ನ ಹೆಗಲೇರಿತ್ತು. ಮಳೆ ಹೇಗೆ ಬೀನಾಳ ಬದುಕನ್ನ ಬದಲಾಯಿಸಿತು ಎನ್ನುವುದನ್ನ ಮುಂದಿನ ವಾರ ಹೇಳುವೆ. ಅಲ್ಲಿಯವರೆಗೆ ವಿರಮಿಸುವೆ.

English summary
Barcelona Memories Coloumn By Rangaswamy Mookanahalli Part 7,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X