• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾರ ಜೊತೆಗಿರುತ್ತೇವೆ ಅವರೇ ಅಣ್ಣ , ತಮ್ಮ , ಬಂಧು-ಬಳಗ !

By ರಂಗಸ್ವಾಮಿ ಮೂಕನಹಳ್ಳಿ
|

ಬಾರ್ಸಿಲೋನ ತಲುಪಿ ಮೂರರಿಂದ ನಾಲ್ಕು ತಿಂಗಳಲ್ಲಿ ವ್ಯವಹಾರಿಕ ಭಾಷೆಯ ಮೇಲೆ ಹಿಡಿತ ಸಿಕ್ಕಿತು. ಪರವಾಗಿಲ್ಲ ಇಲ್ಲಿ ನಾನು ಬದುಕ ಬಲ್ಲೆ ಎನ್ನುವ ಆತ್ಮವಿಶ್ವಾವವನ್ನ ನೀಡಿತು. ವಿಷಯಾಂತರ ಮಾಡುವುದಿಲ್ಲ , ಆದರೂ ಈ ವಿಷಯ ಹೇಳದೆ ಮುಂದೆ ಹೋಗಲು ಇಷ್ಟವಿಲ್ಲ . ಹೀಗಾಗಿ ಈ ವಿಷಯವನ್ನ ಇಲ್ಲಿ ಪ್ರಸ್ತಾಪಿಸಿದ್ದೇನೆ.

ನಾವು ಯಾವ ಊರಿನಲ್ಲಿ ಇರುತ್ತೇವೆ ಆ ಊರಿನ ಭಾಷೆಯನ್ನ ಕಲಿಯಬೇಕು. ಕಲಿತ ಆ ಹೊಸ ಭಾಷೆಯನ್ನ ಪ್ರಯೋಗಿಸುವುದರಲ್ಲಿ ಸಿಗುವ ಖುಷಿ ಇದೆಯಲ್ಲ ಅದನ್ನ ಅನುಭವಿಸಿಯೇ ತಿರಬೇಕು. ಕನ್ನಡಿಗರಿಗೆ ಇದೇನು ಹೊಸ ವಿಷಯವಲ್ಲ. ಇರಲಿ .

ಅದು ಎರಡು ಸಾವಿರ ಇಸವಿಯ ಮಾರ್ಚ್ ತಿಂಗಳು, ಇನ್ನೂ ಚಳಿ ಇಳಿದಿರಲಿಲ್ಲ . ಮೇ ಅಥವಾ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಇಲ್ಲಿಯ ಹವಾಮಾನ ಸೂಪರ್ ಎನ್ನುವಷ್ಟು ಚನ್ನಾಗಿರುತ್ತದೆ. ಉಳಿದಂತೆ ಚಳಿ.

ಭಾಷೆ ಬಾರದ ದೇಶದಲ್ಲಿ ಶುರುವಾಯ್ತು ಬದುಕು !

ಒಮ್ಮೆ ಚಳಿಗೆ ಅಡ್ಜಸ್ಟ್ ಆಗಿಬಿಟ್ಟರೆ ಅದು ಕೂಡ ಕಷ್ಟ ಎಂದು ಅನಿಸುವುದಿಲ್ಲ. ನನ್ನ ಸಂಸ್ಥೆಯ ಸಾವಿರಾರು ಗ್ರಾಹಕರಲ್ಲಿ ಒಂದಿಪ್ಪತ್ತು ಜನ ತೀರಾ ಆಪ್ತವಾಗಿ ಬಿಟ್ಟರು. ಅವರಿಗೆ ಭಾರತ , ಇಲ್ಲಿನ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಬಹಳ ಉತ್ಸಾಹ . ಸಾಮಾನ್ಯ ಜನರಿಗೆ ಇದ್ಯಾವುದೂ ತಿಳಿಯುವುದಿಲ್ಲ. ನಾನು ಬೆಂಗಳೂರಿನವನು ಎಂದರೆ ಬಾಂಗ್ಲಾದೇಶವ? ಎಂದು ಮರು ಪ್ರಶ್ನಿಸುವಷ್ಟು ಬುದ್ದಿವಂತರು.

ಯೂರೋಪಿನಲ್ಲಿ ಅತಿ ಹೆಚ್ಚು ಹೈಸ್ಕೂಲ್ ಡ್ರಾಪ್ ಔಟ್ಸ್ ಇರುವುದು ಸ್ಪೈನಿನಲ್ಲಿ . ಹೀಗೆ ಆಪ್ತರಾದ ಕೆಲವರಲ್ಲಿ ಅಂತೊನಿಯೊ ಕೂಡ ಒಬ್ಬರು. ಒಂದು ದಿನ ಹೀಗೆ ಮಾತನಾಡುತ್ತಾ ಇರುವಾಗ 'ರಂಗ ಈ ಶನಿವಾರ ನಮ್ಮ ಮನೆಗೆ ಬರಲಾಗುತ್ತದೆಯೆ? ನಿನಗಾಗಿ ಸಸ್ಯಹಾರವನ್ನೇ ಮಾಡುತ್ತೇವೆ. ನನ್ನ ಮಗಳಿಗೆ ನಿನ್ನ ನೋಡುವ ಆಸೆ ' ಎಂದರು . 'ಪೋರ್ ಕೆ ನೋ , ವೆಂದ್ರೆ ಸಬಾದೊ ಸಿನ್ ಫಾಲ್ತಾ ' ( ವೈ ನಾಟ್ , ಐ ವಿಲ್ ಕಮ್ ವಿಥೌಟ್ ಫೇಲ್ -ಎನ್ನುವ ಅರ್ಥ ) ಎಂದಿದ್ದೆ .

ಏಕೆ ? ಏನು ? ಎಂದು ಪ್ರಶಿಸುವ ಗೋಜಿಗೆ ಹೋಗಲಿಲ್ಲ . ವಾರ ಪೂರ್ತಿ ಕಳೆಯುವುದು ತಿಳಿಯುತ್ತಿರಲಿಲ್ಲ , ಶನಿವಾರ ಮತ್ತು ಭಾನುವಾರ ಮಾತ್ರ ಕಣ್ಣಲ್ಲಿ ನೀರು ಬರಿಸುತ್ತಿತ್ತು . ಸ್ಪ್ಯಾನಿಷ್ ಟಿವಿ ಮುಂದೆ ಕುಳಿತು ಸ್ಪ್ಯಾನಿಷ್ ಭಾಷೆಯ ಉಚ್ಚಾರಣೆಗಳನ್ನ ಕಲಿಯುವಾಗ ತಲೆ ನೋವು ಬರುತ್ತಿತ್ತು . ಹೀಗೆ ಯಾರಾದರೂ ನಮ್ಮ ಮನೆಗೆ ಬಾರಪ್ಪ ಊಟ ಕೂಡ ಮಾಡಿ ಹಾಕುತ್ತೇವೆ ಎಂದರೆ , ಏಕೆ ಎಂದು ಪ್ರಶ್ನಿಸುವ ಪ್ರಶ್ನೆಯೇ ಉದ್ಭವಾಗುವುದಿಲ್ಲ ಅಲ್ಲವೇ ?

ಸ್ಪೇನ್ ನಲ್ಲಿ ಹೀಗೆ ಯಾರಾದರೂ ಅವರ ಮನೆಗೆ ಕರೆದರೆ ಅದೂ ಊಟಕ್ಕೆ , ಬರಿ ಕೈಲಿ ಹೋಗುವುದು ಸಂಪ್ರದಾಯವಲ್ಲ. ವೈನ್ , ಸಾಂಗ್ರಿಯ , ಟಕ್ಕಿಲ ಅಥವಾ ಇನ್ನಾವುದಾದರೂ ಪೇಯವನ್ನ ಕೊಂಡು ಹೋಗಬೇಕು . ಇದನ್ನ ಬಿಟ್ಟು ಇನ್ನೊಂದು ಆಪ್ಷನ್ ಊಟದ ಕೊನೆಯಲ್ಲಿ ತಿನ್ನುವ ಡೆಸರ್ಟ್ (ಇದನ್ನ ಇಲ್ಲಿ ಪೋಸ್ತ್ರೆ ಎನ್ನುತ್ತಾರೆ ) ಅನ್ನು ಇಲ್ಲಿನ ಪಾನದೇರಿಯ ( ನಮ್ಮ ಬೇಕರಿಯ ಅಣ್ತಮ್ಮ ) ದಲ್ಲಿ ಕೊಂಡು ಹೋಗಬೇಕು. ಇದು ಕಡ್ಡಾಯ ಅಲ್ಲದಿದ್ದರೂ , ಅಲಿಖಿತ ನಿಯಮ.

ನನಗೋ ಈ ಪೇಯಗಳ ತಲೆಬುಡ ಅಂದಿಗೂ ಗೊತ್ತಿರಲಿಲ್ಲ , ಇಂದಿಗೂ ಗೊತ್ತಿಲ್ಲ . ಸುಮಾರು ಡಝನ್ ಜನ ಇನ್ನೊಂದೆರೆಡು ವರ್ಷದಲ್ಲಿ ನೀನು ಬದಲಾಗದಿದ್ದರೆ ನೋಡು ಎಂದೆಲ್ಲಾ ಚಾಲೆಂಜ್ ಹಾಕಿದರು. ಎಷ್ಟೇ ವರ್ಷ ಉರುಳಿದರೂ ನನ್ನತನವನ್ನ ಬಿಡದ ನನ್ನ ಬಗ್ಗೆ ವಿಶೇಷ ಪ್ರೀತಿಯನ್ನ ಅಲ್ಲಿನ ಸ್ನೇಹಿತರು ಇಂದಿಗೂ ಇಟ್ಟು ಕೊಂಡಿದ್ದಾರೆ . ನನ್ನ ಸ್ಪೇನ್ ನ ಸಹೋದರಿ ಎವಾ ಳಷ್ಟೇ ಆತ್ಮೀಯನಾದವನು ಸಾಲ್ವದೂರ್ .ಈತನ ಬಗ್ಗೆಯೇ ವಿಶೇಷವಾಗಿ ಮತ್ತೆ ಬರೆಯುವೆ . ಸಾಲ್ವ ನಿಗೆ ಫೋನಾಯಿಸಿ ಯಾವ ಡೆಸರ್ಟ್ ಬೆಸ್ಟ್ ಎಂದು ಕೇಳಿ ತಿಳಿದುಕೊಂಡು ಅದನ್ನ ಕೊಂಡು ಅಂತೋನಿಯ ಮನೆಯನ್ನ ತಲುಪಿದೆ .

ವೈಲ್ಡ್‌ಲೈಫ್‌ ಫೋಟೋಗ್ರಾಫಿ ಪ್ರಶಸ್ತಿ ಗೆದ್ದ ಸ್ಪೇನಿನ ಬಾಲಕ ಆಂಡ್ರ್ಯೂಸ್

ಇಲ್ಲಿ ಸಾಮಾನ್ಯವಾಗಿ ಜನರು ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಾರೆ. ಅಂತೊನಿಯೊ (ಗಮನಿಸಿ ಅಂತೋನಿಯ ಎಂದರೆ ಸ್ತ್ರೀಲಿಂಗ - ನಮ್ಮಲ್ಲಿ ಗಂಗಮ್ಮ , ಗಂಗಪ್ಪ ಇದ್ದಹಾಗೆ ) ಅವರು ವಿಲ್ಲಾ ದಲ್ಲಿ ವಾಸಿಸುತ್ತಿದ್ದರು. ಅವರ ಬಳಿ ಬಿಳಿಯ ಕುದುರೆ ಕೂಡ ಇತ್ತು . ಒಂದೆರೆಡು ನಾಯಿ , ಒಂದೆರೆಡು ಬೆಕ್ಕು , ಬಹುತೇಕ ಸ್ಪಾನಿಷರಂತೆ ಹತ್ತಾರು ಪಕ್ಷಿಗಳನ್ನ ಸಾಕಿದ್ದರು . ಪಕ್ಷಿಗೆ ಸ್ಪ್ಯಾನಿಷ್ ನಲ್ಲಿ ಪಹಾರೋ ಎನ್ನುತ್ತಾರೆ. ನನಗೆ ಅವರ ಮನೆಯಲ್ಲಿ ರಾಜಾತಿಥ್ಯ ಸಿಕ್ಕಿತು. ನಮ್ಮಲ್ಲಿ ವಿದೇಶಿಯರು ಬಂದಾಗ ಹೇಗೆ ಸ್ವಲ್ಪ ಜಾಸ್ತಿ ಆತಿಥ್ಯ ನೀಡುತ್ತೇವೆ ಥೇಟ್ ನನಗೂ ಅಂತಹುದೇ ಆತಿಥ್ಯ ಸಿಕ್ಕಿತು. ಎಷ್ಟಾದರೂ ನಾನು ಅವರ ಪಾಲಿಗೆ ವಿದೇಶೀಯನಲ್ಲವೇ ?

'ಮೀರಾ ರಂಗಾ , ಥೇ ಪ್ರೆಸೆನ್ತೊ ಮೀ ಫ್ಯಾಮಿಲಿಯ ' ( ಲುಕ್ ರಂಗ , ನಿನಗೆ ನನ್ನ ಕುಟುಂಬವನ್ನ ಪರಿಚಯಿಸುವೆ -ಎಂದರ್ಥ ) ಎಂದವರು , ಎಲ್ಲರನ್ನೂ ಪರಿಚಯಿಸಿ ಕೊನೆಗೆ ಥೇಟ್ ಬಾರ್ಬಿ ಡಾಲ್ ಹೋಲುವ ೧೦/೧೨ ವರ್ಷದ ಪೋರಿಯ ಮುಂದೆ ನಿಂತು ' ಇವಳು ಸೋಫಿಯಾ ನನ್ನ ಮಗಳು , ಇವಳೇ ನಿನ್ನ ಕಾಣಲು ಬಯಸಿದ್ದು ' ಎಂದರು. ಆ ಪುಟಾಣಿಯ ಆತ್ಮೀಯವಾಗಿ ತಬ್ಬಿ ಮುತ್ತಿಕ್ಕಿ ' ಕೆ ತಾಲ್ ಸೋಫಿಯಾ , ಅವೆರ್ ದಿಗ ಮೇ ಪೋರ್ ಕೆ ಕಿಯರೆಸ್ ವೇರ್ ಮೇ ?' ( ಹೇಗಿದ್ದೀಯ ಸೋಫಿಯಾ , ಹೇಳು ನೀನು ನನ್ನ ಕಾಣಲು ಏಕೆ ಬಯಸಿದ್ದೀಯಾ ? ) ಎಂದೆ .

ಅದಕ್ಕವಳು ಇದೆ ವಾರ ನಾನು ಶಾಲೆಯಲ್ಲಿ ಭಾರತದ ಬಗ್ಗೆ , ಹಿಂದೂಗಳ ಬಗ್ಗೆ ಓದಿದೆ, ಅದನ್ನ ಅಪ್ಪನ ಬಳಿ ಹೇಳಿದೆ ಆಗ ಅವರು ನನಗೆ ಒಬ್ಬ ಹಿಂದೂ ಸ್ನೇಹಿತನಿದ್ದಾನೆ ಎಂದರು , ನಾನು ಇದುವರೆಗೂ ಒಬ್ಬ ಹಿಂದುವನ್ನ ನೋಡಿಲ್ಲ . ಅದಕ್ಕಾಗಿ ನಿನ್ನ ನೋಡಲು ಬಯಸಿದೆ ಎಂದಳು . ನಿನ್ನ ಮುಟ್ಟಬಹುದೇ ಎಂದಳು , ಧಾರಾಳವಾಗಿ ಎಂದತಕ್ಷಣ , ನನ್ನ ಕೈ ಸವರಿ ' ಹಿಂದೂ .., ಹಿಂದೂ ..' ಎಂದು ಉದ್ಘಾರಿಸಿದಳು. ' ಮೀ ಪ್ರೊಫೆ ದಿಚ್ಚೋ ಲಾಸ್ ಹಿಂದೂಸ್ ಸೋನ್ ಮುಯ್ ಬೊನೊಸ್' ಎಂದಳು . (ನನ್ನ ಟೀಚರ್ ಹೇಳಿದ್ದಾರೆ , ಹಿಂದೂಗಳು ಬಹಳ ಒಳ್ಳೆಯವರು -ಎನ್ನುವ ಅರ್ಥ ) . ಅಂತೊನಿಯೊ ಮನೆಯಲ್ಲಿ ಸುಟ್ಟ ಬದನೇಕಾಯಿ , ಆಲೂಗೆಡ್ಡೆ , ಚೀಸ್ , ಬ್ರೆಡ್ಡು ತಿಂದು ಅವರಿಗೆ ಆದಿಯೋಸ್ (ಬಾಯ್ ) ಹೇಳಿ ನನ್ನ ಮನೆಗೆ ಬಂದಿದ್ದೆ .

ಆ ನಂತರ ಅಂದರೆ 2003ರ ಮೇಲೆ ಇಲ್ಲಿಗೆ ಬಹಳಷ್ಟು ಪಾಕಿಸ್ತಾನಿಗಳು , ಬಾಂಗ್ಲಾದೇಶಿಗಳು ಬಂದು ತುಂಬಿಕೊಂಡರು. ಭಾರತೀಯರ ಮತ್ತು ಈ ಎರೆಡು ದೇಶೀಯರ ನಡುವೆ ವ್ಯತ್ಯಾಸ ಗುರುತಿಸಲಾಗದ ಜನತೆ ನೀವೆಲ್ಲ ಒಂದೇ ಎನ್ನುವಂತೆ ವರ್ತಿಸ ತೊಡಗಿತು. ಆದರೆ ಒಮ್ಮೆ ಭಾರತೀಯ ಎಂದು ತಿಳಿದ ಮೇಲೆ ನಮ್ಮನ್ನ ನೋಡುವ ರೀತಿ ಬದಲಾಗುತ್ತಿತ್ತು. ತೀರಾ ಇತ್ತೀಚಿಗೆ ಅಂದರೆ ಆರೇಳು ವರ್ಷದ ಹಿಂದೆ ಲಕ್ಷಿ ಮಿತ್ತಲ್ ಅವರ ತಮ್ಮ ಪ್ರಮೋದ್ ಮಿತ್ತಲ್ ತನ್ನ ಮಗಳ ಮದುವೆಯನ್ನ ಬಾರ್ಸಿಲೋನಾ ದಲ್ಲಿ ಮಾಡಿದ ಮೇಲೆ , ಸ್ಥಳೀಯರು ಭಾರತೀಯರಿಗೆ ವಿಶೇಷ ಗೌರವವನ್ನ ನೀಡುತ್ತಿದ್ದಾರೆ. ಈ ಮದುವೆಗೆ ಅಂದಾಜು 500 ಕೋಟಿ ರೂಪಾಯಿಯನ್ನ ಅವರು ವ್ಯಯಿಸಿದ್ದರು.

ಹೀಗೆ ಬಾರ್ಸಿಲೋನಾ ಗೆ ಬಂದು ಸೇರಿಕೊಂಡ ಬಹುತೇಕ ಬಾಂಗ್ಲಾ ಮತ್ತು ಪಾಕಿಸ್ತಾನಿಯರು ಕಾನೂನು ಬಾಹಿರ ನಿವಾಸಿಗಳು. ಅವರು ಪಾಕಿಸ್ತಾನದಿಂದ ಬಾರ್ಸಿಲೋನಾ ತಲುಪಲು ವರ್ಷಾನುಗಟ್ಟಲೆ ಸಮಯವನ್ನ ತೆಗೆದುಕೊಂಡಿದ್ದಾರೆ . ಅವರ ಪಯಣದ ಕಥೆಯೇ ರೋಚಕ. ಅದರ ಬಗ್ಗೆ ವಿವರವಾಗಿ ಮತ್ತೆ ಬರೆಯುವೆ.

English summary
Barcelona Memories Coloumn By Rangaswamy Mookanahalli Part 2,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X