ಕೆಲವರೆಂದರೆ ಮೋಡಿ, ನೀವದನ್ನು ಒಪ್ಪಿ ಬಿಡಿ!

Narendra modiಅಟಲ್ ಬಿಹಾರಿ ವಾಜಪೇಯಿಗಿಂತಲೂ ಅದ್ಭುತ ವಾಗ್ಮಿ ಎನಿಸಿದ್ದ ಜಗನ್ನಾಥರಾವ್ ಜೋಷಿ ಅವರು ತಮ್ಮ ಒಂದು ಭಾಷಣದಲ್ಲಿ " ನೀವು ಬಂದಿರುವುದು ನನ್ನ ಭಾಷಣ ಕೇಳುವುದಕ್ಕೆ, ನೀವ್ಯಾರೂ ನಮ್ಮ ಪಕ್ಷಕ್ಕೆ ಓಟು ಹಾಕುವವರಲ್ಲ " ಅಂತ ಸಭಿಕರಿಗೇ ಕೇಳಿದ್ದುಂಟು. ಅಂತಹ ಭಾಷಣಕಾರರು ಈಗ ಯಾರಿದ್ದಾರೆ ? ಸಿಕ್ಕರೆ ತಿಳಿಸಿ !

* ಪ್ರತಾಪ್ ಸಿಂಹ

ರಾಹುಲ್ ಗಾಂಧಿಗೆ ಮಾತೇ ಬರುವುದಿಲ್ಲ, ಭಾಷಣ ಮಾಡುವುದೇ ತಿಳಿದಿಲ್ಲ ಎಂದರೂ ಬಹುಶಃ ಅತಿಶಯೋಕ್ತಿಯಾಗದು! ಅಮ್ಮ ರೀಡರ್ ಆದರೆ, ಮಗನಿಗೆ ಬರುವುದು ಕೈಬೀಸಲು, ಕೈಕುಲುಕಲು ಅಷ್ಟೆ. ಆದರೂ ರಾಹುಲ್ ಬರು ತ್ತಾರೆಂದರೆ ಜನ ಸೇರುತ್ತಾರೆ. ಇತ್ತೀಚೆಗೆ ಕರ್ನಾಟಕಕ್ಕೆ ಆಗಮಿಸಿದ್ದ ಆತನ 'ರೋಡ್ ಶೋ"ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದನ್ನು ನೀವೆಲ್ಲ ನೋಡಿದ್ದೀರಿ. ಪ್ರಸ್ತುತ ಘೋಷಣೆಯಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರಾಂದೋಲನಕ್ಕೂ ರಾಹುಲ್ ಬಂದೇ ಬರುತ್ತಾರೆ. ಹಾಗಂತ ರಾಹುಲ್ ಗಾಂಧಿ ದೊಡ್ಡ ನಾಯಕರೇನಲ್ಲ. ನಲವತ್ತು ವರ್ಷವಾದರೂ ಸ್ಫುರದ್ರೂಪಿ ಯಾಗಿರುವ, ಅವಿವಾಹಿತರಾಗಿರುವ ಅವರನ್ನು ನೋಡುವು ದಕ್ಕಾಗಿಯೇ ಜನ ಬರುತ್ತಾರೆಂದು ಹೇಳಲೂ ಆಗದು. ನೆಹರು ಕುಟುಂಬದ ಬಗ್ಗೆ ಇಂದಿಗೂ ಜನರಲ್ಲಿ ಒಂದು ರೀತಿಯ ಕುತೂಹಲ, ಒಂಚೂರು ಪ್ರೀತಿ ಇದೆ. ಹಾಗೆ ಆಯಾಚಿತವಾಗಿ ಬರುವ ಕುತೂಹಲ ರಾಹುಲ್ ಗಾಂಧಿಗೂ ವರವಾಗಿದೆ. ಕಾಂಗ್ರೆಸ್‌ಗೆ ವೋಟು ಹಾಕದವರೂ ರಾಹುಲ್ ಅವರನ್ನು ನೋಡಲು ಬರುತ್ತಾರೆ.

ಒಂದು ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಬಗ್ಗೆಯೂ ಇಂತಹದ್ದೇ ಆಕರ್ಷಣೆಯಿತ್ತು. ಅವರ ಭಾಷಣವಿದೆಯೆಂದರೆ ಜನಸ್ತೋಮ ಲಕ್ಷ ಮೀರುತ್ತಿದ್ದ ಸಂದರ್ಭಗಳೇ ಹೆಚ್ಚು. ಮಂತ್ರಮುಗ್ಧರನ್ನಾಗಿಸುವ ಅವರ ಮಾತುಗಳನ್ನು ಕೇಳುವುದೆಂದರೆ ಕಿವಿಗಳಿಗೆ ಅದೆಂಥದ್ದೋ ಹಿತ. ಅವರು ವೇದಿಕೆಗೆ ಬಂದು ನಿಂತ ಕೂಡಲೇ ಲಕ್ಷ ಜನ ನೆರೆದಿದ್ದರೂ ವಾತಾವರಣವೇ ಸ್ತಬ್ಧ. ಅವರ ಹಾವ- ಭಾವ ಮಾತಿನಷ್ಟೇ ಮೋಡಿ ಮಾಡುತ್ತಿದ್ದವು. ಎರಡು ದಿಕ್ಕುಗಳಿಗೂ ಚಾಚಿದ ಕೈಗಳನ್ನು, ಕೆಲವೊಮ್ಮೆ ಒಂದು ಕೈಯನ್ನು ಮುಂದೆಚಾಚಿ ಪಿಸ್ತೂಲಿನ ನಳಿಕೆಯಾಕಾರದಂತೆ ಮಾಡುತ್ತಿದ್ದ ತೋರ್‍ಬೆರಳನ್ನು ನೋಡುವುದೇ ಒಂಥರಾ ಥ್ರಿಲ್. ಅದನ್ನು ನೋಡುವುದಕ್ಕಾಗಿಯೇ, ಅವರ ಭಾಷಣ ವನ್ನು ಕೇಳುವುದಕ್ಕಾಗಿಯೇ ಜನ ಬರುತ್ತಿದ್ದರು. ಅವರೂ ಅಷ್ಟೇ, ಪ್ರತಿಬಾರಿ ಲೋಕಸಭೆಗೆ ಚುನಾವಣೆ ನಡೆದಾಗಲೂ ಬೆಂಗಳೂರಿಗೆ ಬರುತ್ತಿದ್ದರು. ನ್ಯಾಷನಲ್ ಕಾಲೇಜು ಮೈದಾನ ಕಾಯಂ ತುಂಬಿ ತುಳುಕುತ್ತಿತ್ತು. ಒಂದು ವೇಳೆ, ಬಂದವರೆಲ್ಲ ಬಿಜೆಪಿಗೆ ವೋಟು ಹಾಕುತ್ತಿದ್ದರೆ ಅಟಲ್ ಭಾಷಣ ಮಾಡಿದ ಕಡೆಗಳಲ್ಲೆಲ್ಲ ಬಿಜೆಪಿ ಗೆಲ್ಲಬೇಕಿತ್ತು, ಎಂಬತ್ತರ ದಶಕದಲ್ಲೇ ಅವರು ಪ್ರಧಾನಿಯಾಗಿರುತ್ತಿದ್ದರು!

ಆದರೆ ಬಿಜೆಪಿಗೆ ವೋಟು ಹಾಕದವರೂ ಅಟಲ್ ಭಾಷಣ ಕೇಳಲು ಬರುತ್ತಾರೆ. ಅಟಲ್‌ಗಿಂತಲೂ ಅದ್ಭುತ ವಾಗ್ಮಿ ಎನಿಸಿದ್ದ ಜಗನ್ನಾಥ ರಾವ್ ಜೋಶಿಯವರಂತೂ “ನೀವು ಬಂದಿರುವುದು ನನ್ನ ಭಾಷಣ ಕೇಳುವುದಕ್ಕಷ್ಟೇ, ನೀವ್ಯಾರೂ ನಮ್ಮ ಪಕ್ಷಕ್ಕೆ ವೋಟು ಹಾಕುವವರಲ್ಲ" ಅಂತ ಸಭಿಕರಿಗೇ ಹೇಳಿದ್ದುಂಟು! ಅಂತಹ ಭಾಷಣಕಾರರು ಈಗ ಯಾರಿ ದ್ದಾರೆ? ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿಯವರಿಗಂತೂ ಭಾಷಣ ಮಾಡುವುದು ಬಿಡಿ, ಸರಾಗವಾಗಿ ಓದುವುದಕ್ಕೇ ಬರುವುದಿಲ್ಲ. ಇತ್ತ ಗಟ್ಟಿ ವಿಚಾರ-ವಿಮರ್ಶೆ, ಅಂಕಿ-ಅಂಶಗಳಿಂದ ಕೂಡಿರುವ ಲಾಲ್ ಕೃಷ್ಣಆಡ್ವಾಣಿಯವರ ಭಾಷಣವನ್ನು ತಿಳಿದವರಿಗೇ ಕೇಳುವುದಕ್ಕೆ ತ್ರಾಸವಾಗುತ್ತದೆ. ಪ್ರಮೋದ್ ಮಹಾಜನ್ ತುಂಬು ಬದುಕನ್ನೇ ಕಾಣಲಿಲ್ಲ. ಕಾಂಗ್ರೆಸ್‌ನ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ, ಬಿಜೆಪಿಯ ಅರುಣ್ ಜೇಟ್ಲಿ ಚರ್ಚಾಗೋಷ್ಠಿ, ಪತ್ರಿಕಾ ಗೋಷ್ಠಿಗಳಿಗೆ ಹೇಳಿ ಮಾಡಿಸಿದಂತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸಮೀಪಕ್ಕೆ ಬರಬಹುದಾದಂತಹ, ಅವರ ಭಾಷಣದ ಶೈಲಿಯನ್ನು ನೆನಪು ಮಾಡಿಕೊಳ್ಳುವಂತೆ ಮಾಡುವ ಮಾತುಗಾರ ಹಾಗೂ ನೆಹರೂ ಕುಟುಂಬದಂತೆ ಕುತೂಹಲ ಹುಟ್ಟಿಸುವ ಏಕೈಕ ವ್ಯಕ್ತಿಯೆಂದರೆ ನರೇಂದ್ರ ದಾಮೋದರದಾಸ್ ಮೋದಿ!!

ಈ ಮಾತು ಅತಿಶಯೋಕ್ತಿ ಎನಿಸುತ್ತಿದೆಯೇ? ಮುಂಬೈನ ಶಿವಾಜಿ ಪಾರ್ಕು ಶಿವಸೇನೆಯ ತೊಟ್ಟಿಲು. ಅಂತಹ ಸ್ಥಳದಲ್ಲಿ 2003, ಜನವರಿ 12ರಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಾತಿಗಿಳಿದಿದ್ದಾಗ ಹಿಂದೆಂದೂ ಕಾಣದ ಜನಸಾಗರವಿತ್ತು. ನೆನಪಿನ ತಿಜೋರಿ ಯೊಳಗೆ ಭದ್ರವಾಗಿ ಕುಳಿತುಬಿಡುವ ಕಾರ್ಯಕ್ರಮವೂ ಅದಾಗಿತ್ತು. ನರೇಂದ್ರ ಮೋದಿಯ ಹೆಲಿಕಾಪ್ಟರ್ ಭುವಿ ಗಿಳಿಯುತ್ತಿದ್ದಂತೆ 'ವಂದೇ ಮಾತರಂ" ಗಾನ ಇಡೀ ವಾತಾವರಣವನ್ನೇ ಆವರಿಸಿತ್ತು. ಕಮಲದ ದಳಗಳ ನಡುವಿ ನಿಂದ ಎದ್ದುಬಂದಂತೆ ವೇದಿಕೆಯ ಮೇಲೆ ಅವರ ಪ್ರವೇಶವಾಯಿತು. ಗಾನ-ಘೋಷಗಳು, ಪಟಾಕಿ-ಬಿರುಸುಗಳ ಸ್ವಾಗತ ಅವರ ಪಾಲಿಗೊಲಿಯಿತು. ಅವರು ನೆರೆದಿದ್ದ ಜನರೆದುರು 'ನ್ಯಾಯದಾತ", 'ಸ್ವಯಂಸೇವಕ", 'ದೃಷ್ಟಿದಾಯಿ ಪುರುಷ" ಇತ್ಯಾದಿ ಪರಿಕಲ್ಪನೆಗಳ ಮೂಲಕ ಪರಿಚಿತರಾದರು. ಅಷ್ಟೇ ಅಲ್ಲ, ಎಂದಿನಂತೆ ಮಾತಿನಲ್ಲೂ ಮಿಂಚಿದರು ಮೋದಿ. ಕಾಂಗ್ರೆಸ್ ಅಧಿನಾಯಕಿಯನ್ನು 'ಇಟಲಿ ಕೀ ಬೇಟಿ" ಅಂತ ಕಿಚಾಯಿಸಿದರು. 'ಮಿಯಾ" ಮುಷರ್ರಫ್ ಅಂತ ಸಂಬೋಧಿಸಿದರು.

ಇನ್ನೇನು ಆ ಅಸಾಮಿಗೆ ಆದರಣೀಯ ಮಾನನೀಯ ಮುಷರ್ರಫ್ ಅಂತ ಕರೆಯಬೇಕೆ? ಅಂತ ಅಲ್ಲೇ ಒಂದು ಒಗ್ಗರಣೆ. ಜಗತ್ತಿನ ಉಳಿದೆಲ್ಲ ನಾಗರಿಕತೆಗಳಿಗೆ ಉಸಿರುಕಟ್ಟುತ್ತಿದ್ದರೆ ಭಾರತದ ಸಾವಿರ ವರ್ಷಗಳ ನಾಗರಿಕತೆ ಉಳಿದುಕೊಂಡಿರಲು 'ಹಿಂದುತ್ವ"ವೇ ಕಾರಣ ಅಂತ ಗರ್ಜಿಸಿದರು. ಅದು ಜನರನ್ನು ಮರುಳು ಮಾಡುವ ಭಾಷಣವೇ ಆಗಿರಬಹುದು; ಆದರೆ ಮಹಾರಾಷ್ಟ್ರದ ಜನರಿಂದ ಚಪ್ಪಾಳೆ ಗಿಟ್ಟಿಸುವುದಿದೆಯಲ್ಲ, ಅದು ಸುಲಭದ ಮಾತಲ್ಲ. 'ಅಕ್ಷರಧಾಮದಲ್ಲಿ ಅಸುನೀಗಿದ ಆ ಪುಟ್ಟಬಾಲೆಯ ಸಾವಿಗೆ ಮುಷರ್ರಫ್ ಕಾರಣ. ಆ ಬಾಲೆ ದುರ್ಗಾಮಾತೆಯಾಗಿ ಅವತರಿಸಿ ಅಕ್ಷರಧಾಮದಲ್ಲಿ ಚೆಲ್ಲಿದ ಪ್ರತಿ ರಕ್ತದ ಹನಿಯ ಲೆಕ್ಕಾಚಾರವನ್ನೂ ಚುಕ್ತಾ ಮಾಡುತ್ತಾಳೆ". ಹಾಗಂತ ಮೋದಿ ಆವೇಶಭರಿತರಾಗಿ ಮಾತನಾಡುತ್ತಿದ್ದರೆ ಮುಂಬೈ ಜನತೆ ಮೈಮರೆತು ಚಪ್ಪಾಳೆ ತಟ್ಟುತ್ತಿದ್ದರು!
ನರೇಂದ್ರ ಮೋದಿಗೆ ಕುಟುಕುವುದೂ ಗೊತ್ತು.

'ಕಾಂಗ್ರೆಸ್ ನಾಯಕರು ಸರ್ದಾರ್ ಪಟೇಲರ ಕುರಿತು ಅದೆಷ್ಟು ಪೂರ್ವಗ್ರಹ ಪೀಡಿತರಾಗಿದ್ದಾರೆ ಎಂಬುದನ್ನು ಗಮನಿಸಿ. ಪಟೇಲರು ತೀರಿಕೊಂಡಾಗಿನಿಂದ ಒಬ್ಬನೇ ಒಬ್ಬ ನೆಹರು ಕುಟುಂಬದ ಸದಸ್ಯನೂ ಈವರೆಗೆ ಅವರ ಜನ್ಮಸ್ಥಳಕ್ಕೆ ಭೇಟಿಯಿತ್ತಿಲ್ಲ. 50 ವರ್ಷಗಳ ಕಾಲ ಕಾಂಗ್ರೆಸ್ ಸರ್ದಾರ್ ಪಟೇಲರನ್ನು ಮರೆತೇ ಬಿಟ್ಟಿತ್ತು. ಆದರೆ ಚುನಾವಣೆ ಸಮಯದಲ್ಲಿ ಅವರು ನೆನಪಾಗುತ್ತಾರೆ. ಕಾಂಗ್ರೆಸ್ಸಿನ ಗೌರವ ಯಾತ್ರೆ ಕಾರ್‍ಯಕ್ರಮದ ಕರಪತ್ರದಲ್ಲಿ ಮಾತ್ರ ಸರ್ದಾರ್ ಚಿತ್ರಗಳು ವಿಜೃಂಭಿಸುತ್ತಿದ್ದವು. ರಾಜೀವ್ ಗಾಂಧಿಗೆ ಭಾರತರತ್ನ ಕೊಡಮಾಡಿದರು. ಅದಾಗಿ ಬರೋಬ್ಬರಿ ಒಂಬತ್ತು ವರ್ಷಗಳೇ ಬೇಕಾಯಿತು ಸರ್ದಾರ್ ಪಟೇಲರಿಗೆ ಆ ಗೌರವ ಸಿಗಲು. ಅಷ್ಟೇ ಅಲ್ಲ; ಅದಕ್ಕೋಸ್ಕರ ಹೋರಾಡಬೇಕಾದ ಪರಿಸ್ಥಿತಿ ಬಂತು ನಮಗೆ!"

'ನಮಗೆ ಆಧುನೀಕರಣ ಬೇಕು. ಹಾಗಂತ ಅದಕ್ಕೋಸ್ಕರ ಪಾಶ್ಚಾತ್ಯೀಕರಣ ಆಗಬೇಕಿಲ್ಲ. ತಂತ್ರಜ್ಞಾನವನ್ನು ಹಳ್ಳಿಗಳಿಗೆ ಕೊಂಡೊಯ್ಯುವ ಅಭಿಲಾಷೆ ನನ್ನದು. ನೀರಾವರಿ ಜಾಲವನ್ನು ಹಳ್ಳಿಗಳಿಗೆ ವಿಸ್ತರಿಸಿದ ಮೊದಲ ರಾಜ್ಯವೆಂಬ ಖ್ಯಾತಿ ಗುಜರಾತಿನದು. 500 ದಿನಗಳಲ್ಲಿ 700 ಕಿ.ಮೀ. ಪೈಪ್‌ಗಳನ್ನೆಳೆದು ಸಾಬರ್‌ಮತಿ, ಕಛ್ ಹಾಗೂ ಕಾತೇವಾಡ ಗಳಿಗೆ ನರ್ಮದೆಯ ನೀರುಣಿಸಿದವರು ನಾವು. ಈ ದಿನ ಜನವರಿ 12, ತಾಯಿ ಜೀಜಾಮಾತೆ ಹಾಗೂ ವಿವೇಕಾನಂದರು ಹುಟ್ಟಿದ ದಿನ. ಆ ದಿವ್ಯ ಚೇತನಗಳಿಗೆ ನಾನು ತಲೆಬಾಗುತ್ತೇನೆ."

ನರೇಂದ್ರ ಮೋದಿ ಮಾತಿಗಿಳಿದರೆ ಎಂಥವರೂ ತಲೆ ದೂಗಬೇಕು, ಅಷ್ಟು ಸ್ವಾರಸ್ಯಕರವಾಗಿರುತ್ತವೆ ಅವರ ಮಾತುಗಳು. ಹಾಗೆಯೇ ಮಾತಿನ ಮಧ್ಯೆ ಚಾಟಿಯೇಟನ್ನೂ ಕೊಟ್ಟು ಬಿಡುತ್ತಾರೆ. ಅವರ ದಾಳಿಗೆ ಪತ್ರಿಕೆಗಳೂ ತುತ್ತಾಗಿ ಬಳಲಿದ್ದುಂಟು! 2003ರಲ್ಲಿ ಮೋದಿ ಅಮೆರಿಕಕ್ಕೆ ಹೊರಟು ನಿಂತಿದ್ದರು. ಆದರೆ ಗುಜರಾತ್ ಹಿಂಸಾಚಾರದ ವಿಷಯವೆತ್ತಿದ ಅಮೆರಿಕ ವೀಸಾವನ್ನೇ ನಿರಾಕರಿಸಿತು. ಇತ್ತ ಬ್ರಿಟನ್ ಭೇಟಿಯ ಬಗೆಗೂ ಅನುಮಾನ ಕಾಡಲು ಆರಂಭವಾಯಿತು. ಅಲ್ಲಿನ ಸರಕಾರ ಅಧಿಕೃತ ಭೇಟಿಗೆ ಅವಕಾಶ ನೀಡದ ಕಾರಣ, ತಮ್ಮ ಬಳಿಯಿದ್ದ 'ಬ್ಯುಸಿನೆಸ್ ವೀಸಾ"ದೊಂದಿಗೆ ಮೋದಿ ಬ್ರಿಟನ್‌ಗೆ ಖಾಸಗಿ ಭೇಟಿ ನೀಡಿದರು. ವೆಂಬ್ಲಿಯಲ್ಲಿ ಜನರನ್ನುದ್ದೇಶಿಸಿ ಭಾಷಣಕ್ಕಿಳಿದರು. ಗುಜರಾತಿಗಳು ಹೆಚ್ಚಾಗಿ ಹೋಗಿ ನೆಲೆ ನಿಂತಿರುವ ಪ್ರದೇಶವದು. 2500 ಜನರ ಸಾಮರ್ಥ್ಯದ ಹಾಲ್ ನಿಲ್ಲಲೂ ಜಾಗವಿಲ್ಲದಂತೆ ತುಂಬಿತ್ತು. ಸರಕಾರ ಅವರನ್ನು ಅವಮಾನಿಸಲು ಪ್ರಯತ್ನಿಸಿದರೇನಾಯಿತು, ಜನರ ಮುಖದಲ್ಲಿ ಮಾತ್ರ ಅತ್ಯಾದರದ, ಅಭಿಮಾನದ ಭಾವವಿತ್ತು.

ಅವರ 70೦ ನಿಮಿಷಗಳ ಭಾಷಣದಲ್ಲಿ ಕಡಿಮೆ ಯೆಂದರೂ ಮೋದಿ ಮಾತಿಗೆ ಮೂರು ಸಲ ಎದ್ದುನಿಂತು ಗೌರವ ಸಲ್ಲಿಸಿದ್ದರು ಜನ. ಅತ್ತ ಸಭಾಂಗಣದ ಹೊರಗೆ ಮುಸ್ಲಿಂ ಪ್ರತಿಭಟನೆಕಾರರು 'ಕೊಲೆಗಾರ ಮೋದಿಗೆ ಧಿಕ್ಕಾರ" ಅಂತ ಪ್ರತಿಭಟನೆಗಿಳಿದಿದ್ದರು. ಇತ್ತ ಮೋದಿ ಯಾವುದೇ ಅಳುಕಿಲ್ಲದೆ ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ, ಪರದೆ ಹಿಂದೆ ನಿಂತು ಅದು ಆಡುತ್ತಿರುವ ಆಟಗಳ ಬಗ್ಗೆ ಎಚ್ಚರಿಸುತ್ತಾ ಸವಿವರವಾಗಿ ಮಾತನಾಡುತ್ತಿದ್ದರು. ಗುಜರಾತಿಗಳಿಂದ ಬಂದ ಆ ಮಟ್ಟದ ಪ್ರತಿಕ್ರಿಯೆಯನ್ನು ಅರ್ಥೈಸಿಕೊಳ್ಳಲಾಗದ ಪ್ರತಿಷ್ಠಿತ 'ಗಾರ್ಡಿಯನ್" ಪತ್ರಿಕೆ ಇಡೀ ಮುಖಪುಟವನ್ನೇ ಮೋದಿಯನ್ನು ಹೀಗಳೆಯಲು ಬಳಸಿಕೊಂಡಿತು. “ಎರಡು ಸಾವಿರ ಮುಸ್ಲಿಮರನ್ನು ಕೊಂದ ಆರೋಪ ಹೊತ್ತಿರುವ ಮನುಷ್ಯ ವೆಂಬ್ಲಿಯಲ್ಲೇಕಿದ್ದಾನೆ?" ಅಂತ ತಲೆಬರಹ ಕೊಟ್ಟಿತು. ಮೋದಿ ಆಧುನಿಕ ಭಾರತ ರಾಜಕಾರಣದ ಅತ್ಯಂತ ವಿವಾದಾತ್ಮಕ ವ್ಯಕ್ತಿ ಅಂತ ಬರೆದ ಗಾರ್ಡಿಯನ್, ಅವರನ್ನು ಅಡಾಲ್ಫ್ ಹಿಟ್ಲರ್‌ನಂಥವರಿಗೆ ಹೋಲಿಸಲಾಗುತ್ತದೆ ಅಂತಲೂ ಅಭಿಪ್ರಾಯ ವ್ಯಕ್ತಪಡಿಸಿತು.
ದುರದೃಷ್ಟವಶಾತ್, ಭಾರತದಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ಎಷ್ಟೋ ಜನರ ಸಾವಿಗೆ ಕಾರಣರಾಗಿದ್ದರು ಎಂಬುದೇ ಮರೆತು ಹೋದಂತಿತ್ತು 'ಗಾರ್ಡಿಯನ್"ಗೆ!

ಇಂತಹ ಬ್ರಿಟನ್‌ಗೆ ಪಾಠ ಕಲಿಸುವುದನ್ನು ಮೋದಿ ಮರೆಯಲಿಲ್ಲ. ಮರುದಿನ 'ಗುಜರಾತ್ ಸಮಾಚಾರ"ದ ಶಕ್ತಿ ಸಭಾಂಗಣವನ್ನು ಉದ್ಘಾಟಿಸಿದರು. ಮಾಧ್ಯಮಗಳ ಕುರಿತಾಗಿ ಅಲ್ಲಿ ಮಾತು ಬಂತು. “ನನ್ನ ಪತ್ರಕರ್ತ ಮಿತ್ರರು ಅರ್ಥ ಮಾಡಿಕೊಳ್ಳಬೇಕು. ಜಗತ್ತು ಬರಿ ಕೊಚ್ಚೆ ಕೊಳಚೆಗಳಿಂದ ಕೂಡಿಲ್ಲ. ಹೂ ಮತ್ತು ಹೂಗುಚ್ಛಗಳೂ ಇಲ್ಲಿವೆ. ಅವು ಬದುಕಿನ ಸಕಾರಾತ್ಮಕ ಮುಖವನ್ನು ಬಿಂಬಿಸುತ್ತವೆ. ಪತ್ರಕರ್ತರಾದವರು ಕೊಚ್ಚೆಯಿಂದ ಕೊಚ್ಚೆಗೆ ಹಾರಿ ರೋಗ ಹರಡುವ ನೊಣಗಳಾಗಬಾರದು. ಬದಲಿಗೆ ಹೂವಿನಿಂದ ಹೂವಿಗೆ ಹಾರುವ ಜೇನ್ನೊಣಗಳಾಗಬೇಕು. ಮಧುವನ್ನು ಸಂಗ್ರಹಿಸಬೇಕು. ಪರಿಸ್ಥಿತಿ ಬಿಗಡಾಯಿಸಿದಾಗ ಕುಟುಕಲೂ ಬರಬೇಕು!" ಎಂದು ಪತ್ರಕರ್ತರಿಗೆ ಸರಿಯಾ ಗಿಯೇ ಜಾಡಿಸಿದರು. “ಬುದ್ಧ ಹಾಗೂ ಮಹಾತ್ಮ ಗಾಂಧಿಯಂಥವರಿಗೆ ಜನ್ಮ ನೀಡಿದ ದೇಶದಲ್ಲಿ ಹಿಟ್ಲರ್ ಹುಟ್ಟಲಾರ" ಎನ್ನುತ್ತಾ “ಗಾರ್ಡಿಯನ್"ಗೂ ಅಲ್ಲಿಯೇ ತಿರುಗೇಟು ನೀಡಿದರು.

ಕಳೆದ ಡಿಸೆಂಬರ್‌ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲೂ ಇಂತಹ ಸ್ವಾರಸ್ಯಕರ ಘಟನೆಗಳು ಘಟಿಸಿದವು.ಖ್ಯಾತ ಸಿನಿಮಾ ಸಾಹಿತ್ಯ ರಚನೆಕಾರ ಜಾವೇದ್ ಅಖ್ತರ್ ಕೂಡ ಸೋನಿಯಾ ಗಾಂಧಿಯವರ ಸೇವೆಗೆ ನಿಂತಿದ್ದರು. “ಮೌತ್ ಕಾ ಸೌದಾಗರ್"(ಸಾವಿನ ವ್ಯಾಪಾರಿ) ಎಂಬ ನುಡಿಗಟ್ಟನ್ನು ಬರೆದುಕೊಟ್ಟಿದ್ದು ಬೇರಾರು ಅಲ್ಲ, ಜಾವೇದ್ ಅಖ್ತರ್ ಅವರೇ. ಅಖ್ತರ್ ಬರೆದುಕೊಟ್ಟರು, ಸೋನಿಯಾ ಓದಿದರು. ಆದರೆ ಮೋದಿಗೆ ಅಷ್ಟು ಸಾಕಿತ್ತು ನೋಡಿ. ಅದುವರೆಗೂ ಕೇವಲ ಗುಜರಾತ್ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದ ಮೋದಿ, 'ಸಾವಿನ ವ್ಯಾಪಾರಿ" ಎಂದಿದ್ದನ್ನೇ ನೆಪವಾಗಿಟ್ಟುಕೊಂಡು ಭಾವನಾತ್ಮಕ ವಿಚಾರವನ್ನು ಕೈಗೆತ್ತಿ ಕೊಂಡರು, ಭಯೋತ್ಪಾದನೆಯನ್ನು ಎಳೆದು ತಂದರು. ಆದರೆ ಚುನಾವಣಾ ಆಯೋಗದ ಭಯವಿತ್ತು. ಎಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದೀತೋ ಎಂಬ ಭಯ. ಆದರೂ ಮೋದಿ ಸುಮ್ಮನಾಗಲಿಲ್ಲ. ಭಾಷಣವೊಂದರಲ್ಲಿ ನಕಲಿ ಎನ್‌ಕೌಂಟರ್ ಎಂದು ಮಾಧ್ಯಮಗಳು ಬೊಬ್ಬೆಹಾಕುತ್ತಿದ್ದ ಕುಖ್ಯಾತ ಕ್ರಿಮಿನಲ್ ಸೊಹ್ರಾಬುದ್ದೀನ್ ಶೇಖ್ ಪ್ರಕರಣವನ್ನು ಎಳೆದು ತಂದರು. ಆದರೆ ಯಾವುದನ್ನೂ ಬಾಯ್ಬಿಟ್ಟು ಹೇಳಲಿಲ್ಲ!

ತಾವು ಹೇಳಬೇಕಾದುದನ್ನು ಜನರ ಬಾಯಿಂದ ಹೇಳಿಸಿ ಬಿಡುತ್ತಾರೆ. ಭಾಷಣದ ಮಧ್ಯೆ ಅವರು ಕೇಳುವ ಪ್ರಶ್ನೆಗಳು ಹೇಗಿರುತ್ತವೆಂದರೆ ಜನರಿಂದ ನಿರೀಕ್ಷಿತ ಉತ್ತರವೇ ಬರಬೇಕು ಹಾಗಿರುತ್ತವೆ. “ಗುಜರಾತನ್ನು ಸಂಹಾರ ಮಾಡಲು ಬಂದಿದ್ದ ಕ್ರಿಮಿನಲ್ ಸೊಹ್ರಾಬುದ್ದೀನ್ ಶೇಖ್‌ಗೆ ಯಾವ ಶಾಸ್ತಿ ಮಾಡಬೇಕಿತ್ತು?" ಅಂತ ಮೋದಿ ಕೇಳಿದರೆ, 'ಕಿಲ್ ಹಿಮ್, ಕಿಲ್ ಹಿಮ್" ಎಂಬ ಉದ್ಘೋಷ ಜನರ ಮಧ್ಯದಿಂದ ಎದ್ದು ಬರುತ್ತಿತ್ತು. ಪ್ರಶ್ನೆ ಕೇಳಿದ್ದು ಮೋದಿ, ಉತ್ತರ ನೀಡಿದ್ದು ಜನ. ಜನ ನೀಡಿದ ಉತ್ತರ ಮೋದಿಯ ಮನದ ಇಂಗಿತವೇ ಆಗಿತ್ತು! ಆದರೆ ಅಂತಹ ಉತ್ತರವನ್ನು ಜನರೇ ನೀಡಿದ್ದರಿಂದಾಗಿ ಚುನಾವಣಾ ಆಯೋಗ ಮೋದಿ ವಿರುದ್ಧ ಕ್ರಮ ಕೈಗೊಳ್ಳಲು ಹೇಗೆತಾನೇ ಸಾಧ್ಯ?!

ಭಲೇ ಬುದ್ಧಿವಂತ.ನಾಳೆ ಭಾನುವಾರ ( 26 ಏಪ್ರಿಲ್ ) ಕರ್ನಾಟಕಕ್ಕೂ ಬರುತ್ತಿದ್ದಾರೆ. ರಾಜ್ಯದ ವಿವಿಧೆಡೆ ಚುನಾವಣಾ ಸಭೆಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜಗನ್ನಾಥರಾವ್ ಜೋಶಿಯವರು ಹೇಳಿ ದ್ದನ್ನು ನೆನಪಿಸಿಕೊಳ್ಳಿ. ಬಿಜೆಪಿಗೆ ವೋಟು ಹಾಕಬೇಕೆಂದಿಲ್ಲ. ಆದರೆ ಮೋದಿಯವರ ಭಾಷಣ ಕೇಳುವುದಕ್ಕೇಕೆ ಅಂಜಿಕೆ? ಅಷ್ಟಕ್ಕೂ ಮೋದಿಯೆಂದರೆ ಮೋಡಿ, ನೀವದನ್ನು ಒಪ್ಪಿ ಬಿಡಿ.

( ಸ್ನೇಹ ಸೇತು : ವಿಜಯಕರ್ನಾಟಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+