ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ್ ರಾಮ್ ಸೀತಾರಾಮ್,ದೇಶದ ಗತಿ ಹೇರಾಮ್!

By Staff
|
Google Oneindia Kannada News

Tibet on the verge of democratic revolution“ಟಿಬೆಟ್ ಚೀನಾದ ಒಂದು ಭಾಗ" ಎಂಬ 'ಹಿಂದೂ" ಪತ್ರಿಕೆಯ ವಾದವನ್ನು ಒಪ್ಪಿಕೊಂಡರೆ “ಅರುಣಾಚಲ ಪ್ರದೇಶ ತನಗೆ ಸೇರಬೇಕೆಂಬ" ಚೀನಾದ ಪ್ರತಿಪಾದನೆಯನ್ನೂ ಒಪ್ಪಿಕೊಳ್ಳಬೇಕಾಗುತ್ತದಲ್ಲವೆ?

ಪ್ರತಾಪ್ ಸಿಂಹ

ಒಂದು ವೇಳೆ ನೀವೇನಾದರೂ ಪಾಶ್ಚಿಮಾತ್ಯ ಮಾಧ್ಯಮಗಳ ವರದಿಗಳು, ಧರ್ಮ ಶಾಲಾದಲ್ಲಿರುವ ಆ So-Called' ಟಿಬೆಟಿಯನ್ ಸರಕಾರದ ಪ್ರಚಾರಾಂದೋಲನ, 'ಫ್ರೀ ಟಿಬೆಟ್"ನ ಉಪಾಸಕರು ಅಥವಾ ಅಮೆರಿಕ ಸಂಸತ್ತಿನ ಅಧ್ಯಕ್ಷೆ ನ್ಯಾನ್ಸಿ ಪೆಲೋಸಿ ಹಾಗೂ ಹಾಲಿವುಡ್ ತಾರೆಗಳ ಆರ್ಭಟ, ಗರ್ಜನೆಯನ್ನು ನಂಬಿದರೆ ಚೀನಿ ಆಡಳಿತದ ವಿರುದ್ಧ ಸಿಡಿದೆದ್ದಿರುವ ಟಿಬೆಟ್, ಪ್ರಜಾತಾಂತ್ರಿಕ ಬಂಡಾಯದ ಪ್ರಸವದಲ್ಲಿದೆ!

ಪಾಶ್ಚಿಮಾತ್ಯ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಈ 'ಪ್ರಜಾತಾಂತ್ರಿಕ" ಬಂಡಾಯದ ಬಗ್ಗೆ ಅತಿರಂಜಕ, ಕಾಲ್ಪನಿಕ ಸುದ್ದಿಕಥೆಗಳು, ಚಿತ್ರಗಳು ಮತ್ತು ಅಭಿಪ್ರಾಯಗಳನ್ನು ಪ್ರಕಟಿಸುತ್ತಿವೆ. ಆದರೆ ವಾಸ್ತವದ ಸಂಗತಿಯೇನೆಂದರೆ ಮಾರ್ಚ್ 14ರಂದು ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ ಭುಗಿಲೆದ್ದ ಮತ್ತು 22 ಜನರನ್ನು ಬಲಿತೆಗೆದುಕೊಂಡ ಹಿಂಸಾಚಾರದ ವೇಳೆ ಕೊಲೆ, ಬೆಂಕಿ ಹಚ್ಚುವ, ದೋಚುವ ಕಾರ್ಯಗಳು ನಡೆದಿವೆ. ಅಂತಹ ಕಾರ್ಯದಲ್ಲಿ ತೊಡಗಿದ್ದವರಲ್ಲಿ ಡ್ರೆಪಾಂಗ್ ಬೌದ್ಧ ವಿಹಾರದ 300 “ಮಿಲಿಟೆಂಟ್ ಬೌದ್ಧ ಬಿಕ್ಕು"ಗಳೂ ಇದ್ದರು.ಅಮಾಯಕರ ಮೇಲೆ ದಾಳಿ ಮಾಡಲಾಗಿದೆ. ಒಬ್ಬ ಮುಗ್ಧನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದರೆ, ಗಸ್ತು ತಿರುಗುತ್ತಿದ್ದ ಪೊಲೀಸನೊಬ್ಬನ ಮೇಲೆ ದಾಳಿ ಮಾಡಿ ಆತನ ದೇಹದ ಹಿಡಿ ಮಾಂಸವನ್ನು ಹೊರ ತೆಗೆಯಲಾಗಿದೆ......!

ಹಾಂಕಾಂಗ್, ಮಕಾವು, ತೈವಾನ್‌ಗಳಿಗೆ ನೀಡಿರುವಂತೆ ಒಂದು ದೇಶ ಎರಡು ವ್ಯವಸ್ಥೆಗಳು ನಮಗೂ ಬೇಕು ಎನ್ನುತ್ತಿದ್ದಾರೆ ಟಿಬೆಟಿಯನ್ನರು. ಅದು ಚೀನಾ ಸಂವಿಧಾನಕ್ಕೆ ವಿರುದ್ಧವಾದುದು. ಭಾರತದಲ್ಲಿ ಟಿಬೆಟಿಯನ್ನರಿಗೆ ಕೊಟ್ಟಿರುವ ಸ್ವಾತಂತ್ರ್ಯ ಹೆಚ್ಚಾಯಿತು. ಭಾರತ ಸರಕಾರ ದಲೈಲಾಮಾ ಮೇಲೆ ಒತ್ತಡ ಹೇರಬೇಕು. ಉಗ್ರ ಮಾರ್ಗವನ್ನು ಬಿಟ್ಟು ದಲೈಲಾಮಾ ಅವರು ಸ್ವತಃ ಮಾತುಕತೆಗೆ ಬರಬೇಕು. ಚೀನಾದ ಸಂವಿಧಾನದ ಚೌಕಟ್ಟಿನೊಳಗೇ ಮಾತುಕತೆಗಳು ನಡೆಯಬೇಕು. ಟಿಬೆಟ್ ಚೀನಾದ ಒಂದು ಅಂಗ ಎಂಬುದನ್ನು ಒಪ್ಪಿಕೊಳ್ಳಬೇಕು".

ಇದನ್ನು ಓದುತ್ತಾ ಇದ್ದರೆ ಚೀನಾದ 'ಪೀಪಲ್ಸ್ ಡೈಲಿ" ಪತ್ರಿಕೆಯ 'ಸಂಪಾದಕೀಯ"ವಿರಬೇಕೇನೋ ಎಂಬ ಅನುಮಾನ ಮೂಡುತ್ತದಲ್ಲವೆ?!ಅಷ್ಟಕ್ಕೂ, ಟಿಬೆಟ್‌ನಲ್ಲಿ ನೂರಕ್ಕೂ ಹೆಚ್ಚು ಬೌದ್ಧ ಬಿಕ್ಕುಗಳು, ಸ್ವಾತಂತ್ರ್ಯ ಹೋರಾಟಗಾರರನ್ನು ಅಮಾನುಷವಾಗಿ ಕೊಂದುಹಾಕಿದ ಚೀನಾವನ್ನು ಪ್ರಜಾತಂತ್ರ ಮತ್ತು ಮಾನವೀಯತೆಯಲ್ಲಿ ನಂಬಿಕೆ ಇಟ್ಟಿರುವ ಜಗತ್ತಿನ ಯಾವ ರಾಷ್ಟ್ರದ ಪತ್ರಿಕೆ ತಾನೇ ಇಷ್ಟು ಬಲವಾಗಿ ಸಮರ್ಥಿಸಲು ಸಾಧ್ಯ? ಮಾರ್ಚ್ 26ರಂದು 'ದಿ ಸೌತ್ ಇಂಡಿಯಾ ಚೈನಾ ಪೋಸ್ಟ್" ಅಲ್ಲಲ್ಲ, 'ದಿ ಹಿಂದೂ" ಪತ್ರಿಕೆ ಬರೆದಿರುವ ಇಂತಹ ಮಾರುದ್ದದ ಸಂಪಾದಕೀಯವನ್ನು ಓದಿದರೆ ದಿಗ್ಭ್ರಮೆಯಾಗದೇ ಇರುತ್ತದೆಯೇ?!

ಪರಸ್ಪರರ ಮೇಲೆ ಆಕ್ರಮಣ ಮಾಡಬಾರದೆಂಬ 'ಪಂಚಶೀಲ" ಒಪ್ಪಂದವನ್ನು ಮುರಿದು 1962ರಲ್ಲಿ ಭಾರತದ ಮೇಲೆ ಏಕಾಏಕಿ ದಾಳಿ ಮಾಡಿದ ಚೀನಾದ ದೌರ್ಜನ್ಯವನ್ನು ಸಮರ್ಥಿಸಲು ಯಾವ ದೇಶಪ್ರೇಮಿಯ ಮನಸ್ಸು ತಾನೇ ಒಪ್ಪೀತು? ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು ಅರುಣಾಚಲ ನಮ್ಮ “ಲ್ಯಾಂಡ್ ಆಫ್ ರೈಸಿಂಗ್ ಸನ್" ಎಂದಾಗ, ಅಲ್ಲಿನ ಅಭಿವೃದ್ಧಿಗಾಗಿ 100 ಶತಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದಾಗ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ ಚೀನಾದ ಬಗ್ಗೆ ಇಷ್ಟೊಂದು ಪ್ರೀತಿಯೇಕೆ? ನಮ್ಮ ಪ್ರಧಾನಿ, ನಮ್ಮ ದೇಶದ ಅವಿಭಾಜ್ಯ ಅಂಗವಾದ ಅರುಣಾಚಲ ಪ್ರದೇಶಕ್ಕೆ ಹೋದರೂ ವಿರೋಧಿಸುವ ಚೀನಾದ ಬಗ್ಗೆ ನಿಮಗೇಕೆ ಅನುಕಂಪ ಮಿಸ್ಟರ್ ಎನ್. ರಾಮ್?

ಅಷ್ಟಕ್ಕೂ ಟಿಬೆಟ್ ಯಾವ ದೃಷ್ಟಿಯಲ್ಲಿ ಚೀನಾದ ಅವಿಭಾಜ್ಯ ಅಂಗ ಸ್ವಾಮಿ? ಇತಿಹಾಸದುದ್ದಕ್ಕೂ ಟಿಬೆಟ್ ಒಂದು ಸ್ವತಂತ್ರರಾಷ್ಟ್ರವಾಗಿತ್ತು. ಆರು, ಏಳನೇ ಶತಮಾನದಷ್ಟು ಹಿಂದೆಯೇ ಚೀನಾ ಹಾಗೂ ಟಿಬೆಟ್ ನಡುವೆ ಘೋರ ಯುದ್ಧಗಳಾಗಿವೆ. ಟಿಬೆಟನ್ನು ಕಬಳಿಸಲು ಚೀನಾ ಇತಿಹಾಸದುದ್ದಕ್ಕೂ ಪ್ರಯತ್ನಿಸಿದೆ. ಚೀನಾದ ಆಕ್ರಮಣವನ್ನು ಎದುರಿಸಲಾರದೆ 13ನೇ ದಲೈಲಾಮಾ ತುಬ್ತೇನ್ ಗ್ಯಾತ್ಸೋ ಅವರು 1909ರಲ್ಲಿ ಭಾರತಕ್ಕೆ ಓಡಿ ಬಂದಿದ್ದರು. 1912ರವರೆಗೂ ಭಾರತದಲ್ಲೇ ಇದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಭಾರತವನ್ನಾಳುತ್ತಿದ್ದ ಬ್ರಿಟಿಷರು 1914ರಲ್ಲಿ ಮಾತುಕತೆಯೊಂದನ್ನು ಏರ್ಪಡಿಸಿ ದರು. ಚೀನಾ-ಟಿಬೆಟ್-ಬ್ರಿಟಿಷರ ನಡುವೆ ಶಿಮ್ಲಾದಲ್ಲಿ ನಡೆದ ತ್ರಿರಾಷ್ಟ್ರ ಮಾತುಕತೆಯ ವೇಳೆ ಟಿಬೆಟನ್ನು ಒಳ ಹಾಗೂ ಬಾಹ್ಯ ಟಿಬೆಟ್ ಎಂದು ಬ್ರಿಟಿಷರು ವಿಭಜಿಸಲು ಮುಂದಾದಾಗ ಅಪಸ್ವರವೆತ್ತಿದ್ದ ಚೀನಾ ಮಾತುಕತೆಯಿಂದ ಹೊರನಡೆಯಿತು.

ಆದರೆ, ಟಿಬೆಟ್ ಜತೆ ಒಪ್ಪಂದ ಮಾಡಿಕೊಂಡ ಬ್ರಿಟಿಷರು ದಕ್ಷಿಣ ಟಿಬೆಟ್‌ನ 9 ಸಾವಿರ ಚದುರ ಕಿ.ಮೀ. ಭೂಭಾಗವನ್ನು (ಅರುಣಾಚಲ ಪ್ರದೇಶದಲ್ಲಿ ಬರುವ ತವಾಂಗ್ ಪ್ರದೇಶ!) ಭಾರತದೊಂದಿಗೆ ವಿಲೀನ ಮಾಡಿದರು. ಹೀಗೆ ಏರ್ಪಟ್ಟ ಒಪ್ಪಂದಕ್ಕೆ ಅನುಗುಣವಾಗಿ ಹೊಸ ಗಡಿರೇಖೆಯೊಂದನ್ನು ಎಳೆದರು. ಅದೇ ಮ್ಯಾಕ್ ಮಹೋನ್ ಲೈನ್. ಆದರೆ 1949ರಲ್ಲಿ ಚೀನಾ ಕಮ್ಯುನಿಸ್ಟರ ತೆಕ್ಕೆಗೆ ಸಿಲುಕಿದ ನಂತರ ಚೀನಿ ನಾಯಕ ಮಾವೋ ಝೆಡಾಂಗ್ 1950ರಲ್ಲಿ ಟಿಬೆಟ್‌ಗೆ ಸೈನ್ಯ ನುಗ್ಗಿಸಿ ವಶಪಡಿಸಿಕೊಂಡರು. ಅಲ್ಲಿಂದ ಟಿಬೆಟಿಯನ್ನರ ದುಃಸ್ಥಿತಿ ಆರಂಭವಾಯಿತು. 1956ರಲ್ಲಿ ಚೀನಾದ ದಬ್ಬಾಳಿಕೆಯ ವಿರುದ್ಧ ಟಿಬೆಟಿಯನ್ನರು ದಂಗೆಯೆದ್ದರು. ಆದರೆ ಚೀನಿ ಸೇನೆ ಪೈಶಾಚಿಕವಾಗಿ ಸಾವಿರಾರು ಜನರನ್ನು ಕೊಂದುಹಾಕಿದ ಕಾರಣ ಭಯಭೀತರಾದ ಟಿಬೆಟ್‌ನ 'ದೇವ"ರಾಜ ದಲೈಲಾಮಾ ತಮ್ಮ 80 ಸಾವಿರ ಬೆಂಬಲಿಗರ ಜತೆ ಭಾರತಕ್ಕೆ ಓಡಿಬಂದು ಹಿಮಾಚಲ ಪ್ರದೇಶದಲ್ಲಿರುವ ಧರ್ಮಶಾಲಾದಲ್ಲಿ ಅಜ್ಞಾತವಾಸಿ ಸರಕಾರವನ್ನು ಸ್ಥಾಪಿಸಿದರು.

ಅದರೊಂದಿಗೆ ಟಿಬೆಟ್ ಮುಕ್ತಿಗಾಗಿ ಅಹಿಂಸಾ ಹೋರಾಟವೂ ಆರಂಭ ವಾಯಿತು. ಆದರೆ ಟಿಬೆಟ್‌ನಲ್ಲಿ ಮಾತ್ರ ಚೀನಾದ ದಬ್ಬಾಳಿಕೆ ಮುಂದುವರಿಯಿತು. ಕಮ್ಯುನಿಸ್ಟ್ ಚೀನಾ ಟಿಬೆಟ್‌ನ ಬೌದ್ಧಾಲಯಗಳನ್ನು ನಾಶಪಡಿಸುವ ಮೂಲಕ ಅಲ್ಲಿನ ಜನರ ನಂಬಿಕೆಯನ್ನೇ ಕತ್ತು ಹಿಸುಕಿ ಸಾಯಿಸಲು ಪ್ರಯತ್ನಿಸಿತು. ಹೊರಗಿನಿಂದ ಚೀನಿಯರನ್ನು ಕರೆತಂದು ಟಿಬೆಟ್‌ನಲ್ಲಿ ನೆಲೆಗೊಳಿಸುವ ಮೂಲಕ ಟಿಬೆಟಿಯನ್ನರನ್ನೇ ಅಲ್ಪಸಂಖ್ಯಾತರನ್ನಾಗಿ ಮಾಡಲು ಯತ್ನಿಸಿತು. ಇಂದು ಟಿಬೆಟ್‌ನಲ್ಲಿ ಟಿಬೆಟಿಯನ್ನರಿಗಿಂತ ಎರಡು ಪಟ್ಟು ಹೆಚ್ಚು ಚೀನಿಯರಿದ್ದಾರೆ. ಚೀನಿಯರಿಂದಾಗಿ ತಮ್ಮ ಸಂಸ್ಕೃತಿ, ಶಿಷ್ಟಾಚಾರಗಳು ನಾಶವಾಗಿವೆ, ತಾವೇ ಅಲ್ಪಸಂಖ್ಯಾತ ರಾಗಿದ್ದೇವೆ ಎಂಬ ನೋವು, ಹತಾಶೆ ಟಿಬೆಟಿಯನ್ನರಲ್ಲಿ ಮಡುಗಟ್ಟಿದೆ. ಹಾಗಾಗಿಯೇ 1959ರಲ್ಲಿ ನಡೆದಿದ್ದ ಕ್ರಾಂತಿಯ 49ನೇ ವಾರ್ಷಿಕ ದಿನವಾದ ಮಾರ್ಚ್ 10ರಂದು ಬೌದ್ಧ ಬಿಕ್ಕುಗಳು ಹಾಗೂ ಟಿಬೆಟಿಯನ್ನರು ಪ್ರತಿಭಟನೆಗಿಳಿದರು. ಅದಕ್ಕೆ ಅಂತಾರಾಷ್ಟ್ರೀಯ ಸಮುದಾಯ, ರಿಚರ್ಡ್ ಗೇರ್ ಅವರಂತಹ ಹಾಲಿವುಡ್ ನಟರು ಬೆಂಬಲ ನೀಡಿದರು. ಅದರಲ್ಲಿ ತಪ್ಪೇನಿದೆ? ಚೀನಿ ಕಮ್ಯುನಿಸ್ಟರಿಗೆ ದೇವರು, ಧರ್ಮ, ಸಂಸ್ಕೃತಿಯಲ್ಲಿ ನಂಬಿಕೆ ಇಲ್ಲದಿರಬಹುದು. ಆದರೆ 6 ಸಾವಿರ ಬೌದ್ಧಾ ಲಯಗಳನ್ನು ನಾಶಪಡಿಸುವ ಮೂಲಕ ಆಸ್ತಿಕರ ನಂಬಿಕೆ ಯನ್ನು ಸಾಯಿಸುವ ಯತ್ನವನ್ನು ಯಾರು ತಾನೇ ಸಹಿಸಿ ಯಾರು?

ವಸ್ತುಸ್ಥಿತಿ ಹೀಗಿದ್ದರೂ ಪಾಶ್ಚಿಮಾತ್ಯ ಮಾಧ್ಯಮಗಳನ್ನು ಟೀಕಿಸುತ್ತಿರುವ 'ದಿ ಹಿಂದೂ ಪತ್ರಿಕೆ" ಹಾಗೂ ಅದರ ಸಂಪಾದಕರಾದ ಎನ್. ರಾಮ್, ತಾವು ಮಾಡುತ್ತಿರುವುದು ಎಂತಹ ಘನ ಕಾರ್ಯ ಎಂಬುದನ್ನು ಎಂದಾದರೂ ಯೋಚಿಸಿದ್ದಾರೆಯೇ? “ಟಿಬೆಟ್ ಚೀನಾದ ಒಂದು ಭಾಗ" ಎಂಬ 'ಹಿಂದೂ" ಪತ್ರಿಕೆಯ ವಾದವನ್ನು ಒಪ್ಪಿಕೊಂಡರೆ “ಅರುಣಾಚಲ ಪ್ರದೇಶ ತನಗೆ ಸೇರಬೇಕೆಂಬ" ಚೀನಾದ ಪ್ರತಿಪಾದನೆಯನ್ನೂ ಒಪ್ಪಿಕೊಳ್ಳಬೇಕಾಗುತ್ತದಲ್ಲವೆ? ಅಷ್ಟಕ್ಕೂ ಅರುಣಾಚಲದ ತವಾಂಗ್ ಪ್ರದೇಶ 1914ರವರೆಗೂ ದಕ್ಷಿಣ ಟಿಬೆಟ್ ಆಗಿತ್ತಲ್ಲವೆ?

ಇತ್ತ “ಟಿಬೆಟ್ ಚೀನಾದ ಆಂತರಿಕ ವಿಚಾರ", “ನಮಗೆ ಕಾಶ್ಮೀರ ಹೇಗೋ, ಚೀನಾಕ್ಕೆ ಟಿಬೆಟ್ ಕೂಡ ಹಾಗೆ", “ಟಿಬೆಟ್ ಚೀನಾದ ಅವಿಭಾಜ್ಯ ಅಂಗ" ಎಂದಿದ್ದಾರೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ! ಟಿಬೆಟ್ ವಿಚಾರ ಬಂದಾಗ “ಅದು ಚೀನಾದ ಆಂತರಿಕ ವಿಷಯ" ಎನ್ನುವುದಾದರೆ ಅಮೆರಿಕ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದಾಗ, ಇರಾಕ್ ಮೇಲೆ ಆಕ್ರಮಣ ಮಾಡಿದಾಗ, ಇರಾನನ್ನು ಗದರಿಸಿದಾಗ ಭಾರತೀಯ ಕಮ್ಯುನಿಸ್ಟರೇಕೆ ಕೋಪಿಸಿಕೊಂಡಿದ್ದರು? ಅಮೆರಿಕ ಯಾವ ರಾಷ್ಟ್ರದ ಮೇಲೆ ಬೇಕಾದರೂ ದಾಳಿ ಮಾಡುತ್ತದೆ. ಅದಕ್ಕೂ ನಮಗೂ ಏನು ಸಂಬಂಧ? ಅಫ್ಘಾನಿಸ್ತಾನ, ಇರಾಕ್ ಮೇಲೆ ಅಮೆರಿಕ ದಾಳಿ ಮಾಡಿದರೆ ಅದು ಸಾಮ್ರಾಜ್ಯಶಾಹಿ ಧೋರಣೆಯಾಗುವುದಾದರೆ ಸ್ವತಂತ್ರ ರಾಷ್ಟ್ರವಾದ ಟಿಬೆಟನ್ನು ಕಬಳಿಸಿರುವ ಹಾಗೂ ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ, ಅರುಣಾಚಲವೂ ತನ್ನದೆನ್ನುವ ಚೀನಾ ಸಾಮ್ರಾಜ್ಯಶಾಹಿಯಲ್ಲವೆ?

ಕಳೆದ ವರ್ಷ ನೇಪಾಳಕ್ಕೆ ಹೋಗಿ ಅಲ್ಲಿ ಅರಾಜಕತೆ ಸೃಷ್ಟಿಸಿರುವ ಮಾವೋವಾದಿ ನಾಯಕ ಪ್ರಚಂಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದಾಗ, ಭಾರತಕ್ಕೂ ಆಹ್ವಾನಿಸಿ ಆತಿಥ್ಯ ನೀಡಿದಾಗ ಅದೂ ಕೂಡ ನೇಪಾಳದ ಆಂತರಿಕ ವಿಚಾರ ಎಂಬ ಅರಿವು ಸೀತಾರಾಮ್ ಯೆಚೂರಿಯವರಿ ಗಿರಲಿಲ್ಲವೆ? ಇವರಿಗೆ ದೇಶದ ಬಗ್ಗೆ ಅಷ್ಟೊಂದು ಪ್ರೀತಿ ಇರುವುದೇ ಆದರೆ 1962ರ ಚೀನಾ ಆಕ್ರಮಣವನ್ನೇಕೆ ಇದುವರೆಗೂ ಮನಃಪೂರ್ವಕವಾಗಿ ಖಂಡಿಸಿಲ್ಲ? 1962ರಲ್ಲಿ ಕಬಳಿಸಿರುವ ನಮ್ಮ ಕೈಲಾಸ ಪರ್ವತ, ಮಾನಸ ಸರೋವರ ಹಾಗೂ ಲದ್ದಾಕ್‌ನ ಸಾವಿರಾರು ಚದುರ ಕಿ.ಮೀ. ಜಾಗವನ್ನು ಮೊದಲು ಬಿಟ್ಟುಕೊಡುವಂತೆ ಚೀನಾವನ್ನೇಕೆ ಒತ್ತಾಯಿಸುವುದಿಲ್ಲ? ಕಾಶ್ಮೀರ ಹಾಗೂ ಟಿಬೆಟ್‌ಗಳನ್ನು ಒಂದೇ ಎಂಬಂತೆ ಹೋಲಿಸುತ್ತೀರಲ್ಲಾ ನಿಮಗೆ ನಾಚಿಕೆಯಾಗುವುದಿಲ್ಲವೆ ಯೆಚೂರಿ?

ಅದು ಅಮೆರಿಕದ ಜತೆಗಿನ ಅಣು ಒಪ್ಪಂದ, ಇಸ್ರೇಲ್ ಉಪಗ್ರಹ ಉಡಾವಣೆ, ರೋಗಗ್ರಸ್ತ ಸರಕಾರಿ ಉದ್ದಿಮೆಗಳ ಖಾಸಗೀಕರಣ, ಪೆನ್ಷನ್ ಸ್ಕೀಮ್...ಯಾವುದೇ ವಿಷಯ ತೆಗೆದುಕೊಳ್ಳಿ. ಕಮ್ಯುನಿಸ್ಟರು ಎಲ್ಲದಕ್ಕೂ ವಿರೋಧಿಸುತ್ತಾರೆ. ಆದರೆ ಯಾವುದು ಸರಿ, ಏನು ಮಾಡಬೇಕು, ನಮ್ಮ 'ವಿಶನ್" ಯಾವುದು ಅಂತ ಮಾತ್ರ ಹೇಳುವುದಿಲ್ಲ. ಪಶ್ಚಿಮ ಬಂಗಾಳವನ್ನು ನೋಡಿದರೇ ಗೊತ್ತಾಗುವುದಿಲ್ಲವೆ ಕಮ್ಯುನಿಸ್ಟರು ಎಂತಹ ಪ್ರಗತಿಪರರು, ದೇಶಪ್ರೇಮಿಗಳು ಎಂಬುದು? If left have any future in India, India will be left with no future ಅಂತ ಚೋ. ರಾಮಸ್ವಾಮಿಯವರು ಹೇಳಿದ್ದು ಅದಕ್ಕೇ.

ಇದೇನೇ ಇರಲಿ, ಚೀನಾವನ್ನು ಬಗ್ಗಿಸಲು, ಪಾಠ ಕಲಿಸಲು ಇದೇ ಸಕಾಲ. ಚೀನಾದಲ್ಲಿ ಆಗಸ್ಟ್ 8ರಿಂದ 24ರವರೆಗೂ ನಡೆಯಲಿರುವ ಒಲಿಂಪಿಕ್ಸನ್ನು ಜಗತ್ತಿನ ಇತರ ರಾಷ್ಟ್ರಗಳು ಬಹಿಷ್ಕರಿಸುವ ಬೆದರಿಕೆ ಹಾಕುವಂತೆ ಮಾಡಿದರೆ ಚೀನಾದ ಆತ್ಮಸ್ಥೈರ್ಯವನ್ನೇ ಉಡುಗಿಸಬಹುದು. ಅಷ್ಟಕ್ಕೂ ಟಿಬೆಟ್ ಸ್ವತಂತ್ರ ರಾಷ್ಟ್ರವಾದರೆ ಅದರಿಂದ ಲಾಭವಾಗುವುದು ಭಾರತಕ್ಕೇ! ನಾವು ಅತಿ ಹೆಚ್ಚು ಗಡಿಯನ್ನು ಹಂಚಿಕೊಳ್ಳುವುದು ಹಿಮಾಲಯದಂಚಿನಲ್ಲಿರುವ ಟಿಬೆಟ್‌ನುದ್ದಕ್ಕೇ. ಒಂದು ವೇಳೆ ಟಿಬೆಟ್ ಸ್ವತಂತ್ರವಾದರೆ ವೈರಿ ಚೀನಾವನ್ನು ದೂರ ತಳ್ಳಿದಂತಾಗುತ್ತದೆ. ಹಾಗಾಗಿ ಟಿಬೆಟನ್ನು ಸ್ವತಂತ್ರಗೊಳಿಸುವ ನಿಟ್ಟಿನಲ್ಲಿ ಭಾರತ ಭೀತಿಯನ್ನು ಬದಿಗಿಟ್ಟು ಪ್ರಯತ್ನಿಸಬೇಕು. 1962ರಲ್ಲಿ ನಡೆದ ಘಟನೆ ಪುನರಾವರ್ತನೆಯಾಗಲು ಸಾಧ್ಯವೇ ಇಲ್ಲ. ಇಂದು ನಮ್ಮ ಬಳಿ ಅಣ್ವಸ್ತ್ರಗಳಿವೆ. ಮಿಗಿಲಾಗಿ ನಮ್ಮ ಠಕ್ಕ ಕಮ್ಯುನಿಸ್ಟರು ಹೇಳುತ್ತಿರುವಂತೆ ಚೀನಾ ಭಾರತದ ಮಿತ್ರರಾಷ್ಟ್ರವಲ್ಲ. ಅದು ಮಿತ್ರರಾಷ್ಟ್ರವಾಗಲೂ ಸಾಧ್ಯವಿಲ್ಲ.

ಭಾರತೀಯ ಕಮ್ಯುನಿಸ್ಟರು ಹಾಗೂ ಮಾವೋವಾದಿಗಳಿಂದಾಗಿ ಚೀನಾ ನೇಪಾಳಕ್ಕೂ ಕಾಲಿಟ್ಟಿದೆ. ಬಾಂಗ್ಲಾ, ಪಾಕಿಸ್ತಾನಗಳ ಬಂದರುಗಳ ಆಧುನೀಕರಣದ ಹೆಸರಿನಲ್ಲಿ ಆ ದೇಶಗಳಲ್ಲಿ ಸೇನಾ ನೆಲೆ ಸ್ಥಾಪಿಸಿಕೊಳ್ಳುತ್ತಿದೆ. ಮ್ಯಾನ್ಮಾರ್‌ನ ಕೋಕೋ ದ್ವೀಪದಲ್ಲಂತೂ ನೌಕಾ ನೆಲೆಯನ್ನು ಸ್ಥಾಪಿಸುವ ಮೂಲಕ ಬಂಗಾಳಕೊಲ್ಲಿಯ ಮೂಲಕವೂ ಭಾರತಕ್ಕೆ ಅಪಾಯ ತಂದೊಡ್ಡಿದೆ. 1964ರಲ್ಲಿ ಸೋವಿಯತ್ ರಷ್ಯಾದ ಜತೆಯೇ ಯುದ್ಧಕ್ಕೆ ನಿಂತಿದ್ದ ಚೀನಾ ಯಾರ ಸ್ನೇಹಕ್ಕೂ ಅರ್ಹ ರಾಷ್ಟ್ರವಲ್ಲ. ಅದಿರಲಿ, ನಮ್ಮ ಕರ್ನಾಟಕದ ಲೋಕಲ್ ಬುದ್ಧಿಜೀವಿಗಳು, ಹಿಂದೂ ಧರ್ಮದಲ್ಲಿನ ದೌರ್ಜನ್ಯ, ತಾರತಮ್ಯವನ್ನು ವಿರೋಧಿಸಿ ಮತಾಂತರಗೊಂಡಿರುವ ಮೈಸೂರಿನ ನವಬೌದ್ಧರು ಈಗ ಎಲ್ಲಿದ್ದಾರೆ? ಟಿಬೆಟ್‌ನ ಬೌದ್ಧರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆಯೇಕೆ ಧ್ವನಿಯೆತ್ತುತ್ತಿಲ್ಲ?

ನಮ್ಮ ಭಾರತೀಯ ಕಮ್ಯುನಿಸ್ಟರನ್ನುದ್ದೇಶಿಸಿ ಒಂದು ಎಸ್ಸೆಮ್ಮೆಸ್ ಹುಟ್ಟಿಕೊಂಡಿದೆ. Brain has 2 halves, the left & the right. They have nothing RIGHT in LEFT brain and nothing LEFT in the RIGHT brain! ಒಂದು ಎಸ್ಸೆಮ್ಮೆಸ್‌ನಲ್ಲಿ ಎಷ್ಟೊಂದು ಅರ್ಥವಿದೆಯಲ್ಲವೆ? ಮೂರುಬಾರಿ ಯುದ್ಧ ಮಾಡಿ ಸೋತ ಪಾಕಿಸ್ತಾನ, ಭಯೋತ್ಪಾದಕರಿಗೆ ತರಬೇತಿ ನೀಡಿ ಭಾರತಕ್ಕೆ ಕಳುಹಿಸುವ ಮೂಲಕ ಪರೋಕ್ಷ ಸಮರಕ್ಕೆ ಕೈಹಾಕಿತು. ಆದರೆ ಭಾರತದ ಕಟ್ಟಾ ವಿರೋಧಿಯಾದ ಚೀನಾಕ್ಕೆ ಅಂತಹ ಅಗತ್ಯವೇ ಇಲ್ಲ. ಆ ಕೆಲಸ ಮಾಡಲು ಕಮ್ಯುನಿಸ್ಟರಿದ್ದಾರಲ್ಲ?!ಈ ಕಮ್ಯುನಿಸ್ಟ್ 'ರಾಮ್"ಗಳ ಸಂಖ್ಯೆ ಇನ್ನಷ್ಟು ಹೆಚ್ಚಾದರೆ ದೇಶದ ಕಥೆ ಹೇ ರಾಮ್!

( ಸ್ನೇಹ ಸೇತು :ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X