ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳೇ, ಇನ್ನಾದರೂ ಎದ್ದೇಳಿ

By Staff
|
Google Oneindia Kannada News

"ಮೈ ಕಾಲೇಜ್ ಡೇಸ್ ವರ್ ಗೋಲ್ಡ್ ನ್ ಡೇಸ್ ಯಾರ್" ಎಂದು ಹೇಳಿಕೊಳ್ಳುವುದು ಮಾಜಿ ವಿದ್ಯಾರ್ಥಿಗಳಿಗೆ ಹೆಮ್ಮೆ. ನಿಜ, ಕಳೆದುಹೋದ ಆ ಸುವರ್ಣ ಅಧ್ಯಾಯ ಮತ್ತೆ ಮರಳುವುದಿಲ್ಲ. ವಿದ್ಯಾರ್ಥಿ ಜೀವನದ ಅಂತಃಸತ್ವಗಳಾದ ವಿನಯ, ಗೌರವ, ಗೆಳೆತನ, ಸಹಾನುಭೂತಿ ಮತ್ತು ಸಾಮಾಜಿಕ ಕಳಕಳಿಗಳು ಇಂದಿನ ವಿದ್ಯಾರ್ಥಿಗಳಿಗೂ ಮೈಗೂಡಬೇಕು. ಇಲ್ಲದಿದ್ದರೆ, ಒಳ್ಳೆ ಕಾಲೇಜು, ಒಳ್ಳೆ ಮಾರ್ಕ್ಸ್, ಬಂಗಾರದ ಮೆಡಲ್‌ಗಳಿಗೆ ಏನಿದೆ ಅರ್ಥ?

ಪ್ರತಾಪ್ ಸಿಂಹ

ವಿದ್ಯಾರ್ಥಿಗಳೇ, ಇನ್ನಾದರೂ ಎದ್ದೇಳಿಗೀತಾ ಚೋಪ್ರಾ ..ಸಂಜಯ್ ಚೋಪ್ರಾ !ಈ ಹೆಸರುಗಳನ್ನು ಎಲ್ಲೋ ಕೇಳಿದ ಹಾಗಿದೆ ಅಂತ ಅನಿಸುತ್ತಿದೆಯೇ?

ಹೌದು, 1978ರಿಂದೀಚೆಗೆ ಪ್ರತಿವರ್ಷವೂ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡುವುದೇ ಗೀತಾ ಹಾಗೂ ಸಂಜಯ್ ಚೋಪ್ರಾ ಹೆಸರಿನಲ್ಲಿ. ಅದೊಂದು ದುರಂತ ಕಥೆ. ದಿಲ್ಲಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗೀತಾ ಚೋಪ್ರಾ ಹಾಗೂ ಆಕೆಯ ಸಹೋದರ ಸಂಜಯ್ ಚೋಪ್ರಾ ಸೇನಾಧಿಕಾರಿಯೊಬ್ಬರ ಮಕ್ಕಳು. 1978ರ, ಸೆಪ್ಟೆಂಬರ್ 26ರಂದು ಇದ್ದಕ್ಕಿದ್ದಂತೆಯೇ ಕಾಣೆಯಾದ ಈ ಅಕ್ಕ-ತಮ್ಮ ಮೂರು ದಿನಗಳು ಕಳೆದರೂ ಮನೆಗೆ ಹಿಂದಿರುಗಲಿಲ್ಲ. ಗಾಬರಿಯಾದ ತಂದೆ ಠಾಣೆಗೆ ದೂರು ನೀಡಿದರು. ಕೂಡಲೇ ಶೋಧನಾ ಕಾರ್ಯ ಪ್ರಾರಂಭವಾಯಿತು. ಆದರೆ ಸೆಪ್ಟೆಂಬರ್ 29ರಂದು ಪತ್ತೆಯಾದಾಗ ಅವರಿಬ್ಬರೂ ಹೆಣವಾಗಿದ್ದರು. ಮೈತುಂಬ ಚೂರಿ ಇರಿತಗಳಾಗಿದ್ದವು. ಗೀತಾ ಚೋಪ್ರಾ ಅತ್ಯಾಚಾರಕ್ಕೊಳಗಾಗಿದ್ದಳು. ಅಕ್ಕನ ಮೇಲೆ ನಡೆದ ಅತ್ಯಾಚಾರಕ್ಕೆ ಸಾಕ್ಷಿಯಾಗಿದ್ದ ಸಂಜಯ್‌ನನ್ನೂ ಕೊಲೆ ಮಾಡಲಾಗಿತ್ತು.

ಈ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿತು. ರೊಚ್ಚಿಗೆದ್ದ ವಿದ್ಯಾರ್ಥಿಗಳು ದಿಲ್ಲಿಯಲ್ಲಿ ಬೀದಿಗಿಳಿದರು. ವಾರ ಕಳೆದರೂ ವಿದ್ಯಾರ್ಥಿಗಳ ಪ್ರತಿಭಟನೆ ನಿಲ್ಲಲಿಲ್ಲ. ದಿಕ್ಕೆಟ್ಟ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಕಾರ್ಯಪ್ರವೃತ್ತರಾಗಲೇಬೇಕಾಯಿತು. ಕೊನೆಗೂ ಅತ್ಯಾಚಾರ ಹಾಗೂ ಕೊಲೆಯಂತಹ ಹೀನ ಅಪರಾಧವೆಸಗಿದ್ದ ಕುಖ್ಯಾತ ಕ್ರಿಮಿನಲ್‌ಗಳಾದ ರಂಗ ಮತ್ತು ಬಿಲ್ಲನನ್ನು ಬಂಧಿಸಲಾಯಿತು. ಅದುವರೆಗೂ ನ್ಯಾಯಾಂಗದ ಇತಿಹಾಸದಲ್ಲೇ ಕಂಡು ಕೇಳರಿಯದ ವೇಗದಲ್ಲಿ ನ್ಯಾಯಾಂಗದ ತೀರ್ಪೂ ಹೊರಬಿತ್ತು. 1979, ಏಪ್ರಿಲ್ 7ರಂದು ರಂಗ-ಬಿಲ್ಲನಿಗೆ ಮರಣದಂಡನೆ ವಿಧಿಸಲಾಯಿತು. ಇದಾಗಿ ಮೂರು ವರ್ಷಗಳಲ್ಲೇ ಅಂದರೆ 1982ರಲ್ಲಿ ಗಲ್ಲಿಗೂ ಏರಿಸಲಾಯಿತು.

ಅಷ್ಟಕ್ಕೂ, ವಿದ್ಯಾರ್ಥಿಗಳ ಶಕ್ತಿ ಹಾಗಿತ್ತು! ಈ ಹಿಂದೆ ಯಾವುದೋ ಒಂದು ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರು. ಅಮಾಯಕ ಮಹಿಳೆಯ ಮೇಲೆ ಅತ್ಯಾಚಾರವಾದರೆ ಗಲಾಟೆ ಮಾಡುತ್ತಿದ್ದರು. ಕಾಲೇಜು ಬಿಟ್ಟು ಬೀದಿಗೆ ಇಳಿದು ಹೋರಾಡುತ್ತಿದ್ದರು. ಅಷ್ಟೇಕೆ, ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಗೆ ಉಗ್ರರೂಪ ನೀಡಿದ್ದೇ ವಿದ್ಯಾರ್ಥಿಗಳು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್‌ಸಿಂಗ್ ಮುಂತಾದ ಕ್ರಾಂತಿಕಾರಿಗಳು, ಸುಭಾಷ್‌ಚಂದ್ರ ಬೋಸ್ ಅವರಂತಹ ವೀರಾಗ್ರಣಿಗಳು ಹೊರಹೊಮ್ಮಿದ್ದೂ ಶಾಲಾ ಕಾಲೇಜುಗಳಿಂದಲೇ. ವಿನೋಬಾ ಭಾವೆಯವರ ಭೂದಾನ, ಜೆಪಿ ಚಳವಳಿ, ತುರ್ತು ಪರಿಸ್ಥಿತಿ ಈ ಎಲ್ಲ ಸಂದರ್ಭಗಳಲ್ಲೂ ಎದ್ದುಕಾಣುತ್ತಿದ್ದುದು ವಿದ್ಯಾರ್ಥಿಗಳೇ. ಈಗಿನ ರಾಜಕಾರಣಿಗಳಾದ ನಿತೀಶ್ ಕುಮಾರ್, ರಾಜ್‌ನಾಥ್‌ಸಿಂಗ್ ಮುಂತಾದವರು ವಿದ್ಯಾರ್ಥಿ ದೆಸೆಯಲ್ಲಿ ತುರ್ತುಪರಿಸ್ಥಿತಿಯ ವಿರುದ್ಧ ಧ್ವನಿಯೆತ್ತಿ ಜೈಲು ಸೇರಿದ್ದರು. ಅರುಣ್ ಜೇಟ್ಲಿ, ಸೀತಾರಾಮ್ ಯೆಚೂರಿ ಮುಂತಾದವರು ದಿಲ್ಲಿಯ ಜವಾಹರಲಾಲ್ ನೆಹರು ವಿವಿಯ ಪ್ರತಿಷ್ಠಿತ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದವರಾದರೆ, ಪ್ರಫುಲ್ಲ ಕುಮಾರ್ ಮಹಂತ ಅವರಂತೂ ವಿದ್ಯಾರ್ಥಿ ಸಂಘಟನೆ ಮೂಲಕ ಮುಖ್ಯಮಂತ್ರಿ ಗಾದಿಯನ್ನೇ ಏರಿದರು. ಹೀಗೆ ವಿದ್ಯಾರ್ಥಿಗಳೇ ಭವಿಷ್ಯದ ನಾಯಕರಾಗಿ ಹೊರಹೊಮ್ಮುತ್ತಿದ್ದರು. ವಿದ್ಯಾರ್ಥಿ ಸಂಘಟನೆ, ಹೋರಾಟಗಳ ಮೂಲಕ ಸಮಾಜಕ್ಕೆ ಉತ್ತಮ ನಾಯಕರು ದೊರೆಯುತ್ತಿದ್ದರು.

ಆದರೆ ಈಗೇನಾಗುತ್ತಿದೆ? ಅಂದು ಸಮಾಜದಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧ ಬೀದಿಗಿಳಿಯುತ್ತಿದ್ದ ವಿದ್ಯಾರ್ಥಿಗಳು ಇಂದು ಸ್ವಂತ ಸಹಪಾಠಿಗೆ ಅನ್ಯಾಯವಾಗುತ್ತಿದ್ದರೂ ಏಕೆ ಪ್ರತಿಭಟಿಸುತ್ತಿಲ್ಲ? ಅಂದೂ ವಿದ್ಯಾರ್ಥಿ ಸಂಘಟನೆಗಳಿದ್ದವು ಇಂದೂ ಇವೆ. ಆದರೆ ಅದು ಎಬಿವಿಪಿ, ಎಸ್‌ಎಫ್‌ಐ, ಡಿವೈಎಫ್‌ಐ, ಎನ್‌ಎಸ್‌ಯುಐ ಅಥವಾ ಯಾವುದೇ ವಿದ್ಯಾರ್ಥಿ ಸಂಘಟನೆಗಳಿರಬಹುದು ಎಲ್ಲವೂ ಒಂದೊಂದು ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಂಡಿವೆ ಹಾಗೂ ಅವು ಕೂಡ ರಾಜಕೀಯ ಪಕ್ಷಗಳಂತೆಯೇ ವರ್ತಿಸುತ್ತವೆ. ಉದಾಹರಣೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಂತಹ ಘೋರ ಅನ್ಯಾಯ ನಡೆದರೂ ಎನ್‌ಎಸ್‌ಯುಐ ಆಳುವ ಪಕ್ಷದ ವಿರುದ್ಧ ಗಟ್ಟಿಯಾಗಿ ಪ್ರತಿಭಟಿಸುವುದಿಲ್ಲ. ಸಿಇಟಿ ಸೀಟು ಹಂಚಿಕೆ ವಿಷಯದಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಅನ್ಯಾಯವಾಗಿದ್ದೇ ಡಿ.ಎಚ್. ಶಂಕರಮೂರ್ತಿ ಉನ್ನತ ಶಿಕ್ಷಣ ಸಚಿವರಾಗಿದ್ದಾಗ. ಆದರೂ ವಿದ್ಯಾರ್ಥಿಗಳ ಪರವಾಗಿ ಪ್ರಾಮಾಣಿಕವಾಗಿ ಹೋರಾಡುತ್ತಾ ಬಂದಿರುವ ಎಬಿವಿಪಿ, ಶಂಕರಮೂರ್ತಿಯವರ ನೀತಿ ವಿರುದ್ಧ ಪರಿಣಾಮಕಾರಿಯಾದ ಪ್ರತಿಭಟನೆಯನ್ನೇ ನಡೆಸಲಿಲ್ಲ. ಇನ್ನು ಎಸ್‌ಎಫ್‌ಐ ಹಾಗೂ ಡಿವೈಎಫ್‌ಐಗಳಂತೂ ಕಮ್ಯುನಿಸ್ಟರು ಅಧಿಕಾರದಲ್ಲಿಲ್ಲದ ರಾಜ್ಯಗಳ ಲ್ಲಷ್ಟೇ ಬೊಬ್ಬೆ ಹಾಕುತ್ತಾರೆ! ಹೀಗೆ ಒಂದೊಂದು ವಿದ್ಯಾರ್ಥಿ ಸಂಘಟನೆಗಳು ಒಂದೊಂದು ಪಕ್ಷಕ್ಕೆ ಸೇರಿದ್ದು ತಮ್ಮದೇ ಸರಕಾರವಿದ್ದರೆ ಮುಜುಗರ ಮಾಡಬಾರದು ಎಂದು ತೆಪ್ಪಗಾಗುತ್ತವೆ. ಒಂದು ವೇಳೆ ಪ್ರತಿಭಟನೆಗೆ ಮುಂದಾದರೂ, ವಿಷಯ ಹಾಗೂ ಉದ್ದೇಶ ಒಂದೇ ಆಗಿದ್ದರೂ ಒಂದೇ ದಿನ ಬಂದ್‌ಗೆ ಕರೆ ಕೊಡುವುದಿಲ್ಲ. ಇವತ್ತು ಎಬಿವಿಪಿ ಬಂದ್‌ಗೆ ಕರೆಕೊಟ್ಟರೆ, ಒಂದೆರಡು ದಿನ, ವಾರಗಳ ನಂತರ ಎಸ್‌ಎಫ್‌ಐನವರು ಕೆಂಪು ಬಾವುಟ ಹಿಡಿದು ರಸ್ತೆ ತಡೆ ಮಾಡುತ್ತಾರೆ! ಹೀಗೆ ವಿದ್ಯಾರ್ಥಿ ಹಂತದಲ್ಲೇ ಸಿದ್ಧಾಂತಗಳ ಬೇಲಿ ಹಾಕಿಕೊಂಡರೆ ಇವರಿಂದ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯ?

ಸಮಸ್ಯೆ ಇಷ್ಟಕ್ಕೇ ನಿಲ್ಲುವುದಿಲ್ಲ. ಸರಕಾರ ಹಿಂದುಳಿದ ಜಾತಿ/ವರ್ಗ ಹಾಗೂ ಅಲ್ಪ ಸಂಖ್ಯಾತರಿಗೆ ಎಲ್ಲೆಡೆಯೂ ಮೀಸಲು ಸೌಲಭ್ಯ ಕಲ್ಪಿ ಸಿದ್ದು, ಉನ್ನತ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳ ಬೋಧಕ ವರ್ಗದ ಆಯ್ಕೆಯಲ್ಲೂ ಮೀಸಲಿದೆ. ಆದರೆ ಮೀಸಲು ಸೌಲಭ್ಯ ನೀಡಿರುವುದು ಸಮಾಜದಲ್ಲಿ ತುಳಿತ ಕ್ಕೊಳಗಾದವರ ಶ್ರೇಯೋಭಿವೃದ್ಧಿಗಾಗಿಯೇ ಹೊರತು, ಜಾತಿ ರಾಜಕಾರಣ ಮಾಡುವುದಕ್ಕಲ್ಲ. ದುರದೃಷ್ಟವಶಾತ್, ಇಂದು ವಿಶ್ವವಿದ್ಯಾಲಯಗಳೂ ಜಾತಿ ರಾಜಕಾರಣದ ಸುಳಿಗೆ ಸಿಲುಕಿವೆ. ಯಾವುದಾದರೂ ಒಬ್ಬ ವಿದ್ಯಾರ್ಥಿಗೆ ತೊಂದರೆಯಾಗಿದೆಯೆಂದರೆ ಆ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಯಾವ ಜಾತಿಗೆ ಸೇರಿದವರು, ಕಿರುಕುಳ ಕೊಟ್ಟ ಪ್ರೊಫೆಸರ್ ಯಾವ ಜಾತಿಯವರು ಎಂಬುದರ ಮೇಲೆ ಮುಂದಿನ ಕ್ರಮ, ಹೋರಾಟ, ಪ್ರತಿಭಟನೆಗಳು ನಿರ್ಧಾರವಾಗುತ್ತವೆ.

ಪಿಎಚ್‌ಡಿಗೆ ಸೇರುವಾಗಲೂ ಗೈಡ್ ಯಾವ ಜಾತಿಯವರು, ನಮ್ಮ ಜಾತಿಯವರೇ ಆದರೆ ಅನುಕೂಲ ಅಂತ ಅಂದುಕೊಳ್ಳುವಂತಹ ವಾತಾವರಣವೂ ವಿವಿಗಳಲ್ಲಿದೆ. ಆದರೆ ಆರ್ಟ್ಸ್ ಸಬ್ಜೆಕ್ಟ್‌ಗಳನ್ನು "humanities" ಅಥವಾ 'ಮಾನವಿಕ" ವಿಷಯಗಳೆನ್ನುತ್ತಾರೆ. ಈ ವಿಷಯಗಳು ಸಮಾಜಕ್ಕೆ ಸಂಬಂಧಿಸಿದವು. ಅವುಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವುದು ಬೋಧಕರ ಕರ್ತವ್ಯ. ಅಂದರೆ, ಉದಾಹರಣೆಗೆ ಇತಿಹಾಸ, ಪತ್ರಿಕೋದ್ಯಮ, ಆಂಥ್ರೊಪಾಲಜಿ ಅಥವಾ ಸೋಷಿಯಾಲಜಿಯನ್ನು ಬೋಧಿಸುವವರು ನಮ್ಮ ಸಮಾಜವನ್ನು ಬಹುವಾಗಿ ಕಾಡಿದ, ಇಂದಿಗೂ ಕಾಡುತ್ತಿರುವ ವರ್ಣವ್ಯವಸ್ಥೆಯ ಹುಟ್ಟು, ಅದನ್ನು ಕೆಲವು ವ್ಯಕ್ತಿಗಳು ಹೇಗೆ ದುರುಪಯೋಗಪಡಿಸಿಕೊಂಡು ಸಮಾಜವನ್ನು ಒಡೆದರು ಎಂಬುದರ ಬಗ್ಗೆ ತಿಳಿ ಹೇಳುವ ಮೂಲಕ ನಾವೆಲ್ಲಾ ಒಂದೇ(oneness), ನಮ್ಮ ಮಧ್ಯೆ ಮೇಲು-ಕೀಳೆಂಬ ಯಾವ ವ್ಯತ್ಯಾಸವೂ ಇಲ್ಲ ಎಂಬ ಭಾವನೆಯನ್ನು ಮೂಡಿಸಬೇಕು. ಆದರೆ ಕ್ಲಾಸ್ ರೂಮ್‌ಗಳಲ್ಲಿ ನಿಂತು ಜಾತಿ ನಿಂದನೆ ಮಾಡುವ, ಮೇಲ್ಜಾತಿಯವರನ್ನೆಲ್ಲಾ ದುರುಳರು ಅಂತ ತೆಗಳುವ, ಸಿದ್ಧಾಂತಗಳ ಹೆಸರಿನಲ್ಲಿ ದಾರಿ ತಪ್ಪಿಸುವ, ಮಠಗಳನ್ನು, ಮಠಾಧೀಶರನ್ನು ಟೀಕಿಸುವ ಕಾರ್ಯಗಳೇ ಹೆಚ್ಚಾಗಿ ಕಾಣುತ್ತಿವೆ. ಇವುಗಳಿಂದ ಜಾತೀಯತೆ ಮತ್ತಷ್ಟು ಗಟ್ಟಿ ಗೊಳ್ಳುತ್ತದೆ. ಸಮಾಜ ಮತ್ತೂ ಒಡೆಯುತ್ತದಷ್ಟೇ.

ಇತ್ತ ವಿದ್ಯಾರ್ಥಿಗಳಾದ ನಾವೇನು ಮಾಡುತ್ತಿದ್ದೇವೆ? ಪ್ರತಿ ಕಾಲೇಜುಗಳಲ್ಲೂ ಶೈಕ್ಷಣಿಕ ವರ್ಷ ಪ್ರಾರಂಭವಾದ ಕೂಡಲೇ ಹೊಸ ವಿದ್ಯಾರ್ಥಿ ಸಂಘ, ಒಕ್ಕೂಟಗಳ ರಚನೆಗಾಗಿ ಚುನಾವಣೆ ನಡೆಯುತ್ತದೆ. ಅದರಲ್ಲೂ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಗಳಿಗೆ ಭಾರೀ ಸ್ಪರ್ಧೆ ಏರ್ಪಡುತ್ತದೆ. ಸಾರ್ವತ್ರಿಕ ಚುನಾವಣೆಗಳಂತೆಯೇ ಕಾಲೇಜು ಚುನಾವಣೆಗಳಲ್ಲೂ ಅಭ್ಯರ್ಥಿಗಳು ಭಾರೀ 'ಇನ್ವೆಸ್ಟ್‌ಮೆಂಟ್!" ಮಾಡುತ್ತಾರೆ. ಬೆಂಬಲಿಗರಿಗೆ 'ಗುಂಡು" ಪಾರ್ಟಿಯನ್ನೂ ನೀಡುತ್ತಾರೆ. ಅಷ್ಟಕ್ಕೂ ಗೆದ್ದ ನಂತರ 'ಇವೆಂಟ್ ಮೇನೇಜ್‌ಮೆಂಟ್", 'ಕಾಲೇಜ್ ಫೆಸ್ಟ್" ಅಂತ ಆಗಾಗ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಹುದು. ಆ ಕಾರ್ಯಕ್ರಮಗಳಿಗೆ ಪ್ರಾಯೋಜಕರನ್ನು ಹುಡುಕಿ ದೇಣಿಗೆ ಎತ್ತುತ್ತಾರೆ. ನಾಲ್ಕೈದು ಲಕ್ಷ ಹಣ ಸಂಗ್ರಹಿಸಿ ಒಂದೆರಡು ಲಕ್ಷ ವೆಚ್ಚ ಮಾಡಿ ಉಳಿದಿದ್ದನ್ನು ಕಿಸೆಗಿಳಿಸಿಕೊಳ್ಳುತ್ತಾರೆ! ಅಂದರೆ ನಾಳಿನ ನಾಯಕರಾಗಬೇಕಾದವರು ವಿದ್ಯಾರ್ಥಿ ಹಂತದಲ್ಲೇ ಭ್ರಷ್ಟರಾಗುತ್ತಿದ್ದಾರೆ. ಹಾಗಾಗಿ ತನ್ನ ಸಹಪಾಠಿಗೆ ತೊಂದರೆಯಾಗುತ್ತಿದ್ದರೂ, 'ಸದ್ಯ ನನಗೇನೂ ತೊಂದರೆಯಾಗಿಲ್ಲ" ಅಂತ ಮೌನವಹಿಸುವ, ಕಣ್ಣೆದುರೇ ದೌರ್ಜನ್ಯ ನಡೆಯುತ್ತಿದ್ದರೂ ತೆಪ್ಪಗಿರುವ ಪ್ರವೃತ್ತಿ ಕಂಡುಬರುತ್ತಿದೆ.

ಹೀಗೆ ನಮ್ಮಲ್ಲೇ ಹುಳುಕುಗಳಿರುವಾಗ ದೂರುವುದು ಯಾರನ್ನು? ಶಿಕ್ಷಣ ಅಂದರೆ ಲಕ್ಷ ಲಕ್ಷ ಗುಮಾಸ್ತರು, ಇಂಜಿನಿಯರ್, ಡಾಕ್ಟರ್‌ಗಳನ್ನು ಸೃಷ್ಟಿಸುವ ಪ್ರಕ್ರಿಯೆಯಲ್ಲ, ಶಿಕ್ಷಣದ ಮೂಲ ಆಶಯ ಉದ್ಯೋಗ ಪಡೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದೂ ಅಲ್ಲ. ಅದು ನಮ್ಮ ಬುದ್ಧಿಯನ್ನು ವಿಕಸಿತಗೊಳಿಸಬೇಕು. ನಮ್ಮೊಳಗೆ ಮಾನವೀಯ ಮೌಲ್ಯಗಳನ್ನು ತುಂಬಬೇಕು. ಆದರೆ ನಮ್ಮ ಸಹಪಾಠಿಗೆ ತೊಂದರೆಯಾಗುತ್ತಿದ್ದರೂ ಸ್ಪಂದಿಸದೇ ಇದ್ದರೆ, ಆಕೆಯ ಮನಸ್ಸಿನಲ್ಲಿರುವ ತುಡಿತಗಳನ್ನು ಅರ್ಥ ಮಾಡಿಕೊಳ್ಳಲಾಗದಿದ್ದರೆ ನಾವು ಕಲಿಯುತ್ತಿರುವ ವಿದ್ಯೆಯಿಂದೇನು ಪ್ರಯೋಜನ? ಯಾವುದೋ ವಿದ್ಯಾರ್ಥಿನಿಗೆ ತೊಂದರೆಯಾಗುತ್ತಿದೆ, ಕಿರುಕುಳವಾಗುತ್ತಿದೆ ಎಂದರೆ ಆಕೆಯ ಸಹಾಯಕ್ಕೆ ಬರಬೇಕಾದವರು ಯಾರು? ಯಹೂದಿಗಳನ್ನು ರಕ್ಷಿಸುವುದಕ್ಕಾಗಿ ದೇವರು ಮೋಸೆಸ್‌ನನ್ನು ಕಳುಹಿಸಿದಂತೆ ನಮ್ಮ ರಕ್ಷಣೆಗೂ ಯಾರಾದರೂ ಅವತರಿಸಿ ಬರಲಿ ಎಂದು ಕಾದು ಕುಳಿತುಕೊಳ್ಳುವುದಕ್ಕಾಗುವುದಿಲ್ಲ. ನಾವೇ ಹೋರಾಡಬೇಕು.

ಹಾಗೆ ಹೋರಾಡಬೇಕಾದರೆ ನಮ್ಮಲ್ಲಿ ಒಗ್ಗಟ್ಟು, ಪರಸ್ಪರ ಸಂವೇದನೆ ಒಡಮೂಡಬೇಕು. ಅಷ್ಟಕ್ಕೂ, ಪದವಿಗಳೆಂದರೆ ಮಾರ್ಕ್ಸ್‌ಗೋಸ್ಕರ ಮಾಡುವ ಕಸರತ್ತುಗಳಲ್ಲ, ಮೌಲ್ಯ-ನೀತಿ ಸಂಹಿತೆಗಳೆಂದರೆ ಬರೀ ಓದುವುದಕ್ಕಷ್ಟೇ ಅಲ್ಲ, ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಶಿಕ್ಷಣ ನಮ್ಮನ್ನು ಪರಿಪಕ್ವಗೊಳಿಸಲು, ನಮ್ಮಲ್ಲಿ ಹೋರಾಟ ಮನೋಭಾವನೆಯನ್ನು ತುಂಬಲು ಸಾಧ್ಯ. ಅದು ನಮ್ಮ ಆತ್ಮಸ್ಥೈರ್ಯವನ್ನು ಗಟ್ಟಿಗೊಳಿಸಬೇಕು. ನಮ್ಮನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿಸಬೇಕು. ಅದೇ ಶಿಕ್ಷಣದ ಒಳಾರ್ಥ, ನಿಜಾರ್ಥ. ಅಂತಹ ಹೋರಾಟ ಮನೋಭಾವನೆ, ಗಟ್ಟಿತನ ನಮ್ಮಲ್ಲಿ ಬೆಳೆದಾಗ ಪ್ರೊಫೆಸರ್‌ಗಳ ಲೈಂಗಿಕ ಕಿರುಕುಳದಂತಹ ಕ್ಷುಲ್ಲಕ ಒತ್ತಡಗಳಿಗೆ ಮಣಿಯುವ ಅಗತ್ಯ ಬರುವುದಿಲ್ಲ.

ಅಷ್ಟಕ್ಕೂ ಇಲ್ಲಿ ಲೆಕ್ಚರರ್‌ರದ್ದು ತಪ್ಪು ಅಥವಾ ವಿದ್ಯಾರ್ಥಿ ಗಳದ್ದು ತಪ್ಪು ಅಂತ ಪ್ರತ್ಯೇಕಿಸಲು ಸಾಧ್ಯವಿಲ್ಲ. ಅದು ಉಪನ್ಯಾಸಕನಿರಬಹುದು, ಪ್ರೊಫೆಸರ್ ಇರಬಹುದು, ಅವರೂ ಕೂಡ ಜೀವನದ ಒಂದು ಘಟ್ಟದಲ್ಲಿ ವಿದ್ಯಾರ್ಥಿಗಳಾಗಿಯೇ ಇರುತ್ತಾರೆ. ಆ ಘಟ್ಟದಲ್ಲಿ ಒಳ್ಳೆಯ ಮೌಲ್ಯ ಗಳನ್ನು ಮೈಗೂಡಿಸಿಕೊಂಡಿದ್ದರೆ, ಉತ್ತಮ ಸಂಸ್ಕಾರಗಳನ್ನು ಪಡೆದುಕೊಂಡಿದ್ದರೆ ಮುಂದೆ ಆತ ಖಂಡಿತ ಒಳ್ಳೆಯ ಉಪನ್ಯಾಸಕನಾಗುತ್ತಾನೆ. ಮಗಳ ವಯಸ್ಸಿನ ಶಿಷ್ಯೆಯನ್ನು ಕಾಮ ತುಂಬಿದ ಕಣ್ಣುಗಳಿಂದ ನೋಡುವುದಿಲ್ಲ. ಅಂದರೆ ವಿದ್ಯಾರ್ಥಿಗಳಾದ ನಾವು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಗುರುಗಳನ್ನು ನಾವೂ ಕೂಡ ಗುರುಗಳಾಗಿಯೇ ನೋಡಬೇಕು. ಹಾಗೆ ನೋಡಿದ್ದರೆ ಗುರುಗಳನ್ನೇ ವಿವಾಹವಾಗುವಂತಹ ಘಟನೆಗಳು ಸಂಭ ವಿಸುತ್ತಿರಲಿಲ್ಲ!

ಗುರುಗಳಿಗೆ ನಮ್ಮ ಮೇಲೆ ಕೆಟ್ಟ ಭಾವನೆ ಬರಲು ಕೆಲವೊಮ್ಮೆ ನಾವೇ ಆಸ್ಪದ ಮಾಡಿಕೊಡುತ್ತೇವೆ. ಅಷ್ಟಕ್ಕೂ ಸ್ಮಾರ್ಟ್ ಲೆಕ್ಚರರ್ ಮುಂದೆ ಆಗಾಗ್ಗೆ ಹಲ್ಲುಗಿಂಜಿ ಮಾರ್ಕ್ಸ್ ಹೆಚ್ಚು ಮಾಡಿಕೊಳ್ಳಲು ಮುಂದಾದರೆ, ಬಿಂದಾಸ್ ಆಗಿ ವರ್ತಿಸಿದರೆ, ಅಗತ್ಯಕ್ಕಿಂತ ಹೆಚ್ಚು ಹತ್ತಿರಕ್ಕೆ ಹೋದರೆ ಎಂತಹವರಿಗೂ 'ಕುರಿಯನ್ನು ಹಳ್ಳಕ್ಕೆ ಬೀಳಿಸಬಹುದು" ಎಂಬುದು ಮನವರಿಕೆಯಾಗುತ್ತದೆ. ಹಾಗಾಗಿ ಅಪ್ಪ-ಅಮ್ಮ ನಮ್ಮನ್ನೇಕೆ ಶಾಲೆ, ಕಾಲೇಜಿಗೆ ಕಳುಹಿಸುತ್ತಿದ್ದಾರೆ, ನಮ್ಮ ಜವಾಬ್ದಾರಿಗಳೇನು, ನಾವು ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬುದನ್ನು ಮೊದಲು ಅರಿತುಕೊಳ್ಳಬೇಕು.

ನಾವು ಎಳೆಯರು
ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದು ಸುಂದರ

ಎಂಬ ಶಂ.ಗು. ಬಿರಾದಾರ ಅವರ ಕವಿತೆಯಲ್ಲಿ ನಮಗೂ ಒಂದು ನೀತಿಪಾಠ ಇದೆಯಲ್ಲವೆ? ಅಷ್ಟಕ್ಕೂ, ಶಿಕ್ಷಣ ಅಂದರೆ ಗೋಲ್ಡ್ ಮೆಡಲ್ ತೆಗೆದುಕೊಳ್ಳುವುದಲ್ಲ, ಹೆಚ್ಚಿನ ಮಾರ್ಕ್ಸ್ ಗಳಿಸುವುದೂ ಅಲ್ಲ. ಐನ್‌ಸ್ಟೀನ್ ಹೇಳಿದಂತೆ- Education is what remains after one has forgotten what he has learnt in school!

(ಸ್ನೇಹಸೇತು :ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X