ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ರಂಗೋಲಿ ಹಾಕೀರಿ ಜೋಕೆ!

By Super
|
Google Oneindia Kannada News

Rangoli created in front of Subramanians house
ಮನೆ ಮುಂದೆ ಥಳಿ ಹೊಡೆದು ರಂಗೋಲಿ ಚಿತ್ತಾರ ಬಿಡಿಸುವುದು ಸೌಂದರ್ಯದ ಪ್ರತೀಕ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯ ವೈವಿಧ್ಯತೆಗೆ ಹಿಡಿದ ಕನ್ನಡಿ. ಹಬ್ಬ-ಹರಿದಿನ ಮುಂಜಿ-ಮದುವೆ ಇದ್ದಾಗಲಂತೂ ಚಪ್ಪರ, ರಂಗೋಲಿಯಿಲ್ಲದೆ ಸಮಾರಂಭ ಜರುಗುವುದಿಲ್ಲ. ರಸ್ತೆಪೂರ್ತಿ ರಂಗೋಲಿ ರಂಗು ತುಂಬಿದರೂ ಜನ ತಕರಾರೆತ್ತದೆ ಬದಿಗಡಿಯಿಟ್ಟು ರಂಗೋಲಿಯ ಸೌಂದರ್ಯವನ್ನು ಹೊಗಳುತ್ತ ಹೋಗುತ್ತಾರೆ. ಇದು ಭಾರತದಲ್ಲಿ. ಆದರೆ, ಅಮೆರಿಕಾದಲ್ಲಿ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನಿಲ್ಲದ ಮಹತ್ವ ನೀಡುವ ಅಮೆರಿಕಾದಲ್ಲಿ ಭಾರತೀಯರ ಧಾರ್ಮಿಕ ಆಚರಣೆಗಳಿದೆ ಎಷ್ಟು ಬೆಲೆ ಇದೆ?

* ಡಾ|| ಮೈ. ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

ಕಳೆದವಾರ ಡಿಸೆಂಬರ್ 8ರಂದು ವಾಷಿಂಗ್‌ಟನ್ ಪೋಸ್ಟಿನಲ್ಲಿ ಅಚ್ಚಾದ ಒಂದು ಸುದ್ದಿ ನನ್ನ ಕಣ್ಣು ತಪ್ಪಿ ಹೋಗಿತ್ತು, ಕಾರಣ ನಾನು ಊರಿನಲ್ಲಿರಲಿಲ್ಲ. ಸ್ನೇಹಿತರೊಬ್ಬರು ಅದರಬಗ್ಗೆ ನನ್ನ ಗಮನ ಸೆಳೆದರು. ಮನಸ್ಸಿನಲ್ಲಿ ಕೊಂಚ ಅಚ್ಚರಿ, ಅದಕ್ಕಿಂತ ಹೆಚ್ಚಾಗಿ ಆತಂಕ ತರಿಸುವ ಸುದ್ದಿ ಅದಾಗಿತ್ತು. ಅದು ನಡೆದದ್ದು ವರ್ಜೀನಿಯಾ ಪ್ರಾಂತ್ಯದ ಉತ್ತರಭಾಗದಲ್ಲಿ, ಅಂದರೆ ಅಮೇರಿಕದ ರಾಜಧಾನಿಯಾದ ವಾಷಿಂಗ್‌ಟನ್ ನಗರಕ್ಕೆ ಹತ್ತಿರವಾದ ಲೌಡನ್ ಜಿಲ್ಲೆಯಲ್ಲಿ. ಅನೇಕ ಭಾರತೀಯರು ಈ ಭಾಗದಲ್ಲಿ ಮನೆಗಳನ್ನು ಕೊಂಡು ನೆಲೆಸಿದ್ದಾರೆ. ಅವರಲ್ಲಿ ಒಬ್ಬಾತ, ದಕ್ಷಿಣಭಾರತದ ಕಡೆಯವ, ಹೆಸರು ಬಾಲಸುಬ್ರಮಣಿಯನ್. ಹೆಂಡತಿ ಭಾರತಿ, ಇಬ್ಬರು ಗಂಡು ಮಕ್ಕಳು. ಅವರ ಪೈಕಿ ಹದಿನಾಲ್ಕು ವಯಸ್ಸಿನ ಮಗ ಮುಕುಂದನಿಗೆ ಉಪನಯನ ಮಾಡಲು ನಿರ್ಧರಿಸಿ ಅದಕ್ಕೆ ಬೇಕಾದ ತಯಾರಿಯಲ್ಲಿ ತಂದೆತಾಯಿಗಳು ತೊಡಗಿದರು. ಬಾಲಸುಬ್ರಮಣಿಯನ್, ಮನೆಗಳನ್ನು ಕೊಳ್ಳಬೇಕಾದವರಿಗೆ ಮತ್ತು ಮಾರಬೇಕಾದವರಿಗೆ ಏಜೆಂಟಾಗಿ ದುಡಿಯುವ ರಿಯಲ್ಟರ್. ಮನೆಯೊಳಗೆ ಕರ್ಮಠ ಬ್ರಾಹ್ಮಣ. ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಮನೆಯಲ್ಲಿ ಏರ್ಪಡಿಸಿ ಆಗಾಗ ತನ್ನ ಇಷ್ಟಮಿತ್ರರೊಂದಿಗೆ ಭೋಜನಕೂಟಗಳನ್ನು ಏರ್ಪಡಿಸುವ ಈ ದಂಪತಿಗಳಿಗೆ ಈ ಮುಂಜಿಯೊಂದು ದೊಡ್ದದೇನಲ್ಲ. ಅದಕ್ಕೆ ತಕ್ಕಂತೆ ಎಲ್ಲಾ ಏರ್ಪಾಟುಗಳನ್ನೂ ಮಾಡಿಕೊಂಡು ಮನೆಯ ಹಿಂಭಾಗದಲ್ಲಿ ದೊಡ್ಡ ಶಾಮಿಯಾನ ಹಾಕಿಸಿ ನೂರಿನ್ನೂರು ಅತಿಥಿಗಳಿಗೆ ಭೋಜನವನ್ನೂ ಏರ್ಪಡಿಸಿದರು. ಎಲ್ಲಾ ಸುಗಮವಾಗೇ ನಡೆಯಿತಂತೆ.

ಏನು ಇದರಲ್ಲಿ ವಿಶೇಷ? ಇತ್ತೀಚೆಗೆ ಪಶ್ಚಿಮಗೋಳದ ಈ ಭೂಭಾಗದಲ್ಲಿ ನಡೆಯುವ ಹಬ್ಬ ಹರಿದಿನಗಳು ಯಜ್ಞ-ಯಾಗಾದಿಗಳು ಭಾರತದ ಅತಿ ಕರ್ಮನಿಷ್ಠ ಊರುಕೇರಿಗಳಲ್ಲೂ ನಡೆಯದಷ್ಟು ವಿಜೃಂಭಣೆಯಿಂದ ನಡೆಯುತ್ತವೆ. ಇಂಥಾ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಯಾವ ಕೊರತೆಯೂ ಇಲ್ಲದಂತೆ ಚಾಚೂ ತಪ್ಪದಂತೆ ಯಾಗಸಂಹಿತೆಗಳಲ್ಲಿ ಬರೆದಿರುವ ಪ್ರಕಾರವೇ ನಡೆಸಿಕೊಡಲು ಆ ವೃತ್ತಿಯಲ್ಲಿ ಪಳಗಿದ ಪುರೋಹಿತರು ಇಲ್ಲಿ ಈಗ ನೆಲೆಸಿದ್ದಾರೆ. ದೇವಸ್ಥಾನಗಳಲ್ಲಿ ತಕ್ಕ ಶುಲ್ಕ ಕೊಟ್ಟರೆ ಪುರೋಹಿತರು ಸಿಕ್ಕುತ್ತಾರೆ. ಅದಕ್ಕಿಂತ ಒಂದಿಷ್ಟು ಹೆಚ್ಚು ಶುಲ್ಕ ಕೊಡುವ ಶಕ್ತಿಯಿದ್ದವರಿಗೆ ಮನೆಯಲ್ಲೇ ಬಂದು ನಡೆಸಿಕೊಡುವ ಪ್ರೈವೇಟ್ ಪ್ರ್ಯಾಕ್ಟೀಸ್' ಮಾಡುವ ಪುರೋಹಿತರೂ ಇಲ್ಲಿ ನೆಲೆಸಿದ್ದಾರೆ. ಮೊನ್ನೆ ಮೊನ್ನೆ ಇಂಥಾ ಒಂದು ವೈಭವೋಪೇತ ಷಷ್ಟ್ಯಬ್ಧಿಯನ್ನು ಕಣ್ಣಾರೆ ಕಂಡಿದ್ದಷ್ಟೇ ಅಲ್ಲ, ಹತ್ತಿರದಿಂದ ಭಾಗವಹಿಸುವ ಯೋಗವೂ ನನಗೆ ಒದಗಿತ್ತು. ಯಾವ ಕಾರಣದಿಂದ ಹೇಳುತ್ತಿದ್ದೇನೆಂದರೆ ಉಪನಯನ ಮುಂತಾದ ಶುಭಕಾರ್ಯಗಳನ್ನು ಕ್ರಮಬದ್ಧವಾಗಿ ನಡೆಸುವುದು ಇಂದು ಈ ದೇಶದಲ್ಲಿ ಸಾಧ್ಯ (ಮನಸ್ಸಿದ್ದವರಿಗೆ) ಎಂಬ ವಿಷಯವನ್ನು ಮನದಟ್ಟುಮಾಡಲು. ಅದಿರಲಿ, ನಾನು ಹೇಳ ಹೊರಟಿದ್ದು ನಮ್ಮ ಬಾಲಸುಬ್ರಮಣಿಯನ ಸುಪುತ್ರ, ಮುಕುಂದನ ಉಪನಯನದ ಬಗ್ಗೆ.

ಉಪನಯನಕ್ಕೆ ಬರುವ ಎಲ್ಲಾ ಅತಿಥಿಗಳಿಗಾಗಿ ಶಾಮಿಯಾನ ಸಿದ್ಧವಾಗಿತ್ತು ಎಂದು ಮೊದಲೇ ತಿಳಿಸಿದ್ದೇನೆ. ಅತಿಥಿಗಳನ್ನು ಸ್ವಾಗತಿಸಲು ಮನೆಯ ಯಜಮಾನತಿ ಒಂದು ಒಳ್ಳೆಯ ರಂಗೋಲಿಯನ್ನು ಮನೆಯಮುಂದೆ ಹಾಕಬೇಕೆಂದು ಯೋಚಿಸಿ, ಕೂಡಲೇ ಕಾರ್ಯತತ್ಪರರಾದರು. ಮನೆಯಲ್ಲಿ ಹೊಸಲು ಇಲ್ಲವಾದ್ದರಿಂದ ಮೆಟ್ಟಿಲು ಮತ್ತೆ ಅದರಮುಂದಿನ ಭಾಗ ಎಲ್ಲವನ್ನೂ ರಂಗೋಲಿಯಿಂದ ಅಲಂಕರಿಸಿದಮೇಲೂ ಭಾರತೀದೇವಿ ಅವರಿಗೆ ಮನಸ್ತೃಪ್ತಿ ಆಗಲಿಲ್ಲ. ಕೊನೆಗೆ ಅವರು ಈ ಒಂದು ಭವ್ಯವಾದ ಮನೆಯ ಮುಂದೆ, ಈ ಒಂದು ಜೀವನದಲ್ಲಿ ಒಂದೇ ಬಾರಿ ನಡೆಸುವ ಮಗನ ಉಪನಯನ ಕರ್ಮವನ್ನು ಯಾವಾಗಲೂ ನೆನಪಿನಲ್ಲಿಡುವಂತೆ ಒಂದು ಅತ್ಯುತ್ತಮವಾದ ನಮೂನೆಯ ಹೂವು ಎಲೆ ಬಳ್ಳಿಗಳಿಂದಕೂಡಿದ, ಜ್ಯಾಮಿತಿಯ ಎಲ್ಲಾ ಸೂತ್ರಗಳನ್ನೂ ಉಪಯೋಗಿಸಿಕೊಂಡು ವೃತ್ತ, ತ್ರಿಕೋಣ, ಸರಳ ರೇಖೆ ಮತ್ತು ವಕ್ರರೇಖೆಗಳನ್ನೊಳಗೊಂಡ ಸುಂದರವಾದ ರಂಗೋಲಿಯನ್ನು ಇಡೀ ಡ್ರೈವ್‌ವೇ (ಗರಾಜನ್ನು ಸೇರುವ ಮನೆಯ ಮುಂದಲ ದಾರಿ) ತುಂಬಿಸಿಬಿಟ್ಟಳಾ ತಾಯಿ. ನೋಡುಗರ ಕಣ್ಣು ಕೋರೈಸುವಂತಿದ್ದ ಈ ಕೋಲಮ್' (ತಮಿಳಿನಲ್ಲಿ ರಂಗೋಲಿ ಎನ್ನುವುದಕ್ಕೆ ಬಳಸುವ ಪದ ಅದು ಎಂದು ಬೇರೆ ಹೇಳಬೇಕಿಲ್ಲವಷ್ಟೆ!) ಅಕ್ಕಪಕ್ಕದ ಜನಸಮೂಹವನ್ನು ಆಕರ್ಷಿಸಿದ್ದು ಅನಿರೀಕ್ಷಿತವೇನಲ್ಲ.

ಸರಿ, ಮುಂಜಿಯೇನೋ ಮುಗಿಯಿತು, ಬ್ರಾಹ್ಮಣೋತ್ತಮರು ಉಂಡು, ತೃಪ್ತಿಯಿಂದ ದಕ್ಷಿಣೆ(ಮತ್ತು ಸಾಕಷ್ಟು ಶುಲ್ಕ)ಗಳೊಂದಿಗೆ ನಗುನಗುತ್ತ ವಟುವಿಗೆ ದೀರ್ಘಾಯುಷ್ಯವನ್ನು ಕೋರಿ ಹಿಂದಿರುಗಿದರು. ಬಂದ ನೆಂಟರೂ ಇಷ್ಟರೂ ಅವರವರ ಊರುಗಳಿಗೆ ಹಿಂದಿರುಗಿದರು. ಇದೇ ಊರಿನ ಮಿತ್ರರಂತೂ ಊಟವಾದೊಡನೆಯೇ ಹಿಂದಿರುಗಿದರು. ಮನೆಯ ಮುಂದಿನ ಚಪ್ಪರವೂ ಮಾಯವಾಯಿತು. ಗಲಾಟೆಯೆಲ್ಲಾ ಕಳೆಯಿತು. ತಂದೆ ತಾಯಿ ತಮ್ಮತಮ್ಮ ಕೆಲಸಗಳಲ್ಲಿ ನಿರತರಾದರು. ವಟು ಮತ್ತವನ ಸೋದರ ಶಾಲೆಯ ಓದಿನಲ್ಲಿ ನಿರತರಾದರು. ಇಂಥಾ ಮುಂಜಿಯೊಂದು ನಡೆಯಿತೆಂಬ ವಿಷಯ ಇತಿಹಾಸದ ಪುಟಗಳನ್ನು ಹೊಕ್ಕಿತು. ಮಗರಾಯ ಎಷ್ಟರ ಮಟ್ಟಿಗೆ ಸಂಧ್ಯಾವಂದನೆ ಮಾಡುತ್ತಿದ್ದಾನೋ ವರದಿಯಾಗಿಲ್ಲ. ಆ ವಿಷಯ ಹಾಗಿರಲಿ, ಆದರೆ, ನಮ್ಮೂರುಗಳಲ್ಲಿ ಮನೆಗಳ ಮುಂದೆ ಹಾಕುವ ರಂಗೋಲಿಗಳು ಜನರ ಓಡಾಟದಿಂದ ಅಥವಾ ಗಾಳಿ ಮಳೆಗಳ ಕಾರಣದಿಂದ ಅಳಿಸಿಹೋಗುವಂತೆ ಇಲ್ಲಿ ಆಗಲಿಲ್ಲ. ಭಾರತದಲ್ಲಾದರೆ, ದಿನಕ್ಕೊಂದು ಹೊಸ ಹೊಸ ಕೋಲಂ ಹಾಕಿ ಸಂತಸ ಪಡುವ ತಾಯಂದಿರು ಹೆಣ್ಣುಮಕ್ಕಳಿರುತ್ತಾರೆ. ಇಲ್ಲಿ ನಿತ್ಯ ಅಂಥಾ ಕೆಲಸಮಾಡಲಾಗುವುದಿಲ್ಲ, ಇಷ್ಟೆಲ್ಲಾ ಕಷ್ಟಪಟ್ಟು ಹಾಕಿದ ರಂಗೋಲಿಯ ದರ್ಶನಲಾಭ ಅನೇಕ ದಿನಗಳವರೆಗೆ ದೊರಕಲೆಂಬ ಸದ್ಬಾವನೆಯಿಂದ ನಮ್ಮ ಭಾರತೀದೇವಿ ರಂಗೋಲಿ ಪುಡಿಯ ಬದಲಿಗೆ ಒಳ್ಳೆಯ ಪೆಯಿಂಟನ್ನೇ ಬಳಸಿ ತಾತ್ಕಾಲಿಕತೆಯನ್ನು ತೊರೆದು ಆ ಚಿತ್ರಸೌಂದರ್ಯಕ್ಕೊಂದಿಷ್ಟು ದೀರ್ಘಾಯುವನ್ನೂ ಕೊಟ್ಟಿದ್ದರು. ಇದೇ ಸುದ್ದಿಯಾಗಲು ಮೂಲ!

ಈಗ, ಮನೆ ಮಾಲೀಕರ ಸಂಘ' ಎಂಬೊಂದು ಪರಿಕಲ್ಪನೆ ಗೊತ್ತುಂಟಲ್ಲ? ಅಂದರೆ, ಒಂದು ಬಡಾವಣೆಯಲ್ಲಿರುವ ಎಲ್ಲಾ ಮನೆಗಳ ಮಾಲೀಕರೂ ಸೇರಿಕೊಂಡು ಮಾಡಿಕೊಂಡ ಸಂಘ. ಇದಕ್ಕೆ ಸದಸ್ಯತ್ವ ಶುಲ್ಕವುಂಟು ಹಾಗು ಸದಸ್ಯತ್ವ ಕಡ್ಡಾಯ. ಮನೆಗೆ ಎಂಥಾ ಬಣ್ಣದ ಪೆಯಿಂಟ್ ಹೊಡೆಯಬಹುದು, ಮನೆಯ ಸುತ್ತಾ ಬೇಲಿ ಹಾಕಬಹುದೇ ಇಲ್ಲವೇ, ಹಾಕಿದರೆ ಎಂಥ ಬೇಲಿ ಹಾಕಬೇಕು, ಕಾರನ್ನು ಎಲ್ಲಿ ಪಾರ್ಕಿಸಬೇಕು, ಹುಲ್ಲನ್ನು ಎಷ್ಟು ಎತ್ತರ ಬಿಡಬೇಕು, ಎಷ್ಟುದಿನಗಳಿಗೊಮ್ಮೆ ಕತ್ತರಿಸಬೇಕು, ಇತ್ಯಾದಿ, ಇತ್ಯಾದಿ ವಿಷಯಗಳನ್ನು ನಿರ್ಣಯಮಾಡುವುದೇ ಈ ಸಂಘದ ಕೆಲಸ. ಸುತ್ತ ಮುತ್ತ ಮನೆಗಳೆಲ್ಲ ಚೆನ್ನಾಗಿಟ್ಟುಕೊಂಡರೇನೆ ಮನೆಗಳ ಬೆಲೆ ಏರುವುದು ಎಂಬ ಸದುದ್ದೇಶದಿಂದಲೇ ಕಟ್ಟಿಕೊಂಡ ಈ ಸಂಘ ಕೆಲವೊಮ್ಮೆ ಮೂಗು-ಬಾಯಿ ಅದುಮಿ ಕತ್ತು ಹಿಸುಕುವಷ್ಟು ಘೋರವಾದ ಲಗಾಮುಗಳನ್ನು ಹಾಕಿ ಹಿಂಸೆಮಾಡುತ್ತದೆ. ಅಂಥದೇ ಒಂದು ಕಟು ಅನುಭವ ನಮ್ಮ ಬಾಲಸುಬ್ರಮಣಿಯನಿಗೂ ಆಯಿತು. ಸಂಘದ ಇನ್ಸ್‌ಪೆಕ್ಟರ್ ಇಡೀ ಡ್ರೈವೇಯನ್ನು ಮುಚ್ಚಿಹಾಕಿದ್ದ ಈ ಬೃಹದಾಕಾರದ ರಂಗೋಲಿಯನ್ನು ನಿತ್ಯ ಬಂದು ನೋಡಿಹೋಗುತ್ತಿದ್ದ. ಅನೇಕ ದಿನಗಳಾದರೂ ಕರಗದೇ ಉಳಿದಿದ್ದ ಈ ಚಿತ್ರವನ್ನು ಅವನು ಸಹಿಸಿಕೊಳ್ಳಲಿಲ್ಲ. ಬಂತು, ಹೋಮ್ ಓನರ್ಸ್ ಅಸೋಸಿಯೇಶನ್ನಿನ ಒಂದು ನೋಟೀಸು. "ಎಲೈ, ಮನೆ ಮಾಲೀಕನೇ ಕೇಳು, ಇಂಥಾ ತಾರೀಖಿನೊಳಗೇ ನಿನ್ನೀ ವಿಚಿತ್ರಚಿತ್ರವನ್ನು ಅಳಿಸದಿದ್ದರೆ, ದಿನಕ್ಕೆ 10 ಡಾಲರ್ ದಂಡ ವಿಧಿಸಬೇಕೆಂದು ಸಂಘ ತೀರ್ಮಾನಿಸಿದೆ! ಆದಷ್ಟು ಬೇಗ ಅಳಿಸಿ ಹೆಚ್ಚಿನ ಜುಲ್ಮಾನೆಯನ್ನು ತಪ್ಪಿಸಿಕೋ" ಎಂದಿತ್ತು ಒಕ್ಕಣೆ.

ನಮ್ಮ ಸುಬ್ರಮಣಿ ಸುಮ್ಮನಿರುವ ಆಸಾಮಿಯೇನಲ್ಲ, ಆದರೆ ಈಗ ಸುಮ್ಮನೇ ಇದ್ದ. ಅಂದರೆ, ನೋಟೀಸನ್ನು ಉದಾಸೀನ ಮಾಡಿದ. ದಂಡ ಬೆಳೆಯುತ್ತ ಹೋಯಿತು. ಈಗ 900 ಡಾಲರ್ರನ್ನು ಮುಟ್ಟಿದೆಯಂತೆ. ಇನ್ನು ಸುಮ್ಮನಿರಲು ಸಾಧ್ಯವಿಲ್ಲ, ಸುಮ್ಮನಿರುವುದು ಸಾಧುವೂ ಅಲ್ಲ ಎನ್ನುತ್ತ, ಈತ ಸುತ್ತಮುತ್ತಲ ಜನರನ್ನು ಕಂಡು ಮಾತಾಡಿಸಿದ. "ಏನ್ರಪ್ಪ, ಈ ನನ್ನ ರಂಗೋಲಿಯಿಂದ ನಿಮ್ಮ ಕಣ್ಣಿಗೆ ತೊಂದರೆಯಾಗುತ್ತಿದೆಯೇ?ಎಂದು ಕೇಳಿದ. ಅನೇಕರು, ಇದು ಒಳ್ಳೆಯ ಚಿತ್ರವೇ, ಇದರಿಂದ ನಮಗೇನೂ ಅಭ್ಯಂತವಿಲ್ಲ ಎಂದೆಲ್ಲ ಸಹಿಮಾಡಿಕೊಟ್ಟರು. ಸಂಘ ಸೊಪ್ಪು ಹಾಕಲಿಲ್ಲ. ಸುಬ್ರಮಣಿ ಆಗ, "ಇದು ತಮ್ಮ ಧಾರ್ಮಿಕ ಸ್ವಾತಂತ್ರ್ಯದ ಪ್ರಶ್ನೆ, ಹಾಕಿದ ರಂಗೋಲಿಯನ್ನು ನಾವು ಅಳಿಸುವುದಿಲ್ಲ, ಅದು ತನ್ನಷ್ಟಕ್ಕೆ ತಾನೆ ಅಳಿಸಿಕೊಳ್ಳಬೇಕು, ಇದರಮೇಲೆ ಕರೀ ಡಾಮರ್ ಬಳಿದರೆ ಅದು ನಮ್ಮ ಧಾರ್ಮಿಕತೆಗೆ ಧಕ್ಕೆ ತರುತ್ತದೆ--" ಮುಂತಾಗೆಲ್ಲಾ ವಾದಿಸಿದರೂ ಆತ ಕೇಸಿನಲ್ಲಿ ಸೋತು ಹೋಗಿದ್ದಾನಂತೆ. ಹಲವಾರು ನಿಷ್ಪಕ್ಷಪಾತಿಗಳು, ರಂಗೋಲಿಯೂ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮನೆಗಳಮುಂದೆ ಮಾಡುವ ದೀಪಾಲಂಕಾರ, ಸ್ಯಾಂಟಾಕ್ಲಾಸ್‌ನ ಗೊಂಬೆ, ಕ್ರಿಸ್ಮಸ್ ವೃಕ್ಷ ಮುಂತಾದವುಗಳಂತೆ ಎಂದು ಈತನಿಗೆ ಸಮರ್ಥನೆ ನೀಡಿದ್ದಾರೆ. ಅವುಗಳನ್ನು ಸೈರಿಸಿಕೊಳ್ಳುವಂತೆ ಹಿಂದೂ ಒಬ್ಬನ ಮನೆಯಮುಂದೆ ರಂಗೋಲಿಯನ್ನೂ ಸೈರಿಸಿಕೊಳ್ಳಲು ಅಡ್ಡಿಯಿರಕೂಡದು ಎಂದು ವಾದಿಸಿದ್ದಾರೆ.

ವಾಕ್-ಸ್ವಾತಂತ್ರ್ಯ, ಅಭಿಪ್ರಾಯಸ್ವಾತಂತ್ರ್ಯ, ಅಭಿವ್ಯಕ್ತಿಸ್ವಾತಂತ್ರ್ಯ ಮುಂತಾಗಿ ಸ್ವಾತಂತ್ರ್ಯಕ್ಕೆ ಹೆಸರಾದ ಈ ನಾಡಿನಲ್ಲಿ ಇಂಥಾ ಒಂದು ಸಂದರ್ಭ ಒದಗಬಹುದೇ? ಇಷ್ಟೊಂದು ದೊಡ್ದದಾಗಿ ಇತರರ ಕಣ್ಣು ಕುಕ್ಕುವಂತೆ ಹೆಚ್ಚುಕಾಲ ಉಳಿಯಬಹುದಾದ ರಂಗೋಲಿ ಹಾಕಬಾರದಿತ್ತೇ? ನಮ್ಮ ಮನೆಯ ಮೆಟ್ಟಿಲ ಮೇಲೂ ಸುಲಭವಾಗಿ ಅಳಿಸಿಹೋಗದ ಬಿಳೀ ಸುಣ್ಣದ ರಂಗೋಲಿಯಿದೆ. ನಮ್ಮ ಮಾಲೀಕರ ಸಂಘದ ಕಣ್ಣು ಅದರಮೇಲೆ ಬೀಳಬಹುದೇ? ಹಾಗೆ ಬಿದ್ದು, ಅವರು ಅದನ್ನು ಅಳಿಸು ಎಂದು ಬಲಾತ್ಕರಿಸಿದರೆ ನಾವೇನು ಮಾಡಬೇಕು? ಮನೆಮುಂದೆ ನಮ್ಮಲ್ಲಿ ಕೆಲವರು ಹಾಕಿರುವ (ಪ್ಲ್ಯಾಸ್ಟಿಕ್) ತಳಿರು-ತೋರಣವನ್ನು ಕಿತ್ತುಹಾಕಿರೆಂದು ಬಲಾತ್ಕರಿಸಿದರೆ ಏನು ಮಾಡಬಹುದು? ಮುಂತಾದ ಯೋಚನೆಗಲ್ಲಿ ಮುಳುಗಿದ್ದೇನೆ. ನಮ್ಮ ಮಗಳ ಮದುವೆಯಲ್ಲಿ ಮನೆಯ ಮುಂದೆ ಸಣ್ಣ ಚಪ್ಪರವೊಂದನ್ನು ಹಾಕಿದ್ದೆವು, ಅಕ್ಕಪಕ್ಕದವರು ಬಂದು ಅದೇನೆಂದು ಕುತೂಹಲದಿಂದ ವಿಚಾರಿಸಿಕೊಂಡುಹೋಗಿದ್ದರು. ಆದರೆ, ಅದು ಒಂದು ವಾರದೊಳಗೇ ಪೂರ್ವಸ್ಥಿತಿಗೇ ಬಂದಿತ್ತು. ಸ್ವಾತಂತ್ರ್ಯವೆಂಬುದು ಅಮಿತವಲ್ಲ, ಪರೋಕ್ಷವಾಗಿ ವಿಧಿಸಲ್ಪಟ್ಟ ಕಟ್ಟಳೆಗಳಿಂದ (ಕೆಲವು ನಾವೇ ಮಾಡಿಕೊಂಡಿದ್ದು). ಇತರರ ದೃಷ್ಟಿಯಲ್ಲಿ ಸ್ವಲ್ಪ ಮಿತಿಮೀರಿದ ಸ್ವಾತಂತ್ರ್ಯವನ್ನು ನಾವು ಬಯಸಿದರೆ, ಜುಲ್ಮಾನೆ ತೆರಲು ಸಿದ್ಧರಿರಬೇಕೇ? ಸುಬ್ರಮಣಿ ಲಾಯರ್‌ಗೆ ಹಣ ತೆರಲಾರದೇ 900 ಡಾಲರಗಳ ಜುಲ್ಮಾನೆಯನ್ನು ತೆಗೆದುಹಾಕಬೇಕೆಂದು ಸಂಘವನ್ನು ಕೇಳಿಕೊಂಡಿದ್ದಾನಂತೆ. ಸಂಘ ಸೊಪ್ಪುಹಾಕುವುದೋ ಕಾದು ನೋಡಬೇಕು. ಅದಕ್ಕಿಂತ ಮುಖ್ಯವಾಗಿ, ಸುಂದರವಾದ ರಂಗೋಲಿ ಡಾಂಬರೀಕೃತವಾಗಿದೆಯೋ ಇಲ್ಲವೋ ಹೋಗಿ ನೋಡಬೇಕು!

(ಟಿಪ್ಪಣಿ: ವಾಷಿಂಗ್‌ಟನ್ ಪೋಸ್ಟಿನಲ್ಲಿ ಡಿಸೆಂಬರ್ 8ರಂದು ಆನೀ ಗೋವೆನ್ ಎಂಬಾಕೆ ಬರೆದ " Driveway Painting Tests Religious Freedom, South Riding Man Fined $ 900 for Hindu Art" ಎಂಬ ಸುದ್ದಿಯ/ಲೇಖನದ ಆಧಾರದಮೇಲೆ ತಯಾರಾದ ಸ್ವತಂತ್ರ ಲೇಖನ ಇದು.)

English summary
Religious freedom for Indians takes a beating in America. An article by Dr. M.S. Nataraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X