ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಕನ್ನಡ

By Staff
|
Google Oneindia Kannada News

"ಅತಿಥಿಗಳನ್ನು ಆದರಿಸು", "ನಿನಗಿಲ್ಲದಿದ್ದರೂ ಇತರರಿಗೆ ಕೊಡು" "ಎಲ್ಲರೊಂದಿಗೆ ಹೊಂದಿಕೊಂಡು ಬಾಳು," ಇವೇ ಮುಂತಾದ ಆದರ್ಶದ ಮಾತುಗಳು ಕನ್ನಡಿಗರಿಗೆ ದೊರೆತಷ್ಟು ಮತ್ತಾವ ಭಾಷೆಯ ಜನರಿಗೂ ದೊರೆತಿಲ್ಲವೆಂದು ನಾನು ಘಂಟಾಘೋಷವಾಗಿ ಹೇಳಬಲ್ಲೆ! ಉತ್ತಮ ಹವಾಗುಣ, ಕಾಲಕ್ಕೆ ತಕ್ಕ ಮಳೆ-ಬೆಳೆ, ಪ್ರಕೃತಿಯ ವಿಕೋಪಕ್ಕೆ ಒಳಗಾಗದ ಅದೃಷ್ಟ, ಇವೆಲ್ಲ ಸೇರಿಕೊಂಡು ಕನ್ನಡಿಗರು ಮೃದುವಾಗಿದ್ದಾರೆ.

ಡಾ. ಮೈ. ಶ್ರೀ. ನಟರಾಜ, ಪೊಟೋಮೆಕ್‌, ಮೇರೀಲ್ಯಾಂಡ್‌

Kannada in Bangaloreನಾನು ಮುಂಬೈ ಐ ಐ ಟಿ ಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಮುಂಬೈನ ವಿವಿಧಪ್ರದೇಶಗಳಲ್ಲಿ, ವಿಶೇಷವಾಗಿ ಮಾತುಂಗ ಸುತ್ತಮುತ್ತಲಿನಲ್ಲಿ, ಕನ್ನಡವನ್ನು ಕೇಳಿ ಪುಳಕಿತನಾಗುತ್ತಿದ್ದೆ. ಉಡುಪಿ ಹೋಟೆಲುಗಳಲ್ಲಿ ತಿಂಡಿ ಊಟ ಆರ್ಡರ್ ಮಾಡುವಾಗ ಉತ್ಸಾಹದಿಂದ ಕನ್ನಡವನ್ನು ಬಳಸುತ್ತಿದ್ದೆ. ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಬಂದು ನೆಲೆಸಿದ್ದ ಮಾಣಿಗಳು ನಗುತ್ತ ಕನ್ನಡದಲ್ಲೆ ಸೇವೆ ಮಾಡುತ್ತಿದ್ದರು. ಅಲ್ಲಿದ್ದಷ್ಟು ದಿನವೂ ನಾನು ಮರಾಠಿ ಕಲಿಯುವ ಗೋಜಿಗೆ ಹೋಗಲಿಲ್ಲ. ಅದರ ಅಗತ್ಯವೂ ಇರಲಿಲ್ಲ. ಕ್ಯಾಂಪಸಿನಲ್ಲಿ ಹೆಚ್ಚಾಗಿ ಇಂಗ್ಲಿಷ್ ಬಳಕೆ. ಹೊರಗಡೆ ಕಚ್ಚಾ ಹಿಂದಿ.

ಮುಂಬೈ ಹಿಂದಿ ಎಂದರೆ ಅದೊಂದು ವಿಚಿತ್ರ ಭಾಷೆ. ಲಿಂಗ-ವಚನ-ವಿಭಕ್ತಿ ಮುಂತಾದವುಗಳಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗದೇ, ವ್ಯಾಕರಣ ವಿಶೇಷಗಳ ಯಾವ ಕಟ್ಟುಪಾಡುಗಳ ಭೀತಿ ಅಥವಾ ಮಿತಿಗೂ ಒಳಪಡದೇ, ನಿರ್ಭಯವಾಗಿ, ನಿರರ್ಗಳವಾಗಿ ಸಂವಹನ ನಡೆಸುವ ಒಂದು ಸೌಲಭ್ಯ ಆ ಭಾಷೆಗೆ ಇದೆ. ಅದನ್ನು ಬಾಜಾರಿನ ಭಾಷೆ ಎಂದು ಕರೆಯಬಹುದು. ಮುಂಬೈ ವಾಸಿಗಳೆಲ್ಲರೂ ಆ ಭಾಷೆಯನ್ನು ನಿಸ್ಸಂಕೋಚವಾಗಿ ಬಳಸುವುದರಿಂದ ನಗರದ ವ್ಯವಹಾರಕ್ಕೆ ಅದು "ಬೇಕು ಮತ್ತು ಸಾಕು" (ನೆಸ್ಸೆಸರಿ ಆಂಡ್ ಸಫಿಶಿಯಂಟ್).

ಬೆಂಗಳೂರು ಸಹ ಮುಂಬೈನಂತೆ ಅನೇಕ ಭಾಷೆಗಳ ಮತ್ತು ಅನೇಕ ಪ್ರಾಂತ್ಯಗಳ ಜನ ನೆಲೆಸಿರುವ ನಗರ. ಅದರ ಜೊತೆಗೆ "ತೇಲಾಡುವ ಜನಸಂದಣಿ" (ಫ್ಲೋಟಿಂಗ್ ಪಾಪುಲೇಷನ್) ಸಹ ದೊಡ್ಡ ಸಂಖ್ಯೆಯಲ್ಲಿ ಇರುತ್ತದೆ. ತಾತ್ಕಾಲಿಕವಾಗಿ ಬರುವ ಈ ಜನಕ್ಕೆ ಸ್ಥಳೀಯ ಭಾಷೆ ಕಲಿಯುವ ಅಗತ್ಯ ಅಥವಾ ಒತ್ತಡ ಇರುವುದಿಲ್ಲ. ಹೇಗೋ ಎರಡು ದಿನ ತಳ್ಳಿದರಾಯಿತು ಎಂಬ ಧೋರಣೆ ಇರುತ್ತದೆ. ನಾನು ಕೂಡ ಯೂರೋಪಿನ ಹಲವು ನಗರಗಳಿಗೆ ಕೆಲಸದಮೇಲೆ ಹೋದಾಗ ಅಲ್ಲಿನ ಭಾಷೆಯಬಗ್ಗೆ ಯಾವ ಆಸಕ್ತಿಯನ್ನೂ ತೋರಿಸಿಲ್ಲ, ಏಕೆಂದರೆ, ನನ್ನ ಭೇಟಿ ಕೆಲದಿನಗಳದ್ದು ಮಾತ್ರ, ಹಾಗೂ ಇಂಗ್ಲಿಷಿನ ಸಹಾಯದಿಂದ ಎಲ್ಲಿಹೋದರೂ ಬಚಾಯಿಸಿಕೊಳ್ಳಬಹುದೆಂಬ ಧೈರ್ಯ.

ಮೇಲಿನ ಪೀಠಿಕೆಯಿಂದ ನಾನು ತಿಳಿಸಹೊರಟಿರುವುದೇನೆಂದರೆ: "ಯಾವುದೇ ಒಂದು ನಗರದಲ್ಲಿ ಜನಗಳು ವ್ಯವಹಾರಕ್ಕೆ ಯಾವ ಭಾಷೆಯನ್ನು ಉಪಯೋಗಿಸುತ್ತಾರೆ ಎಂದರೆ, ಯಾವ ಭಾಷೆಯನ್ನು ಉಪಯೋಗಿಸದಿದ್ದರೆ ವ್ಯವಹರಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಉಂಟಾಗುತ್ತದೋ ಅಂಥಾ ಭಾಷೆಯನ್ನು ಮಾತ್ರ ಉಪಯೋಗಿಸುತ್ತಾರೆ" ಎಂಬುದೇ ಆಗಿದೆ. ಕನ್ನಡನಾಡಿನ ಪರಿಸ್ಥಿತಿ ಹೇಗಿದೆ ಎಂದರೆ, ಮೊದಲಿನಿಂದಲೂ ನಾವು ಹೊರಗಿನವರನ್ನು ಆದರದಿಂದ ಬರಮಾಡಿಕೊಂಡಿದ್ದೇವೆ. ಅವರ ಭಾಷೆಯನ್ನು ಅವರು ಉಳಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದೇವೆ.

ಅಷ್ಟೇ ಅಲ್ಲ, ಹೊರಗಿವರಿಗೆ ನಮ್ಮ ಭಾಷೆಯನ್ನು ಕಲಿಸುವ ಬದಲು ಅವರ ಭಾಷೆಯನ್ನು ನಾವೇ ಕಲಿತು ಹಿಗ್ಗಿದ್ದೇವೆ. ಇತರರ ಭಾಷೆಯನ್ನು ಕಲಿಯುವುದು ತಪ್ಪಲ್ಲ, ಹಾಗೆ ನೋಡಿದರೆ ಒಂದಕ್ಕಿಂತ ಹೆಚ್ಚು ಭಾಷೆ ಬಲ್ಲವರಿಗೆ ಸಾಕಷ್ಟು ಅನುಕೂಲಗಳಿವೆ. ಆದರೆ, ಕನ್ನಡಿಗರ ದೊಡ್ಡ ತಪ್ಪೆಂದರೆ ಅವರಿಗೆ ಜನ್ಮದಿಂದಲೇ ಅಂಟಿ ಬಂದಿರುವ ಕೀಳರಿಮೆ ಮತ್ತು ಇತರರ ಭಾಷೆ, ವೇಷ, ಸಂಗೀತ, ಸಾಹಿತ್ಯ ಮತ್ತು ರೀತಿ-ನೀತಿಗಳನ್ನು ಅನುಕರಿಸುವ ಚಪಲ. ನಮ್ಮವರನ್ನೇ ಮೂಲೆಗುಂಪುಮಾಡಿ ಇತರರನ್ನು ಕಂಡು ಹಲುಬಿ ಜೊಲ್ಲು ಸುರಿಸುವ ಮೂರ್ಖತನ.

ಇಲ್ಲಿ ನನ್ನ ತಾರುಣ್ಯದ ಒಂದು ಸನ್ನಿವೇಶ ನೆನಪಾಗುತ್ತಿದೆ. ಬೇಂಗಳೂರಿನಲ್ಲಿ (ಅಂದಿನ "ಯುಸಿಇ" ಇಂದಿನ "ಯುವಿಸಿಇ" ಯಲ್ಲಿ) ವಿದ್ಯಾರ್ಥಿಯಾಗಿದ್ದಾಗಿನ ಮಾತು. ಬೆಂಗಳೂರಿನಿಂದ ಹಾಸನಕ್ಕೋ ಅಥವಾ ಹಾಸನದಿಂದ ಬೆಂಗಳೂರಿಗೋ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ರೈಲಿನ ತುಂಬಾ ಜನರಿದ್ದರು. ಅದೂ ಇದೂ ಹರಟುತ್ತಾ ಪಯಣ ಸಾಗುತ್ತಿತ್ತು. ಅಲ್ಲೊಬ್ಬ ಮಹಾನುಭಾವ ತಮಿಳ ಸರಂಪುರಿಯಾಗಿ ಎತ್ತರದ ದನಿಯಲ್ಲಿ ಹರಟುತ್ತಿದ್ದ. ಮಿಕ್ಕವರೆಲ್ಲ ಅವನ ಮಾತುಗಳನ್ನು ತದೇಕಚಿತ್ತರಾಗಿ ಭಕ್ತಿಯಿಂದ ಕೇಳಿ ಮೆಚ್ಚುತ್ತಿದ್ದರು. ಅವ ಕರ್ನಾಟಕದ ಸಣ್ಣ ಊರುಗಳಲ್ಲಿ ಟೆಂಟ್ ಸಿನಿಮಾ ನಡೆಸುತ್ತಿದ್ದನೆಂಬುದು ಅವನ ಮಾತಿನಿಂದ ತಿಳಿಯಿತು. ಆತ ಒಂದೇ ಸಮ ಕರ್ನಾಟಕ ಸರಕಾರವನ್ನು ಬಯ್ಯುತ್ತಿದ್ದ. "ಇಂಗೆ ಸರಕಾರ ರೊಂಬ ಇನ್ಎಫಿಜಿಯಂಡು" "ತಮಿಳ್‍ನಾಡುವುಳ್ಳೆ ಇಪ್ಪಡಿ ಇಲ್ಲೆ" ಇತ್ಯಾದಿ ಅನ್ನುತ್ತಿದ್ದ. ಸುತ್ತಲೂ ಭಕ್ತಿಯಿಂದ ಕೇಳುತ್ತಿದ್ದ ಭಕ್ತರು ಅವನ ಮಾತಿಗೆ ತಲೆ ತೂಗುತ್ತ ತಮಗೆ ತೋಚಿದ ಅರಬೆರಕೆ ತಮಿಳಿನಲ್ಲಿ ಅವನೊಡನೆ ಜೊತೆಗೂಡಿ ಕರ್ನಾಟಕ ಸರ್ಕಾರವನ್ನು ಶಪಿಸುತ್ತ ಇದ್ದರು.

ಕೇಳುವಷ್ಟು ಕೇಳಿ ಸುಸ್ತಾಗಿ ಕೊನೆಗೆ ಕೋಪ ತಡೆಯಲಾರದೇ, "ಸ್ವಾಮಿ, ನಿಮಗೆ ತಮಿಳುನಾಡು ಅಷ್ಟೊಂದು ಇಷ್ಟವಾದರೆ, ಅಲ್ಲಿಗೇ ಹೋಗಿ, ಇಲ್ಲೇಕೆ ಒದ್ದಾಡುತ್ತಿದ್ದೀರಿ" ಎಂದೆ. ಎಲ್ಲರಿಂದ ದೊರೆಯುತ್ತಿದ್ದ ಪ್ರೋತ್ಸಾಹದ ಅಮಲಿನಲ್ಲಿದ್ದ ಆತನಿಗೆ ನನ್ನಂಥ ಒಬ್ಬ ಬಾಲಕ (ನನಗೆ ಆವಾಗ ಹದಿನಾರೋ ಹದಿನೇಳೋ ವಯಸ್ಸು ಅಂತ ನೆನಪು) ಹೇಳಿದ ಮಾತು ತೀರ ಅನಿರೀಕ್ಷಿತವಾಗಿತ್ತು. ನನಗೂ ಅವನಿಗೂ ಸಾಕಷ್ಟು ವಾಗ್ವಾದ ನಡೆಯಿತು. ಅವನು ನನ್ನನ್ನು ದಬಾಯಿಸಲು ಯತ್ನಿಸಿದ್ದು ನನಗೇನೂ ಅಚ್ಚರಿಯನ್ನುಂಟುಮಾಡಲಿಲ್ಲ, ಅದು ನಿರೀಕ್ಷಿತ, ಯಾವ ತಮಿಳನೂ ಪರಭಾಷೆಯ ಜನರೊಂದಿಗೆ ಸುಲಭವಾಗಿ ಬಾಲ ಮುದುರಿಕೊಳ್ಳುವುದಿಲ್ಲ.

ವಿಷಾದದ ಸಂಗತಿ ಎಂದರೆ, ನಮ್ಮ ಜೊತೆ ಪಯಣಮಾಡುತ್ತಿದ್ದ ಕನ್ನಡ ಜನರ ಅಸಹ್ಯ ವರ್ತನೆ. ಅವನು ನಮ್ಮ ನಾಡನ್ನು, ನಮ್ಮ ಜನರನ್ನು, ನಮ್ಮ ಸರ್ಕಾರವನ್ನು ಉಗಿಯುತ್ತಿದ್ದರೂ ಉಗಿಸಿಕೊಂಡು ಸುಮ್ಮನೆ ಕುಳಿತಿದ್ದು, ಅಲ್ಲಿದ್ದ ಒಬ್ಬ ಕನ್ನಡಿಗನೂ ನನ್ನ ಸಹಾಯಕ್ಕೆ ಬಾರದೇ ಇದ್ದದ್ದು, ಕೆಲವರು ಅವನ ಪರ ವಹಿಸಿದ್ದು, ಇನ್ನು ಕೆಲವರು, "ಒಬ್ಬ ಬಾಲಕ ತನಗಿಂತ ಮೂರು-ನಾಲ್ಕರಷ್ಟು ವಯಸ್ಸಿನವರೊಂದಿಗೆ ಈ ರೀತಿ ವಾದಿಸುವುದು ಉದ್ಧಟತನ" ಎನ್ನುವ ರೀತಿ ನಡೆದುಕೊಂಡಿದ್ದು, ಇವೆಲ್ಲ ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗೇ ಉಳಿದಿವೆ.

ಕನ್ನಡನಾಡಿನ ಜನರಿಗೆ ಓಬೀರಾಯನಕಾಲದ ಹಳಸಲು ತಮಿಳು ಚಿತ್ರಗಳನ್ನು ತೋರಿಸುತ್ತ ಹಣಗಳಿಸಿ ಶ್ರೀಮಂತನಾಗುತ್ತಿದ್ದ ಅವನು ಉಣಿಸುವ ಕೈಯನ್ನೇ ಕಚ್ಚುತ್ತಿದ್ದರೂ, ಸ್ವತಃ ವಿರೋಧಿಸುವುದಿರಲಿ, ಯಾರೋ ಒಬ್ಬ ಧೈರ್ಯಮಾಡಿ ವಿರೋಧಿಸಿದಾಗ ಅವನಿಗೆ ಕಾಲುಕೊಟ್ಟು ಬೀಳಿಸಲು ಹೊರಟಿದ್ದ ಕನ್ನಡ ಬಾಂಧವರನ್ನು ಕಂಡು ಕೋಪಿಸಿಕೊಳ್ಳಬೇಕೋ ಮರುಕತೋರಬೇಕೋ ತೋಚಿರಲಿಲ್ಲ. ಏಕಾಂಗಿಯಾಗೇ ಮುಂದುವರೆಯಬೇಕಾದ ಶೋಚನೀಯ ಪರಿಸ್ಥಿತಿಯನ್ನು ನಾನು ಎದುರಿಸಬೇಕಾಯಿತು.

ನಮ್ಮ ಈ ಪರಿಸ್ಥಿತಿಗೆ ಕಾರಣವೇನು? "ಹೊರಗೆ ಕತ್ತಲಾದಕೂಡಲೆ ಮನೆಗೆ ಹಿಂದಿರುಗು," "ಗಲಾಟೆ ನಡೆಯುವ ಸ್ಥಳದಿಂದ ಒಮ್ಮೆಗೇ ಕಾಲು ಕೀಳು," "ನಿನ್ನ ಹಳತಕ್ಕೆ ನೀನಿರುವದನ್ನು ಕಲಿ," "ಬಡವಾ ನೀನು ಮಡುಗಿದ ಹಾಗಿರು," "ದೊಡ್ಡ ಕುದುರೆ ಚೇಷ್ಟೆ ನಮಗೇಕೆ?" "ಪಾಲಿಗೆ ಬಂದದ್ದೇ ಪಂಚಾಮೃತ," ಇನ್ನೂ ಮುಂತಾದ "ಬುದ್ಧಿವಾದ"ವನ್ನು ಕೇಳುತ್ತಲೇ ಬೆಳೆಯುವವರು ನಾವು. ಅದರ ಜೊತೆಗೆ ಮಹಾತ್ಮಾ ಗಾಂಧಿಯವರ ಅಹಿಂಸಾವಾದ, "ಒಂದು ಕೆನ್ನೆಗೆ ಹೊಡೆದರೆ ಮತ್ತೊಂದನ್ನು ತೋರಿಸು" ಎಂಬಂಥ ಮಾತುಗಳಿಂದ ಪ್ರಭಾವಿತರಾದವರು ನಾವು.

"ಅತಿಥಿಗಳನ್ನು ಆದರಿಸು", "ನಿನಗಿಲ್ಲದಿದ್ದರೂ ಇತರರಿಗೆ ಕೊಡು" "ಎಲ್ಲರೊಂದಿಗೆ ಹೊಂದಿಕೊಂಡು ಬಾಳು," ಇವೇ ಮುಂತಾದ ಆದರ್ಶದ ಮಾತುಗಳು ಕನ್ನಡಿಗರಿಗೆ ದೊರೆತಷ್ಟು ಮತ್ತಾವ ಭಾಷೆಯ ಜನರಿಗೂ ದೊರೆತಿಲ್ಲವೆಂದು ನಾನು ಘಂಟಾಘೋಷವಾಗಿ ಹೇಳಬಲ್ಲೆ! ಉತ್ತಮ ಹವಾಗುಣ, ಕಾಲಕ್ಕೆ ತಕ್ಕ ಮಳೆ-ಬೆಳೆ, ಪ್ರಕೃತಿಯ ವಿಕೋಪಕ್ಕೆ ಒಳಗಾಗದ ಅದೃಷ್ಟ, ಇವೆಲ್ಲ ಸೇರಿಕೊಂಡು ಕನ್ನಡಿಗರು ಮೃದುವಾಗಿದ್ದಾರೆ. (ಹಿಂದಿಯಲ್ಲಿ ಹೇಳುವುದಾದರೆ "ದಬ್ಬೂ ಮಿಯಾ"ಗಳಾಗಿದ್ದಾರೆ.)

ನಾನು ಹಿಂಸೆಯನ್ನು ಎಂದಿಗೂ ಪ್ರತಿಪಾದಿಸುವುದಿಲ್ಲ. ಆದರೆ, ನಮ್ಮ ಆತ್ಮಗೌರವದ ವಿಷಯ ಬಂದಾಗ ನಿರ್ವೀರ್ಯರಂತೆ ಕೂರುವುದು, ಹೇಡಿತನ. ಡೇರೆಯೊಳಕ್ಕೆ ಹೊರಗಿನವರನ್ನು ಬಿಟ್ಟುಕೊಂಡು ಅವರಿಂದಲೇ ಉಚ್ಛಾಟಿತರಾಗುವುದು ಮೂರ್ಖತನವಲ್ಲವೇ? ಬೆಂಗಳೂರಿನಲ್ಲಿ ಕನ್ನಡ ಮತ್ತು ಕನ್ನಡಿಗರ ಪರಿಸ್ಥಿತಿ ಇಂದು ತುಂಬಾ ಶೋಚನೀಯವಾಗಿದೆ ಎಂದು ಹೇಳದೇ ವಿಧಿಯಿಲ್ಲ. ಅದಕ್ಕೆ ನಾವು ಇತರರನ್ನು ಬೈದು ಪ್ರಯೋಜನವಿಲ್ಲ. ನಮ್ಮನ್ನು ನಾವು ತಿದ್ದಿಕೊಂಡು ಜಾಗರೂಕರಾಗಬೇಕು.

ಉತ್ತರಭಾರತದ ರಾಜಕಾರಣಿಗಳು ಬೆಂಗಳೂರಿಗೆ ಬಂದಾಗ ಹಿಂದಿಯಲ್ಲಿ ಭಾಷಣಹೊಡೆಯುತ್ತಾರೆ. ಕನ್ನಡಿಗರು ಕೇಳಿ ಚಪ್ಪಾಳೆ ತಟ್ಟುತ್ತಾರೆ. ನಮ್ಮ ರಾಜಕಾರಣಿಗಳು ಉತ್ತರಭಾರತಕ್ಕೆ ಹೋಗಿ ಕೆಟ್ಟ ಹಿಂದಿಯಲ್ಲಿ ಮಾತಾಡಿ ಶಾಭಾಶ್ ಗಿರಿ ಪಡೆಯಲು ಯತ್ನಿಸುತ್ತಾರೆ. ಕಾಮರಾಜ ನಾಡರ್ ಎಲ್ಲೇ ಹೋದರೂ ತಮಿಳಿನಲ್ಲೇ ಮಾತಾಡುತ್ತಿದ್ದರು. ಅವರಿಗೆ ಇಂಗ್ಲಿಷ್ ಚೆನ್ನಾಗಿ ಬರುತ್ತಿರಲಿಲ್ಲ, ಹಿಂದಿ ಸುಮಾರಾಗಿ ಅರ್ಥವಾಗುತ್ತಿತ್ತು, ಆದರೆ ತಮ್ಮ ಮಾತೃಭಾಷೆಯಲ್ಲಿ ಮಾತಾಡಲು ಅವರು ಎಂದೂ ಹೇಸುತ್ತಿರಲಿಲ್ಲ.

ಬೆಂಗಳೂರಿನ ಪೇಟೆಗಳಲ್ಲಿ ತಮಿಳು, ತೆಲುಗು, ಉರ್ದು, ಹಿಂದಿ ಮುಂತಾದ ಎಲ್ಲಾ ಭಾಷೆಗಳೂ ಕೇಳಿಬರುತ್ತವೆ, ಇಂಗ್ಲೀಷಂತೂ ನಮ್ಮ ಪಿತೃಭಾಷೆಯಾಗಿದೆ. ಕನ್ನಡ ಮಾತ್ರ ಸದ್ದಿಲ್ಲದೇ ಮೂಲೆಗುಂಪಾಗಿದೆ. ಬೆಂಗಳೂರಿನಲ್ಲಿ ನಡೆಯುವ ಸಂಗೀತ, ನೃತ್ಯ ಮುಂತಾದ ಸಾಂಸ್ಕೃತಿಕ ಕಾಯಕ್ರಮಗಳಲ್ಲಿ ಕೂಡ ಕನ್ನಡ ಕೇಳಬರುವುದಿಲ್ಲ. ಇದಕ್ಕೆ ಕಾರಣವೇನು? ಕರ್ನಾಟಕದಲ್ಲಿ ಓದುವ ಪ್ರತಿ ವಿದ್ಯಾರ್ಥಿಗೂ ಪ್ರಾಥಮಿಕ ಶಾಲೆಯ ಮಟ್ಟದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸದಿರಲು ಕಾರಣವೇನು? ಹಳ್ಳಿ ಹಳ್ಳಿಗಳಲ್ಲಿ ಆಂಗ್ಲಮಾಧ್ಯಮ ಶಾಲೆಗಳು ಹುಟ್ಟಿಕೊಳ್ಳಲು ಕಾರಣವೇನು?

ಇತರ ಭಾಷೆಯ ಜನರನ್ನು ಅಂದು ಉಪಯೋಗವಿಲ್ಲ. ಕನ್ನಡಿಗರು ಮೊದಲು ಕನ್ನಡವನ್ನು ಸರಿಯಾಗಿ ಕಲಿಯಬೇಕು. ಎಲ್ಲೆಲ್ಲೂ ಕನ್ನಡದಲ್ಲಿ ಮಾತಾಡಬೇಕು. ಕನ್ನಡಲಿಪಿ ಬೆಂಗಳೂರಿನ ಮೂಲೆಮೂಲೆಗಳಲ್ಲಿ ರಾರಾಜಿಸಬೇಕು. ಕನ್ನಡದ ಬಳಕೆ ಇಲ್ಲದೇ ಬೆಂಗಳೂರಿನಲ್ಲಿ ಜೀವನ ಮಾಡುವುದು ಅಸಾಧ್ಯವಾಗುವಂತೆ ಮಾಡಬೇಕು. ಮೂಗನ್ನು ಮುಚ್ಚಿದರೆ ಬಾಯಿ ತಾನಾಗಿಯೇ ತೆರೆದುಕೊಳ್ಳುತ್ತದೆ. ಕನ್ನಡ ಕಲಿತದ್ದರಿಂದ ಹೊರಗಿನವರಿಗೆ ಉಪಯೋಗವಾಗಬೇಕು, ಗುರುತಿಸಿವಷ್ಟು, ಅಳತೆಮಾಡುವಷ್ಟು, ಎಣಿಸುವಷ್ಟು ಲಾಭವಾಗಬೇಕು (ವ್ಯಾಪಾರ ಕುದುರಬೇಕು, ಕೆಲಸ ಸಿಕ್ಕಬೇಕು, ಸೀಟು ಸಿಕ್ಕಬೇಕು, ಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಚಾರ ದೊರಕಬೇಕು, ಇತ್ಯಾದಿ). ಅಂಥಾ ಪರಿಸ್ಥಿತಿ ಬಂದ ಹೊರತು ಕನ್ನಡ ಬೆಂಗಳೂರಿನಲ್ಲೇ ಏಕೆ ಪುಟ್ಟ ಪುಟ್ಟ ಊರುಗಳಲ್ಲೂ ಮಾಯವಾಗುವ ಕಾಲ ಬರುತ್ತದೆ.

ಕನ್ನಡದ ಉಳಿವು ಕೇವಲ ಅಭಿಮಾನದಿಂದ ನಡೆಯುವ ಕೆಲಸವಲ್ಲ. ಅಭಿಮಾನ ಬೇಕು, ಆದರೆ ಬರೀ ಅಭಿಮಾನವಿದ್ದರೆ ಏನೇನೂ ಸಾಲದು. "ಸ್ಲೋಗನ್"ಗಳನ್ನು ಕೂಗುವುದರಿಂದಲಾಗಲೀ ಭಾಷಣಗಳನ್ನು ಬಿಗಿಯುವುದರಿಂದಲಾಗಲೀ, ಸತ್ಯಾಗ್ರಹ ಮಾಡುವುದರಿಂದಲಾಗಲೀ ಕನ್ನಡ ಉಳಿಯುವುದಿಲ್ಲ. ಕನ್ನಡಭಾಷೆಯನ್ನು ಕಲಿತದ್ದರಿಂದ ಆರ್ಥಿಕ ಅಭಿವೃದ್ಧಿ ಆಗುವಂಥ ಪರಿಸ್ಥಿತಿ ಉಂಟಾದರೇನೆ ಕನ್ನಡ ದೊಡ್ಡ ನಗರಗಳಲ್ಲಿ ಉಳಿಯುವುದು, ಬೆಳೆಯುವುದು.

ಕರ್ನಾಟಕದ ಪ್ರತಿನಿಧಿಗಳನ್ನು ಕೇಂದ್ರ ಸರ್ಕಾರ ಗೌರವದಿಂದ (ಕೊಂಚ ಭಯದಿಂದ) ನೋಡುವ ದಿನ ಬರಬೇಕು. ಕೇಂದ್ರ ಸರ್ಕಾರ ಬಜೆಟ್ ಅಂದಾಜು ಮಾಡುವಾಗ, ಪ್ರಾಜೆಕ್ಟುಗಳನ್ನು ಹಂಚುವಾಗ ಕನ್ನಡಿಗರ ಪಾಲಿಗೆ ನ್ಯಾಯವಾಗಿ ದೊರಕಬೇಕಾದ ಅಂಶವನ್ನು ಗಿಟ್ಟಿಸಿಕೊಳ್ಳಲು ವರ್ಚಸ್ವಿಗಳೂ ಚಾಣಾಕ್ಷರೂ ಆದ ರಾಜಕಾರಿಣಿಗಳು ಬೇಕು.

ನಮ್ಮ ರಾಜಕಾರಿಣಿಗಳಿಗೆ ಕುರ್ಚಿಗೆ ಬಿಗಿಯಾಗಿ ಅಂಟಿಕೊಂಡಿರುವ ಮತ್ತು ಹಿಂದೆ ಚುಣಾವಣೆಗೆ ಖರ್ಚು ಮಾಡಿದ ಹಾಗು ಮುಂದಿನ ಚುಣಾವಣೆಗೆ ಬೇಕಾಗುವಷ್ಟು ಹಣವನ್ನು ದೋಚುವುದನ್ನು ಬಿಟ್ಟರೆ ಮತ್ತಾವ ಉದ್ದಿಶ್ಯವೂ ಇದ್ದಂತಿಲ್ಲ. ಅವರಲ್ಲನೇಕರಿಗೆ ಕನ್ನಡವೇ ಬರುವುದಿಲ್ಲ, ನೆಟ್ಟಗೆ ನಾಲ್ಕು ವಾಕ್ಯಗಳನ್ನು ತಪ್ಪಿಲ್ಲದೇ ಆಡುವ ಅಭ್ಯಾಸವಿಲ್ಲ, ಇನ್ನು ಬರವಣಿಗೆಯ ವಿಷಯ ಒತ್ತಟ್ಟಿಗಿರಲಿ. ಸರಾಸರಿ ಮನೆಯಲ್ಲಿ ಸಹ ಮಕ್ಕಳಿಗೆ ಇಂಗ್ಲಿಷ್ ಹೇರಿ ಕನ್ನಡದ ಸಂಭಾಷಣೆಗಳೇ ಮಾಯವಾಗುತ್ತಿವೆ. ಶಾಲೆಗಳಲ್ಲಿ ಕಲಿಕೆಯ ಮಾಧ್ಯಮ ಇಂಗ್ಲಿಷ್. ಕೊಳ್ಳುವ ಪುಸ್ತಕಗಳು, ತರಿಸುವ ಪತ್ರಿಕೆಗಳು ಇಂಗ್ಲಿಷ್. ಹೊಸದಾಗಿ ಬರುವ ಕನ್ನಡ ಸಿನಿಮಾ ನಾಯಕ ನಾಯಕಿಯರಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ, ಕೆಲವರಿಗೆ ಮಾತಾಡಲೂ ಬರುವುದಿಲ್ಲ. (ಅಂಥವರಿಗೆ ಕಂಠದಾನ ಮಾಡಿಯಾದರೂ ಅವರನ್ನೇ ಆಯ್ದುಕೊಳ್ಳುವ ಹುಚ್ಚು ನಮ್ಮ ನಿರ್ದೇಶಕರಿಗೆ!) ಇಂಥಾ ವಾತಾವರಣದಲ್ಲಿ ಕನ್ನಡ ಉಳಿಯಬೇಕೆಂದರೆ ಹೇಗೆ ತಾನೇ ಸಾಧ್ಯ?

ಇತ್ತೀಚೆಗೆ ಹಲವು ಯುವ ಕನ್ನಡಿಗರು ಸಂಘಗಳನ್ನು ಕಟ್ಟಿಕೊಂಡು ಕನ್ನಡದ ಉಳಿವು ಮತ್ತು ಅಭಿವೃದ್ಧಿಗಾಗಿ ದುಡಿಯುತ್ತಿರುವುದು ಸಂತೋಷದ ವಿಷಯ. ಇಂಥಾ ಯುವಕರೇ ಇಂದಿನ ಕತ್ತಲೆಯ ನಡುವೆ ಮಿರುಗುವ ಆಶಾಕಿರಣಗಳು. ಕನ್ನಡಿಗರ ಕಣ್ಣುಗಳನ್ನು ತೆರೆಸಲು ಕನ್ನಡಾಂಬೆ ಈ ನಮ್ಮ ಕನ್ನಡ ಸೈನಿಕರಿಗೆ ಶಕ್ತಿಯನ್ನು ಕೊಡಲಿ ಎಂಬ ಕಳಕಳಿಯ ಪ್ರಾರ್ಥನೆಯೊಂದಿಗೆ ವಿರಮಿಸುವೆ ಮುಂದಿನ ಕಂತಿನವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X