ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನ ಪ್ರೀತಿ ಮತ್ತು ಜೀವದ ಪ್ರೀತಿ

By Staff
|
Google Oneindia Kannada News
Dr.M.S.Nataraj ಡಾ. ಮೈ.ಶ್ರೀ. ನಟರಾಜ
ಪೊಟೊಮೆಕ್‌, ಮೇರೀಲ್ಯಾಂಡ್‌

[email protected]

ತಮ್ಮ ಎಪ್ಪತ್ತೈದನೇ ವಯಸ್ಸಿನಲ್ಲೂ ಮಾರುಕಟ್ಟೆಗೆ ಸೈಕಲ್ಲಿನಲ್ಲಿ ಹೋಗುತ್ತಿದ್ದ ನಮ್ಮ ತಂದೆ ಅರಣ್ಯ ಇಲಾಖೆಯ ಅಖಾಡಾದಲ್ಲಿ ಪಳಗಿದ ಗಟ್ಟಿಜೀವ. ವಯಸ್ಸಾದ ಮೇಲೂ ಚಟುವಟಿಕೆಯ ಜೀವನ ನಡೆಸಿದವರು. ಅವರ ಮಕ್ಕಳಾದ ನಾವು ಏರುಸಿರು ಬಿಡುತ್ತಿದ್ದರೂ, ಅವರು ಮೊಮ್ಮಕ್ಕಳ ಪೈಕಿ ಒಂದನ್ನು ಎತ್ತಿಕೊಂಡು ಮಾವಿನಕೆರೆ ಬೆಟ್ಟವನ್ನೇರಿ, ಎಲ್ಲರಿಗಿಂತ ಮೊದಲು ದೇವರ ಸೇವೆಗೆ ತಯಾರಾಗುತ್ತಿದ್ದ ದೃಶ್ಯ ಎಂದಿಗೂ ಮರೆಯಲಾಗದಂಥದು. ಒಮ್ಮೊಮ್ಮೆ ಪೂಜಾರಿ ಬರುವುದು ತಡವಾದರೆ ತಾವೇ ಅರ್ಧಬೆಟ್ಟ ಇಳಿದು ಅಲ್ಲಿರುವ ಕೊಳದಿಂದ ಬಿಂದಿಗೆಯಲ್ಲಿ ನೀರುತುಂಬಿಕೊಂಡು ಬರುತ್ತಿದ್ದ ಪರಮಭಕ್ತ ಶಿರೋಮಣಿ ಅವರು.

ವಿಧಿಯ ವಿಪರ್ಯಾಸವೆಂದರೆ, ಆ ಭಕ್ತಪರಿಪಾಲಕನೆನಿಸಿಕೊಂಡ ಮಾವಿನಕೆರೆ ರಂಗ, ಅವರ ಕೊನೆಗಾಲದಲ್ಲಿ ಅವನ ದರ್ಶನಕ್ಕೆಂದು ಲೆಕ್ಕವಿಲ್ಲದಷ್ಟು ಸಲ ಬೆಟ್ಟ ಹತ್ತಿದ್ದ ಅವರ ಕಾಲನ್ನೇ ಕಿತ್ತುಕೊಂಡದ್ದು. ಸ್ವಾತಂತ್ರ್ಯಪ್ರಿಯರಾದ ಅವರ ಜೀವನದ ಅತಿದೊಡ್ಡ ಆ ದುರಂತ ದಿಂದ ಕೊನೆಗಾಲದಲ್ಲಿ ಇತರರ ಸಹಾಯವಿಲ್ಲದೆ ಶೌಚವನ್ನೂ ಮಾಡಲಾಗದಂಥ ದಯನೀಯ ಪರಿಸ್ಥಿತಿಅವರಿಗುಂಟಾಯಿತು. ಎಂಥಾ ಕಷ್ಟಕಾಲದಲ್ಲೂ ಎದೆಗುಂದದ, ನಿರಾಶಾದಾಯಕ ಸಂದರ್ಭಗಳ ಲ್ಲೂ ಜೀವನಪ್ರೀತಿಯನ್ನು ಕಳೆದುಕೊಳ್ಳದ, ಪರಮಾತ್ಮನಲ್ಲಿ ಅವಿಚ್ಛಿನ್ನ ಭಕ್ತಿಯನ್ನು ಇಟ್ಟುಕೊಂಡಿದ್ದ ಅವರಿಗೆ ಪಾರ್ಶ್ವವಾ ಯು ಬಡಿದು ನಡೆಯಲಾರದೇ ಒಂದೆಡೆ ತಿಂಗಳುಗಟ್ಟಲೆ ಮಲಗಿರಬೇಕಾದ ದುಃಸ್ಥಿತಿ ಬಂದೊದಗಿದಾಗ, ಅವರು ಎಲ್ಲಕ್ಕಿಂತ ಮೊದಲು ಕಳೆದುಕೊಂಡದ್ದು- ಒಂದು; ದೇವರಮೇಲಿನ ನಂಬಿಕೆ. ಎರಡು; ಜೀವದ ಮೇಲಿನ ಪ್ರೀತಿ.

ಜೀವನವನ್ನು ಅಖಂಡವಾಗಿ ಪ್ರೀತಿಸುತ್ತಿದ್ದ ನಮ್ಮ ತಂದೆಯರ ಕೊನೆಗಾಲದ ಕಹಿನೆನಪು ನನಗಿಲ್ಲ, ಅವರು ತೆವಳುತ್ತಿದ್ದುದಾಗಲೀ, ಅವರನ್ನು ಮಕ್ಕಳಂತೆ ಎತ್ತಿಕೊಂಡು ಶೌಚ ಮತ್ತು ಸ್ನಾನಕ್ಕೆ ಒಯ್ಯುತ್ತಿದ್ದುದಾಗಲೀ ನನ್ನ ಕಲ್ಪನೆಯಲ್ಲಿ ಮತ್ತೆ ಮತ್ತೆ ಬಂದು ಕಾಡುವುದಿಲ್ಲ. ಅದಕ್ಕೆ ಕಾರಣ, ನಾನು ದೂರದೇಶದಲ್ಲಿದ್ದು ಅವ್ಯಾವುದೂ ನನಗೆ ತಾಗದಂತೆ ನನ್ನ ಅಣ್ಣತಮ್ಮ-ಅಕ್ಕತಂಗಿಯರು ನೋಡಿಕೊಂಡರು. ಹಾಗಾಗಿ ನನ್ನ ನೆನಪಿನ ತಂದೆ ಯಾವಾಗಲೂ ಸೈಕಲ್ಲಿನ ಮೇಲೆ ಓಡಾಡುವ, ಬೆಟ್ಟ ಹತ್ತುತ್ತಿರುವ ನಿತ್ಯಚೇತನರಾಗೇ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ.

ಆ ಕೊನೆಯ ದಿನಗಳಲ್ಲಿ ನಾನು ಅವರೊಂದಿಗೆ ಇರಲಿಲ್ಲವಾದರೂ ನಮ್ಮ ಅಣ್ಣತಮ್ಮಂದಿರು ಮತ್ತು ಅಕ್ಕತಂಗಿಯರಿಂದ ತಿಳಿದುಬಂದಿದ್ದೇ ನೆಂದರೆ, ಅವರು ಕೊನೆಯ ದಿನಗಳಲ್ಲಿ ಬಯಸುತ್ತಿದ್ದುದು ಒಂದೇ ಒಂದನ್ನು-ತಕ್ಷಣ ಮರಣವನ್ನು. ಸ್ವಾತಂತ್ರ್ಯವನ್ನು ಕಳೆದುಕೊಂಡು ಇತರರ ಹಂಗಿನಲ್ಲಿ ಬಿದ್ದು ವಿಲಗುಟ್ಟುತ್ತ ಇತರರಿಗೆ ತೊಂದರೆ ಕೊಡುತ್ತ ಬದುಕುವುದರಲ್ಲಿ ಅರ್ಥವಿಲ್ಲ ಎನ್ನುತ್ತಿದ್ದರಂತೆ. ದೈಹಿಕವಾಗಿ ಅಸಹಾಯಕ ರಾಗಿದ್ದರೂ ಅವರ ಬುದ್ಧಿಶಕ್ತಿಯಾಗಲೀ ಜ್ಞಾಪಕಶಕ್ತಿಯಾಗಲೀ ಕುಂದಿರಲಿಲ್ಲ. ಅಮೇರಿಕದಲ್ಲಾಗಿದ್ದರೆ ಅವರ ದೇಹಕ್ಕೆ ನಾನಾ ಕೊಳವೆಗಳನ್ನು ಚುಚ್ಚಿ ನೋಡಿಕೊಳ್ಳುತ್ತಿದ್ದರೋ ಏನೋ. ಆದರೆ, ಭಗವಂತ ಅವರಮಟ್ಟಿಗೆ ಹಾಗೂ ಅವರನ್ನು ನೋಡಿಕೊಳ್ಳುತ್ತಿದ್ದ ಮಕ್ಕಳಮಟ್ಟಿಗೆ ದಯೆ ಯನ್ನೇ ತೋರಿಸಿದ. ಅವರು ಆ ಹೀನಸ್ಥಿತಿಯಲ್ಲಿ ಹೆಚ್ಚುದಿನ ಬದುಕಲಿಲ್ಲ.

ಇದೆಲ್ಲ ನಡೆದು ಇಪ್ಪತ್ತೇಳು ವರ್ಷಗಳಮೇಲಾಯಿತು. ಜೀವನದ ಬಗ್ಗೆ ಇರಬೇಕಾದ ಪ್ರೀತಿಗೂ ಜೀವದ ಬಗ್ಗೆ ಇರಬೇಕಾದ ಪ್ರೀತಿಗೂ ವ್ಯತ್ಯಾಸವನ್ನು ಅವರು ಕಲಿಸಿ ಕಣ್ಮುಚ್ಚಿದ್ದರು. ಬದುಕುವುದೇ ಮುಖ್ಯವಲ್ಲ, ಇತರರಿಗೆ ಸಹಾಯ ಮಾಡಲಾಗದಿದ್ದರೂ ಇತರರಿಗೆ ತೊಂದರೆ ಕೊಡುತ್ತ ಭೂಮಿಗೆ ಭಾರವಾಗಬಾರದು, ಸಾರ್ಥಕವಾಗಿ ಬದುಕಬೇಕೇ ವಿನಃ ನಿರರ್ಥಕವಾಗಿ ಬದುಕುಳಿಯಬಾರದು ಎಂಬ ತತ್ತ್ವದಲ್ಲಿ ಅವರಿಗೆ ನಂಬಿಕೆ ಇದ್ದದ್ದರಿಂದ ತಮ್ಮ ಜೀವದ ಮೇಲಿನ ಪ್ರೀತಿಯನ್ನು ಅವರು ಕಳೆದುಕೊಂಡಿದ್ದರು, ಹೀಗಾಗಿ ಮೃತ್ಯುವಿನೊಡನೆ ಹೋರಾಟವನ್ನು ಅವರು ನಿಲ್ಲಿಸಿದ್ದರು. ಇದೆಲ್ಲ ನೆನಪಾಗಲು ಕಾರಣವಿಲ್ಲದೇ ಇಲ್ಲ. ಭೂತಕಾಲದಿಂದ ವರ್ತಮಾನಕ್ಕೆ ಬರೋಣ.

Terri Schiavoಟೆರ್ರಿ ಶಿಯಾವೋ ಎಂಬೊಬ್ಬ ಹೆಂಗಸು ಮರಣೋನ್ಮುಖರಾದ ರೋಗಿಗಳನ್ನು ಕೊನೆಗಾಲದಲ್ಲಿ ನೋಡಿಕೊಳ್ಳುವ ಫ್ಲಾರಿಡಾದ ಸೇವಾಗೃಹ ವೊಂದರಲ್ಲಿ ವಿಧಿಯಾಂದಿಗೆ ಸೆಣೆಸುತ್ತ ಮಲಗಿದ್ದಾಳೆ. ಇವಳು ಆರೋಗ್ಯಕರ ಜೀವನಕ್ಕೆ ಹಿಂದಿರುಗುವ ಆಸೆಯನ್ನು ಬಿಟ್ಟು ಅನೇಕ ವರ್ಷ ಗಳಾಗಿವೆ. ವೈದ್ಯರ ಹೇಳಿಕೆಯ ಪ್ರಕಾರ, ಆಕೆಯ ಮೆದಳು ಸತ್ತಿದೆ, ಅಂದರೆ ಅವಳಿಗೆ ಭಾವನೆಗಳಿಲ್ಲ, ನೋವಿನ, ರುಚಿಯ, ಬೇಕು-ಬೇಡ ಗಳ ಅನುಭವವಿಲ್ಲ. ಆದರೆ ಶ್ವಾಸಕೋಶ ಪುಪ್ಪುಸದಂತೆ ತಿದಿಯಾತ್ತುತ್ತಾ ಉಚ್ಛ್ವಾಸ-ನಿಶ್ವಾಸಗಳಲ್ಲಿ ತೊಡಗಿದೆ. ಹೃದಯ ರಕ್ತಚಲನೆಗೆ ಬೇಕಾದ ಒತ್ತಡವನ್ನು ಒದಗಿಸುತ್ತ ಧಡ್‌-ಧಡಕ್‌ ಎನ್ನುತ್ತಲೇ ಇದೆ. ನೀರು ಆಹಾರಗಳನ್ನು ಆಕೆ ಬಯಸಿ ಬೇಡುವುದಿಲ್ಲವಾದರೂ ಕೊಳವೆ ಗಳ ಮೂಲಕ ಯಾಂತ್ರಿಕ ಸಾಧನಗಳಿಂದ ಊಡಿಸಿದರೆ ದೇಹ ಜೀರ್ಣ ಮಾಡಿಕೊಂಡು ವಿಸರ್ಜನಾಕ್ರಮವನ್ನು ಅನುಸರಿಸುತ್ತದೆ.

ವೈದ್ಯಕೀಯ ವಿಜ್ಞಾನ ಎಷ್ಟರಮಟ್ಟಿಗೆ ಮುಂದುವರೆದಿದೆ ಎಂದರೆ ಈಕೆಯಂಥ ರೋಗಿಗಳನ್ನು ವರ್ಷಗಟ್ಟಲೆ ಇದೇ ಸ್ಥಿತಿಯಲ್ಲಿ ಕೃತಕವಾಗಿ ಬದುಕಿಸಿಟ್ಟಿರಬಹುದು. ಇಂಥ ರೋಗಿಗಳನ್ನು ನೋಡಿಕೊಳ್ಳುವುದು ಕಷ್ಟದ ವಿಚಾರ, ಮಾನಸಿಕ ಮತ್ತು ದೈಹಿಕ ಶ್ರಮದ ವಿಚಾರ ಹಾಗು ತುಂಬಾ ದುಬಾರಿ ವಿಚಾರ. ದೇಶದ ಮೆಡಿಕೇರ್‌ ಮತ್ತು ಮೆಡಿಕೇಡ್‌ ವ್ಯವಸ್ಥೆ ಖರ್ಚನ್ನು ತುಂಬಿಕೊಡದಿದ್ದರೆ ವೈಯ್ಯಕ್ತಿಕ ಖರ್ಚಿನಿಂದ ರೋಗಿಯನ್ನು ಉಳಿಸಿಕೊಳ್ಳುವುದು ಸಾಧಾರಣರಿಗೆ ಸುಲಭದ ಮಾತಲ್ಲ. ಇಂಥ ಸ್ಥಿತಿಯನ್ನು ಎದುರಿಸುವುದು ಸಮಾಜದ ದೃಷ್ಟಿಯಲ್ಲಿ ಒಂದು ಸಮಸ್ಯೆಯಾದರೆ, ಹತ್ತಿರದ ಬಂಧುಗಳ ದೃಷ್ಟಿಯಿಂದ ಮತ್ತೊಂದು ರೀತಿಯ ಕ್ಲಿಷ್ಟವಾದ ಸಮಸ್ಯೆ. ಸಮಾಜ ಮತ್ತು ಸರ್ಕಾರ ಖರ್ಚಿನ ದೃಷ್ಟಿ ಯಿಂದ ನೋಡಿದರೆ, ಹತ್ತಿರದ ಬಂಧುಗಳಿಗೆ ಇದೊಂದು ಬಿಡಿಸಲಾಗದ ಕಗ್ಗಂಟಾಗುತ್ತದೆ.

ವೈದ್ಯರು ವಾಸ್ತವಿಕ ಸ್ಥಿತಿಯನ್ನು ತಿಳಿಸುತ್ತಾರೆ ಆದರೆ ನೀರು ಆಹಾರಗಳನ್ನು ಕೊಡುತ್ತ ಇರಬೇಕೆ, ಕೊಡುವುದನ್ನು ನಿಲ್ಲಿಸಿಬಿಡಬೇಕೆ ಎಂಬ ವಿಷಯದಲ್ಲಿ ಸಲಹೆಕೊಡಲು ನಿರಾಕರಿಸುತ್ತಾರೆ. ಸೇವಾಗೃಹಗಳು ಮತ್ತು ಆಸ್ಪತ್ರೆಗಳು ಹಾಗೂ ಇತರ ಸಿಬ್ಬಂದಿವರ್ಗವೂ ಈ ವಿಷಯದಲ್ಲಿ ಕೈಹಾಕಲು ಹೆದರುತ್ತವೆ. ಈ ದೇಶದಲ್ಲಂತೂ ಮಾತುಮಾತಿಗೂ ಯಾರು ಯಾರಮೇಲೆ ಏಕೆ ಯಾವಾಗ ಹೇಗೆ ಎಷ್ಟು ಹಣಕ್ಕಾಗಿ ಮೊಕದ್ದಮೆ ಹೂಡುತ್ತಾರೋ ಊಹಿಸುವುದೂ ಕಷ್ಟ. ಎರಡೂಕಡೆ ವಾದಮಾಡಲು ಸಿದ್ಧರಿರುವ ವಕೀಲರು ಇರುವುದರಿಂದ ಮೊಕದ್ದಮೆ ಎತ್ತ ತಿರುಗುತ್ತ ದೋ ಹೇಳುವುದು ಕಷ್ಟ. ನ್ಯಾಯಾಲಯಗಳು ಕಾನೂನಿನ ತಾರ್ಕಣೆ ಮಾಡಲು ಇವೆಯಾದರೂ. ಇತ್ತೀಚೆಗೆ ಸರ್ಕಾರ ಸಹ ಈ ವೈಯಕ್ತಿಕ ವಿಚಾರದಲ್ಲಿ ಕೈಹಾಕಲು ಬಂದಿರುವುದರಿಂದ ಪರಿಸ್ಥಿತಿ ವಿಪರೀತಕ್ಕೆ ಹೋಗಿದೆ. ಇಂಥ ವಿಷಮಪರಿಸ್ಥಿತಿಯಲ್ಲಿ ನಾವು ಕೊಂಚ ಸಾವಧಾನ ವಾಗಿ ಜೀವನಪ್ರೀತಿ ಮತ್ತು ಜೀವದಪ್ರೀತಿಯಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ.

‘ಒಂದು ಜೀವವನ್ನು ಕೃತಕಮಾರ್ಗಗಳಿಂದ ಬದುಕಿಸಿಟ್ಟಿರಬೇಕೆ?’ ಎಂದು ತೀರ್ಮಾನಿಸುವಾಗ ವ್ಯಕ್ತಿಯ ವಯಸ್ಸು, ಆ ವ್ಯಕ್ತಿ ಬದುಕಿ ಉಳಿದರೂ ಮತ್ತೊಮ್ಮೆ ಆರೋಗ್ಯಕರಜೀವನ ನಡೆಸಲು ಇರ ಬಹುದಾದ ಸಾಧ್ಯತೆಗಳು, ಹೀಗೆ ಮಾಡಲು ತಗಲುವ ಖರ್ಚನ್ನು ಯಾರು ಭರಿಸಬೇಕು ಮುಂತಾದ ವಿಚಾರಗಳ ಬಗ್ಗೆ ಚಿಂತಿಸದೆ ವಿಧಿಯಿಲ್ಲ. ಹತ್ತಿರದ ಬಂಧುವರ್ಗ ಎದುರಿಸುವ ಜಟಿಲವಾದ ಪ್ರಶ್ನೆಗಳು ಹಲವು: ಒಂದುವ್ಯಕ್ತಿಯ ಜೀವನವನ್ನು ಕೊನೆಗಾಣಿಸಲು ನಮಗೆ ನೈತಿಕ ಹಕ್ಕಿದೆಯೆ? ಮೈಮೇಲೆ ಎಚ್ಚರವಿಲ್ಲದಿದ್ದ ಮಾತ್ರಕ್ಕೆ ರೋಗಿಗೆ ಹಸಿವು ನೀರಡಿಕೆ ನೋವು ನಲಿವು ಇರುವುದಿಲ್ಲವೇ? ಕೃತಕಸಾಧನಗಳ ಬಳಕೆ ಮಾಡಬೇಕೇ ಬೇಡವೇ ಎಂಬ ತೀರ್ಮಾನ ಮಾಡುವ ಹಕ್ಕು ಯಾರಿಗಿದೆ, ವೈದ್ಯರಿಗೇ? ಹತ್ತಿರದ ಬಂಧುಗಳಿಗೇ? ಧಾರ್ಮಿಕ ಗುರುಗಳಿಗೇ? ಕಾನೂನನ್ನು ಅರ್ಥೈಸುವ ನ್ಯಾಯಾಲಯಕ್ಕೇ? ಅಥವಾ ಕಾನೂನನ್ನು ಮಾಡುವ ಸರ್ಕಾರಕ್ಕೇ?

ಇದ್ದಕ್ಕಿದ್ದಂತೆ, ಅಮೇರಿಕ ಸರ್ಕಾರದ ಶಾಸಕಾಂಗದ ಪ್ರತಿನಿಧಿಸಭೆ ಮತ್ತು ಸೆನೆಟ್‌ ಮತ್ತು ಅಧ್ಯಕ್ಷರೂ ಆತುರಾತುರದಿಂದ ಈ ಬಗ್ಗೆ ತೀರ್ಮಾ ನಿಸಿ ಟೆರ್ರಿ ಶಿಯಾವೋ ಒಬ್ಬಳ ಜೀವದ ಬಗ್ಗೆ ಹಠಾತ್‌ ಪ್ರೀತಿಯನ್ನು ತೋರಿಸಿ ದೇಶದಲ್ಲೆಲ್ಲ ಗುಲ್ಲೆಬ್ಬಿಸಿದ್ದಾರೆ. ನ್ಯಾಯಾಲಯಗಳು ಮೇಲಿಂ ದ ಮೇಲೆ ಈ ವಿಷಯದಲ್ಲಿ ತೀರ್ಪುಕೊಟ್ಟಿದ್ದರೂ ತಮಗೆ ಒಪ್ಪಿಗೆಯಾಗುವ ತೀರ್ಮಾನವಾಗುವವರೆಗೆ ಬಿಡೆವು ಎಂಬಂತೆ ಶಿಯಾವೋ ತಂದೆ ತಾಯಿಗಳು ನಡೆದುಕೊಳ್ಳುತ್ತಿದ್ದಾರೆ. ಟೆರ್ರಿಯ ಗಂಡನ ವಿರೋಧವನ್ನು ಲೆಕ್ಕಿಸದೇ ಜೀವಪ್ರೇಮಿಗಳನೇಕರು ಸೇವಾಗೃಹದಮುಂದೆ ಹರತಾ ಳ ಆಚರಿಸುತ್ತ ಪವಾಡವೊಂದಕ್ಕಾಗಿ ಕಾದು ಕುಳಿತಿದ್ದಾರೆ. ಇಂಥಾ ಸಂದರ್ಭವೊಂದು ಬರಬಹುದೆಂದು ಕನಸುಗಾಣದ ಟೆರ್ರಿ ಉಯಿಲೊಂ ದನ್ನು ಬರೆದಿಡದೇ ನಿಶ್ಚೇಷ್ಟಿತಸ್ಥಿತಿಯನ್ನು ತಲುಪಿರುವುದರಿಂದ ಇಂಥ ಒಂದು ಸಂದಿಗ್ಧ ಬಂದೊದಗಿದೆ. ಇಂಥ ವೈಯ್ಯಕ್ತಿಕ ಜೀವನ್ಮರಣದ ಪ್ರಶ್ನೆ ನ್ಯಾಯಾಲಯದ ಕಟ್ಟೆಯನ್ನು ಸೇರಲೇಬಾರದಂತೆ ನೋಡಿಕೊಳ್ಳಬೇಕು. ಸರ್ಕಾರವಂತೂ ಇಂಥ ವಿಷಯಗಳಲ್ಲಿ ಹಸ್ತಕ್ಷೇಪಮಾಡದೇ ಇರುವುದು ಒಳ್ಳೆಯದು. ವರ್ಷಗಟ್ಟಲೆ ಕಾದು ನೋಡಿ ನಿರರ್ಥಕವೆನಿಸಿ ವೈದ್ಯರ ಸಲಹೆಯಮೇರೆಗೆ ಕೃತಕಸಾಧನಗಳನ್ನು ಕಿತ್ತು ಹಾಕಿದ ಮೇಲೆ ಹತ್ತಿರದ ಬಂಧುಗಳು ಈ ಸಮಸ್ಯೆಯನ್ನು ತಮ್ಮತಮ್ಮಲ್ಲೇ ಬಗೆಹರಿಸಿಕೊಳ್ಳಬೇಕಲ್ಲದೇ ವೃಥಾ ರಂಪಮಾಡುತ್ತ ರಾಜಕಾರಿಣಿಗಳಿಗೆ ಸರಕನ್ನು ಒದಗಿಸುತ್ತಿರುವುದು ವಿಷಾದನೀಯ. ಅಲ್ಲದೇ ಅನಗತ್ಯವಾದ ಖರ್ಚನ್ನು ಸಮಾಜದಮೇಲೆ ಹೇರುತ್ತಿರುವ ಜೀವಪ್ರೇಮಿಗಳು ಜೀವನಪ್ರಿತಿಗೂ ಜೀವದಪ್ರೀತಿಗೂ ಇರುವ ವ್ಯತ್ಯಾಸವನ್ನು ಗಮನಿಸಬೇಕು. ಗರ್ಭಪಾತಮಾಡಿ ಭ್ರೂಣಹತ್ಯೆಮಾಡುವ ಆಸ್ಪತ್ರೆಗಳಮುಂದೆ ಬಾಂಬ್‌ಗಳನ್ನು ಸ್ಫೋಟಿಸುವುದರಮೂಲಕ ವೈದ್ಯರನ್ನು ಕೊಲ್ಲುವುದು ಜೀವದಮೇಲಿನ ಪ್ರೀತಿಯಾಗುವುದಿಲ್ಲ. ಧಾರ್ಮಿಕ ಪುಸ್ತಕಗಳಲ್ಲಿ ಬರೆದಿರುವ ಅಪ್ರಕೃತ ನಿಯಮಗಳನ್ನು ಎಲ್ಲ ಸಂದರ್ಭಗಳಿಗೂ ಎಲ್ಲ ವ್ಯಕ್ತಿಗಳಿಗೂ ಅನ್ವಯಿಸುವುದು ಧಾರ್ಮಿಕತೆಯಾಗುವುದಿಲ್ಲ. (ಇಂದಿನ ವೈದ್ಯಕೀಯ ವಿಜ್ಞಾನದ ಬೆಳವಣಿಗೆಯನ್ನು ಊಹಿಸಿ ಯಾವ ಪ್ರಾಚೀನ ಧರ್ಮಗ್ರಂಥಗಳೂ ಮುಂದೆಂದೋ ಒದಗಬಹುದಾದ ಧರ್ಮಸಂಕಟದಬಗ್ಗೆ ನಿರ್ದಿಷ್ಟವಾಗಿ ಬರೆದಿಟ್ಟಿಲ್ಲ.) ಓಟು ಹಾಕಿದ ಪಕ್ಷಪಾತಿಗಳ ಮನಸ್ಸಿಗೆ ಹಿತವನ್ನುಂಟುಮಾಡಲು ದಿಢೀರ್‌ ಕಾನೂನು ಗಳನ್ನು ತಯಾರಿಸುವುದು ರಾಜಕೀಯ ಮುತ್ಸದ್ದಿತನವನ್ನು ಪ್ರದರ್ಶಿಸುವುದಿಲ್ಲ, ದೇಶಕ್ಕೆ ಹಿತವನ್ನೂ ತರುವುದಿಲ್ಲ.

ನನಗೆ ಅನೇಕ ವರ್ಷಗಳ ಸ್ನೇಹಿತರಾಗಿದ್ದ ಸಹೃದಯಿಯಾಬ್ಬರು, ಮೆದುಳಿನ ಗಡ್ಡೆಗೆ ತುತ್ತಾಗಿ ಕೆಲವೇ ತಿಂಗಳುಗಳ ಹೋರಾಟದ ನಂತರ ಯಾವ ಔಷಧಿ ಉಪಚಾರಗಳಿಗೂ ಬಗ್ಗದೇ ನಿಶ್ಚೇಷ್ಟಿತ ಪರಿಸ್ಥಿತಿಯಲ್ಲಿ ಸುಮಾರು ಆರುತಿಂಗಳು ಉಸಿರಾಡುತ್ತಿದ್ದರು. ಆ ಸಂಕಟದ ಪರಿಸ್ಥಿತಿ ಯಲ್ಲಿ ಆತನ ಧರ್ಮಪತ್ನಿ, ನೀರಿನ ಹನಿಗಳಲ್ಲದೇ ಮತ್ಯಾವ ಕೃತಕಸಾಧನವೂ ಬೇಡವೆಂದು ತೀರ್ಮಾನಿಸಿದರು. ಪ್ರತಿಸಂಜೆ ಗಂಡನ ಮುಂದೆ ಕೂತು ಭಗವದ್ಗೀತೆಯನ್ನು ಓದಿ ಆತನಿಗೆ ಕೇಳಿರಬಹುದು ಎಂದು ತೃಪ್ತಿಪಟ್ಟುಕೊಳ್ಳುತ್ತಿದ್ದರು. ಭಗವಂತನ ದಯದಿಂದ ಆತ ಕೆಲ ತಿಂಗಳಲ್ಲೇ ಉಸಿರಾಡುವುದನ್ನು ನಿಲ್ಲಿಸಿದರು. ವರ್ಷಗಟ್ಟಲೆ ಕೋಮ ಮುಂದುವರೆದಿದ್ದರೆ, ನೀರಿನ ಕೊಳವೆಯನ್ನೂ ನಿಲ್ಲಿಸುವ ತೀರ್ಮಾನ ವನ್ನು ಆಕೆ ತಮ್ಮ ಮಕ್ಕಳ ಮತ್ತು ವೈದ್ಯರ ಸಹಾಯದಿಂದ ಮಾಡಿದ್ದರು. ಇಂಥ ಪರಿಸ್ಥಿತಿ ಯಾರಿಗೂ ಬಾರದಿರಲಿ ಎಂದು ಪ್ರಾರ್ಥಿಸಿದರೂ ಯಾರಿಗೆ ಬರುತ್ತದೋ ಹೇಳಲು ಬರುವುದಿಲ್ಲ. ಆದ್ದರಿಂದ ಪ್ರತಿಯಾಬ್ಬರೂ ಮನೆಮಂದಿಯಾಂದಿಗೆ ಮತ್ತು ವಕೀಲ ಹಾಗೂ ವೈದ್ಯರೊಂ ದಿಗೆ ತಮ್ಮ ಅಭಿಪ್ರಾಯವನ್ನು ಚರ್ಚಿಸಿ ತೀರ್ಮಾನವನ್ನು ಉಯಿಲಿನಲ್ಲಿ ಬರೆದಿಡಲಿ ಎಂಬ ಸಲಹೆಯಾಂದಿಗೆ ವಿರಮಿಸುವೆ ಮುಂದಿನ ಕಂತಿನವರೆಗೆ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X