ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾದತರಂಗಿಣಿ - 18

By Super
|
Google Oneindia Kannada News

ಅಮೇರಿಕದ ರಾಜಧಾನಿಯ ಸುತ್ತ ನೆಲೆಸಿರುವ ಕರ್ನಾಟಕದ ಸಂಗೀತ ಪ್ರೇಮಿಗಳಿಗೆ ವರ್ಷಕ್ಕೊಮ್ಮೆ ರಸದೌತಣವನ್ನು ಬಡಿಸುತ್ತಾ ಬಂದಿರುವ ನಾದತರಂಗಿಣಿ ಸಂಸ್ಥೆಯ ಬಗ್ಗೆ ನಾನು ಅನೇಕ ಬಾರಿ ಬರೆದಿದ್ದೇನೆ. ಈ ಸಂಸ್ಥೆ ಕೊಲಂಬಸ್‌ (ಒಹಾಯೋ)ನಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಜನ್ಮತಾಳಿತು. ಜನ್ಮಸ್ಥಳದಲ್ಲಿ ಬೇರುಗಳನ್ನು ಬಿಟ್ಟು ಅದರ ಸಂಸ್ಥಾಪಕರು ಕೊಲಂಬಸ್ಸಿನಿಂದ ರಾಜಧಾನಿಗೆ ಬಂದು ನೆಲೆಸಿದ್ದು ಇಲ್ಲಿನ ಕರ್ನಾಟಕ ಸಂಗೀತಪ್ರಿಯರ ಪುಣ್ಯ ಎನ್ನಬೇಕು.

ಅಲ್ಲಿಂದ ಇಲ್ಲಿಗೆ ತಂದು ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಹದಿನೆಂಟು ವರ್ಷಗಳ ಹಿಂದೆ ಮೊಳೆತ ಒಂದು ದಿನದ ತ್ಯಾಗರಾಜ-ಪುರಂದರ ಉತ್ಸವ, ಕ್ರಮೇಣ ಎರಡು ದಿನಗಳಿಗೆ ಬೆಳೆದು, ಇತ್ತೀಚೆಗೆ ಮೂರುದಿನಗಳ ಹಬ್ಬವಾಗಿದೆ. ಮೊದಲ ಕೆಲ ವರ್ಷಗಳಲ್ಲಿ ಸ್ಥಳೀಯ ಮಕ್ಕಳು, ಹಾಡಲು ಉತ್ಸಾಹವುಳ್ಳ ಆದರೆ ಅಷ್ಟೇನೂ ನುರಿತಿರದ ಹಾಡುಗಾರರು ಮತ್ತು ಮಿತವಾದ ಸಂಖ್ಯೆಯಲ್ಲಿದ್ದ ಸಂಗೀತಜ್ಞರು ಒಂಟೊಂಟಿಯಾಗಿ ಅಥವಾ ಒಟ್ಟೊಟ್ಟಾಗಿ ವೃಂದಗಳಲ್ಲಿ ಹಾಡಿ ತಮ್ಮ ಸಂಗೀತಸೇವೆ ಮಾಡಿ ಕೃತಾರ್ಥರಾಗುತ್ತಿದ್ದರು.

ಅಂದಿನ ಉತ್ಸವಗಳಲ್ಲಿ ಅವರಿಗೆಲ್ಲ ಅವಕಾಶ ಕಲ್ಪಿಸುವುದೇ ಮುಖ್ಯೋದ್ದೇಶವಾಗಿತ್ತು. ಪಕ್ಕವಾದ್ಯ ನುಡಿಸುವವರ ಸಂಖ್ಯೆ ಅತಿ ವಿರಳವಾಗಿದ್ದ ದಿನಗಳು ಅವು. ದೂರದ ಊರುಗಳಿಂದ ಯಾರೂ ಬರುತ್ತಿರಲಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ಈ ಉತ್ಸವ ಅಮೇರಿಕದ ಒಂದು ಪ್ರಧಾನ ಸಂಗೀತಸಭಾ ಆಗಿ ಬೆಳೆದು, ನಾಮುಂದು-ತಾಮುಂದು ಎಂದು ಹಾಡಲು ಹವಣಿಸುವ ಅನೇಕ ಹಿರಿಯ ಕಿರಿಯ ಸಂಗೀತಜ್ಞರೂ ಮತ್ತು ಅವರ ಅನೇಕ ಶಿಷ್ಯರೂ ನೂರಾರು ಮೈಲಿದೂರದಿಂದ ಬಂದು ಭಾಗವಹಿಸುವ ಪದ್ಧತಿ ಈಗ ಬೆಳೆದಿದೆ. ಆಷ್ಟೇ ಅಲ್ಲ, ಭಾರತದಿಂದ ಅನೇಕ ಹೆಸರಾಂತ ಸಂಗೀತಗಾರರು ಬಂದು ನಾದತರಂಗಿಣಿಯ ಸಂಗೀತೋತ್ಸವದಲ್ಲಿ ಭಾಗವಹಿಸಿ ಸಂತೃಪ್ತರಾಗಿ ಹಿಂದಿರುಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಇಂಥ ಒಂದು ಉತ್ಸವ ನಡೆಸಲು ಬೇಕಾದ ಸಮಯ, ಹಣ, ಯತ್ನ, ಸಹನೆ ಇವೆಲ್ಲದರ ಜೊತೆಗೆ ಅನೇಕ ಮಿತ್ರರ, ರಸಿಕರ ಮತ್ತು ಸ್ವಯಂಸೇವಕರ ಸಹಾಯ, ಸಹಕಾರ ಇವೆಲ್ಲವನ್ನೂ ಗಳಿಸಿಕೊಂಡ ಹೆಗ್ಗಳಿಕೆ, ನಾದತರಂಗಿಣಿಯ ಕಾರ್ಯಭಾರಗಳನ್ನೆಲ್ಲ ಹೊತ್ತಿರುವುದು ಸಂಗೀತ ವಿದುಷಿ ಉಷಾ ಚಾರ್‌. ಅವರ ಬೆನ್ನಹಿಂದೆ ನಿಂತು ಅವಿರತವಾಗಿ ದುಡಿಯುವ ಅವರ ಪತಿ ಎ. ಆರ್‌. ಚಾರ್‌ ಸೇವೆ ಅನನ್ಯ.

ಈ ಸಂಸ್ಥೆಯ ವೈಶಿಷ್ಠ್ಯವೆಂದರೆ, ಇಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮುಂತಾಗಿ ಯಾವ ಪದಾಧಿಕಾರಿಗಳೂ ಇಲ್ಲ. ಆದರೂ ಇವರ ಬಂಧು-ಮಿತ್ರರ ಪರಿವಾರ ತುಂಬ ಅಪಾರವಾದದ್ದು. ಉಷಾ ಅವರ ಗುರುಗಳಾಗಿದ್ದ ಪ್ರಸಿದ್ಧ ಪಿಟೀಲು ವಾದಕರೂ, ಸಂಗೀತಜ್ಞರೂ ಆಗಿದ್ದ ಹಾಗು ನೂರಾರು ಶಿಷ್ಯರನ್ನು ತಯಾರು ಮಾಡಿದ ಖ್ಯಾತ ಅಧ್ಯಾಪಕರೂ ಆಗಿದ್ದ ಆನೂರು ರಾಮಕೃಷ್ಣ ಅವರ ಅನೇಕ ಪ್ರಸಿದ್ಧ ಶಿಷ್ಯರೂ ಮತ್ತು ಇಬ್ಬರು ಮಕ್ಕಳೂ ಇವರ ಪರಿವಾರದ ಅವಿಭಾಜ್ಯ ಅಂಗವಾಗಿದ್ದಾರೆ.

ಬೆಂಗಳೂರಿನ ಸಂಗೀತ ವೃತ್ತಗಳಲ್ಲಿ ಚಿರಪರಿಚಿತರಾದ ಮೃದಂಗವಿದ್ವಾಂಸರಾದ ಆನೂರು ಕುಟುಂಬದ ದತ್ತಾತ್ರೇಯ ಶರ್ಮ, ಅನಂತಕೃಷ್ಣ ಶರ್ಮ(ಶಿವು) ಪ್ರತಿವರ್ಷ ಬಂದು ಸಂಗೀತಗಾರರಿಗೆ ಪಕ್ಕವಾದ್ಯ ನುಡಿಸಿ ಸಹಕರಿಸುವುದೇ ಅಲ್ಲದೇ, ಆಸಕ್ತ ಸ್ಥಳೀಯ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನೂ ಮಾಡಿ, ಅನೇಕರ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಸಂಗೀತೋತ್ಸವದ ವ್ಯವಸ್ಥೆಗೆ ಬೆನ್ನೆಲುಬಾಗಿ ನಿಂತು, ಅತ್ಯಂತ ಶ್ರದ್ಧೆಯಿಂದ ದುಡಿಯುತ್ತಾ ಬಂದಿದ್ದಾರೆ.

English summary
Nadatarangini is not for profit organisation in US propagating Indian Classic Music. Meet Usha Char artsitic director of Nadatarangini.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X