• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕಾದಲ್ಲಿ ನಾದಮಯ... ಆನಂದಮಯ...

By Super
|

ತ್ಯಾಗರಾಜ ಮತ್ತು ಪುರಂದರದಾಸರೇ ಅಲ್ಲದೇ ಇತರ ಪ್ರಮುಖ ವಾಗ್ಗೇಯಕಾರರರಾದ ಪಾಪನಾಶಂ ಶಿವನ್‌, ಮುತ್ತು ್ತ ಸ್ವಾಮಿ ದೀಕ್ಷಿತರ್‌, ಮೈಸೂರು ವಾಸುದೇವಾಚಾರ್ಯ, ಮುತ್ತಯ್ಯ ಭಾಗವತರ್‌, ಮತ್ತು ಸ್ವಾತಿ ತಿರುನಾಳ್‌ ಇವರುಗಳ ರಚನೆಗಳಿಗಾಗಿಯೇ ಮೀಸಲಾಗಿದ್ದ ಗೋಷ್ಠಿಗಾನಗಳನ್ನು ಸ್ಥಳೀಯ ಸಂಗೀತಶಾಲೆಗಳ ಉಪಾಧ್ಯಾಯ-ಶಿಷ್ಯ-ವೃಂದಗಳು ಅತ್ಯಂತ ಶ್ರದ್ಧೆಯಿಂದ ನಡೆಸಿಕೊಟ್ಟರು. (ಸ್ಥಳೀಯ ಉಪಾಧ್ಯಾರು, ಕ್ರಮವಾಗಿ: ವಿದ್ವಾನ್‌ ಡಿ.ಕೆ. ನಾಗರಾಜನ್‌, ವಿದುಷಿ ಉಷಾ ಚಾರ್‌, ವಿದುಷಿ ನಿರ್ಮಲಾ ರಾಮಸ್ವಾಮಿ, ವಿದುಷಿ ಮರಗತಮ್‌ ರಾಮಸ್ವಾಮಿ, ಮತ್ತು ವಿದುಷಿ ಜಯಾ ಬಾಲಸುಬ್ರಮಣ್ಯನ್‌). ಕಿರಿಯರಾದರೂ ಉತ್ಸಾಹದಿಂದ ಹಾಡಿದ ‘ನಾದಸುರಭಿ' ವೃಂದ ಈ ವರ್ಷದ ಹೊಸ ಗುಂಪು (ಈ ಗುಂಪಿನ ಯುವ ಸದಸ್ಯರ ಬಗ್ಗೆ ಕೆಲವು ವಿವರಗಳನ್ನು ಮುಂದೆ ಬರೆಯುವ ಯೋಜನೆ ಇದೆ).

ಈ ವರ್ಷದ ಮತ್ತೊಂದು ವಿಶೇಷ, ಉಷಾ ಚಾರ್‌ ಅವರ ಪ್ರಮುಖ ಶಿಷ್ಯರಲ್ಲೊಬ್ಬರಾದ ರಾಘವೇಂದ್ರ ಬಾಟ್ನಿಯವರ ನೇತೃತ್ವದಲ್ಲಿ ತಮ್ಮ ವಿದ್ಯಾರ್ಥಿನಿಯರೊಡಗೂಡಿ ಹನ್ನೆರಡು ವೀಣೆಗಳ ಮೇಳವನ್ನು ರಂಗದಮೇಲೆ ತಂದ ಒಂದು ಸಾಹಸ. ಈ ‘ನಾದಲಹರಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯಾಬ್ಬರೂ ಮುಂದೆ ವೈಯಕ್ತಿಕ ವೀಣಾವಾದನ ಮಾಡುವ ಕಾಲವೂ ಬರಲಿ ಎಂದು ಹಾರೈಸೋಣ. ವಿಶೇಷ ಕಾರ್ಯಕ್ರಮಗಳ ಪೈಕಿ ಈಗಾಗಲೇ ಜನಪ್ರಿಯವಾಗಿರುವ ಮತ್ತೊಂದು ಆಕರ್ಷಣೆ ಎಂದರೆ ತಾಳವಾದ್ಯಗಳ ಮೇಳ.

ದತ್ತಾತ್ರೇಯ ಶರ್ಮರ ನಿರ್ದೇಶನದಲ್ಲಿ ನಡೆದ ‘ ಲಯಲಹರಿ' ಕಾರ್ಯಕ್ರಮ ಹಿಂದಿನಂತೆ ರಂಜನೀಯವಾಗಿದ್ದು ಅನೇಕರ ಮೆಚ್ಚುಗೆಯನ್ನು ಪಡೆಯಿತು. ಪೌರ್ವಾತ್ಯ ತಾಳವಾದ್ಯಗಳೇ ಅಲ್ಲದೇ ಪಾಶ್ಚಿಮಾತ್ಯವಾದ್ಯಗಳೂ ಬೆರೆತು ಹಿರಿಯ ನುರಿತ ವಾದ್ಯಪಟುಗಳೊಡನೆ ಸುಲಭವಾಗಿ ಕೈಜೋಡಿಸಿದ ಯುವಕ ಗೌತಮ್‌ ಸುಧಾಕರ್‌ ಮತ್ತು ಅವರುಗಳನ್ನೆಲ್ಲ ತನ್ನ ಪಿಟೀಲಿನ ಮಾಧುರ್ಯದಿಂದ ಬೆಸದ ಯುವಕಲಾವಿದೆ ರಾಧಿಕಾ ಚಾರ್‌ ‘ ಲಯಲಹರಿ' ಕಾರ್ಯಕ್ರಮದ ಕೇಂದ್ರಬಿಂದುಗಳಾಗಿ ಮಿಂಚಿದರು.

ಪ್ರಮುಖ ಕಚೇರಿಗಳು : ಮೂರುದಿನಗಳ ಕಾರ್ಯಕ್ರಮದಲ್ಲಿ ಮೂರು ಪ್ರಮುಖ ಕಚೇರಿಗಳನ್ನು ಏರ್ಪಡಿಸಿದ್ದರು. ಮೊದಲ ದಿನದ ಮುಖ್ಯ ಕಚೇರಿ ಮಂಜುಳಾ ಸುರೇಂದ್ರ ಅವರ ವೀಣಾವಾದನವು ಶ್ರೀನಾಥ್‌ ಬಾಲ ಅವರ ಮೃದಂಗ ಮತ್ತು ಕಾಶೀನಾಥ್‌ ಅವರ ಖಂಜೀರ ಸಹಕಾರದೊಂದಿಗೆ ವಿಜೃಂಭಿಸಿತು. ಆಮೇರಿಕಾ ಪ್ರವಾಸಿಯಾಗಿ ಮೊದಲ ಬಾರಿ ಆಗಮಿಸಿರುವ, ಮೈಸೂರು ವೀಣಾ ದೊರೆಸ್ವಾಮಿ ಅಯ್ಯಂಗಾರ್‌ ಅವರ ಶಿಷ್ಯಪರಂಪರೆಯ ಈ ಕಲಾವಿದೆ ತಮಗೆ ದೊರೆತ ಅಲ್ಪಸಮಯದಲ್ಲೇ ತಮ್ಮ ಕೈಚಳಕವನ್ನು ಪ್ರದರ್ಶಿಸಿ ಮನ್ನಣೆ ಪಡೆದರು. ಕಾರ್ಯಕ್ರಮದ ಮುಖ್ಯ ಅಂಶವಾಗಿ ಅವರು ಆರಿಸಿಕೊಂಡ ಕಲ್ಯಾಣಿ ಆಲಾಪನೆ, ಅದರೊಂದಿಗೆ ಪೋಣಿಸಿದ ಘನರಾಗಪಂಚಕ (ನಾಟ, ಗೌಳ, ಆರಭಿ, ವರಾಳಿ ಮತ್ತು ಶ್ರೀ) ದಲ್ಲಿ ತಾನ ಮತ್ತು ಲಾಲಿತ್ಯದಿಂದ ಕೂಡಿದ ತ್ಯಾಗರಾಜರ ಕೃತಿ ನಿಧಿಚಾಲಾ ಸುಖಮಾ ಕೃತಿಯನ್ನು ಸುಂದರವಾದ ನೆರವಲ್‌ ಮತ್ತು ಸ್ವರಪ್ರಸ್ತಾರಗಳಿಂದ ವಿಸ್ತರಿಸಿ, ಚಿಕ್ಕದಾದರೂ ಚೊಕ್ಕವಾದ ಕಚೇರಿಮಾಡಿ ರಸಿಕರಿಗೆ ರಂಜನೆಯನ್ನಿತ್ತರು.

ಎರಡನೇ ದಿನದ ಮುಖ್ಯ ಕಚೇರಿ ಆರ್‌. ಏ. ರಮಾಮಣಿಯವರಿಂದ ಹಾಡುಗಾರಿಕೆ. ಪಿಟೀಲು ನುಡಿಸಿದವರು ಸಂಧ್ಯಾ ಶ್ರೀನಾಥ್‌, ಮೃದಂಗ ನುಡಿಸಿದವರು ದತ್ತಾತ್ರೇಯ ಶರ್ಮ ಮತ್ತು ಖಂಜೀರ ನುಡಿಸಿದವರು ಸುಧೀಂದ್ರ ರಾವ್‌. ರಮಾಮಾಣಿ ಎರಡು ವರ್ಷಗಳ ಕೆಳಗೆ ಇದೇ ಉತ್ಸವದಲ್ಲಿ ಭಾಗವಹಿಸಿ ಅವಧಾನ ಪಲ್ಲವಿಯ ಚಮತ್ಕಾರವನ್ನು ಮೊದಲಬಾರಿ ಅಮೇರಿಕದಲ್ಲಿ ಪ್ರದರ್ಶಿಸಿ ಭಲೆ ಎನಿಸಿಕೋಂಡಿದ್ದರು ಎಂದರೆ ಉತ್ಪ್ರೇಕ್ಷೆಯಿಲ್ಲ. ಈ ವರ್ಷದ ಕಾರ್ಯಕ್ರಮಗಳಲ್ಲಿ ಅನೇಕ ದಿನಗಳವರೆಗೆ ನೆನಪಿನಲ್ಲಿರುವ ಕಚೇರಿ ಇವರದ್ದು ಎಂಬುದೂ ಬಾಯ್ಮಾತಿನ ಹೊಗಳಿಕೆಯಲ್ಲ, ಸತ್ಯಸಂಗತಿ.

ಕಲ್ಯಾಣಿ ವರ್ಣದೊಂದಿಗೆ ಪ್ರಾರಂಭವಾಗಿ, ಗೌಳ, ಹುಸೇನಿ, ಚಾರುಕೇಶಿ ಮುಂತಾದ ರಾಗಗಳ ಕೃತಿಗಳನ್ನು ಹಾಡಿ, ವರಾಳಿಯನ್ನು ಸವಿಸ್ತಾರವಾಗಿ ಆಲಾಪನೆ ಮಾಡಿ ದೀಕ್ಷಿತರ ‘ ಮಾಮವ ಮೀನಾಕ್ಕ್ಷಿ' ಯನ್ನು ಮನೋಜ್ಞವಾಗಿ ಮಂಡಿಸಿದರು. ಅವರು ಪ್ರಾಧಾನ್ಯತೆ ಕೊಟ್ಟು ಹಾಡಿದ ಕಾಂಬೋಜಿಯಂತೂ ರಸಿಕರ ಮನಸ್ಸಿಗೆ ವಿಶೇಷ ತೃಪ್ತಿ ಕೊಟ್ಟಿತು. ರಾಗದ ಸೌಂದರ್ಯವನ್ನು ಅನೇಕ ಸ್ತರಗಳಲ್ಲಿ ಹೊರಗೆಡವಿದ್ದಲ್ಲದೇ ‘ ಎವರಿಮಾಟ' ಕೃತಿಯನ್ನು ಎದೆತುಂಬಿ ವಿಸ್ತರಿಸಿದರು. ಕಚೇರಿಗೆ ಕಳಶಪ್ರಾಯವಾಗಿ ಅಪರೂಪದ ವಾಗಧೀಶ್ವರಿ ರಾಗದಲ್ಲಿ ಸಮಯಪ್ರಜ್ಞೆಯನ್ನು ಮೀರದೇ ಚಿಕ್ಕದಾಗಿ, ಆದರೆ ಸಮರ್ಥವಾಗಿ, ಮಿಂಚಿನಂತೆ ಝಳುಪಿಸಿದ ಅವರ ರಾಗ-ತಾನ-ಪಲ್ಲವಿ ಉಲ್ಲಾಸವನ್ನು ತಂದಿತು. ಲಯದಲ್ಲಿ ಎತ್ತಿದ ಕೈ ಎನಿಸಿಕೊಂಡ ಈ ಗಾಯಕಿಯ ತಾಳದ ಸವಾಲು ಪಕ್ಕವಾದ್ಯದವರಿಗೆ ಒಂದುಕಡೆಯಾದರೆ, ‘ ಈಶ್ವರಿ, ಜಗದೀಶ್ವರಿ, ಪರಮೇಶ್ವರಿ, ಪಾಹಿಮಾಮ್‌, ವಾಗಧೀಶ್ವರಿ' ಎಂಬ ಸುಂದರ ಸಾಹಿತ್ಯದ ಸವಿಕಟ್ಟು ಕೇಳುಗರಿಗೆ ಇನ್ನೊಂದುಕಡೆ!

ಪಾಶ್ಚಿಮಾತ್ಯ ಸಂಗೀತದಲ್ಲೂ ಸಾಕಷ್ಟು ಪರಿಶ್ರಮವುಳ್ಳ ರಮಾಮಣಿಯವರು ಕರ್ನಾಟಕ ಸಂಗೀತವನ್ನು ಶಾಶ್ತ್ರೀಯತೆಗೆ ಕೊಂಚವೂ ಭಂಗವಾಗದಂತೆ ಶುದ್ಧವಾಗಿ ಹಾಡಿದ್ದು ಇವರ ವೈಶಿಷ್ಟ್ಯ್ಯ. ಸಂಧ್ಯಾ ಶ್ರೀನಾಥ್‌ ಅವರ ಪಿಟೀಲು ವಾದನವೂ ಅಮೋಘವಾಗಿತ್ತು, ಹಾಡುಗಾರ್ತಿಯ ಆಲಾಪ, ತಾನ ಮತ್ತು ಕಲ್ಪನಾಸ್ವರಗಳಿಗೆ ಯಥೋಚಿತವಾಗಿ ಪ್ರತಿಕ್ರಿಯಿಸಿ ಸಭಾಸದರ ಮನ್ನಣೆ ಪಡೆದರು. ಲಯವಿದ್ವಾಂಸರಾದ ದತ್ತಾತ್ರೇಯ ಶರ್ಮರ ಮೃದಂಗ ಮತ್ತು ಉತ್ಸಾಹದಿಂದ ನುಡಿಸಿದ ತರುಣ ಸುಧೀಂದ್ರರ ಖಂಜೀರ, ಇವುಗಳ ಜೋಡಿ ಅದ್ಭುತವಾಗಿತ್ತು. ಒಟ್ಟಿನಲ್ಲಿ ಅಂದಿನ ಕಚೇರಿ ಒಂದು ಸುಂದರ ಅನುಭವವಾಗಿತ್ತು.

ಇದೇ ಮೇ 7ರಂದು ಚಿನ್ಮಯ ಮಿಷನ್‌ನಲ್ಲಿ ಭೈರವಿ ರಾಗದ ಸರ್ವಾಂಗೀಣ ಸೌಂದರ್ಯವನ್ನು ಪರಿಚಯಿಸುವ ‘ಭೈರವಿಯಾಂದಿಗೆ ಒಂದು ಸಂಜೆ' ಕಾರ್ಯಕ್ರಮ -ರಮಾಮಣಿಯವರ ಹಾಡುಗಾರಿಕೆಯನ್ನು ಇದೇ ಪಕ್ಕವಾದ್ಯಗಳೊಂದಿಗೆ ನಾದತರಂಗಿಣಿ ಏರ್ಪಡಿಸಿದೆ. ರಸಿಕರು ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳುವರೆಂದು ನಂಬೋಣ.

ಉತ್ಸವದ ಮೂರನೆಯ ಹಾಗು ಕೊನೆಯ ದಿನದ ಮುಖ್ಯಕಚೇರಿ ಬೆಂಗಳೂರು ವಿಶ್ವವಿದ್ಯಾನಿಲಯದ ಮಹಾರಾಣಿ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥೆಯೂ ಪ್ರಸಿದ್ಧ ವಿದುಷಿಯೂ ಆದ ನಾಗಮಣಿ ಶ್ರೀನಾಥ್‌ ಅವರದ್ದು. ಆವರೊಂದಿಗೆ ಬಾಯಿ ಹಾಡುಗಾರಿಕೆಗೆ ಬೆಂಬಲವಿತ್ತವರು ಅವರ ಪ್ರಮುಖ ಶಿಷ್ಯೆಯರಲ್ಲಿ ಒಬ್ಬರಾದ, ಸ್ವತಃ ಬೆಂಗಳೂರು ಆಕಾಶವಾಣಿಯ ವಿದುಷಿಯೂ ಆದ ಚಂದ್ರಿಕಾ ರಾಮಣ್ಣ. ಪಿಟೀಲು ನುಡಿಸಿದವರು ಆಂಧ್ರದ ರಾಘವೇಂದ್ರ ರಾವ್‌, ಮೃದಂಗ ನುಡಿಸಿದವರು ತಮಿಳುನಾಡಿನ ಮೇಲ್ಕಾವೇರಿ ಬಾಲಾಜಿ ಅವರು. ಘಟವನ್ನು ನುಡಿಸಿದವರು (ಕೇರಳವಾಸಿ) ಉಡುಪಿ ಶ್ರೀಧರ್‌.

ಭಾರತ ಸರ್ಕಾರದ ಆರ್ಥಿಕಸಹಾಯದೊಂದಿಗೆ ಆಗಮಿಸಿರುವ ಈ ಗಾಯಕವೃಂದ ದಕ್ಷಿಣಭಾರತದ ಪ್ರತಿನಿಧಿ! ರಾಮ್‌ನಾಡ್‌ ಕೃಷ್ಣನ್‌ ಅವರಲ್ಲಿ ಗುರುಕುಲವಾಸ ಪದ್ಧತಿಯಲ್ಲಿ ಸಂಗೀತ ಕಲಿತ ನಾಗಮಣಿಯವರು ಉತ್ತಮ ಗಾಯಕಿಯಾಗಿರುವುದಷ್ಟೇ ಅಲ್ಲದೇ ಸ್ವಯಂ ವಾಗ್ಗೇಯಕಾರ್ತಿಯೂ ಆಗಿದ್ದಾರೆ. ದುರದೃಷ್ಟವಶಾತ್‌, ಧ್ವನಿವರ್ಧಕದ ವ್ಯವಸ್ಥೆಯಲ್ಲಿ ಸ್ವಲ್ಪ ಹೆಚ್ಚುಕಮ್ಮಿ ಇದ್ದದ್ದು ಕಲಾವಿದರಿಗೆ ಕೊಂಚ ಬಾಧೆಕೊಟ್ಟಂತೆ ತೋರಿದರೂ ಸಭಾಸದರಿಗೇನೂ ಅಂಥ ಕುಂದೆನಿಸಲಿಲ್ಲ. ಕೊನೆಯ ಕಾರ್ಯಕ್ರಮವಾಗಿದ್ದರಿಂದ, ಭಾನುವಾರ ರಾತ್ರಿಯಾದ್ದರಿಂದ, ಸಮಯದಲ್ಲಿ ಕೊಂಚ ವ್ಯತ್ಯಾಸವಾದರೂ ಮರುದಿನದ ಕೆಲಸದ ಕೋಟಲೆಗಳು ನೆನಪಾಗಿ ಸಭಾಸದರನ್ನು ಬಾಧಿಸುವುದರಿಂದ ಸಮಯದ ಒತ್ತಡ ಉಂಟಾಗಿತ್ತು(ಇಂಥ ಪರಿಸ್ಥಿತಿಯನ್ನು ತಪ್ಪಿಸಲು, ಕೊನೆಯ ಕಾರ್ಯಕ್ರಮವನ್ನು ಸ್ವಲ್ಪ ಮುಂಚೆಯೇ ಪ್ರಾರಂಭಿಸಿದರೆ ಉತ್ತಮ ಎಂಬ ಸಲಹೆ ಹಲವಾರು ಸದಸ್ಯರಿಂದ ಕೇಳಿಬಂತು).

ಆದರೂ, ಮೊದಲನೇ ಕೃತಿಯಲ್ಲೇ(ಶಿವಶಿವಶಿವ ಎನರಾದ, ಪಂತುವರಾಳಿ) ನಾಗಮಣಿ ಕಚೇರಿಗೆ ಕಾವೇರಿಸಿದರು. ಕಲ್ಯಾಣವಸಂತದಲ್ಲಿ ಹಾಡಿದ ಪುರಂದರದಾಸರ ‘ಇನ್ನೂ ದಯ ಬಾರದೇ ದಾಸನ ಮೇಲೆ' ಕಿವಿಗೂ ಮನಸ್ಸಿಗೂ ತುಂಬ ಹಿತವಾಗಿತ್ತು. ಮೋಹನರಾಗದಲ್ಲಿ ಹಾಡಿದ ‘ ಹರಿಯೇ ಸರ್ವೋತ್ತಮ' ಕೃತಿಯಲ್ಲಿ ನಾಗಮಣಿಯವರ ಹಾಡುಗಾರಿಕೆಯ ಆಳ ಮತ್ತು ಅನುಭವ ಚೆನ್ನಾಗಿ ವ್ಯಕ್ತವಾಯಿತು. ಶುಭಪಂತುವರಾಳಿಯ ರಾಗ-ತಾನ-ಪಲ್ಲವಿಗೆ ಸಮಯ ಸಾಲದೇ ಸ್ವಲ್ಪ ಚುಟುಕುಮಾಡಬೇಕಾಯಿತು. ಆದರೂ ಇದ್ದ ಸಮಯದಲ್ಲೇ ತಮ್ಮ ಪ್ರತಿಭೆಯ ಪರಿಚಯ ಮಾಡಿಕೊಟ್ಟರು. ಕೊನೆಯಲ್ಲಿ ಹಾಡಿದ ಅವರದ್ದೇ ರಚನೆ, ವಾಸಂತಿ ರಾಗದ ಒಂದು ತಿಲ್ಲಾನ ಅವರ ರಚನಾಕೌಶಲ್ಯಕ್ಕೆ ಉತ್ತಮ ಉದಾಹರಣೆಯಂತಿತ್ತು. ಇವರಿಗೆ ಬೆಂಬಲವಾಗಿ ಹಿನ್ನೆಲೆಯಲ್ಲಿ ಹಾಡಿದ ಚಂದ್ರಿಕಾ ಅವರ ಗಾಯನ ಸಾಮರ್ಥ್ಯವೂ ಗಮನಿಸಬೇಕಾದದ್ದು ಎಂಬುದು ಖಚಿತವಾಯಿತು. ಪಕ್ಕವಾದ್ಯದ ಮಟ್ಟವೂ ಉತ್ತಮವಾಗಿತ್ತು. ಈ ವೃಂದ ಈ ಬೇಸಿಗೆಯಲ್ಲಿ ಅಮೇರಿಕದ ವಿವಿಧ ಭಾಗಗಳಲ್ಲಿ ಒಟ್ಟು ಇಪ್ಪತ್ತಾರು ಕಚೇರಿಗಳಿಗೆ ಅಣಿಮಾಡಿಕೊಂಡಿದೆ. ದಕ್ಷಿಣ ಭಾರತದ ಈ ಪ್ರತಿನಿಧಿಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಲೆಂದು ಹಾರೈಸೋಣ.

ಇಂಥಾ ಸೊಗಸಾದ ಸಂಗೀತದ ಸಮಾರಂಭವನ್ನು ವ್ಯವಸ್ಥೆಮಾಡಲು ಸಹಾಯಮಾಡಿದ ಲೆಕ್ಕವಿಲ್ಲದಷ್ಟು ಸ್ವಯಂ ಸೇವಕ /ಸೇವಕಿಯರಿಗೆ ಧನ್ಯವಾದಗಳು. ಎಲ್ಲರಿಗೂ ರುಚಿಕರವಾದ ಭೋಜನಗಳನ್ನು ತಯಾರಿಸಿ ಬಡಿಸಿದ ‘ನಳಪಾಕ' ಗುಂಪಿನ ಸದಸ್ಯರಿಗೆ, ಉಂಡು ಸಂತಸಪಟ್ಟವರ ಪರವಾಗಿ ಅನಂತ ನಮನಗಳು. ಈ ಉತ್ಸವ ನಮ್ಮ ನಾಡಿನ ಹಳ್ಳಿಗಳಲ್ಲಿ ನಡೆಯುವ ರಥೋತ್ಸವದಂತೆ, ಎಲ್ಲರೂ ಕೈಹಾಕಿ ಎಳೆಯದೇ ತೇರು ಮುಂದೆ ಹೋಗುವುದಿಲ್ಲ. ನಮ್ಮ ಸಂಸ್ಕೃತಿಯನ್ನು ಪರದೇಶದಲ್ಲಿ ಉಳಿಸಿ ಬೆಳೆಸಲು ಇಂಥ ಉತ್ಸವಗಳು ನಿರಂತರವಾಗಲಿ ಎಂಬ ಶುಭಹಾರೈಕೆಯಾಂದಿಗೆ ವಿರಮಿಸುವೆ, ಮುಂದಿನ ಕಂತಿನವರೆಗೆ.

English summary
Nadatarangini 18th annivarsary concerts in US. An overview of the music concerts by Dr. M.S. Nataraj. Nadatarangini propagates Indian Classical Music in US of A.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more