ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲಿಲ್ಲದ ಕಲಾವಿದನ ಚಿತ್ರಕಾವ್ಯಕ್ಕೆ ನಮಸ್ಕಾರ

By * ಎಆರ್ ಮಣಿಕಾಂತ್
|
Google Oneindia Kannada News

Armless artist Peter Longstaff
ಇಂಗ್ಲೆಂಡಿನ ಹೆಸರಾಂತ ಚಿತ್ರಕಲಾವಿದ ಪೀಟರ್ ಲಾಂಗ್‌ಸ್ಟಫ್‌ನ ಯಶೋಗಾಥೆಯನ್ನು ವಿವರಿಸುವ ಮೊದಲು ಪೂರ್ವಪೀಠಿಕೆಯ ರೂಪದಲ್ಲಿ ಮೇಲಿನ ಮಾತುಗಳನ್ನು ಹೇಳಬೇಕಾಯಿತು. ವಿಶೇಷ ಏನೆಂದರೆ -ಲಾಂಗ್‌ಸ್ಟಫ್ ರಚಿಸಿದ ಕಲಾಕೃತಿಗಳಿಗೆ ಇಂಗ್ಲೆಂಡಿನಲ್ಲಿ ವಿಪರೀತ ಬೇಡಿಕೆಯಿದೆ. ಒಂದೊಂದು ಕಲಾಕೃತಿಯೂ ಸಾವಿರ ಸಾವಿರ ಡಾಲರ್‌ಗೆ ಮಾರಾಟವಾಗುತ್ತದೆ. ಅರೆ, ಚಿತ್ರಕಲಾವಿದನೊಬ್ಬನ ಆರ್ಟ್‌ವರ್ಕ್‌ಗೆ ಲಕ್ಷ ರೂ.ಗೆ ಮಾರಾಟವಾದರೆ ಅದರಲ್ಲಿ ವಿಶೇಷವೇನು ಬಂತು ಎಂದಿರಾ? ವಿಶೇಷವಿರುವುದೇ ಇಲ್ಲಿ. ಏನೆಂದರೆ ಲಾಂಗ್‌ಸ್ಟಫ್‌ಗೆ ಹುಟ್ಟಿನಿಂದಲೇ ಎರಡೂ ಕೈಗಳಿಲ್ಲ. ಆತ ಕಾಲಿನಿಂದಲೇ ಚಿತ್ರ ಬರೆಯುತ್ತಾನೆ!

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವನು ಲಾಂಗ್‌ಸ್ಟಫ್. ಆತನ ತಾಯಿಗೆ ಯೌವನದ ದಿನಗಳಿಂದಲೂ ಬೆಳಗ್ಗೆ ಎದ್ದ ತಕ್ಷಣವೇ ತಲೆಸುತ್ತು, ತಲೆನೋವು, ಮೈಕೈ ನೋವು ಕಾಣಿಸಿಕೊಳ್ಳುತ್ತಿತ್ತು. ಈ ಸಂಕಟದಿಂದ ಪಾರಾಗಲು ಅವಳು ಸಿಗರೇಟು ಸೇದಲು ಕಲಿತಳು. ಹಿಂದೆಯೇ ಡ್ರಿಂಕ್ಸ್ ತೆಗೆದುಕೊಳ್ಳಲು ಆರಂಭಿಸಿದಳು. ಇಷ್ಟು ಸಾಲದೆಂಬಂತೆ ತನಗಿದ್ದ ಕಾಯಿಲೆಗೆಂದು ತಪ್ಪದೇ ಮಾತ್ರೆಗಳನ್ನೂ ನುಂಗಿದಳು. ಸಿಗರೇಟು, ಮದ್ಯ ಮತ್ತು ಮಾತ್ರೆ-ಈ ಮೂರರ ಸೈಡ್ ಎಫೆಕ್ಟ್ ಆಕೆಗೆ ಹುಟ್ಟಿದ ಮಗುವಿನ ಮೇಲಾಯ್ತು. ಹುಟ್ಟಿದ ಮಗುವಿಗೆ ಎರಡೂ ಕೈಗಳು ಇರಲಿಲ್ಲ!

ಕುಡುಕಿಯಾದರೇನಂತೆ; ಅವಳೂ ತಾಯಿಯಲ್ಲವೆ? ಮಗನ ಪರಿಸ್ಥಿತಿ ಕಂಡು ಆ ತಾಯಿ ಕೂಡ ಭೋರಿಟ್ಟು ಅತ್ತಳು. ಒಂದು ಸಂತೋಷವೆಂದರೆ ಈ ಡಿಪ್ರೆಶನ್‌ನಿಂದ ಆಕೆ ಬೇಗ ಚೇತರಿಸಿಕೊಂಡಳು. ಮಗುವಿಗೆ ಪೀಟರ್ ಲಾಂಗ್‌ಸ್ಟಫ್ ಎಂದು ಹೆಸರಿಟ್ಟಳು. ಕೈಗಳು ಇಲ್ಲ ಅಂದ ಮೇಲೆ, ಕಾಲುಗಳನ್ನೇ ಕೈಗಳ ಥರಾ ಬಳಸಬೇಕು ಎಂದು ಹೇಳಿಕೊಟ್ಟಳು. ಕಾಲ್ಬೆರಳ ಸಹಾಯದಿಂದಲೇ ಬ್ರಷ್ ಮಾಡಿಕೊಳ್ಳಲು, ಬರೆಯಲು, ಕಾಫಿ ಕುಡಿಯಲು, ಜಗ್ ಹಿಡಿದುಕೊಳ್ಳಲು ಕಲಿಸಿದಳು. ಎಲ್ಲಕ್ಕಿಂತ ಹೆಚ್ಚಾಗಿ, ನೀನು ಯಾರಿಗೂ ಕಡಿಮೆಯಿಲ್ಲ ಎಂದು ಪದೇ ಪದೆ ಹೇಳುತ್ತ ಬಂದಳು. ಮಗ ಒಂದೇ ಒಂದು ಒಳ್ಳೆಯ ಕೆಲಸ ಮಾಡಿದರೂ ಅದನ್ನು ಹತ್ತು ಮಂದಿಗೆ ಹೇಳಿಕೊಂಡು ಮೆರೆದಾಡಿದಳು. ಇದರ ಒಟ್ಟು ಪರಿಣಾಮ ಏನಾಯಿತೆಂದರೆ, ನಾನು ಅಂಗವಿಕಲ ಎಂಬ ಭಾವನೆಯೇ ಲಾಂಗ್‌ಸ್ಟಫ್‌ನನ್ನು ಕಾಡಲಿಲ್ಲ. ಅವನು ಕೀಳರಿಮೆಗಳಿಂದ ಮುಕ್ತನಾಗಿ ಬೆಳೆಯುತ್ತಾ ಹೋದ.

ಪ್ರಾಪ್ತ ವಯಸ್ಕನಾಗುವ ವೇಳೆಗೆ ಪೀಟರ್‌ಗೆ ತನ್ನ ಮಿತಿ ಮತ್ತು ದೌರ್ಬಲ್ಯದ ಬಗ್ಗೆ ಖಡಕ್ಕಾಗಿ ಗೊತ್ತಿತ್ತು. ಈ ಮಧ್ಯೆಯೂ ಅವನು ಫುಟ್‌ಬಾಲ್ ಕಲಿತ. ಎರಡೂ ಕೈಗಳು ಇರಲಿಲ್ಲವಲ್ಲ. ಅದೇ ಕಾರಣದಿಂದ ಎದುರಾಳಿ ಆಟಗಾರರ ಮಧ್ಯೆ ದಿಢೀರನೆ ನುಸುಳುವುದು ಅವನಿಗೆ ತುಂಬ ಸುಲಭವಾಯಿತು. ಹೈಸ್ಕೂಲಿನ ದಿನಗಳಲ್ಲಂತೂ ಪೀಟರ್‌ಗೆ ಚೆಂಡು ಸಿಕ್ಕಿದರೆ ಗೋಲ್ ಆಯ್ತು ಎಂದೇ ಭಾವಿಸಲಾಗುತ್ತಿತ್ತು. ಒಂದಷ್ಟು ದಿನಗಳ ನಂತರ ಸ್ವಉದ್ಯೋಗವನ್ನೇಕೆ ಮಾಡಬಾರದು ಎಂಬ ಯೋಚನೆ ಪೀಟರ್‌ಗೆ ಬಂತು. ತಕ್ಷಣವೇ ಆತ ಟ್ರಾಕ್ಟರ್ ಓಡಿಸಲು ಕಲಿತ. ಹಿಂದೆಯೇ ಹಂದಿ ಸಾಗಣೆಯ ಕೋರ್ಸ್‌ಗೆ ಸೇರಿಕೊಂಡ. ಅವರಲ್ಲಿ ಪದವಿ ಪಡೆದ! ನಂತರ ಹಂದಿ ಸಾಕುವ ಫಾರ್ಮ್ ಆರಂಭಿಸಿದ. ಮುಂದೆ ಹಂದಿಗಳನ್ನು ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಮಾರ್ಕೆಟ್‌ಗೆ ಹೋಗಿ ಮಾರಿ ಬರುವುದೇ ಅವನ ಉದ್ಯೋಗವಾಯಿತು.

ಈ ವೃತ್ತಿಯಲ್ಲಿಯೇ ಪೀಟರ್ ಭರ್ತಿ ಇಪ್ಪತ್ತು ವರ್ಷ ಕಳೆದ. ಆದರೆ, ಸ್ವಲ್ಪ ವಯಸ್ಸಾದಂತೆ, ಇನ್ನು ಮುಂದೆ ಈ ಕೆಲಸ ಕಷ್ಟ ಎಂಬುದು ಅವನಿಗೆ ಅರ್ಥವಾಗಿ ಹೋಯಿತು. ಏಕೆಂದರೆ, ಹಂದಿಗಳ ಹಿಂಡನ್ನು ಕಂಟ್ರೋಲ್ ಮಾಡಲು ಅವನಿಗೆ ಕಷ್ಟವಾಗತೊಡಗಿತು. ಜತೆಗೆ, ಮಾರ್ಕೆಟ್‌ನಲ್ಲಿ ಖರೀದಿಗೆ ಬಂದ ಜನ ಕೆಲವೊಮ್ಮೆ ನುಗ್ಗಿ ಬರುತ್ತಿದ್ದರು. ಕೈಗಳೇ ಇರಲಿಲ್ಲವಲ್ಲ? ಆ ಕಾರಣದಿಂದಲೇ ಗುಂಪಾಗಿ ಬಂದವರನ್ನು ಅತ್ತಿತ್ತ ಸರಿಸುವುದೂ ಪೀಟರ್‌ಗೆ ಕಷ್ಟವಾಗುತ್ತಿತ್ತು. ಪರಿಣಾಮ, ಅದೊಂದು ದಿನ ಈ ಕೆಲಸಕ್ಕೆ ಗುಡ್‌ಬೈ ಹೇಳಿ, ಫುಟ್‌ಬಾಲ್ ಕೋಚ್ ಹುದ್ದೆಗೆ ಸೇರಿಕೊಂಡ. ಒಂದಷ್ಟು ವರ್ಷ ಕೋಚ್ ಆಗಿ ಇಂಗ್ಲೆಂಡಿನ ಹತ್ತಾರು ನಗರಗಳಿಗೆ ತನ್ನ ತಂಡದೊಂದಿಗೆ ಹೋಗಿಬಂದ ಪೀಟರ್. ಅವನ ಕಾಲ್ಬೆರಳ ಚಳಕ, ಫುಟ್‌ಬಾಲ್‌ನಲ್ಲಿ ಅವನಿಗಿರುವ ಪ್ರಾವೀಣ್ಯತೆ ಕಂಡು ಎಲ್ಲರೂ ಬೆರಗಾದರು.

ಆದರೆ, ಕೆಲವೇ ದಿನಗಳಲ್ಲಿ ಈ ಕೋಚ್ ಹುದ್ದೆಯಲ್ಲೂ ಅಂಥ ವಿಶೇಷ ವಿಲ್ಲ ಅನ್ನಿಸಿತು ಪೀಟರ್‌ಗೆ. ಆಗಲೇ ಆತ ಚಿತ್ರಕಲೆಯೆಡೆಗೆ ತಿರುಗಿ ನೋಡಿದ. ಕಾಲ್ಬೆರಳ ಸಹಾಯದಿಂದಲೇ ಬರೆಯಬಹುದು, ಪೇಸ್ಟ್ ಮಾಡಬಹುದು, ಬಾಗಿಲು ತೆಗೆಯಬಹುದು, ಊಟ ಮಾಡಬಹುದು ಎಂದಾದರೆ, ಅದೇ ಕಾಲ್ಬೆರಳ ಸಹಾಯದಿಂದ ಚಿತ್ರ ಬರೆಯಲು ಏಕೆ ಸಾಧ್ಯವಿಲ್ಲ ಎಂದೇ ಆತ ಯೋಚಿಸಿದ. ನಂತರ ಅವನು ತಡಮಾಡಲಿಲ್ಲ. ಲಂಡನ್‌ನಲ್ಲಿರುವ ಅಂಗವಿಕಲರ ಚಿತ್ರಕಲಾ ಕೇಂದ್ರಕ್ಕೆ ವಿದ್ಯಾರ್ಥಿಯಾಗಿ ಸೇರಿಯೇ ಬಿಟ್ಟ.

ಮುಂದಿನದೆಲ್ಲವೂ ಅವನ ಯಶೋಗಾಥೆಯೇ: ಕಲೆಯ ಎಲ್ಲ ಸಾಧ್ಯತೆಗಳನ್ನೂ ಅರ್ಥಮಾಡಿಕೊಂಡ ಪೀಟರ್, ಒಂದೊಂದೇ ಹೊಸ ಚಿತ್ರ ಬರೆಯುತ್ತಾ ಹೋದ. ಅದರಲ್ಲೂ ಪ್ರಕೃತಿಯ ಸೊಬಗನ್ನು ಚಿತ್ರಗಳಲ್ಲಿ ಹಿಡಿದಿಟ್ಟ. ಏಕಾಗ್ರತೆ ಸಾಧಿಸಲೆಂದು ಯೋಗ ಕಲಿತ. ಧ್ಯಾನ ಕಲಿತ. ಈ ಹಠಸಾಧನೆಯೆಲ್ಲಾ ಅವನ ಕಲಾಕೃತಿಗಳಲ್ಲಿ ಫಳಫಳಿಸಿತು.

ಈಗ ಪೀಟರ್‌ಗೆ ಭರ್ತಿ ಐವತ್ತೊಂದು ವರ್ಷ. ಅವನಿಗೆ ಹದಿನಾಲ್ಕು ವರ್ಷದ ಮಗನಿದ್ದಾನೆ. ಹೆಂಡತಿ ತೊರೆದು ಹೋಗಿದ್ದಾಳೆ. ಆದರೆ ಆ ಜಾಗಕ್ಕೆ ಹೊಸ ಗರ್ಲ್‌ಫ್ರೆಂಡ್ ಬಂದಿದ್ದಾಳೆ. ಈ ಮಧ್ಯೆ ಕಲಾವಿದನಾಗಿ ಆತ ದೊಡ್ಡ ಎತ್ತರ ತಲುಪಿಕೊಂಡಿದ್ದಾನೆ. ಕ್ರಿಸ್ ಮಸ್‌ನ ಸಂದರ್ಭದಲ್ಲಿ ಪೀಟರ್‌ನ ಕಲಾಕೃತಿಗಳು ಬಿಸಿದೋಸೆಗಳಂತೆ ಖರ್ಚಾಗುತ್ತಿವೆ. ಕಾಲಲ್ಲಿ ಬರೆದ ಒಂದೊಂದು ಚಿತ್ರವೂ ಸಾವಿರ ಸಾವಿರ ಡಾಲರ್‌ಗೆ ಮಾರಾಟವಾಗಿದೆ. ಇಂಗ್ಲೆಂಡಿನ ಮಹಾನಗರಗಳಲ್ಲೆಲ್ಲ ಪೀಟರ್‌ನ ಕಲಾಕೃತಿಗಳ ಎಕ್ಸಿಬಿಷನ್ ನಡೆದಿದೆ.

ಇಷ್ಟೆಲ್ಲ ಆದರೂ ಪೀಟರ್ ಅಹಂಕಾರದ ಕೈಗೆ ಬುದ್ದಿ ಕೊಟ್ಟಿಲ್ಲ. ಆತ, ಈಗಲೂ ಸಾಮಾನ್ಯರಲ್ಲಿ ಸಾಮಾನ್ಯನಂತೆಯೇ ಇದ್ದಾನೆ. ಅಂಗವೈಕಲ್ಯದ ನೋವು ನನ್ನೊಳಗೂ ಖಂಡಿತ ಇದೆ. ಆದರೆ, ಈ ವಿಷಯವಾಗಿ ಅಳುತ್ತಾ ಕೂರಲು ನಾನು ಸಿದ್ಧನಿಲ್ಲ, ಇಷ್ಟಕ್ಕೂ ಅಳುತ್ತ ಕೂತರೆ ನನಗೆ ಕೈ ಬಂದು ಬಿಡುತ್ತಾ? ಎಂದು ಪ್ರಶ್ನಿಸುತ್ತಾನೆ ಪೀಟರ್. ಹಿಂದೆಯೇ, ಕೈಗಳಿಲ್ಲ ಎಂಬ ಕೊರಗು ನನಗಂತೂ ಇಲ್ಲ. ಎರಡೂ ಕಾಲುಗಳನ್ನೇ ಎರಡೂ ಕೈಗಳಂತೆ ಬಳಸುವುದನ್ನು ನಾನು ಅಭ್ಯಾಸ ಮಾಡಿಕೊಂಡಿದ್ದೀನಿ. ಈ ಬದುಕಲ್ಲಿ ನಾನಂತೂ ಸುಖಿ ಎನ್ನುತ್ತಾನೆ.

ಅವನ ಸಾಧನೆ, ಛಲ, ಕಷ್ಟವನ್ನು ಎದುರಿಸಿ ಗೆದ್ದ ರೀತಿ ಕಂಡಾಗ ಮನಸ್ಸು ಮೂಕವಾಗುತ್ತದೆ. ಕಾಲಿಲ್ಲದವನ ಚಿತ್ರಕಾವ್ಯ'ಕ್ಕೆ ಕೈ ಮುಗಿಯುವ ಮನಸ್ಸಾಗುತ್ತದೆ. ಅಲ್ಲವೆ?

<strong>« ಕಾಲಲ್ಲಿ ಬರೆದ ಚಿತ್ರಕ್ಕೆ ಲಕ್ಷ ಲಕ್ಷ!</strong>« ಕಾಲಲ್ಲಿ ಬರೆದ ಚಿತ್ರಕ್ಕೆ ಲಕ್ಷ ಲಕ್ಷ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X