• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾವನ್ನು ಗೆದ್ದ ಟ್ಯೂಶನ್ ಮಾಸ್ಟರ್ ಬನ್ಸಾಲ್

By Staff
|

ದೇಹದ ಅರ್ಧ ಭಾಗವೇ ಸ್ವಾಧೀನದಲ್ಲಿಲ್ಲ ಎಂದು ಗೊತ್ತಾದ ನಂತರವೂ ಅಪಾರ ಜೀವನೋತ್ಸಾಹದಿಂದ ಬದುಕುತ್ತಿರುವ; ಸಾವು ಮಗ್ಗುಲಲ್ಲೇ ನಿಂತಿದೆ ಎಂದು ಗೊತ್ತಾದ ನಂತರವೂ ಇನ್ನೂ 20 ವರ್ಷ ಬದುಕ್ತೀನಿ ನೋಡ್ತಾ ಇರಿ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿರುವ ಬನ್ಸಾಲ್- ಚಿಕ್ಕ ಪುಟ್ಟ ಸೋಲಿಂದ ಹತಾಶರಾಗಿ ಗೋಳಾಡುವ ಎಲ್ಲರಿಗೂ ಮಾದರಿ. ಅಲ್ಲವೇ?

* ಎಆರ್ ಮಣಿಕಾಂತ್

ಇಲ್ಲಿ ಹೇಳಲು ಹೊರಟಿರುವುದು ಒಬ್ಬ ಮಹಾನ್ ಸಾಧಕನ ಕಥೆ. ಅವರ ಹೆಸರು ವಿ.ಕೆ. ಬನ್ಸಾಲ್. ನೋಡಲಿಕ್ಕೆ ಅವರು ನಮ್ಮ-ನಿಮ್ಮಂತೆಯೇ ಇದ್ದಾರೆ ನಿಜ. ಆದರೆ ಅವರಿಗೆ ಸೊಂಟದ ಕೆಳಗಿನ ಭಾಗ ಸಂಪೂರ್ಣವಾಗಿ ಸ್ವಾನದಲ್ಲಿಲ್ಲ. ಪಾರ್ಶ್ವವಾಯು ಪೀಡಿತರಂತೆ ಕಾಣುವ ಬನ್ಸಾಲ್ ದಶಕದ ಹಿಂದೆ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದುದು ನಿಜ. ಆದರೆ ಇವತ್ತು ಅವರು ಟ್ಯೂಶನ್ ಮಾಸ್ಟರ್ ಎಂದೇ ಹೆಸರಾಗಿದ್ದಾರೆ. ರಾಜಾಸ್ತಾನದ ಜಿಲ್ಲಾ ಕೇಂದ್ರವಾದ ಕೋಟದಲ್ಲಿ ಅವರ ಬನ್ಸಾಲ್ ಕೋಚಿಂಗ್ ಕ್ಲಾಸ್' ಹೆಸರಿನ ಟ್ಯುಟೋರಿಯಲ್ ಇದೆ. ಅಲ್ಲಿ ಪಾಠ ಹೇಳಿಸಿಕೊಂಡರೆ ಜನ್ಮ ಸಾರ್ಥಕವಾಯಿತು ಎಂದು ಭಾವಿಸುವ ವಿದ್ಯಾರ್ಥಿಗಳಿದ್ದಾರೆ. ದೇಶದ ಪ್ರತಿಷ್ಠಿತ ಕೋಚಿಂಗ್ ಕ್ಲಾಸ್ ಎಂಬ ಹಿರಿಮೆ ಕೂಡ ಬನ್ಸಾಲ್ ಕೋಚಿಂಗ್ ಕ್ಲಾಸ್‌ನ ಪಾಲಾಗಿದೆ. ಇಷ್ಟೆಲ್ಲ ಆದರೂ ಬನ್ಸಾಲ್ ಅವರ ದೈಹಿಕ ಸಮಸ್ಯೆ ಪರಿಹಾರವಾಗಿಲ್ಲ. ಅವರು ಈಗಲೂ ವ್ಹೀಲ್‌ಚೇರ್‌ನ ಆಶ್ರಯದಲ್ಲಿಯೇ ಬದುಕುತ್ತಿದ್ದಾರೆ!

ಅಲ್ಲ, ವೃತ್ತಿಯಿಂದ ಮೆಕ್ಯಾನಿಕಲ್ ಎಂಜಿನಿಯರ್ ಆದ ಬನ್ಸಾಲ್, ದೇಶದ ಅತ್ಯುತ್ತಮ ಟ್ಯೂಟರ್ ಅನ್ನಿಸಿಕೊಂಡದ್ದು ಹೇಗೆ? ಅವರ ಅನಾರೋಗ್ಯಕ್ಕೆ ಕಾರಣವಾದರೂ ಏನು? ಅವರ ಯಶೋಗಾಥೆಯ ಹಿಂದಿರುವುದು ಶ್ರಮವೋ, ಅದೃಷ್ಟವೋ ಅಥವಾ ದೈವ ಸಂಕಲ್ಪವೋ? ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಲಖನೌ ಸಮೀಪದ ಝಾನ್ಸಿಯವರಾದ ಬನ್ಸಾಲ್ ಜನಿಸಿದ್ದು 26-10-1949ರಲ್ಲಿ. ತವರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಬನ್ಸಾಲ್, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ನಂತರ ರಾಜಸ್ಥಾನದ ಕೋಟ ಎಂಬಲ್ಲಿರುವ ಜೆ.ಕೆ. ಸಿಂಥೆಟಿಕ್ಸ್ ಕಂಪನಿಯಲ್ಲಿ ನೌಕರಿಗೆ ಸೇರಿಕೊಂಡರು. ಮದುವೆ ಯಾದರು. ನಂತರದ ಐದಾರು ವರ್ಷಗಳಲ್ಲಿ ಎರಡು ಹೆಣ್ಣು, ಒಂದು ಗಂಡು ಮಗುವಿನ ತಂದೆಯಾದರು. ಇಚ್ಛೆಯನರಿತು ನಡೆವ ಪತ್ನಿ, ವೆಚ್ಚಕ್ಕೆ ಹೊನ್ನು, ಸಂತೋಷ ನೀಡಲೆಂದೇ ಬದುಕಿಗೆ ಬಂದ ಮಕ್ಕಳನ್ನು ಕಂಡು- ಸ್ವರ್ಗಕ್ಕೆ ಕಿಚ್ಚು ಹಚ್ಚಲು ಬನ್ಸಾಲ್ ನಿರ್ಧರಿಸಿದ್ದರು ನಿಜ. ಆದರೆ 1975ರ ಚಳಿಗಾಲದ ಒಂದು ಮುಂಜಾನೆಯಲ್ಲಿ ಆಗಬಾರದ್ದು ಆಗಿ ಹೋಯಿತು. ಅವತ್ತು ಮಂಡಿಯಿಂದ ಕೆಳಗಿನ ಭಾಗ ಜೋಮು ಹಿಡಿದಂತೆ ಭಾಸವಾಯಿತು, ಹತ್ತಿಪ್ಪತ್ತು ನಿಮಿಷದಲ್ಲಿಯೇ ಜೋಮು ಬಿಟ್ಟು ಹೋಗುತ್ತದೆ ಎಂದುಕೊಂಡ ಬನ್ಸಾಲ್ ಹಾಗೇ ಕೂತರು. ಆದರೆ ಆಗಿದ್ದೇ ಬೇರೆ. ಐದಾರು ನಿಮಿಷಗಳಲ್ಲಿ ಮತ್ತೊಂದು ಕಾಲಿಗೂ ಜೋಮು ಹಿಡಿಯಿತು. ನಂತರದ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು ಬನ್ಸಾಲ್.

***

ಮಿಸ್ಟರ್ ಬನ್ಸಾಲ್, ನಿಮಗೊಂದು ಕಹಿ ಸುದ್ದಿ ಹೇಳಬೇಕಾಗಿದೆ. ಏನೆಂದರೆ ನಿಮ್ಮ ಸೊಂಟದ ಕೆಳಗಿನ ಭಾಗ ಪೂರ್ತಿಯಾಗಿ ಸ್ವಾನ ಕಳೆದುಕೊಂಡಿದೆ. ಬಹುಶಃ ಇದು ವಂಶವಾಹಿ ಕಾಯಿಲೆ ಅನಿಸುತ್ತದೆ. ಇದಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ. ಮುಚ್ಚುಮರೆ ಇಲ್ಲದೆ ಹೇಳ್ತಾ ಇದೀವಿ. ಅಮ್ಮಮ್ಮಾ ಅಂದ್ರೆ ನೀವು ಇನ್ನು ಹದಿನೈದು ವರ್ಷ ಬದುಕಬಹುದು ಅಷ್ಟೇ. ಅದಕ್ಕಿಂತ ಜಾಸ್ತಿ ದಿನ ಬದುಕುವ ಛಾನ್ಸಸ್ ತುಂಬಾ ಕಡಿಮೆ. ಈಗ ದೇಹದ ಅರ್ಧ ಭಾಗವೇ ನಿಷ್ಕ್ರಿಯವಾಗಿದೆಯಲ್ಲ? ಅದೇ ಕಾರಣದಿಂದ ಮುಂದೆ ಒಂದೊಂದೇ ಹೊಸ ಕಾಯಿಲೆಗಳು ನಿಮ್ಮ ಜೊತೆಯಾಗಲಿವೆ. ಎಲ್ಲವನ್ನೂ ಎದುರಿಸಲಿಕ್ಕೆ ಈಗಿನಿಂದಲೇ ಮಾನಸಿಕವಾಗಿ ಸಿದ್ಧರಾಗಿ...' ನಿರ್ವಿಕಾರ ಭಾವದಿಂದಲೇ ಇಷ್ಟನ್ನೂ ಹೇಳಿದ ವೈದ್ಯರು ಕಡೆಗೊಮ್ಮೆ ಗುಡ್‌ಲಕ್' ಎಂದು ಹೊರನಡೆದರು.

ಈ ರೋಗಕ್ಕೆ ಚಿಕಿತ್ಸೆ ಸಾಧ್ಯವಿಲ್ಲ ಎಂದು ಒಬ್ಬ ಡಾಕ್ಟರ್ ಹೇಳಿದರೆ, ನಾವೆಲ್ಲ ಇನ್ನೊಬ್ಬ ವೈದ್ಯರನ್ನು ಹುಡುಕುವುದಿಲ್ಲವೆ? ಬನ್ಸಾಲ್ ಕೂಡ ಹಾಗೇ ಮಾಡಿದರು. ಆಸ್ಪತ್ರೆಯಿಂದ ಆಸ್ಪತ್ರೆಗೆ, ವಾರ್ಡ್‌ನಿಂದ ವಾರ್ಡ್‌ಗೆ ಅಲೆದರು. ಅಲೋಪತಿ, ಹೋಮಿಯೋಪತಿ, ಆಯುರ್ವೇದ, ನಾಟಿ ವೈದ್ಯ ಎಲ್ಲಕ್ಕೂ ಸೈ' ಎಂದರು. ಈ ಚಿಕಿತ್ಸೆಗಳಿಂದ ಕಷ್ಟಕಾಲಕ್ಕೆಂದು ಕೂಡಿಟ್ಟಿದ್ದ ಹಣವೆಲ್ಲ ಖರ್ಚಾಗಿ ಹೋಯಿತು. ಆದರೆ ರೋಗ ಗುಣವಾಗಲಿಲ್ಲ. ಈ ಸಂದರ್ಭದಲ್ಲಿಯೇ ಪತ್ರಮಿತ್ರರಾಗಿದ್ದ ಅಮೆರಿಕದ ವೈದ್ಯರೊಬ್ಬರು ಹೀಗೆ ಸಲಹೆ ನೀಡಿದ್ದರು : ಈ ಕಾಯಿಲೆ ಬಗ್ಗೆ ಯೋಚಿಸಿ ಯೋಚಿಸಿ ನೀವು ಮಾನಸಿಕವಾಗಿ ಇಳಿದು ಹೋಗ್ತೀರಿ. ಒಂದು ಕೆಲ್ಸ ಮಾಡಿ. ನೀವು ಟ್ಯೂಶನ್ ಹೇಳಿಕೊಂಡು ಯಾಕೆ ಹೊಸಬದುಕು ಶುರು ಮಾಡಬಾರದು? ಟ್ಯೂಶನ್ ಮಾಡ್ತೀರಿ ಅಂದ್ರೆ ನೀವು ಯಾವಾಗಲೂ ಓದಿಕೊಳ್ತಾ ಇರಬೇಕಾಗುತ್ತೆ. ಆ ಒತ್ತಡದಲ್ಲಿ ನಿಮಗೆ ಕಾಯಿಲೆಯ ನೆನಪೇ ಬರುವುದಿಲ್ಲ...'

ವೈದ್ಯರ ಸಲಹೆಯೇನೋ ಚೆನ್ನಾಗೇ ಇತ್ತು. ಆದರೆ ಎಂಜಿನಿಯರ್ ಆಗಿದ್ದ ಬನ್ಸಾಲ್‌ಗೆ ಪಾಠ ಮಾಡಿ ಅಭ್ಯಾಸವೇ ಇರಲಿಲ್ಲ. ಹೀಗಿರುವಾಗ ಟ್ಯೂಶನ್ ಶುರುಮಾಡುವುದಾದರೂ ಹೇಗೆ? ಟ್ಯೂಶನ್ ಮಾಡುವುದಾದರೂ ಯಾರಿಗೆ ಎಂದು ಯೋಚಿಸಿ ಹಣ್ಣಾದರು ಬನ್ಸಾಲ್. ಈ ಸಂದರ್ಭದಲ್ಲಿ ನೆರವಿಗೆ ಬಂದ ಬನ್ಸಾಲ್‌ರ ಪತ್ನಿ ನೀಲಂ. ಈಗ ಒಂದು ಟ್ರೈಸೈಕಲ್ ತಗೊಳ್ಳೋಣ. ಅದರಲ್ಲಿ ನೀವು ಆಫೀಸಿಗೆ ಹೋಗಿ ಬರೋದು ಅಭ್ಯಾಸ ಮಾಡಿಕೊಳ್ಳಿ. ಇಲ್ಲಿ ಟ್ಯೂಶನ್ ಮಾಡಲಾಗುವುದು' ಎಂದು ಬೋರ್ಡ್ ಹಾಕಿಸ್ತೇನೆ. ಮುಂದೆ, ಯಾರು ಬರ್‍ತಾರೋ ಅವರಿಗೆ ಟ್ಯೂಶನ್ ಹೇಳಿ. ಹೇಗಿದ್ರೂ ನಿಮ್ದು ಎಂಜಿನಿಯರಿಂಗ್ ಫೀಲ್ಡ್ ತಾನೆ? ಗಣಿತ-ವಿಜ್ಞಾನದ ವಿಷಯ ನಿಮ್ಗೆ ತುಂಬಾ ಚೆನ್ನಾಗಿ ಗೊತ್ತಿರುತ್ತೆ. ಎಸೆಸ್ಸೆಲ್ಸಿ-ಪಿಯುಸಿ ಮಕ್ಕಳಿಗೆ ಪಾಠ ಹೇಳಿದ್ರಾಯ್ತು...' ಎಂದಳು.

ಮರುದಿನ ಟ್ರೈಸೈಕಲ್‌ನಲ್ಲೇ ಆಫೀಸಿಗೆ ಹೊರಟರು ಬನ್ಸಾಲ್. ಸಂಜೆಯ ವೇಳೆಗೆ ಮನೆಯ ಮುಂದೆ -ಇಲ್ಲಿ ಟ್ಯೂಶನ್ ಮಾಡಲಾಗುವುದು' ಎಂಬ ಬೋರ್ಡ್ ಇತ್ತು ನಿಜ. ಆದರೆ ಎರಡು ತಿಂಗಳಾದರೂ ಅವರಲ್ಲಿ ಪಾಠ ಹೇಳಿಸಿಕೊಳ್ಳಲು ಒಬ್ಬೇ ಒಬ್ಬ ವಿದ್ಯಾರ್ಥಿಯೂ ಬರಲಿಲ್ಲ. ಮುಂದೇನು ' ಎಂದು ಬನ್ಸಾಲ್ ಅವರು ತಲೆಮೇಲೆ ಕೈಹೊತ್ತು ಕೂತಿದ್ದಾಗಲೇ ಒಬ್ಬ ವಿದ್ಯಾರ್ಥಿ ಬಂದ. ಹಿಂದೆಯೇ ಅವನ ತಂದೆ ತಾಯಿಯೂ ಇದ್ದರು. ಪೋಷಕರೇ ಮಾತು ಆರಂಭಿಸಿ ಹೇಳಿದರು: ಇವ್ನು ನಮ್ಮ ಮಗ ಸ್ವಾಮಿ. ಏಳನೇ ಕ್ಲಾಸು. ವಿಪರೀತ ದಡ್ಡ. ಇವನಿಗೆ ಪಾಠ ಹೇಳಿಕೊಟ್ಟು ಉದ್ದಾರ ಮಾಡಿ ಸ್ವಾಮೀ...'

ಎಸ್ಸೆಸ್ಸೆಲ್ಸಿ-ಪಿಯುಸಿ ಮಕ್ಕಳಿಗೆ ಪಾಠ ಹೇಳುವುದೆಂದು ಬನ್ಸಾಲ್ ನಿರ್ಧರಿಸಿದ್ದರು ನಿಜ. ಆದರೆ, ಕಣ್ಣೆದುರಿಗಿದ್ದವನು ಏಳನೇ ತರಗತಿಯ ಶತದಡ್ಡ! ಇರಲಿ, ಇದು ನನಗೆ ಸತ್ವ ಪರೀಕ್ಷೆಯ ಕಾಲ ಎಂದುಕೊಂಡ ಬನ್ಸಾಲ್, ಆ ಹುಡುಗನಿಗೆ ಇನ್ನಿಲ್ಲದ ಶ್ರದ್ಧೆಯಿಂದ ಪಾಠ ಹೇಳಿಕೊಟ್ಟರು. ಹಾಂ ಹೂಂ ಅನ್ನುವುದರೊಳಗೆ ಆರು ತಿಂಗಳು ಕಳೆದೇ ಹೋಯಿತು. ಟ್ಯೂಶನ್‌ಗೆ ಬರುತ್ತಿದ್ದ ಹುಡುಗನ ಪರೀಕ್ಷೆ ಮುಗಿದು ಫಲಿತಾಂಶವೂ ಬಂತು. ಬನ್ಸಾಲ್ ಅವರ ಬದುಕಿನ ಮೊದಲ ಪವಾಡ ನಡೆದದ್ದೇ ಆಗ. ಅದುವರೆಗೂ ಎಲ್ಲರಿಂದಲೂ ಶತದಡ್ಡ ಎಂದು ಕರೆಸಿಕೊಂಡಿದ್ದ ಆ ಹುಡುಗ ಶಾಲೆಗೇ ಮೊದಲಿಗನಾಗಿ ಪಾಸಾಗಿದ್ದ!

ಶತದಡ್ಡ ವಿದ್ಯಾರ್ಥಿಯೊಬ್ಬನನ್ನು ತರಗತಿಗೇ ಮೊದಲಿಗನಾಗುವಂತೆ ಮಾಡಿದ ಬನ್ಸಾಲ್‌ರ ಕೀರ್ತಿ ನಾಲ್ಕೇ ದಿನಗಳಲ್ಲಿ ಮನೆಮನೆಗೆ ತಲುಪಿತು. ಪರಿಣಾಮ, ಪ್ರೌಢಶಾಲೆ ವಿದ್ಯಾರ್ಥಿಗಳು ಮರುದಿನದಿಂದಲೇ ಗುಂಪುಗುಂಪಾಗಿ ಟ್ಯೂಶನ್‌ಗೆ ಬರತೊಡಗಿದರು. 1981ರಿಂದ 1991ರವರೆಗೆ, ಹತ್ತು ವರ್ಷ ಕಾಲ, ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಫ್ಯಾಕ್ಟರಿ; 7ರಿಂದ ರಾತ್ರಿ 10.30ರತನಕ ಟ್ಯೂಶನ್... ಹೀಗೇ ಬದುಕಿಬಿಟ್ಟರು ಬನ್ಸಾಲ್.

ಬರುಬರುತ್ತಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚತೊಡಗಿತು. ಹೆಚ್ಚಾಗಿ ಪಿಯುಸಿ, ಡಿಗ್ರಿಯ ವಿದ್ಯಾರ್ಥಿಗಳೂ ಬರತೊಡಗಿದರು. ಅವರ ಸಮಸ್ಯೆಗಳಿಗೆಲ್ಲ ಸುಲಭವಾಗಿ ಉತ್ತರ ಹೇಳಬೇಕು ಅಂದರೆ, ತಾವು ವಿಪರೀತ ಓದಬೇಕು, ಹೋಂವರ್ಕ್ ಮಾಡಿಕೊಂಡು ತಯಾರಾಗಬೇಕು ಎಂದು ಬನ್ಸಾಲ್‌ಗೆ ಅರ್ಥವಾಗಿ ಹೋಯಿತು. ಕಡೆಗೊಮ್ಮೆ ಗಟ್ಟಿಮನಸ್ಸು ಮಾಡಿ ಬನ್ಸಾಲ್, ಫ್ಯಾಕ್ಟರಿಯ ನೌಕರಿಗೆ ರಾಜೀನಾಮೆ ನೀಡಿದರು. ತಾವು ವಾಸವಿದ್ದ ರಾಜಸ್ಥಾನದ ಕೋಟ ನಗರದಲ್ಲಿ ನಾಲ್ಕು ಅಂತಸ್ತಿನ ಬಿಲ್ಡಿಂಗ್ ಕಟ್ಟಿಸಿ ಅಲ್ಲಿ ಬನ್ಸಾಲ್ ಕೋಚಿಂಗ್ ಕ್ಲಾಸ್' ಆರಂಭಿಸಿದರು. ಈ ವೇಳೆಗೆ ಡಾಕ್ಟರ್ ನೀಡಿದ್ದ ಹದಿನೈದು ವರ್ಷದ ಡೆಡ್‌ಲೈನ್ ಮುಗಿದು ಹೋಗಿತ್ತು. ಛಲ ವೊಂದಿದ್ದರೆ ಸಾವನ್ನೂ ಹಿಮ್ಮೆಟ್ಟಿಸಬಹುದು ಎಂಬುದನ್ನು ಆ ವೇಳೆಗೆ ಅನುಭವದಿಂದಲೇ ಕಂಡು ಕೊಂಡಿದ್ದ ಬನ್ಸಾಲ್, ಬಿ.ಇ. ಪದವಿಯ ನಂತರ ಐಐಟಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಟ್ಯೂಶನ್ ಆರಂಭಿಸಿದರು.

ಐಎಎಸ್, ಐಪಿಎಸ್‌ಗೆ ಸರಿಸಮನಾದದ್ದು ಐಐಟಿ. ಆ ಪರೀಕ್ಷೆಯಲ್ಲಿ ಯಶಸ್ಸಾಗುವುದು ಕಷ್ಟ ಕಷ್ಟ. ಐಐಟಿ ವಿದ್ಯಾರ್ಥಿಗಳಿಗೆ ಟ್ಯೂಶನ್ ಆರಂಭಿಸಿದಾಗಲೇ ಬನ್ಸಾಲ್‌ಗೆ ಇದು ಗೊತ್ತಿತ್ತು. ಆದರೂ ಅವರು ಹಿಂಜರಿಯಲಿಲ್ಲ. ಆದಷ್ಟೂ ಸರಳವಾಗಿ, ಸುಲಭವಾಗಿ ಅರ್ಥವಾಗುವಂತೆ ಪಾಠ ಹೇಳಿದರು. ಬನ್ಸಾಲ್‌ರಿಂದ ಪಾಠ ಹೇಳಿಸಿಕೊಂಡು 1985ರಲ್ಲಿ ಐಐಟಿ ಪರೀಕ್ಷೆ ಬರೆದ ಅನೂಪ್ ಕೊಥಾರಿ ಎಂಬಾತ ದೇಶಕ್ಕೇ ಐದನೆಯವನಾಗಿ ಪಾಸಾದ ನೋಡಿ; ಆಗ ಬನ್ಸಾಲ್‌ರ ಅದೃಷ್ಟದ ಬಾಗಿಲು ಮತ್ತೊಮ್ಮೆ ತೆರೆದುಕೊಂಡಿತು.

ಮುಂದೆ ನಡೆದಿದ್ದೆಲ್ಲ ಪವಾಡವೇ. ಮರುವರ್ಷ, ಅಂದರೆ 1986ರಲ್ಲಿ ಬನ್ಸಾಲ್ ಅವರಿಂದ ಪಾಠ ಹೇಳಿಸಿಕೊಂಡಿದ್ದ ಮೂವರು ಐಐಟಿಯಲ್ಲಿ ರ್‍ಯಾಂಕ್ ಬಂದರು. 1990ರಲ್ಲಿ ಈ ಸಂಖ್ಯೆ 10ಕ್ಕೆ ಬಂದು ನಿಂತಿತು. 1999ರಲ್ಲಿ ಮಾತ್ರ ಯಾರೂ ನಿರೀಕ್ಷಿಸದ ಅದ್ಭುತವೊಂದು ನಡೆದುಹೋಯಿತು. ಆ ವರ್ಷ ಬನ್ಸಾಲ್ ಅವರಿಂದ ಟ್ಯೂಶನ್ ಹೇಳಿಸಿಕೊಂಡಿದ್ದ 700 ವಿದ್ಯಾರ್ಥಿಗಳು ಐಐಟಿ ಪರೀಕ್ಷೆಯಲ್ಲಿ ಪಾಸಾಗಿದ್ದರು. ಈ ಪೈಕಿ 209 ಮಂದಿ ಡಿಸ್ಟಿಂಕ್ಷನ್ ಬಂದಿದ್ದರು! ಫಲಿತಾಂಶ ಕಂಡು ಸಂಭ್ರಮದಿಂದ ಕುಣಿದಾಡಿದ ಅಷ್ಟೂ ವಿದ್ಯಾರ್ಥಿಗಳು ಏಕಕಂಠದಲ್ಲಿ ಹೇಳಿದ್ದು ಒಂದೇ ಮಾತು: ಈ ಯಶಸ್ಸು ಖಂಡಿತ ನಮ್ಮದಲ್ಲ. ಇದು ಬನ್ಸಾಲ್ ಸರ್‌ಗೆ ಸಲ್ಲಬೇಕಾದದ್ದು...

ಈಗ ಏನಾಗಿದೆ ಅಂದರೆ, ಬನ್ಸಾಲ್ ಅವರ ಟ್ಯುಟೋರಿಯಲ್‌ನಲ್ಲಿ 18000 ವಿದ್ಯಾರ್ಥಿಗಳು ಟ್ಯೂಶನ್‌ಗೆ ಬರುತ್ತಿದ್ದಾರೆ. 150 ಮಂದಿ ಉಪನ್ಯಾಸಕರು ಅಲ್ಲಿ ಬದುಕು ಕಂಡುಕೊಂಡಿದ್ದಾರೆ. ಬನ್ಸಾಲ್ ಟ್ಯುಟೋರಿಯಲ್ಸ್‌ನ ವಾರ್ಷಿಕ ಆದಾಯ 100 ಕೋಟಿ ದಾಟಿದೆ. ಬನ್ಸಾಲ್ ಅವರ ವೈಯಕ್ತಿಕ ಆದಾಯವೇ ವರ್ಷಕ್ಕೆ 18 ಕೋಟಿ ದಾಟುತ್ತಿದೆ. ಗಣಿತದ ತಲೆ-ಬುಡ ಗೊತ್ತಿಲ್ಲದವನೂ ಕೂಡ ಬನ್ಸಾಲ್ ಬಳಿ ಪಾಠ ಹೇಳಿಸಿಕೊಂಡರೆ ರ್‍ಯಾಂಕ್ ಬರುತ್ತಾನೆ ಎಂಬ ಮಾತು ಜನಜನಿತವಾಗಿದೆ. ಬನ್ಸಾಲ್ ಟ್ಯುಟೋರಿಯಲ್ಸ್‌ನಿಂದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕೋಟ ಜಿಲ್ಲೆಯ ನೂರಾರು ಹೋಟೆಲುಗಳಿಗೂ ಅದೃಷ್ಟ ಖುಲಾಯಿಸಿದೆ. ಇಲ್ಲಿ ಐಐಟಿ ಟ್ಯೂಷನ್‌ಗೆ ಬರುವ ವಿದ್ಯಾರ್ಥಿಗಳು ತಲಾ ನಾಲ್ಕೈದು ತಿಂಗಳು ಲಾಡ್ಜ್‌ಗಳಲ್ಲ; ಬಾಡಿಗೆ ಮನೆಗಳಲ್ಲಿ ತಂಗುತ್ತಿದ್ದಾರೆ. ಹೆಣ್ಣು ಮಕ್ಕಳಿಗೆಂದು ಪಿಜಿಗಳೂ ಆರಂಭವಾಗಿವೆ. ಟ್ಯೂಷನ್‌ಗೆ ಬರುವ ವಿದ್ಯಾರ್ಥಿಗಳ ಬಾಡಿಗೆ ಹಣದಿಂದಲೇ ನೂರಾರು ಕುಟುಂಬಗಳು ಬದುಕು ಕಂಡುಕೊಂಡಿವೆ...

ಈ ಮಧ್ಯೆ ಬನ್ಸಾಲ್ ಅವರ ರೋಗ ಪೂರ್ತಿ ಗುಣವಾಗಿಲ್ಲ ನಿಜ. ಆದರೆ ಬನ್ಸಾಲ್‌ರ ಅಂತಃಶಕ್ತಿಯ ಮುಂದೆ ಅದು ಸೋತುಹೋಗಿದೆ. ಮೊನ್ನೆ ಮೊನ್ನೆಯಷ್ಟೇ 60ನೇ ಹುಟ್ಟುಹಬ್ಬ ಆಚರಿಸಿಕೊಂಡ ಬನ್ಸಾಲ್- ನೋಡ್ತಿರಿ, ನಾನು ಇನ್ನೂ ಇಪ್ಪತ್ತು ವರ್ಷ ಆರಾಮಾಗಿರ್‍ತೀನಿ. ನನಗಾಗಿ ಅಲ್ಲದಿದ್ದರೂ ನನ್ನ ವಿದ್ಯಾರ್ಥಿಗಳಿಗಾಗಿಯಾದ್ರೂ ನಾನು ಬದುಕಲೇಬೇಕಲ್ವ?' ಎಂದು ನಗುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X