ಅಷ್ಟೇನಾ?ನಂಬಕ್ಕಾಗಲ್ಲ! : ಅನಿತಾ ಕುಮಾರಸ್ವಾಮಿ

Subscribe to Oneindia Kannada
So little a salary? Anitha is stunned!
ಬೆಳಗಾವಿ ಜ.19: "ಅಷ್ಟೇನಾ?! ನಂಬಕ್ಕಾಗಲ್ಲ!!" ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅನಿತಾ ಕುಮಾರಸ್ವಾಮಿಯವರು ಉದ್ಗರಿಸಿದ ಮೊದಲ ಮಾತುಗಳು ಇವು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನ ಮಂಡಲದ ಕಾರ್ಯದರ್ಶಿಯಿಂದ ಶಾಸಕರ ಸಂಬಳ-ಸವಲತ್ತುಗಳ ಬಗೆಗೆ ಮಾಹಿತಿ ಪಡೆಯುತ್ತಿದ್ದ ಅನಿತಾ ಕುಮಾರಸ್ವಾಮಿಯವರು, ಶಾಸಕರ ಮಾಸಿಕ ಸಂಬಳ ಕೇವಲ ಕೆಲವೇ ಸಾವಿರ ರೂಪಾಯಿಗಳು ಎಂದು ತಿಳಿದಾಗ ಅವಕ್ಕಾದರು. ಉತ್ತಮವಾದ ಬಿಲ್‌ಗಳನ್ನು ಪಾಸ್ ಮಾಡಿದರೆ ಏನಾದರೂ ಬೋನಸ್ ಸಿಗುತ್ತದೆಯೇ ಎಂಬ ಅನಿತಾ ಅವರ ಪ್ರಶ್ನೆಗೆ ವಿಧಾನಮಂಡಲದ ಕಾರ್ಯದರ್ಶಿ ನಕಾರಾತ್ಮಕ ಉತ್ತರ ನೀಡಿದಾಗಲಂತೂ ಅನಿತಾರವರ ಮುಖದಲ್ಲಿ ಸಖೇದಾಶ್ಚರ್ಯ ಮನೆ ಮಾಡಿತ್ತು.

ಅನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅನಿತಾರವರು, ಶಾಸಕರ ಸಂಬಳದ ವಿಷಯವನ್ನು ಪ್ರಸ್ತಾಪಿಸಿದರು. "ಸಂಬಳ ಇಷ್ಟು ಕಡಿಮೆ ಅಂದರೆ ನನಗಂತೂ ನಂಬಕ್ಕೇ ಆಗೊಲ್ಲ. ಕುಮಾರ್ ಅವರನ್ನು ಕೆಲವು ಸಲ ಹಣ ಬೇಕು ಅಂದಾಗ ಅವರು 'ನಾನೇನು ಸಾಫ್ಟ್‌ವೇರ್ ಎಂಜಿನಿಯರ್ ಅಂದ್ಕೊಂಡ್ಯಾ' ಅಂತಿದ್ದರು. ನಾನು ಸುಮ್ಮನೆ ತಮಾಷೆ ಮಾಡ್ತಿದ್ದಾರೆ ಅಂದ್ಕೊಳ್ತಾ ಇದ್ದೆ. ಈಗ ಗೊತ್ತಾಯ್ತು ಅವರಿಗೆ ಎಷ್ಟು ಸಂಬಳ ಬರತ್ತೆ ಅಂತಾ" ಎಂದು ನುಡಿದ ಅನಿತಾರವರು ಇಷ್ಟು ಕಡಿಮೆ ಸಂಬಳ ಎಂದು ಗೊತ್ತಿದ್ದರೂ ತಮ್ಮನ್ನು ಶಾಸಕಿಯಾಗಿಸಿದ ತಮ್ಮ ಕುಟುಂಬವರ್ಗದ ಬಗೆಗೆ ಅಚ್ಚರಿ ವ್ಯಕ್ತಪಡಿಸಿದರು.

"ಒಳ್ಳೇ ಕೆಲಸ ಮಾಡಿದರೆ ಬೋನಸ್ಸೂ ಇಲ್ಲಾ ಅಂದ್ರೆ ಹೇಗೆ?" ಎಂದು ಪ್ರಶ್ನಿಸಿದ ಅನಿತಾರವರು, ತಮ್ಮ ಟಿ.ವಿ.ಚಾನಲ್‌ನಲ್ಲಿ ಒಳ್ಳೆ ರೇಟಿಂಗ್ ತಂದುಕೊಟ್ಟವರಿಗೆ ಉತ್ತಮ ಬೋನಸ್‌ ನೀಡುವಂತೆ ವಿಧಾನ ಮಂಡಲದ ಕಾರ್ಯಕ್ರಮ ಟಿ.ವಿ.ಯಲ್ಲಿ ಪ್ರಸಾರವಾದಾಗ ಟಿ.ಆರ್.ಪಿ. ರೇಟಿಂಗ್ ಉತ್ತಮಗೊಂಡರೆ ಶಾಸಕರಿಗೆ ಬೋನಸ್ ಕೊಡುವ ವ್ಯವಸ್ಥೆಯಾದರೆ ಒಳ್ಳೆಯದು ಎಂದರು.

(ಮಜಾವಾಣಿ ಬೆಳಗಾವಿ ಬ್ಯೂರೋ ವರದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...