ಜಂಗಲ್ ಡೈರಿ: ಪ್ರಾಣಿ ಜಗತ್ತಿನ ಉಳಿವು-ಅಳಿವಿನ ನಿತ್ಯ ಹೋರಾಟ

By: ಗಗನ್ ಪ್ರೀತ್
Subscribe to Oneindia Kannada

ಇತ್ತೀಚೆಗೆ ಬಿಬಿಸಿ ಮತ್ತು ಕ್ಯಾಲಿಫೋರ್ನಿಯಾ ವಿವಿ ಜೊತೆಯಾಗಿ ಒಂದು ಸಂಶೋಧನೆ ನಡೆಸಿದವು. ಅದರ ಪ್ರಕಾರ, ಪ್ರಕೃತಿ ಮತ್ತು ವನ್ಯಜೀವಿಗಳ ದೃಶ್ಯಾವಳಿಗಳನ್ನು ಕಂಡಾಗ ನಮ್ಮಲ್ಲಿನ ಒತ್ತಡ ಕಡಿಮೆಯಾಗಿ, ಮನಸಲ್ಲಿ ಶಾಂತಿ ಮತ್ತು ಸಂತಸ ಮೂಡುತ್ತದೆ ಎಂದು ತಿಳಿದುಬಂದಿದೆಯಂತೆ.

ಇದು ಒಪ್ಪಿಕೊಳ್ಳುವ ಮಾತು. ನಮ್ಮ-ನಿಮ್ಮ ಅನುಭವಕ್ಕೂ ಇದು ಬಂದಿರುತ್ತದೆ. ಪ್ರಕೃತಿ ಮಡಿಲೆಂದರೆ ಕಾಡು. ಕಾಡಿಗೆ ಹೋದಾಗ ತಾಯಿಯ ಮಡಿಲು ಸೇರಿದಂತಹ ಅನುಭವ ಮತ್ತು ಆನಂದ ನಮಗಾಗುತ್ತದೆ. ಪ್ರತಿ ಬಾರಿ ಹಿಂತಿರುಗಿದಾಗಲೂ ಕಾಡನ್ನು ಬಿಡಬೇಕೆಂಬ ನಿರಾಸೆ ಮತ್ತು ಆದಷ್ಟು ಬೇಗ ಹಿಂತಿರುಗುವ ತವಕ ಮೂಡುತ್ತದೆ.[ಪ್ರಾಣಿಗಳು ಮನುಷ್ಯರನ್ನು ತಿನ್ನುವುದೇಕೆ? ಜಂಗಲ್ ಡೈರಿಯ ಪುಟಗಳು]

ಬಂಡೀಪುರ ಮತ್ತು ನಾಗರಹೊಳೆಯ ಅರಣ್ಯಗಳಿಗೆ ಹೋದಾಗ ಸಾಮಾನ್ಯವಾಗಿ ಕಂಡು ಬರುವಂತಹ ಪ್ರಾಣಿಗಳೆಂದರೆ ಬಿಳಿ ಚುಕ್ಕೆಯುಳ್ಳ ಜಿಂಕೆಗಳು. 10 ರಿಂದ 40 ಜಿಂಕೆಗಳು ಒಂದು ಗುಂಪಿನಲ್ಲಿರುತ್ತವೆ. ಗಂಡು ಜಿಂಕೆಗಳಿಗೆ ಮಾತ್ರವೇ ಕೊಂಬು ಬೆಳೆಯುತ್ತವೆ. ಕಂದು ಬಣ್ಣ ಹಾಗೂ ಬಿಳಿಯ ಚುಕ್ಕೆಗಳನ್ನು ಹೊಂದಿರುವ ಇವುಗಳನ್ನು ಭಾರತದ ಉಪಖಂಡಗಳಲ್ಲಿ ಮಾತ್ರವೇ ಕಾಣಬಹುದು.

ವಿದೇಶೀಯರಂತೂ ಈ ಜಿಂಕೆಗಳನ್ನು ಬಹಳ ಕುತೂಹಲದಿಂದ ನೋಡುತ್ತಿರುತ್ತಾರೆ. ಆದರೆ ನಮಗಿದು ಸಾಮಾನ್ಯದ ನೋಟ. ಇರುಳಿನ ಹೊತ್ತು ಇವುಗಳ ಚಟುವಟಿಕೆ ತೀರಾ ಕಮ್ಮಿ. ಗುಂಪಿನಲ್ಲಿ ಕುಳಿತು ಮುಂಜಾನೆಗೂ ಮುನ್ನ ಕೆಲವು ಗಂಟೆಗಳ ಕಾಲ ನಿದ್ರಿಸುತ್ತವೆ. ಹುಲಿ ಮತ್ತು ಚಿರತೆಗಳು ಇರುಳಿನ ಹೊತ್ತೇ ಬೇಟೆಯಾಡಲು ಬಯಸುತ್ತವೆ ಅದ್ದರಿಂದ ನಿದ್ರಿಸುವಾಗ ಬೇರೆ ಜಿಂಕೆಗಳು ಎಚ್ಚರಿಕೆಯಿಂದಿದ್ದು ಗುಂಪನ್ನು ಕಾಯುತ್ತವೆ.[ಹುಲಿ ಕೂಡ ಹೆದರುವ ಕಾಡು ನಾಯಿ ಅಂದ್ರೆ ಸುಮ್ನೇನಾ?]

ಇವುಗಳ ವಾಸನಾ ಗ್ರಹಣ ಶಕ್ತಿ ಹೆಚ್ಚಿರುತ್ತದೆ. ಹುಲಿ ಅಥವಾ ಚಿರತೆಯ ವಾಸನೆ ಸಿಕ್ಕಲ್ಲಿ ಅವುಗಳು ಕೂಗಿ ತಮ್ಮ ಗುಂಪನ್ನು ಎಚ್ಚರಿಸುತ್ತವೆ. ಇರುಳಿನ ಹೊತ್ತು ಬಂಡೀಪುರದ ಅರಣ್ಯ ಇಲಾಖೆ ಅತಿಥಿ ಗೃಹಗಳ ಬಳಿಯಲ್ಲೇ ಇವುಗಳು ಗುಂಪು ಕಟ್ಟಿ ಕೂರುತ್ತವೆ. ಮಧ್ಯರಾತ್ರಿಯ ಸಮಯದಲ್ಲಿ ನೀವು ಹಲವು ಬಾರಿ ಕೂಗುವುದನ್ನು ಕೇಳಬಹುದು.

ಕೊಠಡಿ ಬಳಿ ಬಂದಿದ್ದ ಚಿರತೆ

ಕೊಠಡಿ ಬಳಿ ಬಂದಿದ್ದ ಚಿರತೆ

ಚಿರತೆಗಳು ಜಿಂಕೆಗಳನ್ನು ಬೇಟೆಯಾಡಲು ಇಲ್ಲಿಗೂ ಬಂದುಬಿಡುತ್ತದೆ. ಹೀಗೆ ನಾವೊಮ್ಮೆ ಇಲ್ಲಿ ತಂಗಿದ್ದಾಗ ಚಿರತೆಯೊಂದು ನಮ್ಮ ಕೊಠಡಿಯ ಬಳಿ ಬಂದುಬಿಟ್ಟಿತ್ತು! ಕೆಲವೊಮ್ಮೆ ನಾವು ಹುಲಿಯ ಘರ್ಜನೆಯನ್ನೂ ಕೇಳಿದ್ದೇವೆ. ಮತ್ತೊಂದು ಬಾರಿ ಚಿರತೆಯು ಮಧ್ಯರಾತ್ರಿಯ ಹೊತ್ತಿನಲ್ಲಿ ಅತಿಥಿ ಗೃಹದ ಬಳಿ ಜಿಂಕೆಯನ್ನು ಬೇಟೆಯಾಡಿದ ವಿಚಾರವನ್ನು ಅಲ್ಲಿನ ವಾಚ್ ಗಾರ್ಡ್ಸ್ ಗಳು ನಮಗೆ ಹೇಳಿದರು!

ಜಿಂಕೆಗೂ ಸಿಂಗಳೀಕಕ್ಕೂ ಸಾಮ್ಯತೆ

ಜಿಂಕೆಗೂ ಸಿಂಗಳೀಕಕ್ಕೂ ಸಾಮ್ಯತೆ

ಈ ಜಿಂಕೆಗಳಿಗೂ ಸಿಂಗಳೀಕಗಳಿಗೂ ಒಂದು ವಿಶೇಷ ನಂಟಿದೆ. ಹುಲಿ ಅಥವಾ ಚಿರತೆಯ ವಾಸನೆ ಹಿಡಿದಲ್ಲಿ ಜಿಂಕೆಗಳು ಕೂಗುತ್ತವೆ. ಇನ್ನು ಸಿಗಳೀಕಗಳ ಕಣ್ಣುಗಳು ಬಹಳ ಚುರುಕು. ಮರದ ಮೇಲೆ ಕುಳಿತು, ಹುಲಿ ಅಥವಾ ಚಿರತೆ ಚಲನ ವಲನಗಳು ಕಂಡುಬಂದಲ್ಲಿ ಚೀರುತ್ತದೆ. ಹೀಗೆ ಇವು ಪರಸ್ಪರ ಎಚ್ಚರಿಕೆಯಿಂದ ಇರುತ್ತವೆ.

ಆನೆ ಕಾವಲು

ಆನೆ ಕಾವಲು

ಬಂಡೀಪುರದ ಇಲಾಖೆ ಕೊಠಡಿಗಳ ಬಳಿ ಒಂದು ಗಂಡು ಸಾಕಾನೆ ಇದೆ. ಅದರ ಹೆಸರು ಜಯಪ್ರಕಾಶ್. ಇರುಳಿನ ಹೊತ್ತು ಈ ಆನೆಯನ್ನು ಕಟ್ಟದೆ ಹಾಗೆ ಬಿಡಲಾಗುತ್ತದೆ. ಅದರ ಕತ್ತಿಗೆ ಕಟ್ಟಿರುವ ಗಂಟೆಯ ಶಬ್ದ ಅಲ್ಲಿನ ಕೊಠಡಿಗಳಲ್ಲಿ ತಂಗಿದ್ದಾಗ ಕೇಳಿಸುತ್ತದೆ. ಈ ಆನೆ ವಸತಿ ಗೃಹಗಳ ಸುತ್ತಲೂ ಓಡಾಡುತ್ತ ಬೇರೆ ಆನೆಗಳು ಬಾರದ ಹಾಗೆ ಕಾಯುತ್ತದೆ.

ಈಗ ಬಂಡೀಪುರದಲ್ಲಿ ಹಸಿರು

ಈಗ ಬಂಡೀಪುರದಲ್ಲಿ ಹಸಿರು

ಬಂಡೀಪುರದಲ್ಲಿ ಈಗ ಕೊಂಚ ಮಳೆಯಾಗಿದ್ದು, ಹಸುರಿನ ವಾತಾವರಣ ಕಾಣುತ್ತಿದೆ. ಮಳೆ ಬರುತ್ತಿದ್ದ ಹಾಗೆ ಕಾಡಿನಲ್ಲಿ ಚಟುವಟಿಕೆಗಳು ಕೂಡ ಹೆಚ್ಚಾಗುತ್ತದೆ. ಆಹಾರ ಸಿಗುತ್ತಿರುವ ಕಾರಣ ಸಫಾರಿಗೆ ಹೋದಾಗ ಪ್ರಾಣಿಗಳು ಕಾಣುತ್ತಿವೆ. ಈ ಕಾಲದಲ್ಲಿ ಹೆಚ್ಚಾಗಿ ಕಾಣಿಸದ ಕಡವೆ ಮತ್ತು ಕಾಡೆಮ್ಮೆಗಳು ಕಾಣಿಸುತ್ತಿವೆ. ಇದು ಒಳ್ಳೆಯ ವಿಚಾರ.

ಐನೂರು ಕೆಜಿ ತೂಗುವ ಕಡವೆ

ಐನೂರು ಕೆಜಿ ತೂಗುವ ಕಡವೆ

ಜಿಂಕೆಯ ಜಾತಿಯಲ್ಲಿ ಅತಿ ದೊಡ್ಡ ಗಾತ್ರವುಳ್ಳ ಪ್ರಾಣಿಯೆಂದರೆ ಕಡವೆ. ಅವುಗಳು ಹುಲಿಯ ನೆಚ್ಚಿನ ಬೇಟೆ! ದೊಡ್ಡ ಗಂಡು ಕಡವೆ 500 ಕೆ.ಜಿ ತೂಕದವರೆಗೆ ಬೆಳೆಯುತ್ತವೆ. ಇವುಗಳ ಮೈ ಬಣ್ಣ ಮಣ್ಣಿನಂತಹ ಕಂದು. ಅಪರೂಪವಾಗಿ ಇವುಗಳು ಬಿಳಿಯ ಬಣ್ಣದಲ್ಲಿ ಕೂಡ ಇರುತ್ತವೆ. ಇಂತಹ ಅಪರೂಪದ ಬಿಳಿ ಕಡವೆಯನ್ನು ಬಂಡೀಪುರದಲ್ಲೊಮ್ಮೆ ನಾವು ಕಂಡಿದ್ದೆವು. ಕಡವೆಗಳು ತಂಪು ಇರುವ ಪ್ರದೇಶವನ್ನು ಬಯಸುತ್ತವೆ ಹಾಗೂ ಉತ್ತಮವಾಗಿ ಈಜಬಲ್ಲವು. ಸಾಮಾನ್ಯವಾಗಿ ಇವುಗಳು ನೀರಿನ ಕೊಳಗಳ ಆಸು ಪಾಸಿನಲ್ಲೇ ಇರುತ್ತವೆ.

ಗುಂಪಿನಲ್ಲಿರುವ ಕಡವೆಗಳು

ಗುಂಪಿನಲ್ಲಿರುವ ಕಡವೆಗಳು

ಇವುಗಳು 4 ರಿಂದ 5ರ ಚಿಕ್ಕ ಗುಂಪಿನಲ್ಲಿ ಇರುತ್ತವೆ. ಗಂಡು ಕಡವೆಗಳು ಒಂಟಿಯಾಗಿ ಕೂಡ ಇರುತ್ತವೆ. ಇವುಗಳ ಇರುವಿಕೆಯನ್ನು ಗುರುತಿಸಲು, ಮರಕ್ಕೆ ತಮ್ಮ ಹಣೆ ಮತ್ತು ಕತ್ತನ್ನು ಉಜ್ಜಿ, ಸೆಂಟ್ ಮಾರ್ಕ್ ಮಾಡುತ್ತವೆ. ಕಡವೆಗಳು ಹಗಲು ಮತ್ತು ಇರುಳು ಎರಡು ಹೊತ್ತಿನಲ್ಲೂ ಎಚ್ಚರವಾಗಿರುತ್ತವೆ. ವಿಶೇಷವೆಂದರೆ, ಇವುಗಳ ಕತ್ತಿನ ಬಳಿ ಗಡ್ಡದ ರೀತಿಯಲ್ಲಿ ಹೆಚ್ಚು ಕೂದಲಿರುತ್ತದೆ. ಹಾರ್ಮೋನ್ ನಿನ ವ್ಯತ್ಯಾಸದಿಂದ ಕತ್ತಿನ ಬಳಿಯ ಕೂದಲುಗಳು ಉದುರಿ ಆ ಜಾಗ ರಕ್ತಗಟ್ಟಿದ ರೀತಿಯಲ್ಲಿ ಕೆಂಪಾಗುತ್ತದೆ. ಇದು ಯಾವುದೋ ಪ್ರಾಣಿ ಅದರ ಕತ್ತನ್ನು ಕಚ್ಚಿಬಿಟ್ಟಿರುವ ರೀತಿ ನಮಗೆ ಕಾಣುತ್ತದೆ. ಈ ಜಾಗದಿಂದ ದ್ರವ ಆಚೆ ಬರೆಯುತ್ತದೆ. ಆ ದ್ರವದ ವಾಸನೆಗೆ ಹುಲಿಗಳು ಆಕರ್ಷಿತವಾಗುತ್ತವೆ. ಕಡವೆಗಳ ಕೊಂಬುಗಳನ್ನೂ ಹುಲಿಗಳು ತಿನ್ನುತ್ತವೆ.

ಕಾಟಿಗಳೂ ಉಂಟು

ಕಾಟಿಗಳೂ ಉಂಟು

ಜಾನುವಾರುಗಳಲ್ಲಿ ದೊಡ್ಡ ಪ್ರಾಣಿಗಳೆಂದರೆ ಕಾಟಿ. ದೊಡ್ಡ ಕಾಟಿ ಒಂದು ಟನ್ ಗಿಂತ ಹೆಚ್ಚು ತೂಕವಿರುತ್ತವೆ. ಹೆಣ್ಣು 600 ರಿಂದ 700 ಕೆ.ಜಿ ತೂಕವಿರುತ್ತವೆ. ಇವುಗಳು ಕಂದು ಬಣ್ಣ ಹಾಗೂ ಕಾಲುಗಳು ಬಿಳಿ ಇರುತ್ತದೆ. ಇವುಗಳ ಮುಖ್ಯ ಆಹಾರವೆಂದರೆ ಹುಲ್ಲು. ವಿವಿಧ ಗಿಡಗಳನ್ನು ಹಾಗೂ ಬಿದಿರನ್ನು ಕೂಡ ಕಾಟಿಗಳು ಸೇವಿಸುತ್ತವೆ.

ಒಂದು ಗುಂಪಿನಲ್ಲಿ 40 ಕಾಟಿ

ಒಂದು ಗುಂಪಿನಲ್ಲಿ 40 ಕಾಟಿ

ಕಾಟಿಗಳ ಗುಂಪಿನ ನೇತೃತ್ವವನ್ನು ಹಿರಿಯ ಹೆಣ್ಣು ಕಾಟಿ ಹೊಂದಿರುತ್ತದೆ. ಒಂದು ಗುಂಪಿನಲ್ಲಿ 40 ಕಾಟಿಗಳವರೆಗೆ ಇರುತ್ತವೆ. ಈ ಗುಂಪಿನಲ್ಲಿ ಒಂದು ಅಥವಾ ಎರಡು ಗಂಡು ಇರುತ್ತದೆ. ಡಿಸೆಂಬರ್ ನಿಂದ ಜೂನ್ ವರೆಗೂ ಇವುಗಳು ಕೂಡುವ ಕಾಲ. ಒಮ್ಮೆಗೆ ಒಂದು ಮರಿಯನ್ನು ಹಾಕುತ್ತದೆ. ಗಂಡು ಒಂಟಿಯಾಗಿ ಕೂಡ ಇರುತ್ತವೆ. ಇತ್ತೀಚಿಗೆ ಇವುಗಳ ಸಂತತಿ ಕಡಿಮೆಯಾಗಿದ್ದು, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಲಾಗಿದೆ.

ನಾಗರಹೊಳೆ ಮತ್ತು ಬಂಡೀಪುರದಲ್ಲಿ 2000 ಕಾಟಿ

ನಾಗರಹೊಳೆ ಮತ್ತು ಬಂಡೀಪುರದಲ್ಲಿ 2000 ಕಾಟಿ

ನಾಗರಹೊಳೆ ಮತ್ತು ಬಂಡೀಪುರದ ಕಾಡುಗಳಲ್ಲಿ 2000 ಕಾಟಿಗಳಿರಬಹುದು. ಮಳೆಗಾಲದಲ್ಲಿ ನಾವು ಸಫಾರಿಗೆ ಹೋದಾಗ ಇವುಗಳನ್ನು ಸುಲಭವಾಗಿ ಕಾಣಬಹುದು. ಬೇಸಿಗೆ ಬರುತ್ತಿದ್ದಂತೆ ನೀರು ಹಾಗೂ ಹಸಿರು ಹುಲ್ಲಿಗಾಗಿ ಕಾಡಿನ ಒಳ ಪ್ರದೇಶಗಳಿಗೆ ಹೋಗಿಬಿಡುತ್ತವೆ. ಮಳೆಗಾಲದಲ್ಲಿ ಬಂಡೀಪುರದಲ್ಲಿ ಹಲವಾರು ಪಕ್ಷಿಗಳನ್ನು ಕೂಡ ಕಾಣಬಹುದು. ವಿಶೇಷವಾಗಿ ಸಣ್ಣ ಕಳ್ಳಿಪೀರ (ಗ್ರೀನ್ ಬೀ ಈಟರ್)ಗಳನ್ನು ಕಾಣಬಹುದು. ಇವು ಹುಳುಗಳನ್ನು ಹೆಚ್ಚಾಗಿ ತಿನ್ನುವಂತಹ ಹಸಿರು ಬಣ್ಣದ ಸಣ್ಣ ಗಾತ್ರದ ಪಕ್ಷಿಗಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wild life brings happy to human being, it is a result of research study by BBC and California VV. Wild life experience explains columnist Gagan Preeth.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ