ಕನ್ನಡದ ನಿಸ್ಸೀಮ ಹೋರಾಟಗಾರ ವಾಟಾಳ್

Vatal Nagaraj (Art by B.G. Gujjarappa)
ವಾಟಾಳ್ ನಾಗರಾಜ್ (ಕಲೆ : ಬಿ.ಜಿ. ಗುಜ್ಜಾರಪ್ಪ)
ಕನ್ನಡದಹೋರಾಟಗಾರ ವಾಟಾಳ್ ನಾಗರಾಜ್ ಅಂದು ಹೇಗಿದ್ದರೋ ಇಂದೂ ಹಾಗೇ ಇದ್ದಾರೆ. ಅವರ ವಾಕ್ ಚಾತುರ್ಯ, ವಿಲಕ್ಷಣ ಪ್ರತಿಭಟನಾ ರೀತಿ ಯಾವುದೂ ಬದಲಾಗಿಲ್ಲ. ಎಪ್ಪತ್ತರ ಹರೆಯದಲ್ಲೂ ಪ್ಲಕಾರ್ಡ್ ಹಿಡಿದಾಗಲಿ, ಕತ್ತೆ ಮೇಲೆ ಕುಳಿತಾಗಲೀ ಪ್ರತಿಭಟಿಸಲು ಸಿದ್ಧ. ವಾಟಾಳ್ ಹಿಂದೆ ಅಂದೂ ಜನರಿರಲಿಲ್ಲ, ಇಂದೂ ಇಲ್ಲ! ಆದರೂ ಅವರು ಬದಲಾಗಿಲ್ಲ. ಇದು ವಾಟಾಳ್‌ರ ಸಾರ್ವಕಾಲಿಕ ಚಿತ್ರ. ಅವರ ರೀತಿ ನೀತಿಗಳ ಹೇಗೇ ಇರಲಿ ವಾಟಾಳ್ ಅವರಲ್ಲಿನ ಕನ್ನಡ ನಿಷ್ಠೆಯನ್ನಂತೂ ಪ್ರಶ್ನಿಸುವಹಾಗೇ ಇಲ್ಲ.

ಅಂಕಣಕಾರ : ಜೆ.ಎಸ್.ನಾರಾಯಣ ರಾವ್ (ಜೆಸುನಾ)

ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಬೆಂಗಳೂರಿನ ದಕ್ಷಿಣ ರೈಲ್ವೆ ಕಚೇರಿಯ ಮುಂದೆ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅವರ ಜೊತೆಯಲ್ಲಿ ಏಳೆಂಟು ಮಂದಿ ಚಳವಳಿ ಹುಡುಗರೂ ಇದ್ದರು. ಇದನ್ನು ವರದಿ ಮಾಡಲು ನಾನು ಹಾಗೂ ಫೋಟೋಗ್ರಾಫರ್ ಬಾಬುರಾಜ್ ಹೋಗಿದ್ದೆವು. ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ಹಾಜರಿದ್ದರು. ಇದು 1983ರ ಪ್ರಸಂಗ.

ಎಷ್ಟು ಹೊತ್ತಾದರೂ ವಾಟಾಳ್ ಪ್ರತಿಭಟನೆ ಕಾರ್ಯಕ್ರಮಕ್ಕೆ ಚಾಲನೆಯನ್ನೇ ನೀಡಲಿಲ್ಲ. ಅವರನ್ನು ಬಂಧಿಸಲು ಬಂದಿದ್ದ ಪೊಲೀಸರೂ ಕಾದು ಕಾದು ಸುಸ್ತಾಗಿದ್ದರು. ಕೊನೆಗೆ ಎಸಿಪಿಯವರೇ (ಹೆಸರು ನೆನಪಿಲ್ಲ) ಬಾಯಿ ಬಿಚ್ಚಿದರು. ಗುರುವೇ! ನಿಮ್ಮ ಕಾರ್ಯಕ್ರಮಾನ ಬೇಗ ಮುಗಿಸಿ. ನಮಗೂ ಬೇರೆ ಕೆಲಸ ಇದೆ ಎಂದರು.

ಅರೆ! ಸ್ವಲ್ಪ ಇರಣ್ಣ. ಮಾಗಡಿ ರಸ್ತೆಯಿಂದ, ತುಮಕೂರು ರಸ್ತೆಯಿಂದ ಸಾವಿರಾರು ಕನ್ನಡ ಚಳವಳಿಗಾರರು ಮೆರವಣಿಗೇಲಿ ಬರ್ತಿದಾರೆ. ಎಲ್ಲರೂ ಸೇರಿ ಪ್ರತಿಭಟಿಸ್ತೇವೆ ವಾಟಾಳ್ ಉವಾಚ. ಒಂದು ಕಾಲದಲ್ಲಿ ವಾಟಾಳ್ ಹಿಂದೆ ಸಾವಿರಾರು ಕನ್ನಡ ಚಳವಳಿಗಾರರು ಇದ್ದುದು ದಿಟ. ಆದರೆ 1983ರ ಹೊತ್ತಿಗೆ ಅದು ಏಳೆಂಟು ಜನರ ಸಂಖ್ಯೆಗೆ ಇಳಿದಿತ್ತು. ಪೊಲೀಸರಿಗೂ ಇದು ಗೊತ್ತಿದ್ದ ಸಂಗತಿಯೆ. ಇನ್ನು ಕಾಯಲು ಸಾಧ್ಯವಿಲ್ಲ ಎಂದು ಎಸಿಪಿ ಹೇಳಿದರು. ವಾಟಾಳ್‌ಗೆ ಬೇರೆ ದಾರಿಯೇ ಇರಲಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪೊಲೀಸರು ಅವರನ್ನು ಬಂಧಿಸಿದರು. ಎಲ್ಲವೂ ಕಣ್ಮುಚ್ಚಿ ತೆಗೆಯುವುದರಲ್ಲಿ ಮುಗಿದುಹೋಯಿತು.

ವಾಟಾಳ್ ಬಾಬುರಾಜ್‌ಗೆ ಹೇಳಿದರು. ಬಾಬುರಾಜ್! ಅರೆಸ್ಟ್ ಆಗಿರೋ ನನ್ನ ಫೋಟೋನ ಫ್ರಂಟ್ ಪೇಜ್‌ನಲ್ಲಿ ನಾಲ್ಕು ಕಾಲಂಗೆ ಹಾಕಿ ಎಂದವರೇ ನನ್ನತ್ತ ತಿರುಗಿ ಇದನ್ನ ಲೀಡ್ ಐಟಂ ಮಾಡಿ. ಹಾಗೇ ಮೂರು ಕಾಲಂ ಬಾಕ್ಸ್ ಐಟಂ ಮಾಡಿ ಎಂದು ಸಂಜೆವಾಣಿಯ ಮುಖಪುಟದ ಸಮಸ್ಯೆಯನ್ನೂ ಅವರೇ ಬಗೆಹರಿಸಿದರು. ಕೂಡಲೇ ನಾನು ಹೇಳಿದೆ ರೀ ನಾಗರಾಜ್, ನೀವೇ ಸ್ಟೋರಿನೂ ಬರ್‍ಕೊಡಿ ಎಂದಾಗ ಅಲ್ಲಿದ್ದವರು ಗೊಳ್ಳನೆ ನಕ್ಕರು. ಇದು ವಾಟಾಳ್‌ರ ಸಾರ್ವಕಾಲಿಕ ಚಿತ್ರ.

ಬೆಂಗಳೂರಿನ ಸರ್ಪಭೂಷಣ ಮಠದಲ್ಲಿ ಏನೂ ಕೆಲಸವಿಲ್ಲದೆ ಕಾಲ ಹಾಕುತ್ತಿದ್ದ ವಾಟಾಳ್‌ರಿಗೆ, 1962ನೇ ಇಸವಿ ಅದ್ಭುತ ತಿರುವನ್ನು ತಂದುಕೊಟ್ಟ ಕಾಲವೆನ್ನಬಹುದು. ಚಾಮರಾಜಪೇಟೆ ಶ್ರೀರಾಮ ಸೇವಾಮಂಡಳಿ ಪ್ರತಿವರ್ಷ ನಡೆಸುವ ರಾಮೋತ್ಸವ ಕಾರ್ಯಕ್ರಮದಲ್ಲಿ ತಮಿಳು ಸಂಗೀತಗಾರರನ್ನೇ ಕರೆಸುವ ಸಂಪ್ರದಾಯ ಇತ್ತು. ಕನ್ನಡ ಸಂಗೀತಗಾರರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಸಿಕ್ಕರೂ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗುತ್ತಿತ್ತು. ಇದನ್ನು ಪ್ರತಿಭಟಿಸಲು ಅ.ನ.ಕೃ. ಎದ್ದು ನಿಂತರು. ಅವರ ಜೊತೆಗೆ ಮ. ರಾಮಮೂರ್ತಿ ಜೊತೆಯಾದರು. ಅವರು ಒಂದಷ್ಟು ಕನ್ನಡ ಹುಡುಗರನ್ನು ಕಟ್ಟಿಕೊಂಡು ಹೋಗಿ ರಾಮಸೇವಾ ಮಂಡಳಿ ಮುಂದೆ ಪ್ರತಿಭಟಿಸತೊಡಗಿದರು. ಕನ್ನಡ ಕಲಾವಿದರಿಗೆ ಅಗ್ರ ಪ್ರಾಶಸ್ತ್ಯ ನೀಡಬೇಕೆಂದು ಆಗ್ರಹಪಡಿಸಿದರು. ಕನ್ನಡ ಚಳವಳಿಗೆ ನಾಂದಿ ಹಾಡಿದ ಈ ಸಂದರ್ಭದಲ್ಲಿ ವಾಟಾಳ್‌ರೂ ಕೆಲಸವಿಲ್ಲದೆ ಅಲ್ಲಿ ಬಂದು ನಿಂತಿದ್ದರು. ಹಾಗೆ ಬಂದು ನಿಂತಿದ್ದಾಗಲೇ ಅವರಿಗೆ ಬದುಕಿನ ಮಾರ್ಗ ಗೋಚರಿಸಿದ್ದು.

ಅನಂತರ ಕಾಂಚಿತಲೈವನ್ ಎಂಬ ತಮಿಳು ಸಿನಿಮಾ ಬಿಡುಗಡೆಯಾದಾಗ ಕನ್ನಡ ಚಳವಳಿ ಉಗ್ರ ಸ್ವರೂಪ ಪಡೆದುಕೊಂಡಿತು. ಈ ಚಿತ್ರದಲ್ಲಿ ಕನ್ನಡಿಗರನ್ನು ಅವಮಾನಿಸಲಾಗಿದೆ ಎಂಬ ಕಾರಣಕ್ಕೆ ಚಿತ್ರ ಮಂದಿರಗಳ ಮುಂದೆ ಶಿಲಾವರ್ಷ ನಡೆಯಿತು. ರಾಮಮೂರ್ತಿ, ಅನಕೃ ಯಥಾಪ್ರಕಾರ ಅಗ್ರಪಂಕ್ತಿಯಲ್ಲಿದ್ದರು. ಈ ಹೊತ್ತಿಗಾಗಲೇ ವಾಟಾಳ್ ಅವರಿಬ್ಬರಿಗೂ ಹತ್ತಿರವಾಗಿದ್ದರು. ಒಂದು ಹಂತದಲ್ಲಿ ಅನಕೃ, ಮ. ರಾಮಮೂರ್ತಿ ನಡುವೆ ಒಡಕು ಕಾಣಿಸಿಕೊಂಡಿತು. ಕನ್ನಡ ಚಳವಳಿಯನ್ನು ರಾಜಕೀಯ ಪಕ್ಷವಾಗಿ ರಾಮಮೂರ್ತಿ ಪರಿವರ್ತಿಸಿದ್ದರು. ಅನಕೃ ಪ್ರಬಲವಾಗಿ ವಿರೋಧಿಸಿದಾಗ ಇಬ್ಬರೂ ಬೇರೆಯಾದರು. ವಾಟಾಳ್ ರಾಮಮೂರ್ತಿ ಕಡೆಗೆ ಹೋದರು.

ಕನ್ನಡ ಚಳವಳಿಯ ಪರಾಕಾಷ್ಠೆಯ ದಿನಗಳವು. ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಗಳಾಗಿದ್ದರು. ತಮ್ಮ ಜಾತಿಯ ಹುಡುಗನನ್ನು ಬೆಳೆಸಬೇಕೆಂದು ಅವರು ವಾಟಾಳ್‌ರಿಗೆ ಅಪಾರ ಬೆಂಬಲ ನೀಡಿ ಬೆಳೆಸಿದರು. ವಾಟಾಳ್ ಇಲ್ಲಿಂದ ಮುಂದೆ ಹಿಂತಿರುಗಿ ನೋಡಲೇ ಇಲ್ಲ.

ಕನ್ನಡ ಚಳವಳಿಯ ನಾಂದಿ ಸಮಯದಿಂದಲೂ ಇದ್ದವರು ರು. ಬಸಪ್ಪ, ಅ. ಸಂಜೀವಪ್ಪ, ಎಚ್. ರಾಮಸ್ವಾಮಿ, ಟಿ.ಪಿ. ಪ್ರಸನ್ನಕುಮಾರ್ ಮುಂತಾದವರು. ಆದರೆ ತೀವ್ರ ರಾಜಕೀಯ ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದವರು ವಾಟಾಳ್‌ರೊಬ್ಬರೆ. ಮಿಕ್ಕವರೆಲ್ಲ ಕನ್ನಡ ಭಜನೆಯಲ್ಲೇ ತಲ್ಲೀನರಾಗಿಬಿಟ್ಟರು. ಕನ್ನಡ ಚಳವಳಿ ದಿಕ್ಕು ತಪ್ಪುತ್ತಿರುವುದನ್ನು ವಿರೋಧಿಸಿ ಅ. ಸಂಜೀವಪ್ಪ ಹತ್ತು ವರ್ಷಗಳ ಕಾಲ ಮೌನವ್ರತ ಆಚರಿಸಿದ್ದು ನಿಜಕ್ಕೂ ಸೋಜಿಗದ ಸಂಗತಿ.

ಕನ್ನಡದ ಏಣಿಯ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ವಾಟಾಳ್ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ದೊಡ್ಡ ಸಾಧನೆಯೆ. ಅವರು ವಿಧಾನಸಭೆಯಲ್ಲಿ ಎಂದೂ ಮೌನವಾಗಿ ಕೂತಿದ್ದೇ ಇಲ್ಲ. ಕನ್ನಡದ ವಿಷಯ ಬಂದಾಗಲೆಲ್ಲಾ ದೊಡ್ಡ ದನಿಯಲ್ಲೇ ಮಾತನಾಡುತ್ತಾರೆ. ಎಲ್ಲೂ ರಾಜಿಯಾಗುವುದೇ ಇಲ್ಲ. ಕನ್ನಡಪರ ಪ್ರತಿಭಟನೆ ಮಾಡಲು ವಿನೂತನ ಕ್ರಮಗಳನ್ನು ಅನುಸರಿಸುತ್ತಾರೆ. ಹಾಗೆಯೇ ಅದಕ್ಕೆ ಪ್ರಚಾರವನ್ನೂ ಬಯಸುತ್ತಾರೆ. ಹಾಗೆ ಸಿಕ್ಕ ಪ್ರಚಾರಕ್ಕೆ ಹಣವನ್ನು ನೀಡುತ್ತಾರೆ. ಎಡಜೇಬಿಗೆ ಕೈಹಾಕಿದರೆ ನೂರು ರೂ. ನೋಟು ಹೊರಬರುತ್ತದೆ. ಬಲ ಜೇಬಿನಿಂದ ತೆಗೆದರೆ ಐದು ನೂರರದ್ದು ಇಣುಕಿ ಹಾಕುತ್ತದೆ. ಪತ್ರಕರ್ತರನ್ನು ತೂಕ ಹಾಕಿಯೇ ಅವರ ಎಡಗೈ ಬಲಗೈ ಕೆಲಸ ಮಾಡುತ್ತವೆ.

ವಾಟಾಳರು ಈಗ ಎಪ್ಪತ್ತರ ಅಂಚಿಗೆ ಸರಿದು ಹೋಗಿ ನಿಂತಿದ್ದಾರೆ. ಆರಂಭದಲ್ಲಿ ಚಳವಳಿಯನ್ನು ಒಂದು ಪ್ರದರ್ಶನದಂತೆ ನಡೆಸಿಕೊಂಡು ಬರುತ್ತಿದ್ದರು. ಕಾಲ ಸರಿದಂತೆಲ್ಲ ಪ್ರಬುದ್ಧ ರಾಜಕಾರಣಿಯಾಗಿ ರೂಪುಗೊಂಡಿದ್ದೇ ವಿಸ್ಮಯ ಸಂಗತಿ ಎನ್ನಬೇಕು. ಅವರ ಹುಮ್ಮಸ್ಸು, ಶಕ್ತಿ ಇನ್ನೂ ಕುಂದಿಲ್ಲ. ಹುಡುಗರಂತೆಯೇ ಈಗಲೂ ಅವರ ಕಾರ್ಯಚಟುವಟಿಕೆ. ಅವರ ಕನ್ನಡ ನಿಷ್ಠೆಯನ್ನು ಈಗಲೂ ಪ್ರಶ್ನಿಸುವಂತಿಲ್ಲ. ಅದೇ ಅವರ ಬದುಕು, ಉಸಿರು. ಅವರು ಒಬ್ಬ ಅಪರೂಪದ ಕನ್ನಡ ಹೋರಾಟಗಾರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+