ತಾತ ಹೇಳಿದ ಮೇಘು ಮತ್ತು ಅವರೆಕಾಳಿನ ಕಥೆ!

Posted By: ಜಯನಗರದ ಹುಡುಗಿ
Subscribe to Oneindia Kannada

ಅವತ್ತು ಕಚೇರಿಯಲ್ಲಿ ಕೂತು ಊಟ ಮಾಡುತ್ತಿರುವಾಗ ದಿನಾ ಕೇಳುವ ಹಾಗೆ ನಿಮ್ಮ ಪಿಜಿಯಲ್ಲಿ ಏನು ಅಡಿಗೆ, ಮನೆಯಲ್ಲಿ ಏನು ಅಡಿಗೆ ಎಂದು ಒಬ್ಬರನ್ನೊಬ್ಬರು ವಿಚಾರಿಸಿಕೊಳ್ಳುತ್ತಿದ್ದೆವು. ಎಲ್ಲರ ಮನೆಯಲ್ಲಿ ಅಥವಾ ಪಿಜಿಯಲ್ಲಿ ಅವರೇ ಕಾಳಿನದ್ದೇ ರೊಟ್ಟಿ, ಉಪ್ಪಿಟ್ಟು, ಹುಳಿ, ಪಲ್ಯ ಎಂದೆಲ್ಲಾ ಹೇಳಲು ಶುರು ಮಾಡಿದ್ದರು.

ಅಸ್ಸಾಮಿನಿಂದ ಬಂದಿದ್ದ ಸಹೋದ್ಯೋಗಿಗೆ ಅವರೆ ಕಾಳಿನ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ಅವನಿಗೆ ಆಂಗ್ಲ ಭಾಷೆಯಲ್ಲಿ ಏನು ಅನ್ನೋದು ಅಂತ ಗೊತ್ತಾಗಲಿಲ್ಲ. ಸರಿ ಅಂತ ಗೂಗಲ್ ನಲ್ಲಿ ಹುಡುಕಿ ಅದರ ಹೆಸರನ್ನು ಹೇಳಿ, ಚಳಿಗಾಲಕ್ಕೆ ಇದೆಲ್ಲಾ ತುಂಬಾ ಒಳ್ಳೆಯದು ಎಂದೂ ಹೇಳಿದೆವು. ಅವನ ಮನೆಗೆ ಬರುವ ಒರಿಯಾದ ಅಡಿಗೆಯವನಿಗೆ ಹೇಗೆ ತಿಳಿಸಿಹೇಳೋದು ಎಂದು ಯೋಚಿಸುತ್ತಿದ್ದ.

In Pics: ಅವರೆ ಮೇಳ ಮತ್ತೆ ಬಂತು...ವಿ.ವಿ.ಪುರಂಗೆ ಬನ್ನಿ

ಹೀಗೆ ಯೋಚನೆ ಮಾಡುತ್ತಿದ್ದಾಗ ತಾತ ಹೇಳಿದ ಮೇಘು ಮತ್ತು ಅವರೆಕಾಳು ಕಥೆ ನೆನಪು ಬಂತು. ತಾತ ಕಥೆ ಹೇಳುವುದರಲ್ಲಿ ನಿಸ್ಸೀಮರು. ಮಕ್ಕಳು ತರಕಾರಿ ತಿನ್ನುವುದಿಲ್ಲ, ಅಮ್ಮ ಅಜ್ಜಿ ತಿನ್ನಿಸದೇ ಬಿಡುವುದಿಲ್ಲ, ಇದರ ಮಧ್ಯೆ ರೆಫ್ರಿ ಹಾಗೆ ತಾತ ಚೆನ್ನಾಗಿ ಕಥೆ ಹೇಳಿ ತರಕಾರಿ ತಿನ್ನುವ ಮನಸ್ಥಿತಿಯನ್ನ ತರುತ್ತಿದ್ದರು.

Interesting story behind Avarekayi and wisdom

ಚಳಿಗಾಲದಲ್ಲಿ ನಮ್ಮ ಮನೆಯಲ್ಲಿ ಕಾಯಂ ಅವರೆಕಾಳು ಅಡಿಗೆಗಳು ನಡೆಯುತ್ತಲೆ ಇರುತ್ತಿತ್ತು. ಒಮ್ಮೊಮ್ಮೆ ದಿನಾಗಲೂ ನಡೆಯುತ್ತಿತ್ತು. ಆ ಕಾಳನ್ನ ಬಿಡಿಸುವಾಗ ನಡೆಯುವ ಸಾಹಸಗಳು ಒಂದೆರಡಲ್ಲ. ಹುಳಗಳು ಖಂಡಿತಾ ಇರುತ್ತಿದ್ದವು. ಹುಳ ಬಂದಾಗ ಅಜ್ಜಿ ಛಂಗನೆ ಹಾರಿ ಖುರ್ಚಿ ಮೇಲೆ ಕೂರುತ್ತಿದ್ದರು.

ಸಂಕ್ರಾಂತಿ ವಿಶೇಷ ಪುಟ

ಆ ಹುಳವನ್ನ ನೋಡುವುದೇ ನನಗೆ ಮತ್ತು ತಂಗಿಗೆ ಕೆಲಸ. ಒಮ್ಮೊಮ್ಮೆ ನಾ ಹುಳದ ಕಾಳು ಎಂದು ಸಹ ಕರೆಯುತ್ತಿದ್ದೆ. ಮುದ್ದಾದ ಹುಳವನ್ನ ತಾತ ಸಾಯಿಸದೆ ಒಂದು ದಿನಪತ್ರಿಕೆಯ ತುಂಡಿನಿಂದ ನಿಧಾನಕ್ಕೆ ತೆಗೆದು ಹೊರಹಾಕುತ್ತಿದ್ದರು. ಜಿರಳೆಯನ್ನ ಮೀಸೆಯಲ್ಲಿ ಹಿಡಿದು ಹೊರ ಹಾಕುವುದನ್ನು ಕಲಿಸಿದ್ದರು. ಪ್ರಾಣಿ, ಹುಳ ಹುಪ್ಪಟೆಗೂ ನಮಗಿಂತ ಜಾಸ್ತಿ ಬದುಕುವ ಅಧಿಕಾರವಿದೆಯೆಂದು ತಾತ ಪ್ರತಿ ಸರ್ತಿ ತಿಳಿಸುತ್ತಿದ್ದರು. ಪ್ರತಿಬಾರಿ ಹುಳುವಿಗೆ ಪೂರ್ತಿ ಕಾಳನ್ನ ತಿಂದಿದ್ದರೆ ನಮಗೆ ತಿನ್ನುವ ಪರಿಸ್ಥಿತಿ ಬರುತ್ತಿರಲ್ಲಿಲ್ಲ ಎಂದು ಅಂದುಕೊಳ್ಳುತ್ತಾ ಇದ್ವಿ.

ಒಂದು ಊರು, ಆ ಊರಿಗೊಂದು ದೇವ್ರು, ಆ ದೇವರಿಗೊಂದು ಉತ್ಸವ, ಅದಕ್ಕೊಂದು ಜಾತ್ರೆ

ಈ ಕಾಳನ್ನ ಸುತಾರಾಂ ತಿನ್ನುವುದಿಲ್ಲ ಎಂದು ಹಠ ಮಾಡಿದಾಗ ತಾತ ನನ್ನನ್ನ ಮುಖ್ಯ ಪಾತ್ರಧಾರಿ ಮಾಡಿ ಒಂದು ಕಥೆಯನ್ನ ಹೇಳೋದಕ್ಕೆ ಶುರು ಮಾಡಿದ್ದರು. ಅವರೆಕಾಳೆಂದರೆ ಅಷ್ಟು ಬೇಜಾರಾಗಿತ್ತೆಂದರೆ ಅದು ಗಿಡದಲ್ಲಿ ಬೆಳೆಯತ್ತೋ ಮರದಲ್ಲಿ ಇರತ್ತೋ ಎಂದು ತಿಳಿದುಕೊಳ್ಳಲು ಹೋಗಲ್ಲಿಲ್ಲ. ಅದನ್ನು ಗೊತ್ತು ಮಾಡಿಕೊಂಡ ತಾತ, 'ಅವರೆಕಾಳು ಮರದ ಮೇಲೆ ಬೆಳೆಯುತ್ತೆ, ಅದನ್ನ ತಿಂದರೆ ವಿಪರೀತ ಬುದ್ಧಿವಂತಳಾಗಿರ್ತೀಯ, ತದ ನಂತರ ಆ ಮರ ಎಷ್ಟು ಎತ್ತರ ಬೆಳೆಯತ್ತೆ ಎಂದರೆ ನೀನು ಆಕಾಶವನ್ನ ತಲುಪಬಹುದು ಅಲ್ಲಿಂದ ದೇವರನ್ನು ನೋಡಬಹುದು, ನಿನ್ನ ಪ್ರಶ್ನೆಗಳನ್ನೆಲ್ಲಾ ಕೇಳಬಹುದು' ಎಂದು ಕಥೆ ಹೊಡೆದಿದ್ದರು.

Interesting story behind Avarekayi and wisdom

ಪ್ರಾಯಶಃ ತಾತ ಮೊದಲ ಬಾರಿಗೆ ಹೀಗೆ ಏನೇನೋ ಹುಟ್ಟಿಸಿಕೊಂಡ ಕಥೆ ಹೇಳಿದ್ದೆನಿಸುತ್ತದೆ. ಕಾರ್ಟೂನ್ ನೆಟ್ವರ್ಕ್ ನಲ್ಲಿ ಬರುತ್ತಿದ್ದ ಟಾಮ್ ಅಂಡ್ ಜೆರಿಯಲ್ಲಿ ಹೀಗೆ ಟಾಮ್ ಒಮ್ಮೆ ಸೀದ ಸ್ವರ್ಗಕ್ಕೆ ಮೆಟ್ಟಿಲು ಹತ್ತಿಕೊಂಡು ಹೋಗುತ್ತದೆ. ಹಾಗೆಯೆ ಇಂದ್ರನ ಗೆದ್ದ ನರೇಂದ್ರ ಸಿನೆಮಾದಲ್ಲಿ ಜಗ್ಗೇಶ್ ಸ್ವರ್ಗಕ್ಕೆ ಹೋಗಿ ಹೀಗೆ ಅಲ್ಲಿದ್ದವರನ್ನೆಲ್ಲಾ ಮಾತಾಡಿಸಿಕೊಂಡು ಬರುತ್ತಾರೆ.

ಇದೆಲ್ಲಾ ನಿಜವಾಗಿಯೂ ಅವರೆಕಾಳು ತಿಂದರೆ ಆಗುತ್ತದೆ ಎಂದು ಅಂದುಕೊಂಡು, ನಾಳೆ ಅಮ್ಮ ರೊಟ್ಟಿ ಮಾಡಿದಾಗ ಗಲಾಟೆ ಮಾಡೋದಿಲ್ಲ ಎಂದು ನಿರ್ಧರಿಸಿ ತಿನ್ನೋದಕ್ಕೆ ಶುರು ಮಾಡಿದೆ. ನಂತರ ಬುದ್ಧಿ ಚಿಗುರಿತು. ಮರ ಬೆಳೆದರೆ ಅದಕ್ಕೆ ಅವರೆಕಾಳು ತಿಂದವರನ್ನ ಮಾತ್ರ ಹೇಗೆ ಅದರ ಮೇಲೆ ಹತ್ತಿಸಿಕೊಳ್ಳುತ್ತದೆ, ಬರೀ ಅವರೆಕಾಳು ತಿಂದೋರೆಲ್ಲ ಅಕಾಶ ಮುಟ್ಟಬಹುದು ಅನ್ನೋದಾದ್ರೆ ಪಾಪ ಪುಣ್ಯಗಳ ಲೆಕ್ಕ ಎಲ್ಲಿ ಎಂದು ಹೊಳೆದಾಕ್ಷಣ ತಾತನನ್ನ ಕೋಪದಿಂದ ಪ್ರಶ್ನೆ ಮಾಡಲು ಹೊರಟೆ.

Interesting story behind Avarekayi and wisdom

ತಾತ, ನೋಡು 'ನಾ ಮೊದಲು ಹೇಳಿದ್ದೇನು ಬುದ್ಧಿ ಚಿಗುರತ್ತೆ ಅಂತ ತಾನೆ. ನೋಡು ಚಿಗುರಿದೆಯಲ್ಲಾ ಗುಡ್ಡಿ' ಎಂದು ನಸುನಕ್ಕರು. ಆ ನಗೆಯೊಂದೆ ನನ್ನ ವಿಪರೀತ ಕೋಪವನ್ನ ಇಳಿಸುವ ಶಕ್ತಿ ಹೊಂದಿದ್ದು. ನಾನು ನನ್ನ ಪೆದ್ದುತನಕ್ಕೆ ನಕ್ಕು ಸುಮ್ಮನಾದೆ.

Interesting story behind Avarekayi and wisdom

ಈಗಲೂ ಕಾಳು ಬಿಡಿಸಲು ತಂದಾಗ ಎಲ್ಲಿ ಆ ಪುಟಾಣಿ ಹುಳ ಎಂದು ಹುಡುಕುತ್ತಿರುತ್ತೇನೆ. ಒಂದೈದು ವರ್ಷಗಳಿಂದ ಅದು ಕಾಣೆಯಾಗಿದೆ. ಕೃಷಿ ಮಾಡುವ ಗೆಳೆಯ ಹೇಳುವ ಪ್ರಕಾರ, ನಗರದ ವಿಪರೀತ ಕಾಳು ಭಕ್ಷಣೆಯಿಂದ ಸಿಕ್ಕಾಪಟ್ಟೆ ಔಷಧ ಸಿಂಪಡಿಸಿ ಬೆಳೆಯುವ ಬೆಳೆಯಾಗಿದೆಯಂತೆ. 'ಹುಳದ ಜೊತೆ ಮನುಷ್ಯನು ಹೋಗೋ ಥರಹ ಮಾಡ್ತೀರಲ್ಲೋ ಮಾರಾಯ' ಎಂದೆ. ನಂತರ ತಾತ ಹೇಳಿದ ಕಥೆ ನೆನೆಸಿಕೊಂಡೆ. ಆಕಾಶಕ್ಕೆ ಹೋಗೋಹಾಗೆ ಎಂದು ನಸು ನಕ್ಕೆ.

ಕಚೇರಿಯ ಬಳಿಯಲ್ಲಿಯೇ ಬೆಂಗಳೂರಿನ ಅವರೇ ಮೇಳ. ತೀರ ಅವರೇ ಜಿಲೇಬಿ, ಪಾಯಸದವರೆಗೆ ಕಾಳನ್ನ ಉಪಯೋಗಿಸುತ್ತಾರೆ. ಆ ಜನ ಜಂಗುಳಿಯಲ್ಲಿ ಪ್ರಾಯಶಃ ತಾತ ಇದ್ದಿದ್ದರೆ ಕೋಪಗೊಳ್ಳುತ್ತಿದ್ದರೇನೋ. ಆದರೂ ಜಾತ್ರೆಯಲ್ಲಿ ಭದ್ರವಾಗಿ ಹಿಡಿದು ಕರೆದೊಯ್ಯುವ ಕೈ ಕಾಣೆಯಾಗಿದೆ ಎಂದು ಆಗಾಗ ಹಲುಬುತಿರುತ್ತೇನೆ.

Interesting story behind Avarekayi and wisdom

ಸ್ವಲ್ಪ ಬುದ್ಧಿ ಬಂದಾಗೊಮ್ಮೆ ತಾತ ಹೇಳಿದ್ದು ನೆನಪಿದೆ. ನಾ ಬಟಾಣಿ ಹಾಗೂ ಅವರೆಕಾಳಿನ ತುಲನೆ ಮಾಡುತ್ತಿದ್ದೆ. 'ಬಟಾಣಿ ಬಿಡಿಸಲು ಸುಲಭ, ಹುಳಗಳೂ ಕಮ್ಮಿ, ಚೆನ್ನಾಗಿರತ್ತೆ ತಾತ, ಆದ್ರೆ ಇದು ಗಬ್ಬು, ಕೈಯೆಲ್ಲಾ ಕಪ್ಪಾಗತ್ತೆ ಅಂದಾಗ 'ಜೀವನವೂ ಅಷ್ಟೆ ಗುಡ್ಡಿ, ಆಚೆಯಿಂದ ನೋಡಲು ಆಕರ್ಷಕವಾದ್ದದ್ದು ಸುಲಭವಾದದ್ದು ಸಹ್ಯವಲ್ಲ, ಕೈ ಕಪ್ಪಾಗಿ, ಕಷ್ಟವಾದ್ದದ್ದೇ ನಂತರ ಘಮ ಹಾಗೂ ಸಿಹಿ ಕೊಡೋದು ಈ ಅವರೆ ಕಾಳಿನ ಥರಹ ಎಂದು' ಜ್ಞಾನಾರ್ಜನೆ ಮಾಡಿದ್ದರು. ನಿಮಗೇನನಸುತ್ತದೆ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Winter has brought Avarekai Mela to Bengaluru. Who doesn't like to eat variety of delicious dishes made from avarekai? But, before that read this interesting story behind wisdom and avarekai.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ