• search

ಜರ್ಮನ್ ಅಜ್ಜ ಕತಲಾನ್ ಅಜ್ಜಿಯ ಅಮರ ಪ್ರೇಮ!

By ಜಯನಗರದ ಹುಡುಗಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಇವತ್ತು ಪ್ರೇಮಿಗಳ ದಿವಸ. ಕೆಲವರು ಆಚರಿಸುತ್ತಾರೆ, ಕೆಲವರು ಆಚರಿಸೋಲ್ಲ. ಪ್ರೀತಿಗೂ ಒಂದು ದಿವಸ ಬೇಕೆ ಎಂದೆಲ್ಲಾ ಯೋಚಿಸುವ ಜನರ ನಡುವೆ ದಿನನಿತ್ಯದ ಜಂಜಾಟದಲ್ಲಿ ಒಂದು ದಿವಸ ಆಚರಿಸಿದರೆ ತಪ್ಪಿಲ್ಲ ಎನ್ನುವವರ ವಾದವೂ ತುಂಬಾ ಇದೆ. ಅಂಕಣಕ್ಕೆ ಏನು ಬರೆಯೋಣ ಎಂದು ಯೋಚಿಸುತ್ತಿರುವಾಗ ಹೊಳೆದ್ದದ್ದೇ ಈ ಪ್ರೀತಿ ಕಥೆ. ಈ ಪ್ರೀತಿ ಕಥೆ ನಿಮಗೆ ಕಾಲ್ಪನಿಕವಾಗಿದ್ದನಿಸಬಹುದು, ಅಥವಾ ನಿಮ್ಮಲ್ಲಿಯೇ ನಡೆದಿರಬಹುದು ಅಥವಾ ನಿಮ್ಮದೇ ಆಗಿರಬಹುದು.

  ಒಂದು ಹುಡುಗ ಹುಡುಗಿಯ ಕಥೆಯೇ ಎಲ್ಲಾ ಪ್ರೀತಿಗಳಿಗೆ ಸಂಕೇತವಲ್ಲ, ಅದಕ್ಕೂ ಮೀರಿದ ಪ್ರೀತಿಗಳು ನಮ್ಮ ಸಮಾಜದಲ್ಲಿ ಕಾಣಸಿಗುತ್ತದೆ. ಇವುಗಳ ಉಲ್ಲೇಖ ಕೆಲಕಡೆ ಇಲ್ಲದಿರಬಹುದು, ಕೆಲವು ಕಡೆ ಇರಬಹುದು. ನಾನು ಇಂತಹ ನಿಷ್ಕಲ್ಮಶ ಪ್ರೀತಿಯನ್ನ ಸುಮಾರು ಕಡೆ ನೋಡಿದ್ದೇನೆ. Those are my favorite love stories. ತಾತ ತನ್ನ ಮೊಮ್ಮಗಳಿಗೆ ಕೊಡುವ ಮುದ್ದಾದ ಪ್ರೀತಿ, ಅಥವಾ ಅಣ್ಣ ತಂಗಿಗೆ ಕೊಡುವ ಅತಿಯಾದ ಪ್ರೀತಿ. ಕೆಲವೊಮ್ಮೆ ಆಶ್ಚರ್ಯ ಚಕಿತವಾಗಿ ನೋಡುತ್ತಾ ನಿಂತಿರುತ್ತೇವೆ.

  ಇಷ್ಟಕ್ಕೂ ಪ್ರೇಮ ನಿವೇದನೆಗೆ ಚೆಂಗುಲಾಬಿಯೇ ಏಕೆ?

  ಈ ಕಥೆ ನಾನು ಬಾರ್ಸಿಲೋನಾದಲ್ಲಿದ್ದಾಗ ನಡೆದ್ದದ್ದು ಅಥವಾ ನಾನು ಕಣ್ಣಾರೆ ನೋಡಿದ್ದು. ನಾ ಅಲ್ಲಿದ್ದಾಗ ದಿನಾ ನಾನೇ ಅಡಿಗೆ ತಿಂಡಿ ಮಾಡಿಕೊಂಡು, ಓದಿಕೊಂಡು, ಮನೆಯ ಎಲ್ಲಾ ಕೆಲಸಗಳನ್ನ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿಯಿತ್ತು. ನೋವಾದರೆ, ಅತ್ತುಕರೆದರೆ ಯಾರೂ ಒಂದು ಮಟ್ಟದ ನಂತರ ಸಹಾಯ ಮಾಡುತ್ತಿರಲ್ಲಿಲ್ಲ. ಎಷ್ಟೆ ವಯಸ್ಸಾದರೂ, ಯಾವುದೇ ರೋಗರುಜಿನ ಬಂದರೂ ತಮ್ಮ ಕೆಲಸವನ್ನ ತಾವೆ ಮಾಡಿಕೊಳ್ಳುವ ಸ್ವಾಭಿಮಾನಿಗಳು ಅಲ್ಲಿನ ಜನ. ಹಾಸಿಗೆ ಹಿಡಿದರೆ ಮಾತ್ರ ಸರ್ಕಾರ ಅವರನ್ನ ನೋಡಿಕೊಳ್ಳತ್ತೆ. ಒಮ್ಮೆ ಹೀಗಿರುವಾಗ ಒಂದು ದಿವಸ ನನಗೆ ಜ್ವರ, ಜೋರು ನೆಗಡಿ ಹಾಗೂ ಮೈಕೈನೋವು ಬಂದಿತ್ತು.

  Eternal love of old couple in Barcelona

  ಪ್ರತಿತಿಂಗಳು ನಡೆಯುವ meetingನಲ್ಲಿ ಮಾತ್ರ ಜನ ಒಬ್ಬರ ಮುಖ ಒಬ್ಬರು ನೋಡುತ್ತಾರೆ. ಆವಾಗ ಮಾತ್ರ ಉಭಯಕುಶಲೋಪರಿ ನಡೆಸಿ ಮತ್ತೆ ಮುಂದಿನ ತಿಂಗಳೇ ಸಿಗೋದು. ಬಾಗಿಲು ತೆಗೆಯುವಾಗ ಆಗಾಗ ನಗೋದು ಬಿಟ್ಟರೆ ತೀರ ಮನುಷ್ಯ ಸಂಬಂಧಗಳೇ ಅಲ್ಲಿ ಕಡಿಮೆ.

  ಹೀಗೆ ನನಗೆ ಜ್ವರವಿದ್ದ ದಿವಸವೇ ಮೀಟಿಂಗ್ ಇತ್ತು. ಸರಿ ಹೋಗಲೇಬೇಕಾದ ಪರಿಸ್ಥಿತಿಯಿತ್ತು. ಹಾಗೂ ಹೀಗೂ ಹೋಗಿ ಮಾತಾಡಿ ಬಂದೆ. ನಂತರ ಮನೆ ಕರಘಂಟೆ ಬಡಿಯಿತು. ಅಪರಿಚಿತರ ಊರಲ್ಲಿ ಯಾರಪ್ಪ ಎಂದು ಭಯ ಪಟ್ಟುಕೊಂಡು ಬಾಗಿಲ ಕಿಂಡಿಯಲ್ಲಿ ನೋಡಿದೆ. ಒಂದು ಅಜ್ಜ ಅಜ್ಜಿ ಕೈಯಲ್ಲಿ ಬುಟ್ಟಿ ಹಿಡಿದುಕೊಂಡು ನಿಂತಿದ್ದರು.

  ಬದುಕನ್ನು ಹುಣ್ಣಿಮೆಯಾಗಿಸಿದ ಆ ಕೆಂಪು ಗುಲಾಬಿ ಮತ್ತು ಪ್ರೇಮಿಗಳ ದಿನ!

  ಅರ್ಧ ಘಂಟೆ ಮುಂಚೆಯೇ ನೋಡಿದ ನೆನಪಾದ್ದರಿಂದ ಬಾಗಿಲು ತೆರೆದು "ಮನೆಯ ಕೀ ಮರೆತು ಬಂದಿರಾ" ಎಂದು ಕೇಳಿದೆ, ಅದಕ್ಕೆ ಅವರು "ಇಲ್ಲಾ ನೀ ನೆಗಡಿಯಿಂದ ಬಳಲುತ್ತಿದ್ದದ್ದನ್ನು ಕಂಡೆ, ಜ್ವರ ಇದೆ ಎಂದು ನಿನ್ನ ಕಣ್ಣಿಂದ ಗೊತ್ತಾಯಿತು. ನಿನ್ನ ಮನೆ ಒಡತಿ ಮನೆಗೆ ಹೊಸ ಅತಿಥಿ ಬರುತ್ತಾಳೆಂದು ಹೇಳಿದ್ದು ಗೊತ್ತಾಯಿತು. ನಿನ್ನ ಬಗ್ಗೆ ನಮಗೆಲ್ಲಾ ಗೊತ್ತು, ಕ್ಯಾರೆಟ್ ಸೂಪ್ ತಂದಿದ್ದೇನೆ ತಗೋ" ಎಂದರು.

  Eternal love of old couple in Barcelona

  ನನಗೆ ಒಮ್ಮೆಲೇ ಮಹದಾಶ್ಚರ್ಯ, ಮತ್ತೆ ಭಯ ಬೇರೆ. ಯಾರು ಏನು ಗೊತ್ತಿಲ್ಲ ಎಂದು ಆ ಬುಟ್ಟಿಯನ್ನ ಇಸುಕೊಂಡು, ವಾಪಸ್ಸು ತೆಗೆದುಕೊಂಡು ಬರುತ್ತೇನೆಂದು ಹೇಳಿ ಅವರನ್ನ ಬೀಳ್ಕೊಟ್ಟೆ. ಛಳಿಗೆ, ನನ್ನ ಜ್ವರಕ್ಕೆ ಅದು ಹಿತವಾಗಿತ್ತು. ಬುಟ್ಟಿ ಮತ್ತು ಡಬ್ಬಿಯನ್ನ ಕೊಡಲು ಹೋದಾಗ, ನನ್ನ ಅಜ್ಜಿ ತಾತ ಖಾಲಿ ಡಬ್ಬ ಕೊಡಬಾರದೆಂದು ತಿಳಿಸಿದ್ದ ರಿವಾಜು ನೆನಪಾಯಿತು. ಅಮ್ಮ ಕಳುಹಿಸಿದ ಸಿಹಿ ತಿಂಡಿಯನ್ನ ಹಾಕಿಕೊಂಡು ತೆಗೆದುಕೊಂಡು ಹೋದೆ.

  ಆ ಅಜ್ಜಿಗೆ ನಾ ಯಾಕೆ ಇವೆಲ್ಲಾ ಮಾಡಿಕೊಂಡು ಬಂದೆ ಎಂದು ಕೇಳಿದರು. ನಾ ನಮ್ಮ ಮನೆಯಲಿ ಇದೇ ನಿಯಮ ಎಂದೆ. ಮಾತಾಡುತ್ತಾ ಕೂತರು ತಾತ ಮತ್ತು ಅಜ್ಜಿ. ಇಬ್ಬರು ಮಕ್ಕಳು ಅಮೇರಿಕಾದಲ್ಲಿದ್ದಾರೆ. ಒಬ್ಬರು ವೈದ್ಯರು, ಮತ್ತೊಬ್ಬರು ಚಾರ್ಟರ್ಡ್ ಅಕೌಂಟೆಂಟ್. ಸೊಸೆಯರು ಸಹ ಹಾಗೆಯೇ, ಮೊಮ್ಮಗಳು ನನ್ನಷ್ಟೆ ದೊಡ್ಡವಳು, ಅವಳಿಗೂ ನೆಗಡಿ ಬಂದಾಗ ಹೀಗೆ ಒಂದೇ ಕಣ್ಣಿನಲ್ಲಿ ನೀರು ಬಂದು, ಮೂಗು ಕಣ್ಣೆಲ್ಲ ಕೆಂಪಾಗತ್ತೆ ಎಂದೆಲ್ಲಾ ತಿಳಿಸಿದರು. ನಾನು ಅಜ್ಜಿ ತಾತನನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರಿಂದೇನೋ ಅವರೊಟ್ಟಿಗೆ ಮಾತಾಡಲು ಇಚ್ಛೆಯಾಯಿತು.

  ದಿನಾ ನಾ ಕಾಲೇಜಿಗೆ ಹೋಗೋವಾಗ ಅವರ ಮನೆಯಿಂದ ನಿಂತು ನನಗೆ ಟಾಟಾ ಎನ್ನುತ್ತಿದ್ದರು. ಆಗಾಗ ಸೂಪರ್ ಮಾಲ್ ನಲ್ಲಿ ಸಿಗುತ್ತಿದ್ದರು. ಯಾವಾಗಲೂ ಜೊತೆ ಜೊತೆಗೆ ಅವರನ್ನ ನಾ ನೋಡುತ್ತಿದ್ದದ್ದು. ಒಂದು ದಿವಸ ನನ್ನ ಮನೆಯ ಕೀಲಿ ಕೈಯನ್ನ ಮನೆಯಲ್ಲಿಯೇ ಮರೆತಿದ್ದೆ. ಮನೆ ಒಡತಿ ಬರೋದಕ್ಕೆ ಒಂದು 4 ಘಂಟೆಯಾಗುತ್ತದೆ ಎಂದಳು. ಹೊರಗಡೆ ವಿಪರೀತ ಚಳಿ, ಸ್ನೇಹಿತರ ಮನೆಗೆ ಹೋಗೋದಕ್ಕೆ ದುಡ್ಡಿರಲ್ಲಿಲ್ಲ. ಸರಿ ಅಲ್ಲೇ ಕಾದೆ. ಅಜ್ಜಿ ಕೆಳಗಿಳಿದು ಬಂದು "ನಮ್ಮ ಮನೆಗೇ ಬಾ ಎಂದರು". ಬಿಸಿ ಬಿಸಿ ಕಾಫಿಯೊಡನೆ ಅವರ ಮಾತು ಶುರು ಮಾಡಿದರು.

  ಅವರಿಬ್ಬರು ಭೇಟಿಯಾದ್ದದ್ದು ಎರಡನೇ ಮಹಾಯುದ್ದದ ಸಮಯದಲ್ಲಂತೆ. ಇಲ್ಲೇ ಬಾರ್ಸಿಲೋನಾದಲ್ಲಿ ಪ್ರೇಮಾಂಕುರವಾದ್ದದಂತೆ. ಅಜ್ಜ ಜರ್ಮನ್, ಅಜ್ಜಿ ಕತಲಾನ್. ಆದರೆ ಅಜ್ಜಿಗೆ ಬೇರೆ ಕಡೆ ಮದುವೆಯಾಯಿತಂತೆ. ನನಗೆ ಮುಖ ಒಂದು ಥರಾ ಆಯ್ತು. ಅಜ್ಜ ಅದಕ್ಕೆ "ನೀನೇನು ನಮ್ಮ ಕಾಲದವಳಾ, ಪ್ರತಿ ಪ್ರೀತಿಯೂ ಮದುವೆಯಲ್ಲಿಯೇ ಕೊನೆಗಾಣಬೇಕೆಂದು ಮುಖ ಹಾಗೆ ಮಾಡಿಕೊತ್ಯಲ್ಲ" ಎಂದು ನಗಾಡಿದ್ರು.

  ಪರಿಸ್ಥಿತಿಯ ಒತ್ತಡದಿಂದ ಅಜ್ಜಿಗೆ ಮದುವೆಯಾಯಿತಂತೆ. ನಂತರ ಅಜ್ಜಿಯ ಗಂಡ ತೀರಿಹೋದನಂತೆ. ಇದೆಲ್ಲದರ ಮಧ್ಯೆಯಲ್ಲಿ ಅಜ್ಜ ಯಾರನ್ನು ಮದುವೆಯಾಗಲ್ಲಿಲ್ಲವಂತೆ. ಕೋಪಗೊಂಡು ಒಂದಷ್ಟು ಪತ್ರಗಳು, ಸಿಗರೇಟನ್ನು ಸುಟ್ಟ ನಂತರ, ಅಜ್ಜಿಯ ಪರಿಸ್ಥಿತಿ ತಿಳಿಯಿತಂತೆ. ಕ್ಷಮೆಯಾಚಿಸಿ ಇಬ್ಬರು ಮದುವೆಯಾದರಂತೆ. ನಂತರ ಸುಖ ಸಂಸಾರ, ಮುದ್ದಾದ ಮಕ್ಕಳು.

  ಅಜ್ಜ ನಂತರ ತಿಳಿಸೋದಕ್ಕೆ ಶುರು ಮಾಡಿದ್ರು, "ಕ್ಷಮೆ ಅನ್ನೋದು ಪ್ರೀತೀಲಿ ಬಹು ಮುಖ್ಯ, ಯಾವುದೋ ಕಾರಣಕ್ಕೆ ತಪ್ಪಾಗಿರತ್ತೆ, ತಪ್ಪಿಲ್ಲದ ಮನುಷ್ಯ ಇರೋದು ಕಷ್ಟ. ನನಗೆ ಅವಳ ಮೇಲೆ ಅಗಾಧ ಪ್ರೇಮವಿದೆ. ಅದಕ್ಕೆ ಅವಳ ಒತ್ತಡ ಅರ್ಥ ಮಾಡಿಕೊಂಡು, ಮತ್ತೆ ಒಂದಾದ್ವಿ" ಎಂದು ಕಥೆ ನಿಲ್ಲಿಸಿದ್ರು. ಅವತ್ತಿಂದ ನನ್ನ ತಲೇಲಿ ಅದೇ ಕೊರಿತ್ತಿತ್ತು. ಇದೆಲ್ಲಾ ಹೇಗೆ ಸಾಧ್ಯ ಅಂತ. ಆಗಾಗ ಕ್ಷಮೆಯ ಪಾಠ, ಸಹನೆಯ ಪಾಠವನ್ನ ಮಾಡುತ್ತಿದ್ದರು.

  ಹೋದ ಫೆಬ್ರವರಿ 14ಕ್ಕೆ ಅವರ 49 ಮದುವೆ ವಾರ್ಷಿಕೋತ್ಸವವಾಯಿತು. ಎಲ್ಲರನ್ನು ಕರೆದು ಕೇಕ್ ಕತ್ತರಿಸಿದ್ದರು. 50ಕ್ಕೆ ನೀನೂ ಬರಬೇಕು ಎಂದು ಆಹ್ವಾನವಿತ್ತರು. ಅವರು ಜಗತ್ತಿನ 50 ಭಾಷೆಯಲ್ಲಿ ಹೆಂಡತಿಗೆ "ಐ ಲವ್ ಯೂ" ಎನ್ನಬೇಕೆಂದು, ಕನ್ನಡದಲ್ಲಿಯೂ ನನ್ನ ಹತ್ತಿರ ಬರೆಸಿಕೊಂಡಿದ್ದರು. ನನ್ನ ಉತ್ತರ ಭಾರತದ ಸ್ನೇಹಿತರು ಹಿಂದಿಯಲ್ಲಿ, ಗುಜರಾತಿಯಲ್ಲೂ ಕಲಿಸಿದ್ದರು.

  ಅವತ್ತು ಗೊತ್ತು ಮಾಡಿಕೊಂಡ ತಾರೀಖು ನನ್ನ ಗೂಗಲ್ ಕ್ಯಾಲೆಂಡರ್ ನಲ್ಲಿ ಹಾಗೆಯೇ ಇತ್ತು. ನೋಡಿ ನಸು ನಕ್ಕೆ. ಕರೆ ಮಾಡಿ ಮಾತಾಡೋಣವೆಂದುಕೊಂಡೆ. ಶನಿವಾರ ಕನ್ನಡ ಪಾಠ ಪೂರ್ಣಗೊಳಿಸಿ ಬೆಳ್ಳಂದೂರಿನಲ್ಲಿ ಟ್ರಾಫಿಕ್ ಅನ್ನ ಬಯ್ಯೋವಾಗ ಅಪರಿಚಿತ ನಂಬರ್ ನಿಂದ ಕರೆ ಬಂದಿತು. "ಹಲೋ..." ಎಂದಾಗ, "ನಾನು ಟಿಮ್ ಹಾಗೂ ರೋಸ್ ನ ಮಗ, ಡಾ || ಎಡ್ವರ್ಡ್" ಎಂದಾಗ ಬಹಳ ಖುಷಿಯಾಗಿ, "ನಾನೇ ಕರೆ ಮಾಡುವವಳಿದ್ದೆ, ವಾರ್ಷಿಕೋತ್ಸವದ ತಯಾರಿ ಹೇಗಿದೆ? ನಾನು ಕರೆ ಮಾಡಬೇಕಿತ್ತು, ಅವರು ಕನ್ನಡ ಮಾತಾಡುತ್ತಾರೆ ಎಂದಿದ್ದರು..." ಹಾಗೇ ಹೀಗೆ ಎಂದು ಮಾತಾಡುತ್ತಲೇ ಹೋದೆ.

  ಅಲ್ಲಿಂದ ಒಂದು ನಿಮಿಷ ಎಂದು ಹೇಳಿ, "ನನ್ನ ತಂದೆ ನಿನ್ನೆ ತೀರಿಕೊಂಡರು, ಅವರಿಗೆ ಕ್ಯಾನ್ಸರ್ ಆಗಿತ್ತು, ಮೂರು ತಿಂಗಳು ಬದುಕುವ ಸಮಯ ಕೊಟ್ಟಿದ್ದರು, ಆದರೆ 1 ವರ್ಷವಿದ್ದರು. ಅವರ ಡೈರಿಯಲ್ಲಿ ನಿಮ್ಮ ದೂರವಾಣಿ ಸಂಖ್ಯೆ ಬರೆದಿದ್ದರು, ಹಾಗೂ ಸಾಯುವ ಸಮಯದಲ್ಲಿ ಖುಷಿ ಕೊಟ್ಟ ಮಗು ಎಂದೂ ಸಹ ಬರೆದಿದ್ದರು. ನಿಮಗೆ ಧನ್ಯವಾದ ಹೇಳಬೇಕಿತ್ತು. ನೀವು ಅಮೆರಿಕಾಗೆ ಬಂದರೆ ನನ್ನನ್ನು ಭೇಟಿಯಾಗಿ" ಎಂದು ಕರೆ ಕಟ್ ಮಾಡಿದರು.

  ನನಗೆ ಕಣ್ಣಲ್ಲಿ ನೀರು ನಿಲ್ಲಲ್ಲೇ ಇಲ್ಲ. ರೋಸ್ ಅಜ್ಜಿಗೆ ಕರೆ ಮಾಡಲು ಯತ್ನಿಸಿದರೂ ಅವರಿಗೆ ಕರೆ ಹೋಗಲ್ಲಿಲ್ಲ. 50 ವರ್ಷದ ಸುಖ ದಾಂಪತ್ಯಕ್ಕೆ, ಜೀವನದ ಹುಚ್ಚಿಗೆ ಆಚರಿಸುವ ಸಂದರ್ಭ ಬರಲೇ ಇಲ್ಲ. "ನೀನು ಪ್ರೀತಿಸುವವರನ್ನು ಕ್ಷಮಿಸು, ಪ್ರೀತಿಯನ್ನ ಕೋಪಕ್ಕೆ ಗುರಿ ಮಾಡಬೇಡ" ಎಂಬ ಪಾಠ ಹೇಳಿಕೊಟ್ಟ ಈ ಪ್ರೇಮಿಗಳು ನಮಗೆ ಆದರ್ಶವಾಗಲಿ. ಜರ್ಮನ್ ಅಜ್ಜ ಹಾಗೂ ಕತಲಾನ್ ಅಜ್ಜಿ ನನಗೆ ತೋರಿಸಿದ ಪ್ರೀತಿ ಮಾದರಿಯಾಗಲಿ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Here is unique and eternal love story of couple in Barcelona, who spent life together for half century. Love need not be between young boy and girl and it need not be Valentine's Day to love each other. Jayanagarada Hudugi Meghana Sudhindra shares some beautiful moments.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more