ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಹಬ್ಬದ ಸಂಭ್ರಮಕ್ಕೆ ಕಥೆ ಹೇಳುವ ಬೊಂಬೆಗಳೇ ಭೂಷಣ

By ಜಯನಗರದ ಹುಡುಗಿ
|
Google Oneindia Kannada News

"ತಾತ ಶೋ ಕೇಸ್ ಅಲ್ಲಿ ನನ್ನ ಪ್ರೈಝ್ ಎಲ್ಲಾ ತೆಗೀಬೇಕಂತೆ ಬೊಂಬೆ ಇಡಕ್ಕೆ, ನಂಗ್ ಬಂದಿದ್ದು ಪ್ರೈಝ್ ಎಲ್ಲ ತೆಗಿಯೋದ್ ಬೇಡ ಅನ್ನಿ ತಾತ" ಅಂತ ರಚ್ಚೆ ಹಿಡಿದು ಅಳುತ್ತಿದ್ದಳು ಚಿಕ್ಕ ಹುಡುಗಿ. ತಾತ ಸಮಾಧಾನವಾಗಿ ಮೆತ್ತಗೆ 10 ದಿವಸ ಆದಮೇಲೆ ಮತ್ತೆ ಇಡೋಣ ಎಂದು ಎಷ್ಟು ಹೇಳಿ ಸಮಾಧಾನ ಮಾಡಿದರೂ ಅವಳ ಅಳು ನಿಲ್ಲಲ್ಲಿಲ್ಲ. ತಾತ ಮತ್ತೆ ಮೆಲ್ಲಗೆ "ಗುಡ್ಡಿ ಮನೆಯ ಅಟ್ಟದ ಮೇಲೆ ಕೂತಿರುವ ಆ ಬೊಂಬೆಗೂ ಬೇಜಾರಾಗೋದಿಲ್ವ, ಅದಿಕ್ಕೂ ಒಂದು 10 ದಿವಸ ಜಾಗ ಕೊಡಬೇಕು, ಯಾವಗ್ಲೂ ನೀನೆ ಆಟ ಆಡಲ್ಲಾ ಅಲ್ವಾ, ಹಾಗೆ ಎಲ್ಲರಿಗೂ ಸ್ವಲ್ಪ ಸ್ವಲ್ಪ ಜಾಗ ಸಿಗಬೇಕು" ಅಂದರು. "ಏನೋ ಒಂದು" ಎಂದು ಹುಬ್ಬು ಗಂಟಿಕ್ಕಿಕೊಂಡು ಚಿಕ್ಕ ಹುಡುಗಿ ಹೋದಳು.

ಮೈಸೂರು ದಸರಾ - ವಿಶೇಷ ಪುರವಣಿ

ಇದು ನಮ್ಮ ಮನೆಯಲ್ಲಿ ಪ್ರತಿ ದಸರಾದ ಮುಂಚೆ ನಡೆಯುತ್ತಿದ್ದ ಸಂಭಾಷಣೆ. ಮನೆಗೆ ಭೂಷಣವಾಗಿದ್ದ ಶೋಕೇಸಿನ್ನಲ್ಲಿ ಮುತ್ತಜ್ಜಿಯ ಫೋಟೋ, ಎಲ್ಲಾ ದೇವರ ವಿಗ್ರಹಗಳು, ಅಪ್ಪ, ಚಿಕ್ಕಪ್ಪನ ಮದುವೆಯ ಅಲಂಕಾರದ ತೆಂಗಿನಕಾಯಿ, ತಾತನ ಪ್ರಶಸ್ತಿ, ಅಪ್ಪನ ಪ್ರಶಸ್ತಿ, ಅಮ್ಮ ಎಂದೋ ಮಾಡಿದ್ದ ಕುಸುರಿ ಕಲೆ, ಅಜ್ಜಿಯ ದೇವರ ವಿಗ್ರಹಗಳು, ಅಜ್ಜಿ ಮನೆಯಲ್ಲಿ ತೆಗೆದ ಅತ್ತೆಯ ಮಕ್ಕಳ ಭಾವಚಿತ್ರಗಳು, ಅಪ್ಪ ಕೆಲಸದ ಮೇಲೆ ಹೋಗಿದ್ದ ಬೇರೆ ದೇಶಗಳ ಸೊವಿನೇರ್ ಗಳು, ಮೇಲಿಂದ ಮೇಲೆ ಶಾಲೆಯಲ್ಲಿ ನನಗೂ ಮತ್ತು ತಂಗಿಗೂ ಬರುತ್ತಿದ್ದ ಶಾಲೆಯ ಶೀಲ್ಡ್ ಗಳು. ಇವಿಷ್ಟು ಆ ಚಿಕ್ಕ ಶೋಕೇಸಿನಲ್ಲಿ ತಾತ ಮತ್ತು ಅಮ್ಮ ಮಾತ್ರ ಮೆತ್ತಗೆ ಜೋಡಿಸಿದ್ದರು. ಇದೇನಾದರೂ ಮತ್ತೊಬ್ಬರು ಮುಟ್ಟಿದರೆ ಅದು ದಬದಬನೆ ಬೀಳುತ್ತಿತ್ತು. ಮತ್ತೆ ಅವರಿಬ್ಬರಲ್ಲಿ ಒಬ್ಬರು ಬಂದು ಜೋಡಿಸಬೇಕಾಗಿತ್ತು.

Dasara dolls showcase our Karnataka cultural diversity

ಆಗಿನ ಮಿಡಲ್ ಕ್ಲಾಸಿನ ಒಂದು ರಿಪೋರ್ಟ್ ಕಾರ್ಡ್ ಈ ಹಾಲಿನ ಗಾಜಿನ ಶೋಕೇಸ್ ಆಗಿತ್ತು. ಬೊಂಬೆಯ ಹಬ್ಬದ ದಿವಸ ಮಾತ್ರ ಮನೆಯಲ್ಲಿ ಆ ಶೋಕೇಸಿನ ಮಧ್ಯದ ಜಾಗಕ್ಕೆ ಮಾರಾಮಾರಿಯಾಗುತ್ತಿತ್ತು. ಯಾರದ್ದು ಎಲ್ಲಿ ಏನು ಇಡಬೇಕೆಂದು. ಅಗ್ರಸ್ಥಾನದಲ್ಲಿ ಇಡುತ್ತಿದ್ದ ನನ್ನ ಪ್ರೈಝ್ ಎಲ್ಲವೂ ಅವತ್ತು ಡಬ್ಬದಲ್ಲೋ, ಅಥವಾ ಇನ್ನ್ಯಾವುದೋ ಜಾಗದಲ್ಲಿ ಕುಕ್ಕರಿಸುತ್ತಿತ್ತು. ಅಜ್ಜಿಯದ್ದು, ಅಮ್ಮನದ್ದು ಪಟ್ಟದ ಬೊಂಬೆಯಿತ್ತು. "ನನಗೂ ಕೊಡಿಸು" ಎಂದು ತಿರುಪತಿಗೆ ಹೋದಾಗ ದುಂಬಾಲು ಬಿದ್ದಿದ್ದೆ. ಅಜ್ಜಿ "ನಿನಗೆ ಮದುವೆಯಾದಾಗ ಕೊಡಿಸುತ್ತೇನೆ" ಎಂದು ಸಮಾಧಾನ ಪಡಿಸಿದರು. ಆ ಬೊಂಬೆಗೋಸ್ಕರ ಮದುವೆ ಮಾಡು ಎಂಬ ತಿಕ್ಕಲು ಬುದ್ಧಿ ನನಗೆ ಬರಲ್ಲಿಲ್ಲ ಸದ್ಯ.

ಬೊಂಬೆಗಳ ದರ್ಬಾರ್ ನೋಡಲು ಅರಮನೆ ನಗರಿಗೆ ಇಂದೇ ಬನ್ನಿ...ಬೊಂಬೆಗಳ ದರ್ಬಾರ್ ನೋಡಲು ಅರಮನೆ ನಗರಿಗೆ ಇಂದೇ ಬನ್ನಿ...

ಆ ಪಟ್ಟದ ಬೊಂಬೆಯೋ ವರ್ಷ ಇಡೀ ಅಟ್ಟದ ಮೇಲೆ ಜಿರಲೆ, ಹಲ್ಲಿ ಮತ್ತಿತ್ತರ ಜೀವಿಯೊಡನೆ ಜೀವಿಸಿ ಸಡನ್ನಾಗಿ ಹತ್ತು ದಿವಸ ಯಾರ ಹತ್ತಿರವೂ ಮುಟ್ಟಿಸಿಕೊಳ್ಳದ ಮಡಿ ಬೊಂಬೆಯಾಗಿರುತ್ತಿತ್ತು. ಇದೇನಪ್ಪಾ ವಿಚಿತ್ರ ಎಂದುಕೊಂಡು ನಾನೂ ಅಕ್ಷತೆ ಹಾಕಿ ನಮಸ್ಕಾರ ಮಾಡುತ್ತಿದ್ದೆ. ನಮ್ಮ ಸೋದರತ್ತೆ ನಾಗಮಣಿಯವರು ನಮ್ಮ ಎಲ್ಲರ ಮನೆಯ ಪಟ್ಟದ ಬೊಂಬೆಗೆ ಒಳ್ಳೆ ಬಟ್ಟೆ, ಒಡವೆ ಹಾಕಿ ಅಲಂಕಾರ ಮಾಡುವ ವಿಪರೀತ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಯಾರೇ ಮಾಡಿದರೂ "ನಾಗಮಣಿ ಮಾಡುವ ಹಾಗಿರಲ್ಲ" ಎಂಬ ಮಾತು ಕೇಳಿಬರುತ್ತಿತ್ತು. ಜೂನ್ ತಿಂಗಳಿಂದಲೇ ಅತ್ತೆ ಬ್ಯುಸಿಯಾಗಿರುತ್ತಿದ್ದರು. ಮನೆಯವರಲ್ಲಿಯೇ ಪೈಪೋಟಿ. ನಮ್ಮ ಅಮ್ಮನ ಬೊಂಬೆಗೂ ವೆಲ್ವೆಟ್ ಬಟ್ಟೆಯಲ್ಲಿ ಚೆಂದದ ಅಂಗಿ ಹೊಲೆದುಕೊಟ್ಟಿದ್ದರು. ಅದಿನ್ನೂ ಅಮ್ಮ ಕಾಪಾಡಿಕೊಂಡಿದ್ದಾರೆ. ನನ್ನ ಬೊಂಬೆಗೂ ಅಮ್ಮ ಅತ್ತೆಯ ಹತ್ತಿರವೇ ಅಂಗಿ ಹೊಲೆಸಿದ್ದು. ಸಾವಿರಾರು ಯುಟ್ಯೂಬ್ ವಿಡಿಯೋ, ಮತ್ತಿನ್ಯಾರೋ ಮಾಡಿಕೊಟ್ಟರೂ ಅಮ್ಮನಿಗೆ ಅತ್ತೆಯೇ ಮಾಡಬೇಕಿತ್ತು.

Dasara dolls showcase our Karnataka cultural diversity

ಅಜ್ಜಿಯ ಚಿಕ್ಕಪ್ಪ ಆಗ ಮೈಸೂರಿನ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅವರೀಗಲೂ ಅರಮನೆಯ ಗೊಂಬೆ ತೊಟ್ಟಿಯ ವೈಭವವನ್ನ ವರ್ಣಿಸುತ್ತಲೇ ಇರುತ್ತಾರೆ. ಆಗಿನ ಮಹಾರಾಣಿ ಅಜ್ಜಿಯ ಚಿಕ್ಕಮ್ಮನನ್ನು ಕರೆದು ಕುಂಕುಮ ಕೊಡುತ್ತಿದ್ದರು ಎಂಬ ಹೆಮ್ಮಯ ವಿಷಯ ಆಗಾಗ ಹೇಳುತ್ತಿದ್ದರು. ಈ ಪಟ್ಟದ ಬೊಂಬೆ ರಾಜ ರಾಣಿಯ ಸಂಕೇತ. ಮೈಸೂರಿನ ಅರಸರು, ಮದ್ರಾಸಿನ ಕಡೆಯವರು ಮತ್ತು ಆಂಧ್ರದ ಕೆಲವು ಕಡೆ ಮಾತ್ರ ಈ ಪದ್ಧತಿಯಿದೆ. ತೀರ ನಮ್ಮ ಕರಾವಳಿಯಲ್ಲಿ ಸಹ ಈ ಅಭ್ಯಾಸವಿಲ್ಲ. ಅಂತಹ ಜಾಗದಿಂದ ಬಂದವರನ್ನೂ ನಮ್ಮ ಮನೆಗೆ ಕರೆಯುವ ಪದ್ಧತಿಯಿತ್ತು.

ಅಂಬಾರಿ ಹೊತ್ತ ಆನೆಗಳ ಇತಿಹಾಸ: ಜಯಮಾರ್ತಾಂಡನೇ ಮೊದಲಿಗಅಂಬಾರಿ ಹೊತ್ತ ಆನೆಗಳ ಇತಿಹಾಸ: ಜಯಮಾರ್ತಾಂಡನೇ ಮೊದಲಿಗ

ತಾತ ಮಕ್ಕಳನ್ನ ದಿನಾ ಕರೆದು ಚರಪು ಕೊಡಬೇಕೆಂದು ತಾಕೀತು ಮಾಡುತ್ತಿದ್ದರು. ಅಮ್ಮ ಸುಮ್ಮನೆ 9 ಮೆಟ್ಟಿಲುಗಳಿಟ್ಟು ಇರೋ ಬೊಂಬೆಗಳನ್ನ ಜೋಡಿಸುತ್ತಿರಲ್ಲಿಲ್ಲ ಅಥವಾ ವಿಪರೀತ ದುಡ್ಡು ಖರ್ಚು ಸಹ ಮಾಡುತ್ತಿರಲ್ಲಿಲ್ಲ. ಇದನ್ನ ತಾತ ಪದೇ ಪದೇ ಹೇಳುತ್ತಿದ್ದರು. ಮುಖಕ್ಕೆ ರಾಚುವ ಹಾಗೆ ಸಿಕ್ಕಾಪಟ್ಟೆ ದುಡ್ಡುಕೊಟ್ಟು ತರುವ ಸಾಮಾನುಗಳೆಲ್ಲವೂ ನಮ್ಮೊಟ್ಟಿಗೆ ಇರುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ಒಂದೊಂದೆ ವರ್ಷ ಒಂದೊಂದು ಥೀಮ್. ಕೆಲವು ಬೊಂಬೆಗಳು ಬೇರೆ ಬೇರೆ ರೂಪಗಳನ್ನ ಪ್ರತಿ ವರ್ಷ ಪಡೆಯುತ್ತಿದ್ದವು. ಇದೆಲ್ಲಾ ಮನೆಯವರ ಕ್ರಿಯಾಶೀಲರನ್ನಾಗಿ ಮಾಡುತ್ತಿತ್ತು. ಈಗಿನ ಕಾಲದಲ್ಲಿ ಸಿಗುವ ರೆಡಿಮೇಡ್ ಬೊಂಬೆಗಳನ್ನ ಸುಮ್ಮನೆ ಜೋಡಿಸುವ ಹಾಗಲ್ಲ. ನರಸಿಂಹ ಕಂಬದಿಂದ ಒಡೆದುಕೊಂಡು ಬಂದ ಎಂದರೆ ಕಂಬ, ಉಗ್ರ ರೂಪ ಮಾಡುವ ಜವಾಬ್ದಾರಿ ಮಕ್ಕಳದಾಗಿರುತ್ತಿತ್ತು. ಆಗ ಪೇಪರಿನಲ್ಲಿ ಫೋಟೊ ಬರಬೇಕೆಂಬ ಹುಚ್ಚಿರಲ್ಲಿಲ್ಲ ನೋಡಿ. ಮನೆಯ ಮಟ್ಟಿಗೆ, ಒಂದು ಚೂರು ಸ್ನೇಹಿತರು ಬರುತಿದ್ದರಷ್ಟೆ.

Dasara dolls showcase our Karnataka cultural diversity

ಈ ಅಧುನಿಕ ಯುಗದಲ್ಲಿ 10 ದಿವಸ ಈ ವ್ರತ ಹಬ್ಬ ಮಾಡುವುದು ಒಂದು ಸವಾಲೇ ಸರಿ. ಮುಂಚಿನ ಕಾಲದಲ್ಲಿ ಹೆಣ್ಣುಮಕ್ಕಳು ಮನೆಯಲ್ಲಿಯೇ ಇರುತ್ತಿದ್ದರು ಎಂಬ ವಿಷಯವನ್ನ ಇಟ್ಟುಕೊಂಡು ಈ ಹಬ್ಬಗಳನ್ನೆಲ್ಲಾ ಡಿಸೈನ್ ಮಾಡಿದ್ದರು. ಕುಂಕುಮಕ್ಕೆ ಕರೆಯೋದು ಆಗಿನ ಕಾಲದ ಸೋಶಿಯಲೈಸಿಂಗ್ ಪಾರ್ಟಿ. ಈಗ ನೆತ್ತಿಯ ಮೇಲೆ ಚಂದ್ರ ಬಂದಾದ ಮೇಲೆ ಹೆಣ್ಣು ಮಕ್ಕಳು ಮನೆಗೆ ಬರೋದು. ಅಂತಹ ಸಂದರ್ಭದಲ್ಲಿಯೂ ಒಂದಷ್ಟನ್ನ ಪಾಲಿಸುತ್ತಾರಲ್ಲ ಅದೇ ಖುಷಿ.

ಯದುರಾಯರಿಂದ ಯದುವೀರ್ ವರೆಗೆ, ತಿಳಿಯಲೇಬೇಕಾದ ರಾಜಮನೆತನದ ಇತಿಹಾಸಯದುರಾಯರಿಂದ ಯದುವೀರ್ ವರೆಗೆ, ತಿಳಿಯಲೇಬೇಕಾದ ರಾಜಮನೆತನದ ಇತಿಹಾಸ

ತಾತ ಯಾವಾಗಲೂ ಹೇಳುತ್ತಿದ್ದರು, "ಬರೀ ಪೂಜೆಯಿಂದಷ್ಟೆ ಪುಣ್ಯವಲ್ಲ, ಅದಕ್ಕೆ ಅಡಕವಾಗಿ ಕೆಲಸಗಳನ್ನೂ ಮಾಡಬೇಕೆಂದು" ಆ ಕೆಲಸವನ್ನ ನಾ ಮಾಡುತ್ತಿದ್ದೇನೆ. ಜೊತೆಗೆ ರಂಗೋಲಿಯ ಬದಲು ಕನ್ನಡ ಪದವನ್ನ ಗೋಲಿಗಳಲ್ಲಿ ಜೋಡಿಸಿ ಕನ್ನಡ ಲಿಪಿಯನ್ನ ಮರೆತವರಿಗೆ ನೆನಪಿಸುತ್ತಿದ್ದೇನೆ. ನಮ್ಮ ಮನೆಯ ಗೊಂಬೆಯ ಹಬ್ಬಕ್ಕೆ ಬನ್ನಿ, ನಿಮ್ಮ ಮನೆಗೂ ಕರಿಯಿರಿ. ಈ ಹಬ್ಬಕ್ಕೆ ಒಳ್ಳೆಯತನಗಳು ಜಾಸ್ತಿ ಪ್ರಜ್ವಲಗೊಳ್ಳಲಿ. ಹ್ಯಾಪಿ ದಸರಾ.

English summary
Dasara dolls showcase our Karnataka cultural diversity. Decorating with dolls with different themes, mythological and historical, every year is very important part of Dasara festivities. Meghana Sudhindra goes back to her childhood days and refreshes the memories of celebrating the festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X